ಅಂತರಂಗ
ನುಡಿಯ ಒಡಲು -10 | ನುಡಿಯೆಂದರೆ ಅದೊಂದು ಅಂತಸ್ಥ ಸಾಮರ್ಥ್ಯವೇ ಹೊರತು ವರ್ತನೆಯಲ್ಲ
- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ನುಡಿಯೆಂದರೆ ಅದೊಂದು ಅಂತಸ್ಥ ಸಾಮರ್ಥ್ಯವೇ ಹೊರತು ವರ್ತನೆಯಲ್ಲ. ನುಡಿ ಬಗೆಗಿನ ಇಂತಹದೊಂದು ಚಿಂತನೆ ನುಡಿಯರಿಮೆಯ ಚರಿತ್ರೆಯಲ್ಲಿಯೇ ಕ್ರಾಂತಿಕಾರಿ ಬೆಳವಣಿಗೆಯಾಗಿದೆ. ಇಂತಹ ಕ್ರಾಂತಿಯನ್ನು ಹುಟ್ಟು ಹಾಕಿದವರಲ್ಲಿ ಇಪ್ಪತ್ತನೇ ಶತಮಾನದಲ್ಲಿದ್ದ ಸ್ವಿಸ್ ನುಡಿಯರಿಗ ಫರ್ಡಿನಾಂಡ್ ಡಿ ಸಸ್ಯೂರ್ (26 ನವಂಬರ್1857–22 ಫೆಬ್ರವರಿ1913) ಮತ್ತು ಅದೇ ಇಪ್ಪತ್ತನೇ ಶತಮಾನದ ನಡುಗಾಲದಲ್ಲಿ ಕಾಣಿಸಿಕೊಂಡ ಅಮೇರಿಕದ ಮತ್ತೊಬ್ಬ ನುಡಿಯರಿಗ ನೋಮ್ ಚಾಮ್‍ಸ್ಕಿ (1907 -).
ಇವರಿಬ್ಬರನ್ನು ಹೊಸಕಾಲದ ನುಡಿಯರಿಮೆಯ ಹರಿಕಾರರೆಂದು ಹೇಳಬಹುದು. ಈ ಮಹಾನ್ ಚಿಂತಕರು ನುಡಿಯೆಂದರೆ ಅದೊಂದು ಅಂತಸ್ಥ ಸಾಮರ್ಥ್ಯವೇ ಹೊರತು ಅನುಕರಣೆಯಿಂದ ಕಲಿಯುವ ಬಗೆಯಲ್ಲ ಎಂಬ ಈ ಕ್ರಾಂತಿಕಾರಿ ಬೆಳವಣಿಗೆಗೆ ಕಾರಣವಾಗಿದ್ದಾರೆ.
ಮೇಲ್ನೋಟದಲ್ಲಿ ಇವರು ನುಡಿ ಕುರಿತು ಮಂಡಿಸುವ ತಿಳಿವಳಿಕೆಗಳು ಒಂದೇ ಬಗೆಯಲ್ಲಿ ಕಂಡರೂ, ಅವರಿಬ್ಬರು ಚರ್ಚಿಸುವ ನುಡಿ ಬಗೆಗಿನ ಚಿಂತನೆಗಳಲ್ಲಿ ತಾತ್ವಿಕ ವ್ಯತ್ಯಾಸಗಳಿವೆ. ಆ ತಾತ್ವಿಕ ವ್ಯತ್ಯಾಸಗಳನ್ನು ಗುರುತಿಸುವ ಗೊಡವೆಗೆ ಇಲ್ಲಿ ನಾನು ಹೋಗಲಾರೆ. (ನುಡಿಯ ಒಡಲು -08ರಲ್ಲಿ ಚಾಮ್ಸ್ಕಿಯ ನುಡಿ ಕುರಿತ ಚಿಂತನೆಗಳನ್ನು ಚರ್ಚಿಸಲಾಗಿದೆ) ಬದಲಾಗಿ ಸಸ್ಯೂರ್ ಅವರ ಚಿಂತನೆಗಳ ಸ್ವರೂಪವೆಂತಹದು ಎಂಬುದನ್ನು ಇಲ್ಲಿ ಚರ್ಚಿಸಲು ಯತ್ನಿಸುತ್ತೇನೆ.
