ಭಾವ ಭೈರಾಗಿ
ಕವಿತೆ | ಬಿಡುಗಡೆ..?
- ಜಿ. ಮುದ್ದು ವೀರ ಸ್ವಾಮಿ ಹಿರೇಮಳಲಿ
ಗಂಡುಮಗು ಹುಟ್ಟಿತು!
ಹೊರಗೆ ಸಕಲ ಸಂಭ್ರಮದ ಕಲರವ
ನನ್ನೊಳಗೆ ಅವ್ಯಕ್ತ ತಳಮಳ,
ಅಪ್ಪನ ಕಣ್ಣಾವಲು ಭದ್ರ ಕೋಟೆ
ಇನಿಯನ ಅನುಮಾನ ಸಂಕೋಲೆ
ಅಷ್ಟಾಗಿಯು ಮನೆಯ ಮಹಾರಾಣಿ.
ಕಂದನ ಬಾಲಲೀಲೆ
ತುಂಟಾಟಗಳು
ಮೈಮರೆಸಿದ್ದು ಸುಳ್ಳೇನಲ್ಲ.
ಪತಿ ಗದರಿದಾಗ ಆರದ
ಕಂಬನಿ ಒರೆಸಿದ್ದು ಪುಟ್ಟ ಕೈ
ಬಿಸಿಲು ಬಾಳಿನ ಬೆಳದಿಂಗಳು.
ಮಗು ಮಗನಾದ
ಚಟಗಳ ದಾಸನಾದ
ಅವನಪ್ಪ ದಂಡಿಸುವಾಗ
ಕೊಂಚ ಮಗನ ಪರ.
ಅಪ್ಪ ಕಾಲವಾದ
ಪತಿ ಕಣ್ಮರೆಯಾದ
ಮಗ ಅವನಪ್ಪನಾದ
ನಮ್ಮಪ್ಪನಾದ
ಅಪ್ಪನಾದ
ಪುರುಷನಾದ.
ಸುದ್ದಿದಿನ.ಕಾಂ|ವಾಟ್ಸಾಪ್|9980346243