/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಅಂತರಂಗ

ಪೊಲೀಸ್ ಇಲಾಖೆಯಲ್ಲೊಂದು ‘ಅಮೃತದ ಒರತೆ’

Published

on

ಭಿನ್ನ – ವಿಭಿನ್ನ

ಸದಾ ಕಾನೂನು, ರಕ್ಷಣೆ ಮತ್ತು ಶಿಸ್ತು ಕಾಪಾಡುವ ಬಿಡುವಿಲ್ಲದ ಕಾಯಕದಲ್ಲಿ ಮಗ್ನರಾಗಿರುವ ಪೊಲೀಸ್ ಅಧಿಕಾರಿಗಳು ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ವಿರಳವೇ ಸರಿ. ಆದರೆ ಸಾಹಿತ್ಯದ ಅಭಿರುಚಿ ಇರುವ ಮನಸ್ಸುಗಳು ಪೊಲೀಸ್ ಇಲಾಖೆಯನ್ನು ಪ್ರವೇಶಿಸಿದಲ್ಲಿ ಅವರಿಂದ ಸಾಕಷ್ಟು ಸಮಾಜಮುಖಿ ಚಿಂತನೆ ಹಾಗೂ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು.

ಈ ಮಾತಿಗೆ ಪೂರಕ ಮತ್ತು ಸಾಕ್ಷಿ ಎಂಬಂತೆ ಪೊಲೀಸ್ ಇಲಾಖೆಯಲ್ಲಿ ವಿನೂತನ ಚಿಂತನೆಗಳೊಂದಿಗೆ ಜನಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕವಿ ಮನಸಿನ ದಾವಣಗೆರೆ ಡಿವೈಎಸ್ಪಿ ಡಾ. ದೇವರಾಜ್ ಬಿ ಅವರ ಚೊಚ್ಚಲ ಕವನ ಸಂಕಲನ ” ಅಮೃತದ ಒರತೆ ” ಕೃತಿ ಇದೇ 17 – 08 – 2019 ರಂದು ಲೋಕಾರ್ಪಣೆಗೊಳ್ಳಲಿದೆ.

ಅಪರೂಪದ ಪ್ರತಿಭೆ

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಚಿಕ್ಕ ಜೋಗಿಹಳ್ಳಿ ತಾಂಡಾ ದೇವರಾಜ್ ಅವರ ಹುಟ್ಟೂರು. ಸೇವಾ ನಿಷ್ಠೆಯಿಂದಲೇ ಗುರುತಿಸಿಕೊಂಡಿರುವ ನಿವೃತ್ತ ಮುಖ್ಯೋಪಾಧ್ಯಾಯ ಭದ್ರನಾಯ್ಕ್ ಜೆ. ಎಂ. ಹಾಗೂ ಪಾರ್ವತಿ ಬಾಯಿ ದಂಪತಿಗಳ ಪುತ್ರರಾದ ದೇವರಾಜ್ ಅವರು ಮೂಲತಃ ವಿಜ್ಞಾನ ಪದವೀಧರರು. ಎಂವಿಎಸ್ಸಿ ಪದವಿ ಪೂರ್ಣಗೊಳಿಸಿ 2011 ರಿಂದ ಐದಾರು ವರ್ಷ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬೆಣಕಲ್ಲು ಗ್ರಾಮದಲ್ಲಿ ಪಶು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದವರು.

ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡರಲ್ಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ದೇವರಾಜ್ ಸದಾ ಕ್ರಿಯಾಶೀಲತೆ, ಸೃಜನಶೀಲತೆ ಕಾಪಾಡಿಕೊಂಡು, ಸ್ನೇಹ ವಲಯದಲ್ಲಿ ಸತತ ಪ್ರಯತ್ನಶೀಲರು ಮತ್ತು ಪರಿಶ್ರಮವಾದಿ ಎಂದೇ ಕರೆಸಿಕೊಂಡವರು. ಬಾಲ್ಯದಿಂದಲೂ ಕೆಎಎಸ್ ಅಧಿಕಾರಿಯಾಗಬೇಕೆಂಬ ಅವರೊಳಗಿನ ಛಲ ಮತ್ತು ಕನಸು ಫಲಿಸಿ 2017ರಲ್ಲಿ ರಾಂಕಿಂಗ್ ಆಧಾರದ ಮೇಲೆ ಕೆ.ಎಸ್.ಪಿ.ಸಿ ಗೆ ಆಯ್ಕೆಯಾಗಿ, ತರಬೇತಿ ಪೂರ್ಣಗೊಳಿಸಿ 2018ರ ನವೆಂಬರ್ ತಿಂಗಳಿಂದ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯದ ನಂಟು

ಬಾಲ್ಯದಿಂದಲೂ ಓದಿನ ಗೀಳಿಗೆ ಬಿದ್ದು, ಸಾಕಷ್ಟು ವಿಜ್ಞಾನ ಮತ್ತು ಸಾಹಿತ್ಯ ಪುಸ್ತಕಗಳನ್ನು ಓದಿ ಅಪಾರ ಜ್ಞಾನ ಭಂಡಾರವನ್ನು ತಮ್ಮದಾಗಿಸಿಕೊಂಡಿರುವ ದೇವರಾಜ್ ಅವರ ಮನದಲ್ಲಿ ಸದ್ದಿಲ್ಲದೆ ಬರವಣಿಗೆಯ ಹವ್ಯಾಸವೂ ಮನೆ ಮಾಡಿತ್ತು.

