Connect with us

ದಿನದ ಸುದ್ದಿ

ಸನಾತನಿಗಳಿಗೇಕೆ ಭೀಮ ಭಯ

Published

on

  • ಡಾ.ಕೆ.ಎ.ಓಬಳೇಶ್,ದಾವಣಗೆರೆ

ಭಾರತದ ನೆಲದಲ್ಲಿ ಸಾವಿರಾರು ವರ್ಷಗಳ ಕಾಲ ಅಸಮಾನತೆಯನ್ನು ಪಾಲಿಸಿಕೊಂಡು ಬಂದ ವೈದಿಕತೆಯ ಕಟ್ಟುಪಾಡುಗಳನ್ನು ಮೀರಿ ನಿಂತ ಹಲವಾರು ದಾರ್ಶನಿಕರು ನಮ್ಮ ನಡುವೆ ಅಜರಾಮರವಾಗಿ ಉಳಿದಿದ್ದಾರೆ.

ಇವರು ವೈಚಾರಿಕ ತಳಹದಿಯ ಮೇಲೆ ಸಮಾನತೆಯನ್ನು ಪ್ರತಿಪಾದಿಸಿ, ಮಾನವ ಮಾನವನ ನಡುವಿನ ಸಾಮಾಜಿಕ ಅಂತರದ ಕಂದಕವನ್ನು ಮೆಟ್ಟಿನಿಂತು ಜೀವಪರವಾದ ಚಿಂತನೆಗಳನ್ನು ಬಿತ್ತಿದ್ದಾರೆ. ಇಂತಹ ಮಹಾನ್ ದಾರ್ಶನಿಕರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರಮುಖರಾಗಿದ್ದಾರೆ. ವೈದಿಕರು ತಮ್ಮ ಅಸ್ತಿತ್ವಕ್ಕಾಗಿ ರೂಪಿಸಿಕೊಂಡು ಬಂದ ಅಸಮಾನತೆಯ ವರ್ಣವೃಕ್ಷವನ್ನು ಬೇರು ಸಹಿತ ಕಿತ್ತು ಹಾಕಿ ಸಮಾನತೆಯನ್ನು ಹಂಚಿದ ಶ್ರೇಷ್ಟ ದಾರ್ಶನಿಕರಲ್ಲಿ ಅಂಬೇಡ್ಕರ್ ಅವರ ಪಾತ್ರ ಮಹತ್ವದ್ದು.

ಹೀಗಾಗಿ ಇವರು ಕೇವಲ ವ್ಯಕ್ತಿ ಮಾತ್ರವಲ್ಲ, ಭಾರತದ ಶೂದ್ರರ ಪಾಲಿನ ಭೀಮಬಲ. ಪ್ರಸ್ತುತದಲ್ಲಿ ಬಾಬಾಸಾಹೇಬರ ೧೩೧ನೇ ಜನ್ಮದಿನವನ್ನು ಆಚರಿಸುತ್ತಿರುವ ಸುಸಂದರ್ಭದಲ್ಲಿ ನಾವು ಅವರ ಮೂರ್ತಿ ಆರಾಧನೆಗಿಂತ ಅವರ ಸಾಮಾಜಿಕ ಕಳಕಳಿ, ತುಡಿತ-ಮಿಡಿತ, ಭಾರತಕ್ಕೆ ನೀಡಿದ ಕೊಡುಗೆ ಹಾಗೂ ಶೂದ್ರ ಸಮುದಾಯಗಳ ಮೇಲೆ ಅವರಿಗಿದ್ದ ಬದ್ಧತೆಯನ್ನು ಅರಿಯುವುದು ಸೂಕ್ತವೆಂದು ಭಾವಿಸಲಾಗಿದೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರೆ ನಾವು ಇಂದು ಸ್ಮರಣೆ ಮಾಡುವ ಅಗತ್ಯವೇ ಇರಲಿಲ್ಲ. ಹಾಗೆಯೇ ಇವರು ಸಾರ್ವತ್ರಿಕ ನೆಲೆಯಲ್ಲಿ ಭಾರತೀಯರ ಸ್ಮರಣೆಯಲ್ಲಿಯೂ ಉಳಿಯುತ್ತಿರಲಿಲ್ಲ. ಆದರೆ ಭಾರತದ ಪ್ರತಿಯೊಬ್ಬ ಪ್ರಜೆಯು ಇಂದು ಬಾಬಾಸಾಹೇಬರನ್ನು ಸ್ಮರಣೆ ಮಾಡಿಕೊಳ್ಳಬೇಕಾದ ಅನಿವಾರ್ಯದೆ ಇದೆ ಎಂದಾದರೆ ಅದಕ್ಕೆ ಕಾರಣ ಈ ನಿಸ್ವಾರ್ಥ ವ್ಯಕ್ತಿತ್ವದ ಹಿರಿಮೆಯ ಪ್ರತೀಕವೇ ಸರಿ.

