ಅಂತರಂಗ

ಧರ್ಮ ಮರ್ಮ-01: ಭಾರತದಲ್ಲಿ ಧರ್ಮದ ಸ್ವರೂಪ

Published

on

  • ಯೋಗೇಶ್ ಮಾಸ್ಟರ್

ಭಾರತದಲ್ಲಿ ಸದಾ ಗೊಂದಲಕ್ಕೊಳಗಾಗುವ ಅನೇಕ ವಿಷಯಗಳಲ್ಲಿ ಧರ್ಮವೂ ಒಂದು. ಸಹಜವಾಗಿ ಗೊಂದಲ ಎಂದರೇನೇ ಸ್ಪಷ್ಟತೆ ಇಲ್ಲ ಎಂದು ಅರ್ಥ. ಬೇರೆ ದೇಶಗಳಲ್ಲಿಯೂ ಕೂಡಾ ಧರ್ಮದ ಆಚರಣೆಗಳ ಬಗ್ಗೆ ಗೊಂದಲಗಳಿವೆ, ಸಂಘರ್ಷಗಳಿವೆ. ಆದರೆ ನಮ್ಮ ದೇಶದಲ್ಲಿ ಧರ್ಮ ಎನ್ನುವುದು ಬೇರೆ ದೇಶದವರಿಗಿಂತ ಹೆಚ್ಚು ವ್ಯಾಪಕವಾಗಿ ಮತ್ತು ವಿಸ್ತಾರವಾಗಿ ಅರ್ಥೈಸಲು ಸಾಧ್ಯವಿರುವುದರಿಂದ ಗೊಂದಲಗಳು ಹೆಚ್ಚಾಗಿವೆ.

ಹೌದು, ನಮ್ಮ ದೇಶದಲ್ಲಿ ಧರ್ಮದ ವಿಷಯವಾಗಿಯೂ ಒಂದು ಸಾಮಾನ್ಯ ಸ್ಪಷ್ಟತೆ ಇಲ್ಲ. ಭಾರತದ ಮಟ್ಟಿಗೆ ಧರ್ಮವನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೇನೂ ದೊಡ್ಡ ವಿಷಯವೂ ಅಲ್ಲ ಮತ್ತು ಸಂಕೀರ್ಣವೂ ಅಲ್ಲ. ಒಂದು ಪದವನ್ನು ವಿವಿಧ ಬಳಕೆಗಳಲ್ಲಿ ಬೇರೆ ಬೇರೆ ಅರ್ಥವನ್ನು ಪಡೆದುಕೊಳ್ಳುತ್ತವೆ ಎಂಬುದರ ಗಮನ ನಮಗಿರಬೇಕು.

ಕಾಯು’ ಎಂಬ ಸರಳ ಪದವನ್ನು “ನಾನು ನನ್ನ ಸರದಿಗಾಗಿ ಕಾಯುತ್ತಿದ್ದೇನೆ” ಮತ್ತು “ಒಲೆಯ ಮೇಲೆ ನೀರು ಕಾಯುತ್ತಿದೆ” ಎಂಬ ಎರಡು ಬೇರೆ ಬೇರೆ ಅರ್ಥಗಳಲ್ಲಿ ಬಳಕೆ ಮಾಡುವಂತೆ ಧರ್ಮ ಎಂಬ ಪದದ ಬಳಕೆಯೂ ಕೂಡಾ ಭಿನ್ನ ಅರ್ಥಗಳಲ್ಲಿ ಬಳಕೆ ಮಾಡುತ್ತೇವೆ.

ಪದ ಬಳಕೆಯ ಕಾಳಜಿ

40ರಿಂದ 70ರ ದಶಕದವರೆಗೂ ಕೆಲವರನ್ನು ಹೊರತುಪಡಿಸಿ ಬಹಳಷ್ಟು ಬರಹಗಾರರು ಎಚ್ಚರಿಕೆಯಿಂದ ಧರ್ಮದ ಪದವನ್ನು ದೇಶೀಯವಾಗಿ ಅಂದರೆ ಭಾರತೀಯ ಅರ್ಥದಲ್ಲಿಯೇ ಬಳಸುತ್ತಿದ್ದರು. ಅವರು ‘ಧರ್ಮ’ ಮತ್ತು ‘ಮತ’ ಎಂದು ಉಪಯೋಗಿಸುತ್ತಿದ್ದ ಎರಡು ಪದಗಳಲ್ಲಿ ಸ್ಪಷ್ಟತೆ ಇತ್ತು. ಇಂಗ್ಲೀಷಿನಲ್ಲಿ ರಿಲೀಜಿಯನ್ ಎಂಬ ಪದಕ್ಕೆ ಧರ್ಮ ಎಂಬುದನ್ನು ಬಳಸುತ್ತಿರಲಿಲ್ಲ. ಬದಲಾಗಿ ಮತ ಎಂದು ಬಳಸುತ್ತಿದ್ದರು. ಇನ್ನೂ ಸರಳವಾಗಿ ಪದ್ಧತಿ ಎಂದೂ ಹೇಳುತ್ತಿದ್ದರು.

