ಭಾವ ಭೈರಾಗಿ
ಕವಿತೆ | ಚಿಕ್ಕಿಗಳು ಚಿತ್ತಾರ ಬಿಡಿಸ್ಯಾವ
- ಡಾ.ಕಾವ್ಯಶ್ರೀ, ಸಹಾಯಕ ಪ್ರಾಧ್ಯಾಪಕಿ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ
ನಿಂಬಿಯಾ ಬನದಾಗ ರಂಭಿ ನಿಂತಕ್ಕಿ ಯಾರೆ
ಮುತ್ತು ಉದುರ್ಯಾವ ನೆಲಕೆಲ್ಲ ಎಲೆ ಗೆಳೆತಿ
ಹಾಡು ಹುಟ್ಯಾವ ಮನದಾಗ
ಅತ್ತಿಯಾ ಮನೆಯಾಗ ತೊತ್ತಾಗಿ ದುಡಿಬ್ಯಾಡ
ಹೊತ್ತಾಗಿ ನೀಡಿದರ ಉಣಬ್ಯಾಡ ಎಲೆ ಗೆಳತಿ
ದಿಟ್ಟತನದಿಂದ ಬಾಳವ್ವ
ದೇವರ ಹೆಸರೇ಼ಳಿ ಹರಕೆಯಾ ಕುರಿಮಾಡಿ
ಬೆತ್ತಲೆ ಮೆರವಣಿಗೆ ಮಾಡ್ಯಾರ ಎಲೆ ಗೆಳತಿ
ಕತ್ತಲ ಅಡವ್ಯಾಗ ನೂಕ್ಯಾರ
ಬಾಳಿಯಾ ಬನದಾಗ ಬಾಲಿ ನೀ ಹೊರಟಾಗ
ಬಾ ಅಂತ ಹಿಡಿದು ಎಳದಾರ ಎಲೆ ಗೆಳೆತಿ
ಸರಪಳಿ ಕಟ್ಟಿ ಬಿಗಿದಾರ
ಕರಿಯಾ ಪಾಟಿಯ ಮ್ಯಾಲ ಬಿಳಿಯ ಅಕ್ಷರ ಬರೆದರ
ಬೆಳದಿಂಗಳು ಅಡಿರ್ಯಾದ ಆಗಸಕ ಎಲೆ ಗೆಳತಿ
ನಕ್ಕು ನಲಿದಾನ ಚಂದ್ರಾಮ
ಸರಪಳಿ ಹರಿದೊಗೆದು ವಿದ್ಯದ ಕೈ ಹಿಡಿದು
ದಿಟ್ಟ ತನದಿ ಬದುಕಿ ನಗಬೇಕ ಎಲೆ ಗೆಳತಿ
ಮುಡಿತುಂಬ ಮುತ್ತ ಮುಡಿಬೇಕು
ವಿದ್ಯೆಯೊಂದಿದ್ದರೆ ಆನೆ ಬಲವಿದ್ದಂತೆ
ಅಪ್ಪ ಗಂಡ ಮಗನ ಹಂಗಿಲ್ಲ ಎಲೆ ಗೆಳತಿ
ಸ್ವಾಭಿಮಾನದ ಬಾಳು ಬಾಳವ್ವ
ಮುಳ್ಳೆಲ್ಲ ಹೂವಾಗಿ ಹಾದ್ಯಗ ಹಾಸ್ಯಾವ
ಚಿಕ್ಕಿಗಳು ಚಿತ್ತಾರ ಬಿಡಿಸ್ಯಾವ ಎಲೆ ಗೆಳೆತಿ
ಹಸುರುಟ್ಟು ಮುಂದೆ ನಡೆಯವ್ವ
ಸುದ್ದಿದಿನ.ಕಾಂ|ವಾಟ್ಸಾಪ್|9980346243