ಭಾರತೀಯರಾದ ನಾವು ಎಪ್ಪತ್ತು-ಎಂಬತ್ತು ವರ್ಷಗಳ ಹಿಂದಿನ ಭಾರತವನ್ನು ಒಂದು ಕ್ಷಣ ಕಣ್ಣು ಮುಚಿ ಸ್ಮರಿಸಿಕೊಂಡರೆ ನಮಗೆ ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಭೀಮಶಕ್ತಿಯ ಸಾಹಸಮಯ ಹೋರಾಟದ ಬದುಕು ಅರ್ಥವಾಗುತ್ತದೆ. ಇಂದು ಹಿಂದುತ್ವದ ಹೆಸರಿನಲ್ಲಿ ಕೋಮುವಾದಿಗಳ ಕೈಗೊಂಬೆಯಾಗಿ ಕುಣಿಯುತ್ತ, ಈ ನೆಲದ ಸಾಮರಸ್ಯವನ್ನು ತಮ್ಮ ಕೈಯಾರೆ ಕೆಡಿಸುತ್ತಿರುವ ಶೂದ್ರ ಸಮುದಾಯದ ಯುವ ಸಮುದಾಯವು ಒಂದು ಕ್ಷಣ ಎಂಬತ್ತು ವರ್ಷಗಳ ಹಿಂದಿನ ತಮ್ಮ ಪೂರ್ವಜರ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡರೆ ಬ್ರಾಹ್ಮಣ್ಯದ ತಾಳಕ್ಕೆ ಕುಣಿಯುತ್ತಿರಲಿಲ್ಲ.

ಬಾಬಾಸಾಹೇಬ್ ಅಂಬೇಡ್ಕರ್ ಅವರ ‘ಚರಿತ್ರೆ ಇಲ್ಲದ ಜನಾಂಗ ಚರಿತ್ರೆಯನ್ನು ನಿರ್ಮಿಸಲು ಸಾಧ್ಯವಿಲ್ಲ. ಚರಿತ್ರೆ ಮರೆತವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ’ ಎಂಬ ಮಾತು ಸತ್ಯದಿಂದ ಕೂಡಿದೆ. ಇಂದು ಬ್ರಾಹ್ಮಣ್ಯದ ತಾಳಕ್ಕೆ ತಕ್ಕಂತೆ ಕುಣಿದು ‘ಹಿಂದುತ್ವ’ದ ಅಮಲೇರಿಸಿಕೊಂಡ ಶೂದ್ರ ಸಮುದಾಯಗಳಿಗೆ ತಮ್ಮ ಚರಿತ್ರೆಯ ಅರಿವಿಲ್ಲ. ಈ ಕಾರಣಕ್ಕೆ ಇವರು ಸಾವಿರಾರು ವರ್ಷಗಳಿಂದ ತಮ್ಮನ್ನು ದಾಸ್ಯಕ್ಕೆ ಒಳಪಡಿಸಿದ ಧರ್ಮದ ರಕ್ಷಣೆಗೆ ಮುಂದಾಗಿದ್ದಾರೆ.

ಬಾಬಾಸಾಹೇಬರ ಈ ಮಾತು ಶೂದ್ರರಿಗೆ ಅರ್ಥವಾಗಿ ತಮ್ಮ ವಾಸ್ತವ ಚರಿತ್ರೆಯನ್ನು ಅರಿತರೆ ಸನಾತನವಾದಿಗಳಿಗೆ ಉಳಿಗಾಲವಿಲ್ಲ. ಇಂತಹ ಸೂಕ್ಷö್ಮತೆಯನ್ನು ಅರಿತ ಸನಾತನವಾದಿಗಳು ಒಂದಿಲ್ಲೊAದು ವಿವಾದ ಸೃಷ್ಟಿಸುವ ಮೂಲಕ ಶೂದ್ರ ಸಮುದಾಯದ ಯುವಶಕ್ತಿಯನ್ನು ಮುಸ್ಲಿಮರು, ಕ್ರೈಸ್ತರ ವಿರುದ್ಧ ಎತ್ತಿಕಟ್ಟುವ ಮೂಲಕ ದೇಶದ ಶಾಂತಿಯನ್ನು ಕದಡುವ ಮೂಲಕ ತಮ್ಮ ಪಟ್ಟಾಭದ್ರ ಹಿತಾಸಕ್ತಿಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ.

ಸನಾತನಿಗಳಿಗೇಕೆ ಭೀಮ ಭಯ

ಸಾವಿರಾರು ವರ್ಷಗಳಿಂದಲೂ ಭಾರತದ ಸೌಹಾರ್ದ ನೆಲದಲ್ಲಿ ಅಸಮಾನತೆಯ ವಿಷಬೀಜವನ್ನು ಬಿತ್ತುತ್ತಲೇ ಬಂದವರು ವೈದಿಕರು. ವೈದಿಕರು ಬಿತ್ತಿದ ಈ ವಿಷಬೀಜ ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ, ಮರವಾಗಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ವೈದಿಕರು ಬಿತ್ತಿದ ಈ ವಿಷಬೀಜದ ಫಲವನ್ನು ಈ ನೆಲದ ಹಲವಾರು ಜೀವಪರ ದಾರ್ಶನಿಕರು ಕಿತ್ತುಹಾಕುವ ಪ್ರಯತ್ನ ಮಾಡಿದ್ದಾರೆ. ಆದರೆ ಸನಾತನವಾದಿಗಳು ಅವರ ಕಾರ್ಯವನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ಬುದ್ಧ ಗುರುವಿನಿಂದ ಆರಂಭಗೊಂಡು ಸಮಕಾಲೀನ ಸಂದರ್ಭದ ಅನುಭಾವಿಕ ಚಿಂತಕರವರೆಗೂ ಮುಂದುವರೆದಿದೆ. ಆದರೆ ಈ ಎಲ್ಲಾ ದಾರ್ಶನಿಕರ ಜೀವಪರವಾದ ಸಮಾನತೆಯ ತತ್ವ-ಚಿಂತನೆಗಳನ್ನು ಮೂಲಭೂತವಾದಿಗಳು ಜೀರ್ಣಿಸಿಕೊಂಡು ವೈದಿಕೀಕರಣಗೊಳಿಸಿದ್ದಾರೆ. ಆದರೆ ಬಾಬಾಸಾಹೇಬರು, ಮತ್ತವರ ತತ್ವ-ಚಿಂತನೆಗಳನ್ನು ಮಾತ್ರ ತಿಂದು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂಬೇಡ್ಕರ್ ಅವರು ವೈದಿಕರ ದಾಹಕ್ಕೆ ಆಹಾರವಾಗದೆ ಶೂದ್ರರ ನೋವಿಗೆ ಆಸರೆಯಾಗಿ ನಿಂತ ಹೆಬ್ಬಂಡೆಯಾದರು.