ಆದರೆ ರಿಲೀಜಿಯನ್ ಎಂದು ಇಂಗ್ಲೀಷಿನಲ್ಲಿ ಹೇಳುವ ಪದಕ್ಕೂ, ಭಾರತೀಯರು ಧರ್ಮ ಎನ್ನುವ ಪದಕ್ಕೂ ವ್ಯತ್ಯಾಸವಿದೆ ಎಂಬುದು ಸ್ಪಷ್ಟವಾಗಿತ್ತು. ಎರಡೂ ಒಂದೇ ಆಗಿರಲಿಲ್ಲ. ನಂತರ ಕೆಲವು ಬರಹಗಾರರು ಮತ ಎಂಬ ಪದವು ಬಹಳ ಲಘುವಾಗಿದೆ ಅನ್ನಿಸುವುದರಿಂದ ಮತದ ಬದಲು ಧರ್ಮ ಎಂದು ಬಳಸತೊಡಗಿದರು. ಇದರಿಂದಾಗಿ ಇಸ್ಲಾಮ್ ಮತ, ಕ್ರೈಸ್ತ ಮತ, ಬೌದ್ಧ ಮತಗಳ ಬದಲಿಗೆ ಧರ್ಮ ಎಂದು ಬಳಸತೊಡಗಿದರು.

ಅಲ್ಲಿಂದೀಚೆಗೆ ಅದು ಹೆಚ್ಚು ವ್ಯಾಪಕವೂ ಆಗ ತೊಡಗಿ ಭಾರತೀಯ ಅಥವಾ ದೇಸೀ ಅರ್ಥದ ಧರ್ಮವು ಮತವೆಂಬ ಪದದ ಬದಲಿಗೆ ಉಪಯೋಗಿಸತೊಡಗಿದರು. ಇದರಿಂದಾಗಿ ಪ್ರಾಚೀನ ಭಾರತೀಯ ಬರಹಗಳಲ್ಲಿದ್ದ ಧರ್ಮ ಎಂಬ ಪದವನ್ನು ಮತವೆಂಬ ಅರ್ಥದಲ್ಲಿ ಅರ್ಥೈಸತೊಡಗಿದ್ದರಿಂದ ಅನರ್ಥಗಳಾಗ ತೊಡಗಿದವು. ಏಕೆಂದರೆ ಯಾವ ಧರ್ಮ ಎಂಬ ಪದದ ಅರ್ಥವು ಅಜ್ಞಾತವೂ ಮತ್ತು ಸೂಕ್ಷ್ಮವೂ ಆಗಿದ್ದ ಸ್ವಭಾವ ಎಂಬ ಅರ್ಥದಲ್ಲಿ ಬಳಸುತ್ತಿದ್ದರೋ ಅದನ್ನು ಸ್ಥಾಪಿತ ಮತಕ್ಕೆ ಹೆಸರಿಸಲು ಪ್ರಾರಂಭಿಸಿ ಅದರ ಅರ್ಥ ಮರೆತುಹೋಯಿತು.

ಆದರೂ ಕಂಗಾಲಾಗುವ ಅಗತ್ಯವೇನೂ ಇಲ್ಲ. ಭಾಷೆಗಳಲ್ಲಿ ಪದಗಳು ಕಾಲದಿಂದ ಕಾಲಕ್ಕೆ ಅರ್ಥವನ್ನು ಬದಲಾಯಿಸಿಕೊಳ್ಳುವ, ಮತ್ತೊಂದಕ್ಕೆ ಬಳಕೆಯಾಗುವ ಸ್ವಭಾವವೂ ಉಂಟು. ಹಾಗಾಗಿ ಧರ್ಮ ಎಂಬ ಒಂದೇ ಪದವನ್ನು ಎರಡು ಅರ್ಥಗಳಿಗೆ ಬಳಸಲಾಗುತ್ತಿದೆ ಎಂಬ ಎಚ್ಚರಿಕೆಯನ್ನು ಹೊಂದಿದ್ದು ಪ್ರಾಚೀನ ಗ್ರಂಥಗಳನ್ನು, ಇತರ ಪಠ್ಯಗಳನ್ನು ಓದುವಾಗ ಯಾವ ಅರ್ಥದಲ್ಲಿ ಅವನ್ನು ಬಳಸಿದ್ದಾರೆ ಎಂಬ ಅರಿವು ಇರಬೇಕಷ್ಟೇ.

