ಅಂತರಂಗ

ಅರಿಮೆಯ ಅರಿವಿರಲಿ-4 : ಒಳಗತ್ತಲ ಕಳ್ಳರು

Published

on

Art by Muhmmed Salah
  • ಯೋಗೇಶ್ ಮಾಸ್ಟರ್

ಅಡ್ಡಗಾಲಾಗುವ ಅರಿಮೆಗಳು

ದೊಂದು ಮಗು. ಇತರ ಎಲ್ಲಾ ಮಕ್ಕಳು ಸಂತೋಷದಿಂದ ಕುಣಿದುಕೊಂಡು ಆಡುವಾಗ ತಾನೂ ಹಾಗೆಯೇ ಹೋಗಿ ಕುಣಿಯಬೇಕು ಎಂದು ಆಸೆ ಪಡುತ್ತದೆ. ಆದರೆ ಅದಕ್ಕೆ ಹಾಗೆ ಕುಣಿಯಲು ಕಾಲೂ ಬಾರದು, ಕೂಗಲು ದನಿಯೂ ಏರದು.

ಕೆಲವೊಮ್ಮೆ ಯಾವುದೋ ಮದುವೆಯೋ ಅಥವಾ ಅಣ್ಣಮ್ಮನ ಉತ್ಸವದಲ್ಲೋ ಗೆಳೆಯರು ಟಪ್ಪಾಂಗೋಚಿ ಸ್ಟೆಪ್ಸ್ ಹಾಕುತ್ತಿರುತ್ತಾರೆ. ಅವರೊಂದಿಗೆ ಮನಸಾರೆ ಕೂಗುತ್ತಾ ನಲಿಯುತ್ತಾ ಕುಣಿಯುವ ಎಂದು ಎನಿಸುತ್ತದೆ. ಅಲ್ಲಿ ಎಲ್ಲಾ ಆಹ್ವಾನಿಸುವವರೇ ಇರುತ್ತಾರೆ. ಆದರೆ ಕೆಲವರಿಗೋ ಕಾಲು ಮುನ್ನಡೆಯದು, ಕೈಗಳು ಮೇಲೇಳದು, ಕುಣಿಯಲಾಗದು. ಕೆಲವರು ಅದ್ಯಾವುದೋ ಸಭೆಯಲ್ಲಿ ಭಾಷಣ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ. ಮುಖ್ಯ ಅಂಶಗಳ ಪಟ್ಟಿ ಕೈಯಲ್ಲಿರುತ್ತದೆ.

ಆದರೆ ಸಭೆಯಲ್ಲಿ, ವೇದಿಕೆಯ ಮೇಲೆ ಜನಗಳ ಮುಂದೆ ಕೈಗಳು ನಡುಗುತ್ತಿರುತ್ತವೆ, ಗಂಟಲು ಒಣಗುತ್ತದೆ, ಧ್ವನಿ ಹೊರಡದು, ಬೆವರು ತೊಟ್ಟಿಕ್ಕುತ್ತಿರುತ್ತದೆ, ಹೊಟ್ಟೆಯಲ್ಲಿ ತೊಳೆಸಿದಂತೆ ಆಗುತ್ತಿರುತ್ತದೆ, ಹೇಳಬೇಕಾದುದನ್ನು ಹೇಳದೇ ‘ಬೆಬೆಬೆಬೆ’ ಎನ್ನುತ್ತಾ ವೇದಿಕೆಯಿಂದ ಕೆಳಕ್ಕಿಳಿದರೆ ಸಾಕು ಎಂದು ಏನೋ ಒಂದಷ್ಟು ವದರಿ ಓಡಿಬಂದಿರುತ್ತಾರೆ. ಕೆಲವರು ಎಷ್ಟು ಸ್ವಾತಂತ್ರ್ಯವಿದ್ದರೂ ದೀನರಾಗಿಯೇ ವರ್ತಿಸಿದರೆ, ನಿರ್ಬಂಧವಿರುವ ಕಡೆಯಲ್ಲೂ ಕೆಲವರು ಠಾಕುಠೀಕಾಗಿ ಕಾರುಬಾರು ಮಾಡುತ್ತಿರುತ್ತಾರೆ.

