ಅಂತರಂಗ

ಕವಿತೆ | ಬಿಡಿಸಿಕೊಳ್ಳುತ್ತದೊಂದು ಚಿತ್ರ

Published

on

~ರಮ್ಯ ಕೆ.ಜಿ.ಮೂರ್ನಾಡು

ಕುಂಚ ತಾಕುವ ಮೊದಲೇ
ಮೂಡುತ್ತದೊಂದು ಚಿತ್ರ!
ಎದೆನೆತ್ತರು ನಡುಗಿ
ಪ್ರವಾಹದಂತೆ ತೆರೆದುಕೊಂಡ
ಬ್ರಹ್ಮಾಂಡದಲಿ ಗಡಿ ಮರೆತ
ಗೆರೆಗಳು ಕ್ಯಾನ್ವಾಸಿಂದಾಚೆ
ಅಲೆದು ಜೀವದ್ರವ್ಯಗಳಲಿ
ಈಜಿ ಮೂಲೆಗಳ ತುದಿ ಮುಟ್ಟಿ
ಬರೆಯುತ್ತದೆ ಬೆರಳ
ಗುರುತಿನ ಇತಿಹಾಸನು…

ಖಾಲಿತನಗಳಲಿ ಉಸಿರಾಡುವ
ಮೌನ-ಮಾತುಗಳ ವೇಗವನು
ಅಣಕಿಸುವಾಗ ತೂರುವ
ಬೆಳಕು ಸರಿದೂಗಿಸುತ್ತದೆ
ಒಡಕುಗಳ…
ಅಳಿಸಿದ ಮುಖಗಳು ಬಣ್ಣಗಳ
ಎರಕ ಹೊಮ್ಮಿಸಿಕೊಂಡು
ಬದಲಿಸುತ್ತವೆ ಬಣ್ಣಾ!

ಪದರುಗಳಾಗಿ ತೆರೆದುಕೊಳ್ಳುವ ಚಿತ್ರ
ನೆರಳಿನಲಿ ಸರಿದಾಡುವ
ಆತ್ಮದಂತೆ ಕಲೆಗಳ
ಉಳಿಸಿಬಿಡುತ್ತದೆ ಪೂರ್ತಿಯಾಗದ
ಆಕಾರದೊಳಗೆ ಚಿತ್ರಕಾರನೇ
ಲಯವಾಗುತ್ತಿರುವಾಗ
‘ಬಿಡಿಸಿ’ಕೊಳ್ಳುತ್ತದೆ ಚಿತ್ರ
ಗೆರೆಗಳಿಂದ ಬಣ್ಣಗಳಿಂದ
ಹಾಳೆಗಳಿಂದ ಚೌಕಟ್ಟಿನಿಂದ.

 

Trending

Exit mobile version