ಭಾವ ಭೈರಾಗಿ
ಕವಿತೆ | ವಿರಹ ಲೇಖನ
- ಪಂಜಾಬಿ ಮೂಲ : ಭಾಯಿ ವೀರ್ ಸಿಂಘ್, ಕನ್ನಡಕ್ಕೆ : ಎಸ್.ಮಾಲತಿ
ಓ ಜ್ಯೋತಿಷಿ ಜಾತಕವನ್ನು ನೋಡು
ನನ್ನ ಭಾಗ್ಯದಲ್ಲಿ ಎಷ್ಟು ವಿರಹವಿದೆ ನೋಡು.
ಓ ಜ್ಯೋತಿಷಿ ನೀನು ಕಣಿ ಹೇಳು
ನನ್ನ ಪ್ರಿಯ ಮನೆಗೆ ಬರುವುದು ಯಾವಾಗ
ಓ ಜೋಗಿ ದುಃಖವಿಲ್ಲದವನ ಬಗ್ಗೆ ಹೇಳು
ವಿರಹದ ದುಃಖ ಕಳೆಯುವುದು ಎಂದು.
ನನ್ನ ಪ್ರಿಯತಮನ ಪ್ರೇಮ ಫಕೀರನೇ
ನನ್ನ ವಿರಹ ರೇಖೆಯನ್ನು ಅಳಿಸಿಹಾಕು.
ಸಂತನೇ, ನನ್ನ ವಿರಹದ ಲೇಖನ ಅಳಿಸಿ ಹೋಗುವ ಹಾಗೆ ನೀನೊಂದು ಹೊಡೆತವನ್ನು ಹೊಡೆ.
ಹೃದಯದ ವೇದನೆಯನ್ನು ಯಾರೂ ಕೇಳುವುದಿಲ್ಲ
ಯಾರೂ ಕರೆಯುವುದಿಲ್ಲ. ಪ್ರೀತಿಸುವುದಿಲ್ಲ
ಮನಸ್ಸನ್ನು ರಮಿಸಿ ಬಳಲಿದ್ದೇನೆ
ಬದುಕಿದ್ದೇನೆ ಬರೀ ಆಸೆ ಹೊತ್ತು
ನಿನ್ನ ಸುಖ ಸಂದೇಶಕ್ಕಾಗಿ ಕಾಯುತ್ತ
ನಿನ್ನ ದರ್ಶನದ ಪ್ರತೀಕ್ಷೆಯಲ್ಲೇ ಕುಳಿತಿದ್ದೇನೆ.
ನಿರೀಕ್ಷೆಯಲ್ಲಿಯೇ ವಯಸ್ಸು ಕಳೆಯುತ್ತಿದೆ
ಈಗ ನಿರೀಕ್ಷೆಯ ಸಾಮರ್ಥ್ಯ ಸ್ವಲ್ಪವೂ ಉಳಿದಿಲ್ಲ
ನೀನಾಗಿಯೇ ಬಂದುಬಿಡು ಪ್ರಿಯತಮನೇ
ಪ್ರೀತಿಸುವುದರಲ್ಲಿ ಹೊತ್ತು ಮಾಡಬೇಡ.
ನಿನ್ನಲ್ಲಿ ನಿವೇದಿಸುತ್ತಿದ್ದೇನೆ, ನಾ ನಿನ್ನ ದಾಸಿ
ಕೊನೆವರೆಗೆ ನಿನ್ನನ್ನೇ ಅನುಸರಿಸುವವಳು ನಾನು.
(ಈ ‘ ವಿರಹ ಲೇಖನ’ ಕವಿತೆಯನ್ನು ‘ ನನ್ನ ಪ್ರಿಯತಮನೇ ಬಾಳು‘, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಪಂಜಾಬಿ ಕವಿತೆಗಳು ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243