ಈ ಹೆಬ್ಬಂಡೆಯನ್ನು ಮಾತ್ರ ವೈದಿಕರು ಮಣಿಸಲು ಸಾಧ್ಯವಾಗಲೇ ಇಲ್ಲ. ಅಂಬೇಡ್ಕರ್ ಅವರು ಸಾವಿರಾರು ವರ್ಷಗಳಿಂದ ಭಾರತದ ನೆಲದಲ್ಲಿ ಅಸಮಾನತೆಯನ್ನು ಬಿತ್ತಿ ಬೆಳೆದುಕೊಂಡು ಬಂದಿದ್ದ ಬ್ರಾಹ್ಮಣ್ಯದ ಕಸದಲ್ಲಿ ಕೃಷಿ ಮಾಡಿ ಹಸನು ಮಾಡಿದರು. ಹಿಂದುತ್ವದ ಕಳೆಯ ಮಧ್ಯೆ ನೆನೆಗುದಿಗೆ ಬಿದ್ದಿದ್ದ ‘ಬುದ್ಧತ್ವ’ಕ್ಕೆ ಜೀವ ತುಂಬಿದರು. ಬುದ್ಧಗುರುವಿನ ಜೀವಪರವಾದ ಆಶಯಗಳನ್ನು ಕೇಂದ್ರವಾಗಿಟ್ಟುಕೊಂಡು ಸರ್ವರನ್ನು ಸಮಾನವಾಗಿ ಕಾಣುವಂತಹ ಸಂವಿಧಾನವನ್ನು ರಚಿಸಿ ಹಿಂದುತ್ವದಲ್ಲಿ ದಾಸ್ಯಕ್ಕೆ ಒಳಗಾಗಿದ್ದ ಶೂದ್ರರು, ಮಹಿಳೆಯರಿಗೆ ಸ್ವಾಭಿಮಾನವನ್ನು ಕಲ್ಪಿಸಿದರು.

ಪ್ರಜಾಪ್ರಭುತ್ವದ ಮಾದರಿಯನ್ನು ಸಂವಿಧಾನಿಕ ನೆಲೆಯಲ್ಲಿ ಜಾರಿಗೆ ತಂದು ಸಾವಿರಾರು ವರ್ಷಗಳ ಕಾಲ ಗುಲಾಮಗಿರಿಯಿಂದ ಬಳಲುತ್ತಿದ್ದ ಪ್ರಜೆಗಳನ್ನೇ ಪ್ರಭುಗಳಾಗಿ ರೂಪಿಸಿದರು. ಇದು ಭಾರತದ ನೆಲದಲ್ಲಿ ಅಂಬೇಡ್ಕರ್ ಎಂಬ ಮಹಾನ್ ಚೇತನದಿಂದ ಮಾತ್ರವೇ ಸಾಧ್ಯವಾಯಿತು.
ಬಾಬಾಸಾಹೇಬರು ಜೀವಪರ ಆಶಯಗಳ ಬೆನ್ನೇರಿ ರೂಪಿಸಿದ ಈ ಸಂವಿಧಾನವು ಸನಾತನವಾದಿಗಳಿಗೆ ಸಹಿಸದ ತುತ್ತಾಗಿತ್ತು. ಭೀಮರಾವ್ ಎಂಬ ಬಲವೇ ಇವರಿಗೆ ಸಿಂಹಸ್ವಪ್ನವಾಯಿತು.

ಬುದ್ಧರನ್ನು ನುಂಗಿದಂತೆ, ಬಸವಣ್ಣರನ್ನು ನುಂಗಿದAತೆ, ಸ್ವಾಮಿ ವಿವೇಕಾಂದರನ್ನು ನುಂಗಿದಂತೆ ಬಾಬಾಸಾಹೇಬರನ್ನು ನುಂಗಲು ಸಾಧ್ಯವಾಗದೆ ಇರುವುದಕ್ಕೆ ಕಾರಣ ಅವರಿಗಿದ್ದ ಶೂದ್ರ, ಅತೀಶೂದ್ರ ಹಾಗೂ ಮಹಿಳೆಯರ ಮೇಲೆ ಇದ್ದಂತಹ ಬದ್ಧತೆ. ಹಾಗೆಯೇ ಇವರು ರೂಪಿಸಿದ ಸರ್ವಸಮಾನತೆಯ ಲಿಖಿತ ಮಾದರಿಯ ಸಂವಿಧಾನ. ಅಂಬೇಡ್ಕರ್ ಅವರು ರೂಪಿಸಿದ ಈ ಸಂವಿಧಾನ ಭಾರತದ ಶೂದ್ರರು ಹಾಗೂ ಮಹಿಳೆಯರ ಪಾಲಿಗೆ ಕೇವಲ ಹೊತ್ತಿಗೆ ಮಾತ್ರವಲ್ಲ. ಸ್ವಾಭಿಮಾನದ ಪ್ರತಿರೂಪ.