ಪ್ರಭುತ್ವಮು ಎಂದು ತೆಲುಗಿನವರು ಉಪಯೋಗಿಸುವ ಪದ ಕನ್ನಡದಲ್ಲಿ ಸರ್ಕಾರ ಎಂದಾಗುತ್ತದೆ. ಆದರೆ ಪ್ರಭುತ್ವದ ಪದ ಕನ್ನಡದಲ್ಲಿಯೂ ಇದೆ. ಆದರೆ ನಾವು ಅದನ್ನು ಸರ್ಕಾರ ಎಂಬ ಅರ್ಥದಲ್ಲಿ ಬಳಸುವುದಿಲ್ಲ. ರಾಜರ ಅಧಿಕಾರದ ಅರ್ಥದಲ್ಲಿ ಬಳಸುತ್ತೇವೆ. ಹಾಗೆಯೇ ಉತ್ತರ ಭಾರತದ ಕೆಲವು ರಾಜ್ಯಗಳರಲ್ಲಿ ಸರಕಾರ್ ಎಂದು ಬಳಸುವ ಪದವು ಯಜಮಾನ, ಒಡೆಯ ಎಂಬ ಅರ್ಥದಲ್ಲಿ ಬಳಸುತ್ತಾರೆ. ಆದರೆ ನಮಗೆ ಅದು ರಾಜಕೀಯ ವ್ಯವಸ್ಥೆಯ ಸರ್ಕಾರವಾಗಿ ಮಾತ್ರವೇ ಬಳಕೆಯಾಗುತ್ತದೆ.

ಯಜಮಾನ ಅಥವಾ ದಣಿ ಎಂಬ ಪದಗಳಿಗೆ ಬದಲಾಗಿ ನಾವು ಸರಕಾರ ಎಂಬ ಪದವನ್ನು ಬಳಸುವುದಿಲ್ಲ. ಸಂಸ್ಕೃತ ಪದಗಳು ಭಾರತದ ಬಹುತೇಕ ಭಾಷೆಗಳಲ್ಲಿ ಬೆರೆತುಹೋದರೂ ಅವುಗಳನ್ನು ಬಳಸುವಾಗ ಅವರ ಪ್ರಾದೇಶಿಕ ಪ್ರಭಾವಗಳು ಇರುತ್ತಿದ್ದವು. ಆ ಪ್ರಯೋಗಗಳ ಹಿಂದೆ ಕಾರಣಗಳೇನೇ ಇದ್ದರೂ ಅರ್ಥ ವ್ಯತ್ಯಾಸ ಇದ್ದುದಂತೂ ನಿಜ. ಹೀಗೆಯೇ ಧರ್ಮವನ್ನೂ ಕನಿಷ್ಟಪಕ್ಷ ನಮ್ಮ ಕನ್ನಡದ ಹಿರಿಯರು ಬರೆಯುತ್ತಿದ್ದ ಪುಸ್ತಕಗಳಲ್ಲಿ ಎಚ್ಚರಿಕೆಯಿಂದ ಬಳಸುತ್ತಿದ್ದರು. ಸಂಸ್ಕೃತದಲ್ಲಾಗಲಿ ಅಥವಾ ಕನ್ನಡದಲ್ಲಾಗಲಿ ಧರ್ಮದ ಅರ್ಥಕ್ಕೆ ಬಹಳ ಸ್ಪಷ್ಟತೆ ಇತ್ತು.

ರೂಢಿ ದೋಷ

ನಮ್ಮ ರೂಢಿಗೊಳಿಸಿಕೊಂಡಿರುವ ಒಂದು ದೊಡ್ಡ ದೋಷವೆಂದರೆ ಸರಳ ಮತ್ತು ನೇರವಾಗಿರುವ ವಿಷಯಗಳನ್ನು ಸಂಕೀರ್ಣಗೊಳಿಸಿಕೊಳ್ಳುವುದು. ಯಾವುದು ಸಾಮಾನ್ಯ ತಿಳುವಳಿಕೆಗೆ ಎಟುಕುವುದಿಲ್ಲವೋ ಅದು ಮಹತ್ವವಾದುದು, ಬಹಳ ಮೌಲ್ಯವುಳ್ಳದ್ದು, ಬಹಳ ಉನ್ನತವಾದದ್ದು ಎಂಬ ಭ್ರಮೆಯನ್ನು ಹುಟ್ಟಿಸಿರುವುದು. ಅದು ಬರಿಯ ಭ್ರಮೆಯು ಮಾತ್ರವಲ್ಲ ಮಾನವನ ಸಂವಹನ ಕ್ರಮಕ್ಕೆ ಮಾಡುವ ದ್ರೋಹವೂ ಹೌದು. ನಾನು ಹೇಳುವುದು ನಿಮಗೆ ಅರ್ಥವಾಗಬೇಕು. ನಿಮ್ಮ ತಿಳುವಳಿಕೆಗೆ ನಿಲುಕಬೇಕು. ಆಗ ನಾನು ಹೇಳುವ ಕೆಲಸದಲ್ಲಿ ಯಶಸ್ವಿಯಾಗಿದ್ದೇನೆ ಎಂದು ಅರ್ಥ.

