ಭಾವ ಭೈರಾಗಿ

ಕವಿತೆ | ಜಾತ್ರೆಯಲ್ಲಿ ಶಿವ

Published

on

  • ಸವಿತ ನಾಗಭೂಷಣ, ಶಿವಮೊಗ್ಗ

ಅದೇ ಆ ಶಿವನ ವೇಷಧಾರಿ
ನಾನಿದ್ದ ಬಸ್ಸಿನಲ್ಲಿಯೇ ಇದ್ದ
ನನ್ನೊಂದಿಗೆ ಬಸ್ಸಿನಿಂದಿಳಿದ

ತೇಗದ ಮರದ ಹಾಗೆ
ಉದ್ದಕೆ ಸಪೂರ
ಮೋಡದ ಮೈ ಬಣ್ಣ ಮಿಂಚಿನ ನಗು
ಮುಡಿಗೆ ತಗಡಿನ ಚಂದ್ರನ ಮುಡಿದಿದ್ದ
ತೋಳಿಗೆ ಕಣಗಿಲೆಯ ಹೂವು
ಕೊರಳಲ್ಲಿ ಪ್ಲಾಸ್ಟಿಕ್ ಹಾವು
ಹುಲಿ ಚರ್ಮದ ಚಿತ್ರವಿರುವ
ಮಾಸಿದ ಹಳದಿ ಬಣ್ಣದ ಅರ್ಧ ಲುಂಗಿ
ಹವಾಯಿ ಚಪ್ಪಲಿ ಧರಿಸಿದ್ದ‌

ನನ್ನ ಬೆರಗಿಗೆ ಉತ್ತರ
ನೀಡುವವನಂತೆ
ಡಮರುಗ ನುಡಿಸಿ
ತ್ರಿಶೂಲ ಆಡಿಸಿ
ಕಾಲ್ಗೆಜ್ಜೆ ಗಲಗಲ ಕುಣಿಸಿ
ನಾ ಶಿವ ಎಂದ


ನಾ ಮುಂದೆ ಅವ ಹಿಂದೆ
ಜಾತ್ರೆಯ ಕೌಂಟರಿನಲ್ಲಿ
ಟಿಕೀಟು ಕೊಳ್ಳುವಾಗಲೂ
ಬೆನ್ನ ಹಿಂದೆಯೇ ಇದ್ದ
ಗಿಲೀಟು ಒಡವೆ ಅಂಗಡಿಯಲ್ಲಿ
ಕಣ್ಣ ಮುಂದೆಯೇ ಬಂದ
ಫಳಫಳ ಹೊಳೆಯುವ
ಮೂಗುತಿಯನು ಅಂಗೈಯೊಳಗೆ
ಹೊರಳಾಡಿಸಿ
ಈ ವಜ್ರಕ್ಕೆಷ್ಟಪ್ಪಾ ಬೆಲೆ
ಎಂದು ಅಂಗಡಿಯಾತನ ಛೇಡಿಸಿದ

ಪುಗ್ಗೆಯಂಗಡಿಯಲ್ಲಿ ಒಂದೊಂದೂ
ಪುಗ್ಗೆಯ ಮೇಲೂ ಮೃದುವಾಗಿ ಕೈಯಾಡಿಸಿ
ಪರಪರ ಶಬ್ದಕ್ಕೆ ಕಿವಿಯಾನಿಸಿ
ಬಾಗಿಲು ದಾಟುವುದರೊಳಗೆ
ಠುಸ್ಸೆನ್ನುವುದೀ ಪುಗ್ಗೆ ಜೊತೆಗೆ
ಹಿಗ್ಗಿನ ಬುಗ್ಗೆ ಎಂದು ಅಲ್ಲೇ ಪದ ಕಟ್ಟಿ ಹಾಡಿ
ಒಂದು ಪೀಪಿ ಒಂದು ವಾಚು ಪುಕ್ಕಟೆ ಪಡೆದ

