Connect with us

ದಿನದ ಸುದ್ದಿ

ಪರಿಸರದ ಪ್ರಜ್ಞೆ ಇಲ್ಲದಾಗ, ಸೃಷ್ಟಿಸುತ್ತಿರುವ ಜಾಗತಿಕ ತಲ್ಲಣಗಳು..!

Published

on

  • ಸೋಮನಗೌಡ. ಎಸ್.ಎಂ ಕಟ್ಟಿಗೆಹಳ್ಳಿ,ಪತ್ರಕರ್ತರು, ಬೆಂಗಳೂರು

ರಮಾಣು ಬಾಂಬುಗಳನ್ನು ಒಂದಾದ ಮೇಲೆ ಒಂದರಂತೆ ಸಿಡಿಸಿ ಈ ಜಗತ್ತಿನ ಪವರ್ ಫುಲ್ ರಾಷ್ಟ್ರ ಅಮೆರಿಕವನ್ನೇ ನಿರ್ನಾಮ ಮಾಡುತ್ತೇನೆ ಎಂದಿದ್ದ ಉತ್ತರ ಕೋರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಈಗ ಅನಾರೋಗ್ಯದಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ತನ್ನಲ್ಲಿರುವ ಪರಮಾಣು ಸಿಡಿತಲೆಗಳಿಂದ ಇರಾನ್ ದೇಶವನ್ನೇ ನಿರ್ನಾಮ ಮಾಡಬಲ್ಲೆ ಅಂತ ಹೇಳಿದ್ದ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇಡೀ ವಿಶ್ವವನ್ನೇ ದಂಗು ಬಡಿಸುತ್ತಿರುವ ಕೋವಿಡ್-19 ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ.

ಅತ್ಯಾಧುನಿಕ ಮಿಸೈಲ್‍ಗಳು, ಅಣುಬಾಂಬ್‍ಗಳು, ಶಸ್ತ್ರಸಜ್ಜಿತ ಸೈನ್ಯನಿಂದ ತಮ್ಮ ತಮ್ಮ ದೇಶಗಳನ್ನು ರಕ್ಷಿಸಿಕೊಂಡಿರುವ ಬಹುತೇಕ ಎಲ್ಲಾ ದೇಶಗಳನ್ನು ಕಾಣದ ಒಂದು ವೈರಣು ಜಗತ್ತನ್ನೇ ನಾಶ ಮಾಡಲು ತನ್ನ ಕಬಂಧಬಾಹುವನ್ನು ಚಾಚುತ್ತಲೇ ಇದೆ.

ವಿಶ್ವದ ಜನರೆಲ್ಲರೂ ಕೊರೋನಾ ವೈರಸ್ ಎಂಬ ಯಃಕಶ್ಚಿತ್ ಸೂಕ್ಷ್ಮಾಣುವಿಗೆ ಹೆದರಿ ಮನೆಯಲ್ಲೇ ಅವಿತು ಕುಳಿತಿದ್ದಾರೆ. ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಪ್ರಪಂಚದ ಎಲ್ಲಾ ನಗರಗಳು ಬಿಕೋ ಎನ್ನುತ್ತಿವೆ. ಆಕಾಶ ಶುಭ್ರವಾಗಿದೆ. ನದಿಗಳು ಶುದ್ಧವಾಗಿ ಹರಿಯುತ್ತಿವೆ. ಕಾಡುಪ್ರಾಣಿ, ಪಕ್ಷಿಗಳೆಲ್ಲವೂ ನಗರಗಳತ್ತ ಮುಖಮಾಡುತ್ತಿವೆ.

ಲೇಖಕರು : ಸೋಮನಗೌಡ. ಎಸ್.ಎಂ ಕಟ್ಟಿಗೆಹಳ್ಳಿ, ಪತ್ರಕರ್ತರು, ಬೆಂಗಳೂರು

ಮತ್ತೊಂದೆಡೆ ಕೋಟ್ಯಂತರ ಮಂದಿ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಬಡತನದ ರೇಖೆ ಹೆಚ್ಚಾಗುತ್ತಿದೆ. ಕೋವಿಡ್ ಎಂಬ ಸೂಕ್ಷ್ಮಾಣು ಅಕ್ಷರಶಃ ಜಗತ್ತನ್ನೇ ತಲ್ಲಣಗೊಳಿಸಿದೆ. ಈಗ ನಾವು ವಿಜ್ಞಾನದ ಯುಗದಲ್ಲಿದ್ದೇವೆ. ನಮ್ಮ ಮುಂದೆ ವಿಜ್ಞಾನ ಹೊಸ ತರ್ಕ ಮತ್ತು ಹೊಸ ಸತ್ಯ ಶೋಧನೆಯನ್ನು ಮುಂದಿಟ್ಟಿದೆ.