ಹೀಗೆ ಹಲವು ಬಗೆಯ ವ್ಯಕ್ತಿಗಳನ್ನು ನೋಡುತ್ತಿರುತ್ತೇವೆ. ಅವನೆಷ್ಟೇ ಚೆನ್ನಾಗಿರುವ ಉತ್ಪಾದನೆಗಳನ್ನು ಮಾಡಿದರೂ ಹಿಂಜರಿಕೆಯಲ್ಲೇ ಪ್ರಚಾರ ಮಾಡದೇ ಹಿಂದುಳಿದು ನಷ್ಟಕ್ಕೊಳಗಾಗುತ್ತಾನೆ. ಯಾವ ಗಟ್ಟಿ ಮತ್ತು ಶಕ್ತ ಉತ್ಪಾದನೆಯಲ್ಲದಿದ್ದರೂ ನಾಜೂಕಾಗಿ ಪ್ರಚಾರ ಮಾಡಿಕೊಂಡು ಗಟ್ಟಿದನಿಯಿಂದ ನೀವಿದನ್ನು ಹೊಂದಲೇ ಬೇಕು ಎಂದು ತಾಕೀತು ಮಾಡುತ್ತಾ ಮತ್ತೊಬ್ಬ ಯಶಸ್ಸನ್ನು ಕಾಣುತ್ತಾನೆ. ಇವೆಲ್ಲಾ ಏಕಾಗುತ್ತದೆ? ಅವರವರ ಹಣೆಬರಹ ಎಂದುಬಿಡಬೇಡಿ.ಅವರವರ ಮನೋಬರಹವೆನ್ನಿ.

ಟೀ ಶರ್ಟ್, ಜೀನ್ಸ್; ಎಂತದ್ದೋ ಬಟ್ಟೆ ಹಾಕಿಕೊಂಡಿರುವ ಈ ಯೋಗೇಶನನ್ನು ನೀವು ಹೊರಗೆ ನೋಡುತ್ತಿದ್ದೀರಿ. ಆದರೆ, ಬೆತ್ತಲಾಗಿರುವ ಅನೇಕಾನೇಕ ಯೋಗೇಶರು ಈ ಬಟ್ಟೆತೊಟ್ಟಿರುವ ಯೋಗೇಶನೊಳಗೆ ಇರುತ್ತಾರೆ.
ಒಬ್ಬ ವ್ಯಕ್ತಿಯ ಮನಸ್ಸಿನೊಳಗೆ, ಒಳಗತ್ತಲಿನಲ್ಲಿ ಎಂತೆಂತಹ ಅದೇ ವ್ಯಕ್ತಿಗಳು ಅಡಗಿಕೊಂಡಿರುತ್ತಾರೆ ಗೊತ್ತೋ! ಕಾಮುಕ, ಸ್ವಾರ್ಥಿ, ಕ್ರೂರಿ, ದೀನ, ಮೋಸಗಾರ, ರಸಿಕ, ಸರಸಿ, ವಿರಹಿ, ಕೊಲೆಗಾರ, ಪ್ರೇಮಿ, ಪೋಷಕ, ಕರುಣಿ, ದುಃಖಿ, ಆನಂದಿ; ಹೀಗೆ ಹಲವಾರು ವ್ಯಕ್ತಿಗಳುಅವಿಸಿಟ್ಟುಕೊಂಡಿರುತ್ತಾರೆ.

ಅವರಲ್ಲಿ ಕೆಲವರು ಬಲಿಷ್ಟರು, ಕೆಲವರು ದುರ್ಬಲರು, ಮತ್ತೆ ಕೆಲವರು ಶಿಶುಗಳು. ಅವರವರಿಗೆ ಅವರದೇ ಸ್ವಭಾವಗಳು, ಅವರವರ ಸ್ವಭಾವಕ್ಕೆ ಹೊರಗಿನ ಜಗತ್ತಿಗೆ ಕಾಣುವ ಸ್ಥೂಲವ್ಯಕ್ತಿಯನ್ನು ಆಡಿಸಲು ಯತ್ನಿಸುತ್ತಾರೆ.

ನೆನಪಿರಲಿ, ಕಣ್ಣಿಗೆ ಕಾಣದ ಮೇಲೆಲ್ಲೋ ಇರುವ ಒಬ್ಬ ಸೂತ್ರಧಾರನ ಇಚ್ಚೆಯಂತೆ ಪಾತ್ರಧಾರಿಯು ವರ್ತಿಸುವುದಲ್ಲ. ಒಳಗಿರುವ ಅನೇಕ ಸೂತ್ರಧಾರರ ಸ್ವಭಾವಕ್ಕೆ ತಕ್ಕಂತೆ ಲೋಕ ಕಾಣುವ, ಸಮಾಜದಲ್ಲಿರುವ ಒಬ್ಬ ಪಾತ್ರಧಾರಿಯು ವರ್ತಿಸುವುದು!
ತಾನೊಂದು ಬಗೆದರೆ ಮಾನವ, ಬೇರೊಂದು ಬಗೆವುದು ದೈವ ಎನ್ನುತ್ತಾರಲ್ಲಾ, ಈ ವಾಕ್ಯವನ್ನು ಸ್ವಲ್ಪ ಸರಿಪಡಿಸಿಕೊಳ್ಳಬೇಕು. ತಾನೊಂದು ಬಗೆದರೆ ಬೇರೊಂದು ಬಗೆವುದು ನಮ್ಮ ಅರಿಮೆಗಳು. ಇನ್‍ಸ್ಟಾಲ್ ಆಗಿರುವ ಸಾಫ್ಟ್‍ವೇರ್‍ಗಳ ಪ್ರಕಾರ ಪ್ರೊಗ್ರಾಮ್‍ಗಳು ನಡೆಯುತ್ತಿರುತ್ತವೆ. ಇನ್‍ಸ್ಟಾಲ್ ಆಗಿರುವ ನಾವು ಎಷ್ಟೋ ವಿಷಯಗಳ ಬಗ್ಗೆ ಜಾಗೃತರಾಗಿ ತೊಡಗಿಕೊಳ್ಳಲು ಬಯಸಿದರೂ ತೊಡರುಗಾಲಾಗುವವು ನಮ್ಮದೇ ‘ಮೊದಲು ಇನ್‍ಸ್ಟಾಲ್ ಆಗಿರುವ ಸಾಫ್ಟ್‍ವೇರ್‍ಗಳು’ ಅಥವಾ ಅರಿಮೆಗಳು.

ಒಳಗತ್ತಲಿನ ಕಾಮುಕ

ನಮ್ಮ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಸೋಗಿನ ಮನೋಭಾವವಿದೆ. ಅದರ ಬಗ್ಗೆ ಅಭಿಪ್ರಾಯಗಳನ್ನು ಪ್ರಕಟಿಸುವಲ್ಲಿ ಅಪ್ರಮಾಣಿಕತೆ ಇದೆ. ಇನ್ನು ಆಲೋಚನೆಗಳೋ ಅನಾರೋಗ್ಯದ ಪರಮಾವಧಿಯಲ್ಲಿವೆ. ಹಾಗಾಗಿ, ಒಬ್ಬ ಸಾಮಾನ್ಯ ಭಾರತೀಯನ ಒಳಗತ್ತಲೆಯಲ್ಲಿರುವ ಕಾಮುಕನಿಗೆ ಲೈಂಗಿಕತೆಯನ್ನು ಅರ್ಥ ಮಾಡಿಕೊಳ್ಳಲು ಬಹಳ ಕಷ್ಟ. ಅವನಿಗೆ ಪ್ರೇಮವೆಂದರೂ ಕಾಮವೇ, ಲೈಂಗಿಕತೆ ಎಂದರೂ ಕಾಮವೇ, ದಾಂಪತ್ಯವೆಂದರೂ ಕಾಮವೇ, ಮಗುವೆಂದರೂ ಕಾಮದ ಫಲವೇ, ವ್ಯಕ್ತಿಗಳಿಬ್ಬರ ಏಕಾಂತ ಎಂದರೂ ಕಾಮವೇ, ಗಂಡು ಹೆಣ್ಣಿನ ಸ್ನೇಹವೆಂದರೂ ಕಾಮವೇ; ಹೀಗೆ ಎಲ್ಲವೂ ಕಾಮುಕತೆಯದೇ ಆಗಿರುತ್ತದೆ. ಇಲ್ಲೇ ಸಮಸ್ಯೆ ಇರುವುದು. ಪ್ರೇಮ, ಲೈಂಗಿಕತೆ, ದಾಂಪತ್ಯ, ಏಕಾಂತ, ಸ್ನೇಹ, ಮಗು; ಇವು ಯಾವುದಕ್ಕೂ ಕಾಮಕ್ಕೆ ಯಾವ ಸಂಬಂಧವೂ ಇಲ್ಲ. ಆದರೆ ವ್ಯಕ್ತಿಯ ಒಳಗತ್ತಲಲ್ಲಿರುವ ಕಾಮುಕ ಯಾವುದನ್ನಾದರೂ ಕಾಮಕ್ಕೆಳೆಸಬಹುದು. ಲೈಂಗಿಕಾಂಗಗಳಲ್ಲಿ ಕಾಮುಕತೆ ಇಲ್ಲ.

ವ್ಯಕ್ತಿಯೊಳಗಿನ ಕಾಮುಕನು ಯಾವುದನ್ನಾದರೂ ತನ್ನ ಕಾಮುಕತೆಗೆ ವಸ್ತುವನ್ನಾಗಿ ಮಾಡಿಕೊಳ್ಳಬಹುದು. ನಮ್ಮಲ್ಲಿ ಪ್ರತಿಯೊಬ್ಬರೂ ಕಾಮುಕತೆಯು ಬಳಸಿಕೊಂಡ ಲೈಂಗಿಕಕ್ರಿಯೆಯಿಂದಲೇ ಹುಟ್ಟಿರುವುದು. ಯಾರೊಬ್ಬರ ತಂದೆ ತಾಯಿ ಅದೆಷ್ಟೇ ಸಾಧು ಸಂತರಂತಹ ಜೀವನ ಮಾಡುತ್ತಿದ್ದರೂ ಅವರಿಗೆ ಮಗು ಹುಟ್ಟಿದೆ ಎಂದರೆ ಶಾರೀರಿಕವಾಗಿ ಲೈಂಗಿಕಕ್ರಿಯೆಯೂ, ಮನೋಭಾವುಕವಾಗಿ ಕಾಮುಕತೆಯೂ ಅಲ್ಲಿತ್ತು ಎಂದೇ ಅರ್ಥ.

ನಮ್ಮ ಹುಟ್ಟಿನ ಮೂಲವೇ ಲೈಂಗಿಕತೆಯೂ ಮತ್ತು ಕಾಮುಕತೆಯೂ ಆಗಿರುವುದರಿಂದ ಸಹಜವಾಗಿ, ಪ್ರಕೃತಿ ಸಹಜವಾಗಿ, ನಮ್ಮಲ್ಲಿರುವ ಮೂಲ ಪ್ರವೃತ್ತಿ ಲೈಂಗಿಕತೆಯ ಮೂಲಕ ಕಾಮುಕತೆಯ ವಾಂಛೆಯನ್ನು ಪೂರೈಸಿಕೊಳ್ಳಲು ಯತ್ನಿಸುತ್ತದೆ.

ಆದರೆ, ಸಮಾಜವು ಕಾಮುಕತೆಯನ್ನು ನಿಗ್ರಹಿಸುವ ಭರದಲ್ಲಿ ಲೈಂಗಿಕತೆಗೂ ಕಡಿವಾಣ ಹಾಕಿರುವ ಕಾರಣ ವ್ಯಕ್ತಿಗಳಲ್ಲಿ ಮನೋಲೈಂಗಿಕ ಸಂಘರ್ಷಗಳು ಉಂಟಾಗುತ್ತವೆ. ವ್ಯಕ್ತಿಗಳಲ್ಲಿನ ಬಹುಪಾಲು ಸಮಸ್ಯೆಗಳು ಮನೋಲೈಂಗಿಕ ಸಂಘರ್ಷಗಳಿಂದಲೇ ಉಂಟಾಗಿರುವುದು. ನೈಸರ್ಗಿಕವಾಗಿರುವ ಲೈಂಗಿಕತೆ ಬೇಕು, ಆದರೆ ಸಾಮಾಜಿಕವಾಗಿ ಕಾಮುಕತೆಯನ್ನು ದಮನಿಸಬೇಕು. ಹಾಗಾಗಿಯೇ ಸಂಘರ್ಷ. ಈ ಲೈಂಗಿಕತೆಯ ಮತ್ತು ಕಾಮುಕತೆಯ ನಡುವಿನ ಭಿನ್ನತೆ ಮತ್ತು ಸಂಬಂಧ ಸೂಕ್ಷ್ಮಗಳ ಅರಿವು ಇಲ್ಲದಿರುವ ಕಾರಣವು ಅರಿಮೆಗಳನ್ನು ಹೊಂದುವಂತೆ ಮಾಡುತ್ತವೆ. ಒಳಗತ್ತಲಿನ ಕಳ್ಳರು ಹೊರಗೆ ಕನ್ನ ಹಾಕುತ್ತಿರುತ್ತಾರೆ. ಆಗ ಹೊರಗೆ ಕಾಣುವ ವ್ಯಕ್ತಿಯನ್ನೇ ಕಳ್ಳ ಎನ್ನುತ್ತೀರಿ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version