ಭಾವ ಭೈರಾಗಿ
ಕವಿತೆ | ಕಿಚನ್ ವಕ್ತ್
- ಸಂಘಮಿತ್ರೆ ನಾಗರಘಟ್ಟ
ಎದ್ದ ತಕ್ಷಣ
ಎದ್ದೋ ಬಿದ್ದೋ ಎಂದು
ಫ್ರೆಶ್ ಆಗಲು ಬಾತ್ ರೂಂ
ನತ್ತ ಹೋಗುವುದೇ ತಡ
ಅಲ್ಲಿನ ಪುಟ್ಟ ಕನ್ನಡಿಯಲ್ಲಿ
ಹಿಡಿ ಮಾತ್ರದ ನನ್ನ ಮುಖ
ಥೇಟ್ ಆಟದ ರೋಬೋಟ್
ನಂತೆಯೇ ಕಾಣುತ್ತಿತ್ತು
ಒಳಗಿನಿಂದ ಕದ ತೆಗೆದು
ಆಚೆ ಹೆಜ್ಜೆಯಿಡುವ ಹೊತ್ತಿಗಾಗಲೇ
ಕಿಚನ್ ನಲ್ಲಿ ಆರ್ಡರ್ ಸಿದ್ಧ
ಬಿಸಿ ನೀರು ಒಬ್ಬರಿಗಾದರೆ
ಸ್ಟ್ರಾಂಗ್ ಕಾಫಿ ಇನ್ನೊಬ್ಬರಿಗೆ
ಅದನ್ನು ಕೊಡುವ ಗ್ಲಾಸ್
ಗಾಜಿನದೋ ಸ್ಟೀಲ್ ನದೋ
ಎಂಬ ಗೊಂದಲದಲ್ಲೇ
ಸ್ಟವ್ ಮೇಲಿನ ಹಾಲು
ಉಕ್ಕಿ ತನ್ನ ಹಿತ ಶತ್ರು
ಗ್ಯಾಸ್ ಟ್ಯುಬ್ ನತ್ತ ಹರಿಯುತ್ತಿತ್ತು
ಅದನ್ನು ಉಜ್ಜಿ ಕ್ಲೀನ್ ಮಾಡಿ
ಸಿಂಕ್ ನತ್ತ ನೋಡುತ್ತಿದ್ದಂತೆ
ಎಲ್ಲಾ ಪಾತ್ರೆ ಸೌಟು ಬಾಣಲೆಯಲ್ಲಿ
ತೇಲುತ್ತಿದ್ದ ಅನ್ನದ ಅಗುಳು
ಇನ್ನು ಅರೆಬರೆ ಖಾಲಿ ಆಗಿದ್ದ
ಹೊಟ್ಟೆ ಒಳಗಿನ ಕಲ್ಮಶದಂತಿತ್ತು
ರಾತ್ರಿ ,ಹಗಲು ಮಾಡುವ
ತಿಂಡಿ -ಕೆಲಸಗಳ ಚಿಂತೆಯಲ್ಲೇ
ನಿದ್ದೆ ಹೀರಿಕೊಂಡು ಮುಖ
ಹುಳಿ ಹಿಂಡಿದಂತಾಗಿತ್ತು….
ಇನ್ನೇನು ಎಲ್ಲಾ ಕೆಲಸ ಮುಗಿಸಿ
ಸೋಫಾ ದಲ್ಲಿ ಕುಳಿತು
ಸುದ್ದಿ ಫೀಡ್ ನೋಡುತ್ತಿದ್ದೆ
ಅಕ್ಕಿ ರಾಗಿಯ ಬೆಲೆ ಪಟ್ಟಿ ಏರಿತ್ತು
ಯಾಕೋ ಈಗಲೂ ದಾಸರಿರಬೇಕಿತ್ತು
ಸಮ ತೂಕ ಮಾಡಿ ಎರಡನ್ನೂ ಅಳೆದು
ನಮ್ಮವರ ಹೊಟ್ಟೆಯನ್ನೂ ತುಂಬಿಸಬೇಕೆನಿಸಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243