ಆದರೆ ಮನುಷ್ಯ ಇಂದಿಗೂ ಎದುರಿಸುತ್ತಿರುವ ಹಳೆಯ ಯಕ್ಷಪ್ರಶ್ನೆ ನಾವು ಪರಿಸರ ಮುಂದೆ ಕೇವಲ ಬುದ್ಧಿ ಜೀವಿಗಳಷ್ಟೇ? ಜೀವ ಜಗತ್ತಿನ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳದಿದ್ದರೆ ಮುಂದೆ ಮನುಷ್ಯ ಎದುರಿಸುವ ಅತ್ಯಂತ ದೊಡ್ಡ ವಿಪತ್ತು ಜೈವಿಕ ಪ್ರಳಯ!

ಇಡೀ ವಿಶ್ವ ಒಂದು ಬೀಜರೂಪದ ಮಹಾನ್ ಅಗ್ನಿ. ಬಿಂದುವಿನಿಂದ ಆಸ್ಫೋಟಗೊಂಡು ವಿಶ್ವರೂಪ ತಳೆಯುತ್ತಾ ಸಾಗುತ್ತಿದೆ. ಸೃಷ್ಟಿ ಸ್ಥಿತಿ ಲಯಗಳ ನಿರಂತರ ಆವರ್ತದಲ್ಲಿ ವಿಶ್ವ ಇದೆ ಎಂದು ಪ್ರತಿಪಾದಿಸುತ್ತಾರೆ ಖ್ಯಾತ ಖಭೌತ ವಿಜ್ಞಾನಿ ಹಬಲ್ ಮತ್ತು ರಾಬರ್ಟ್ ಸನ್.

ಭೂಮಿಯ ಅವೈಜ್ಞಾನಿಕ ಮೂಲದಿಂದ ಜೈವಿಕ ಸೃಷ್ಟಿಯ ದಾರಿಯಲ್ಲಿ ಜೀವಿಗಳ ಬೆಳವಣಿಗೆ ಹೇಗಾಯಿತು ಎಂಬುದಕ್ಕೆ ನಿಖರವಾದ ಉತ್ತರ ಇನ್ನೂ ದೊರೆಯದಿದ್ದರೂ ವಿಶ್ವಸ್ಥಾಯಿ ವಾದ ಸಿದ್ಧಾಂತದ ಪ್ರವರ್ತಕರಲ್ಲಿ ಮುಖ್ಯವಾದ ಖಗೋಳ ವಿಜ್ಞಾನಿಗಳಾದ ಫ್ರೆಡ್‍ಹಾಯ್ಲ್ ಮತ್ತು ಭಾರತೀಯ ಗಣಿತ ಶಾಸ್ತ್ರಜ್ಞ ವಿಷ್ಣುಜಯಂತ್, ನಾರ್ಲೀಕರ್ ಮುಂತಾದವರು ವಿಶ್ವವನ್ನು ಅನಾದಿ, ಅನಂತ ಎನ್ನುತ್ತಾರೆ.

ಭೂಮಿ ಲಕ್ಷಾಂತರ ವರ್ಷಗಳ ಹಿಂದೆ ಸೂಕ್ಷ್ಮಾಣು ಜೀವಿಯಿಂದ ಪ್ರಾರಂಭಗೊಂಡ ಜೀವ ಸಂಕುಲ ಮನುಷ್ಯ ಸೇರಿದಂತೆ ಸಕಲ ಚರಾಚರ ಜೀವಿಗಳಿಗೆ ಆವಾಸಸ್ಥಾನ ಈ ವಸಂಧರೆ. ಜೀವವಿಕಾಸದ ಅತ್ಯಂತ ಸಂಕೀರ್ಣವೂ, ವಿಸ್ಮಯಗಳ ಮ್ಯಾಜಿಕ್ ಬಾಲ್ ಈ ಧರೆ.

ನಾವು ಭೂಮಿಯ ಒಂದು ಭಾಗ ಮಾತ್ರ ಎನ್ನುವುದನ್ನು ಮನವರಿಕೆ ಮಾಡಿ ಕೊಳ್ಳಬೇಕು. ಇಲ್ಲಿ ಇರುವುದು ಮನುಷ್ಯ ಜೀವಿ ಮಾತ್ರವಲ್ಲ. ಜೀವ ಪರಿಸರದ ಒಂದು ಅಂಗ ಮಾತ್ರ. ಈ ಧರೆಯಲ್ಲಿ ಮನುಷ್ಯನಂತೆಯೇ ಲಕ್ಷಾಂತರ ಜೀವಿಗಳಿಗೂ ಬದುಕುವ ಹಕ್ಕಿದೆ, ಸ್ವಾತಂತ್ರವಿದೆ.

