ಅಂತರಂಗ

ಅರಿಮೆಯ ಅರಿವಿರಲಿ-10 : ನಾನು ಎಂದರೆ ಯಾರು..?

Published

on

  • ಯೋಗೇಶ್ ಮಾಸ್ಟರ್

ನಮಸ್ಕಾರ” ಎಂದಿರಿ ಅವರಿಗೆ. ಅವರೂ “ನಮಸ್ಕಾರ” ಎಂದರು. ನಿಮ್ಮಿಬ್ಬರ ಭೇಟಿಯಾಗಿ ಹತ್ತು ನಿಮಿಷಗಳಾಗಿವೆ. ಹನ್ನೊಂದನೆಯ ನಿಮಿಷಕ್ಕೆ ಇನ್ಯಾರೋ ಮೂರನೆಯವರು ಅವರಿಗೆ ತಿಳಿದಿರುವವರೋ ಅಥವಾ ಸಾಂದರ್ಭಿಕವಾಗಿ ಬಂದರು. ಅವರು ನಿಮ್ಮನ್ನು ವರ್ಣಿಸಲು ಪ್ರಾರಂಭಿಸುತ್ತಾರೆ. ನಿಮ್ಮದೆಂತಹ ಉದಾತ್ತ ವ್ಯಕ್ತಿತ್ವ, ನೀವು ಎಷ್ಟು ಪ್ರತಿಭಾವಂತರು, ನೀವು ಅವರಿಗೆ ಈಗ ಸಿಕ್ಕಿದ್ದು ಎಷ್ಟು ಅದೃಷ್ಟ; ಇತ್ಯಾದಿ.

ನಿಮ್ಮ ಅಗಣಿತ ಗುಣನಾಮ ಬಹುಪರಾಕುಗಳನ್ನೆಲ್ಲಾ ಕೇಳಿ ನೀವೇನಾದರೂ ಎಣ್ಣೆಗೆ ಬಿದ್ದ ಪೂರಿಯಂತೆ ಉಬ್ಬಿದಿರೋ ನೀವೊಬ್ಬ ನಾರ್ಸಿಸಸ್. ನಿಮ್ಮನ್ನು ಪುಂಖಾನುಪುಂಖವಾಗಿ ಹೊಗಳುತ್ತಿರುವವರು ಕೂಡಾ ಒಬ್ಬ ನಾರ್ಸಿಸಸ್. ಬರಿಯ ಹತ್ತು ನಿಮಿಷದ ಪರಿಚಯದಲ್ಲಿ ನಿಮ್ಮ ಜೀವಮಾನದ ಸಾಧನೆಯನ್ನು ಜಗತ್ತಿಗೆ ಸಾರಲು ಪಣತೊಟ್ಟು ನಿಂತಿರುವ ಮತ್ತು ನಿಮಗೆ ಬೇಕು ಬೇಕಾದ ಎಲ್ಲಾ ಪ್ರಶಸ್ತಿಗಳನ್ನು ಅವರ ಪೆಟ್ಟಿಗೆಯಿಂದ ತೆಗೆತೆಗೆದು ಕೊಡುತ್ತಿದ್ದಾರೆಂದರೆ ಅವರೂ ಕೂಡಾ ಒಬ್ಬ ನಾರ್ಸಿಸಸ್.

ನೀವೂ ಕೂಡಾ ಇಂತೆಯೇ ಅವರನ್ನು ಪ್ರಶಂಸಿಸಬೇಕೆಂದು ಅವರು ನಿಮಗೆ ಲಂಚ ನೀಡುತ್ತಿರುವುದು. ನೀವು ಅವರು ಬಡಿಸಿದ ರಸದೌತಣ ಸವಿದು, ಗಪ್ಪನೆ ಸುಮ್ಮನಾಗಿಬಿಟ್ಟರೆ. ಅವರು ನಿಮ್ಮನ್ನು ಮತ್ತೆಂದೂ ಹೊಗಳಲಾರರು. ನೀವೂ ಹೊಗಳಿದರೋ ಅಲ್ಲಿಗೆ ಕೊಟ್ಟು ಪಡೆಯುವ ವ್ಯವಹಾರ ಸುಸೂತ್ರವಾಗಿ ನಡೆಯುತ್ತಲೇ ಇರುತ್ತದೆ. ಇದು ಕೆಲವು ಸಲ ವೇದಿಕೆಯ ಮೇಲೂ ನಡೆಯುತ್ತದೆ.