ವಿವೇಕಾನಂದರ ಜೀವನ ಚರಿತ್ರೆ, ಬದುಕಲು ಕಲಿಯಿರಿ, ಡಿವಿಜಿಯವರ ಮಂಕುತಿಮ್ಮನ ಕಗ್ಗ, ಜ್ಞಾನ – ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು, ಕುವೆಂಪು, ಕಾರಂತ, ಪೂರ್ಣಚಂದ್ರ ತೇಜಸ್ವಿ, ಲಂಕೇಶ್ ಸೇರಿದಂತೆ ಇತರೆ ಕನ್ನಡದ ಹೆಸರಾಂತ ಕವಿಗಳು ಮತ್ತು ಬರಹಗಾರರ ಸಹಸ್ರಾರು ಕೃತಿಗಳನ್ನು ಅಧ್ಯಯನ ಮಾಡಿರುವ ದೇವರಾಜ್ ಅವರಿಗೆ ಕನ್ನಡದ ಪ್ರೇಮ ಕವಿ ಕೆ. ಎಸ್ ನರಸಿಂಹಾಚಾರ್ ಅವರ ಕವಿತೆಗಳೆಂದರೆ ಬಲು ಪ್ರೀತಿ.

ಪಿಯುಸಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ದೇವರಾಜ್ ಅವರು ರೂಪಕ ಮತ್ತು ಪ್ರತಿಮೆಗಳನ್ನು ಸಮರ್ಥವಾಗಿ ಬಳಸಿಕೊಂಡು ಬರೆದ – ” ಸಾಂತ್ವಾನತೆಯ ಬಯಸುವ ಈ ಮನಸು ಬಿರು ಬಿಸಿಲ ಹಾದಿಯಂತೆ, ತಂಗಾಳಿಯ ಆಸರೆ ದೊರಕದೆ… ? ” ಎಂಬ ಒಂದು ಕವಿತೆಯ ಈ ಸಾಲುಗಳು ಅಂದೇ ಅವರೊಳಗಿನ ಕವಿ ಮನಸಿನ ಪ್ರತಿಭೆಯನ್ನು ಪ್ರಕಟಗೊಳಿಸಿದ್ದವು.

ಅನಿಸಿದ್ದನ್ನು ಅಲ್ಲೇ, ಆ ಕೂಡಲೇ ಬರೆಯುತ್ತಿದ್ದ ಅವರನ್ನು ಅಂದಿನಿಂಲೂ ಸ್ನೇಹಿತರು ಆಶು ಕವಿ ಎಂದೇ ಕರೆಯುತ್ತಾರೆ. ಕಾಲೇಜ್ ದಿನಗಳಲ್ಲಿ ಅವರ ಕಾಲೇಜಿನ ಕ್ಯಾಟ್ ಸೆರಾಲ್ಡ್ ಗಾಗಿ ಬರೆಯುತ್ತಿದ್ದ ಅವರ ಕತೆ, ಕವನ, ಕೊಲ್ಯಾಜ್ ಗಳು ವಿದ್ಯಾರ್ಥಿ ಮತ್ತು ಉಪನ್ಯಾಸಕರ ಮೆಚ್ಚುಗೆಗೆ ಪಾತ್ರವಾಗಿದ್ದವು. ಒಮ್ಮೆ ಸವಿನೇರ್ ಮ್ಯಾಗಜಿನ್ ಗಾಗಿ ದೇವರಾಜ್ ಕೇವಲ ಹತ್ತು ನಿಮಿಷದಲ್ಲಿ ಅತ್ಯಂತ ಉಪಯುಕ್ತ ಹಾಗೂ ಮಾಹಿತಿಪೂರ್ಣ ಲೇಖನ ಬರೆದು ಕೊಟ್ಟಿದ್ದರು. ಇದು ಇತರೆಯವರಿಗೆ ಅವರ ಕಲೆ ಮತ್ತು ಪ್ರತಿಭೆಯ ಬಗ್ಗೆ ಅಚ್ಚರಿ ಮೂಡಿಸಿದ ಪ್ರಸಂಗವಾಗಿತ್ತು. ಬಿಡುವಿಲ್ಲದ ಕಾಯಕದ ನಡುವೆಯೂ ಸತತ ಅಧ್ಯಯನ ಶೀಲರಾಗಿರುವ ದೇವರಾಜ್ ಅವರದು ಬದುಕು – ಬರವಣಿಗೆ, ಮಾತು – ಕೃತಿ ಎರಡರಲ್ಲೂ ವಸ್ತು ನಿಷ್ಠತೆ, ಸ್ಪಷ್ಟತೆ, ಯಥಾರ್ಥತೆ ಹಾಗೂ ಪಾರದರ್ಶಕತೆ ಬಯಸುವ ಸ್ವಭಾವ.

ಪ್ರಸ್ತುತ ಅವರ ಲೇಖನಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ದಿ ಇಂಡಿಯನ್ ವೆಟರ್ನರಿ ಜರ್ನಲ್ ಮತ್ತು ಸಿರಿ ಸಮೃದ್ಧಿ ಮ್ಯಾಗಜಿನ್ ನಲ್ಲಿ ಪ್ರಕಟವಾಗುತ್ತಿರುವ ಪಶು ಸಂಗೋಪನೆ, ಜಾನುವಾರು ಕುರಿತ ಮಾಹಿತಿ ಹಾಗೂ ಸಂಶೋಧನಾ ವಿಷಯಗಳನ್ನೊಳಗೊಂಡ ಲೇಖನಗಳು ರೈತರು ಹಾಗೂ ಜನ ಸಾಮಾನ್ಯರಿಗೆ ಉಪಯುಕ್ತ ಮಾಹಿತಿ, ಮಾರ್ಗದರ್ಶನ ಒದಗಿಸುವ ಜೊತೆ ಜನ ಜಾಗೃತಿ ಮೂಡಿಸುವಲ್ಲಿಯೂ ಸಫಲವಾಗಿವೆ.

ನಾಡಿನ ಕೆಲವು ಪ್ರಬುದ್ಧ ಚಿಂತಕರು, ವಿಚಾರವಾದಿಗಳು, ಕವಿಗಳಿಂದ ಆಯೋಜಿಸಲ್ಪಟ್ಟ ಕೆಲ ಕಾವ್ಯ ಕಮ್ಮಟ, ಕಾರ್ಯಾಗಾರಗಳಲ್ಲೂ ಭಾಗವಹಿಸಿರುವ ಕಾರಣ ತನ್ನ ಕಾವ್ಯ ಕೃಷಿಗೆ ಮತ್ತಷ್ಟು ಪ್ರೇರಣೆ ದೊರಕಿದೆಯಲ್ಲದೆ ಕವಿತ್ವಕ್ಕೆ ಪ್ರಬುದ್ಧತೆ ಬರಲು ಸಾಧ್ಯವಾಗಿದೆ ಎನ್ನುವ ದೇವರಾಜ್ ಅವರು ತಾವು ಕಾಲೇಜು ದಿನಗಳಿಂದ ಬರೆದು ಕೂಡಿಟ್ಟಿರುವ ಕವಿತೆಗಳನ್ನು ಒಟ್ಟುಗೂಡಿಸಿ ಇದೀಗ “ಅಮೃತದ ಒರತೆ ” ಹೆಸರಿನಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸುತ್ತಿದ್ದಾರೆ.

ಒಟ್ಟು 74 ಕವಿತೆಗಳನ್ನು ಒಳಗೊಂಡಿರುವ ಈ ಕವನ ಸಂಕಲನ ಪ್ರೀತಿ, ಪ್ರೇಮ, ಪ್ರಕೃತಿ, ದೇಶಪ್ರೇಮ, ದೇಶಭಕ್ತಿ ಬಿಂಬಿಸುವ ಜೊತೆ ತಳಸಮುದಾಯಗಳ ಬದುಕಿನ ಒಳ ತಲ್ಲಣ, ಬಡತನ, ನೋವು – ನಿರಾಶೆ, ಸಮಾಜಮುಖಿ ಚಿಂತನೆ ಇತ್ಯಾದಿ ಅಂಶಗಳನ್ನು ಸಹ ಒಳಗೊಂಡಿವೆ.

ಸಾಹಿತ್ಯ, ಸಂಗೀತ, ಜಾನಪದ, ಹಾಡುಗಾರಿಕೆ, ಕಲೆ, ಸೃಜನಶೀಲತೆ ಇತ್ಯಾದಿಯನ್ನು ಬಳಸಿಕೊಂಡು ಪೊಲೀಸ್ ಇಲಾಖೆಯನ್ನು ಸಮಾಜಮುಖಿ ಹಾಗೂ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ವಿನೂತನ ಚಟುವಟಿಕೆಗಳ ಮೂಲಕ ಮಾದರಿ ಕಾರ್ಯಾಚರಣೆಯಲ್ಲಿ ತೊಡಗಿರುವ ದಾವಣಗೆರೆ ಡಿವೈಎಸ್ಪಿ ದೇವರಾಜ್ ಬಿ. ಅವರ ಈ ಕವನ ಸಂಕಲನ ದಿನಾಂಕ : 17/08/2019 ರಂದು ದಾವಣಗೆರೆ ಸೋಮೇಶ್ವರ ವಿದ್ಯಾಲಯದ ಮಂಜುಷಾ ಸಭಾಂಗಣದಲ್ಲಿ ಲೋಕಾರ್ಪಣೆಯಾಗುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಪಾಲ್ಗೊಂಡು ಅವರಿಗೆ ಶುಭ ಕೋರೋಣ.

ಗಂಗಾಧರ ಬಿ ಎಲ್ ನಿಟ್ಟೂರ್
ಮೊ. ಸಂ : 8867702396

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version