ಮನುಷ್ಯನಿಗೆ ತಗುಲಿರುವ ಕೊರೋನಾ ಸೂಕ್ಷ್ಮಾಣು ಈಗ ಪ್ರಾಣಿ ಸಂಕುಲವನ್ನು ಆವರಿಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿಯಾಗಿದ್ದು ಅಮೆರಿಕದ ನ್ಯೂಯಾರ್ಕ್ ನಗರದ ಬ್ರಾಂಕ್ಸ್ ಮೃಗಾಲಯದಲ್ಲಿರುವ ನಾಲ್ಕು ವರ್ಷದ ‘ಮಲಯನ್’ ಎಂಬ ಹೆಸರಿನ ಹುಲಿಗೆ ಕೋವಿಡ್-19 ವೈರಸ್ ತಗುಲಿದೆ.

ಈಗ ಮನುಷ್ಯನನ್ನಷ್ಟೇ ಅಲ್ಲ ಪ್ರಾಣಿಗಳಿಗೂ ಮಾರಕ ವೈರಾಣು ದಾಂಗುಡಿ ಇಟ್ಟಿರುವುದು ಪ್ರಾಣಿ ತಜ್ಞರಲ್ಲಿ ಆತಂಕ ಸೃಷ್ಟಿಸಿದೆ. ಮನುಷ್ಯನಿಂದ-ಪ್ರಾಣಿಗಳಿಗೆ ಸೋಂಕು ತಗುಲಿರುವುದು ಆತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಮನುಷ್ಯ ಸಮಾಜದಿಂದ ದೂರವಿರುವ ಕಾಡು ಪ್ರಾಣಿಗಳನ್ನು ಕೊರೋನಾ ಮತ್ತಿತರ ರೋಗಾಣುಗಳು ಬಾಧಿಸಿದರೆ ಭವಿಷ್ಯದಲ್ಲಿ ಜೈವಿಕ ಸರಪಳಿಯ ಕೊಂಡಿ ಕಳಚಿ ಈ ಪರಿಸರವೇ ನಾಶವಾದೀತು! ಕಾಡುಪ್ರಾಣಿಗಳಿಗೆ ಕೊರೋನಾ ವೈರಸ್ ಹಬ್ಬುವುದನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಇವುಗಳನ್ನು Zoonatic ಕಾಯಿಲೆಗಳೆಂದು ಕರೆಯಬಹುದು. ಇವು ಮನುಷ್ಯನ ಹಲವು ಕಾರ್ಯ ಚಟುವಟಿಕೆಗಳಿಂದಲೇ ಹರಡಬಹುದು.

ಉದಾಹರಣೆಗೆ ಕೊರೋನಾದಂತೆಯೇ ಎಬೊಲ, ಸಾರ್ಸ್ ವೈರಸ್‍ಗಳು ವನ್ಯಜೀವಿಗಳಿಂದಲೇ ಬಂದಿವೆ. ಅಂದರೆ ಹಾವು, ಬಾವಲಿ ಮತ್ತು ಇತರ ಪ್ರಾಣಿಗಳಿಂದ, ಗಿಡ ಮತ್ತು ಕೀಟಗಳಿಂದ. ಜೊನಾಟಿಕ್ ಕಾಯಿಲೆಗಳು ಹೆಚ್ಚಾಗಿ ಹರಡುವುದು ಮನುಷ್ಯನ ಚಟುವಟಿಕೆಗಳಿಂದಲೇ. ಆತ ಕಡಿಯುವ ಕಾಡು, ಸೃಷ್ಟಿಸುವ ಪರಿಸರ ಮಾಲಿನ್ಯ ಮತ್ತು ಜಾಗತಿಕ ವ್ಯಾಪಾರ ವಹಿವಾಟುಗಳು ಈ ವಿಷಯದಲ್ಲಿ ಬೃಹತ್ ಪಾತ್ರವನ್ನೇ ಸೃಷ್ಟಸಿದೆ.

ನೋವೆಲ್ ಕೊರೋನಾ ಅಥವಾ ಕೋವಿಡ್-19 ಎನ್ನುವ ಮಾರಕ ಕಾಯಿಲೆ ಬಂದಿದ್ದು ಮಾತ್ರ ಚೀನಾದ ವುಹಾನ್ ಮಾರುಕಟ್ಟೆಯಿಂದ. ಒಂದು ಬಾವಲಿಯೊಳಗಿನ ಸೂಕ್ಷ್ಮಾಣು ಮನುಷ್ಯಲೋಕದ ಎಲ್ಲಾ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿದೆ. ಲಸಿಕೆಯೇ ಇಲ್ಲದ ಈ ವೈರಸ್‍ಗೆ ಲಾಕ್‍ಡೌನ್, ಸೀಲ್‍ಡೌನ್ ಮತ್ತು ಕ್ವಾರಂಟೈನ್ ಎನ್ನುವ ಸ್ವಯಂ ನಿಯಂತ್ರಣವೇ ಮದ್ದು.