ಫರ್ಡಿನಾಂಡ್ ಡಿ. ಸಸ್ಯೂರ್ ನುಡಿ ಹೇಗೆ ಒಂದು ಸಾಮರ್ಥ್ಯ ಎಂಬುದನ್ನು ತಿಳಿಸಲು ಕೆಲವು ಬಹುಮುಖ್ಯ ಅರಿಮೆ ಪದಗಳನ್ನು ಹುಟ್ಟು ಹಾಕಿದ್ದಾನೆ. ಇವನ ಪ್ರಕಾರ “ನುಡಿಯೆಂಬುದು ಸಂಕೇತ (ಚಿಹ್ನೆ)ಗಳ ವ್ಯವಸ್ಥೆ”. ಈ ಸಂಕೇತಗಳ ಸ್ವರೂಪ ಯಾದೃಚ್ಛಿಕವಾಗಿರುತ್ತದೆ (ಆರ್ಬಿಟ್ರರಿ). ಹಾಗೂ ಅವು ಸೂಚಕಗಳಾಗಿ ರೂಪುಗೊಳ್ಳವ ಬಗೆಗಳು ಯಾವಾಗಲೂ ರೇಖಾತ್ಮಕವಾಗಿರುತ್ತವೆ (ಲಿನಿಯರ್ ಆರ್ಡರ್). ಈ ನುಡಿ ಸಂಕೇತಗಳಿಗೆ ಎರಡು ಆಯಾಮಗಳಿರುತ್ತವೆ. ಅವುಗಳನ್ನು ಈ ಕೆಳಗಿನಂತೆ ತೋರಿಸಬಹುದು;
ಧ್ವನಿ ಸಂಕೇತಗಳಿಂದ ರೂಪುಗೊಳ್ಳುವ ಸೂಚಕ ಹಾಗೂ ಸೂಚಿತಗಳ ನಡವಿನ ನಂಟಸ್ತಿಕೆ ಒಂದು ಸಾಮಾಜಿಕ ಒಪ್ಪಂದವಷ್ಟೇ. ಎತ್ತುಗೆಗಾಗಿ ಮರ ಎಂಬ ಧ್ವನಿ ಸಂಕೇತಗಳ ರೂಪಕ್ಕೂ ಹಾಗೂ ಮರ ಎಂಬ ಅರ್ಥದ ನೆಲೆಗೂ ಯಾವುದೇ ಬಗೆಯ ನಂಟಸ್ತಿಕೆ ಇರುವುದಿಲ್ಲ. ಹಾಗಾಗಿ ಒಂದೇ ವಸ್ತು, ವಿಷಯವನ್ನು ಪ್ರತಿನಿಧಿಸುವಾಗಲೂ ಬೇರೆ ಬೇರೆ ನುಡಿ ಸಮುದಾಯಗಳು ತಮ್ಮದೇ ಧ್ವನಿರೂಪಗಳು ಹಾಗೂ ಅವುಗಳು ಸಂಯೋಜನೆಗೊಳ್ಳುವ ಬಗೆಗಳು ಬೇರೆ ಬೇರೆಯಾಗಿರುತ್ತವೆ.
