ಭಾವ ಭೈರಾಗಿ

ಆ ಒಂಟಿತನವನ್ನ ‘ದಿವ್ಯ ಏಕಾಂತ’ ಅಂದುಕೊಂಡುಬಿಡಿ

Published

on

ಪರಿಸ್ಥಿತಿಯನ್ನ ಒಂದಲ್ಲಾ ಒಂದು ಕಾಲಘಟದಲ್ಲಿ ಎಲ್ಲರೂ ಅನುಭವಿಸಿರ್ತಾರೆ. ಏನುಬೇಕಾದ್ರೂ ಅನುಭವಿಸಬಹುದು ಆದರೆ ಈ ಒಂಟಿತನ ಇದೆಯಲ್ಲ ಅದರಷ್ಟು ಭಯಾನಕ ಹಾಗೂ ಅಪಾಯಕಾರಿ ಮತ್ತೊಂದಿಲ್ಲ. ಯಾಕಂದ್ರೆ ಈ ಒಂಟಿತನ ಬಹಳಷ್ಟು ಜನರ ಜೀವನವನ್ನ ಉದ್ದಾರ ಮಾಡಿದ್ರೆ ಅಷ್ಟೇ ಪ್ರಮಾಣದಲ್ಲಿ ಹಾಳಾಗುವ ದಾರಿಯನ್ನೂ ತೋರಿಸಿದೆ.

ಆರಂಭದಲ್ಲಿ ಒಂಟಿತನ ಅಂದರೇನು ಅಂತಾನೇ ಗೊತ್ತಿರಲ್ಲ. ಜೊತೆಲಿ ಯಾರಾದ್ರೂ ಇದ್ದು ಯಾವುದೋ ಒಂದು ಘಟ್ಟದಲ್ಲಿ ಅವರು ನಮ್ಮನ್ನ ಬಿಟ್ಟು ಹೋದಾಗಲೇ ಮೊದಲಬಾರಿಗೆ ಒಂಟಿತನದ ಅನುಭವವಾಗೋದು. ಅದು ನಮ್ಮೊಂದಿಗೆ ಬೆಳೆದ ಗೆಳೆಯನೊ, ಬೆಚ್ಚಗಿನ ಪ್ರೀತಿ ನೀಡಿದ್ದ ಗೆಳತಿಯೋ, ನಿನ್ನೆವರೆಗೂ ಜೊತೆಗೆ ಆಡಿ ಇಂದು ಮದುವೆಯಾಗಿ ಹೋದ ಅಕ್ಕನೋ, ಅಥವಾ ಮರೆತೂ ಮರೆಯಲಾರೆ ಎಂಬ ನಿಮ್ಮ ಜೀವನದ ಯಾವುದಾದರೂ ಒಂದು ಪಾತ್ರವೋ ನೀವು ನಿರೀಕ್ಷಿಸದ ಯಾವುದೋ ಒಂದು ದಿನ ನಿಮ್ಮಿಂದ ಇದ್ದಕ್ಕಿದ್ದಂತೆ ದೂರವಾಗಿಬಿಡ್ತಾರೆ. ನಿನ್ನೆವರೆಗೂ ಆ ಮಗುವಿನ ಭವಿಷ್ಯದ ಕುರಿತು ಸಾವಿರಾರು ಕನಸುಕಟ್ಟಿದ ತಾಯಿ ಇದ್ದಕ್ಕಿದ್ದಂತೆ ಮಗುವಿನ ಉಸಿರು ನಿಂತು ಮಡಿಲು ಬರಿದಾದಾಗ ಸಹಿಸುವುದಾದರೂ ಹೇಗೆ ಅಲ್ವಾ,,,