ಇದರಿಂದಾಗಿ ಭೂಮಿಯ ಕಲುಷಿತ ಪರಿಸರದ ಮೇಲೆ ಎಂತಹ ಪರಿಣಾಮ ಉಂಟುಮಾಡಿದೆ ಎನ್ನುವುದು ನಾವೆಲ್ಲಾ ನೋಡುತ್ತಿದ್ದೇವೆ. ಪ್ರಕೃತಿ ಮಾತೆ ಮನುಷ್ಯನಿಗೆ ಅನೇಕ ಎಚ್ಚರಿಕೆಗಳನ್ನು ನೀಡುತ್ತಾಬಂದಿದೆ.

ಸಾಂಕ್ರಾಮಿಕ ರೋಗಗಳು ಈ ಜಗತ್ತಿನಲ್ಲಿ ಮಹತ್ವದ ಬದಲಾವಣೆಗೆ ಹಲವು ಬಾರಿ ಮುನ್ನುಡಿ ಬರೆದಿವೆ.
ಈ ಹಿಂದೆ ಜಗತ್ತನ್ನೇ ಕಾಡಿದ ಮಹಾಮಾರಿಗಳಿಗೆ ಬಹುದೊಡ್ಡ ಇತಿಹಾಸವೇ ಇದೆ. 12 ಸಾವಿರ ವರ್ಷಗಳಲ್ಲಿ ಹಲವು ಸಾಂಕ್ರಾಮಿಕ ರೋಗಗಳು ಜಗತ್ತನ್ನು ದಂಗು ಬಡಿಸಿವೆ. ಚೀನಾದ ಹಮೀನ್ ಮಂಘಿ ಎಂಬಲ್ಲಿ ಪತ್ತೆ ಮಾಡಲಾದ ಸುಮಾರು 5000 ವರ್ಷಗಳಷ್ಟು ಹಳೆಯ ಮನೆಯೊಂದರಲ್ಲಿ ಉತ್ಕನನದ ವೇಳೆ ಸುಟ್ಟು ಕರಕಲಾದ ನೂರಾರು ಅಸ್ತಿಪಂಜರಗಳು ಕಂಡವು.

ಯಾವುದೋ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಇಡೀ ಊರಿಗೂರೇ ಬಲಿಯಾಗಿರಬಹುದು. ಎಲ್ಲ ಶವಗಳನ್ನು ಒಂದೇ ಮನೆಯಲ್ಲಿ ಸುಟ್ಟುಹಾಕಿರಬಹುದು ಎಂದು ಪುರಾತತ್ವ ಸಂಶೋಧಕರು ವಿಶ್ಲೇಷಿಸಿದ್ದಾರೆ. ಕ್ರಿ.ಪೂ 430ರಲ್ಲಿ ಗ್ರೀಸ್ ದೇಶದ ಅಥೆನ್ಸ್‌ನಲ್ಲಿ ಕಂಡ ವಿಚಿತ್ರ ಕಾಯಿಲೆಗೆ ಲಕ್ಷಾಂತರ ಮಂದಿ ಸತ್ತರು. ಇದನ್ನು ಪ್ಲೇಗ್ ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ.

ಕ್ರಿ.ಶ. 165 ರಿಂದ 180 ಹಾಗೂ 250 ರಿಂದ 271 ಮತ್ತು 541-542ರಲ್ಲಿ ರೋಮ್‍ನಲ್ಲಿ ಪ್ಲೇಗ್ ರೋಗಕ್ಕೆ ಲಕ್ಷಾಂತರ ಮಂದಿ ಪ್ರಾಣತೆತ್ತರು. ಕ್ರಿ.ಶ. 250ರಿಂದ271ರ ಪ್ಲೇಗ್ ಎಷ್ಟು ಭೀಕರವಾಗಿತ್ತು ಎಂದರೆ ಇದು ಉತ್ತುಂಗಕ್ಕೇರಿದಾಗ ದಿನಕ್ಕೆ 5000 ಮಂದಿ ರೋಮ್ ನಗರವೊಂದರಲ್ಲೇ ಸಾಯುತ್ತಿದ್ದರು ಎಂದು ಇತಿಹಾಸಗಳೇ ಹೇಳುತ್ತವೆ.

