ಭಾವ ಭೈರಾಗಿ
ಕವಿತೆ | ನಿರರ್ಥಕರಣ
ನಿರರ್ಥಕರಣವೆಂದವರಾರು
ಯಾವುದೂ ನಿರರ್ಥವಲ್ಲ
ಆ ಕಾಲದ ಅನರ್ಥಗಳ ತೇಪೆಹಾಕು, ಸಾಕು.
ಅರ್ಥಕ್ಕೆ ಹೊಸ ಅರ್ಥವ ಕೊಡು ನೊಚ್ಚಗೆನಿಸಬೇಕು ಅಷ್ಟೇ
ಸಾವು ನೋವು ಅನ್ನ ಹಸಿವುಗಳ ಹೆಗಲಿಗೆ
ತ್ಯಾಗ ಯೋಗಗಳ ನೊಗವ ಬಿಗಿದುಬಿಡು ಬಿಡು
ಅದು ಹಾಗೆ ಸಾಗುತ್ತಿರಲಿ ಬದುಕ ಬಂಡಿ
ಭ್ರಮೆಯ ಕಂತೆಗಳ ಹೊತ್ತು
ಆ ಗಂಧರ್ವನ ಹೆಡೆಮುರುಗಿ ಕಟ್ಟು ಬಿಚ್ಚಲು
ಎಷ್ಟೊಂದು ಜನ ಗರತಿಯರಿಲ್ಲಿ ಗೊತ್ತೇನು?
ಬೇಕಿದ್ದರೆ ಪೆಂಡಾಲಿಗೆ ಬಂದು ಮೈ
ರೋಮಾಂಚನ ಗೊಳ್ಳುವ ಮಾತಕೇಳು
ನಿನ್ನ ಖಾತೆಗೆ ಲಕ್ಷ ಲಕ್ಷವೇಕೆ ಕೋಟಿಕೋಟಿ ಪುಣ್ಯ
ಜಮೆಯಾದರೆ ಸಾಕಲ್ಲವೇ?
ಈಗಿದು ಶುಶೃಷಾಕಾಲ ..ಹುಣ್ಣುಗಳು..?
ವಾಸಿಯಾಗಬೇಕೆಂದರೆ ಒಂದಿಷ್ಟು ನೋವೂ ಸಹಿಸಿಕೋ
ಅದೋ..ಅಲ್ಲಿ ನೋಡು!
ಕಮ್ಮಾರ, ಕುಂಬಾರ, ಚಮ್ಮಾರ, ಲೋಹಾರ,
ಮಡಿಕೆ ಕುಡಿಕೆ ಪೊರಕೆ ಕುಡುಗೋಲು ಕಡಗೋಲು
ಮತ್ತೆ ಅವಳು ನ್ಯಾಪ್ಕಿನ್ ಹಿಡಿದು
ಇದುವರೆಗೂ ಆದ ಅರ್ಥ ಅನರ್ಥ
ನಿರರ್ಥಕರಣಗಳೆಲ್ಲವ ಸಮರ್ಥಗೊಳಿಸುತಿದ್ದಾರೆ
ಒಂದಷ್ಟು ದಿನ ಮಾತ್ರ ಬಾಕಿ
ಇನ್ನೇನು ನೀನು ದೇವಲೋಕದಂತ ಆ ರಾಜ್ಯದ
ಅತಿ ಹತ್ತಿರದಲ್ಲಿರುವೆ
ಪ್ಲೀಸ್….
ನಿರರ್ಥಕರಣವೆನಬೇಡ
–ಹಜರತ್ ಅಲಿ ಉಜ್ಜಿನಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243