ನಮ್ಮ ಸಾಧನೆಯ ಪಟ್ಟಿ ಒಂದು ನಮ್ಮ ಕೈಯ ಒಂದು ಮೊಳದಷ್ಟಿರುತ್ತದೆ. ಆದರೆ ನಮ್ಮನ್ನು ಕರೆಸಿದವರು ಅದನ್ನು ದುಬೈನ ಬುರ್ಜಾ ಖಲೀಫ್ ಕಟ್ಟಡದಷ್ಟು ಎಳೆದಿರುತ್ತಾರೆ. ಅಲ್ಲಿ ನಮ್ಮನ್ನು ಕರೆಯಿಸಿದವರಿಗೆ ನಾರ್ಸಿಸಸ್ ಹಸಿವೆಗೆ ಎರಡು ಬಗೆಯ ಊಟ ಬೇಕು. ಒಂದು ನಾವು ಕರೆಯಿಸಿರುವ ವ್ಯಕ್ತಿ ಸಾಧಾರಣ ಅಲ್ಲ. ಅಸಮಾನ್ಯ. ಅವರು ಅಷ್ಟು ಅಗ್ರಗಣ್ಯ ಎಂಬ ಚಿತ್ರಣವನ್ನು ಸಭಿಕರಿಗೆ ನೀಡುವುದು ಒಂದಾದರೆ, ಅಷ್ಟು ಹೊಗಳಿಸಿ ಹೂಮಳೆಗರೆಸಿಕೊಂಡವರು ಅದಕ್ಕೆ ಧನ್ಯತಾಭಾವದಿಂದ ಮರುಹೊಗಳಿಕೆ ಕೊಡಬಾರದೇ? ಇಂತಹ ಕಾರ್ಯಕ್ರಮ ಮಾಡುತ್ತಿರುವ ಇವರು ಅದೆಷ್ಟು ಮಹೋನ್ನತ ವ್ಯಕ್ತಿ ಎಂದು ಬಿನ್ನವತ್ತಳೆ ನೀಡದೇ ಹಾಗೇ ಹೋಗುವುದು ನ್ಯಾಯವೇ? ಧರ್ಮವೇ? ಸರಿ, ಪೈಪೋಟಿಗಳ ಮೇಲೆ ಹೊಗಳಬೇಕಾಗುತ್ತದೆ.ಹೊಗಳಿಕೆಗಳ ಹೊನ್ನಶೂಲದಿಂದ ಪರಸ್ಪರ ಇರಿದಿರಿದುಕೊಳ್ಳುತ್ತಿರುವುದು ಆತ್ಮರತಿಯರಿಮೆಯ ಮತ್ತೊಂದು ಫಳಫಳಿಸುವ ಲಕ್ಷಣ.

ಹೊಗಳಿಕೆಗಳ ಸುರಿಮಳೆ ಸುರಿದಾಗ ನಾರ್ಸಿಸಸ್ ಅಲ್ಲದವರಾದರೆ ಸಂಕೋಚದಿಂದ ಹಿಡಿಮುದ್ದೆಯಾಗುತ್ತಾರೆ. ಸ್ಪಂದಿಸುವುದೂ ಕಷ್ಟವಾಗುತ್ತದೆ. ಅಂತವರು ಸುಮ್ಮನಿದ್ದರೆ ಒಪ್ಪಿಕೊಂಡಂತಹ ಕಷ್ಟ, ಅದನ್ನು ಅಲ್ಲಗಳೆದರೆ ಸಭಿಕರ ಮುಂದೆ ಆಯೋಜಕರನ್ನು ಮುಜುಗರಕ್ಕೆ ತಳ್ಳಿದಂತಾಗುವುದು. ಅದಕ್ಕೆ ಅಡ್ಡಗೋಡೆ ಮೇಲೆ ದೀಪವಿಟ್ಟುಬಿಡುತ್ತಾರೆ. “ಇವರು ನನ್ನ ಮೇಲಿನ ಅಭಿಮಾನದಿಂದ ಇಷ್ಟು ಹೇಳುತ್ತಿದ್ದಾರೆ. (ನಾನು ಅಷ್ಟು ಇಲ್ಲ) ಎಂದು ಬ್ರಾಕೆಟಲ್ಲಿ ಓದುವವರಿಗೆ ಅರ್ಥವಾಗುವಷ್ಟು ಒಂದಿಷ್ಟು ನಗೆ ನಕ್ಕು ವಿಷಯವನ್ನು ತೇಲಿಸಿಬಿಡುತ್ತಾರೆ.