ಬಣ್ಣ ಬಣ್ಣದ ಪರಕಾರಗಳ ತೆಗೆಸಿ
ಪೂರ ಅಂಗಡಿಯನೆ ಎಳೆದಾಡಿಸಿ
ಚೌಕಾಸಿ ಬೆಲೆಯಲ್ಲೇ
ಒಂದು ಗಜ ರವಿಕೆಯ ಬಟ್ಟೆ ಕೊಂಡ

ಕೆಂಪು ನೀರಿನ ಶರಬತ್ತಿನಂಗಡಿಯಲ್ಲಿ
ಗಿಣಿ ಶಾಸ್ತ್ರದವನೊಡನೆ ಹರಕು
ಛತ್ರಿಯ ಅಡಿಯಲ್ಲಿ
ಕರಡಿ ಮಜಲು ಕುಣಿತದ
ಕರಡಿಯಾಸದವನೊಡನೆ
ಅಲ್ಲಿ ಇಲ್ಲಿ ಇಲ್ಲಿ ಅಲ್ಲಿ
ಜಾತ್ರೆಯ ಉದ್ದಗಲ ಹಬ್ಬಿ ನಿಂತವನು
ಮೋಟು ಬೀಡಿಯ ಸೇದುತ್ತ
ಕಡಲೆಯ ಪುರಿಯ
ಗುಡ್ಡವ ದಾಟಿ ಹೋದ

ಹೋದ ಎನ್ನುವಷ್ಟರಲ್ಲಿಯೇ
ಬತ್ತಾಸಿನ ಅಂಗಡಿಯಲ್ಲಿ
ಪರಿಚಿತ ನಗೆಯೊಡನೆ ಪ್ರತ್ಯಕ್ಷ !

ಮೆಲ್ಲನೆ ಬಳಿ ಸಾರಿ ಗೋಣ ಬಗ್ಗಿಸಿ
ಮಗ ಹಸಿದಿದ್ದಾನೆ
ಹೆಂಡತಿಗೆ ಕಾಯಿಲೆ ಅಂದ
ಬಾಡಿದ ಮುಖ ಬಸಿದಿತ್ತು ದುಃಖ

ಗಣಪ ಹಸಿದಿದ್ದಾನೆ
ಗಿರಿಜೆಗೆ ಕಾಯಿಲೆ
ಹೆಂಡತಿ ಮಕ್ಕಳಿಗಾಗಿ
ಶಿವನಲ್ಲದೆ ಭವಿ ಅಳುವನೆ ?!

ಪುಟ್ಟ ಪರ್ಸಿನ ಮೂಲೆ ಮೂಲೆಯನು ತಡವಿ
ರುದ್ರನೊಡ್ಡಿದ ಬೊಗಸೆಗೆ
ಐದರ ನೋಟಿರಿಸಿ ಇಷ್ಟೇ ಅಂದೆ !

ಮಿಂಚಂತೆ ಹೊಳೆದು
ತಳಾಂಗು ತದಿಗಿಣ ತೋಂ ಎಂದು
ನಾಟ್ಯದ ಮಟ್ಟಿನಲಿ ಕುಣಿದು
ಅರ್ಧ ನಿಮೀಲಿತ ನೇತ್ರನಾಗಿ
ನಟರಾಜ ಭಂಗಿಯಲ್ಲಿ ನಿಂತುಬಿಟ್ಟ !

ಬಿಟ್ಟ ಬಾಯಿ ಬಿಟ್ಟಂತೆಯೇ
ನೆಟ್ಟ ಕಣ್ಣು ನೆಟ್ಡಂತೆಯೇ
ಎರಡೂ ಕೈ ಜೋಡಿಸಿ
ಮೈದುಂಬಿ ನುಡಿದು ಬಿಟ್ಟೆ
ಸಾಕ್ಷಾತ್ ಶಿವ
ಸಾಕ್ಷಾತ್ ಶಿವ !!

ಇದನ್ನೂ ಓದಿ | ಜಲಗಾರ ಹಾಗೂ ಶಿವನ ಭೇಟಿ ಪ್ರಸಂಗ..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version