ಭಾವ ಭೈರಾಗಿ
ಕವಿತೆ | ಹೆಣಗಳ ಹೂಳಲು ಒಂದಿಷ್ಟು ಭೂಮಿ ಕೊಡಿ
- ರುಜು, ಸಂಶೋಧನಾ ವಿದ್ಯಾರ್ಥಿ, ದಾವಣಗೆರೆ
ಅಂಗಲಾಚಿ ಬೇಡುವೆ…
ಒಂದಿಷ್ಟು ಭೂಮಿ ಕೊಡಿಸಿ
ಬದುಕು ಕಟ್ಟಿಕೊಳ್ಳಲು ಅಲ್ಲ
ಸತ್ತ ನನ್ನ ಹೆಣದ ಗೂಡು ಕಟ್ಟಲು
ಬೀಳುವ ನನ್ನ ಜನಗಳ
ಹೆಣಗಳ ಹೂಳಲು.
ಈ ಹಿಂದೆ ಸತ್ತ
ನನ್ನ ಜನಗಳ ಹೆಣಗಳು
ರಸ್ತೆ ಬದಿಯ ಮೋರಿಯಲ್ಲಿ ಮಣ್ಣಾಗಿವೆ,
ಮಳೆ ಹೊಯ್ದು, ಕಾಲುವೆಯು ಬಂದು
ಒಂದಿಷ್ಟು ಕುರುಹಿಲ್ಲದೆ ನೆಲಸಮವಾಗಿವೆ
ಹುಡುಕಿದರು ಸಿಗುತ್ತಿಲ್ಲ
ನನ್ನಪ್ಪನ ಹೆಣದ ದಿಬ್ಬ
ಪ್ರತಿ ವರ್ಷದ ಕ್ರಿಯಾ ಕರ್ಮವಿಲ್ಲದೆ
ಅನಾಥವಾಗಿದ್ದಾನೆ.
ಅದಕ್ಕಾಗಿ ಕೈ ಮುಗಿದು ಬೇಡುವೆ
ಮುಂದೆ ಬೀಳಲಿರುವ
ಹೆಣಗಳ ದಿಬ್ಬವನ್ನಾದರೂ ಕಾಣುತ್ತೇವೆ
ನಮಗೊಂದಿಷ್ಟು ಭೂಮಿ ಕೊಡಿ
ನಮ್ಮವರ ಹೆಣಗಳನ್ನು ಗುರುತಿಟ್ಟುಕೊಳ್ಳಲು.
ಕೋರ್ಟು ಕಚೇರಿ ತಿಳಿದವರಲ್ಲ ನನ್ನ ಜನ
ಪುಡಿ ಭೂಮಿಗಾಗಿ ಚಪ್ಪಲಿಗಳನ್ನ ಸವೆಸಿದ್ದಾರೆ
ಸಿಕ್ಕ ಸಿಕ್ಕವರಿಗೆ ಸಲಾಮು ಹೊಡೆದಿದ್ದಾರೆ
ರೊಕ್ಕ ಕೇಳಿದವರಿಗೆ ರೊಕ್ಕ
ಬಿರಿಯಾನಿ ಎಂದವರಿಗೆ ಬಿರಿಯಾನಿ
ಇಷ್ಟಾದರೂ ಒಂದಿಂಚು ಭೂಮಿ ಸಿಗಲಿಲ್ಲ
ಜೇಬು ಖಾಲಿ, ಮನಸು ಖಾಲಿ
ಪ್ರತಿರೋಧಿಸುತ್ತಿಲ್ಲ ಪರಿತಪಿಸುತ್ತಿದ್ದಾರೆ.
ಈ ಮುಗ್ದ ಮನಗಳ ತಣಿಯಲು
ಒಂದಿಷ್ಟು ಭೂಮಿ ಕೊಡಿ
ಸುಖ ಸುಪ್ಪತ್ತಿಗೆಯಿಂದ ಮೆರೆಯಲು ಅಲ್ಲ
ಸತ್ತಾಗಲಾದರೂ ನೆಮ್ಮದಿಯಿಂದ ಮಲಗಲು
ಊರೂರು ಅಲೆದು,
ಹತ್ತಿಯನು ಪಿಂಜಿ,
ಹಾಸಿಗೆಯನು ಹೊಲೆದು
ಇನ್ನೊಬ್ಬರ ಸುಖ ನಿದ್ರೆಗೆ ಕಾರಣರಾದ
ಪಿಂಜಾರರು ನಾವು,
ನಮ್ಮಗಳ ಚಿರ ನಿದ್ರೆಗೆ
ಗೂಡೊಂದು ಇಲ್ಲ,
ನಾವು ನಿದ್ರಿಸಬೇಕಿದೆ ಎಲ್ಲರಂತೆ ನೆಮ್ಮದಿಯಲಿ
ಹಾಸಿಗೆಯ ಮೇಲಲ್ಲ, ಘೋರಿಯ ಒಳಗಲ್ಲಿ,
ನಮ್ಮದಾದೊಂದು ಭೂಮಿಯಿಲ್ಲ
ನಮ್ಮವರ ಹೆಣಗಳ ಹೂಳಲು
ಜಾಣರಾದ ನೀವು ಜಾಗವೊಂದು ಕೊಡಿಸಿರಿ
ನಮ್ಮವರ ಹೆಣಗಳಿಗೆ ಮುಕ್ತಿಯನು ನೀಡಿರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243