ಕನ್ನಡದಲ್ಲಿ ಹುಡುಗ, ಇಂಗ್ಲಿಶಿನಲ್ಲಿ ಬಾಯ್, ಹಿಂದಿಯಲ್ಲಿ ಲಡಕಾ, ತಮಿಳಿನಲ್ಲಿ ಪೈಯನ್, ತೆಲುಗುನಲ್ಲಿ ಪಿಲ್ಲಡು/ಅಬ್ಬಾಯಿ ಮುಂತಾಗಿ ಹೇಳುತ್ತಾರೆ. ಎಲ್ಲ ನುಡಿಗಳು ಕೂಡ ಇಂತಹ ಸಂಕೇತ ವ್ಯವಸ್ಥೆಯಿಂದ ಕೂಡಿರುತ್ತವೆ. ಆ ಸಂಕೇತಗಳಲ್ಲಿ ಅಡಕವಾಗಿರುವ ಸೂಚಕ ಮತ್ತು ಸೂಚಿತಗಳ ರಾಚನಿಕ ವ್ಯವಸ್ಥೆ ಲಾಂಗ್ ಸ್ವರೂಪದಲ್ಲಿರುತ್ತದೆ.
ಇದೊಂದು ಅಂತಸ್ಥಗೊಂಡ ಸಾಮರ್ಥ್ಯ. ಈ ವಿನ್ಯಾಸವು ಯಾವಾಗಲೂ ಅಮೂರ್ತವಾಗಿರುತ್ತದೆ ಎಂಬುದು ಗಮನಾರ್ಹ. ಈ ಅಮೂರ್ತ ಸಾಮರ್ಥ್ಯವು ಪರೊಲ್‍ಯೆಂಬ ನುಡಿಯ ಮತ್ತೊಂದು ಸಾಧ್ಯತೆಯಿಂದ ವಾಸ್ತವಗೊಳ್ಳುತ್ತದೆ. ಅಂದರೆ ವ್ಯಕ್ತಿಗತ ಹಾಗೂ ಮಾತಿನ ಬಹಿರ್‍ರೂಪವನ್ನೇ ಪರೊಲ್ ಎಂದು ಹೇಳಲಾಗುತ್ತದೆ.
ಸಸ್ಯೂರ್‍ನ ಲಾಂಗ್ ಮತ್ತು ಪರೊಲ್ ಎಂಬ ಈ ಅರಿಮೆ ಪದಗಳನ್ನು ತಿಳಿಯುವುದರ ಮೂಲಕ ನುಡಿ ಹೇಗೆ ಒಂದು ಸಾಮರ್ಥ್ಯವೆಂಬುದನ್ನು ಇನ್ನಷ್ಟೂ ಹೆಚ್ಚು ಸಂಗತಿಗಳ ಮೂಲಕ ಅರಿಯಬಹುದು. ಆ ಎರಡೂ ಅರಿಮೆ ಪದಗಳು ನುಡಿಯ ಎರಡು ಬಹುಮುಖ್ಯ ನೆಲೆಗಳೆಂದು ಈ ಮೇಲೆ ಹೇಳಿದೆ. ಅವುಗಳನ್ನ ಒಂದು ಲಾಂಗ್ ಮತ್ತೊಂದನ್ನು ಪರೊಲ್ ಎಂದು ವಿಂಗಡಿಸಿ ನೋಡಬಹುದು. ಲಾಂಗ್‍ಯೆಂದರೆ ಅದೊಂದು ಸಾಮರ್ಥ್ಯ.
ನುಡಿಯ ಇಡೀ ವ್ಯವಸ್ಥೆಯನ್ನು ಅರಿಯುವ ಬಗೆಯೂ ಇದಾಗಿರುತ್ತದೆ. ಪರೊಲ್ ಲಾಂಗ್‍ನಿಂದ ಉತ್ಪಾದನೆಗೊಂಡ ಕ್ರಿಯೆ ಇಲ್ಲವೇ ದಿಟ ಮಾತಿನ ರೂಪವೆಂದು ಹೇಳಲಾಗಿದೆ. ಮಾನವರಲ್ಲಿ ಹಲವಾರು ಸಾಮರ್ಥ್ಯಗಳು ಇರುವ ಹಾಗೆಯೇ ನುಡಿ ಕೂಡ ಒಂದು ಸಾಮರ್ಥ್ಯ. ಈ ಸಾಮರ್ಥ್ಯ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇರುತ್ತದೆ. ಕನ್ನಡವನ್ನು ಆಡುವರೆಲ್ಲರ ಸಾಮರ್ಥ್ಯ ಬೇರೆ ಬೇರೆಯಲ್ಲ. ಅವರಲ್ಲಿ ಅಂತಸ್ಥವಾಗಿರುವ ನುಡಿ ಸಾಮರ್ಥ್ಯದಲ್ಲಿ ಬಹುತೇಕ ಸಮಾನತೆ ಇರುತ್ತದೆ.
ಲೋಕದ ಬೇರೆ ಬೇರೆ ಸಮುದಾಯಗಳಲ್ಲಿ ಬೇರೆ ಬೇರೆ ನುಡಿ ಸಾಮರ್ಥ್ಯವಿರುತ್ತದೆ ದಿಟ. ಆದರೆ ಅವುಗಳು ಚೈನೀಸ್, ಜಪನೀಸ್, ತಮಿಳು ಹಾಗೂ ಕನ್ನಡ ಎಂದಿದ್ದು ಬೇರೆ ಬೇರೆ ಸಾಮರ್ಥ್ಯವನ್ನು ಹೊಂದಿದ್ದರೂ, ಆ ಎಲ್ಲ ನುಡಿಗಳು ಅಂತಸ್ಥ ನೆಲೆಯಲ್ಲಿ ಸಮಾನವಾದ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತವೆ.
ಪರೊಲ್ ಎನ್ನುವುದು ವ್ಯಕ್ತಿಗತ ಅಭಿವ್ಯಕ್ತಿಯ ನುಡಿ ಬಳಕೆಯ ಲೋಕ ಮಾತ್ರವಲ್ಲ. ಅದು ಅಂತಹ ವ್ಯಕ್ತಿಗತ ಅಭಿವ್ಯಕ್ತಿಗೆ ಸಾರ್ವತ್ರಿಕ ನೆಲೆಯೊಂದು ಲಾಂಗ್‍ನಿಂದ ಹೇಗೆ ದೊರೆಯುತ್ತದೆ ಎಂಬುದು ಅತ್ಯಂತ ಮಹತ್ವದ ಸಂಗತಿಯನ್ನು ಅರಿಯುವ ಬಗೆಯಾಗಿದೆ. ಅಂದರೆ ಪರೊಲ್‍ನಂತಹ ಪರಿಣಾಮವನ್ನು ಅನುಭವಿಸಲು ಸಾಧ್ಯವಾಗುವುದೇ ನುಡಿಯೊಂದರ ಇಡೀ ರಚನೆ ಹಾಗೂ ಬಳಕೆಯ ನೆಲೆಗಳನ್ನು ಒಳಗೊಂಡಿರುವ ಲಾಂಗ್‍ನಿಂದ.
ನುಡಿಯ ಮೂರ್ತ ಪರಿಣಾಮಗಳು ಲಾಂಗ್ ಎಂಬ ಅಮೂರ್ತರೂಪದ ನುಡಿ ವ್ಯವಸ್ಥೆಯಿಂದ ಉತ್ಪಾದನೆಗೊಳ್ಳುತ್ತವೆ ಎಂಬುದು ಇದರಿಂದ ನಿಚ್ಚಳವಾಗುತ್ತದೆ. ಹಾಗಾಗಿ ಲಾಂಗ್ ಅನ್ನುವುದು ಸಮುದಾಯದ ನುಡಿಯೊಂದರ ಇಡೀ ಭಾಷಿಕ ವ್ಯವಸ್ಥೆ ಮಾತ್ರವಾಗಿರದೆ, ಅದೊಂದು ಸಾಮರ್ಥ್ಯವಾಗಿ ಮಾನವರಿಗೆ ದತ್ತವಾಗಿದೆ. ಚೆಸ್ ಆಟದ ಹೋಲಿಕೆಯ ಮೂಲಕ ಸಸ್ಯೂರ್ ಲಾಂಗ್-ಪರೊಲ್ ಎಂಬ ಡೈಕಾಟಮಿಯನ್ನು ಇನ್ನಷ್ಟೂ ಸುಳುವಾಗಿ ವಿವರಿಸುವ ಪ್ರಯತ್ನವನ್ನು ಮಾಡುತ್ತಾನೆ.
ಈ ಆಟದಲ್ಲಿ ಪಾಲ್ಗೊಳ್ಳುವ ಈರ್ವ ಆಟಗಾರರಿಗೆ ಚೆಸ್ ಆಟದ ಇಡೀ ವ್ಯವಸ್ಥೆಯು (ಲಾಂಗ್) ತಿಳದಿರಬೇಕು. ಆಟದಲ್ಲಿ ಆಟಗಾರನು ಮಾಡುವ ಪ್ರತೀ ನಿಯಮಗಳ ಆಯ್ಕೆ ಮತ್ತು ಆ ಸನ್ನಿವೇಶದಲ್ಲಿ ಅವನಿಗೆ ಎದುರಾಗುವ ತೊಡರುಗಳು, ಹಾಗೂ ತೋರುದಾರಿಗಳು ಲಾಂಗ್‍ನಿಂದ ಹೇಗೆ ನಿರ್ಧರಿಸಲ್ಪಟ್ಟಿರುತ್ತವೆ ಎಂಬುದು ಮನವರಿಕೆಯಾಗುತ್ತದೆ. ಈ ಆಟದ ಪ್ರಕ್ರಿಯೆಯಲ್ಲಿ ಆಟಗಾರನು ಆಯ್ಕೆ ಮಾಡಿಕೊಳ್ಳುವ ಬಿಡಿ ಬಿಡಿ ನಿಯಮಗಳ ಸ್ವರೂಪವೇ ಪರೊಲ್.
ಇಂತಹ ನಿಯಮಗಳನ್ನು ಬಳಸಲು ಬೇಕಾಗುವ ಸಾಮರ್ಥ್ಯ ಮತ್ತು ಚೆಸ್ ಆಟದ ಅಮೂರ್ತ ಸ್ವರೂಪದ ತಿಳಿವನ್ನು ಅರಿಯುವ ಬಗೆಯೇ ಲಾಂಗ್‍ಯೆಂದು ಹೇಳಬಹುದು. ಉಲಿ, ಪದ, ಸೊಲ್ಲುಗಳನ್ನು ಉತ್ಪಾದಿಸುವ ಹಾಗೂ ಅವುಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮಾನವರಲ್ಲಿ ಅಂತಸ್ಥವಾಗಿರುತ್ತದೆ. ಹೀಗೆ ಅಂತಸ್ಥಗೊಂಡ ಸಾಮರ್ಥ್ಯವನ್ನೇ ಲಾಂಗ್‍ಯೆಂದು ಹೇಳಲಾಗುತ್ತದೆ. ಈ ಅಂತಸ್ಥ ಸಾಮರ್ಥ್ಯದ ಬಹಿರ್ ರೂಪಗಳೇ ಪರೊಲ್‍ಯೆಂದೂ ಹೇಳಲಾಗಿದೆ.
