ಭಾವ ಭೈರಾಗಿ

ಕವಿತೆ | ಗೋವು ತಿಂದು ಗೋವಿನಂತಾದವನು

Published

on

  • ಎನ್‌.ಕೆ‌‌. ಹನುಮಂತಯ್ಯ

 

ಅಸ್ಪೃಶ್ಯ!
ಹೌದು; ನಾನು ವಿದ್ಯುತ್ತಿನ ಹಾಗೆ
ನಿಮ್ಮ ತಣ್ಣನೆಯ ಸ್ಪರ್ಶಕ್ಕೆ
ಸಿಕ್ಕಲಾರೆ

ಅಸ್ಪೃಶ್ಯ!
ಹೌದು; ನಾನು ಕಡಲ ಆಳದ ಹಾಗೆ
ನಿಮ್ಮ ಸುಡುಗಣ್ಣು ಸ್ಪರ್ಶಕ್ಕೆ
ಸಿಕ್ಕಲಾರೆ

ಅಸ್ಪೃಶ್ಯ!
ಹೌದು; ನಾನು ಮೊಲೆ ಮೂಡಿದ ನೆಲ
ಜೀವ ಪ್ರೇಮದ ತೊಗಲ
ಸಂಭೋಗಿನಿ
ಹುಟ್ಟುತ್ತವೆ ನನ್ನೊಳಗೆ ಕಾಡು ಕಣಿವೆ
ನದಿ ಪರ್ವತಗಳು

ಅಸ್ಪೃಶ್ಯ!
ಹೌದು; ನಾನು ಸ್ವ
ತಂತ್ರವನು ಭೋಗಿಸುವ ನಿಮ್ಮಂಥ
ಸಲಿಂಗ ಕಾಮಿಗಳಿಗೆ
ಹೆದರಲಾರೆ
ಪಕ್ಕೆ ತಬ್ಬಿದ ಮರಿ ಕಾಯುತ್ತ
ಮರದಿಂದ ಮರಕ್ಕೆ ಹಾರುವ
ಕೋತಿಗೆ ಹೆದರುತ್ತೇನೆ

ಅಸ್ಪೃಶ್ಯ!
ಹೌದು; ನೀರು ನಾಳೆಗಳಿಲ್ಲದೆ
ಹಣ ಅಣ್ವಸ್ತ್ರಗಳ ಕುಲುಮೆಯಾಗಿರುವ
ನಿಮ್ಮ ಕಣ್ಣಿನ ಪ್ರಭೆಗೆ
ಹೆದರಲಾರೆ
ನಿಮ್ಮ ಮಲ ತಿಂದು ನಿಮ್ಮ ಮನೆ ಕಾಯುವ
ನಾಯಿಗೆ ಹೆದರುತ್ತೇನೆ
ಕೃತಕ ಕಣ್ಣಿಗೆ ಕನಸು ಕಾಣುವುದಿಲ್ಲ

ಅಸ್ಪೃಶ್ಯ!
ಹೌದು; ನಾನು ಗೋವು ತಿನ್ನುತ್ತೇನೆ
ಗೋವು ತಿಂದು ಗೋವಿನಂತಾಗಿ
ಗಿರಿ ಕಣಿವೆ ಬಯಲೊಳಗೆಲ್ಲ
ಕುಣಿಯುತ್ತೇನೆ
ನೆಲದ ಮೇಲೆಯೇ ನಿಂತು
ಬಾಲ ಎತ್ತಿ ಕಾಮನಬಿಲ್ಲಿಗೆ
ಬಡಿಯುತ್ತೇನೆ
ಮಳೆಮೋಡಗಳ ತಿವಿದು
ಸುಡುಗಾಡಿಗೆ ಕೆಡವುತ್ತೇನೆ

ಅಸ್ಪೃಶ್ಯ!
ಹೌದು; ನಾನು ಗೋವು ತಿನ್ನುತ್ತೇನೆ
ಗೋವು ತಿಂದು ಗೋವಿನಂತಾಗಿ
ರೋಮರೋಮಗಳಲ್ಲು ಕೆಚ್ಚಲನು ಹೊತ್ತು
ತಿರುಗುತ್ತೇನೆ
ಕಸದ ತೊಟ್ಟಿಯಲಿ ಬಿದ್ದ ಕೂಸುಗಳಿಗೆ
ಹಾಲು ಕುಡಿಸುತ್ತೇನೆ

ಅಸ್ಪೃಶ್ಯ!
ಹೌದು; ನಾನು ಗೋವು ತಿಂದು
ಗೋವಿನಂತಾದವನು
ನೀವು ನೀಡುವ ಮೇವು ತಿಂದು
ನಿಮ್ಮಂಥ ಮನುಷ್ಯನಾಗಲಾರೆ
ಮನುಷ್ಯರನ್ನು ತಿನ್ನಲಾರೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version