1346-53ರಲ್ಲಿ ಏಷ್ಯಾದಿಂದ ಯೂರೋಪ್‍ವರೆಗೆ ಹಬ್ಬಿದ ಪ್ಲೇಗ್ ಮಹಾಮಾರಿಗೆ ಯೂರೋಪ್‍ನ ಅರ್ಧಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ಇಲಿಗಳ ಮೂಲಕ ಬ್ಯಾಕ್ಟೀರಿಯಾಗಳು ಹರಡಿ ಲಕ್ಷಾಂತರ ಜನರು ಪ್ರಾಣ ಬಿಟ್ಟರು.

ಕೊಕೊಲಿಸ್ಟಲಿ (ಟೈಫಾಯ್ಡ್ ಮಾದರಿಯ ಜ್ವರ) ಕ್ರಿ.ಶ 1545-48ರಲ್ಲಿ ಸ್ಪೇನ್‍ನಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕ ರೋಗಕ್ಕೆ ಮೆಕ್ಸಿಕೋ ಮತ್ತು ಮಧ್ಯ ಅಮೆರಿಕದ ಸುಮಾರು 1.50 ಕೋಟಿ ಜನರು ಬಲಿಯಾದರು. ಕ್ರಿ.ಶ. 1665-66 ರಲ್ಲಿ ಇಲಿಗಳ ಮೂಲಕ ಕಾಣಿಸಿಕೊಂಡ ವೈರಸ್ ಬ್ರಿಟನ್‍ನಲ್ಲಿ 1ಲಕ್ಷಕ್ಕೂ ಅಧಿಕ ಜನರ ಸಾವಿಗೆ ಕಾರಣವಾಯಿತು.
ಜಸ್ಪೀನಿಯರ್ ಪ್ಲೇಗ್, ಥರ್ಡ್‍ಪ್ಲೇಗ್, ಆಂಟೋನೈನ್ ಪ್ಲೇಗ್, ಗ್ರೇಟ್ ಪ್ಲೇಗ್‍ಗಳಿಂದ ಲೆಕ್ಕವಿಲ್ಲದಷ್ಟು ಜನ ಬಲಿಯಾಗಿದ್ದಾರೆ.

ಇತ್ತೀಚಿನ ಕಾಯಿಲೆಗಳ ಬಗ್ಗೆ ನಮ್ಮ ಹಿರಿಕರು ಹೇಳುವ ಭೀಕರ ಕಾಯಿಲೆ ಎಂದರೆ ಸ್ಪ್ಯಾಮೊಷ್ ಫ್ಲೂ. ಆ ರೋಗಕ್ಕೆ 1918-19ರಲ್ಲಿ ಜಗತ್ತಿನಲ್ಲಿ 4ರಿಂದ5 ಕೋಟಿ ಜನ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಿ ಹೇಳಿರುವುದು ದಾಖಲೆಗಳೇ ಸ್ಪಷ್ಟಪಡಿಸುತ್ತವೆ. 2002-2003ರಲ್ಲಿ ಸಾರ್ಸ್‍ಗೆ 770, 2012ರಲ್ಲಿ ಕಾಣಿಸಿಕೊಂಡ ಮರ್ಸ್ 850ಜನ, ಎಬೊಲಾ ಮಾರಣಾಂತಿಕ ರೋಗಕ್ಕೆ 2014-16ರಲ್ಲಿ 11.300 ಜನರು ಪ್ರಾಣಬಿಟ್ಟಿದ್ದಾರೆ.

ಸ್ಪ್ಯಾಮೊಷ್ ಫ್ಲೂ (1918-19)ಬಂದು ಹೋದ ನಂತರ ಬರೊಬ್ಬರಿ 100 ವರ್ಷಗಳ ಬಳಿಕ 2019 ಡಿಸೆಂಬರ್-19 ರಂದು ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್‍ಗೆ 1.62 ಲಕ್ಷಕ್ಕೂ ಹೆಚ್ಚಿನ ಮಂದಿ ಜಗತ್ತಿನಾದ್ಯಂತ ಜೀವ ಕಳೆದುಕೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಈ ಕೋವಿಡ್ ರೋಗವನ್ನು ಜಾಗತಿಕ ಪಿಡುಗು ಎಂದು ಕಳೆದ ತಿಂಗಳು 11 ಘೋಷಿಸಿದೆ. ಕ್ರಿ.ಪೂರ್ವ, ಕ್ರಿ.ಶಕ ಎನ್ನುವ ಕಾಲಘಟ್ಟಗಳ ಇತಿಹಾಸ ಹೇಳುವಂತೆ ಕೊರೋನಾ ಪೂರ್ವ ಮತ್ತು ಕೊರೋನಾ ನಂತರದ ಜಗತ್ತು ಎಂದು ವಿಭಜಿಸಿ ಹೇಳಬೇಕಾಗಿರುವ ಕಾಲ ಬಂದಿದೆ.

ಇದೇ ವರ್ಷ ಜನವರಿಯಲ್ಲಿ ದಾವೋಸ್ ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ ಹವಮಾನ ಬದಲಾವಣೆ ತಡೆ ಕುರಿತ ಸಮಾಲೋಚನೆಯಲ್ಲಿ ಪರಿಸರ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ ಉಂಟು ಮಾಡುತ್ತಿರುವ ಹವಮಾನ ವೈಪರೀತ್ಯ ಮತ್ತು ಇತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಂದಿದ್ದ ಜಾಗತಿಕ ನಾಯಕರ ಮುಂದೆ ಸ್ವೀಡನ್ 16ರ ಬಾಲೆ ಗ್ರೇತಾ ಥನ್‍ಬರ್ಗ್ ‘ಇನ್ನು ಸಮಯವಿಲ್ಲ ಭೂಮಿಯ ತಾಪಮಾನ ತಗ್ಗಿಸಲು ಏನಾದರೂ ಕ್ರಮ ಕೈಗೊಳ್ಳಿ.

2030-2050 ಅಂತ ಕಥೆ ಹೇಳಬೇಡಿ’ ಎಂದು ಹೇಳಿದರೂ ದೊಡ್ಡಣ್ಣ ಅಮೆರಿಕ ನಿರ್ಲಕ್ಷಿಸಿತು. ಈಗ ನೋಡಿ ಭೌತಿಕ ಯುದ್ಧವಿಲ್ಲದೇ ಶೀತಲ ಯುದ್ಧದ ಸ್ಥಿತಿಗೆ ಕಾಣದ ಕೊರೋನಾ ಸೂಕ್ಷ್ಮಾಣುಗಳು ಮನುಷ್ಯನ ವಿರುದ್ಧ ಹೋರಾಟಕ್ಕಿಳಿದಿವೆ.
ಮನುಷ್ಯನ ಅತಿ ಆಸೆಗೆ ಸಿಲುಕಿ ಭೂಮಿ ಬಿಸಿಯಾಗುತ್ತಿದೆ. ಪಾತಾಳದ ಕಲ್ಲಿದ್ದಲು ಕರಗಿ ವಿದ್ಯುತ್ ಆಗಿ ಪರಿವರ್ತಿಯಾಗಿ ಓಝೋನ್ ಪದರವನ್ನೇ ರಂಧ್ರ ಮಾಡುತ್ತಿದೆ.

ಪೆಟ್ರೋಲ್ ಉತ್ಪನ್ನಗಳ ಬಳಕೆಯಿಂದ ಪರಿಸರ ನಾಶವಾಗುತ್ತಿದೆ. ಸಿಮೆಂಟ್, ಉಕ್ಕು ಕಾರ್ಖಾನೆಗಳಿಂದ ಭೂಮಿ ಕೆಂಡವಾಗುತ್ತಿದೆ. ಆಕಾಶವನ್ನು ಕಲುಷಿತಗೊಳಿಸುತ್ತಿದ್ದೇವೆ. ಇಂತಿಪ್ಪ ಪರಿಸರದ ಮೇಲೆ ನಡೆಯುತ್ತಿರುವ ಮನುಷ್ಯನ ದುರಾಸೆಗೆ ಇಡೀ ಭೂ ಮಂಡಲದ ವಿನಾಶದ ಅಂಚಿಗೆ ಹೋಗುತ್ತಿದೆ.

ಅಣ್ವಸ್ತ್ರಗಳನ್ನು ಬಳಸಿ ನಡೆಸುವ ಹತ್ಯಾಕಾಂಡವು ಮನುಷ್ಯ ಕುಲಕ್ಕೆ ಎಷ್ಟು ಕಂಟಕವಾಗಬಲ್ಲದೋ ವೈರಸ್‍ಗಳು ಕೂಡ ಅಷ್ಟೇ ಮಟ್ಟಿನ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ವಸುಂಧರೆಯ ಸಂಪತ್ತನ್ನು ಅತಿಯಾಗಿ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ನಿಸರ್ಗದ ದೇವತೆಗಳು ಕೊಟ್ಟಿರುವ ಈ ಶಿಕ್ಷೆಯೇ ಸಾಂಕ್ರಾಮಿಕ ಪಿಡುಗು ಕೊರೋನಾ ವೈರಸ್.

