ಅಂತರಂಗ

ಅರಿಮೆಯ ಅರಿವಿರಲಿ-6 : ಮಗಳೆಂಬ ಸವತಿ

Published

on

Art by Evan Hauton
  • ಯೋಗೇಶ್ ಮಾಸ್ಟರ್

ಸಾಮಾನ್ಯವಾಗಿ ಅಕ್ಕ ತಂಗಿಯರಲ್ಲಿ ಇರುವಂತಹ ಸಂಘರ್ಷದ ಅತಿರೇಕವು ಅಣ್ಣ ತಂಗಿಯಲ್ಲಿ ಅಥವಾ ಅಕ್ಕ ತಮ್ಮನಲ್ಲಿ ಇಲ್ಲದಿರುವುದಕ್ಕೆ ಕಾರಣವು ಬರಿಯ ವ್ಯಕ್ತಿಗತ ವರ್ತನೆಗಳೇ ಅಥವಾ ಮನುಷ್ಯನ ಮಾನಸಿಕ ಸಂರಚನೆಯೇ?

ಅಮ್ಮ ಮತ್ತು ಮಗಳಲ್ಲಿ ಇರುವಂತಹ ಸಂಘರ್ಷವು ದೂರು ಪ್ರತಿದೂರುಗಳು ತಂದೆ ಮಗಳಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ ಎಂಬುದು ತಂದೆಗೆ ಮಗಳ ಮೇಲೆ ಹೆಚ್ಚು ಮಮತೆಯೇ? ತಾಯಿಗಿಲ್ಲವೇ? ‌ಈಗಾಗಲೇ ಈಡಿಪಸ್ ಕಾಂಪ್ಲೆಕ್ಸ್ ಅಥವಾ ತಾಯಿಯರಿಮೆಯನ್ನು ತಿಳಿದವರಿಗೆ ಇದನ್ನು ತಿಳಿಯುವುದು ಅಷ್ಟೇನೂ ಕಷ್ಟವಲ್ಲ.

ಈಡಿಪಸ್ ಕಾಂಪ್ಲೆಕ್ಸ್ ಅಥವಾ ತಾಯರಿಮೆಯಂತೆಯೇ ತಂದೆಯರಿಮೆಯೂ ಕೂಡಾ ಇದೆ. ಮನೋವಿಜ್ಞಾನಿ ಕಾರ್ಲ್ ಜಂಗ್ ವಿಶದಪಡಿಸಿದ ಆ ಅರಿಮೆಯಾದ ಇಲೆಕ್ಟ್ರಾ ಕಾಂಪ್ಲೆಕ್ಸಿಗೂ ಒಂದು ಕತೆಯಿದೆ. ಹೆಣ್ಣು ಮಗುವೊಂದು ತನ್ನ ತಂದೆಯೊಡನೆ ಆಪ್ತತೆ ಅಥವಾ ಆತ್ಮೀಯತೆಗಳಿಸಲು ತನ್ನ ತಾಯಿಯೊಂದಿಗೆ ಹೊಂದಬಹುದಾದ ಮನೋಲೈಂಗಿಕ ಸಂಘರ್ಷವನ್ನು ಇಲೆಕ್ಟ್ರಾ ಕಾಂಪ್ಲೆಕ್ಸ್ ಎಂದು ಹೆಸರಿಸುತ್ತಾರೆ.

