ಭಾವ ಭೈರಾಗಿ

ಕವಿತೆ | ನ್ಯಾಯ ಕೇಳುತ್ತಿವೆ ಪಾರಿವಾಳಗಳು

Published

on

 

ಜಾತಿ ಮತಗಳ ದ್ವೇಷದಲ್ಲಿ
ಸುಟ್ಟು ಹೋದ ಗುಡಿಸಲುಗಳು
ಉರಿದು ಎದ್ದು ಹೊಗೆಯಾಗಿ
ನಭಕೆ ಚಿಮ್ಮಿ ಹಕ್ಕಿಗಳಾಗಿ
ನ್ಯಾಯ ಕೇಳುತ್ತಿವೆ ಪಾರಿವಾಳಗಳು
ಕೋರ್ಟಿನ ಮುಂದೆ.

ಉತ್ತಿದವರು ಬಿತ್ತಿದವರು
ಕೂಳಿಲ್ಲದೆ ಬತ್ತಿ ಹೋದವರು
ಆಳಿದವರು ಬಾಳಿದವರು
ಅಧಿಕಾರವಿಲ್ಲದೆ ಅಸ್ಪೃಶ್ಯರಾದವರು
ಪಾಲು ಕೇಳುತ್ತಿವೆ ಪಾರಿವಾಳಗಳು
ಸೌಧದ ಮುಂದೆ.

ಕಾಲಕಾಲದಿಂದಲೂ ನಿಮಗೆ
ಮನೆಗಳನ್ನು ಕಟ್ಟಿದವರು
ಮನಗಳನ್ನು ಕಟ್ಟಿದವರು
ನಾಡಿಲ್ಲದೆ, ಗೂಡಿಲ್ಲದೆ, ಕಾಡಿಲ್ಲದೆ
ಜಾಗ ಕೇಳುತ್ತಿವೆ ಪಾರಿವಾಳಗಳು
ಬಂಗಲೆಗಳ ಮುಂದೆ.

ಆನೆ ಕುದುರೆ ಕಾಲಾಳುಗಳು
ಬಣ ಬಣಗಳ ನಡುವೆ
ಬಡಿದಾಡಿ ಸತ್ತವರು
ನಿಮಗಾಗಿಯೆ ಜೀವ ತೆತ್ತವರು
ಬದುಕು ಕೇಳುತ್ತಿವೆ ಪಾರಿವಾಳಗಳು
ಅರಮನೆಗಳ ಮುಂದೆ.

ಶತಮಾನಗಳ ನೋವ ಬಿಕ್ಕಳಿಸಿ
ನ್ಯಾಯಕ್ಕಾಗಿ ಆಗ್ರಹಿಸಿ
ಚಿಲಿಪಿಲಿ ಕಿಚಿಪಿಚಿ ದನಿಯ ಎತ್ತರಿಸಿ
ಹಾಡುತ್ತಿರುವ ಹಕ್ಕಿಗಳನ್ನು
ಕಾಯುತ್ತಾ ನಿಂತಿವೆ ಪ್ರತಿಮೆಗಳು
ಊರಿನ ಮುಂದೆ.

ಡಾ. ಪ್ರಸನ್ನ ನಂಜಾಪುರ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version