ಅಂತರಂಗ
ಅರಿಮೆಯ ಅರಿವಿರಲಿ – 24 : ಅರಿವಿನ ಅಂಗಳ ಯಾವುದು..?
- ಯೋಗೇಶ್ ಮಾಸ್ಟರ್
ವ್ಯತ್ಯಾಸವರಿದ ಸ್ವ-ಭಾವಗಳ ಪ್ರದರ್ಶನ
ಒಬ್ಬ ವ್ಯಕ್ತಿಯು ತನ್ನ ಗುರಿ ಸಾಧಿಸಲು ಅವನಿಗೆ ಆತ್ಮವಿಶ್ವಾಸವಿರಬೇಕು. ತನ್ನನ್ನು ತಾನು ಮಾನ್ಯ ಮಾಡಿಕೊಳ್ಳುವಂತಹ, ತನ್ನ ಮೌಲ್ಯವನ್ನು ತಾನು ಗುರುತಿಸಿಕೊಳ್ಳುವಂತಹ ಆತ್ಮಗೌರವವಿರಬೇಕು. ಟೀಕೆಗಳನ್ನು, ಹಿಂದಕ್ಕೆ ಸೆಳೆಯುವ ಶಕ್ತಿಗಳನ್ನು ಮೀರಿ ಮುಂದಕ್ಕೆ ಹೋಗುವಂತಹ ಹಟವಿರಬೇಕು. ಯಾವ ಪ್ರಲೋಭನೆಗಳಿಗೆ ಮಣಿಯದೇ ದೃಢವಾಗಿ ನಿಲ್ಲುವಂತಹ ಸ್ವಾಭಿಮಾನವಿರಬೇಕು. ಹೌದು, ಇವೆಲ್ಲವೂ ಮೌಲ್ಯಗಳೇ. ವ್ಯಕ್ತಿಗತವಾಗಿ ಅಥವಾ ಸಾಮಾಜಿಕವಾಗಿ ಅತ್ಯುತ್ತಮವಾದುದನ್ನು ಸಾಧಿಸಲು ಇವೆಲ್ಲವೂ ಇರಬೇಕು. ಇದೆಲ್ಲವೂ ಮೇಲರಿಮೆಯೇ?
ಸ್ವಾಭಿಮಾನವಿರಬೇಕು ನಿಜ. ಆದರೆ ಅಹಂಕಾರವಿರಬಾರದು. ಸ್ವಾಭಿಮಾನ ಆರೋಗ್ಯವಾದ, ನೈತಿಕವಾದ, ಸಶಕ್ತವಾದ ಮನಸ್ಥಿತಿ. ಅಹಂಕಾರ ಮನೋರೋಗ. ಆತ್ಮಾಭಿಮಾನದಲ್ಲಿ ತನ್ನ ಬಗ್ಗೆ ಗೌರವವಿರುತ್ತದೆ, ಆದರೆ ಇತರರಿಗೂ ತನ್ನಂತೆಯೇ ಆತ್ಮಾಭಿಮಾನವಿರುವುದು, ಅದನ್ನು ನಾವು ಗೌರವಿಸಬೇಕು ಎಂಬ ಅರಿವಿರುತ್ತದೆ. ಆದರೆ ಮೇಲರಿಮೆಯಲ್ಲಿ ತಾನಷ್ಟೇ ಗೌರವಾನ್ವಿತ ವ್ಯಕ್ತಿಯಾಗಿರುತ್ತೇನೆ. ಉಳಿದವರು ನಾನು ಪಡೆಯುವಷ್ಟು ಗೌರವಕ್ಕೆ ಅರ್ಹರಲ್ಲ ಎಂಬ ಭಾವವಿರುತ್ತದೆ. ಹೆಮ್ಮೆ ಎಂಬುದು ಮಾಡಿರುವ ಕೆಲಸವೊಂದು ಸಫಲವಾದಾಗ ಸಾರ್ಥಕತೆಯ ಅಥವಾ ತೃಪ್ತಿಯನ್ನು ಪಡೆದಂತಹ ಸಂತೋಷ. ತನ್ನನ್ನು ತಾನು ಅಭಿನಂದಿಸಿಕೊಳ್ಳುವಂತಹ ಪ್ರೋತ್ಸಾಹ.
