ಭಾವ ಭೈರಾಗಿ

ಕವಿತೆ | ಭೂತ

Published

on

ಗೋಪಾಲಕೃಷ್ಣ ಅಡಿಗ

ಇಂದು (ಫೆ.18) ಗೋಪಾಲಕೃಷ್ಣ ಅಡಿಗರ ಹುಟ್ಟು ಹಬ್ಬ. ಅವರ ನೆನಪಿಗಾಗಿ ಅವರದೇ ಪದ್ಯ ‘ಭೂತ’. ಓದಿ. ಅಭಿಪ್ರಾಯ ತಿಳಿಸಿ.


  • ಗೋಪಾಲಕೃಷ್ಣ ಅಡಿಗ

-೧-
ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು :
ಹುಗಿದ ಹಳಬಾವಿಯೊಳ ಕತ್ತಲ ಹಳಸುಗಾಳಿ
ಅಂಬೆಗಾಲಿಟ್ಟು ತಲೆಕೆಳಗು ತೆವಳುತ್ತೇರಿ
ಅಳ್ಳಳ್ಳಾಯಿ ಜಪಿಸುವ ಬಿಸಿಲಕೋಲಿಗೇರಿ ತೆಕ್ಕಾಮುಕ್ಕಿ
ಹಾಯುತ್ತಿದೆ ಆಗಾಗ್ಗೆ ತುಳಸಿವೃಂದಾವನದ ಹೊದರಿಗೂ.
ತೊಟ್ಟು ಕಳಚಿದ ಹೊಕ್ಕುಳಿನ ಬಳ್ಳಿ ದಡದಲ್ಲಿ
ಕತ್ತರಿಸಿದಿಲಿಬಾಲ ಮಿಡುಕುತ್ತದೆ.
ಕತ್ತಲಲ್ಲೇ ಕಣ್ಣುನೆಟ್ಟು ತಡಕುವ ನನಗೆ
ಹೊಳೆವುದು ಹಠಾತ್ತನೊಂದು ಚಿನ್ನದ ಗೆರೆ :
ಅಮವಾಸ್ಯೆ ಕಂದಕಗಳಲ್ಲಿ ಹೇಗೋ ಬಿದ್ದು ಒದ್ದಾಡುತ್ತಿರುವ ಗರಿ ಸುಟ್ಟ ತಾರೆ.

-೨-

ವರ್ತಮಾನಪತ್ರಿಕೆಯ ತುಂಬ ಭೂತದ ಸುದ್ದಿ :
ನೀರ ಮೇಲಕ್ಕೊಂದು ಮಡಿ, ಕೆಳಕ್ಕೇಳು ಮಂಜಿನ ಶಿಖರಿ ;
ಇದ್ದಕ್ಕಿದ್ದಂತಕಸ್ಮಾತ್ತಗ್ನಿನುಡಿಯುಗಿದ
ಮಂಜು ಮುಸುಕಿದ ಮುಗ್ಧ ಜ್ವಾಲಾಮುಖಿ.
ಪತ್ರಿಕೆಯ ಮುಚ್ಚಿದರು—-
ಸದ್ದಿರದ ಖಾಲಿಕಂಕಾಲ ಕೋಣೆಗಳಲ್ಲಿ
ತಾಳವಿಲ್ಲದೆ ಮೂಕಸನ್ನೆ ಮುಲುಕುವ ತಿರುಗುಮುರುಗು ಪಾದದ ಪರಿಷೆ
ಅಂತರಾಳಗಲ್ಲಿ ನಿಂತ ನೀರುಗಳಲ್ಲಿ
ಕಂತಿ ಕೈಬಡೆವ ಬೀಜಾಣುಜಾಲ ;
ಕಾಳರಂಗಸ್ಥಳದ ಫರದೆ ಮುರಿಮರೆಯಲ್ಲಿ
ಮಾತು ಹೆಕ್ಕುವ ಮಿಣುಕು ಮೊನೆಯ ಬಾಲ—– ಇವು
ಬಯಸವೆ ಹೊರಂಗಳದ ರಂಗುರಂಗಿನ ಬಳ್ಳಿ ಹೂವು ಹೊದರ ?

-೩—

ನೀರು ನೆಲೆಯಿಲ್ಲದವರು ಪಿತೃಪಿತಾಮಹರು,
ಗಾಳಿಹೆದ್ದೆರೆಲಾಳಿಗಂಟಿ ನೆಲಸಿಕ್ಕಿಯೂ ದಕ್ಕದವರು.
ಉಚ್ಛಾಟನೆಯ, ತರ್ಪಣದ ತಂತ್ರ ಬಲ್ಲೆ ; ಆದರು ಮಂತ್ರ ಮರೆತೆ ;
ಬರಿದೇ ಹೀಗೆ ಆಡಿಸುತ್ತಿದ್ದೇನೆ ಮಂತ್ರದಂಡ.
ಪುರೋಹಿತರ ನೆಚ್ಚಿ ಪಶ್ಚಿಮಬುದ್ಧಿಯಾದೆವೋ ;
ಇನ್ನಾದರೂ ಪೂರ್ವಮೀಮಾಂಸೆ ಕರ್ಮಕಾಂಡಗಳನ್ನು ಬಗೆಯಬೇಕು.
ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು ;
ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗೆರೆ ಮಿರಿವ ಚಿನ್ನದದಿರು,
ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ
ಇನ್ನಾದರೂ ಕೊಂಚ ಕಲಿಯಬೇಕು :
ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ—
ವಿಗ್ರಹಕ್ಕೊಗ್ಗಿಸುವ ಅಸಲು ಕಸಬು.

-೪—

ಬಾವಿಯೊಳಗಡೆ ಕೊಳೆವ ನೀರು ; ಮೇಲಕ್ಕಾವಿ ;
ಆಕಾಶದುದ್ದವೂ ಅದರ ಕಾರಣ ಬೀದಿ ;
ಕಾರ್ಮುಗಿಲ ಖಾಲಿಕೋಣೆಯ ಅಗೋಚರ ಬಿಂದು
ನವಮಾಸವೂ ಕಾವ ಭ್ರೂಣರೂಪಿ—
ಅಂತರಪಿಶಾಚಿ ಗುಡುಗಾಟ, ಸಿಡಿಲಿನ ಕಾಟ—
ಭೂತರೂಪಕ್ಕೆ ಮಳೆ ವರ್ತಮಾನ ;
ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ ;
ಭತ್ತಗೋಧುವೆ ಹಣ್ಣುಬಿಟ್ಟ ವೃಂದಾವನ,
ಗುಡಿಗೋಪುರಗಳ ಬಂಗಾರ ಶಿಖರ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version