ಅಂತರಂಗ

ಅರಿಮೆಯ ಅರಿವಿರಲಿ – 25 : ಅಪರಾಧದ ತಾಪಮಾನ

Published

on

Art by Hyun Jou Lee
  • ಯೋಗೇಶ್ ಮಾಸ್ಟರ್

ರಿಮೆಯ ಸಾಲಿನಲ್ಲಿ ಅತ್ಯಂತ ಪ್ರಭಾವಶಾಲಿಯಾಗಿರುವುದು ಅಪರಾಧದರಿಮೆ. ಅಪರಾಧದ ಭಾವವು ಅರಿಮೆಯೂ ಹೌದು, ಅರಿವೂ ಹೌದು. ಈಗ ನಾವು ತಿಳಿಯಲು ಮುಂದಾಗಿರುವುದು ಗಿಲ್ಟ್ ಕಾಂಪ್ಲೆಕ್ಸೇ ಆದರೂ, ಗಿಲ್ಟ್ ಕಾನ್ಶನ್ಸ್ (ಅಪರಾಧದ ಬಗ್ಗೆ ವಿವೇಚನೆ ಅಥವಾ ಆತ್ಮಸಾಕ್ಷಿ) ಮತ್ತು ಗಿಲ್ಟ್ ಕಾನ್ಶಸ್ (ಅಪರಾಧ ಪ್ರಜ್ಞೆ) ಬಗ್ಗೆಯೂ ತಿಳಿದರೆ ಒಂದಿಷ್ಟು ಹೊಳಹುಗಳನ್ನು ಕಾಣಬಹುದು.

ಮೊದಲು ಅಪರಾಧವೆಂದರೇನು ನೋಡೋಣ. ನಂತರ ಅದನ್ನು ಅನುಸರಿಸುವ ಅರಿಮೆ, ಅರಿವು, ಆತ್ಮಸಾಕ್ಷಿ ಮತ್ತು ಪ್ರಜ್ಞೆಗಳನ್ನು ನಾವು ಅನುಸರಿಸಬಹುದು.‌‘ಪ್ರಜ್ಞಾಪೂರ್ವಕವಾಗಿ ಅಥವಾ ಉದ್ದೇಶ ಪೂರ್ವಕವಾಗಿ ಮಾಡಿದ ತಪ್ಪು.’ ಇದನ್ನು ಅಪರಾಧ ಎನ್ನುವುದಾದರೆ, ತಪ್ಪು ಎಂಬುದು
ತೀರ್ಮಾನವಾಗಬೇಕಾಗಿರುವುದು ಯಾರಿಂದ? ನಾನು ಎಂಬ ಮೊದಲನೆಯ ವ್ಯಕ್ತಿಯಿಂದಲೋ, ನಾನು ಎಂಬುವನಿಗೆ ಎದುರಾಗಿರುವ ಮತ್ತೊಬ್ಬನಿಂದಲೋ, ಅಥವಾ ಇವರಿಬ್ಬರನ್ನು ಮತ್ತು ಇವರಿಬ್ಬರ ನಡುವೆ ನಡೆದ ಸಂಗತಿಯನ್ನು ಗಮನಿಸುತ್ತಿರುವ ಮೂರನೆಯ ವ್ಯಕ್ತಿಯಿಂದಲೋ?

ತಪ್ಪೆನ್ನುವುದು ಗ್ರಹಿಸಿದಂತೆ

ಯಾವುದೋ (ಬೇಕಿದ್ದೋ, ಬೇಡಕ್ಕೋ ವಿಷಯದ) ತರಗತಿಯೊಂದು ನಡೆಯುತ್ತಿದೆ. ಹಿಂದಿನ ಬೆಂಚಿನಲ್ಲಿ ಕುಳಿತಿರುವ ವಿದ್ಯಾರ್ಥಿಯೊಬ್ಬನು ತರಗತಿಯಲ್ಲಿ ಕುಳಿತುಕೊಂಡು ಮೆಲ್ಲನೆ ದೋಸೆ ತಿನ್ನುತ್ತಿದ್ದಾನೆ. ಅವನು ಸದ್ದು ಮಾಡದಿದ್ದರೂ ಉಪಾಧ್ಯಾಯರ ಮೂಗಿಗೆ ವಾಸನೆ ತಗುಲಿತು. ಅವರು ಅವನು ದೋಸೆ ತಿನ್ನುವುದನ್ನು ಪತ್ತೆ ಹಚ್ಚಿ “ನೀನು ಮಾಡಿದ್ದು ತಪ್ಪು. ಶಿಕ್ಷೆಯಾಗಬೇಕು” ಎಂದು ಮಧ್ಯಾಹ್ನ ತಿನ್ನದಿರುವಂತೆ ತಡೆದರೋ, ತರಗತಿಯಿಂದ ಹೊರಗೆ ಕಳುಹಿಸಿದರೋ, ಎಂತದ್ದೋ ಮಾಡಿದರು.

ಆ ಹುಡುಗ ತಾನು ಮಾಡಿದ್ದು ತಪ್ಪು ಎಂದು ಭಾವಿಸಲಿಲ್ಲ. ಏಕೆಂದರೆ ಅವನಿಗೆ ಬೆಳಗ್ಗೆ ಸರಿಯಾಗಿ ತಿನ್ನದೆ ಹಸಿದಿದ್ದ ಕಾರಣವಿತ್ತು.ಪಾಠ ಮಾಡುವಾಗ ಊಟ ಮಾಡುವುದು ತಪ್ಪು ಎನ್ನುವುದು ಉಪಾಧ್ಯಾಯರು. ಹಸಿದಿರುವಾಗ ನನಗೆ ಪಾಠ ಕೇಳಲಾಗುತ್ತಿರಲಿಲ್ಲ, ತಿಂದರೆ ಸರಿಹೋಗುತ್ತಿತ್ತು ಎನ್ನುವ ಹುಡುಗ ತನ್ನ ದಂಡಿಸಿದ್ದೆ ತಪ್ಪು ಎನ್ನುತ್ತಾನೆ.

ಇಲ್ಲಿ ಎರಡು ‘ನಾನು’ಗಳ ದೃಷ್ಟಿಕೋನಗಳಲ್ಲಿ ತಮ್ಮ ಕೆಲಸಕ್ಕೆ ಸಮರ್ಥನೆಗಳಿವೆ. ಹಾಗೆಯೇ ವಿರೋಧಿಯ ನಡವಳಿಕೆಯ ಬಗ್ಗೆ ‘ಅವರು’ ತಪ್ಪು ಮಾಡಿದ್ದಾರೆಂದೇ ಭಾವಿಸುತ್ತಾರೆ. ಸರಿ, ಈಗ ಎರಡು ‘ನಾನು ಮತ್ತು ನೀನು’ಗಳ ಹೊರತಾಗಿ ಮೂರನೆಯವರಾಗಿ ನೀವು ಬಂದಿರಿ. ನೀವು ಇಬ್ಬರ ಮಾತುಗಳನ್ನೂ ಕೇಳಿದಿರಿ. ನಂತರ ಹುಡುಗನಿಗೆ ಹೇಳಿದಿರಿ. “ಸರಿ, ನೀನು ಹಸಿದಿದ್ದೆ.ಆದರೆ, ನೀನು ಉಪಾಧ್ಯಾಯರ ಹತ್ತಿರ ಹೋಗಿ ನಿನ್ನ ಹಸಿವಿನ ಸ್ಥಿತಿಯನ್ನು ಹೇಳಿ, ಅನುಮತಿ ಪಡೆದುಕೊಂಡು, ಹೊರಗೆ ಹೋಗಿ ಅಚ್ಚುಕಟ್ಟಾಗಿ ತಿಂದು ಬರಬಹುದಾಗಿತ್ತು. ತರಗತಿಯಲ್ಲಿ ತಿನ್ನುವುದರಿಂದ ಪಾಠ ಕೇಳುವ ಇತರರ ಗಮನವನ್ನು ಪಲ್ಲಟ ಮಾಡುತ್ತೀಯ. ಶಿಸ್ತಿನ ಉಲ್ಲಂಘನೆಯಾಗುತ್ತದೆ” ಎಂದಾಗ ಅವನಿಗೆ ತಾನು ಮಾಡಿದ ಕೆಲಸದ ಬಗ್ಗೆ ವಿವ್ಭೆಚಿಸಿಕೊಳ್ಳಲು ಸಾಧ್ಯವಾಗುತ್ತದೆ. ತಪ್ಪು ಎಂಬುದನ್ನು ಒಪ್ಪಿಕೊಳ್ಳುವ ಸಾಧ್ಯತೆ ಇರುತ್ತದೆ.

ನಂತರ ಉಪಾಧ್ಯಾಯರ ಹತ್ತಿರ ಮಾತಾಡುತ್ತೀರಿ, “ಮಗುವೊಂದು ತಿಳಿಯದೇ, ಹಸಿವಿನ ಕಾರಣದಿಂದ ಏನಾದರೂ ತಿಂದಾಗ, ನೀವೇ ಆ ಮಗುವಿಗೆ ಹೊರಗೆ ಕಳುಹಿಸಿ, ಅಚ್ಚುಕಟ್ಟಾಗಿ ತಿಂದು ಬರಲು ತರಗತಿಯ ಶಿಸ್ತನ್ನು ಸಡಿಲಿಸಬಹುದಿತ್ತು. ಇದರಿಂದ ಅವನೂ ತೃಪ್ತನಾಗುತ್ತಿದ್ದ ಮತ್ತು ರಗಳೆ ಇರುತ್ತಿರಲಿಲ್ಲ. ಈಗ ಶಿಕ್ಷೆಯ ರೂಪದಲ್ಲಿ ಮಗುವನ್ನು ಹೊರಗೆ ಕಳುಹಿಸುವುದರಿಂದ ಏನಾಗುತ್ತದೆ? ಪಾಠ ಕೇಳದೇ ತಿನ್ನುತ್ತಾ ಕುಳಿತ ಎಂಬ ಕಾರಣಕ್ಕೆ ನೀವು ಕೋಪಗೊಂಡಿರಿ, ತರಗತಿಯ ಶಿಸ್ತಿನ ಉಲ್ಲಂಘನೆಯಾಯ್ತು ಎನ್ನುತ್ತೀರಿ. ಆದರೆ ಶಿಕ್ಷೆಯನ್ನು ಕೊಟ್ಟ ಕಾರಣದಿಂದಾಗಿ ಅವನು ಕಲಿಕೆಯ ಭಾಗವಾಗಲು ನೀವೇ ಬಿಡಲಿಲ್ಲವಲ್ಲ!” ಎನ್ನುತ್ತೀರಿ. ಅಲ್ಲಿಗೆ ಉಪಾಧ್ಯಾಯರೂ ತಾವು ಮಾಡಿದ್ದು ತಪ್ಪು ಎಂದು ಒಪ್ಪಿಕೊಳ್ಳುವ ಸಾಧ್ಯತೆ ಇದೆ.

ಅಪರಾಧ ಎಂದರೆ ಏನು?

ಗಮನಿಸಿ. ಗುರುತರವಾದ ತಪ್ಪನ್ನು ಅಪರಾಧ ಎನ್ನೋಣವೇ? ಅಥವಾ ಸಮಾಜ, ಸಂಸ್ಕೃತಿ ಅಥವಾ ಧರ್ಮಗಳೇ ಮೊದಲಾಗಿ ನೈತಿಕ ಚೌಕಟ್ಟಿನಲ್ಲಿ ವ್ಯಾಖ್ಯಾನಿಸಿರುವ ಕಟ್ಟುಪಾಡುಗಳ ಉಲ್ಲಂಘನೆಯೇ ಅಪರಾಧವಾಗುತ್ತದೆಯೇ? ಏನಾದರಾಗಲಿ ತಪ್ಪಿಗಿಂತ ಅಪರಾಧವು ಗಾತ್ರದಲ್ಲಿ ದೊಡ್ಡದಾಗಿಯೂ, ಮತ್ತು ಗ್ರಹಿಕೆಯ ಭಾವದಲ್ಲಿ ಗಾಢವಾಗಿಯೂ ಇರುವುದು. ಅದೇನೇ ಇರಲಿ, ತಪ್ಪು ಅಥವಾ ಅಪರಾಧ ಎನ್ನುವುದು ಅವರವರ ದೃಷ್ಟಿಕೋನಕ್ಕೆ ತಕ್ಕಂತೆ ಅರ್ಥೈಸಲಾಗುವುದು.

ಹಾಗಾಗಿಯೇ ಇವುಗಳ ಸಮರ್ಥನೆ ಮತ್ತು ಪ್ರತಿಭಟನೆಗಳಲ್ಲಿ ಬಹು ದೊಡ್ಡ ಸಂಘರ್ಷಗಳಾಗುವವು.
ಅಪರಾಧದ ಎಳೆ ಹಿಡಿದರೆ, ನ್ಯಾಯ, ಅನ್ಯಾಯ, ತಪ್ಪಿನ ಕಾರಣ, ಪರಿಣಾಮ, ಆರೋಪಿ, ಅಪರಾಧಿ, ಬಲಿಪಶು, ಶಿಕ್ಷೆ, ದಂಡನೆ, ಖಂಡನೆ, ಸಮರ್ಥನೆ, ಪಶ್ಚಾತ್ತಾಪ, ಪ್ರಾಯಶ್ಚಿತ್ತ, ಕ್ಷಮೆ, ನೈತಿಕತೆ, ಕರುಣೆ, ಕ್ರೌರ್ಯ, ಕಟ್ಟುಪಾಡು, ಕಾನೂನು, ರಕ್ಷಣೆ; ಹೀಗೆ ಸಾಲುಸಾಲಾಗಿ ಅನೇಕ ವಿಷಯಗಳು ಅಂಟಿಕೊಳ್ಳುತ್ತವೆ.

ಉಪ್ಪು ಮತ್ತು ಸೋಡ ಎರಡೂ ಬೆಳ್ಳಗಿವೆ. ಹಾಗಾಗಿ ಸರಿಯಾಗಿ ತಿಳಿಯದೇ ಉಪ್ಪಿನ ಬದಲು ಸೋಡ ಸಾರಿಗೆ ಹಾಕಲಾಗಿದೆ. ರಮಾಗೆ ಫೋನ್ ಮಾಡುವ ಬದಲು ರಾಮನಿಗೆ ಮಾಡಿಬಿಡುತ್ತೇನೆ. ಇಂತಹ ತಪ್ಪುಗಳನ್ನಲ್ಲ ನಾವು ಇಲ್ಲಿ ಗಮನಿಸುತ್ತಿರುವುದು. ವಸ್ತುಸ್ಥಿತಿಗಳ ಬದಲಾದ ಗ್ರಹಿಕೆಯ ಕ್ರಿಯೆಗಳೂ ಕೂಡಾ ತಪ್ಪು ಎನಿಸುತ್ತದೆ. ಆದರೆ ಆಕಸ್ಮಿಕವಾಗಿ, ಬದಲಾದ ಗ್ರಹಿಕೆಯಿಂದಾಗಿ ಆಗುವ ಎಡವಟ್ಟುಗಳನ್ನು ಮೀರಿರುವ ತಪ್ಪುಗಳಿವೆ. ಅವುಗಳಲ್ಲಿ ಹೊರಗಿನ ವಸ್ತುಗಳು ಕಾರಣವಾಗುವುದಿಲ್ಲ. ವ್ಯಕ್ತಿಯೊಳಗಿನ ವಿಚಾರ, ಆಲೋಚನೆ, ಚಿಂತನೆ, ಉದ್ದೇಶ, ಆಶಯಗಳು ಕಾರಣವಾಗುತ್ತವೆ.

ಇಲ್ಲೂ ಏನೋ ಮಾಡಲು ಹೋಗಿ ತಪ್ಪಾಗಿ ಮತ್ತೇನೋ ಮಾಡುವುದೇ ಆದರೂ ಆ ಒಂದು ಕ್ರಿಯೆಯನ್ನು ತಪ್ಪೆಂದು ಹೇಳುವವರು ಯಾರು ಎಂಬುದನ್ನು ಗಮನಿಸೋಣ. ಪೂರ್ವ ನಿರ್ಧರಿತವಾಗಿರುವ ನೈತಿಕ ಕಟ್ಟಳೆಗಳಿಂದ ಹೊರತಾಗಿ ನಡೆಯುವ ಕ್ರಿಯೆಗಳು. ಹಾಗಾಗಿ ಅವು ತಪ್ಪು ಎಂದು ಲಿಖಿತವಾಗಿ ಅಥವಾ ಮೌಖಿಕವಾಗಿ ರೂಢಿಯಲ್ಲಿವೆ.

ಯಾರೋ ಒಬ್ಬರ ಆಸೆಗೆ ಅಥವಾ ಲೋಭಕ್ಕೆ ಮತ್ತೊಬ್ಬರ ಸೌಖ್ಯ ಅಥವಾ ಹಿತವನ್ನು ಕಸಿಯುವಾಗ, ಕಳಕೊಂಡವರು ಕಿತ್ತುಕೊಂಡವರನ್ನು ಅಪರಾಧಿ ಎನ್ನುತ್ತಾರೆ. ಸಮಾಜದಲ್ಲಿ ಸಾಂಪ್ರದಾಯಿಕವಾಗಿ ಸರಿ ತಪ್ಪುಗಳನ್ನು ನಿರ್ಧರಿಸುವ ರೂಢಿ ಇದೆ. ಈ ರೂಢಿಗೆ ಒಳಗಾಗುವ ವ್ಯಕ್ತಿಗಳು ಸಾಂಪ್ರದಾಯಿಕವಾಗಿ ನಿರ್ಧರಿತವಾಗಿರುವ ಕಟ್ಟಳೆಗಳನ್ನು ಆಧರಿಸಿಕೊಂಡು ವ್ಯಕ್ತಿಗಳ ಕ್ರಿಯೆಗಳನ್ನು ತಪ್ಪು ಸರಿ ಎಂದು ನಿರ್ಧರಿಸಲಾಗುತ್ತದೆ.

ಇಲ್ಲಿ ಅದಲ್ಲ ವಿಷಯ. ನಾವು ಆತ್ಮಕೇಂದ್ರಿತವಾಗಿ ವಿಚಾರ ಮಾಡಬೇಕು. ನಾವು ಸಂಘ ಜೀವಿಯಾದ್ದರಿಂದ ಮತ್ತೊಬ್ಬ ವ್ಯಕ್ತಿಯೊಡನೆಯೂ, ಸಮಾಜದಲ್ಲಿಯೂ ಇದ್ದೇವೆ. ಹಾಗಾಗಿಯೇ ನಮ್ಮ ಕ್ರಿಯೆ ಮತ್ತು ಪ್ರತಿಕ್ರಿಯೆಗಳು ತಪ್ಪು ಸರಿಗಳ ಜಗ್ಗಾಟಕ್ಕೆ ಒಳಗಾಗುತ್ತದೆ.

ಈ ತಪ್ಪು ಸರಿಗಳ ಅರಿವು ವ್ಯಕ್ತಿಗೂ ಸಾಮಾನ್ಯವಾಗಿ ಇರುತ್ತವೆ. ಅವನ ವರ್ತನೆಗಳು, ಕ್ರಿಯೆಗಳು ಸಮಾಜವು ಹೇಗಿರಬೇಕೆಂದು ನಿರೀಕ್ಷಿಸುತ್ತದೆ ಎಂದೂ ತಿಳಿದಿರುತ್ತದೆ. ಆದರೆ ಅವನದೇ ಆದ ಅರಿಮೆಗಳು, ಪ್ರಲೋಭನೆಗಳು, ಮಾನಸಿಕ ಒತ್ತಡಗಳು, ಆಲೋಚನೆಗಳ ಅಥವಾ ವಿವೇಚನೆಗಳ ವೈಫಲ್ಯಗಳು ಅವನಿಂದ ತಪ್ಪನ್ನು ಮಾಡಿಸುತ್ತದೆ. ಯಾವುದೇ ತಪ್ಪು ಕ್ರಿಯೆಯ ರೂಪದಲ್ಲಿ ಹೊರಗೆ ಬಂದಾಗಲೇ, ಅದನ್ನು ಅವನ ಹೊರಗಿನ ಜನರು ಅಥವಾ ಸಮಾಜ ಗುರುತಿಸಿದಾಗಲೇ ಅದು ಅಪರಾಧ ಎನಿಸಿಕೊಳ್ಳುವುದು. ಅದು ಅವನ ಒಳಗೇ ಇದ್ದಷ್ಟು ಕಾಲವೂ ತಾಂತ್ರಿಕವಾಗಿ ಅದು ಅಪರಾಧವಾಗುವುದಿಲ್ಲ.

ನಾವು ಈಗ ಅಪರಾಧವನ್ನು ವಿವೇಚಿಸಬೇಕಾಗಿರುವುದು ತಾಂತ್ರಿಕವಾಗಿರುವುದಕ್ಕಿಂತ ಮುಖ್ಯವಾಗಿ ಮಾನಸಿಕವಾಗಿ ಪರಿಗಣಿಸಬೇಕು. ಆಗ ಅಪರಾಧದ ಅರಿಮೆಯನ್ನು, ಆತ್ಮಸಾಕ್ಷಿಯನ್ನು ಮತ್ತು ಅಪರಾಧ ಪ್ರಜ್ಞೆಯನ್ನು ತಿಳಿಯಲು ಸಾಧ್ಯ. ತಪ್ಪು ಅಥವಾ ಅಪರಾಧವನ್ನು ಬಹಳ ಸರಳವಾಗಿ ಕೊಲೆ, ಕಳ್ಳತನ, ಸುಳ್ಳುತನ, ಮೋಸ; ಇತ್ಯಾದಿ ಕ್ರಿಯೆಗಳಿಗೆ ಆರೋಪಿಸಿ ಅರ್ಥೈಸಲು ಯತ್ನಿಸಿಬಿಡುತ್ತೇವೆ. ಆದರೆ ಅದು ಅಷ್ಟು ಸರಳವೂ ಅಲ್ಲ, ಸ್ಥೂಲವೂ ಅಲ್ಲ. ಅದರ ಸೂಕ್ಷ್ಮತೆಯನ್ನು ತಿಳಿದರೇನೇ ಅರಿಮೆ ಮತ್ತು ಅರಿವಿನ ವ್ಯತ್ಯಾಸ ತಿಳಿಯುವುದು.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version