ಈ ಕೊರೋನಾ ವೈರಸ್‍ಗೆ ಅತ್ಯಂತ ಹೆಚ್ಚು ಬಲಿಯಾಗುತ್ತಿರುವುದು 60 ವರ್ಷ ಮೇಲ್ಪಟ್ಟ ವೃದ್ಧರು ಮತ್ತು 8 ವರ್ಷದ ಒಳಗಿನ ಮಕ್ಕಳು. ಸಾವಿನ ದವಡೆಯಿಂದ ರಕ್ಷಿಸಲು ವೈದ್ಯರು ತಮ್ಮ ಪ್ರಾಣವನ್ನೂ ಲೆಕ್ಕಿಸದ ಹೋರಾಡುತ್ತಿದ್ದಾರೆ. ಅವರಿಗೆ ಕೋಟಿ ಕೋಟಿ ನಮನಗಳು.

ಇದು ವಿಶ್ವಮಟ್ಟದ ಬಿಕ್ಕಟ್ಟಿನ ಸಂದರ್ಭ. ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಯೋಚಿಸಬೇಕಾದ ಕಾಲ. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ಚಾಚಲೇ ಬೇಕು. ‘ಸಾಲು ಮನೆಗೆ ಬೆಂಕಿ ಬಿದ್ದರೆ ಸಂಪನ್ನರ ಮನೆ ಉಳಿಯುತ್ತದಾ’? ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲು ಬಾರದು’ ಬಸವಣ್ಣನವರ ಈ ವಚನ ಆಗಾಗ ನೆನಪಾಗುತ್ತದೆ.

ಪರಿಸರದಲ್ಲಿ ಆಗುವ ಏರಿಳಿತಳನ್ನು ಅಥವಾ ಬದಲಾವಣೆಗಳನ್ನು ಕಡಿಮೆ ಅವಧಿಯಲ್ಲಿ ಅಂದಾಜಿಸುವುದು ಕಷ್ಟ. ಇತಿಹಾಸಕಾರ ‘ಲಾ ಮಾರ್ಟಿನ್’ ಹೇಳುವಂತೆ ‘ಇತಿಹಾಸ ಕೇವಲ ಭೂತಕಾಲವನ್ನಷ್ಟೇ ಹೇಳುವುದಿಲ್ಲ. ಭವಿಷ್ಯವನ್ನು ನುಡಿಯುತ್ತದೆ’ ಎಂಬ ಮಾತು ಸರ್ವಕಾಲಿಕವು ಸತ್ಯವಾದುದು. ಅದುವೇ ಸೂಕ್ಷ್ಮಾಣು ಸೃಷ್ಟಿಸುತ್ತಿರುವ ಜಾಗತಿಕ ತಲ್ಲಣಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (ವಿ.ಆರ್.ಡಬ್ಲ್ಯೂ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

18 ರಿಂದ 45 ವರ್ಷ ಒಳಗಿನ ವಯೋಮಾನದವರಾಗಿದ್ದು ಮಾಸಿಕ ರೂ.9,000/-ಗಳ ಗೌರವಧನ ಆಧಾರದ ಮೇಲೆ ಕೆಲಸ ಮಾಡಲು ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಹಾಗೂ ಕಂಪ್ಯೂಟರ್ ಜ್ಞಾನವುಳ್ಳರಾಗಿರಬೇಕು. ಅರ್ಜಿ ಸಲ್ಲಿಸಲು ಏಪ್ರಿಲ್ 21 ಕೊನೆಯದಿನವಾಗಿರುತ್ತದೆದಾವಣಗೆರೆ ತಾಲ್ಲೂಕು ಹಳೇಬಾತಿ, ಆಲೂರಟ್ಟಿ, ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರು ಗ್ರಾಮ ಪಂಚಾಯಿತಿಯ ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿ ವ್ಯಾಪ್ತಿಯಲ್ಲಿ ವಾಸವಿರುವ ವಿಕಲಚೇತನ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ಅರ್ಜಿ ಹಾಗೂ ಇತರೆ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ ಕಛೇರಿ, ದೇವರಾಜ್ ಅರಸ್ ಬಡಾವಣೆ, ‘ಬಿ’ ಬ್ಲಾಕ್, ಶಿವಾಲಿ ಟಾಕೀಸ್ ಹತ್ತಿರ, ದಾವಣಗೆರೆ ದೂರವಾಣಿ:08192-263939 ಹಾಗೂ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು ದಾವಣಗೆರೆ ಮೊ:9590829024 ಮತ್ತು ಚನ್ನಗಿರಿ ತಾಲ್ಲೂಕು ಮೊ:9945738141, ಹರಿಹರ ತಾಲ್ಲೂಕು ಮೊ:9945458058 ಇವರನ್ನು ಸಂಪರ್ಕಿಸಬೇಕೆಂದು ಕಲ್ಯಾಣಾಧಿಕಾರಿ ಡಾ.ಕೆ.ಕೆ ಪ್ರಕಾಶ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹಂಪಿ ವಿಶ್ವವಿದ್ಯಾಲಯದ 33 ನೇ ನುಡಿಹಬ್ಬ ; ನಾಡೋಜ ಗೌರವ ಪದವಿ ಪ್ರದಾನ

Published

on

ವರದಿ: ಗಿರೀಶ್ ಕುಮಾರ್ ಗೌಡ, ಬಳ್ಳಾರಿ

ಸುದ್ದಿದಿನ,ವಿಜಯನಗರ: ಹಂಪಿ ಕನ್ನಡ ವಿಶ್ವವಿದ್ಯಾಲಯದ 33 ನೇ ನುಡಿಹಬ್ಬ ಸಮಾರಂಭವು ಶುಕ್ರವಾರ ರಂದು ವಿವಿ ಆವರಣದ ನವರಂಗ ಬಯಲು ರಂಗಮಂದಿರದಲ್ಲಿ ನಡೆಯಿತು.

ಈ ವೇಳೆ ಗಣನೀಯ ಸಾಧನೆ ಮಾಡಿದ ಮೂರು ಜನ ಗಣ್ಯರಿಗೆ ವಿಶ್ವವಿದ್ಯಾಲಯ ಕೊಡಮಾಡುವ ಪ್ರತಿಷ್ಟಿತ ಪದವಿ ನಾಡೋಜ ಗೌರವ ಪದವಿಯನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರದಾನ ಮಾಡಿದರು.

ನಾಡೋಜ ಗೌರವ ಪದವಿಗೆ ಬಾಜನರಾದವರು ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಾಧೀಶರಾದ ಜಸ್ಟೀಸ್ ಶಿವರಾಜ್ ವಿ.ಪಾಟೀಲ್, ಪ್ರಖ್ಯಾತ ಬರಹಗಾರರು ಮತ್ತು ಚಿಂತಕರಾದ ಕುಂ.ವೀರಭದ್ರಪ್ಪ (ಕುಂ.ವೀ), ಪ್ರಖ್ಯಾತ ಹಿಂದೂಸ್ತಾನಿ ಗಾಯಕರಾದ ಪದ್ಮಶ್ರೀ ಎಂ.ವೆಂಕಟೇಶ್ ಕುಮಾರ್ ಇವರಿಗೆ ಪ್ರದಾನ ಮಾಡಲಾಯಿತು.

ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್, ತುಮಕೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ರಾಜಾಸಾಬ್ ಎಂ.ಎಚ್, ಹಂಪಿ ವಿವಿ ಕುಲಪತಿ ಡಾ.ಡಿ.ವಿ.ಪರಶಿವಮೂರ್ತಿ ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ನಾಳೆ ಡಾ.ಬಾಬು ಜಗಜೀವನ ರಾಂ 118ನೇ ಜನ್ಮ ದಿನಾಚರಣೆ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 5 ರಂದು ಬೆಳಿಗ್ಗೆ 11 ಗಂಟೆಗೆ ಮಹಾನಗರಪಾಲಿಕೆಯ ಆವರಣದಲ್ಲಿರುವ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ ಹಾಗೂ ಭಾರತದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ ರಾಂ ರವರ 118ನೇ ಜನ್ಮ ದಿನಾಚರಣೆಯನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಉದ್ಘಾಟಿಸುವರು. ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಉಪಸ್ಥಿತರಾಗಿರುವರು.

ಮುಖ್ಯ ಅತಿಥಿಗಳಾಗಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಹೊನ್ನಾಳಿ ಶಾಸಕ ಶಾಂತನಗೌಡ ಡಿ.ಜಿ, ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ, ಹರಿಹರ ಶಾಸಕ ಬಿ.ಪಿ ಹರೀಶ್, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಚಿದಾನಂದ ಎಂ.ಗೌಡ, ಡಿ.ಎಸ್ ಅರುಣ್, ಕೆ.ಎಸ್.ನವೀನ್, ಕೆ.ಅಬ್ದುಲ್ ಜಬ್ಬಾರ್, ಡಾ.ಧನಂಜಯ್ ಸರ್ಜಿ, ಡಿ.ಟಿ.ಶ್ರೀನಿವಾಸ್, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಬಂಜಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವನಾಯ್ಕ್, ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಬಿ. ಇಟ್ನಾಳ್. ಜಿಲ್ಲಾ ಪೆÇಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಪಾಲಿಕೆ ಆಯುಕ್ತರಾದ ರೇಣುಕಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ನಾಗರಾಜ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಿವೃತ್ತ ಪ್ರಾಧ್ಯಪಕರಾದ ಡಾ.ಎ.ಬಿ.ರಾಮಚಂದ್ರಪ್ಪ ವಿಶೇಷ ಉಪನ್ಯಾಸ ನೀಡುವರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending