ಭಾವ ಭೈರಾಗಿ
ಕವಿತೆ | ಭಾರತಕ್ಕೇ ಬೀಗ ಹಾಕಿದ ಕೊರೋನ
- ಧರಣೀಪ್ರಿಯೆ, ದಾವಣಗೆರೆ
(ಭಾಮಿನಿ ಷಟ್ಪದಿಯಲ್ಲಿ)
ವಾಸಿಯಾಗದ ರೋಗ ಬಂದಿತು
ಘಾಸಿಗೊಳಿಸಿತು ವಿಶ್ವದೆಲ್ಲೆಡೆ
ಸೋಸಿಗಾಳಿಯಸೇವಿಸಿರೆನುತ ಬಟ್ಟೆ ಕಟ್ಟುತಲಿ|
ರೋಸಿಹೋಗುತ ಜನರ ಜೀವನ
ಮಾಸಿಹೋದವು ಕನಸು ಬದುಕಲಿ
ಹಾಸಿಹೊದ್ದವು ಕೊರಗಿ ಮನದಲಿ ಹೊರಗೆ ಬರದಂತೆ||
ಮಾತೆ ಮುನಿದಳು ಧರಣಿ ದೇವಿಯು
ಜಾತಿ ಭೇದವ ನೋಡಿನಿಲ್ಲದೆ
ಸೋತುಬೀಳುವ ಮನುಜ ಬಳಲುತ ಶಕ್ತಿಕುಂದುತಲಿ|
ನೀತಿನಿಯಮವ ಮರೆತ ಸೊಕ್ಕಲಿ
ಭೀತಿಯಿಲ್ಲದೆ ಮೆರೆದ ಬಾಳಲಿ
ಕೂತ ಚಿಂತಿಸಿ ದಾರಿಕಾಣದೆ ಬಳಲಿ ಬೆಂಡಾಗಿ||
ರೋಗ ಹರಡಲು ದೇಶದೆಲ್ಲಡೆ
ವೇಗದಿಂದಲಿ ವಿಷವಕಾರುತ
ಬೀಗಹಾಕಿತು ಭರತಖಂಡಕೆ ಮಾರಿ ಹೊಕ್ಕಿರಲು|
ಜಾಗವಿಲ್ಲದೆ ನರಳಿ ಸತ್ತರು
ಕೂಗಿಕರೆದರು ಬಂದು ನೋಡದೆ
ರೋಗ ಭಯದಲಿ ಜನರು ಕಳೆದರು ದಿನವು ನರಕದಲಿ||
ಸುದ್ದಿದಿನ.ಕಾಂ|ವಾಟ್ಸಾಪ್|9980346243