ಅದು ಬಿಟ್ಟು, ನಾನು ನಿಮ್ಮ ಶಬ್ಧಭಂಡಾರದಲ್ಲಿ ಇಲ್ಲದಿರುವಂತಹ, ಹುಡುಕಿದರೂ ಅರ್ಥ ಸಿಗದಂತಹ ಮಹಾ ಪಾಂಡಿತ್ಯದ ಶಬ್ಧಗಳನ್ನು ಉಪಯೋಗಿಸಿ, ನಿಮಗೆ ನಾನು ನಿಮ್ಮ ತಿಳುವಳಿಕೆಗೆ ನಿಲುಕದಂತವನಾದರೆ ಅದು ನನ್ನ ವೈಫಲ್ಯ. ಏನೋ ಸ್ವಲ್ಪ ಪ್ರಾದೇಶಿಕ ಭಾಷಾ ಪ್ರಯೋಗಗಳಿಂದ ಒಂದಷ್ಟು ಪದಗಳು ಆಚೀಚೆ ಆಗಬಹುದು. ಆದರೆ ನನ್ನ ತಿಳುವಳಿಕೆಗೆ ನಿಲುಕದ್ದು ಎಂದು ಅವನ್ನು ಉನ್ನತೀಕರಿಸಿ, ಅರಿಯದವರು ಪಾಮರರು ಎಂಬ ಭ್ರಮೆ ಹುಟ್ಟಿಸಿದ ಕಾರಣದಿಂದಲೇ ಅಪವ್ಯಾಖ್ಯಾನಗಳು ಅಂದರೆ ಇರುವ ಅರ್ಥವನ್ನು ಬಿಟ್ಟು ಬೇರೇನೇನೋ ವಿವರಣೆಗಳು ಹುಟ್ಟಿರುವವು.

ಧರ್ಮದ ಪಾವಿತ್ರ್ಯದ ವ್ಯಾಪ್ತಿ

ಧರ್ಮದ ವಿವರಣೆಯಲ್ಲಿಯೂ ಕೂಡಾ ಹಾಗೇ ಆಗಿವೆ. ಅದೇನೋ ಅತ್ಯಂತ ಶ್ರದ್ಧೆಗೆ, ಬದ್ಧತೆಗೆ, ಪಾವಿತ್ರ್ಯತೆಗೆ ಸಂಬಂಧಿಸಿದ್ದು, ದೇವರನ್ನು ಸಮೀಪಿಸುವುದಕ್ಕೆ ಇರುವುದು ಎಂಬ ಭ್ರಮೆ ಇದೆ ಅಥವಾ ಧರ್ಮ ಎಂದ ಕೂಡಲೇ ಹಾಗಾಡುತ್ತಾರೆ. ಅದರಲ್ಲೂ ಭಾರತೀಯರ ವಿಷಯದಲ್ಲಂತೂ ಧರ್ಮ ಎಂಬುದು ಪವಿತ್ರತೆಗೂ, ದೇವರಿಗೂ, ಶ್ರದ್ಧೆಗೂ ಸಂಬಂಧಿಸಿದ್ದಲ್ಲ. ಬಹಳ ಸರಳವಾಗಿ ಧರ್ಮವನ್ನು ಅರ್ಥ ಮಾಡಿಕೊಳ್ಳುತ್ತಾ ಹೋಗೋಣ.

ಬಂಡೆ ಗಟ್ಟಿಯಾಗಿರುವುದು ಅದರ ಗುಣ, ನೀರಿಗೆ ಹರಿಯುವ ಗುಣ, ಗಾಳಿಗೆ ಬೀಸುವಂತಹ ಸಹಜ ಗುಣವಿದೆ ಹಾಗೆಯೇ ಬೆಂಕಿಗೆ ಸುಡುವ ಸ್ವಭಾವ ಇದೆ ಎಂದರೆ ಅರ್ಥವಾಗುತ್ತದೆ. ಹಾಗೆಯೇ ಕಾಠಿಣ್ಯವು ಬಂಡೆಯ ಧರ್ಮ, ಹರಿಯುವುದು ನೀರಿನ ಧರ್ಮ, ಬೀಸುವುದು ಗಾಳಿಯ ಧರ್ಮ, ಸುಡುವುದು ಬೆಂಕಿಯ ಧರ್ಮ ಎಂದರೂ ಅರ್ಥವಾಯಿತಲ್ಲವೇ? ಅಂದರೆ ಯಾವುದೇ ಒಂದರ ಮೂಲ ಅಥವಾ ಪ್ರಮುಖವಾದ ಸ್ವಭಾವವೇ ಧರ್ಮ.

ಧರ್ಮ ಶಬ್ದವು ಸಂಸ್ಕೃತದ ‘ಧೃ’ ಎಂಬ ಮೂಲದಿಂದ ಬಂದಿದೆ. ‘ಧೃ’ ಎಂದರೆ ಧಾರಣ ಮಾಡು ಅಥವಾ ಧರಿಸು, ಎತ್ತಿ ಹಿಡಿ ಅಥವಾ ಬೆಂಬಲಿಸು ಎಂದರ್ಥ. ಇದು ಪ್ರಾರಂಭದ ಪಾಠ. “ಧಾರಣಾತ್ ಧರ್ಮ ಇತ್ಯಾಹುಃ ಧರ್ಮೋ ಧಾರಯತಿ ಪ್ರಜಾಃ” ಎಂದು ಮಹಾಭಾರತದ ಕರ್ಣಪರ್ವದಲ್ಲಿ ಯಾವುದು ಇನ್ನೊಂದನ್ನು ಎತ್ತಿ ಹಿಡಿಯುವುದೋ, ಅಥವಾ ಇನ್ನೊಂದಕ್ಕೆ ಆಧಾರವಾಗಿ ಅದನ್ನು ರಕ್ಷಿಸುವುದೋ ಅದು ಧರ್ಮ ಎನಿಸಿಕೊಳ್ಳುತ್ತದೆ.

