ಅಂತರಂಗ
ಅರಿಮೆಯ ಅರಿವಿರಲಿ-27 : ಮನೆಯೊಳಗಣ ಕಿಚ್ಚು
- ಯೋಗೇಶ್ ಮಾಸ್ಟರ್
ಒಬ್ಬರಿಗೆ ದೈಹಿಕವಾಗಿ, ಮಾನಸಿಕವಾಗಿ ಅಥವಾ ಭಾವನಾತ್ಮಕವಾಗಿ ಕಿರುಕುಳಗಳನ್ನು ಕೊಟ್ಟಾಗ, ಅವುಗಳು ಬೆಳಕಿಗೆ ಬಂದು ನಮಗೆ ಅರಿವಿಗೆ ಬಂದಾಗ ತಪ್ಪಿತಸ್ಥ ಭಾವನೆ ಬರುತ್ತದೆ.ನೈತಿಕತೆಯನ್ನು ಮೀರಿದಾಗಲೂ ಇದಾಗುವುದೇ. ಕೆಲವೊಮ್ಮೆ ಆ ಹೊತ್ತಿನ ನಮ್ಮ ಮಾನಸಿಕ ಉನ್ಮತ್ತತೆಯಲ್ಲಿ ಅಥವಾ ಭಾವೋದ್ರೇಕದಲ್ಲಿ ಅರಿವು ಕಣ್ತೆರೆಯದ ಹೊತ್ತಿನಲ್ಲಿ ಯಾವುದೋ ಒಂದು ರೀತಿಯಲ್ಲಿ ವರ್ತಿಸಿಬಿಡುತ್ತೇವೆ.
ಆದರೆ ಸ್ವಲ್ಪ ಹೊತ್ತಿನ ನಂತರ ನಮ್ಮ ಭಾವೋದ್ರೇಕವು ತನ್ನ ಬಿರುಸನ್ನು ಕಳೆದುಕೊಂಡಾದ ಮೇಲೆ, ಮನಸ್ಸಿನ ಉನ್ಮತ್ತತೆ ತನ್ನ ಅಮಲನ್ನು ಇಳಿಸಿಕೊಂಡ ಮೇಲೆ ನಾವು ವರ್ತಿಸಿದ ರೀತಿ ಮತ್ತು ನಮ್ಮ ವರ್ತನೆಗೆ ಬಲಿಯಾದವರನ್ನು ನೆನೆಸಿಕೊಳ್ಳುತ್ತೇವೆ. ಹಾಗೆ ಮಾಡಬಾರದಿತ್ತು ಎಂದೂ ಅನ್ನಿಸುತ್ತದೆ. ಅದೇ ತಪ್ಪಿತಸ್ಥ ಭಾವನೆ ಬರುತ್ತದೆ. ನಮ್ಮಿಂದ ನೊಂದವರ ಬಗ್ಗೆ ಅನುಕಂಪವೂ ಉಂಟಾಗುತ್ತದೆ.