ಗ್ರೀಕ್ ನಾಟಕಕಾರ ಸಾಫೋಕ್ಲಿಸ್ ಬರೆದ ಇಲೆಕ್ಟ್ರಾ ದುರಂತ ನಾಟಕದಲ್ಲಿ ಇಲೆಕ್ಟ್ರಾ ಓರ್ವ ರಾಜಕುಮಾರಿ. ಸೇಡು ಮತ್ತು ಹಟದ ಕಾರಣ ತನ್ನ ಸೋದರನನ್ನೇ ತನ್ನ ತಾಯಿಯ ವಿರುದ್ಧ ಪ್ರಚೋದಿಸಿ ಕೊಲ್ಲುವಂತೆ ಮಾಡುತ್ತಾಳೆ. ಅವಳಿಗೆ ಅವಳ ತಂದೆಯ ಮೇಲೆ ಪ್ರೇಮ. ನಾಟಕೀಯ ತಿರುವುಗಳಿರುವ ಇದೊಂದು ದುರಂತ ಕತೆ. ಆದರೆ ಸಾಮಾನ್ಯವಾಗಿ ತಂದೆಯ ಮೇಲಿನ ಮಗಳೊಬ್ಬಳ ಕಡುವ್ಯಾಮೋಹವನ್ನು ಸಂಕೇತಿಸಲು ಇಲೆಕ್ಟ್ರಾ ಕಾಂಪ್ಲೆಕ್ಸ್ ಎಂದು ಕರೆಯಲಾಗಿದೆ.

ಎಷ್ಟೋ ಸಲ ಮಗಳ ಅಂಟಿಕೆಯನ್ನು ತಂದೆ ಸಹಜ ಪ್ರೀತಿಯೆಂದೂ, ಮಗನ ಗಾಢವಾದ ಅವಲಂಬನವನ್ನು ತಾಯಿ ಶಿಶುಸಹಜವೆಂದೂ ಮಕ್ಕಳ ಕಡು ವ್ಯಾಮೋಹವನ್ನು ಅಥವಾ ಲೈಂಗಿಕ ಸೆಳೆತವನ್ನು ನಿರ್ಲಕ್ಷಿಸಿಬಿಡುವರು. ಒಂದು ವೇಳೆ ತಿಳಿದರೂ ಅದನ್ನು ಆಡಲಾರರು, ಕೆಲವೊಮ್ಮೆ ಮಕ್ಕಳಲ್ಲಿ ಅಂತಹುದೆಲ್ಲಾ ಇರುವುದಿಲ್ಲ, ತಾವೇ ತಪ್ಪಾಗಿ ತಿಳಿದಿರಬಹುದು ಎಂದು ಸುಮ್ಮನಾಗಿಬಿಡಬಹುದು. ಮತ್ತೂ ಕೆಲವೊಮ್ಮೆ ಇಂತದ್ದನ್ನೆಲ್ಲಾ ಹಗರಣ ಮಾಡಬಾರದು ಎಂದೂ ಸುಮ್ಮನಾಗಿಬಿಡುವರು.

ಸಮಸ್ಯೆ ಎಂದರೆ, ತಾಯಿಗೆ ತನ್ನ ಪುಟ್ಟ ಮಗನು ತನ್ನೊಡನೆ ಕಡು ವ್ಯಾಮೋಹವನ್ನು ಹೊಂದಿರುವಾಗ ಒಂದು ವೇಳೆ ತನ್ನ ಲೈಂಗಿಕ ವಾಂಛೆಯನ್ನು ತೋರಿದಾಗ, ಆ ವಿಷಯವನ್ನು ತನ್ನ ಗಂಡನಿಗೆ ತಿಳಿಸಿದರೆ ಶಿಕ್ಷಿಸಬಹುದೆಂಬ ಭಯದಿಂದ ಸುಮ್ಮನಾಗಿಬಿಡುತ್ತಾಳೆ. ಅದೇ ರೀತಿ ತಂದೆಯೂ ಕೂಡಾ, ತನ್ನೊಂದಿಗೆ ತನ್ನ ಮಗಳು ಹೊಂದಿರುವ ಸಲುಗೆಯಲ್ಲಿ ಸರಸದ ಆಸೆಯಿದೆ ಎಂದು ತಿಳಿದರೂ ಅದು ಬೇರೆ ಯಾರಿಗೂ ಗೊತ್ತಾಗಿಲ್ಲ. ನಾನೂ ಗೊತ್ತು ಮಾಡುವುದು ಬೇಡ. ಅದಕ್ಕೆ ಇಂಬು ಕೊಡದಿದ್ದರಾಯಿತು ಎಂದು ಸುಮ್ಮನಾಗಿಬಿಡುತ್ತಾನೆ.

