ಭಾವ ಭೈರಾಗಿ
ಕವಿತೆ | ಡಿವೈಡರುಗಳು
- ವಿಲ್ಸನ್ ಕಟೀಲ್
ಈಗೀಗ ರಸ್ತೆಗಳಿಗಿಂತ
ಡಿವೈಡರುಗಳೇ ಅತ್ಯಾಕರ್ಶಕ..!
ಮೆತ್ತನೆ ಹುಲ್ಲುಹಾಸು, ಚೆಂದದ ಹೂಗಿಡಗಳು..
ಸುಂದರ ಜಾಹೀರಾತುಗಳು…
ರಸ್ತೆಗಳ ಆರೋಗ್ಯಕ್ಕಿಂತ
ಡಿವೈಡರುಗಳ ಸೌಂದರ್ಯಕ್ಕೇ
ಸರಕಾರ ಹೆಚ್ಚು ಹಣ ಖರ್ಚು ಮಾಡುತ್ತದೆ.
ಕೆಲವು ಕಡೆ ಈ ಡಿವೈಡರುಗಳೇ
ರಸ್ತೆಯ ತಿರುವುಗಳನ್ನು,
ಮುಟ್ಟುವ ಗುರಿಯನ್ನು
ನಿಯಂತ್ರಿಸುತ್ತವೆ..!
ಡಿವೈಡರುಗಳಿಗೆ ರಸ್ತೆಗಳಂತೆ
ಮೈಮಾಂಸ ಕಿತ್ತುಬರುವ,
ಚರಂಡಿಗಳು ಉಕ್ಕಿ ಹರಿಯುವ,
ಮಳೆಗಾಲದಲ್ಲಿ ಮುಳುಗಿ ಉಸಿರುಗಟ್ಟುವ ಚಿಂತೆಯಿಲ್ಲ
ರಸ್ತೆಪಕ್ಕದ ಮನೆಗಳನ್ನೂ
ಸಲೀಸಾಗಿ ಕೆಡವುವ ಬುಲ್ಡೋಜರುಗಳು
ಡಿವೈಡರುಗಳಿಗೆ ಹಾನಿ ಮಾಡುವುದಿಲ್ಲ.
ಇತ್ತೀಚೆಗೆ ಹೆಚ್ಚಿನವರು
ರಸ್ತೆಗಳಲ್ಲಿ ಸಾಗುವುದಕ್ಕಿಂತ
ಡಿವೈಡರಿನಲ್ಲಿ ಅಡ್ಡಾಡುವುದನ್ನೇ ಇಷ್ಟಪಡುತ್ತಾರೆ.
ಡಿವೈಡರಿನಲ್ಲಿ ನಿಂತವರಿಗೆ
ಎರಡೂ ಬದಿಯವರಿಗೆ
ತಮಾಶೆ ಮಾಡಲು ತುಂಬಾ ಸಲೀಸು
ಹಾಗೆಂದು ಮೈಮರೆಯುವಂತಿಲ್ಲ
ಡಿವೈಡರಿನಲ್ಲಿದ್ದವರೂ ಎಚ್ಚರ ಇರಲೇಬೇಕು
ಮೊನ್ನೆ
ಬಲಗಡೆಯಿಂದ ಬಂದ
ನಿಯಂತ್ರಣ ತಪ್ಪಿದ ಮಂತ್ರಿಯ ಕಾರು
ಡಿವೈಡರಿಗೇ ನುಗ್ಗಿತ್ತು!
ಡಿವೈಡರಿನಲ್ಲಿದ್ದವರು
ಎಡಕ್ಕೆ ಹಾರಿ
ಜೀವ ಉಳಿಸಿಕೊಂಡರು..!
ಸುದ್ದಿದಿನ.ಕಾಂ|ವಾಟ್ಸಾಪ್|9980346243