ಸಾಮಾನ್ಯವಾಗಿ ತಾಯಿಯೋ, ತಂದೆಯೋ ಮಗುವಿನ ಯಾವುದೋ ಒಲ್ಲದ ವರ್ತನೆಯ ಅಥವಾ ಒಪ್ಪದ ಕೆಲಸದ ಕಾರಣದಿಂದ ಕೋಪಗೊಂಡು ಚೆನ್ನಾಗಿ ಹೊಡೆದುಬಿಡುತ್ತಾರೆಂದಿಟ್ಟುಕೊಳ್ಳಿ. ನಂತರ ‘ಅಯ್ಯೋ ನಾನು ಮಗುವಿಗೆ ಹೊಡೆದುಬಿಟ್ಟೆ’ ಎಂದು ಅವರು ನೋಯುತ್ತಾರೆ. ತಾವು ಅಳುತ್ತಾರೆ. ಅಳುತ್ತಿರುವ ಮಗುವನ್ನು ರಮಿಸುತ್ತಾರೆ. ಯಾರಿಗೆ ತಾವು ಯಾರಿಗಾದರೂ ಹೊಡೆದ ಮೇಲೂ, ಅವರು ನೋವು ತಿಂದುದನ್ನು ನೋಡಿದ ಮೇಲೂ ತಾವು ಹೊಡೆದಿದ್ದು ಸರಿ ಎಂದು ಎನಿಸಿದರೆ, ಇನ್ನೂ ಚೆನ್ನಾಗಿ ಬಾರಿಸಬೇಕಿತ್ತು. ಹೊಡೆಯೋದಲ್ಲ ಕೈ ಕಾಲು ಮುರಿಯಬೇಕಿತ್ತು. ಬರೀ ಕೈ ಕಾಲು ಮುರಿಯುವುದಲ್ಲ ಸಾಯಿಸಿಬಿಡಬೇಕಿತ್ತು ಎಂದು ಹೇಳುತ್ತಿರುತ್ತಾರೋ ಅವರಲ್ಲಿ ಸಮಸ್ಯೆ ಇದೆ ಎಂದು ಅರ್ಥ.
ಅದ್ಯಾವುದಾದರೂ ಕಾರಣಕ್ಕೆ ಹುಟ್ಟಿದ ಕೋಪ, ಮನಸ್ಸಿನಲ್ಲಿಯೂ ಇರಕೂಡದು. ಹಿಟ್ಟಿನ ಹುಂಜದ ರೂಪಕವನ್ನೇ ನೆನಪಿಸಿಕೊಳ್ಳೋಣ. ದೈಹಿಕವಾಗಿ ಹಲ್ಲೆ ಮಾಡಿದರೆ ಮಾತ್ರವಲ್ಲ ದೋಷ. ಮನಸ್ಸಿನಲ್ಲಿ ಇದ್ದರೂ ಅದು ದೋಷವೇ. ಹಿಟ್ಟಿನ ಹುಂಜವನ್ನು ಯಶೋಧರ ಕತ್ತರಿಸಿದನೆಂದರೆ ಅವನ ಮನಸ್ಸಿನಲ್ಲಿ ಸಾಂಕೇತಿಕವಾಗಿ ಮಾಡುವ ಕೊಲೆಯೂ ಕೂಡಾ ವಾಸ್ತವದಲ್ಲಿ ಕೊಲೆಯೇ.
ಬಸವಣ್ಣ ‘ತನಗೆ ಮುನಿವವಗೆ ತಾ ಮುನಿಯಲೇಕಯ್ಯ’ ಎನ್ನುತ್ತಾ ‘ತನುವಿನ ಕೋಪ ತನ್ನ ಹಿರಿತನದ ಕೇಡು, ಮನದ ಕೋಪ ತನ್ನರಿವಿನ ಕೇಡು’ ಎನ್ನುತ್ತಾರೆ. ಹೊರಗೆ ತೋರಿಸಿಕೊಳ್ಳುವ ಕೋಪವು ನಮ್ಮ ದೌರ್ಬಲ್ಯದ ವ್ಯಕ್ತಿತ್ವವನ್ನು ತೋರಿ ಗೌರವವನ್ನು ಕುಗ್ಗಿಸಿದರೆ, ಮನಸ್ಸಿನ ಒಳಗೆ ಮಾಡಿಕೊಳ್ಳುವ ಕೋಪ ತಿಳುವಳಿಕೆಯನ್ನು ನಾಶ ಮಾಡುತ್ತದೆ.