ಇವೆಲ್ಲ ಒಂದು ಥರಾ ಆದರೆ ಬಹುತೇಕ ಯುವ ಮನಸ್ಸುಗಳು ಅನುಭವಿಸೋದು ಅದೊಂದೇ ರೀತಿಯ ಒಂಟಿತನ . ಅದೇ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಯಾವುದೋ ಊರಿಂದ ಬಂದ ಅವನನ್ನೋ ಅವಳನ್ನೋ ಜೀವ ಹೋಗುವಷ್ಟು ಇಷ್ಟಪಟ್ಟುಬಿಡ್ತೀವಿ, ಅವಳ ಅಥವಾ ಅವನ ಹಿನ್ನೆಲೆ ಏನು ಅವರ ಮನೋಧರ್ಮ ಹೇಗಿದೆ, ಆಲೋಚನೆಗಳಾದ್ರೂ ನಮಗೆ ಹೊಂದಿಕೊಳ್ಳುತ್ತಾ ಇದ್ಯಾವುದನ್ನೂ ಅಷ್ಟು ಸೀರಿಯಸ್ಸಾಗಿ ಯೋಚನೇನೆ ಮಾಡಿರಲ್ಲ, ಅದೆಲ್ಲದನ್ನೂ ಮೀರಿದ ಅದ್ಯಾವುದೋ ಒಂದು ಕಾರಣಕ್ಕೆ ಅವರನ್ನ ಹಚ್ಚಿಕೊಂಡಿರ್ತೀವಿ, ಎಷ್ಟರಮಟ್ಟಿಗೆ ಅಂದ್ರೆ ಜಗತ್ತಿನಲ್ಲಿ ಯಾರೂ ಇಲ್ಲದಿದ್ರೂ ಪರವಾಗಿಲ್ಲ ಅವರೊಬ್ಬರಿದ್ರೆ ನಾನು ಖುಷಿಯಾಗಿರಬಲ್ಲೆ ಅನ್ನುವಷ್ಟರಮಟ್ಟಿಗೆ. ಇದೆಲ್ಲದಕ್ಕೂ ರಾಯಭಾರಿಯಾಗೋದು ಅದೇ ಮೊಬೈಲ್ ಫೋನ್, ಅದು ಬಡಿದುಕೊಳ್ತು ಅಂದ್ರೆ ಅದು ಅವನೊಬ್ಬನದೇ ಕಾಲ್ ಆಗಿದ್ರೆ ಸಾಕು ಅನ್ನುವಷ್ಟರ ಮಟ್ಟಿಗೆ ಅವಳು ಅವನನ್ನ ಇಷ್ಟ ಪಟ್ಟಿರ್ತಾಳೆ. ಅವನೂ ಅಷ್ಟೆ ಮೊಬೈಲ್ ರಿಂಗಿಂಗ್ ಮೋಡ್ ನಲ್ಲಿದೆ ಅಂತ ಗೊತ್ತಿದ್ದರೂ ಅವಳ ಫೋನಿಗಾಗಿ ಕಾದು ಕಾದು ಐದುನಿಮಿಷಕ್ಕೊಮ್ಮೆ ತನ್ನ ಮೊಬೈಲ್ ನ ಜೇಬಿಂದ ತೆಗೆದು ಚೆಕ್ ಮಾಡ್ತಾನೆ. ಹೀಗಿದ್ದ ಅವರಿಬ್ಬರೂ ಪ್ರೇಮಿಗಳಾಗಿರಲೇಬೇಕು ಅಂತ ನಿಯಮವೇನಿಲ್ಲ, ಹೆಸರೇ ಇಡಲಾಗದ ಅದ್ಯಾವುದೋ ಬಂಧ ಅವರಿಬ್ಬರನ್ನ ಕಟ್ಟಿಹಾಕಿರುತ್ತೆ. ಹೀಗಿದ್ದವರು ಅದ್ಯಾವುದೋ ಒಂದು ಸಂಧರ್ಭದಲ್ಲಿ ಒಬ್ಬರು ಮಾಡಿದ ದುಡುಕಿಗೋ, ಸಣ್ಣ ತಪ್ಪಿಗೋ ಅಥವಾ ಕಾರಣವೇ ಅಲ್ಲದ ಯಾವುದೋ ಕಾರಣಕ್ಕೊ ತಮ್ಮ ತಮ್ಮ ಈಗೋಗಳಿಗಾಗಿ ದೂರ ಆಗ್ಬಿಡ್ತಾರೆ. ಆಗ ಶುರುವಾಗುತ್ತೆ ನೋಡಿ ಈ ಒಂಟಿತನ, ಬದುಕಿನಲ್ಲಿ ನನಗೂ ಇಂಥಾ ಒಂದು ಕ್ಷಣ ಬರಬಹುದು ಅಂತ ದೇವರಾಣೆ ಯಾರೂ ಊಹಿಸಿರಲ್ಲ. ಇದುವರೆಗೂ ಸಾವಿರಬಾರಿ ಕೇಳಿದರೂ ಏನೂ ಅನ್ನಿಸದ ಅದ್ಯಾವುದೋ ಫೀಲಿಂಗ್ ಸಾಂಗ್ ನ್ನ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ ಅದೇ ಒಮಟಿತನ.

ಈ ಒಂಟಿತನವನ್ನ ಸರಿಯಾಗಿ ನಿಭಾಯಿಸಬಲ್ಲವರು ಏನು ಬೇಕಾದ್ರೂ ಸಾಧಿಸಬಹುದು. ನನಗೆ ಜೀವನವೇ ಬೇಡ ನನ್ನಪಾಡಿಗೆ ನನ್ನ ಬಿಟ್ಟುಬಿಡಿ ಅಮತ ಅಂದವನು ಯಾವ ಕೆಲಸವನ್ನೂ ಮಾಡದೇ ಜೀವನ ಹಾಳುಮಾಡಿಕೊಳ್ಳಬಹುದು ಅಥವಾ ಇದೇ ಒಂಟಿತನವನ್ನ ಏಕಾಂತ ಅಂತ ಅಂದುಕೊಮಡು ಕೈಗೆ ಸಿಕ್ಕ ಪುಸ್ತಕವನ್ನೆಲ್ಲಾ ಓದಿ ದೊಡ್ಡ ಜ್ಞಾನಿಯಾಗಬಹುದು. ಈ ಸಮಯದಲ್ಲಿ ಮನಸಲ್ಲಿ ಹುಟ್ಟೋ ಹಟ ಇದೆಯಲ್ಲ ಆ ಹಠ ಬೆಂಕಿಯಿದ್ದಂತೆ ಆ ಬೆಂಕಿಯನ್ನ ಸರಿಯಾಗಿ ಬಳಸಿಕೊಂಡು ಒಲೆ ಹಚ್ಚಿ ಅಡುಗೆ ಮಾಡಿ ಸಾವಿರಾರು ಜನರಿಗೆ ಊಟ ಹಾಕಬಹುದು ಅಥವಾ ಮತ್ತೊಂದು ರೀತಿಯಲ್ಲಿ ಬಳಸಿ ಯಾರದಾದರೂ ಮನೆಗೆ ಬೆಂಕಿಹಚ್ಚಿ ಮಸಣ ಮಾಡಿಬಿಡಬಹುದು. ಈ ಆಯ್ಕೆ ನಮ್ಮಕೈಯ್ಯಲ್ಲೇ ಇರುತ್ತೆ.

ಆ ಒಂಟಿತನದಲ್ಲಿ ಹುಚ್ಚುಹಿಡಿದವರಂತೆ ಯಾವುದಾದರೂ ಸಾಹಸಗಳನ್ನು ಮಾಡಬಹುದು. ನಮ್ಮಿಂದ ಕಲಿಯಲು ಅಸಾಧ್ಯ ಅನ್ನುವಂಥದ್ದೇನೋ ಒಂದನ್ನು ಕಲಿತು ಮುಗಿಸಿಬಿಡಬಹುದು ಯಾಕಂದ್ರೆ ಆಗ ನಮಗೆ ನಾವು ಬ್ಯುಸಿಯಾಗಿರಬೇಕು ಅಷ್ಟೇ. ಹೌದು ಇದೇ ಅದಕ್ಕಿರುವ ಏಕೈಕ ಮಾರ್ಗ. ಅಂತಹಾ ಒಂದು ಒಂಟಿತನ ನಿಮ್ಮಬಾಳಲ್ಲಿ ಬಂದಾಗ ನಿಮ್ಮನ್ನ ನೀವು ಎಷ್ಟು ಸಾಧ್ಯವೋ ಅಷ್ಟು ಬ್ಯುಸಿಯಾಗಿಟ್ಟುಕೊಳ್ಳುವುದು ಉತ್ತಮ.

ಕೈಗೆ ಸಿಕ್ಕ ಕೆಲಸ ಮಾಡಿ, ಯಾರೊಮದಿಗೆ ಮಾತಾಡಿದ್ರೆ ಮನಸಿಗೆ ನೆಮ್ಮದಿ ಅನ್ನಿಸುತ್ತೋ ಅವರೊಂದಿಗೆ ಮಾತಾಡಿ. ಮನಸಿಗೆ ಮುದ ಅನ್ನೋ ಪುಸ್ತಕ ಓದಿ, ಹೊಸದಾಗಿ ಏನಾದರೂ ಕಲಿಯಿರಿ. ಹೀಗೆ ಬ್ಯುಸಿಯಾಗಿರೋಕೆ ಪ್ರಯತ್ನಿಸಿದರೆ ನಿಮಗೆ ಗೊತ್ತಿಲ್ಲದೇ ಈ ಹಾಳು ಒಂಟಿತನ ದಿವ್ಯ ಏಕಾಂತವಾಗಿ ಪರಿಣಮಿಸಿರುತ್ತೆ. ಆ ದಿವ್ಯ ಏಕಾಂತ ನಮ್ಮಿಂದ ಯಾವುದಾದರೂ ಒಂದು ಸಾಧನೆ ಮಾಡಿಸಿಬಿಟ್ಟಿರುತ್ತೆ. ಇವನಿಮದ ಇದು ಹೇಗೆ ಸಾಧ್ಯ ಅನ್ನುವಷ್ಟರ ಮಟ್ಟಿಗೆ ನಾವು ಯಾವುದೋ ಒಂದು ಸಾಧನೆ ಮಾಡಿರ್ತೇವೆ, ಆಮೇಲೆ ಯಾರಾದರೂ ನಮ್ಮ ಏಕಾಂತಕ್ಕೆ ಭಂಗ ತಂದರೆ ಅವರಬಗ್ಗೆಯೇ ಕೋಪ ಬರುತ್ತೆ.

ದಿನೇ ದಿನೇ ನಾವು ನಮ್ಮನ್ನ ನೋಡಿಕೊಳ್ಳುವ ರೀತಿಯನ್ನ ಬದಲಿಸಿಕೊಳ್ತಾ ಅದ್ಯಾವತ್ತೋ ಒಂದು ದಿನ ನಮ್ಮಬಗ್ಗೆ ನಾವು ಹೆಮ್ಮೆ ಪಡ್ತಿರ್ತೀವಿ. ಒಬ್ಬರೇ ಇರೋ ಆ ಕ್ಷಣವನ್ನ ನಮ್ಮದೇ ರೀತಿಯಲ್ಲಿ ಎಂಜಾಯ್ ಮಾಡ್ತಿರ್ತೀವಿ. ಆ ನಂತರದಲ್ಲಿ ಎಷ್ಟೇ ಒತ್ತಡದ ಕೆಲಸವಿದ್ದರೂ ಸ್ವಲ್ಪಹೊತ್ತು ಈ ಏಕಾಂತ ಅನ್ನೋ ಥೆರಪಿ ತಗೊಂಡ್ರೆ ಎಲ್ಲಾ ಸುಲಭ ಅನ್ನಿಸಿಬಿಡುತ್ತೆ. ಯಾಕಂದ್ರೆ ನಾವು ನಮ್ಮ ಜೊತೆಗೂ ಸ್ವಲ್ಪಕಾಲ ಕಳೆಯಬೇಕಿರುತ್ತೆ. ಊರೆಲ್ಲರ ಜೊತೆಗು ಮಾತಾಡೋ ನಾವು ನಮ್ಮ ಆತ್ಮದ ಜೊತೆ ಮಾತಾಡಬೇಕಲ್ವಾ, ನಮ್ಮ ಬಗ್ಗೆಯೂ ನಾವು ಸ್ವಲ್ಪ ಚಿಂತಿಸಬೇಕಲ್ವಾ, ಯಾಕೆ ಹುಟ್ಟಿದ್ದೆ, ಏನು ಮಾಡಿದೆ, ಮುಂದೇನು ಮಾಡಬೇಕಿದೆ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬಹುದಾದ ಏಕೈಕ ಸಮಯ ಆ ಏಕಾಂತ. ಅದನ್ನೊಮ್ಮೆ ಯೋಚಿಸಿನೊಡಿ ಅಲ್ವಾ,,,,,

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

Leave a Reply

Your email address will not be published. Required fields are marked *

Trending

Exit mobile version