ಭಾವ ಭೈರಾಗಿ
ಕವಿತೆ | ಸೂಲಗಿತ್ತಿ ನರಸಮ್ಮ
ನಾರಿಯರ ಬಾಳನುದ್ಧರಿಸಲು
ಅವತಾರಿಸಿ ಬಂದ ಅಮ್ಮ
ನಾಡಿನ ಮೂಲೆ ಮೂಲೆಗಳಲ್ಲಿ
ಹೆಸರುವಾಸಿ ನರಸಮ್ಮ.
ತುಮಕೂರಿನ ಪಾವಗಡದ
ಕೃಷ್ಣಾಪುರದಿ ಹುಟ್ಟಿದೆ
ಅಲೆಮಾರಿಯ ಅಂಜಿನಪ್ಪನ
ಮನೆಯ ಮೆಟ್ಟಿದೆ.
ಜೀವಭಾಷೆ ತೆಲುಗು
ಮನೆಯಲ್ಲಿ ಆಡಿ ಬೆಳೆದೆ
ಜೀವನದ ಭಾಷೆ ಕನ್ನಡವ
ಜಗದಲ್ಲಿ ಕೊಂಡಾಡಿದೆ.
ಹನ್ನೆರಡು ಮಕ್ಕಳನ್ನು
ಹೆತ್ತು ಹೊತ್ತು ಸಾಕಿದೆ
ಇಪ್ಪತ್ತೆರಡು ಮೊಮ್ಮಕ್ಕಳನ್ನು
ಅಕ್ಕರೆಯಲ್ಲಿ ಪೊರೆದೆ.
ಮರಿಗೆಮ್ಮಜ್ಜಿಯಿಂದ ಹೆರಿಗೆ
ಮಾಡಿಸುವ ವಿದ್ಯೆ ತಿಳಿದೆ
ಗಿಡಮೂಲಿಕೆಗಳ ಸತ್ವವ
ಬುಡಬುಡಿಕೆರಿಂದ ಕೇಳಿದೆ.
ಹನುಮಕ್ಕಳ ಹೆರಿಗೆ ಮಾಡಿಸಿ
ಜನರನು ಚಕಿತಗೊಳಿಸಿದೆ
ಹದಿನೈದು ಸಾವಿರಕ್ಕೂ ಹೆಚ್ಚು
ಸಹಜ ಹೆರಿಗೆಯ ಮಾಡಿಸಿದೆ.
ಅನಕ್ಷರಸ್ಥಳಾದರು ಗೌರವ
ಡಾಕ್ಟರೇಟ್ ಪದವಿ ಪಡೆದೆ
ಅಕ್ಷರಸ್ಥರು ಹೆಮ್ಮೆ ಪಡುವಂತೆ
ಪದ್ಮಶ್ರೀ ಪುರಸ್ಕೃತಳಾದೆ.
ನೂರಾರು ಪುರಸ್ಕಾರಗಳಿಗೆ
ಭಾಜನಳಾದೆ ನರಸಮ್ಮ
ನೂರರ ಗಡಿ ದಾಟುವ
ಮುನ್ನವೇ ಮರೆಯಾದೆಯಮ್ಮ.
– ಶಿವಮೂರ್ತಿ.ಹೆಚ್