ಇದನ್ನೇ ಮುಂದುವರಿಸಿ ಮನೆಯೊಳಗಣ ಕಿಚ್ಚು ಮನೆಯ ಸುಡುವುದು ಎಂದು ಗಂಭೀರವಾಗಿ ಎಚ್ಚರಿಸುತ್ತಾರೆ. ಹೌದು, ಈ ಬಗ್ಗೆ ಎಚ್ಚರಿಕೆ ಇರಲಿ. ಮನಸ್ಸಿನಲ್ಲಿ ಅಂದುಕೊಂಡೆ ಅಷ್ಟೇ. ನಿಜವಾಗಿ ನಾನು ಏನೂ ಮಾಡಲಿಲ್ಲ ಎಂದುಕೊಳ್ಳಬೇಡಿ. ಮನಸ್ಸಿನಲ್ಲಿ ದ್ವೇಷ ಸಾಧಿಸುವುದು, ಕೋಪಿಸಿಕೊಳ್ಳುವುದು, ಮತ್ಸರವನ್ನು ಹೊಂದಿರುವುದು, ದುರಾಸೆ ಪಡುವುದು; ಇವುಗಳೂ ಕೂಡಾ ಮನಸ್ಸಿನ ಶುದ್ಧತೆಯನ್ನು ಕದಡಿ ಮಲಿನಗೊಳಿಸುವವೇ ಆಗಿವೆ.
ದ್ವೇಷ ಸಾಧನೆ ಹಳೆಯ ರೋಗ
ಕೆಲವರು ಹೇಳುತ್ತಿರುತ್ತಾರೆ, ‘ನಮ್ಮಿಬ್ಬರಿಗೆ ಜಗಳವಾಗಿ ಅಷ್ಟು ವರ್ಷಗಳಾದವು. ಇನ್ನೂ ಮಾತಾಡಲ್ಲ’ ಇದು ಹೆಮ್ಮೆಯ ವಿಷಯವಲ್ಲ. ಒಂದು ರೀತಿಯಲ್ಲಿ ನಾಚಿಕೆಗೇಡಿನ ವಿಷಯ. ಆದರೆ ಎಷ್ಟೋ ಸಲ ಒಬ್ಬರು ತಮ್ಮ ಸ್ವಾಸ್ಥ್ಯ ಮನಸ್ಸಿನ ಪ್ರತಿಫಲವಾಗಿ ರಾಜಿಗೆ ಮುಂದಾದರೂ ಮತ್ತೊಬ್ಬರ ಕಡೆಯಿಂದ ಅದು ಪ್ರತಿಕ್ರಿಯೆ ಸಕಾರಾತ್ಮಕವಾಗಿ ಸಿಗದೇ ಸಂಬಂಧಗಳು ವಿಫಲವಾಗುತ್ತಿರುತ್ತವೆ. ಗಂಡ ಹೆಂಡರ ನಡುವಿನ ಸಂಬಂಧ, ತಂದೆ ತಾಯಿ ಮತ್ತು ಮಕ್ಕಳು, ಒಡಹುಟ್ಟಿದವರು, ಇತರೇ ಸಂಬಂಧಿಕರು ಅಥವಾ ಸ್ನೇಹಿತರ ಸಂಬಂಧಗಳು ಛಿದ್ರವಾಗಲು ಕಾರಣವೇ ಒಡಕಿನ ಮನಸ್ಸನ್ನು ಮುಂದುವರಿಸುವುದಕ್ಕೆ. ಹಿಂದಿನ ಒಡಕನ್ನು ಇಂದಿಗೂ ನೆನಪಿಸಿಕೊಂಡು ಅದರ ಪ್ರತಿಫಲನದಂತೆ ವರ್ತಿಸಿದಾಗ, ಅದೊಂದು ರೀತಿಯಲ್ಲಿ ಪುನರಾವರ್ತನೆಯಾಗುತ್ತದೆ.
