ಭಾವ ಭೈರಾಗಿ
ಕವಿತೆ | ಓಟ
- ಮನಸ್ವಿ ಎಂ ಸ್ವಾಮಿ, ದಾವಣಗೆರೆ
ಸಾಗುತಿದೆ ಹಿಂಡು ಅನವರತ
ಒಂದಲ್ಲ
ಎರಡಲ್ಲ
ಅಗಣಿತ ಗಣ;
ಜಿಂಕೆಗಳೆಷ್ಟೊ
ಕೋಣಗಳೆಷ್ಟೋ
ಹಸಿದ ಸಿಂಹ – ಹುಲಿಗಳೆಷ್ಟೊ
ಎಲ್ಲ ಸಹಿಸುವ ಆನೆಗಳೆಷ್ಟೊ
ದಾಟಲಾಗದ ನದಿಯ ದಾಟುವ ಛಲವ
ಕದಡುವ ಮೊಸಳೆಗಳೆಷ್ಟೊ
ಆದರು ಸಾಗುತಿದೆ ಹಿಂಡು
ಗುರಿ ಮೊದಲಿಲ್ಲ.
ಯಾರು ನಿಂತರೇನು, ಸತ್ತರೇನು
ನಿಲ್ಲದು ಈ ಓಟ
ತೆರಳುವುದೆಲ್ಲಿಗೆ?
ಏಕೀ ಅವಸರ?
ಏನೀ ಆಟ?
ಹಗಲಿಲ್ಲ, ಇರುಳಿಲ್ಲ
ವಿಶ್ರಾಂತಿಗೆ ನೆಲೆ ಇಲ್ಲ
ದಿಕ್ಕಿಲ್ಲ ದೆಸೆ ಇಲ್ಲ
ಕಾಲುಗಳು ನಿಲ್ಲವುದಿಲ್ಲ
ಸಾಗುತಿದೆ ಓಟ, ಪೂರ್ಣವಿರಲಿ
ಅಲ್ಪ ವಿರಾಮವೂ ಇಲ್ಲ
ನಿಂತರೆ ಹಿಂದುಳಿಯುವ ಭಯ
ಕೂತರೆ ತುಳಿತದ ಭಯ
ಈ ಓಟದ ಆಟಕೆ
ರಂಗವನು ಸಜ್ಜುಗೊಳಿಸಿದವರಾರು
ಭಾವನೆಗಳೆಲ್ಲವ ಮೂಟೆ ಕಟ್ಟಿದವರಾರು
ಬೆಸುಗೆಗಳ ಅಳಿಸಿ
ಹಳಿಗಳ ನಿರ್ಮಿಸಿದವರಾರು
ಓಡುವುದೆಲ್ಲಿಗೆ
ಮುಂದಿರುವುದು ಬರಿಯ ಆಕಾಶ
ಏನೀ ಪ್ರಕ್ರಿಯೆ
ಅತಿ ಅಮಾನುಷ;
ನಕ್ಷತ್ರಗಳನು ಹಿಡಿವ ಆಸೆ
ವಾಸ್ತವ ಬೇರೆ
ಕಣ್ಣಿನ ಪೊರೆ ಜಾರದೆ ಅದು ತಿಳಿಯುವುದೂ ಇಲ್ಲ
ಓಟದ ದಾಹ ತೀರುವ
ಲಕ್ಷಣವೂ ಇಲ್ಲ.
ಸುದ್ದಿದಿನ.ಕಾಂ | ವಾಟ್ಸಾಪ್ | 9980346243