ನುಡಿಯಿಗರು ಹೇಗೆ ನುಡಿಯ ನಿಯಮಗಳನ್ನು ಅನುಸರಿಸುತ್ತಾರೆ, ಅಂತಹ ಬಗೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಸಸ್ಯೂರ್‍ನ ಈ ರೇಖಾತ್ಮಕ ನಂಟು ಮತ್ತು ಸಹಯೋಗಾತ್ಮಕ ನಂಟು ಎಂಬೀ ಅರಿಮೆ ಪದಗಳಿಂದ ಇನ್ನಷ್ಟೂ ನಿಚ್ಚಳಗೊಳಿಸಬಹುದು. ರಾಚನಿಕ ನಿಲುವುಗಳಲ್ಲಿ ಅಡಕವಾಗಿರುವ ನಿರ್ಬಂಧನೆಗಳು ಹಾಗೂ ಆಯ್ಕೆಯ ಅವಕಾಶಗಳು ಹೇಗಿರುತ್ತವೆ, ಮತ್ತು ಲಾಂಗ್ ಮತ್ತು ಪರೋಲ್‍ನಿಂದ ಅವುಗಳನ್ನು ಹೇಗೆ ನಿಭಾಯಿಸಿಕೊಳ್ಳುತ್ತೇವೆ ಎಂಬ ತಿಳಿವನ್ನು ಈ ಚಿತ್ರದ ಮೂಲಕ ಅರಿಯಲು ಯತ್ನಿಸೋಣ;
ಸಸ್ಯೂರ್‍ಗೆ ನುಡಿಯ ಸಂಕೀರ್ಣತೆಯ ಬಗೆಗೆ ಸಾಕಷ್ಟು ಅರಿವಿತ್ತು. ಅದಕ್ಕಾಗಿ ನುಡಿಯಲ್ಲಿ ಇಬ್ಬಗೆಯ ಕ್ರಿಯೆಗಳು ಹೇಗೆ ಒಟ್ಟೊಟ್ಟಿಗೆ ಬೇರೆ ಬೇರೆ ನೆಲೆಯಲ್ಲಿ ಕೆಲಸ ಮಾಡುತ್ತವೆ ಎಂಬುದನ್ನು ಜೋಡಿ ಪರಿಕಲ್ಪನೆಗಳ ಮೂಲಕ ತೋರಿಸಲು ಯತ್ನಿಸಿದ್ದಾನೆ. ಎತ್ತುಗೆಗಾಗಿ ಉಚ್ಚಾರಣೆ (ಆರ್ಟಿಕ್ಯೂಲೇಶನ್) ಮತ್ತು ಗ್ರಹಿಕೆ
(ಪರ್‍ಸೆಪ್ಶನ್), ರೂಪ/ಶಬ್ದ (ಸೌಂಡ್) ಮತ್ತು ಅರ್ಥ (ಮೀನಿಂಗ್), ವ್ಯಕ್ತಿ (ಇಂಡ್‍ಯ್ಯುಜಲ್) ಮತ್ತು ಸಮಾಜ (ಸೊಸೈಟಿ), ಗತ (ಪಾಸ್ಟ್) ಮತ್ತು ವರ್ತಮಾನ (ಪ್ರಸೆಂಟ್) ಎಂಬೆಲ್ಲ ಅರಿಮೆಯ ಪದಗಳ ಮೂಲಕ ನುಡಿಯ ಸಂಕೀರ್ಣತೆಯನ್ನು ಬಿಡಿಸಿ ನೋಡುವ ನೆಲೆಗಳನ್ನೂ ಅವನು ರೂಪಿಸಿದ್ದಾನೆ.
ನುಡಿಯನ್ನು ಅರಿಯಬೇಕೆಂದರೆ, ಅದರ ರಾಚನಿಕ ನೆಲೆಗಳನ್ನು ಅರಿಯಬೇಕು. ನುಡಿಯರಿಗನಿಗೆ ನುಡಿಯ ರಚನೆಯೇ ಅಧ್ಯಯನದ ಮುಖ್ಯ ವಸ್ತು ಆಗಬೇಕೆಂಬುದು ಕೂಡ ಸಸ್ಯೂರ್‍ನ ಉದ್ದೇಶವಾಗಿತ್ತು. ಅದಕ್ಕಾಗಿಯೇ ಅವನು ಲಾಂಗ್ ಮತ್ತು ಪರೊಲ್ ಅಂತಹ ಉಭಯ ಅರಿಮೆಯ ಪದಗಳ ನಡುವಣ ವೈಶಿಷ್ಟ್ಯವನ್ನು ಗುರುತಿಸಿದ್ದಾನೆ. ಲಾಂಗ್ ಅನ್ನುವುದು ಸಸ್ಯೂರ್‍ನ ಪ್ರಕಾರ ಒಂದು ಸಮಾಜಿಕ ಉತ್ಪನ್. ಇದೊಂದು ಅಮೂರ್ತ ಸ್ವರೂಪದ ರಾಚನಿಕ ವ್ಯವಸ್ಥೆ.
ನುಡಿ ಸಮುದಾಯದ ಎಲ್ಲ ನುಡಿಯಿಗರ ಮನಸ್ಸಿನಲ್ಲಿ ನುಡಿ (ಲಾಂಗ್) ಸಾಮರ್ಥ್ಯ ನೆಲೆಗೊಂಡಿರುತ್ತದೆ. ಈ ಸಾಮರ್ಥ್ಯದ ದಿಟ ರೂಪವೇ ಪರೊಲ್. ಇದನ್ನು ಸಸ್ಯೂರ್ ಎಕ್ಸ್ಯೂಶನ್ ಆಫ್ ಲಾಂಗ್‍ಯೆಂದು ಬಣ್ಣಿಸಿದ್ದಾನೆ. ಲಾಂಗ್ ಮತ್ತು ಪರೊಲ್‍ಗಳ ನಡುವಣ ವೈಶಿಷ್ಟ್ಯವನ್ನು ಗುರುತಿಸುವುದೆಂದರೆ, ಸಾಮಾಜಿಕ ರಚನೆಯಲ್ಲಿ ಅಂತರ್ಗತವಾಗಿರುವ ಭಿನ್ನತೆಗಳನ್ನು ಗುರುತಿಸಿದಂತೆ.
ಅಂದರೆ, ಲಾಂಗ್ ಮತ್ತು ಪರೊಲ್‍ಗಳನ್ನು ಬೇರ್ಪಡಿಸಿ ನೋಡುವುದೆಂದರೆ, ಯಾವುದು ಸಾಮಾಜಿಕ ಮತ್ತು ಯಾವುದು ವೈಯಕ್ತಿಕ, ಯಾವುದು ಪ್ರಧಾನ ಮತ್ತು ಯಾವುದು ಅಧೀನ ಎಂಬುದನ್ನೂ ಬೇರ್ಪಡಿಸಿ ನೋಡಲು ಸಾಧ್ಯವಾಗುತ್ತದೆ. ಆದರೆ ಸಸ್ಯೂರ್‍ಗೆ ಇದೆಲ್ಲವೂ ಆಕಸ್ಮಿಕವಾಗಿ ನುಡಿಯಲ್ಲಿ ಅಂತಸ್ಥವಾಗಿರುವ ಹಾಗೆ ಕಂಡಂತಿದೆ.
ಇದುವರಗೆ ಚರ್ಚಿಸಿದ ಸಸ್ಯೂರ್ ನುಡಿ ಬಗೆಗಿನ ಚಿಂತನೆಗಳು ನುಡಿಯೆಂಬುದು ಹೇಗ ಒಂದು ಸಾಮರ್ಥ್ಯವಾಗಿ ನುಡಿಯಿಗರಲ್ಲಿ ಅಂತಸ್ಥವಾಗಿರುತ್ತೆ, ಆ ಮೂಲಕ ಅವರು ನುಡಿಯ ಜೊತೆಗೆ ವ್ಯವಹರಿಸುತ್ತಾರೆ ಎಂಬುದನ್ನು ತಿಳಿದುಕೊಂಡಂತಾಯಿತು. ಈ ವಾದವನ್ನೇ ಬೇರೊಂದು ತಾತ್ವಿಕ ಚೌಕಟ್ಟಿನಿಂದ ಮಂಡಿಸಿದ ನೋಮ್ ಚಾಮ್‍ಸ್ಕಿಯ ಚಿಂತನೆಗಳೆಂತಹವು ಎಂಬುದನ್ನು ಈಗಾಗಲೇ ಹಿಂದಿನ ಅಂಕಣ 08ರಲ್ಲಿ ಚರ್ಚಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243