ಏಕೆಂದರೆ ಒಂದು ವೇಳೆ ತಾಯಿಗೆ ತಿಳಿದರೆ ಅವಳು ತಮ್ಮಿಬ್ಬರ ಅನ್ಯೋನ್ಯತೆಯನ್ನು ತುಂಡರಿಸುತ್ತಾಳೆ ಎಂಬ ಭಯ ಅವನಿಗೆ. ಅವನಿಗೂ ಅವನ ಮಗಳ ಆಪ್ತತೆ ಹಿತವಾಗಿರುತ್ತದೆ. ಆದರೆ ಆ ಆಪ್ತತೆಯಲ್ಲಿ ಲೈಂಗಿಕತೆಯ ವಾಸನೆ ಕಂಡಾಗ ಅವನಿಗೆ ಇರಿಸುಮುರಿಸಾಗುತ್ತದೆ. ಇದಕ್ಕೆ ತುಂಬಾ ತಲೆಕೆಡಿಸಿಕೊಳ್ಳುವಷ್ಟಿಲ್ಲ. ಎಳೆಯ ಮಕ್ಕಳಿಗೆ ಸಮಾಜವು ಕಟ್ಟಿಕೊಟ್ಟಿರುವ ಶಿಷ್ಟ ಸಂಬಂಧಗಳ ಗುರುತು ಪರಿಚಯ ಇಲ್ಲದಿರುವುದು ಒಂದು ಕಾರಣವಾದರೆ, ಅವರು ನೈಸರ್ಗಿಕವಾಗಿ ಪಶುಗಳಂತೆ ತಮ್ಮ ಪ್ರವೃತ್ತಿಗಳನ್ನು ತೋರಿಸುತ್ತಾರೆ ಅಷ್ಟೇ. ಆದರೆ ಸಾಮಾಜಿಕ ತರಬೇತಿಗೆ ಅವರು ಒಳಪಡುತ್ತಿದ್ದಂತೆ ಸಮಾಜದಲ್ಲಿ ಸ್ಥಾಪಿತವಾಗಿರುವ ಅಥವಾ ಒಪ್ಪಿತವಾಗಿರುವ ಲೈಂಗಿಕ ನಿರೀಕ್ಷೆಗೆ ಅನುಗುಣವಾಗಿ ನಡೆಯುವ ರೂಢಿಯನ್ನು ಮಾಡಿಕೊಳ್ಳುತ್ತದೆ.

ಮೂರರಿಂದ ಆರು ವರ್ಷದವರಷ್ಟು ಸಣ್ಣ ಮಕ್ಕಳಾಗಿದ್ದಾಗಲೇ ಕಾಣುವವು ಈ ಈಡಿಪಸ್ ಮತ್ತು ಇಲೆಕ್ಟ್ರಾ ಕಾಂಪ್ಲೆಕ್ಸ್‍ಗಳು. ಈ ಎರಡೂ ಅರಿಮೆಗಳ ವಿಷಯದಲ್ಲಿ ತಂದೆ ಮತ್ತು ತಾಯಿ ಇಬ್ಬರೂ ಇದರ ಅರಿವು ಇದ್ದು ಹೊಣೆಗಾರಿಕೆಯಿಂದ ತಮಗೆ ಜೋತು ಬೀಳುವ ಮಕ್ಕಳ ಬಗ್ಗೆ ಎಚ್ಚರಿಕೆಯಿಂದ ವರ್ತಿಸಬೇಕು. ಇಲ್ಲವಾದರೆ ಭಾವನಾತ್ಮಕವಾಗಿಯೋ, ಮೋಹಪರವಶರಾಗಿಯೋ ವಿವೇಚನೆಯಿಲ್ಲದೇ ವರ್ತಿಸಿದರೆ ಮುಂದಿನ ದಿನಗಳಲ್ಲಿ ಸಂಬಂಧಗಳು ಹಳಸುತ್ತವೆ. ಎಂತೆಂತಹ ಪ್ರಸಂಗಗಳನ್ನು ಎದುರಿಸಬೇಕಾಗುವುದೆಂದು ಹೇಳಲಾಗುವುದಿಲ್ಲ.