ಭಾರತೀಯರೆಲ್ಲರ ಪಾಲಿನ ಶ್ರೇಷ್ಟ ಧರ್ಮಗ್ರಂಥ. ‘ಭಾರತೀಯರಾದ ನಾವು’ ಎಂಬ ಘೋಷವಾಕ್ಯದ ಮೂಲಕ ಆರಂಭವಾದ ಈ ಗ್ರಂಥವು ವೈದಿಕರ ಕಟ್ಟುಪಾಡುಗಳನ್ನು ಬುಡಮೇಲು ಮಾಡಿತು. ಸಾವಿರಾರು ವರ್ಷಗಳ ಕಾಲ ಶ್ರಮರಹಿತವಾಗಿ ಜೀವಿಸುತ್ತಿದ್ದ ಬ್ರಾಹ್ಮಣಶಾಹಿಗಳ ಬದುಕಿಗೆ ಪ್ರಬಲವಾದ ಪೆಟ್ಟು ನೀಡಿತು. ಭಾರತದ ನೆಲದಲ್ಲಿ ವೈದಿಕತೆಯ ಎಲ್ಲಾ ಕುತಂತ್ರಗಳನ್ನು ನೆಲಸಮಗೊಳಿಸಿದವರು ಭೀಮರಾವ್ ಅಂಬೇಡ್ಕರ್. ಹೀಗಾಗಿ ಸನಾತನವಾದಿಗಳಿಗೆ ಇಂದಿಗೂ ಭೀಮಭಯ ಕಾಡುತ್ತಲೇ ಇದೆ.

ಈ ಕಾರಣಕ್ಕಾಗಿಯೇ ಅವರು ಸಂವಿಧಾನವನ್ನು ಬದಲಾಯಿಸುವ ಹುನ್ನಾರಗಳನ್ನು ನಿರಂತರವಾಗಿ ರೂಪಿಸುತ್ತಿದ್ದಾರೆ. ಶೂದ್ರರನ್ನು ಬಳಸಿಕೊಂಡು ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ. ಕೋಮುವಾದಿ ನೆಲೆಯಲ್ಲಿ ರೂಪಿಸುತ್ತಿರುವ ಎಲ್ಲಾ ತಂತ್ರಗಳು ಅನ್ಯಧರ್ಮಿಯರ ಮೇಲಿನ ದ್ವೇಷದಿಂದಲ್ಲ. ಅವುಗಳೆಲ್ಲ ಭಾರತದ ಮಣ್ಣಿನ ಮಕ್ಕಳಾದ ಶೂದ್ರರು ಹಾಗೂ ಅತೀಶೂದ್ರರನ್ನು ಹತ್ತಿಕ್ಕುವಲ್ಲಿ ರೂಪಿಸಿದ ತಂತ್ರಗಳು. ಸನಾತನವಾದಿಗಳಿಗೆ ಮುಸ್ಲಿಮರ ಮೇಲೆ ದ್ವೇಷವಿಲ್ಲ.

ಚರಿತ್ರೆಯ ವಾಸ್ತವತೆಯತ್ತ ಕಣ್ಣಾಯಿಸಿದರೆ ವಿದೇಶಿ ಆಕ್ರಮಣಕಾರರಾದ ಮುಸಲ್ಮಾನರು, ಫ್ರೆಂಚರು, ಡಚ್ಚರು, ಪೋರ್ಚಗೀಸರು, ಬ್ರಿಟಿಷರನ್ನೆಲ್ಲ ಸ್ವಾಗತಿಸಿ ದೇಶಿಯ ದೊರೆಗಳ ವಿರುದ್ಧ ಎತ್ತಿಕಟ್ಟಿದವರು ಇದೇ ಸನಾತನವಾದಿಗಳು. ಭಾರತದ ಚರಿತ್ರೆಯ ಪುಟಗಳಲ್ಲಿ ಯಾವುದೇ ಒಬ್ಬ ದೇಶಿಯ ರಾಜ ಸೋಲನ್ನು ಅನುಭವಿಸಿದ್ದಾನೆ ಎಂದಾದರೆ ಅದರಲ್ಲಿ ಬ್ರಾಹ್ಮಣ್ಯದ ತಂತ್ರಗಾರಿಗೆ ಅಡಗಿಯೇ ಇರುತ್ತದೆ.

ಇಂದು ವಿದೇಶಗಳಿಗೆ ಗುಪ್ತಚರ ಮಾಹಿತಿಗಳನ್ನು ಸೋರಿಕೆ ಮಾಡುತ್ತಿರುವವರಲ್ಲಿ ಇವರದು ಮೇಲುಗೈ. ಹೀಗಾಗಿ ಇವರಿಗೆ ಮುಸಲ್ಮಾನರು ಹಾಗೂ ಇತರೆ ಅನ್ಯಧರ್ಮಿಯರ ಮೇಲೆ ದ್ವೇಷವಿಲ್ಲ. ಇವರ ಮೇಲಿನ ದ್ವೇಷಕ್ಕೆ ಕಾರಣ ಈ ನೆಲದ ಶೂದ್ರರನ್ನು ಹತ್ತಿಕ್ಕುವುದೇ ಆಗಿದೆ. ಆದರೆ ಸನಾತನವಾದಿಗಳಿಗೆ ಇರುವ ಭೀಮ ಭಯದಿಂದ ಶೂದ್ರರು ಹಾಗೂ ಅತೀಶೂದ್ರರನ್ನು ನೇರವಾಗಿ ಎದುರು ಹಾಕಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ಕೋಮುದ್ವೇಷವನ್ನು ಬಿತ್ತುವ ಮೂಲಕ ಶೂದ್ರರನ್ನು ಹತ್ತಿಕ್ಕುವ ಹುನ್ನಾರಗಳನ್ನು ನಿರಂತರವಾಗಿ ಮುನ್ನೆಡೆಸಿಕೊಂಡು ಬಂದಿದ್ದಾರೆ.

ಭೀಮ ಬಲ ಶೂದ್ರರಿಗೆಷ್ಟು ಗೊತ್ತು

ಯಾವುದೇ ಒಬ್ಬ ಮುಂದುವರೆದ ಜಾತಿಯ ಶೂದ್ರನನ್ನು ಅಂಬೇಡ್ಕರ್ ಯಾರು ಎಂದು ಕೇಳಿದರೆ ಅವನ ಬಾಯಿಯಿಂದ ಸಹಜವಾಗಿಯೇ ಹೊರಹೊಮ್ಮುವ ಮಾತು ಅವರೊಬ್ಬ ‘ಹೊಲೆಯ ಮಾದಿಗ’ ಸಮುದಾಯದ ನಾಯಕ ಎಂಬುದೇ ಆಗಿರುತ್ತದೆ. ಆದರೆ ಈ ಭೀಮ ಶಕ್ತಿ ನನಗೆಷ್ಟು ಸ್ವಾಭಿಮಾನ, ಸ್ವಾವಲಂಬನೆಯನ್ನು ಕಲ್ಪಿಸಿಕೊಟ್ಟಿದೆ ಎಂಬ ಅರಿವು ಶೂದ್ರರಿಗೆ ಇಲ್ಲವಾಗಿದೆ. ಇದು ಆ ವ್ಯಕ್ತಿ ಅಥವಾ ಸಮುದಾಯದ ತಪ್ಪಲ್ಲ.

ಅವರ ತಲೆಯೊಳಗೆ ಅಂಬೇಡ್ಕರ್ ಎಂಬ ಶಕ್ತಿಯ ಬಗ್ಗೆ ಮೂಲಭೂತವಾದಿಗಳು ತುಂಬಿರುವ ಹುಸಿ ಹುನ್ನಾರಗಳಿವು. ಅಂಬೇಡ್ಕರ್ ಎಂಬ ಈ ವ್ಯಕ್ತಿತ್ವ ಭಾರತದ ನೆಲದಲ್ಲಿ ಜನ್ಮತಳೆಯದೆ ಹೋಗಿದ್ದರೆ ನಾವೆಲ್ಲ ಶಿಕ್ಷಣ, ರಾಜಕೀಯ, ಅಧಿಕಾರದಿಂದ ಹೊರಗುಳಿದು ಜೀತ ಮಾಡಬೇಕಾದ ಪರಿಸ್ಥಿತಿ ಇನ್ನೂ ಜೀವಂತವಾಗಿರುತ್ತಿತ್ತು ಎಂಬುದು ಶೂದ್ರ ಸಮುದಾಯಗಳಿಗೆ ಅರ್ಥವಾಗಿಯೇ ಇಲ್ಲ.

ಶೂದ್ರರಿಗೆ ಸಾವಿರಾರು ವರ್ಷಗಳಿಂದಲೂ ನಮ್ಮ ಪೂರ್ವಜರನ್ನು ಶೋಷಣೆಗೆ ಒಳಪಡಿಸಿದ ‘ಹಿಂದುತ್ವ’ವನ್ನು ಕಾಪಾಡಿಕೊಳ್ಳಲು ಇರುವ ತವಕ, ನಮಗಾಗಿ ಹಗಲಿರುಳು ದುಡಿದು, ದಣಿದ ಅಂಬೇಡ್ಕರ್ ಎಂಬ ಮಹಾತಾಯಿಯ ಬಗ್ಗೆ ಕಿಂಚಿತ್ತೂ ಅಭಿಮಾನವಿಲ್ಲ. ಈ ದೇಶದಲ್ಲಿ ಶೇ ೩% ಇರುವ ಬ್ರಾಹ್ಮಣರು ಸಂವಿಧಾನವನ್ನು ಬದಲಾಯಿಸುವುದೇ ನಮ್ಮ ಗುರಿ ಎಂದರೆ ಅದಕ್ಕೆ ಚಪ್ಪಾಳೆ ತಟ್ಟುವವರು ಈ ಶೂದ್ರ ಹಾಗೂ ಅತೀಶೂದ್ರ ಸಮುದಾಯದ ಮೂರ್ಖರೆ ಆಗಿದ್ದಾರೆ.

ಜೈ ಶ್ರೀರಾಮ್ ಎಂದು ಗಂಟಲು ಕಿತ್ತೊಗುವಂತೆ ಕೂಗುವ ಶೂದ್ರನಿಗೆ ‘ಜೈಭೀಮ್’ ಎಂಬ ಸ್ವಾಭಿಮಾನದ ಘೋಷ ತಾಗುತ್ತಲೇ ಇಲ್ಲ. ತಾನಗಾಗಿ ದುಡಿದು ನೆಮ್ಮದಿಯ ಬದುಕನ್ನು ಕಟ್ಟಿಕೊಟ್ಟ ತಾಯಿಯನ್ನು ಮರೆತು, ಅಳಸಿದ ಅನ್ನವನ್ನು ವೈಯಾರದಿಂದ ತಿನ್ನಿಸುವ ಆಂಟಿಯನ್ನು ಹೊಗಳುವ ಮಟ್ಟಕ್ಕೆ ಶೂದ್ರ ಸಮುದಾಯ ಇಳಿದು ನಿಂತಿದೆ. ಹೀಗಾಗಿ ಅಂಬೇಡ್ಕರ್ ಎಂಬ ವಿಶ್ವಜ್ಞಾನ ಜಗತ್ತಿಗೆ ಅರಿವಾದರೂ ಭಾರತೀಯ ಶೂದ್ರರಿಗೆ ಮಾತ್ರ ಅಂಬೇಡ್ಕರ್ ಇನ್ನೂ ಅರ್ಥವಾಗಿಲ್ಲ. ಅದು ಅರ್ಥವಾಗಿದ್ದರೆ ಕೇವಲ ‘ಹೊಲೆಯ ಮಾದಿಗ’ ಎಂಬುದಾಗಿಯೇ ಮಾತ್ರ.

ದುರಂತವೆಂದರೆ ಹಲವಾರು ವೈಯಕ್ತಿಕ ಕಾರಣಗಳಿಂದಾಗಿ ಈ ಒಳಪಂಗಡಗಳು ಕೂಡ ಅಂಬೇಡ್ಕರ್ ಅವರಿಂದ ದೂರ ಸರಿದು ಪರ್ಯಾಯ ನಾಯಕನನ್ನು ಎತ್ತಿಕಟ್ಟುವ ಅಪಾಯಕಾರಿ ಸನ್ನಿವೇಶವನ್ನು ನಿರ್ಮಿಸಿಕೊಳ್ಳುತ್ತಿವೆ.

ಶೂದ್ರ ಭಾರತಕ್ಕೆ ಭೀಮ ಬಲವೇ ಅಂತಿಮ

ಭಾರತದೊಳಗೆ ಎರಡು ಬಗೆಯ ಭಾರತಗಳಿವೆ. ಒಂದು ಶೂದ್ರ ಭಾರತ. ಮತ್ತೊಂದು ಬ್ರಾಹ್ಮಣ್ಯ ಭಾರತ. ಶೂದ್ರ ಭಾರತವು ಮೂಲನಿವಾಸಿಗಳದ್ದು. ಬ್ರಾಹ್ಮಣ್ಯ ಭಾರತವು ವಲಸಿಗರದ್ದು. ಹೀಗಾಗಿ ವಲಸಿಗರು ಮೂಲನಿವಾಸಿಗಳ ಮೇಲೆ ನಿರಂತರವಾದ ಆಕ್ರಮಣವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಮೂಲನಿವಾಸಿಗಳ ಭ್ರಾತೃತ್ವ, ಸಮಾನತೆ, ಸೋದರತ್ವ ತತ್ವಕ್ಕೆ ವಿರುದ್ಧವಾಗಿ ವಲಸಿಗರು ವರ್ಣಾಧಾರಿತ ಶ್ರೇಣೀಕೃತ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಈ ಶ್ರೇಣೀಕೃತ ಸೌಧವನ್ನು ಕೆಡವಿ ಸಮಾನತೆಯ ಸಮಾಜದ ನಿರ್ಮಾಣಕ್ಕೆ ಮುಂದಾದವರು ಬಾಬಾಸಾಹೇಬ್ ಅಂಬೇಡ್ಕರ್ ಅವರು. ಹೀಗಾಗಿ ಇಂದು ಶೂದ್ರಾತೀಶೂದ್ರ ಸಮುದಾಯಗಳು ನೆಮ್ಮದಿಯಿಂದ ಬದುಕುವುದಕ್ಕೆ ಕಾರಣ ಭೀಮಶಕ್ತಿ. ಈ ಭೀಮಶಕ್ತಿಯನ್ನು ಅರಿತು ನಡೆದರೆ ನಮ್ಮ ಮುಂದಿರುವ ಇಕ್ಕಟ್ಟು-ಬಿಕ್ಕಟ್ಟುಗಳಿಗೆ ಪರಿಹಾರವಿದೆ. ಈ ಭೀಮ ಬಲದ ಅರಿವು ಶೂದ್ರರೊಳಗೆ ಮೂಡದೇ ಹೋಗಿರುವ ಕಾರಣಕ್ಕೆ ಸನಾತನವಾದಿಗಳು ತಮ್ಮ ವಿಕೃತತೆಯನ್ನು ಮೆರೆಯುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಭಾರತವನ್ನು ಛಿದ್ರಗೊಳಿಸುತ್ತಿದ್ದಾರೆ.

ದಲಿತ, ದಮನಿತ, ಮಹಿಳೆಯರ ಹಕ್ಕುಗಳ ಹರಣಕ್ಕೆ ಮುಂದಾಗಿದ್ದಾರೆ. ಈ ವಿಷಧರ್ಮವು ರಾಜಕೀಯದೊಳಗೆ ಬೆರೆತು ಇಂದು ಭಾರತವನ್ನೇ ಮಾರಾಟ ಮಾಡುವ ಹಂತಕ್ಕೆ ತೆಗೆದುಕೊಂಡು ಹೋಗಿದೆ. ಈ ಕಾರಣಕ್ಕಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಶೂದ್ರಾತೀಶೂದ್ರ ಸಮುದಾಯಗಳು ಕನಿಷ್ಠ ಜೀವನ ನಡೆಸುವುದು ಕೂಡ ಕಷ್ಟಕರವಾಗಿದೆ.

ಶೂದ್ರರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಸಮುದಾಯಗಳ ಮಹಿಳೆಯರು ನೆಮ್ಮದಿಯ ಮತ್ತು ಸ್ವಾಭಿಮಾನದ ಜೀವನ ನಡೆಸಬೇಕಾದರೆ ಭೀಮ ಬಲವನ್ನು ಅರಿಯಬೇಕು. ಅದನ್ನು ಅರಿತರೆ ಮಾತ್ರವೇ ಸಾಲದು. ಭೀಮರ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಪ್ರಬುದ್ಧ ಭಾರತದ ನಿರ್ಮಾಣದತ್ತ ಸಾಗಬೇಕಾಗಿದೆ. ಇಂದು ಬಾಬಾಸಾಹೇಬರ 131ನೇ ಜನ್ಮದಿನದ ಸಂಭ್ರಮದಲ್ಲಿರುವ ನಾವುಗಳೆಲ್ಲ ನಮ್ಮ ನಮ್ಮ ಕಾರ್ಯವೈಖರಿಗಳನ್ನು ಆತ್ಮವಿಮರ್ಶೆಗೆ ಒಳಪಡಿಸಿಕೊಳ್ಳಬೇಕಿದೆ.

