ಅಂತರಂಗ

ಅರಿಮೆಯ ಅರಿವಿರಲಿ-38 : ನವಿರು ಕ್ರೌರ್ಯವಿದೆಯೇ?

Published

on

  • ಯೋಗೇಶ್ ಮಾಸ್ಟರ್

ಸ್ಯಾಡಿಸಂ ಅಥವಾ ಹಿಂಸಾರತಿಯನ್ನು ಕಛೇರಿಯಲ್ಲಿ ಮೇಲಧಿಕಾರಿಯೊಬ್ಬ ತನ್ನ ಕೈಗೆಳಗಿರುವವರ ನಿರ್ದಾಕ್ಷಿಣ್ಯವಾಗಿ ದುಡಿಸಿಕೊಳ್ಳುವುದರಲ್ಲಿ ಕಾಣಬಹುದು. ವಿದ್ಯಾರ್ಥಿಯೊಬ್ಬ ಎಷ್ಟೇ ಶ್ರಮವಹಿಸಿ ಅಸೈನ್‍ಮೆಂಟ್ ಮಾಡಿದ್ದರೂ ಅದನ್ನು ಒಪ್ಪದೇ ಮತ್ತೆ ಮತ್ತೆ ಕೆಲಸ ಮಾಡುತ್ತಲೇ ಇರುವಂತೆ ಮಾಡುವ ಪ್ರಾದ್ಯಾಪಕನಲ್ಲಿ ಗಮನಿಸಬಹುದು. ತಮ್ಮನ್ನು ನೋಡಲು ಬಂದವರನ್ನು ಮಾತಾಡಿಸದೇ, ಅವರು ಬಂದರೂ ತಾವು ನೋಡಿದ್ದೇವೆಂದು ತೋರ್ಪಡಿಸದೇ ತಮ್ಮ ಕೆಲಸದಲ್ಲಿಯೇ ಮಗ್ನರಾಗಿದ್ದು ಬಂದವರು ತಳಮಳಕ್ಕೆ ಒಳಗಾಗುವಂತೆ ಮಾಡುವವರಲ್ಲಿಯೂ ಕಾಣಬಹುದು.

ಮನೆಯಲ್ಲಿ ಯಾರೋ ಅಸೌಖ್ಯದಿಂದ ನರಳುತ್ತಿದ್ದರೂ ಇವರದು ಯಾವಾಗಲೂ ಇದ್ದುದ್ದೇ ಎಂಬ ಧೋರಣೆಯಲ್ಲಿ ನರಳುವಿಕೆಯ ಕರೆಗೆ ಸ್ಪಂದಿಸದೇ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿರುವವರಲ್ಲಿ ಇರುವುದು ಅದೇಯೇ. ಹೀಗೆ ಸ್ಯಾಡಿಸಂ ಮನುಷ್ಯನ ನಾನಾ ವರ್ತನೆಗಳಲ್ಲಿ ಪ್ರಕಟವಾಗುತ್ತಿರುತ್ತದೆ.

ಇದನ್ನು ಹಿಂಸಾರತಿ ಎಂದರೆ ಒಪ್ಪಿಕೊಳ್ಳದವರು ಅದನ್ನು ಹೇಗೆ ಸಮರ್ಥಿಸಿಕೊಳ್ಳುವರೋ ನಾ ಕಾಣೆ. ನವಿರು ಕ್ರೌರ್ಯ ಎನ್ನಬಹುದೇ? ಅಥವಾ ಪರೋಕ್ಷ ಹಿಂಸೆ ಎನ್ನಬಹುದೇ? ಏನಾದರೂ ಕ್ರೌರ್ಯ ಕ್ರೂರವೇ. ಒಂದೇ ಸಮನೆ ನಿಂದನೆಯ ಅಥವಾ ನಕಾರಾತ್ಮಕವಾದ ಮಾತುಗಳನ್ನಾಡುತ ಹಿಂಸೆ ಕೊಡುವವರಿದ್ದರೆ, ಎಷ್ಟು ಮಾತಾಡಿಸಿದರೂ ಏನೂ ಮಾತಾಡದೇ ಹಿಂಸೆ ಕೊಡುವವರೂ ಕ್ರೂರಿಗಳೇ.

