ಭಾವ ಭೈರಾಗಿ

ಕವಿತೆ | ಪ್ರೀತಿ ಇಲ್ಲದ ಮೇಲೆ

Published

on

  • ಜಿ.ಎಸ್. ಶಿವರುದ್ರಪ್ಪ

ಪ್ರೀತಿ ಇಲ್ಲದ ಮೇಲೆ –
ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?

ಪ್ರೀತಿ ಇಲ್ಲದ ಮೇಲೆ –
ಮಾತಿಗೆ ಮಾತು ಕೂಡೀತು ಹೇಗೆ?
ಅರ್ಥ ಹುಟ್ಟೀತು ಹೇಗೆ?
ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ
ಪದ್ಯವಾದೀತು ಹೇಗೆ?

ಪ್ರೀತಿ ಇಲ್ಲದ ಮೇಲೆ –
ದಕ್ಷಿಣಾಫ್ರಿಕದ ಕಗ್ಗತ್ತಲಿಗೆ
ಬೆಳಕು ಮೂಡೀತು ಹೇಗೆ?
ಸೆರೆಮನೆಯ ಕಂಬಿಯ ನಡುವೆ
ಕಮರುವ ಕನಸು ಕೊನರೀತು ಹೇಗೆ?
ಬಿಳಿ ಜನರ ಕರಾಳ ಕಪ್ಪು ಹೃದಯಕ್ಕೆ
ಕ್ರಿಸ್ತನ ಕರುಣೆ ಅರ್ಥವಾದೀತು ಹೇಗೆ?

ಪ್ರೀತಿ ಇಲ್ಲದ ಮೇಲೆ –
ಸಂಶಯದ ಗಡಿಗಳುದ್ದಕ್ಕು
ಸಿಡಿಗುಂಡುಗಳ ಕದನ ನಿಂತೀತು ಹೇಗೆ?
ಜಾತಿ-ಮತ-ಭಾಷೆ-ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ?
ನಮ್ಮ ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡೆಗಟ್ಟುವುದು ಹೇಗೆ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version