ಭಾವ ಭೈರಾಗಿ

ಕವಿತೆ | ಒಲವು

Published

on

  • ಮೂಲ : ಪಾಬ್ಲೋ ನೆರೂಡಾ, ಅನುವಾದ : ತೇಜಶ್ರೀ

ಹೆಣ್ಣೆ, ನಾನು ನಿನ್ನ ಮಗುವಾಗಬೇಕಿತ್ತು, ಕುಡಿಯಲು ಹಾಲು ನಿನ್ನೆದೆಯಿಂದ, ಮೊಗೆಮೊಗೆದು ಕುಡಿವಂತೆ ಜೀವಜಲವ ತಿಳಿನೀರ ಬಾವಿಯಿಂದ,

ಸನಿಹದಿಂದ ನೋಡಬಹುದಿತ್ತು, ಅನುಭವಿಸಬಹುದಿತ್ತು ನಿನ್ನ ಕಂಕುಳಲಿ ನಾನು ಹಸುಳೆ, ನಿನ್ನ ಹೊನ್ನುನಗೆ ನಿನ್ನ ಹರಳುದನಿ ಹಾಗೆ ಪಡೆಯುವುದೆ ಚಂದ.

ನರನಾಡಿಗಳಲ್ಲಿ ನಿನ್ನ ಸಂಚಲನ ನದಿಯಲ್ಲಿ ಹರಿಯುವ ದೇವರ ಹಾಗೆ,
ಮಣ್ಣುಸುಣ್ಣಗಳಿಂದ ಸವೆದ ಮೂಳೆಗಳಾಗು ಆಗಲೂ ನನಗಿಷ್ಟ ನೀನು ಹೀಗೆ,
ಸುಮ್ಮನೆ ಚಲಿಸುವೆ ನೀನು ನೆನಪಿನ ನೆಲದಲ್ಲಿ ನೋವು ಕೊಡದ ಹಾಗೆ,
ಕವಿತೆ ಸಾಲುಗಳಲ್ಲಿ ಮೈಪಡೆವೆಯಲ್ಲಿ ಕೊಳೆಕಸರ ಲೇಪವಿರದೆ, ಹೀಗೆ.

ಹೇಗೆಲ್ಲ ಎಷ್ಟೆಲ್ಲ ಪ್ರೀತಿಸುತ್ತೇನೆ ನಿನ್ನ
ನನ್ನಂತೆ ಒಲಿದವರಿಲ್ಲ ನಿನ್ನ!
ಸಾವು ಬಂದರು ನನಗೋ ನಿನಗೋ
ಇನ್ನಷ್ಟು ಪ್ರೀತಿಸುವೆ ನಿನ್ನ
ಮತ್ತಷ್ಟು ಮುಗಿಲಷ್ಟು
ಅದರ ಮೇಲೆ
ಇನ್ನಷ್ಟು.

ಕವಿತೆಯ ಶೀರ್ಷಿಕೆ : ‘ಲವ್, Book of Twilight ಕೃತಿಯಿಂದ. ಅನುವಾದ : Ilan Stavans

( ಕವಯಿತ್ರಿ, ಅನುವಾದಕಿ ತೇಜಶ್ರೀ ಅವರ “ನನ್ನೊಳಗಿನ ನಿನ್ನ ನಡಿಗೆ – ಪಾಬ್ಲೂ ನೆರೂಡಾ ಕವಿತೆಗಳು ಪುಸ್ತಕದಿಂದ ‘ಒಲವು‘ ಕವಿತೆ ಆಯ್ಕೆ ಮಾಡಿಕೊಳ್ಳಲಾಗಿದೆ. ಪಲ್ಲವ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version