ಆದರೆ ಮೇಲರಿಮೆಯಲ್ಲಿ ತಾನು ಸಾಧಿಸದಿದ್ದರೂ ಸಾಧಿಸಿರುವಂತೆ ಬೀಗುವ ವ್ಯಸನ. ತನ್ನಿಂದ ಕೆಲಸವು ಆಗಿರದಿದ್ದರೂ ಆಗಿರುವಂತೆ ಭ್ರಮಿಸುವ ಒಂದು ಗೀಳು. ಹೆಮ್ಮೆ ತನ್ನನ್ನು ತಾನು ಹುರಿದುಂಬಿಸಿಕೊಳ್ಳುವಂತಹ ಸಂತೋಷವಾದರೆ, ಅಹಂಕಾರ ನಾನೇ ಮಾಡಿರುವುದು ಆದ್ದರಿಂದ ನಾನು ಉಳಿದವರಿಗಿಂತ ಮೇಲು ಎಂಬ ಭಾವ ರೋಗಗ್ರಸ್ತ.
ಇಷ್ಟು ಅರಿವಿಗಿರಲಿ. ನಾನು ಎಂಬ ಭಾವವು ತನ್ನತನದ ಸಾಂಕೇತಿಕ ಪ್ರತಿನಿಧಿ. ನಾನೇ ಎನ್ನುವುದು ಮೇಲರಿಮೆಯ ಉತ್ಪನ್ನವಾದ ಅಹಂಕಾರದ ಪ್ರದರ್ಶನ.
ವ್ಯಕ್ತಿಗತವಾಗಿ ತಮ್ಮ ವಿಷಯದಲ್ಲಿ ಮಾತ್ರವಲ್ಲ, ಧರ್ಮ, ಸಂಸ್ಕೃತಿ, ಜಾತಿ ಮತ್ತು ರಾಷ್ಟ್ರೀಯತೆಯ ವಿಷಯಗಳಲ್ಲಿ ಬಹಳಷ್ಟು ಜನರು ತಮ್ಮ ಅಹಂಕಾರವನ್ನು ಸ್ವಾಭಿಮಾನವೆಂದೂ, ಅರಿಮೆಯನ್ನು ಅರಿವೆಂದೂ, ಒಣಜಂಭವನ್ನು ಹೆಮ್ಮೆಯೆಂದೂ ಭಾವಿಸಿರುತ್ತಾರೆ.
ಆತ್ಮಾಭಿಮಾನದ ಮಾನದಂಡ
ಇಲ್ಲೊಂದು ಸರಳವಾದ ಮಾನದಂಡವಿರಲಿ, ಯಾರು ತಮ್ಮ ವಿಷಯಗಳು ಇತರೆಲ್ಲಾ ವಿಷಯಗಳಿಗಿಂತ ಶ್ರೇಷ್ಟವೆನ್ನುತ್ತಾರೋ, ತಮ್ಮದರ ಶ್ರೇಷ್ಟತೆಯನ್ನು ಎತ್ತಿ ಹಿಡಿಯಲು ಇತರರದನ್ನು ಅವಹೇಳನ ಮಾಡುತ್ತಾ ಹೋಲಿಸುತ್ತಿರುತ್ತಾರೋ, ತಮ್ಮದನ್ನು ಬಿಟ್ಟರೆ ಬೇರೊಂದು ಇಲ್ಲವೇ ಇಲ್ಲ ಎಂಬುದಾಗಿ ಭ್ರಮಾಧೀನರಾಗಿರುತ್ತಾರೋ ಅವರಗಿ ಸಾಮುದಾಯಿಕ ಮೇಲರಿಮೆಯ ರೋಗವಿದೆ ಎಂದು ಅರ್ಥ.
ತನ್ನತನದ ಅರಿವಿನ ಪ್ರಜ್ಞೆಯಲ್ಲಿ ಒಬ್ಬನಿಗೆ ತನ್ನ ಶಕ್ತಿ, ಸಾಮರ್ಥ್ಯ, ದೌರ್ಬಲ್ಯ, ಜ್ಞಾನ, ಅಜ್ಞಾನ, ಇತಿಮಿತಿ ಎಲ್ಲವೂ ತಿಳಿದಿರುತ್ತದೆ. ತನ್ನ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವರ್ತಿಸುತ್ತಾನೆ, ಚಿಂತಿಸುತ್ತಾನೆ, ಮಾತಾಡುತ್ತಾನೆ, ಪ್ರದರ್ಶಿಸುತ್ತಾನೆ ಮತ್ತು ಕೆಲಸಗಳನ್ನು ಮಾಡುತ್ತಾನೆ.
ಅದೇ ಅಹಂಕಾರದ ಮೇಲರಿಮೆಯ ವ್ಯಕ್ತಿಯು ತನ್ನ ಶ್ರೇಷ್ಟತೆಯ ಭಾವದಲ್ಲಿ ಉನ್ಮತ್ತನಾಗಿರುತ್ತಾನೆ, ಅಮಲಿನಲ್ಲಿರುತ್ತಾನೆ, ಅಪ್ರಜ್ಞಾವಸ್ಥೆಯಲ್ಲಿರುತ್ತಾನೆ. ತನ್ನ ಅರಿಮೆಯ ಅಮಲಿನ ಅನುಗುಣವಾಗಿ ತನ್ನ ಅವೈಚಾರಿಕತೆಯನ್ನು ಅನಾವರಣಗೊಳಿಸಿಕೊಳ್ಳುತ್ತಿರುತ್ತಾನೆ.
ಈ ಅರಿಮೆಯದ್ದೇ ಅಮಲು ಜೀವನ ಪೂರ್ತಿ ಸಾಕಾಗುವಷ್ಟಿರುತ್ತದೆ, ಎದುರಿರುವವರಿಗೆ ಸಾಕುಸಾಕಾಗಿರುತ್ತದೆ; ಅದರಲ್ಲಿ ಮಾದಕ ದ್ರವ್ಯಗಳನ್ನು, ಮತ್ತೇರಿಸುವಂತಹ ಮದ್ಯಗಳನ್ನು ತೆಗೆದುಕೊಂಡರಂತೂ ಮುಗಿದೇ ಹೋಯಿತು. ನೀವು ಗಮನಿಸಿರುತ್ತೀರಿ. ಕೆಲವರು ಮದ್ಯ ಸೇವನೆ ಮಾಡುವಾಗ, ಮದ್ಯವು ಒಳಗೆ ಹೋಗುಹೋಗುತ್ತಿದ್ದಂತೆ ಹೆಚ್ಚು ಮಾತಾಡಲು ಪ್ರಾರಂಭಿಸುತ್ತಾರೆ. ಇದರ ಅರ್ಥ ಕುಡಿತವೆಂಬುದು ಅವರ ಮಾತಿನ ಕಾರಣವಲ್ಲ. ಅದು ನೆಪವಷ್ಟೇ. ಅವರ ಅರಿಮೆಯ ಪ್ರದರ್ಶನ ಅಲ್ಲಿ ಪ್ರಾರಂಭವಾಗುತ್ತದೆ. ತಾನು ಎಷ್ಟು ಗ್ರೇಟ್ ಎಂಬುದು ಬಹಳಷ್ಟು ಸಲ, ಬಹಳಷ್ಟು ಮಂದಿಯಲ್ಲಿ ಕಾಣುವುದು. ನಾನು ಹೀಗೆ ಮಾಡಿದೆ, ನಾನು ಹಾಗೆ ಮಾಡಿದೆ, ನಾನಿಲ್ಲದೇ ಹೋಗಿದ್ದರೆ ಆ ಕೆಲಸ ಆಗುತ್ತಲೇ ಇರಲಿಲ್ಲ.
ನಾನಾಗಿದ್ದಕ್ಕೆ ಸಹಿಸಿಕೊಂಡೆ, ನಾನು ಬಿಟ್ಟಿದ್ದಕ್ಕೆ ಅವನು ಉಳಿದುಕೊಂಡ, ನಾನೇನಾದರೂ ಮನಸ್ಸು ಮಾಡಿದ್ದರೆ ಅವನ ಕತೆ ಮುಗಿದುಹೋಗಿರುತ್ತಿತ್ತು. ನಾನು ನಾನು ನಾನು… ಅರಿಮೆಯೇ ಒಂದು ಅಮಲು, ಅದಕ್ಕೆ ಪೂರಕವಾಗಿ ಮತ್ತು ಪ್ರೇರಕವಾಗಿ ಮದ್ಯದ ಅಮಲೂ ಸೇರಿದರೆ! ಮತ್ತೆ ಕೆಲವರು ತಲೆ ತಿರುಗಿ ಬೀಳುವಷ್ಟು ಕುಡಿಯುವುದೇ ಇಲ್ಲ. ಅವರಿಗೆ ಇತಿಮಿತಿಗಳಿರುತ್ತವೆ. ಪಾರ್ಟಿಯಲ್ಲಿ ಅವರ ಕೆಲಸ ಇತರರ ಪ್ರದರ್ಶನ ಕಲೆಗಳನ್ನು ನೋಡುತ್ತಿರುವುದು. “ಹಾ, ಹೇಳಿ, ಹೇಳಿ, ಹೌದು ಹೌದು” ಎಂದು ಗ್ರೇಟುಗಳ ಪರಾಕುಗಳಿಗೆ ತಲೆಯಾಡಿಸುತ್ತಾ, ಒಳಗೊಳಗೇ ನಗುತ್ತಾ ಮಜ ತೆಗೆದುಕೊಳ್ಳುವುದು ಮಾತ್ರವಲ್ಲ ಕೆಲಸ. ಆ ಗ್ರೇಟು ಮತ್ತು ಈ ಗ್ರೇಟುಗಳೆರಡೂ ಸ್ಟಾರ್ ವಾರ್ ಮಾಡಲು ಮುಂದಾದಾಗ ಇಬ್ಬರನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಕರೆದು ನೀನೇ ಗ್ರೇಟು – ಆ ಕ್ಷುಲ್ಲಕನನ್ನು ಬಿಟ್ಟು ಬಿಡು ಎಂದು ಯುದ್ಧಸಂಧಾನ ಮಾಡಿಸುವವರು ಕೂಡಾ ಆಗಿರುತ್ತಾರೆ.
ಕುಡಿಯುವವರಿಗೆ ತಾನಷ್ಟು ಕುಡಿಯುತ್ತೇನೆ ಅವನಿಗೆ ಕುಡಿಯಲಾಗುವುದಿಲ್ಲ ಎಂಬ ಮೇಲರಿಮೆಯಾದರೆ, ತನ್ನೆಷ್ಟೇ ಸೆಳೆದರೂ ತಾನು ಕುಡಿಯುವುದಿಲ್ಲ ಎಂದು ಕುಡುಕರ ಮುಂದೆ ಕುಡಿಯದಿರುವವರ ಮೇಲರಿಮೆ.
ಒಟ್ಟಾರೆ ಮೇಲರಿಮೆಗಳ ರೋಗ ಮೇಲಾಗುವುದು ಇವು ಮೇಲರಿಮೆಗಳೆಂದು ತಿಳಿದಾಗಲೇ.
ಜ್ಞಾನಕೇಂದ್ರಗಳ ಅಜ್ಞಾನ
ಸಾಮಾನ್ಯವಾಗಿ ಯಾವುದೇ ಅರಿಮೆಗಳನ್ನು ಮಕ್ಕಳಲ್ಲಿ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುವುದು ಶಿಕ್ಷಣ ಸಂಸ್ಥೆಗಳಲ್ಲಿ. ಸಾಮಾನ್ಯವಾಗಿ ಸಾಮಾಜಿಕ ಸಂಸ್ಥೆಗಳಲ್ಲಿ ವಿವಿಧ ಬಗೆಯ ಹಿನ್ನೆಲೆಗಳನ್ನು ಹೊಂದಿರುವಂತಹ ವ್ಯಕ್ತಿಗಳನ್ನು ನೋಡುತ್ತೇವೆ. ಅವರಿಗೆ ಪ್ರತಿಕ್ರಿಯಿಸುವ ಮತ್ತು ಸ್ಪಂದಿಸುವ ಪ್ರಕ್ರಿಯೆಯಲ್ಲಿ ಮಕ್ಕಳಲ್ಲಿರುವ ಅರಿಮೆಗಳ, ವ್ಯಕ್ತಿತ್ವಗಳ ಮತ್ತು ಧೋರಣೆಗಳ ಅನಾವರಣವಾಗುತ್ತವೆ.
ಮನೆಯಲ್ಲಾದರೆ ಸೀಮಿತ ಸದಸ್ಯರ ಮಾದರಿಗಳಿದ್ದು, ಹೊಂದಾಣಿಕೆ, ಅನುಸರಣಿಕೆ ಮತ್ತು ಸ್ವೀಕಾರಗಳು ಅನಿವಾರ್ಯವಾಗಿರುತ್ತವೆ. ಹಾಗಾಗಿಯೇ ಶಿಕ್ಷಕರ ಬಹಳ ಮುತುವರ್ಜಿಯಿಂದ ಮಕ್ಕಳಲ್ಲಿ ಅರಿಮೆಗಳನ್ನು ಗುರುತಿಸುವಂತಹ ಕೈಂಕರ್ಯವನ್ನು ಮಾಡಬೇಕಾಗುತ್ತದೆ. ಮಕ್ಕಳಲ್ಲಿ ಇರುವಂತಹ ಮಾನಸಿಕ ಸಮಸ್ಯೆಗಳನ್ನು ಗುರುತಿಸಿ ಅದನ್ನು ಪೋಷಕರ ಗಮನಕ್ಕೂ ತರುವಂತಹ ಕೆಲಸವಾದರೆ ಆಗ ಕುಟುಂಬದ ಸದಸ್ಯರಲ್ಲಿ ಇರುವಂತಹ ಮಾನಸಿಕ ಸಮಸ್ಯೆಗಳೂ, ವ್ಯಕ್ತಿತ್ವದ ಪುರಾವೆಗಳೂ, ಧೋರಣೆ (ಅಟಿಟ್ಯೂಡ್) ಗಳ ಮಾದರಿಗಳೂ ಗಮನಕ್ಕೆ ಬರುತ್ತವೆ. ಈ ಮೂಲಕ ಇಡೀ ಕುಟುಂಬವನ್ನೇ ಆರೋಗ್ಯಕರ ಮನಸ್ಥಿತಿಗೆ ಒಯ್ಯುವ ಸಾಮುದಾಯಕ ಕಾರ್ಯ ಮಾಡಿದಂತಾಗುತ್ತದೆ.
ಹಾಗಾದಾಗ ಮಾತ್ರ ಶೈಕ್ಷಣಿಕ ಪರಿಸರವು ವ್ಯಕ್ತಿತ್ವವಿಕಸನ ಕಾರ್ಯದಲ್ಲಿ ಬಹಳ ಮಹತ್ತರ ಪಾತ್ರವನ್ನು ವಹಿಸಿದಂತಾಗುತ್ತದೆ. ಒಂದೊಂದು ಪ್ರದೇಶದಲ್ಲಿ ಸ್ಥಾಪಿತವಾಗಿರುವಂತಹ ಶಿಕ್ಷಣ ಸಂಸ್ಥೆಗಳು ತಮ್ಮ ಸುತ್ತಮುತ್ತ ಇರುವ ಕುಟುಂಬಗಳ ಸದಸ್ಯರ ವ್ಯಕ್ತಿತ್ವ, ವ್ಯಕ್ತಿಗತ ಮೌಲ್ಯ, ವರ್ತನೆಗಳು, ಕ್ರಿಯೆ ಮತ್ತು ಪ್ರತಿಕ್ರಿಯೆಗಳೆಲ್ಲವೂ ಸಾಮಾಜಿಕ ಜೀವನದ ಮೇಲೆ ಪ್ರಭಾವವನ್ನು ಬೀರುತ್ತಿರುತ್ತವೆ ಎಂಬಂತಹ ಬಹಳ ಸ್ಪಷ್ಟವಾದ ದೃಷ್ಟಿಯನ್ನು ಹೊಂದಿದ್ದು ಮಕ್ಕಳ ಮೂಲಕ ಕೆಲಸ ಮಾಡುವಂತಾದರೆ ಮಾತ್ರ ಮಾನಸಿಕ ಆರೋಗ್ಯವುಳ್ಳ ಸಮಾಜವನ್ನು ನಿರ್ಮಿಸಲು ಸಾಧ್ಯ.ಮಕ್ಕಳಿಗೆ ಶಿಕ್ಷಣ ನೀಡುವುದು ಒಂದು ನೆಪ. ಸ್ವಾಸ್ಥ್ಯ ಸಮಾಜದ ನಿರ್ಮಾಣ ಶಿಕ್ಷಣ ಸಂಸ್ಥೆಗಳ ಗುರಿ.
ಮಗುವೊಂದು ರ್ಯಾಂಕ್ ಪಡೆದು, ಉತ್ತಮ ಕೆಲಸವೊಂದನ್ನು ಪಡೆದು, ಹೆಚ್ಚಿನ ಆದಾಯದಲ್ಲಿ ಆರಾಮವಾಗಿ ವಿಲಾಸೀ ಜೀವನ ನಡೆಸಿಕೊಂಡಿದ್ದರೆ ಸಾಮಾಜಿಕ ಸಂಸ್ಥೆಯಾದ ಶಾಲೆಯ ಗುರಿ ಏನು? ವ್ಯಕ್ತಿಯೊಬ್ಬನು ತನ್ನ ವ್ಯಕ್ತಿಗತವಾದ ಸುಖವನ್ನು ಪಡೆದುಕೊಂಡು ಸಾಮಾಜಿಕವಾಗಿಯೂ ಹಿತವುಂಟು ಮಾಡಬೇಕು. ಏಕೆಂದರೆ ಅವನು ಸಂಘಜೀವಿ, ಸಾಮಾಜಿಕ ಪಶು.
ಮಕ್ಕಳ ಭಿನ್ನವಾದ ಹಿನ್ನೆಲೆಗಳು ತಾವು ವಾಸಿಸುವ ಸಮಾಜ ಮತ್ತು ಜಗತ್ತಿನ ಬಗ್ಗೆ ಭಿನ್ನವಾದಂತಹ ದೃಷ್ಟಿಗಳನ್ನೇ ಹೊಂದಿರುತ್ತಾರೆ. ಕೆಲವು ಮಕ್ಕಳು ಹೊಸ ಅನುಭವಕ್ಕೆ ಮತ್ತು ತಿಳುವಳಿಕೆಗೆ ತೆರೆದುಕೊಂಡಂತೆ ಮತ್ತೆ ಕೆಲವು ಮಕ್ಕಳು ಅವುಗಳಿಂದ ಹಿಂದಕ್ಕೆ ಸರಿಯುತ್ತಾರೆ. ಅಂತೆಯೇ ದೃಷ್ಟಿಗಳಲ್ಲಿರುವ ಮೇಲರಿಮೆ ಮತ್ತು ಕೀಳರಿಮೆಗಳನ್ನು ತಮ್ಮ ವರ್ತನೆ ಮತ್ತು ಧೋರಣೆಗಳ ಮೂಲಕ ವ್ಯಕ್ತಪಡಿಸುತ್ತಿರುತ್ತಾರೆ. ಮಕ್ಕಳು ವಯಸ್ಕರಾಗಿ ಸಶಕ್ತರಾದಾಗ ಅವು ಆಚರಣೆಗೂ ಬರುತ್ತವೆ.
ಅವುಗಳು ಆಕ್ರಮಣಕಾರಿಯಾಗಿರಬಹುದು, ಆಡಂಬರದಿಂದ ಕೂಡಿರಬಹುದು, ಅವೈಜ್ಞಾನಿಕ ಮತ್ತು ಅವೈಚಾರಿಕತೆಯಿಂದಲೂ ವಿರೋಧಾಭಾಸದ ನಡೆಗಳಿಂದಲೂ ಕೂಡಿರಬಹುದು. ಆ ವ್ಯಕ್ತಿಗಳು ತಮ್ಮ ಕುಟುಂಬಕ್ಕೂ ಮತ್ತು ಸಮಾಜಕ್ಕೂ ಕಾಣ್ಕೆಗಳನ್ನು ನೀಡುವ ಬದಲು ಕಾಟಗಳಾಗಿ ಕಾಡಲು ಪ್ರಾರಂಭಿಸುತ್ತಾರೆ. ಇದೆಲ್ಲಾ ಕಾರಣಗಳಿಂದಾಗಿಯೇ ಅರಿವಿನ ಅಂಗಳವಾದ ಶಿಕ್ಷಣ ಸಂಸ್ಥೆಗಳಲ್ಲಿ ಅರಿಮೆಗಳನ್ನು ಬೆಳೆಯಗೊಡಬಾರದು.
ಆದರೆ ಇವುಗಳ ಅರಿವಿಲ್ಲದ ಕಾರಣ, ದೂರದೃಷ್ಟಿ ಮತ್ತು ಸೂಕ್ಷ್ಮದೃಷ್ಟಿಗಳಿಲ್ಲದ ಕಾರಣ ಆ ಹೊತ್ತಿನ ಶೈಕ್ಷಣಿಕ ಸಾಧನೆಗಳನ್ನು ಮಾತ್ರವೇ ಗಣನೆಗೆ ತೆಗೆದುಕೊಂಡು ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ಅದರ ಫಲವೇ ವಿದ್ಯಾವಂತರಾದವರೂ, ಸುಶಿಕ್ಷಿತರಾಗಿರುವವರೂ, ಉನ್ನತ ಹುದ್ದೆಗಳಲ್ಲಿರುವವರೂ ಕೂಡಾ ಅಪರಾಧಿಗಳಾಗುತ್ತಾರೆ. ಸಂಬಂಧಗಳ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ.
ವಿದ್ಯಾವಂತರಲ್ಲೂ, ಸುಶಿಕ್ಷಿತರಲ್ಲೂ ಲಿಂಗತಾರತಮ್ಯಗಳನ್ನು, ಮತೀಯ ಭಾವನೆಗಳಲ್ಲಿ ಶ್ರೇಷ್ಟತೆಯ ವ್ಯಸನಗಳನ್ನು ನೋಡುತ್ತಿರುವ ಕಾರಣ ಇದೇ.
ಶಾಲೆಗಳ ಹಂತಗಳಲ್ಲಿಯೇ ಮಕ್ಕಳಲ್ಲಿ ಅರಿಮೆಗಳನ್ನು ಗುರುತಿಸುವಂತಹ ಕೆಲಸಗಳ ಜೊತೆಯಲ್ಲಿ ಸ್ವಾವಲಂಬನ, ಅನುಸರಣೆ, ಆಸರೆಯಾಗುವ ಗುಣ, ಗುಣಗ್ರಾಹಿಗಳಾಗುವುದು, ಪರೋಪಕಾರ ಮತ್ತು ಮುಂದಾಳುತನಗಳನ್ನು ಪ್ರೋತ್ಸಾಹಿಸುವಂತಹ ಕೆಲಸಗಳಾದರೆ ಮಾತ್ರ ಪ್ರಮುಖವಾಗಿರುವ ಸಾಮಾಜಿಕ ಸಂಸ್ಥೆಯಾಗಿರುವ ಶಾಲೆಗಳು ಸ್ವಾಸ್ಥ್ಯ ಜನಸಮುದಾಯಗಳನ್ನು ಮತ್ತು ಸಂರಚನಾತ್ಮಕ ಸಮಾಜಗಳನ್ನು ರೂಪಿಸುವಂತಹ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದಂತಾಗುತ್ತದೆ.
(ಮುಂದುವರೆಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243