ಸಿಗ್ಮಂಡ್ ಫ್ರಾಯ್ಡ್ ಹೇಳುವಂತೆ ಹೆಣ್ಣು ಮಗುವಿಗೆ ತನ್ನ ತಂದೆ ಇರುವ ಶಿಶ್ನವು ತನಗಿಲ್ಲವೆಂದು ಅಸೂಯೆ ಪಡುತ್ತಾಳೆಂದೂ ಅದಕ್ಕೆ ಶಿಶ್ನಾಸೂಯೆ ಎಂದೂ ಹೆಸರಿಸುತ್ತಾನೆ. ಇದೇ ಕಾರಣಕ್ಕೆ ಅವಳು ತಂದೆಯೊಡನೆ ಆತ್ಮೀಯತೆಯಿಂದ ಸಖ್ಯವನ್ನು ಬೆಳೆಸಿಕೊಳ್ಳುತ್ತಾಳೆ. ಜೊತೆಗೆ ತನ್ನ ತಂದೆ ತನ್ನ ತಾಯಿಯ ಜೊತೆಗಿನ ಸರಸ ಸಂಬಂಧವನ್ನು ಸಹಿಸಲಾರದೇ ಹೋಗುತ್ತಾಳೆ. ಕೆಲವು ಹೆಣ್ಣು ಮಕ್ಕಳಂತೂ ತಮ್ಮ ತಾಯಂದಿರಿಗೆ ಸವತಿ ಕಾಟವನ್ನೇ ಕೊಡುತ್ತಾರೆ. ಇದು ತಾತ್ಕಾಲಿಕ. ಏಕೆಂದರೆ ವಯಸ್ಸಾದಂತೆ ಅವರಿಗೆ ತಮ್ಮ ಲೈಂಗಿಕ ಗುರುತಿನ ಬಗ್ಗೆ ಸರಿಯಾದ ಅರಿಮೆ ಉಂಟಾಗುತ್ತದೆ ಮತ್ತು ಬಾಲ್ಯದಲ್ಲಿ ಅದರ ಬಗ್ಗೆ ತಮಗಿದ್ದ ಒಲವನ್ನೂ ಮತ್ತು ಗೊಂದಲವನ್ನೂ ಕ್ರಮೇಣ ಇಲ್ಲವಾಗಿಸಿಕೊಳ್ಳುತ್ತಾರೆ.ಸಮಾಜದಲ್ಲಿ ಇರುವಂತಹ ಸಾಂಪ್ರದಾಯಿಕವಾದ ಲೈಂಗಿಕ ಗುರುತುಗಳ ಹೊಣೆಗಾರಿಕೆಯನ್ನು ರೂಢಿಸಿಕೊಳ್ಳುತ್ತಾರೆ.

ಒಂದು ವೇಳೆ ಪೋಷಕರು ಮೋಹಪರವಶವಾಗಿ ಮಗುವಿನ ಶಿಶ್ನಾಸೂಯೆಯ ಅವಧಿಯಲ್ಲಿ ಮಕ್ಕಳಿಗೆ ಸ್ಪಂದಿಸಿದರೆ, ಮಗುವು ಅದರಿಂದ ಹೊರಗೆ ಬರದೇ ಹೋಗಬಹುದು. ತನ್ನ ಜೋತುಬೀಳುವಿಕೆಯನ್ನು ಗಟ್ಟಿಗೊಳಿಸಿಕೊಂಡು ಅದನ್ನೇ ತನ್ನ ಪ್ರಧಾನ ಲೈಂಗಿಕಾಸಕ್ತಿಯನ್ನಾಗಿಯೂ ಕೂಡಾ ಮುಂದುವರಿಸಿಕೊಳ್ಳಬಹುದು.ಆದರೆ ಈ ಶಿಶ್ನಾಸೂಯೆಯ ವಾದವನ್ನು ನವೀನ ಮನಶಾಸ್ತ್ರಜ್ಞರು ಒಪ್ಪುವುದಿಲ್ಲ. ಮತ್ತೆ ಕೆಲವರು ಇದು ಅವಾಸ್ತವದ ವಾದ ಎಂದು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಆದರೆ, ಅಷ್ಟೂ ತಿರಸ್ಕರಿಸುವ ಬದಲು ವಿಷಯವನ್ನು ತಿಳಿದಿದ್ದು ಗಮನಿಸುವುದರಿಂದ ಮತ್ತು ಗಮನಕ್ಕೆ ಬಂದಾಗ ಪ್ರಜ್ಞೆಯಿಂದ ವರ್ತಿಸುವುದರಲ್ಲಿ ಹಾನಿಯೇನೂ ಇಲ್ಲ.

ಲೈಂಗಿಕ ವಿಷಯಗಳಲ್ಲಿ ಇರುವಂತಹ ಮಡಿವಂತಿಕೆ ಮತ್ತು ಸಾಮಾಜಿಕ ಅಪಖ್ಯಾತಿಯ ಹಿಂಜರಿಕೆಯಿಂದಾಗಿ ಬಹುಪಾಲು ಜನರು ಇಂತವನ್ನು ಒಪ್ಪುವುದಿರಲಿ, ಕೇಳಲೂ ಇಷ್ಟ ಪಡುವುದಿಲ್ಲ. ಆದರೆ ನಾನು ಕಂಡಂತಹ ಕೆಲವು ವ್ಯಕ್ತಿಗತ ಸಂಬಂಧಗಳಲ್ಲಿ ಇಂತಹ ಪ್ರಕರಣಗಳನ್ನು ಕಂಡಿದ್ದೇನೆ. ತನ್ನ ತಂದೆಯಂತಹ ಪ್ರಿಯತಮನನ್ನು ಹೆಣ್ಣು ಬಯಸುವುದು, ತನ್ನ ತಾಯಿಯ ಛಾಯೆಯನ್ನು ಪ್ರಿಯತಮೆಯಲ್ಲಿ ಗಂಡು ಬಯಸುವುದು ಕೂಡಾ ಮಾಸಿದ ಈಡಿಪಸ್ ಮತ್ತು ಇಲೆಕ್ಟ್ರಾ ಕಾಂಪ್ಲೆಕ್ಸ್‍ಗಳ ಪ್ರಭಾವಗಳೇ ಎಂದು ಅನಿಸುತ್ತದೆ.

ತಂದೆಯರಿಮೆ ಅಥವಾ ಇಲೆಕ್ಟ್ರಾ ಕಾಂಪ್ಲೆಕ್ಸ್‍ಗಳು ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಮ್ಮ ತಾಯಿಯರ ಬಗ್ಗೆ ದೂರುತ್ತಿರುತ್ತಿರುವುದರಲ್ಲಿ ಕಾಣುತ್ತಿರುತ್ತದೆ. “ನಾನು ಏನು ಮಾಡಿದರೂ ತಪ್ಪನ್ನು ಕಂಡು ಹಿಡಿಯುತ್ತಾರೆ. ನನ್ನ ಸಾಧನೆ ಬಗ್ಗೆ ಹೆಮ್ಮೆ ಪಡುವುದಿಲ್ಲ. ಏನಾದರೂ ಕೇಳಿದರೆ ನಿಮ್ಮ ಅಪ್ಪನ್ನ ಕೇಳು ಎಂದು ವ್ಯಂಗ್ಯವಾಗಿ ಹೇಳುತ್ತಾರೆ” ಇತ್ಯಾದಿ. ಗಮನಿಸಿದವರಿಗೆ ಗೋಚರಿಸುವ ಕೆಲವು ವಿಷಯಗಳಿವೆ. ಕೆಲವು ತಾಯಂದಿರಿಗೆ ಮದುವೆಯಾದ ತನ್ನ ಮಗಳಿಗಿಂತ ಅಳಿಯನ ಮೇಲೆ ಪ್ರೀತಿ ಹೆಚ್ಚು. ಮಗಳು ಮತ್ತು ಅಳಿಯನ ನಡುವೆ ಜಗಳ ಬಂದಾಗ ಅತ್ತೆ ಅಳಿಯನ ಪಕ್ಷವಹಿಸುತ್ತಾಳೆ. “ನಾನು ಅವಳನ್ನು ಇವತ್ತು ನೋಡುತ್ತಿಲ್ಲ. ಅವಳು ಮೊದಲಿಂದಲೂ ಹಾಗೆಯೇ” ಎನ್ನುತ್ತಾಳೆ.

ಇನ್ನೂ ಕೆಲವು ಪ್ರಕರಣಗಳಲ್ಲಿ ಸೊಸೆಯಂದಿರು ವಿಧವೆ ಅತ್ತೆಯಿಂದ ಹೆಚ್ಚು ಕಿರುಕುಳಗಳನ್ನು ಅನುಭವಿಸುತ್ತಾರೆ. ಇದಕ್ಕೆ ಕಾರಣ ಬಿಡಿಸಿ ಹೇಳಬೇಕಿಲ್ಲ. ಈಡಿಪಸ್ಸೇ ಆಗಲಿ ಅಥವಾ ಇಲೆಕ್ಟ್ರಾ ಕಾಂಪ್ಲೆಕ್ಸೇ ಆಗಲಿ, ಅವು ಮಕ್ಕಳಲ್ಲಿ ಕಂಡು ಬಂದಾಗ ಅಲ್ಲಿ ಸಂಯಮ ವಹಿಸಬೇಕಾದವರು ಮತ್ತು ಪ್ರಜ್ಞಾವಂತಿಕೆಯಿಂದ ವರ್ತಿಸಬೇಕಾದವರು ಹಿರಿಯರು. ಮಕ್ಕಳಲ್ಲಿ ಅಂತಹ ಅರಿಮೆಗಳನ್ನು ಕಂಡರೆ ಅದು ಸಹಜವೂ ಮತ್ತು ನೈಸರ್ಗಿಕವೂ ಆಗಿದ್ದು ಮಾನಸಿಕವಾಗಿ ಆರೋಗ್ಯ ಕೆಟ್ಟಿರುವುದೇನಲ್ಲ.

ಆದರೆ ಹಿರಿಯರೇನಾದರೂ ಅನಾರೋಗ್ಯಕರವಾದ ಮನಸ್ಥಿತಿಯನ್ನು ಹೊಂದಿದ್ದಲ್ಲಿ ಮಗುವಿಗೆ ಸಮಸ್ಯೆಯಾಗುತ್ತದೆ. ಅದೂ ಕೂಡಾ ಅನಾರೋಗ್ಯಕರವಾದಂತಹ ಮನೋಭಾವವನ್ನು ಹೊಂದುವುದಕ್ಕೆ ಆಸ್ಪದವಾಗುತ್ತದೆ. ಯಾವಾಗಲೂ ಅಷ್ಟೇ, ಲೈಂಗಿಕ ಭಾವನೆಗಳು ಸಹಜವಾಗಿ ಮೂಡುವುದು ಆರೋಗ್ಯಕರವೇ ಆಗಿರುತ್ತದೆ. ಆದರೆ ಅದನ್ನು ವಿಕೃತಗೊಳಿಸಿಕೊಳ್ಳುವುದು ಮನುಷ್ಯನ ಅನಿಯಂತ್ರಿತ ಮನಸ್ಸಿನ ದುಡುಕಿನ ತುಡುಗುತನವೇ ಆಗಿರುತ್ತದೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version