ಆ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬದುಕು, ಅವರ ತತ್ವ-ಚಿಂತನೆಗಳನ್ನು ಅರಿತು ಸ್ವಾಭಿಮಾನದ ಬದುಕಿನತ್ತ ಮುಖ ಮಾಡಬೇಕಾದ ತುರ್ತು ನಮ್ಮ ಮುಂದಿದೆ. ಹೀಗಾಗಿ ಶೂದ್ರ ಭಾರತಕ್ಕೆ ಭೀಮಬಲವೊಂದೆ ಅಂತಿಮ ಎಂಬ ಸತ್ಯ ಶೂದ್ರರ ಮನೆ ಮನಗಳನ್ನು ಪ್ರವೇಶಿಸಬೇಕಾಗಿದೆ. ಈ ನೆಲೆಯಲ್ಲಿ ಬಾಬಾಸಾಹೇಬರ ಜನ್ಮದಿನ ನಮ್ಮೆಲ್ಲರ ಅರಿವಿನ ದಿನವಾಗಲಿ. ಜೈಭೀಮ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಾಮಾಜಿಕ ಸುಧಾರಣೆಗೆ ಡಾ. ಬಾಬು ಜಗಜೀವನ್‍ರಾಂ ಕೊಡುಗೆ ಅಪಾರ : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

Published

on

ಸುದ್ದಿದಿನ,ದಾವಣಗೆರೆ:ಡಾ.ಬಾಬು ಜಗಜೀವನರಾಂ ಅವರು ತಮ್ಮ ಬದುಕಿನುದ್ದಕ್ಕೂ ಎಲ್ಲಾ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕ ಎಂದು ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಬಣ್ಣಿಸಿದರು.

ಶನಿವಾರ (ಏ.5) ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರಪಾಲಿಕೆ ಸಂಯುಕ್ತಾಶ್ರಯದಲ್ಲಿ ಮಹಾನಗರಪಾಲಿಕೆಯ ಆವರಣದಲ್ಲಿರುವ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ ಡಾ. ಬಾಬು ಜಗಜೀವನ್ ರಾಂ ಅವರ 118ನೇ ಜಯಂತಿ ಉದ್ಘಾಟಿಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಡಾ.ಬಾಬು ಜಗಜೀವನ ರಾಂ ಅವರು 8 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಸಮಾಜಕ್ಕೆ ಸಮಾನತೆಯ ಸಂದೇಶವನ್ನು ಸಾರಿದ ಸಂಪನ್ನ ರಾಜಕಾರಣಿ ಜಗಜೀವನ ರಾಂ. ಕೇಂದ್ರ ಸರ್ಕಾರದಲ್ಲಿ ಹಲವಾರು ಮಹತ್ತರ ಇಲಾಖೆಗಳ ನಿರ್ವಹಣೆಯನ್ನು ಮಾಡಿದ ಏಕೈಕ ರಾಜಕಾರಣಿ ಎಂದು ಹೇಳಿದರು.

ಪುಟ್ಟ ಬಾಲಕನಾಗಿರುವಾಗಲೇ ದೊಡ್ಡ ದೊಡ್ಡ ಚಳುವಳಿಯಲ್ಲಿ ಭಾಗವಹಿಸಿದ್ದರು. ಹಂತ ಹಂತವಾಗಿ ಬೆಳೆದು. ಅಂದಿನ ಕಾಲದಲ್ಲಿಯೇ ಸುಮಾರು ಐವತ್ತು ಸಾವಿರಕ್ಕಿಂತ ಹೆಚ್ಚು ಜನರನ್ನು ಸೇರಿಸಿ ಹೋರಾಟ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಇವರ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ, ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು.

ಸ್ವಾತಂತ್ರ್ಯ ನಂತರ ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಕೃಷಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದರು.

ಹಸಿರುಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು. ಆಹಾರ ಉತ್ಪಾದನೆ ಹೆಚ್ಚಳ, ಸಾಮಾಜಿಕ ಸುಧಾರಣೆ, ಹಸಿರು ಕ್ರಾಂತಿ ಅಲ್ಲದೇ ಇನ್ನೂ ಹಲವಾರು ಕ್ಷೇತ್ರಗಳ ಅಭಿವೃದ್ಧಿಯಲ್ಲಿ ತಮ್ಮ ಛಾಪು ಮೂಡಿಸಿದ್ದರು. ಅಂತಹ ಮಹಾನ್ ನಾಯಕರ ಜಯಂತಿಯ ಮೂಲಕ ಅವರ ಆದರ್ಶವನ್ನು ನಾವೆಲ್ಲಾ ಪಾಲಿಸಬೇಕು. ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯೋಣ ಎಂದರು.

ಇದಕ್ಕೂ ಮುನ್ನ ಮಹಾನಗರಪಾಲಿಕೆ ಆವರಣದ ಉದ್ಯಾನದಲ್ಲಿರುವ ಡಾ.ಬಾಬು ಜಗಜೀವನ ರಾಮ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಪಿ.ಬಿ.ರಸ್ತೆಯಲ್ಲಿರುವ ಗಾಂಧಿ ಸರ್ಕಲ್‍ನಿಂದ ಮೆರವಣೆಗೆ ಸಾಗಿ ಮಹಾನಗರಪಾಲಿಕೆ ಬಂದು ಸೇರಿತು.