ಅದೇ ಕಂದಕದ ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಬೇರೆ ಬೇರೆ ಮಾತುಗಳಲ್ಲಿ, ಬೇರೆ ಬೇರೆ ಕ್ರಿಯೆಗಳಲ್ಲಿ ಅಭಿವ್ಯಕ್ತವಾಗುತ್ತವೆ. ಜೊತೆಗೆ ಇನ್ನೂ ಪ್ರಗತಿಯನ್ನು ಹೊಂದುತ್ತಿರುತ್ತವೆ. ನಿನ್ನೆ ನಾಲ್ಕು ಮಾತುಗಳು ಬೈದವರು ಇಂದು ಎಂಟು, ನಾಳೆ ಹದಿನಾರು ಮತ್ತು ಎರಡು ಹೊಡೆತ; ಹೀಗೆ ಅದರ ಪ್ರಭಾವವು ದಟ್ಟವಾಗುತ್ತಾ ಕ್ರಿಯಾತ್ಮಕವಾಗಿಯೂ ಮುಂದುವರಿಯುತ್ತಿರುತ್ತವೆ. ತಮ್ಮಲ್ಲಿರುವ ತಪ್ಪಿತಸ್ಥ ಭಾವವನ್ನು ಅಥವಾ ಅಪರಾಧದ ಅರಿಮೆಯನ್ನು ಅಡಗಿಸಿಡಲು ತನ್ನ ಎದುರಾಳಿಯನ್ನು ಇನ್ನಿಲ್ಲದಂತೆ ಮಣಿಸಲು ಯತ್ನಿಸುತ್ತಿರುತ್ತಾರೆ.
ಗಂಡ ಹೆಂಡತಿಯ ನಡುವೆ ಜಗಳವಾಯ್ತು. ಗಂಡನ ಯಾವುದೋ ಒಂದು ಅರಿಮೆಯ ಕಾರಣದಿಂದ ಅವಳನ್ನು ಬೈದ. ಅವಳು ಕೋಪಗೊಂಡಳು. ನೀನು ನನಗೆ ಅನಗತ್ಯವಾಗಿ ಬೈದೆ ಮತ್ತು ವಿನಾಕಾರಣ ದೂಷಿಸಿದೆ ಎಂದು ಅವಳು ಸ್ಪಷ್ಟವಾಗಿ ಅವನಿಗೆ ತಿಳಿಸುವಳು. ಅದು ಅವನಿಗೆ ಗೊತ್ತಿದೆ. ಅವನಲ್ಲಿಯೂ ತಪ್ಪಿತಸ್ಥ ಭಾವನೆ ಇದೆ. ಆದರೆ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಅದಕ್ಕೆ ಅವಳ ಮಾತನ್ನು ಖಂಡಿಸಲು ಮತ್ತೊಂದು ವರಾತ ತೆಗೆಯುತ್ತಾನೆ. ಅದೊಂದು ರೀತಿಯ ಮತ್ತಿನಂತೆ ಮತ್ತಷ್ಟು ಮಗದಷ್ಟು ಉನ್ಮತ್ತನಾಗುತ್ತಾ ಅತಾರ್ಕಿಕವಾಗಿ, ಅಸಂಬದ್ಧವಾಗಿ ಮಾತಾಡುತ್ತಾನೆ. ಅವಳ ಮನೆಯವರನ್ನೆಲ್ಲಾ ಬೈಯುತ್ತಾನೆ. ಅವಳಿಂದ ಮತ್ತಷ್ಟು ಮಾತುಗಳನ್ನು ಹೊರಡಿಸುತ್ತಾನೆ. ನಂತರ ಹೊಡೆಯುತ್ತಾನೆ. ಅನ್ನ ಚೆಲ್ಲುತ್ತಾನೆ, ಸಾರು ಸುರಿಯುತ್ತಾನೆ, ಟಿ ವಿ ಮುರಿಯುತ್ತಾನೆ, ಅವಳನ್ನು ಮಣಿಸಲು ಇನ್ನಿಲ್ಲದಂತೆ ಹೋರಾಡುತ್ತಾನೆ.
ಅಪರಾಧದ ಅರಿಮೆಯು ಬೇರೆ ಬೇರೆ ಮಾನಸಿಕ ಸಮಸ್ಯೆಗಳನ್ನು ಅನಾವರಣ ಮಾಡುತ್ತಾ ಹೋಗುತ್ತವೆ. ಅವಳನ್ನು ಅದೆಷ್ಟು ಬೈದರೂ ತೃಪ್ತಿಯಿಲ್ಲ. ಅದೆಷ್ಟು ಹೊಡೆದರೂ ತೃಪ್ತಿಯಿಲ್ಲ. ಹೊಡೆದು ಬಂದು ಕುಳಿತಿರುತ್ತಾನೆ. ಮತ್ತೆ ಮಾತಾಡುತ್ತಾ ಮಾತಾಡುತ್ತಾ ಮತ್ತೆ ಮತ್ತೆ ಹೋಗಿ ಹೊಡೆಯುತ್ತಾನೆ. ಇಷ್ಟೆಲ್ಲಾ ಆಗಿದ್ದು ಏಕೆಂದರೆ, ಅವನು ತಪ್ಪು ಮಾಡಿದ್ದೇ ನಿಜವಾಗಿದ್ದು, ಅವನಿಗೂ ಅಪರಾಧದ ಅರಿಮೆಯಿದ್ದು, ನೀನು ಅಪರಾಧಿ ಎಂದು ಹೇಳಿದ್ದಕ್ಕೆ. ಅದನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿಯು ಸೇಡನ್ನು ತೀರಿಸಿಕೊಳ್ಳುತ್ತದೆ.
ಹಾಗಾದಾಗಲೇ ವ್ಯಕ್ತಿಯು ಮಾಧುರ್ಯ ತರದ ಸಂಬಂಧವನ್ನು ಕಡಿದುಕೊಳ್ಳಲು ಬಯಸುವುದು. ‘ಋಣಾನುಬಂಧೇನ ರೂಪೇಣ’ ಅಂತ ಎಲ್ಲಾ ಸಂಬಂಧಗಳ ಜೊತೆಗೆ ತಮ್ಮ ಜೀವನವನ್ನು ಬಲಿಗೊಡಲಾಗದು. ಸಂಬಂಧಗಳಿಗಾಗಿ ತಮ್ಮ ಹಿತವನ್ನು, ಬದುಕಿನ ಅಂತರಾತ್ಮವನ್ನು ಬಲಿಗೊಟ್ಟು ಭರವಸೆಯೇ ಇಲ್ಲದೇ ಅವರೊಂದಿಗೇ ಜೀವಿಸಬೇಕೆನ್ನುವುದು ದೌರ್ಬಲ್ಯವೂ ಹೌದು, ಆತ್ಮವಂಚನೆಯೂ ಹೌದು.
ಅರಿಮೆಗಳ ಸಂಕೀರ್ಣ
ಆತ್ಮರತಿ ಅಥವಾ ನಾರ್ಸಿಸಂ, ಅದರ ಮುಂದುವರಿದ ಭಾಗದಂತೆ ಗಾಡ್ ಕಾಂಪ್ಲೆಕ್ಸ್, ಅದರೊಟ್ಟಿಗೆ ಕೀಳರಿಮೆ, ಅದನ್ನು ಮೆಟ್ಟಲು ಮಾಡುವ ಎಡವಟ್ಟಿನ ಪ್ರತಿಫಲವಾಗಿ ಗಿಲ್ಟ್ ಕಾಂಪ್ಲೆಕ್ಸ್ ಇವುಗಳೆಲ್ಲದರ ಕಾಂಪ್ಲೆಕ್ಸ್ (ಸಂಕೀರ್ಣ) ಆಗಿರುವ ಮನುಷ್ಯನ ಬಲಿಪಶು ಅವನ ಸಂಬಂಧದಲ್ಲಿ ಯಾರು ಬೇಕಾದರೂ ಆಗಿರಬಹುದು. ಅವನಿಗೆ ಸಂಬಂಧವೇ ಇಲ್ಲದವರೂ ಆಗಬಹುದು.
ನಮ್ಮಿಂದ ನಮಗೆ ಅಥವಾ ಯಾರಿಗಾದರೂ ತೊಂದರೆಯಾದಾಗ ಅಪರಾಧಿ ಮನೋಭಾವ ಬಂದರೆ ಅದು ಖಂಡಿತ ಸಾಮಾನ್ಯವಾದ ಸಂಗತಿ. ಆದರೆ, ನಮ್ಮ ವಿಚಾರದಿಂದ, ಕ್ರಿಯೆಯಿಂದ ಅಥವಾ ವರ್ತನೆಯಿಂದ ಸಮಸ್ಯೆಯಾದಾಗ ಅಥವಾ ಘಾಸಿಯಾದಾಗ ಅಪರಾಧಿ ಮನೋಭಾವ ಉಂಟಾಗಲೇ ಇಲ್ಲ ಎಂದರೆ ಅದು ಬಹಳ ಗಂಭೀರವಾದ ಮಾನಸಿಕ ಸಮಸ್ಯೆ ಎಂದು ಪರಿಗಣಿಸಬೇಕು.
ಮೊಟ್ಟ ಮೊದಲು ಯಾವುದೇ ತಪ್ಪು ನಮ್ಮಿಂದ ಆದಾಗ ಅದನ್ನು ಒಪ್ಪಿಕೊಂಡುಬಿಡುವುದು ಒಂದು ಘನವಾದ ಮೌಲ್ಯವೇ ಸರಿ. ಆದರೆ ಅದು ನಮ್ಮಿಂದ ಮತ್ತಾಗದಂತೆ
ನೋಡಿಕೊಳ್ಳುವುದು ಜಾಣತನದ ಲಕ್ಷಣ.
ಕೆಲವೊಮ್ಮೆ ತಮ್ಮ ಅಂಕೆಯನ್ನು ಮೀರಿ ಮಾತಾಡಿಬಿಡುತ್ತೇವೆ. ಎಲ್ಲೆಯನ್ನು ದಾಟಿ ವರ್ತಿಸಿಬಿಡುತ್ತೇವೆ. ಸ್ವಾತಂತ್ರ್ಯವನ್ನು ಅತಿಯಾಗಿ ಪರಿಗ್ರಹಿಸಿ ಅದನ್ನು ಸ್ವಚ್ಚಂದ ಮಾಡಿಕೊಂಡುಬಿಡುತ್ತೇವೆ.
ನೈತಿಕತೆ ಅಥವಾ ಸನ್ನಡತೆಯನ್ನು ಮೀರುವುದು, ಅಸೂಯೆ, ದುರಾಸೆ ಹೊಂದಿರುವುದು, ಅತಿಕಾಮದ ಸೆಳೆತಕ್ಕೆ ಒಳಗಾಗುವುದು, ಅನಗತ್ಯವಾದ ಕೋಪ ಮಾಡಿಕೊಳ್ಳುವುದು, ಮಾತು ಮುರಿಯುವುದು, ಮಾದಕ ವಸ್ತು, ಧೂಮಪಾನ, ಮದ್ಯಪಾನಗಳಂತಹ ಚಟಗಳಿಗೆ ಬಿಡಲಾಗದಂತೆ ಅತಿಯಾಗಿ ಅಂಟಿಕೊಳ್ಳುವುದು; ಇತ್ಯಾದಿ ಏನು ಮಾಡಿದರೂ ಸರಿಯೇ ತಪ್ಪಿತಸ್ಥ ಭಾವವನ್ನು ಹುಟ್ಟಿ ಹಾಕದಿದ್ದರೆ ಗಂಭೀರ ಮನೋರೋಗಕ್ಕೆ ಜಾರುತ್ತಿರುವ ಸೂಚನೆ ಅದು.
ಸಾಧ್ಯವಾದರೆ ವೃತ್ತಿಪರ ಮನೋವೈದ್ಯರ ನೆರವು ತೆಗೆದುಕೊಳ್ಳಬೇಕು. ಇಲ್ಲವೇ, ಮಿತ್ರರಿಂದ, ಕುಟುಂಬದ ಸದಸ್ಯರ ಸಹಾಯವನ್ನು ಪಡೆದುಕೊಳ್ಳಬೇಕು. ತಾವೇ ಒಪ್ಪದ ತಮ್ಮ ತಪ್ಪುಗಳಿಗೆ ಕ್ಷಮೆ ಕೇಳುವುದು, ಅದನ್ನು ಮರುಕಳಿಸದಂತೆ ನೋಡಿಕೊಳ್ಳುವುದು, ಹಾಗೂ ಚಟಗಳಾಗಿದ್ದ ಪಕ್ಷದಲ್ಲಿ ಅದರ ನಿವಾರಣೆಗೆ ಮನಸ್ಸು ಮಾಡಿ ಕಾರ್ಯತತ್ಪರರಾಗುವುದು ಆರೋಗ್ಯವಂತ ಮನಸ್ಸಿನ ಲಕ್ಷಣ.
ಕ್ಷಮೆ ಕೇಳುವುದಂತೂ ಅತ್ಯಂತ ಮಧುರವಾದ ಮೌಲ್ಯ. ಧೈರ್ಯವಂತರೇ ಕ್ಷಮೆ ಕೇಳುವುದು. ಹೃದಯವಂತರೇ ಕ್ಷಮಿಸುವುದು. ಮೊಂಡುತನವನ್ನೇ ಧೈರ್ಯವೆಂದು ಭ್ರಮಿಸುವ ನಾರ್ಸಿಸ್ಟ್ ಅಥವಾ ಆತ್ಮರತಿಯುಳ್ಳವರು. ಅಂತಹ ಅಹಂಕಾರಿಗಳು ಮಾತ್ರವೇ ಕ್ಷಮೆ ಕೇಳುವುದೂ ಇಲ್ಲ, ಕ್ಷಮಿಸುವುದೂ ಇಲ್ಲ. ಅರಿಮೆಗಳನ್ನು ಉಳ್ಳವರೇ ಇತರರ ವಿಷಯಗಳಲ್ಲಿ ವ್ಯತ್ಯಾಸದಿಂದ ನಡೆದುಕೊಳ್ಳುವುದು.
ಅರಿಮೆಗಳನ್ನು ಹೊಂದಿರುವ ಕಾರಣದಿಂದಲೇ ಅವರು ಕೆಲವು ಗುಣಗಳಿಂದ ಆವರಿಸಿಕೊಂಡಿರಲ್ಪಟ್ಟು, ವಿಲಕ್ಷಣ ಎನಿಸುವ ಧೋರಣೆಗಳಿಗೆ ಅಧೀನರಾಗಿರುತ್ತಾರೆ. ಅದು ಅವರಿಗೇ ಗೊತ್ತಿರುವುದಿಲ್ಲ. ಅಂತವರನ್ನೂ ಕ್ಷಮಿಸಬೇಕೆನ್ನುವುದು ಯೇಸು. ತಾನು ಯಾವ ತಪ್ಪನ್ನೂ ಮಾಡದೆಯೇ ಮರಣದಂಡನೆಗೆ ಒಳಗಾಗಿ ಶಿಲುಬೆಯೇರಿ ಸಾಯುವಾಗ, “ತಂದೆಯೇ ಅವರನ್ನು ಕ್ಷಮಿಸು. ತಾವೇನು ಮಾಡುತ್ತಿದ್ದೇವೆಂದು ಅವರು ಅರಿಯರು” ಎಂದು ಹೇಳುವ ಪ್ರಸಂಗದಲ್ಲಿ ನಾನು ಗ್ರಹಿಸುವುದು, ಈ ಅರಿಮೆಯುಳ್ಳವರ ತಪ್ಪುಗಳನ್ನು ಕ್ಷಮಿಸಬೇಕು ಮತ್ತು ಸರಿಪಡಿಸುವ ದಿಕ್ಕಿನಲ್ಲಿ ಕೆಲಸ ಮಾಡಬೇಕು.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243