ಸೇಡು ಮಾನವತೆಗೆ ಶಾಪ

ಸಾಮಾನ್ಯವಾಗಿ ಗುರುತಿಸುವುದಾದರೆ ಸ್ಯಾಡಿಸಂ ಪ್ರಮುಖವಾಗಿ ಎರಡು ಬಗೆಗಳಲ್ಲಿ ಪ್ರಕಟವಾಗುತ್ತದೆ.ಒಂದು ಸೇಡು ತೀರಿಸಿಕೊಳ್ಳುವ ಮನೋಭಾವದಲ್ಲಿ. ಮತ್ತೊಂದು ದುರ್ಬಲರ ಮೇಲೆ ದಬ್ಬಾಳಿಕೆ ಮಾಡುವುದರಲ್ಲಿ.

ಸೇಡಿನ ಮನೋಭಾವ ಎಂಬುದು ಮನುಕುಲಕ್ಕೆ ಅಂಟಿರುವ ಬಹುದೊಡ್ಡ ಹಿಂಸಾತ್ಮಕ ಕಳಂಕ. ಮಗುವು ಯಾರಿಂದಲೋ ಹೊಡೆಸಿಕೊಂಡು ಬಂತು ಎಂದಾಗ ಏಕೆ, ಹೇಗೆ ಎಂದೇನೂ ವಿಚಾರಣೆ ಮಾಡದೇ ನೀನು ವಾಪಸ್ಸು ತಿರುಗಿಸಿ ಹೊಡೆದು ಬರಬೇಕಿತ್ತು ಎಂದು ಹೇಳುವ ಪೆÇೀಷಕರಿಂದ ಹಿಡಿದು, ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು ಎಂದು ಸಿನಿಮಾಗಳನ್ನು ತೆಗೆಯುವವರೆಗೂ ಇದಕ್ಕೆ ಪೋಷಣೆ ಇದೆ.

ಕಾಟ ಕೊಡುವ ಆಟ

ಕಾಟ ಕೊಡುವುದನ್ನೆಲ್ಲಾ ಆಟ ಎಂಬಂತೆ ಮಕ್ಕಳಲ್ಲಿ ರೂಢಿ ಇರುತ್ತದೆ. ಯಾರೋ ಗಂಭೀರವಾಗಿ ಓದುತ್ತಿದ್ದರೆ ಅಥವಾ ಇನ್ನೇನೋ ಮಾಡುತ್ತಿದ್ದರೆ, ಊದಿದ ಬಲೂನನ್ನೋ ಅಥವಾ ಕವರನ್ನೋ ಅವರ ಕಿವಿಯ ಬಳಿ ಡಬ್ಬೆಂದು ಒಡೆದು ಶಬ್ಧ ಮಾಡಿ ಹೆದರಿಸಿ ನಗುವುದು, ಕುರ್ಚಿಯ ಕೆಳಗೆ ಮೆಲ್ಲನೆ ಪಟಾಕಿ ಹಚ್ಚಿಡುವುದು, ಕತ್ತಲಲ್ಲಿ ಬಚ್ಚಿಟ್ಟುಕೊಂಡಿದ್ದು ಹೆದರಿಸುವುದು, ಯಾರಾದರೂ ಕುಳಿತುಕೊಳ್ಳಲು ಹೋದಾಗ ಕುರ್ಚಿಯನ್ನು ಹಿಂದಕ್ಕೆ ಎಳೆದು ಅವರು ಬೀಳುವಂತೆ ಮಾಡುವುದು, ಕುಳಿತುಕೊಳ್ಳುವಾಗ ಪೆನ್ಸಿಲ್, ಪೆನ್ ಅಥವಾ ಇನ್ನಾವುದಾದರೂ ಮೊನಚು ವಸ್ತುಗಳನ್ನು ಇಟ್ಟು ಅಂಡಿಗೆ ಚುಚ್ಚುವಂತೆ ಮಾಡುವುದು.

ಮರಳಿನಲ್ಲಿ ಹಳ್ಳ ತೋಡಿ ಅದರಲ್ಲಿ ಸೆಗಣಿಯನ್ನು ಹಾಕಿ, ಹಳ್ಳದ ಮೇಲೆ ಕಡ್ಡಿಗಳನ್ನಿಟ್ಟು ಕಾಗದ ಹರಡಿ, ಅದರ ಮೇಲೆ ಮರಳನ್ನು ಹರವಿ ತಿಳಿಯದೇ ಅದರಲ್ಲಿ ಕಾಲಿಟ್ಟು ಕುಸಿದು, ಸೆಗಣಿ ಮೆತ್ತಿಸಿಕೊಂಡು ಒದ್ದಾಡುವುದನ್ನು ನೋಡಿ ನಗಾಡುವುದು, ಕರೆನ್ಸಿ ನೋಟಿಗೆ ದಾರ ಕಟ್ಟಿ ರಸ್ತೆಯಲ್ಲಿ ಹಣ ಬಿದ್ದಿರುವಂತೆ ಮಾಡಿ, ತಮಗೆ ಹಣ ಸಿಕ್ಕಿತೆಂದು ಯಾರಾದರೂ ಅದನ್ನು ತೆಗೆದುಕೊಳ್ಳಲು ಬಂದಾಗ ಆ ನೋಟನ್ನು ಹಿಂದಕ್ಕೆ ಎಳೆದುಕೊಂಡು ನಗಾಡುವುದು; ಈ ಬಗೆಯ ಎಲ್ಲಾ ಚೇಷ್ಟೆಗಳೂ ಸ್ಯಾಡಿಸಂನ ಪ್ರಾರಂಭಿಕ ಹಂತಗಳೇ. ಸಾಲದಕ್ಕೆ ಟಾಂ ಅಂಡ್ ಜೆರ್ರಿಯಂತಹ ಕಾರ್ಟೂನ್ ಶೋಗಳೂ ಕೂಡಾ ಸ್ಯಾಡಿಸಂನ್ನು ಹಾಸ್ಯದ ಹೆಸರಿನಲ್ಲಿ ಪ್ರಚಾರ ಮಾಡುತ್ತವೆ.

ಒಬ್ಬರನ್ನು ಹೆದರಿಸುವ, ಗಾಬರಿಗೊಳಿಸುವ, ತೊಂದರೆಗೆ ಒಳಪಡಿಸಿ ನಗುವ ಯಾವುದೇ ಚೇಷ್ಟೆಗಳು ಸ್ಯಾಡಿಸಂನ ಲಕ್ಷಣಗಳೇ. ಅದರಲ್ಲಿ ಅನುಮಾನವೇ ಬೇಡ. ಅಷ್ಟಕ್ಕೆ ಅವನು ಸೈಕೋಪಾತ್ ಎಂದು ಆ ಹೊತ್ತಿಗೆ ನಿರ್ಧರಿಸದಿದ್ದರೂ, ಅದನ್ನು ಗಮನಕ್ಕೆ ತಂದು ಉಪಚರಿಸದಿದ್ದರೆ ಮುಂದೆ ಆಗುತ್ತಾನೆ.

ಇಂದಿನ ನರಳುವಿಕೆ ನಾಳಿನ ಸೇಡು

ಮನೆಗಳಲ್ಲಿ ಹಿರಿಯರಿಗೆ ಈ ಬಗೆಯ ಹಿಂಸಾರತಿಯ ಪ್ರವೃತ್ತಿ ಇದ್ದರಂತೂ, ಪ್ರಮಾಣ ಯಾವುದೇ ಆಗಿರಲಿ, ಮಕ್ಕಳಿಗೆ ಬಲು ಕಷ್ಟ. ತಾವು ಕೊಡುವ ಹಿಂಸೆಯನ್ನು ಸಹಿಸಿಕೊಳ್ಳಬೇಕು. ಅದನ್ನು ಹಿಂಸೆ ಎಂದು ಹೇಳಬಾರದು. ನಗುನಗುತ್ತಲೂ ಇರಬೇಕು. ಮನೆಯ ಇತರ ವ್ಯವಹಾರಗಳೆಲ್ಲಾ ಏನೂ ತೊಂದರೆಯೇ ಇಲ್ಲ ಎಂಬಂತೆ ನಡೆದುಕೊಂಡು ಹೋಗುತ್ತಿರಬೇಕು. ಪ್ರತಿಕ್ರಿಯೆ ಕೊಡಬಾರದು. ಇದು ಮಕ್ಕಳಿಗೆ ಉಸಿರುಗಟ್ಟಿದಂತೆ. ತಂದೆ ಅಥವಾ ತಾಯಿ ಯಾರೇ ಸ್ಯಾಡಿಸ್ಟ್‍ಗಳಾಗಿದ್ದರೆ ಮಕ್ಕಳು ಅಂತಹ ವಾತಾವರಣದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ.

“ಉಸಿರು ಬಿಡಬೇಡ. ಬಿಟ್ಟರೆ ಇನ್ನೂ ಎರಡು ಬಾರಿಸುತ್ತೇನೆ” ಎನ್ನುವ ತಾಯಿಯ ವರ್ತನೆಯನ್ನು ಮಾತೃಭಕ್ತಿಯಿಂದ ಹಿಂಸಾರತಿ ಎನ್ನಲು ಇಷ್ಟವಾಗದಿದ್ದರೂ ಅದು ಅದೇ ಆಗಿದೆ. ತಂದೆ ಮನೆಗೆ ಬಂದ ಕೂಡಲೇ ಎಲ್ಲರೂ ಘನಗಂಭೀರವಾಗಿ ಉಸಿರಿಲ್ಲದೇ ಗಪ್ ಚಿಪ್ಪೆಂದು ಕುಳಿತುಕೊಂಡು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗುವ ವಾತಾವರಣವು ಹಿಂಸೆಯದ್ದೇ ಹೊರತು ಆನಂದದ್ದೇನಲ್ಲ.

ಇಂದು ನರಳಿದವರು ನಾಳೆ ತಮಗೆ ಹಿಂಸೆ ಕೊಟ್ಟವರನ್ನು ಕ್ಷಮಿಸಿದರೆ ಸರಿ. ಒಂದು ವೇಳೆ ಇಂದು ಹಿಂಸೆಗೊಳಗಾದವರಲ್ಲಿ ಅದೇ ಸ್ಯಾಡಿಸಂ ರೂಪುಗೊಂಡರೆ ನಾಳೆ ಸೇಡು ತೀರಿಸಿಕೊಳ್ಳುವುದಂತೂ ಶತಸಿದ್ಧ.

ಮಕ್ಕಳು ತಾವು ದೈಹಿಕವಾಗಿ ಬಲಾಢ್ಯರಾದಾಗ, ಆರ್ಥಿಕವಾಗಿ ಸ್ವತಂತ್ರರಾದಾಗ ತಮಗೇ ಗೊತ್ತಿಲ್ಲದಂತೆ ತಮ್ಮ ತಂದೆ ಮತ್ತು ತಾಯಿಯ ವಿಷಯದಲ್ಲಿ ಸ್ಯಾಡಿಸ್ಟ್‍ಗಳಾಗಿರುತ್ತಾರೆ. ಇದೊಂದು ವಿಷವರ್ತುಲ. ಇದರಿಂದ ತಪ್ಪಿಸಿಕೊಳ್ಳಬೇಕೆಂದರೆ, ಈ ವರ್ತುಲ ಮುರಿಯಬೇಕೆಂದರೆ ಯಾರಿಗಾದರೂ ಅರಿವುಂಟಾಗಬೇಕು. ಇದರ ಬಗ್ಗೆ ಜಾಗೃತರಾಗಿ ಅದನ್ನು ಮೀರುವ ಪ್ರಯತ್ನ ಮಾಡಬೇಕು. ತಂದೆ ತಾಯಿ ಮತ್ತು ಶಿಕ್ಷಕರೇ ಎಚ್ಚೆತ್ತುಕೊಂಡರೆ ಇಂದಿನ ಮತ್ತು ಮುಂದಿನ ಪೀಳಿಗೆಗಳು ಸುರಕ್ಷಿತ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version