ಈ ವೇಳೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಅವರು ಸಂವಿಧಾನ ಪೀಠಿಕೆಯನ್ನು ಓದಿದರು. ಪ್ರತಿಭಾ ಪುರಸ್ಕಾರ: 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವರುಣ್, ಶೃತಿ, ಸೃಷ್ಠಿ, ಅರ್ಪಿತ, ಲಕ್ಷ್ಮೀ, ಹರ್ಷಧಾರೆ ಇವರಿಗೆ ಸನ್ಮಾನಿಸಲಾಯಿತು.

ನಿವೃತ್ತ ಪ್ರಾಧ್ಯಾಪಕ ರಾಮಚಂದ್ರಪ್ಪ ಎ.ವಿ ಮಾತನಾಡಿ ದೇಶದಲ್ಲಿ ಕೃಷಿಯೇ ಅಭಿವೃದ್ಧಿಯ ಮೂಲಾಧಾರವಾಗಿದೆ. ಈ ದೃಷ್ಟಿಯಿಂದ ದೇಶದ ಭೀಕರ ಬರಗಾಲ, ಕ್ಷಾಮದ ಪರಿಸ್ಥಿತಿಯಲ್ಲಿ ಕೈಗೊಂಡ ಕ್ರಮಗಳು ದೇಶದ ಅಹಾರ ಕೊರತೆಯನ್ನು ನೀಗಿಸಿ ಸುಸ್ಥಿರ ಅಭಿವೃದ್ಧಿಗೆ ಸಹಾಯಕಾರಿಯಾಯಿತು ಎಂದರು.

ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಸಿಇಓ ಸುರೇಶ್.ಬಿ.ಇಟ್ನಾಳ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ.ಸಂತೋಷ್, ದೂಡಾ ಆಯುಕ್ತರಾದ ಹುಲ್ಲುಮನಿ ತಿಮ್ಮಣ್ಣ, ನಿವೃತ್ತ ಪೊಲೀಸ್ ಅಧಿಕಾರಿಗಳಾದ ರವಿನಾರಾಯಣ ಮತ್ತು ರುದ್ರಮುನಿ, ದಲಿತ ಸಮಾಜದ ಮುಖಂಡರಾದ ಮಲ್ಲೇಶ್, ಹನುಮಂತಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮೇ11 ರಂದು ಗ್ರಾಮ ಪಂಚಾಯತಿ ಚುನಾವಣೆ

Published

on

ಸುದ್ದಿದಿನಡೆಸ್ಕ್:ವಿವಿಧ ಕಾರಣಗಳಿಂದ ತೆರವಾಗಿರುವ, ರಾಜ್ಯದ 133 ತಾಲೂಕುಗಳ, 222 ಗ್ರಾಮ ಪಂಚಾಯಿತಿಗಳ, ೨೬೦ ಸದಸ್ಯ ಸ್ಥಾನಗಳಿಗೆ, ಮೇ 11 ರಂದು ಚುನಾವಣೆ ನಿಗದಿಯಾಗಿದೆ ಎಂದು, ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಇದೇ 22 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (ವಿ.ಆರ್.ಡಬ್ಲ್ಯೂ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

18 ರಿಂದ 45 ವರ್ಷ ಒಳಗಿನ ವಯೋಮಾನದವರಾಗಿದ್ದು ಮಾಸಿಕ ರೂ.9,000/-ಗಳ ಗೌರವಧನ ಆಧಾರದ ಮೇಲೆ ಕೆಲಸ ಮಾಡಲು ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಹಾಗೂ ಕಂಪ್ಯೂಟರ್ ಜ್ಞಾನವುಳ್ಳರಾಗಿರಬೇಕು. ಅರ್ಜಿ ಸಲ್ಲಿಸಲು ಏಪ್ರಿಲ್ 21 ಕೊನೆಯದಿನವಾಗಿರುತ್ತದೆದಾವಣಗೆರೆ ತಾಲ್ಲೂಕು ಹಳೇಬಾತಿ, ಆಲೂರಟ್ಟಿ, ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರು ಗ್ರಾಮ ಪಂಚಾಯಿತಿಯ ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿ ವ್ಯಾಪ್ತಿಯಲ್ಲಿ ವಾಸವಿರುವ ವಿಕಲಚೇತನ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ಅರ್ಜಿ ಹಾಗೂ ಇತರೆ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ ಕಛೇರಿ, ದೇವರಾಜ್ ಅರಸ್ ಬಡಾವಣೆ, ‘ಬಿ’ ಬ್ಲಾಕ್, ಶಿವಾಲಿ ಟಾಕೀಸ್ ಹತ್ತಿರ, ದಾವಣಗೆರೆ ದೂರವಾಣಿ:08192-263939 ಹಾಗೂ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು ದಾವಣಗೆರೆ ಮೊ:9590829024 ಮತ್ತು ಚನ್ನಗಿರಿ ತಾಲ್ಲೂಕು ಮೊ:9945738141, ಹರಿಹರ ತಾಲ್ಲೂಕು ಮೊ:9945458058 ಇವರನ್ನು ಸಂಪರ್ಕಿಸಬೇಕೆಂದು ಕಲ್ಯಾಣಾಧಿಕಾರಿ ಡಾ.ಕೆ.ಕೆ ಪ್ರಕಾಶ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending