ಭಾವ ಭೈರಾಗಿ

ಕವಿತೆ | ಏನಾಗಿ ಹುಟ್ಟಲಿ ಈ ಜಗದೊಳಗೆ

Published

on

 

  • ನಂದಕಲಾ

ನಿಸರ್ಗದ ಮಡಿಲಲ್ಲಿ ಉದಯಿಸಿದೆ
ಫಲನೀಡುವ ಮರವಾಗಿ ಜನಿಸಿದೆ
ನರಮಾನವರ ಕಣ್ಣು ನನ್ನ ಮೇಲೆ ಬಿದ್ದಿದೆ
ಅವನ ಕೊಡಲಿ ಏಟು ನನ್ನ ಎದೆಯ ಸೀಳಿದೆ.

ಕಾನನದ ವಾಸಿಯಾಗಿ ಉದಯಿಸಿದೆ
ಕಾಡು ಪ್ರಾಣಿಯ ಸಂಕುಲದಲ್ಲಿ ಜನಿಸಿದೆ
ನನ್ನ ದೇಹದ ಮಾಂಸ ಮಾನವನ ಬಾಯಿ ರುಚಿಯಾಗಿದೆ
ಅವನು ಗುರಿಹಿಟ್ಟು ಬಿಟ್ಟ ಬಾಣ ,ಮದ್ದು ,ಗುಂಡು ನನ್ನತ್ತ ದಾವಿಸಿದೆ.

ಅಬ್ಬ ಎಷ್ಟು ಸುಂದರ ಎಂಬುವಂತೆ ಎದ್ದು ನಿಂತೆ
ಗುಡ್ಡ ,ಬೆಟ್ಟ ,ಪರ್ವತವಾಗಿ ತೋರುವಂತೆ
ದುಷ್ಟ ಮಾನವನಿಗೆ ನನ್ನ ಒಡಲಾಳದ
ಸಂಪತ್ತು ಎಲ್ಲಾ ಬೇಕಂತೆ
ಅವನಿಟ್ಟ ಸಿಡಿಮದ್ದಿಗೆ ಜೀವನ ಚಿದ್ರವಾಗಿ ಹರಡಿದೆ ಚಲ್ಲಾಪಿಲ್ಲಿಯಂತೆ.

ಪ್ರಾಣಿ ಬೇಡ ,ಪಕ್ಷಿ ಬೇಡ ,ಗಿಡ ಮರ ಬೇಡ ,
ಬೆಟ್ಟ ಗುಡ್ಡವು ಬೇಡೆಂದು
ಮಾನವನಾಗಿಯೇ ಜನಿಸೋಣವೆಂದು ಬಂದೆ
ಕಂಡೆ ಅವನ ಜಾತಿ , ಧರ್ಮ ಯುದ್ದಗಳ ಕಂತೆ
ಈ ಜಗದೊಳು ಏನಾಗಿ ಹುಟ್ಟಲಿ ಎಂಬುದು
ಒಂದು ದೊಡ್ಡ ಚಿಂತೆ
ಇನ್ನು ಹಾಗೆ ಉಳಿದಿದೆ ಅದೊಂದು ಪ್ರಶ್ನೆಯಂತೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version