ಭಾವ ಭೈರಾಗಿ
ಕವಿತೆ | ಚಪ್ಪಲಿ ಮತ್ತು ನಾನು
- ಮೂಡ್ನಾಕೂಡು ಚಿನ್ನಸ್ವಾಮಿ
ನಾನು ದೇವಸ್ಥಾನಕ್ಕೆ ಹೋದಾಗ
ಚಪ್ಪಲಿಯನ್ನು ಹೊರಗೆ ಬಿಡುವುದಿಲ್ಲ
ನಾನೇ ಹೊರಗಿರುತ್ತೇನೆ
ಚಮ್ಮಾರನ ಕಾಲುಗಳಲ್ಲಿ ಕಂಡ ಚಪ್ಪಲಿ
ಮನುಷ್ಯ ನಾಯಿಯನ್ನು ಕಚ್ಚಿದಾಗ ಆಗುವಂತೆ
ಸುದ್ದಿಯಾಗುತ್ತದೆ
ಚಪ್ಪಲಿಗಳನ್ನು ಬಿಚ್ಚಿ ಹರಡುವ
ಎಲ್ಲರ ಕಾಲುಗಳು
ನನ್ನ ಮೇಲೆ ಹರಿದಾಡುತ್ತವೆ
ನಾನೊಂದು ಗಿಡ
ಅದು ನನ್ನ ಬುಡ
ಎಂದವರಿಗೆ ತಿಳಿಯುವುದೇ ಇಲ್ಲ
ಬತ್ತಿದ ಕೆರೆಯ ನೀರುಗುಣಿಗೆ
ಗೋಣ ಅನಿಸುವ ಕೊಕ್ಕರೆಯಂತೆ
ನಾನು ಮುಂಗಾಲ
ತುದಿ ಬೆರಳುಗಳ ಮೇಲೆ
ನಿಂತು ಇಣುಕಿ ದೇವರ ರೂಪವನ್ನು
ಕಂಡಷ್ಟು ಕದಿಯಿತ್ತೇನೆ
ಹತ್ತಾರು ತಲೆಗಳ ನಡುವೆ
ಹೊಳೆಯುವ ಮುಕುಟಮಣಿ
ಮೆತ್ತನೆಯ ಹಾಸಾಗಿ ಬೆಳೆದು
ಛತ್ರಿಯಾಗುವ ಫಣಿ
ಒಮ್ಮೆ ವಜ್ರಖಚಿತ ಕಿರೀಟ
ಕಂಠೀಹಾರ, ಜನಿವಾರ
ದೀಪದಾರತಿ ಬೆಳಗಿ
ಫಂಟನಾದ ಮೊಳಗುವಾಗ
ಕಾದ ಕಬ್ಬಿಣವಾಗಿ
ನೆಲ ಕುಸಿಯತೊಡ, ಹಸಿ
ಒಡಲು ಉರಿ ಹತ್ತಿ ಬೇಯುತ್ತದೆ
ದೂರವಿದ್ದರೂ ನಿಷ್ಠಾವಂತ
ಗರುಡಗಂಭ ನನಗಿಷ್ಟ, ಅದರ ಮುಂದಿಟ್ಟ
ಕೆಂಡದ ಕುಂಡಕ್ಕಷ್ಟು ಧೂಪ ಎರಚಿ
ಹೊಗೆ ಚಿಮ್ಮಿಸುವಾಗ ನಾನು ಕೃತಾರ್ಥ
ದೇವರ ಬಳಿ ಸುಳಿದು
ದಕ್ಷಿಣೆ ಪ್ರದಕ್ಷಿಣೆ ಹಾಕುವವರು
ರೆಪ್ಪೆ ಮುಚ್ಚದೆ ಆಗಾಗ ನನ್ನತ್ತ ನೋಡುವರು
ನನ್ನ ಚಿತ್ತ ಮಾತ್ರ ದೇವರತ್ತ
ಗರ್ಭಗುಡಿಯಲ್ಲಿ
ಹೂವು ಗಂಧ ಪಡೆದುಕೊಳ್ಳುವವರ ಆತ್ಮ
ಕಳಚಿಟ್ಟ ಚಪ್ಪಲಿಗಳ ಬಳಿ
ಹೊರಗೆ
ನಿತ್ಯ ಹಜಾರದಲಿ ನಿಂತು
ಗೋಣ ಆನಿಸಿ ಇಣುಕಿ
ಪುನೀತವಾಗುವ ನನ್ನ ಆತ್ಮ
ದೇವರ ಬಳಿ ಒಳಗೆ
– ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2009 ರಲ್ಲಿ ಪ್ರಕಟಿಸಿರುವ ‘ಸುವರ್ಣ ಕಾವ್ಯ‘ ಪುಸ್ತಕದಿಂದ, ಮೂಡ್ನಾಕೂಡು ಚಿನ್ನಸ್ವಾಮಿಯವರ ‘ಚಪ್ಪಲಿ ಮತ್ತು ನಾನು’ ಕವಿತೆಯನ್ನು ಆಯ್ದುಕೊಳ್ಳಲಾಗಿದೆ. ಈ ಪುಸ್ತಕದ ಸಂಪಾದಕರು ಬಿ.ಎ.ಸನದಿ ಮತ್ತು ಸವಿತಾ ನಾಗಭೂಷಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243