ದಿನದ ಸುದ್ದಿ
ಕೊಡಗು ಪ್ರವಾಹ : ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಂತ್ರಸ್ತರಿಗೆ ಹೊಸ ವಸ್ತ್ರ ವಿತರಣೆ
ಸುದ್ದಿದಿನ,ಮಡಿಕೇರಿ : ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ನಿರಾಶ್ರಿತರಿಗೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಬುಧವಾರ ನಗರದ ಮೈತ್ರಿ ಭವನದಲ್ಲಿನ ಸಂತ್ರಸ್ತ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ ಮಹೇಶ್ ಅವರು ಹೊಸ ವಸ್ತ್ರ ವಿತರಣೆ ವಿತರಿಸಿದರು.
ಪುರುಷರಿಗೆ ಪ್ಯಾಂಟ್, ಶರ್ಟ್, ಮಹಿಳೆಯರಿಗೆ ಸೀರೆ ಹಾಗೂ ಮಕ್ಕಳಿಗೆ ಬಟ್ಟೆ ಸೇರಿದಂತೆ ಎಲ್ಲಾ ಸಂತ್ರಸ್ತರಿಗೂ ಹೊಸ ಹೊಸ ವಸ್ತ್ರ ನೀಡಿದರು. ಸಂತ್ರಸ್ತರೊಂದಿಗೆ ಊಟ ಮಾಡಿದ ಸಚಿವರು ಅವರ ಯೋಗ ಕ್ಷೇಮ ವಿಚಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಜನರು ಸಂತೋಷದಿಂದ ಗೌರಿ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದಾಗಿ ಮನೆ ಮಠಗಳನ್ನು ಕಳೆದುಕೊಂಡು ಜನರು ನಿರಾಶ್ರಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಸಂತ್ರಸ್ತರ ಜೊತೆಯಲ್ಲಿದ್ದು, ಸರ್ಕಾರದ ವತಿಯಿಂದ ನೆರವನ್ನು ನೀಡಲಾಗುತ್ತಿದೆ. ಅವರಿಗೆ ಶಾಶ್ವತವಾಗಿ ಪರಿಹಾರ ಕಲ್ಪಿಸುವವರೆಗೂ ಜಿಲ್ಲೆಯ ಸಂತ್ರಸ್ತರೊಂದಿಗೆ ಸರ್ಕಾರ ಮತ್ತು ನಾಡಿನ ಜನತೆ ಅವರ ಜೊತೆಯಲ್ಲಿದ್ದಾರೆ ಎಂದು ಹೇಳಿದರು.
ಸಂತ್ರಸ್ತರಿಗೆ ಮನೆ ನಿರ್ಮಿಸಲು ಜಿಲ್ಲೆಯ ಐದು ಪಂಚಾಯತಿ ವ್ಯಾಪ್ತಿಯಲ್ಲಿ ಜಾಗ ಗರ್ತಿಸಲಾಗಿದೆ. ಸರ್ಕಾರ ಮತ್ತು ಖಾಸಗಿಯವರ ಸಹಭಾಗಿತ್ವದಲ್ಲಿ ಅಂದಾಜು 6 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸುನೀಲ್ ಸುಬ್ರಮಣಿ ಇತರರು ಇದ್ದರು.