ಕೆಲವು ಸಮಾರಂಭಗಳು ಆತ್ಮರತಿಯ ಅಮೋಘ ಮೆರವಣಿಗೆಯೇ ಆಗಿರುತ್ತದೆ. ನಾರ್ಸಿಸಮ್ ಬಗ್ಗೆ ತಿಳಿದಿವರಿಗೆ ಅದು ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಗಾದೆಯಂತೆ. ಕೆಲವರೆಲ್ಲಾ ಆ ಎಲ್ಲಾ ಹೊಗಳಿಗೆಗಳನ್ನು ಸ್ವೀಕರಿಸುತ್ತಾರೆ. ಹೌದು, ನಾನಿದಕ್ಕೆ ಅರ್ಹ ಎಂದು ಭಾವಿಸಿರುತ್ತಾರೆ. ಇನ್ನೂ ಸರಿಯಾಗಿ ಮತ್ತು ಪೂರ್ತಿಯಾಗಿ ಅವರು ಹೇಳಿಲ್ಲ ಎಂದೂ ಸ್ವಲ್ಪ ನಿರಾಶೆಯಾಗುತ್ತದೆ. ಇವರು ನಾರ್ಸಿಸಮ್ ಪಂಥದವರು.
ನೀವು ಅವರಿಗೆ ನಿರಾಶೆ ಮಾಡಿದಿರೋ, ಉಹುಂ, ಇನ್ನೊಂದು ಸಲ ಅವರು ನಿಮ್ಮನ್ನು ಅವರು ಲಕ್ಷಿಸುವುದಿಲ್ಲ. ನೀವು ಅವರನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ, ಅತಿಥಿಯಾಗಿ ಕರೆದು ಉಪೇಕ್ಷೆ ಮಾಡಿಬಿಡುತ್ತೀರಿ ಎಂದು ನಿಮ್ಮ ಕಡೆ ಹೊರಳುವುದಿಲ್ಲ.

ಹೊಗಳಿಕೆಯೇ ಆಹಾರ

ಆತ್ಮರತಿಯ ಸುಖಿಗಳು ತಮ್ಮನ್ನು ಭೇಟಿ ಮಾಡಿದವರಿಗೆ ತಮ್ಮ ಜೀವನದ ಮಹತ್ವದ ಅನೇಕಾನೇಕ ಘಟನೆಗಳನ್ನು ಹೇಳುತ್ತಿರುತ್ತಾರೆ. ಅದು ಆ ಸಂದರ್ಭಕ್ಕೆ ಬೇಕಿರಲಿ, ಬೇಡದಿರಲಿ. ಹೇಳದೇ ಬಿಡುವುದಿಲ್ಲ. ನೀವು ಕತೆ ಕೇಳಿದಂತೆ ಕೇಳಿ ಸುಮ್ಮನಾಗಿಬಿಟ್ಟರೆ ಅವರಿಗೆ ಬಹಳ ನಿರಾಶೆಯಾಗುತ್ತದೆ. ಅವರು ಅಷ್ಟೂ ಹೊತ್ತು ಹೇಳಿದ್ದೇಕೆಂದರೆ, ಆ ಗುಣಗಳನ್ನೆಲ್ಲಾ ನೀವು ಗುರುತಿಸಿ, ಹೆಕ್ಕಿ, ಒಂದಿಷ್ಟು ಒಳ್ಳೆಯ ಮಾತುಗಳನ್ನಾಡಬೇಕು ಎಂದು. ಅವು ಕಷ್ಟದ ಮತ್ತು ಸಾಹಸದ ಕೆಲಸಗಳಾಗಿರಬಹುದು.

ಯಾರಿಗೋ ಉಪಕಾರ ಮಾಡಿದ್ದಾಗಿರಬಹುದು.ಯಾವುದೋ ಸನ್ನಿವೇಶದಲ್ಲಿ ಹೆಣಗಾಡಿದ್ದೋ, ಹೋರಾಡಿದ್ದೋ ಆಗಿರಬಹುದು.
ಅವರಿಗೆ ಪ್ರಿಯವಾಗುವ ಶಬ್ದಗಳೇನೆಂದರೆ,
“ಅಬ್ಬಾ, ನೀವು ಅದು ಹೇಗೆ ಆ ಸಾಹಸ ಮಾಡಿದಿರಿ? ನೀವಾಗಿದ್ದಕ್ಕೆ ಮಾಡಿದಿರಿ. ಬೇರೆಯವರಾಗಿದ್ದರೆ ಓಡಿ ಹೋಗಿಬಿಡುತ್ತಿದ್ದರು. ಸೋತು ಸುಣ್ಣವಾಗಿಬಿಡುತ್ತಿದ್ದರು.”

“ಈಗಿನ ಕಾಲದಲ್ಲಿ ಯಾರು ಆ ರೀತಿ ನೆರವಾಗುತ್ತಾರೆ. ಎಲ್ಲರೂ ಅವರವರದು ನೋಡಿಕೊಳ್ಳುತ್ತಾರೆ. ನೀವಾಗಿದ್ದಕ್ಕೆ ಅಷ್ಟು ಉಪಕಾರ ಮಾಡಿದ್ದೀರಿ. ನಿಜವಾಗಿಯೂ ನೀವು ಗ್ರೇಟ್.” “ಪ್ಚ್, (ಅವರನ್ನೇ ದಿಟ್ಟಿಸಿ ನೋಡುತ್ತಾ) ನಂಬಕ್ಕೇ ಆಗಲ್ಲ. ನೀವು ಹೇಗೆ ಇವೆಲ್ಲಾ ಮಾಡಿದಿರಿ? ನನಗೆ ನಿಮ್ಮ ಜೊತೆ ಹೀಗೆ ಇರೋದೇ ಹೆಮ್ಮೆ.”

ಆಗ ಅವರ ಮುಖ ನೋಡಿ. ಕಣ್ಣುಗಳಲ್ಲಿ ಹೊಳಪಿರುತ್ತದೆ. ಮುಖದ ಪೂರ್ತಿ ನಗು ತುಂಬಿರುತ್ತದೆ. ವೆಂಕಟೇಶ್ವರ ಮಹಾತ್ಮ್ಯೆ ಸಿನಿಮಾದಲ್ಲಿ ಪ್ರತ್ಯಕ್ಷವಾದ ದೇವರು ನಸುನಗುತ್ತಾ ಭಕ್ತನ ಸ್ತುತಿಗೀತೆಗಳನ್ನು ಕೇಳುತ್ತಾ ತಲೆಯಾಡಿಸುತ್ತಿರುವಂತೆ ಕಾಣುತ್ತದೆ.
ಆತ್ಮರತಿಯ ರತಿಮನ್ಮಥರ ಸಂಭಾಷಣೆಯಲ್ಲಿ ಸಾಮಾನ್ಯವಾಗಿ ಅವರು ಮಾಡಿರುವ ಸಾಧನೆ ಅಥವಾ ಪಟ್ಟಿರುವ ವೇದನೆಗಳಿಂದ ಗೆದ್ದಿರಿವುದ ನಿವೇದನೆ. ಇತರರಿಗಿಂತ ತಾವು ವಿಶೇಷವೆಂದು ತಮ್ಮ ಕೇಳುಗ ಕುರಿಗಳಿಗೆ ಅರ್ಥ ಮಾಡಿಸಬೇಕಾಗಿರುವುದೇ ಅವರ ಗುರಿ.

ಅವರ ಮಾತುಗಳನ್ನು ಮುಂದಿರುವವರು ಕೇಳುತ್ತಿದ್ದಾರೋ ಇಲ್ಲವೋ ಎಂದು ಯೋಚಿಸುವುದೇ ಇಲ್ಲ. ತಮ್ಮ ಮುಂದಿರುವವರು ತಾವು ಕೇಳುತ್ತಿರುವ ಸಂಕೇತವಾಗಿ ಪ್ರಶ್ನೆಗಳನ್ನು ಕೇಳದಿದ್ದರೂ, ಅನುಮಾನಗಳನ್ನು ಮುಂದಿಟ್ಟು ಬಗೆಹರಿಸಿಕೊಳ್ಳಲು ಯತ್ನಿಸದಿದ್ದರೂ ಇವರು ಹೇಳುತ್ತಲೇ ಇರುತ್ತಾರೆ. ಅವರ ಹಸಿವಿಗೆ ಕೇಳುಗರ ಸಕಾರಾತ್ಮಕ ಪ್ರತಿಕ್ರಿಯೆಯೇ ಆಹಾರ.

ಅಪಾರ ಆತ್ಮವಿಶ್ವಾಸದ ವ್ಯಕ್ತಿಯಂತೆ ಕಾಣುವ ಅವರು ಹಾಗೆಯೇ ವರ್ತಿಸುತ್ತಾರೆ. ಅವರ ಆತ್ಮರತಿಗೆ ಸರಸವಾಗಿ ಉಣಬಡಿಸದ ಅರಸಿಕರನ್ನು ಅವರು ಇಷ್ಟಪಡುವುದಿಲ್ಲ. ದೂರಲಿ, ದೂರದಿರಲಿ ಖಂಡಿತವಾಗಿ ದೂರೀಕರಿಸುತ್ತಾರೆ. ಅವರ ಸುತ್ತ ಹೊಗಳುಭಟರಿರಬೇಕು. ಅವರು ಹೇಳಿದ್ದಕ್ಕೆಲ್ಲಾ, “ಪ್ಚ, ಅಮೋಘ! ವಿಸ್ಮಯ! ಅದ್ಭುತ!” ಎಂದು ಬೆರಗಾಗುತ್ತಿರಬೇಕು.

ಏಳು ಮಹಾಪಾತಕಗಳು

ನಾರ್ಸಿಸಮ್‍ನ ಏಳು ಮಹಾಪಾತಕಗಳನ್ನು ಮನೋವಿಜ್ಞಾನಿಗಳು ಗುರುತಿಸುತ್ತಾರೆ.

ನಾಚಿಗೇಡಿತನ: ಸಾಮಾನ್ಯವಾಗಿ ಆತ್ಮರತಿಯ ವ್ಯಕ್ತಿಗಳು ಮುಕ್ತವಾಗಿ ಮತ್ತು ಅಭಿಮಾನದಿಂದ ನಾಚಿಗೇಡಿಯಾಗಿರುತ್ತಾರೆ. ನಾನೂಂದ್ರೆ ಏನು? ನಾನೂಂದ್ರೆ ಯಾರು? ನಾನು ಮನಸ್ಸು ಮಾಡಿದರೆ ಏನು ಮಾಡ್ತೇನೆ ಗೊತ್ತಾ?; ಈ ವಾಕ್ಯಗಳೆಲ್ಲಾ ಅವರವೇ. ಅವರು ತಾವು ಯಾವಾಗಲೂ ವಿಮರ್ಶಾತೀತವಾಗಿರಲು ಬಯಸುತ್ತಾರೆ. ತನ್ನಲ್ಲಿ ವಿಮರ್ಶೆ ಮಾಡಲೇನಿದೆ? ನನ್ನ ಟೀಕಿಸುವವನು ಅಥವಾ ವಿಮರ್ಶಿಸುವವನು ಖಂಡನೆ ಅರ್ಹನೆಂದು ಅವರ ಅಚಲ ನಂಬಿಕೆ. ತಾವು ಶ್ರೀಮಾನ್ ಅಥವಾ ಶ್ರೀಮತಿ ಪರ್ಫೆಕ್ಟ್. ಒಂದು ವೇಳೆ ಅವರ ಯಾವುದಾದರೂ ಕೆಲಸ ಖಂಡಿತವಾಗಿ ಖಂಡನೀಯ ಮತ್ತು ತಪ್ಪು ಎಂದು ನಿರೂಪಿಸಿಬಿಟ್ಟಿದ್ದೇ ಆದರೂ, ಅವರು ಹೇಳುವುದೇನೆಂದರೆ, “ಅಕಸ್ಮಾತ್, ಈ ಕೆಲಸ ತಪ್ಪಾಗಿರಬಹುದು.

ಆದರೆ ನನ್ನ ಉದ್ದೇಶವು ಉತ್ತಮವಾಗಿತ್ತು. ನಾನು ಒಳ್ಳೆಯ ಉದ್ದೇಶದಿಂದ ಮಾಡಿದ್ದು” ಎಂದು ಹೇಳುತ್ತಾರೆಯೇ ಹೊರತು, ತಾವು ಅಪರಾಧ ಪ್ರಜ್ಞೆಯಿಂದ ನರಳುವುದೂ ಇಲ್ಲ. ತಾವು ತಪ್ಪಿತಸ್ಥರೆಂದು ಒಪ್ಪಿಕೊಳ್ಳುವುದೂ ಇಲ್ಲ.

ಅಸಾಧ್ಯ ಸಾಧಕ: ನಾರ್ಸಿಸಿಸ್ಟ್‍ಗಳು ತಮ್ಮನ್ನು ತಾವು ಪರ್ಫೆಕ್ಟ್ ಎಂದು ನಂಬಿರುವ ಕಾರಣದಿಂದ ಇತರರಿಗೆ ಸಾಧ್ಯವಾಗದ ಅದ್ಭುತಗಳನ್ನು ತಾವು ಸೃಷ್ಟಿಸುತ್ತೇವೆಂದು ನಂಬಿರುತ್ತಾರೆ. ಇತರರನ್ನು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡುತ್ತಾರೆಯೇ ಹೊರತು ತಮ್ಮ ಆತ್ಮಚಿತ್ರಣವನ್ನು ಕಿಂಚಿತ್ತೂ ಮುಕ್ಕಾಗಿಸಿಕೊಳ್ಳರು.

ಸೊಕ್ಕು: ಯಾರಾದರೂ ಅವರನ್ನು ಖಂಡಿಸಿದರೆ, ಟೀಕಿಸಿದರೆ ಅವರ ಉಸಿರಾಟ ವೇಗವನ್ನು ಪಡೆಯುತ್ತದೆ. ಸೊಕ್ಕು ಉಕ್ಕೇರುತ್ತದೆ. ಆ ಟೀಕೆಗಳನ್ನು ತುಂಬಾ ವ್ಯಕ್ತಿಗತವಾಗಿ ಅದನ್ನು ತೆಗೆದುಕೊಳ್ಳುವುದು ಮಾತ್ರವಲ್ಲದೇ ಇತರರಿಗೆ ಅವರ ಬಗ್ಗೆ ನಕಾರಾತ್ಮಕವಾಗಿ ಹೇಳುತ್ತಿರುತ್ತಾರೆ. ಅವರ ಚಾರಿತ್ರ್ಯವಧೆ ಮಾಡಲು ಹೇಸುವುದಿಲ್ಲ. ಅವರಿಗೆಂತಾದರೂ ಸಂಕಟ ಬಂದರೆ “ಅವರಿಗೆ ಹಾಗೇ ಆಗಬೇಕು” ಎಂದು ತೃಪ್ತಿಪಡುವ ಪ್ರಯತ್ನ ಮಾಡುತ್ತಾರೆ.

ಅಸೂಯೆ: ಇತರರ ಸಾಧನೆಗಳನ್ನು ಪ್ರಶಂಸಿಸುವುದು ಅವರಿಗೆ ಎಂದೂ ಆಗದು. ಇತರರೇನಾದರೂ ಸಾಧನೆ ಮಾಡಿದ್ದಾರೆಂದರೆ ಅವರ್ಯಾವುದೋ ಅಡ್ಡದಾರಿಯಿಂದ ಮೇಲೆದ್ದು ಬಂದಿರಬೇಕು, ಯಾವುದಾದರೂ ವಶೀಲಿ, ಲಂಚ ರುಶುವತ್ತುಗಳ ಪ್ರಭಾವವಿರಬೇಕು, ಅವರಿಗೇನು ಅವರಪ್ಪನ ಹತ್ತಿರ ದುಡ್ದು ಬೇಕಾದಷ್ಟಿದೆ ಮಾಡುತ್ತಾನೆ; ಹೀಗೆ, ಏನಾದರೊಂದು ಹೇಳಿಯೇ ತೀರುತ್ತಾರೆಯೇ ಹೊರತು ಮೆಚ್ಚುವುದಂತೂ ಇಲ್ಲ. ಅದ್ಯಾವ ಸೀಮೆ ಸಾಧನೆ ಎಂಬ ಉಪೇಕ್ಷೆಯು ಅಸೂಯೆಯ ಬಿಂಬವೇ ಹೊರತು ಮತ್ತೇನಿಲ್ಲ.

ಪರಾಕುಪ್ರಿಯ: ನಾರ್ಸಿಸಿಸ್ಟ್‍ಗಳು ಸಕಾರಣಕ್ಕೆ ಹೊರತಾದ ಬಿರುದುಬಾವಲಿಗಳನ್ನು ಹೊಂದುವುದಕ್ಕೆ ಇಷ್ಟಪಡುತ್ತಾರೆ. ಪಕ್ಕದ ರಸ್ತೆಯವರಿಗೆ ಅವರ ಬಗ್ಗೆ ತಿಳಿದಿರದಿದ್ದರೂ ತಾವು ಜಗದ್ವಿಖ್ಯಾತರು ಎಂದು ಅನ್ನಿಸಿಕೊಳ್ಳಲು ಆಶಿಸುತ್ತಾರೆ. ಅದನ್ನು ಉಳಿಸಿಕೊಳ್ಳಲು ಸದಾ ಹೆಣಗಾಡುತ್ತಿರುತ್ತಾರೆ. ಅದನ್ನು ಒಪ್ಪಿಕೊಳ್ಳದವರ ಬಗ್ಗೆ ಬಹಳ ಕೋಪವಿರುತ್ತದೆ.

ಪಟಾಲಂ ಪಡೆ: ತಮ್ಮ ಸುತ್ತಲೂ ಹೇಳಿದಂತೆ ಕೇಳಿಕೊಂಡಿರುವ ಒಂದಷ್ಟು ಜನರನ್ನು ಹೊಂದಿರುವಂತಹ ಮನಸ್ಥಿತಿ ಬಹಳ ಸಾಧಾರಣ. ಆ ಜನರು ಇವರಿಗೆ ಪರಾಕು ಹೇಳಲು ಮಾತ್ರವಲ್ಲದೇ, ಇವರ ಶ್ರೇಷ್ಟತೆ ಮತ್ತು ಹೆಗ್ಗಳಿಕೆಯ ಬಗ್ಗೆ ಜನಗಳಲ್ಲಿ ಜಾಗೃತಿಯನ್ನು ಉಂಟು ಮಾಡಬೇಕೆಂದು ಇವರ ಅಭಿಲಾಷೆ. ಸಾಧಾರಣರಲ್ಲದೇ ಇವರು ಮಹಾನ್ ಸಾಧಕರಾಗಿದ್ದರೂ, ಪ್ರಖ್ಯಾತರಾಗಿದ್ದರೂ ಇಂತಹ ಮನಸ್ಥಿತಿಯಲ್ಲೇ ಇರುತ್ತಾರೆ.

ಅವರೊಬ್ಬರು ಈ ನಾಡಿನ ಬಹುಪ್ರಖ್ಯಾತರು. ನಾನೂ ಮತ್ತು ಕೆಲವು ಯುವನಿರ್ದೇಶಕರ ತಂಡಕ್ಕೆ ಅವರು ಗೆಳೆಯರು. ನಾವೆಲ್ಲರೂ ಕೂಡಿ ಒಂದು ಸಂಸ್ಥೆಗೆ ಔಪಚಾರಿಕ ಭೇಟಿ ನೀಡಬೇಕಿತ್ತು. ಪ್ರಖ್ಯಾತರ ಗೆಳೆಯರೊಬ್ಬರೂ ನಮ್ಮೊಂದಿಗೆ ಬಂದಿದ್ದರು.

ಈ ನಮ್ಮ ತಂಡ ಸಾಮಾನ್ಯವಾಗಿ ಮಾತಾಡಿಕೊಂಡು ಬರುತ್ತಿದ್ದೆವು. ಪ್ರಖ್ಯಾತರ ಗೆಳೆಯ ನಮ್ಮ ತಂಡದ ಬಳಿಗೆ ಬಂದು ಹೇಳಿದರು, “ನೀವು ಮೊದಲು ಒಳಗೆ ಬೇಗ ಬೇಗ ಹೋಗಿ. ಅಲ್ಲಿ ಇರುವವರಿಗೆ ಹೇಳಿ, ‘ಸಾರ್ ಬಂದರು, ಸಾರ್ ಬಂದರು’ ಅಂತ. ಅಲರ್ಟ್ ಆಗಲಿ” ಎಂದು.

ಪ್ರಖ್ಯಾತರ ಮುಖವನ್ನು ನೋಡಿದರೆ ಅವರು ಸಹಜವಾಗಿ ಅಲರ್ಟ್ ಆಗುತ್ತಾರೆ. ಮೇಲೆದ್ದು ಬಂದು ಗೌರವಿಸುತ್ತಾರೆ, ಸ್ವಾಗತಿಸುತ್ತಾರೆ. ನಾವು ಹೋಗಿ ‘ಬಂದ್ರು ಬಂದ್ರು’ ಅಂತ ಹೇಳೋದೇನಿದೇಂತ ನಮ್ಮ ಧೋರಣೆ. ನಾವು ಅದಕ್ಕೆ ಜಾಣ ಮುಗ್ಧರಾಗಿ ‘ನೀವು ಹೇಳುವುದು ಹೇಗೆ ಮಾಡುವುದು ಎಂದು ತಿಳಿಯಲಿಲ್ಲ’ ಎಂಬಂತೆ ಪಿಳಪಿಳನೆ ನೋಡುತ್ತಿದ್ದೆವು. ಆಗ ನಗಲೂ ಆಗುತ್ತಿರಲಿಲ್ಲ. ನಾವುಗಳು ಆಮೇಲೆ ಮನಸೋಯಿಚ್ಚೆ ನಗಾಡಿಕೊಂಡೆವು. ಬಹುಶಃ ನಮ್ಮ ಹತ್ತಿರ ಮಾಡಿಕೊಂಡ ತಮ್ಮ ಗೆಳೆಯರ ಅಹವಾಲು ಆ ಪ್ರಖ್ಯಾತರಿಗೆ ತಿಳಿದಿರಲಿಲ್ಲ ಎನಿಸುತ್ತದೆ.

ಇರಲಿ, ಇಂತಹ ಪಟಾಲಂ ಪಡೆಯನ್ನು ಹೊಂದಿರುವಾಸೆ ಆತ್ಮರತಿಸಖರದು. ಅವರನ್ನು ಶೋಷಿಸುತ್ತಿದ್ದೇವೆ ಎಂಬ ಅರಿವೂ ಅವರಿಗಿರುವುದಿಲ್ಲ. ತಮಗಾಗಿ ಅವರು ಹಾಗೆ ಮಾಡಬೇಕಾಗಿರುವುದು ಅವರ ಧರ್ಮ ಎಂದು ಅವರು ಭಾವಿಸಿರುತ್ತಾರೆ.

ಸೀಮೆಯೊಳಗೆ ಬಂಧಿತರು: ಬಹಳ ಶೋಚನೀಯ ಸಂಗತಿಯೆಂದರೆ, ತಾವು ತಮ್ಮ ಸುತ್ತಲೂ ಒಂದು ಎಲ್ಲೆಯನ್ನು ಗೀಚಿಕೊಂಡು ತಮ್ಮನ್ನು ಸಂಕುಚಿತಗೊಳಿಸಿಕೊಳ್ಳುತ್ತಿದ್ದೇವೆ ಎಂಬ ಅರಿವು ಅವರಿಗೆ ಇರದೇ ಹೋಗುವುದು. ಅವರು ತಮ್ಮ ಮತ್ತು ಇತರರ ನಡುವೆ ಕಂದಕಗಳನ್ನು ತೋಡಿಕೊಳ್ಳುತ್ತಿದ್ದೇವೆ ಎಂದು ಅವರ ಅರಿವಿಗೆ ಬಾರದೇ ಹೋಗುವುದು. ಒಂದು ವೇಳೆ ಅವರು ಖ್ಯಾತನಾಮರಾಗಿದ್ದರೆ, ಉನ್ನತ ಅಧಿಕಾರಸ್ಥರಾಗಿದ್ದರೆ ಅನಿವಾರ್ಯವಾಗಿ ಅವರಿಂದ ಕೆಲಸಗಳಾಗಬೇಕಾದವರು ತಗ್ಗುವ ಬಗ್ಗುವ ನಟನೆ ಮಾಡುತ್ತಿರುತ್ತಾರೆ.

ಕೊನೆಗೊಮ್ಮೆ ಅವರಿಂದ ಏನೂ ಕೆಲಸ ಆಗುವ ಅಗತ್ಯ ಇಲ್ಲದೇ ಹೋದಾಗ ಅವರನ್ನು ತಟ್ಟನೆ ನಿರ್ಲಕ್ಷಿಸಿಬಿಡುತ್ತಾರೆ. ಸಂಪೂರ್ಣ ಬಿಟ್ಟುಬಿಡುತ್ತಾರೆ. ತಮ್ಮ ಸುತ್ತಲೂ ವಂದಿಮಾಗದರನ್ನು, ಪಟಾಲಮನ್ನು ಕಟ್ಟಿಕೊಂಡು ತಿರುಗಾಡುತ್ತಿದ್ದವರಿಗೆ ಒಮ್ಮಿಂದೊಮ್ಮೆಲೆ ಆಘಾತವಾಗುತ್ತದೆ. ತಮ್ಮ ಅಹಂಕಾರಕ್ಕೆ ಆಹಾರ ಸಿಗದೇ ಮಾನಸಿಕವಾಗಿ ಕೃಶವಾಗುತ್ತಾರೆ. ಖಿನ್ನತೆಗೆ ಜಾರುತ್ತಾರೆ. ಅಂತಹ ಖಿನ್ನತೆಗಳಿಂದ ಹೊರಬರಲಾಗದೇ ಅನೇಕ ರೀತಿಯ ವ್ಯಸನಗಳಿಗೆ ತುತ್ತಾಗುತ್ತಾರೆ. ಕೆಲವೊಮ್ಮೆ ಆತ್ಮಹತ್ಯೆಗೆ ಶರಣಾಗಲೂಬಹುದು.

ಈ ಮಾನಸಿಕ ಸಮಸ್ಯೆ ಬಹಳಷ್ಟು ಜನರಲ್ಲಿರುವುದರಿಂದ ವ್ಯಕ್ತಿಗತವಾಗಿಯೂ ಮತ್ತು ಸಾಮಾಜಿಕವಾಗಿಯೂ ಬಹಳ ಸಂಘರ್ಷಗಳು ಮತ್ತು ಸಮಸ್ಯೆಗಳು ಉಂಟಾಗುತ್ತಿರುತ್ತವೆ. ಇದನ್ನು ಓದಿದಾಗ ನನ್ನಲ್ಲೂ ಇಂತಹ ಸಮಸ್ಯೆಯೊಂದಿದೆ ಎಂದು ಯಾರಿಗಾದರೂ ಅನ್ನಿಸಿದರೆ, ಅದು ಬಹಳ ಒಳ್ಳೆಯ ಸೂಚನೆ. ಏಕೆಂದರೆ, ಯಾವುದೇ ಮಾನಸಿಕ ಸಮಸ್ಯೆಯ ಚಿಕಿತ್ಸೆಯ ಕಾರ್ಯ ಪ್ರಾರಂಭವಾಗುವುದು ‘ನನಗೆ ಈ ಸಮಸ್ಯೆ ಇದೆ’ ಅರಿವಿನಿಂದ.

ಅದೇ ಪರಿಹಾರಕ್ಕೆ ಮೊದಲ ಹೆಜ್ಜೆ. ಸಾಮಾನ್ಯವಾಗಿ ಮಾನಸಿಕ ಸಮಸ್ಯೆಯು ತೀವ್ರವಾಗಿರುವವರು ತಮಗೆ ಮಾನಸಿಕ ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳುವುದೇ ಇಲ್ಲ. ಇತರರಲ್ಲಿ ಅದು ಇದೆ ಎಂದು ಗುರುತಿಸಲು ಯತ್ನಿಸುತ್ತಿರುತ್ತಾರೆ. ತಾವು ಮಾತ್ರ ಸಂಪೂರ್ಣ ಆರೋಗ್ಯದಿಂದ ಇದ್ದೇವೆ ಎಂದುಕೊಂಡಿರುತ್ತಾರೆ. ಮನೋರೋಗಕ್ಕೆ ಮದ್ದಿಲ್ಲ ಎಂಬ ಗಾದೆಯನ್ನು ಒಪ್ಪುವುದು ಬೇಡ.ಮನೋರೋಗಕ್ಕೆ ಮದ್ದಿದೆ ಎಂಬ ಭರವಸೆ ಮತ್ತು ವಿಶ್ವಾಸದೊಡನೆ ಆತ್ಮವಿಮರ್ಶೆಗೊಳಗಾಗುವುದು ಈ ಸಮಸ್ಯೆಗೆ ಪರಿಹಾರಕ್ಕೆ ದಾರಿ ಕಾಣುವ ಪ್ರಾರಂಭ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version