ಹೀಗೆಂದು ಕೃಷ್ಣ ಅರ್ಜುನನಿಗೆ ಧರ್ಮ ಎಂದು ವಿವರಿಸಲು ಯತ್ನಿಸುತ್ತಾನೆ. ಅದೇ ರೀತಿಯಲ್ಲಿ ಭಗವತ್ಗೀತೆಯಲ್ಲಿ “ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್” ಎನ್ನುತ್ತಾ ಬೇರೆ ಧರ್ಮವನ್ನು ಚೆನ್ನಾಗಿ ಮಾಡುವುದಕ್ಕಿಂತ ತನ್ನ ಧರ್ಮವು ವಿಗುಣವಾಗಿದ್ದರೂ (ಪರರ ದೃಷ್ಟಿಯಲ್ಲಿ) ಅದೇ ಶ್ರೇಯಸ್ಕರ ಎನ್ನುತ್ತಾ “ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ” ನಿನ್ನದೇ ಧರ್ಮದಲ್ಲಿ ಸತ್ತರೂ ಅದು ಮೇಲು, ಪರಧರ್ಮ ಅದಕ್ಕಿಂತ ಭಯಂಕರವಾದುದು ಎಂದೂ ಹೇಳುತ್ತಾನೆ.

ಭಗವತ್ಗೀತೆಯಲ್ಲಿ ಧರ್ಮವೆಂದರೆ ವ್ಯಕ್ತಿ ಅಥವಾ ವಸ್ತುವಿನ ಸ್ವಭಾವದಂತೆ ತೋರಿದರೆ, ಕರ್ಣಪರ್ವದಲ್ಲಿ ಕರ್ತವ್ಯದಂತೆ ತೋರುತ್ತದೆ. ಭಗವತ್ಗೀತೆಯ ಧರ್ಮವನ್ನೂ ಕರ್ತವ್ಯವೆಂದೂ ಕೂಡಾ ಅರ್ಥೈಸಬಹುದು. ಆದರೆ ಒಂದು ವಿಷಯ ನೆನಪಿಡಬೇಕು. ಮಹಾಭಾರತದ ಯಾವುದೋ ಒಂದು ಉಲ್ಲೇಖಿತ ಸಾಲನ್ನು ಹಿಡಿದುಕೊಂಡು ಸುಭಾಷಿತದ ರೀತಿಯಲ್ಲಿ ಅಥವಾ ಧಾರ್ಮಿಕ ಸೂತ್ರದ ರೀತಿಯಲ್ಲಿ ಶಾಸನವನ್ನಾಗಿ ಮಾಡಿಕೊಳ್ಳಬಾರದು.

ಏಕೆಂದರೆ ಮಹಾಭಾರತದಲ್ಲಿ ನೂರಾರು ಪಾತ್ರಗಳು ಬರುತ್ತವೆ. ಎಲ್ಲಾ ಪಾತ್ರಗಳೂ ತಮ್ಮ ತಮ್ಮ ಧೋರಣೆಯನ್ನು, ಮನೋಭಾವವನ್ನು, ಮನಸ್ಥಿತಿಗಳನ್ನು ವ್ಯಕ್ತಪಡಿಸುವಂತೆ ಧರ್ಮವನ್ನೂ ಕೂಡಾ ನಾನಾ ರೀತಿಯಲ್ಲಿ ಸಮಯ ಸನ್ನಿವೇಶಕ್ಕೆ ತಕ್ಕಂತೆ ವಿವರಿಸುತ್ತಾ ಹೋಗುತ್ತಾರೆ. ವ್ಯಾಸ, ಜನಮೇಜಯ, ಭೀಷ್ಮ, ವಿದುರ, ಕೃಷ್ಣ, ಧುರ್ಯೋದನ, ದೃತರಾಷ್ಟ್ರ, ಗಾಂಧಾರಿ, ಕುಂತಿ, ಮಾದ್ರಿ, ಧರ್ಮರಾಯ; ಹೀಗೆ ಹಲವಾರು ಪಾತ್ರಗಳು ಅನೇಕ ವಿಷಯಗಳನ್ನು ತಮ್ಮದೇ ಆದ ರೀತಿಯಲ್ಲಿ, ತಾವು ಗ್ರಹಿಸಿದಂತೆ, ತಾವು ನಂಬಿದಂತೆ, ತಮ್ಮ ಸಿದ್ಧಾಂತದಂತೆ, ತಮ್ಮ ಅನುಭವಕ್ಕೆ ತಕ್ಕಂತೆ ವಿವರಿಸುತ್ತಾ ಹೋಗುತ್ತಾರೆ.

ಮಹಾಭಾರತ ಯಾವುದೇ ಒಂದು ಸಿದ್ಧಾಂತವನ್ನು ಸ್ಪಷ್ಟ ಪಡಿಸಲು, ನೀತಿ ಹೇಳಲು ನಿಲ್ಲುವುದಿಲ್ಲ. ಆದರೆ ಧರ್ಮವನ್ನೇ ಕೇಂದ್ರವಾಗಿಟ್ಟುಕೊಳ್ಳುತ್ತದೆ. ಧರ್ಮವನ್ನು ಎತ್ತಿ ಹಿಡಿಯುತ್ತದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಧರ್ಮದ ಕೇಂದ್ರ ಮತ್ತು ಕರ್ಮದ ಚಕ್ರವನ್ನೇ ಎಲ್ಲಾ ಪಾತ್ರಗಳ ಜೊತೆಜೊತೆಯಾಗಿ ಹೋಗುತ್ತಿರುತ್ತದೆ.
ಇಷ್ಟೆಲ್ಲಾ ಆದರೂ ಮಹಾಭಾರತ ಧಾರ್ಮಿಕತೆಯ ಕತೆಯಲ್ಲ. ಇದರಲ್ಲಿ ಬದ್ಧತೆ, ಶ್ರದ್ಧೆ ಎಲ್ಲವನ್ನೂ ಕೋರಲಾಗುತ್ತದೆ.

ಆದರೆ ಯಾವುದೋ ಸ್ಥಾಪಿತ ಧರ್ಮದ ಸಾಂಪ್ರದಾಯಿಕ ಆಚರಣೆಯ ರೀತಿಯಲ್ಲಿ ಅಂದರೆ ರಿಲೀಜಿಯಸ್ ಪ್ರಾಕ್ಟೀಸ್ ರೀತಿಯದಲ್ಲ. ವ್ಯಕ್ತಿಧರ್ಮ, ಪ್ರಕೃತಿಧರ್ಮ, ಪರಿವಾರಿಕ ಅಥವಾ ಕುಟುಂಬ ಧರ್ಮ, ಸಮಾಜಧರ್ಮ, ವೃತ್ತಿಧರ್ಮ, ಮನೋಧರ್ಮ, ರಾಜಧರ್ಮ, ಕಾಲಧರ್ಮ ಅಥವಾ ಯುಗಧರ್ಮ, ವರ್ಣಧರ್ಮ, ಆಪತ್ಧರ್ಮ, ಆಶ್ರಮಧರ್ಮ; ಹೀಗೆ ಅನೇಕಾನೇಕ ಧರ್ಮಗಳ ಚಹರೆಗಳನ್ನು, ಚಟುವಟಿಕೆಗಳನ್ನು, ಚರ್ಚೆಗಳನ್ನು ಗುರುತಿಸಬಹುದು.

ಇನ್ನೂ ಮುಂದುವರಿದು ಆಪತ್ಕಾಲೇ ನಾಸ್ತಿ ಧರ್ಮ ಎಂತಲೂ ಎನ್ನುವುದು. ಅಂದರೆ ಪ್ರಾಣ ಹೋಗುವಂತಹ ಕೆಟ್ಟ ಸಂದರ್ಭ ಒದಗಿದರೆ ಯಾವ ಧರ್ಮವನ್ನು ಬಿಟ್ಟು ನಿನ್ನ ಪ್ರಾಣವನ್ನು ಉಳಿಸಿಕೋ ಎಂಬಂತಹ ಕಿವಿ ಮಾತು. ಇದನ್ನೇ ಆಪತ್ಧರ್ಮ ಎಂದುಕೊಳ್ಳೋಣ. ಒಟ್ಟಿನಲ್ಲಿ ಧರ್ಮ ಎಂಬ ಪದದ ಹಿಂದೆ ಜೋಡುಪದವಾಗಿ ಬಂದಿರುವ ಪದಗಳನ್ನೆಲ್ಲಾ ನೋಡಿದರೆ, ಧರ್ಮ ಎಂಬುದು ಸ್ಥಿರವೂ ಹೌದು, ಚರವೂ ಹೌದು ಎಂದಾಗುತ್ತದೆ. ಸ್ಥಿರವಾಗಿರುವುದು ಯಾವ ಧರ್ಮ ಮತ್ತು ಚರವಾಗಿರುವುದು ಯಾವ ಧರ್ಮ ಎಂಬುದನ್ನು ಗಮನಿಸಬೇಕು.

ಒಟ್ಟಾರೆ ಸಧ್ಯಕ್ಕೆ ಧರ್ಮವನ್ನು ಮೂರು ರೀತಿಯಲ್ಲಿ ಅರ್ಥ ಮಾಡಿಕೊಳ್ಳೋಣ. ಆಗ ಇನ್ನು ಮುಂದೆ ನಾವು ಪ್ರಯಾಣ ಮಾಡಲಿರುವ ದೇಶ ವಿದೇಶಗಳ ಧರ್ಮಗಳನ್ನೆಲ್ಲಾ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಧರ್ಮ ಎಂದರೆ ಒಂದು ವಸ್ತು ಅಥವಾ ಜೀವದ ಸ್ವಾಭಾವಿಕ ಗುಣವೆಂಬುದು ಸ್ಥಿರ ಧರ್ಮ ಎನ್ನಬಹುದು. ಅದೇನಾದರೂ ಬದಲಾಗದು. ನೈಸರ್ಗಿಕವಾಗಿ ಪ್ರಾಕೃತಿಕವಾಗಿ ಇರುವಂತಹ ಗುಣ ಸ್ವಭಾವ. ನಮ್ಮ ಹಿರಿಯರು ಹೇಳುತ್ತಿದ್ದರು, “ಅವನು ಎಷ್ಟು ತಿಂದರೂ ದಪ್ಪಗಾಗುವುದಿಲ್ಲ. ಅದು ಅವನ ಶರೀರ ಧರ್ಮ!” ಅವನು ಇರುವುದೇ ಹಾಗೇ ಎನ್ನುವುದಕ್ಕೆ ಹಾಗೆನ್ನುತ್ತಿದ್ದರು.

ಶರೀರ ಪ್ರಕೃತಿ ಅಥವಾ ಶರೀರಧರ್ಮ ಎಂಬುದನ್ನು ಸಮಾರ್ಥಕ ಪದಗಳಾಗಿ ಬಳಸುತ್ತಿದ್ದರು. ಅದು ಸ್ಥಿರವಾಗಿರುವ ಧರ್ಮ. ಇದು “ಅವರವರ ಮನೋಧರ್ಮಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ” ಎನ್ನುವ ಮಾತಿನಲ್ಲಿಯೂ ಧರ್ಮ ಎನ್ನುವುದನ್ನು ಗಮನಿಸಿ. ಅವರವರ ಸಹಜ ಸ್ವಭಾವ ಎನ್ನುವುದಕ್ಕೆ ಸೂಚಿಸುತ್ತಾರೆ.

ಅದೇ ರೀತಿ ವೃತ್ತಿಧರ್ಮ, ಕುಟುಂಬಧರ್ಮ, ಆಶ್ರಮಧರ್ಮ, ಇತ್ಯಾದಿಗಳನ್ನು ಗಮನಿಸಿದರೆ ಧರ್ಮ ಎಂದರೆ ಕರ್ತವ್ಯ ಎಂಬ ಅರ್ಥ ಬರುತ್ತದೆ. ನಾನು ಮಡಿವಾಳನಾಗಿ ವೃತ್ತಿಯನ್ನು ಮಾಡುವಾಗ ನನ್ನ ಕೆಲಸದಲ್ಲಿ ಯಾವ ಯಾವ ಕರ್ತವ್ಯಗಳಿಗೆ ಬದ್ಧನಾಗಿರಬೇಕು ಎಂಬುದನ್ನು ನೋಡಬೇಕು. ಅದು ನನ್ನ ವೃತ್ತಿಧರ್ಮ. ಕುಟುಂಬದ ಒಂದು ಪಾತ್ರವನ್ನು ನಿರ್ವಹಣೆ ಮಾಡುವಾಗ ಆ ಪಾತ್ರದ ಕರ್ತವ್ಯಕ್ಕೆ ಬದ್ಧನಾಗಿ ಅದನ್ನು ನೆರವೇರುವಂತೆ ನೋಡಿಕೊಳ್ಳುವುದು ನನ್ನ ಧರ್ಮವನ್ನು ಪಾಲನೆ ಮಾಡಿದಂತೆ.

ಹಾಗೆಯೇ ಪ್ರಕೃತಿಧರ್ಮ, ಯುಗಧರ್ಮ, ಸಮಾಜಧರ್ಮ; ಇತ್ಯಾದಿಗಳಲ್ಲಿ ಧರ್ಮವನ್ನು ‘ಕ್ರಮ’ ಎಂದು ಅರ್ಥ ಮಾಡಿಕೊಳ್ಳಬೇಕು. ಪ್ರಕೃತಿಯಲ್ಲಿ ಋತುಧರ್ಮವಿದೆ. ಅದಕ್ಕೆ ಅನುಸಾರವಾಗಿ ಋತುಗಳು ಕಾಲಕಾಲಕ್ಕೆ ಬರುತ್ತವೆ ಹೋಗುತ್ತವೆ. ಒಂದು ಕ್ರಮವನ್ನು ಅನುಸರಿಸುತ್ತವೆ. ಇದು ಸಹಜವಾಗಿ ಆಗುವುದು. ಯುಗಧರ್ಮ ಅಥವಾ ಕಾಲಧರ್ಮದಲ್ಲಿ ಬದಲಾದ ಕಾಲಕ್ಕೆ ಅನುಗುಣವಾಗಿ, ಆ ಕಾಲದ ಪರಿಸ್ಥಿತಿ, ರೀತಿ ನೀತಿಗಳನ್ನು ನೋಡಿಕೊಂಡು ನಮ್ಮ ನಡೆಯ ಕ್ರಮವನ್ನು ಬದಲಿಸಿಕೊಳ್ಳಬೇಕು. ಇದು ನಾವು ಗ್ರಹಿಸಿ ಕಾಲದ ಪರಿಸ್ಥಿತಿಗೆ ಹೊಂದಿಕೊಳ್ಳುವ ಮೂಲಕ ಕ್ರಮವನ್ನು ರೂಪಿಸಿಕೊಳ್ಳುವುದು.

ಸಮಾಜ ಎಲ್ಲರೂ ಒಟ್ಟಾಗಿ ಬಾಳುವಂತಹ ಒಂದು ಸಾಂಘಿಕ ವ್ಯವಸ್ಥೆ. ವ್ಯಕ್ತಿಗಳ ಮನೋಭಾವ, ಮನೋಭಿಲಾಷೆ, ನಿರಾಶೆ, ಒಲವು, ನಿಲುವುಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿರುತ್ತವೆ. ಹಾಗಿದ್ದರೂ ನಾವು ಸಂಘಜೀವಿಗಳಾದ್ದರಿಂದ ವ್ಯವಸ್ಥೆಯಲ್ಲಿ ಒಂದು ಕ್ರಮವನ್ನು ರೂಪಿಸಲಾಗಿರುತ್ತದೆ.

ಏನೇ ಸಂಘರ್ಷ, ಸಂಕಟ, ಸಂತೋಷ ಎದುರಾಗುವಂತಹ ಸನ್ನಿವೇಶಗಳಿದ್ದರೂ ಇಡೀ ಸಮಾಜ ಅಥವಾ ಸಮುದಾಯದ ವ್ಯವಸ್ಥೆಯು ಕುಸಿಯದಿರುವಂತೆ, ಅದು ನಾಶಗೊಳ್ಳದಿರುವಂತೆ ನೋಡಿಕೊಳ್ಳಲು ಒಂದು ಕ್ರಮವನ್ನು ರೂಪಿಸಿದೆ. ಅದನ್ನು ಅನುಸರಿಸುವ ಕರ್ತವ್ಯವೂ ವ್ಯಕ್ತಿಗಳದ್ದಾಗಿರುತ್ತದೆ. ಅದು ಒಬ್ಬನ ಧರ್ಮ. ಸಮಾಜಕ್ಕೊಂದು ಧರ್ಮ ಅಂದರೆ ಕ್ರಮ. ಸಮಾಜದಲ್ಲಿ ಬಾಳಿ ಬದುಕಲು ಆ ಕ್ರಮವನ್ನು ಪಾಲಿಸಲು ವ್ಯಕ್ತಿಗೆ ಧರ್ಮ, ಅಂದರೆ ಕರ್ತವ್ಯ.

ಒಟ್ಟಾರೆ, ಧರ್ಮ ಎಂದರೆ ಮೂರು ಅರ್ಥಗಳಲ್ಲಿ ಸ್ಥೂಲವಾಗಿ ತಿಳಿದುಕೊಳ್ಳೋಣ. ಒಂದು ಸ್ವಾಭಾವಿಕ ಗುಣ, ಎರಡನೆಯದು ಕರ್ತವ್ಯ ಮತ್ತು ಮೂರನೆಯದು ಕ್ರಮ. ಇಷ್ಟನ್ನು ತಿಳಿದುಕೊಂಡರೆ ನಮಗೆ ವಿಶ್ವದಲ್ಲಿ ಧರ್ಮಗಳ ವಿಷಯದಲ್ಲಿ ಉಂಟಾಗಿರುವ ಗೊಂದಲಗಳು, ಗಲಾಟೆಗಳು, ಸಂಘರ್ಷಗಳು, ಸಂಕಟಗಳು ಎಲ್ಲಾ ಅರ್ಥವಾಗುತ್ತವೆ. ಬಹಳ ಮುಖ್ಯವಾಗಿ ಧರ್ಮವನ್ನು ಏನೆಂದು ಅರ್ಥ ಮಾಡಿಕೊಳ್ಳಬೇಕಿತ್ತು, ಹೇಗೆಂದು ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿಯುತ್ತದೆ. ಅಥವಾ ಏನೆಂದೂ ಅರ್ಥವೇ ಆಗಿಲ್ಲ ಎಂದಾದರೂ ಅರ್ಥವಾಗುತ್ತದೆ.

ಧರ್ಮವನ್ನು ಸಾಮಾಜಿಕವಾಗಿ, ತಾತ್ವಿಕವಾಗಿ, ಆಧ್ಯಾತ್ಮಿಕವಾಗಿ, ಸಾಂಸ್ಕೃತಿಕವಾಗಿ, ಮಾನಸಿಕವಾಗಿ, ನೈತಿಕವಾಗಿ ಮತ್ತು ರಾಜಕೀಯವಾಗಿ ಅರ್ಥ ಮಾಡಿಕೊಳ್ಳಲು ಹೋದಾಗ ಸಮಾಜದಲ್ಲಿ ನಡೆಯುತ್ತಿರುವ ಧಾರ್ಮಿಕ ದೊಂಬಿಗಳು, ಅವುಗಳನ್ನು ನಡೆಸುತ್ತಿರುವ ಝ್ಹೋಂಬಿಗಳು ಕೂಡಾ ಅರ್ಥವಾಗುತ್ತಾರೆ.

(ಮುಂದುವರಿಯುತ್ತದೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version