ಭಾವ ಭೈರಾಗಿ

ಕವಿತೆ | ಮಾದಿಗ ಕೇರಿಯ ಕೆಂದುಂಜ

Published

on

ಚಿತ್ರ ಕೃಪೆ : ದೇವನೂರು ಮಹದೇವ ಅವರ 'ಕುಸುಮಬಾಲೆ'ಯ ಮುಖಪುಟ

 

ಮೂಡುಗಡೆ ರೇವಜ್ಜ
ಉರಿಗಣ್ಣ ಬಿಟ್ಟಾಗ
ಪುಟ್ಟಿಯೊಳಗಿನ ಕೆಂದುಂಜ
ಕೊಕ್ಕೋ…ಕೋ…ಅಂದಾಗ
ನಮ್ ಕೇರಿಲಿ ಬೆಳ್ಳನೆ ಮುಂಜಾವು

ನಮ್ ಮಾದ್ರಟ್ಟಿನೆ ಹಾಗೆ
ಕುರಿ ಕೋಳಿ.ದನಕರ.ಕೋಣ ಎಮ್ಮೆ
ಅಯ್ಯೊ…ಇದ್ ಬದ್ ಪ್ರಾಣಿಪಕ್ಷಿಗಳೆ…. ತುಂಬ್ಕೊಂಡಿರುವ “ಮೃಗಾಲಯ.”

ಹೊಟ್ಟೆಗೆ ಇಟ್ಟಿಲ್ಲುದ್ರು
ಹಟ್ಟಿ ತುಂಬ ಮೂಕ್ ಪ್ರಾಣಿಗಳಿವೆ
ಎಷ್ಟೆ ಆಗ್ಲಿ ನನ್ನವರು..
ಪ್ರಾಣಿಪ್ರಿಯರು ತಾನೆ.

ತೆಂಗಿನ್ ಗರಿ ಮುಚ್ಚಿದ್ದ
ಗುಡ್ಲು ಅಂಗ್ಳದಾಗೆ ಅಂಗಿ ಇಲ್ದೆ
ತಂಗ್ಳು ರೊಟ್ಟಿ ಕಡಿವ
ಸಿಂಬ್ಳುಗೊಣ್ಣೆಯ ಕೂಸ್ ಗಳಿಗೇನು ಕೊರತೆಯಿಲ್ಲ…

ಗೋಡೆ ಮ್ಯಾಗಳ್ದ್ ತಗಣಿ
ಅಕ್ಕೆಗಳ್ದ್ ಸಗಣಿ ತಿಕ್ಕಿ ನೋಡೊ ಗಂಡಾ
ಅಂದ್ರೆ ನೆಕ್ಕಿ ನೋಡ್ತಾನೆ ನನ್ ಬಂಡಾ
ಎಂದು ಮಾತೆತ್ತಿದ್ರೆ ಒಡಪಾಕೊ
ಮುದುಕಿಯರಿದ್ದಾರೆ…

ರಾತ್ರಿಯೆಲ್ಲಾ ಕೂದ್ಲು ಇಡ್ಕೊಂಡು
ಗುದ್ದಾಡಿದ್ರು..
ಬೆಳಿಗ್ಗೆದ್ದು ಏನು ಗೊತ್ತಿಲ್ದಂಗೆ
ಕಸ್ಟ ಸುಖ ಮಾತಡ್ತಾ…
ಸೌವ್ಕರ್ನ ಹೊಲಕ್ಕೆ
ಕೂಲಿ ಕುಂಬಳಕ್ಕೋಗುವ
ಚಿಕ್ಕವ್ವ ಸಣ್ಣವ್ವರಿಗೇನು ಬರವಿಲ್ಲ..

ಊರಾಗೆ ಮಳೆ ಬೆಳೆ ಚನ್ನಗಾಗ್ಬಕಂದ್ರೆ
ಮಾದ್ರು ಮಾರಿ ಹಬ್ಬ ಮಾಡಬೇಕಂತೆ
ಅದೇನೊ ಮಾರಿಗುಡಿ ಮುಂದೆ
ಮಡಕೆಗೆ ದವಸ ಧಾನ್ಯ ಬೇಸಿ
ಸರುಗ ಹೋರ್ ಬೇಕು
ಅಂದಚಂದವಾಗಿರುವ ಹುಡ್ಗೆರ್ನೆಲ್ಲಾ
ಉಚ್ಚೆಂಗವ್ವಗೆ ಬಿಟ್ಟು
ಮುತ್ ಕಟ್ಸ್ ಬೇಕೆನ್ನುತ್ತಿದ್ದ
ಊರ ಒಕ್ಕಲು ಮುಖಂಡರಿದ್ದಾರೆ.

ಸೆಪ್ಪೆದೊಂಟು.ತೊಗರಿ ಕಟ್ಗೆ..
ಎಳ್ ಕಡ್ಡಿನ ಲಟ್ಟನೆ ಮುರಿದು ಒಲೆಗಿಕ್ಕಿ
ಈ ಒಲೆಗೆನ್ ಜಡ್ಬೇನೆ
ಇದ್ರ್ ನೆಗ್ ಬಿದ್ದು ನೆಲ್ಲಿ ಕಾಯಾಗ
ಥೂ..ಎಂದು ಉಗಿದು
ಹುಫ್ ಎಂದು ಊದುವ
ದವಡೆ ಸಿಟ್ಟಿನ ನನ್ನವ್ವಂದಿರ
ಕಣ್ಣೀರಿನ ತೇವಕ್ಕೇನು ಸುಂಕವಿಲ್ಲ.

ಹೋರಿಸಾರು.ನಾಟಿಕೋಳಿಸಾರು
ಹಸಿಅವರೆಕಳ್ಸಾರು.
ಆಗಾಗ ಒಣಮುರ್ಗಿ ಸುಟ್ಕಂಡು
ಕೆಂಪಾನೆ ಇಂಡಿ ಚಟ್ನೆ. ಬಿಸಿರಾಗಿಮುದ್ದೆ..
ಇದೆ ನಮ್ ಕೇರಿ ಜವಾರಿ ಕೂಳು

ಇನ್ನು ಅಡವಾಗೆ
ಉಣ್ ಬೇಕು ಎಂದು
ಗಫಗಫ ನುಂಗುತ್ತಿರುವಾಗ
ಕೆರೆಂಚಿನಲ್ಲಿ ಕೆರ್ ಕೆರ್ ಎನ್ತ
ಮುದ್ದೆ ಪಾತ್ರೆ ಸೀಕನ್ನೆ ಕ್ಯರ್ಕಂಡು ತಿನ್ನುವ
ಅಕ್ಕತಂಗಿಯರೆ ಹೆಚ್ಚಿದ್ದಾರೆ..

ಇನ್ನು ಬಾಳ ಇವೆ
ಹರಳಯ್ಯನ ಹುಳಿರಂಪಿಗೆ
ಚನ್ನಯ್ಯನ ಹಗ್ಗ
ಮಾತಂಗಿ ಕರೇಬಾನಿ
ಜಜ್ಜುರಿ ಕೋಲು..ಇತ್ಯಾದಿ….

ಇಗೀಗ ..
ಹಟ್ಟಿಹುಡುಗ್ರು ನಾಕ್ ಅಕ್ಸರ ಕಲ್ತು ಗಟ್ಟಿಯಾಗಿ
ಸಂಘಪಂಗ ಮಾಡ್ಕೊಂಡು
ಏನೇನೊ ಮಾಡ್ತಿವೆ..

-ಹುಚ್ಚಂಗಿಪ್ರಸಾದ್ ಸಂತೇಬೆನ್ನೂರು

Trending

Exit mobile version