ಭಾವ ಭೈರಾಗಿ
ಕ್ರಾಂತಿ ಪಕ್ಕದ ಮನೆಯಲ್ಲಾದರೆ ಮಾತ್ರ ಚೆಂದ
ಇದು ಸಾಮಾನ್ಯವಾಗಿ ಬಹುತೇಕರಿಗೆ ಇರುವಂತಹಾ ಖಾಯಿಲೆ. ಬದಲಾವಣೆ ಎಂದರೆ ಎಲ್ಲರಿಗೂ ಇಷ್ಟ. ಹೌದು ಜಗತ್ತು ಬದಲಾಗಬೇಕು. ಸಮಾಜದ ಉದ್ದಾರ ಮಾಡಲು ಮಹಾತ್ಮರು ಜನ್ಮತಾಳಬೇಕು. ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಮುಂದಿನ ಪೀಳಿಗೆಗಾಗಿ ಏನಾದರೂ ಕೊಡಬಲ್ಲ ಧೀಮಂತ ವ್ಯಕ್ತಿಗಳು ನಮಗೆ ಅವಶ್ಯವಾಗಿ ಬೇಕು. ಮತ್ತೊಮ್ಮೆ ನಮ್ಮ ದೇಶದಲ್ಲಿ ಗಾಂಧಿ, ಅಂಬೇಡ್ಕರ್ ಹುಟ್ಟಬೇಕು. ಬುದ್ದ ಬಸವರು ಜನ್ಮತಾಳಬೇಕು. ಮದರ್ ಥೆರೆಸಾರಂತೆ ಸಮಾಜಕ್ಕಾಗಿ ಬದುಕುವವರು ಬೇಕು. ವಿವೇಕಾನಂದರಂತೆ ದೇಶದ, ಸಮಾಜದ ಉದ್ದಾರಕ್ಕಾಗಿ ಸರ್ವಸ್ವವನ್ನೂ ನೀಬಲ್ಲವರು ಬೇಕು. ಇವರೆಲ್ಲ ಮತ್ತೆ ಮತ್ತೆ ಹುಟ್ಟಿಬರಬೇಕು ಆದರೆ ನಮ್ಮ ಮನೆಯಲ್ಲಲ್ಲ, ಪಕ್ಕದ ಮನೆಯಲ್ಲೋ ಅಥವಾ ಮತ್ಯಾರದೋ ಮನೆಯಲ್ಲಿ ಹುಟ್ಟಿಬಂದರೆ ಒಳಿತು.
ಇದು ನಮ್ಮ ತಪ್ಪಲ್ಲ ಬಿಡಿ ನಮ್ಮಲ್ಲಿ ಬಹುತೇಕರು ಬೆಳೆದು ಬಂದ ವಾತಾವರಣವೇ ಹಾಗಿರುತ್ತದೆ. ಹೆಚ್ಚಿನ ತಂದೆ ತಾಯಿಗಳು ಮಕ್ಕಳಿಗೆ ಹೇಳಿಕೊಟ್ಟಿರುವ ಒಂದೇ ಪಾಠವೆಂದರೆ ಊರಿನ ಉಸಾಬರಿ ನಿನಗ್ಯಾಕಪ್ಪ, ಊರ ದನಾ ಕಾಯ್ದು ದೊಡ್ಡ ಬೋರಾ ಎನಿಸಿಕೊಳ್ಳೋದು ಬೇಡ ಸುಮ್ಮನಿರು. ಯಾಕಂದ್ರೆ ಅವರಪ್ಪ ಅಮ್ಮ ಅವರಿಗೆ ಹೇಳಿಕೊಟ್ಟಿರುವುದೂ ಇದನ್ನೇ ಅಲ್ವಾ,,, ಹಾಗಾದರೆ ಹೀಗೆ ಹೇಳಿಕೊಟ್ಟವರೆಲ್ಲ ಕೆಟ್ಟವರಾ ಅಂದರೆ ಅಲ್ಲ. ಅದು ಅವರವರ ವ್ಯಾಪ್ತಿಗೆ ಸಂಬಂದಿಸಿದ ವಿಷಯ. ಒಂದು ಪುಟ್ಟ ಹಳ್ಳಿಯಲ್ಲಿ ಎಲೆಮರೆ ಕಾಯಿಯಂತೆ ಬದುಕಿದ ಅವ್ವ ಅಪ್ಪನಿಗೆ ನಾವು ಇದುವರೆಗೂ ನಾಲ್ಕುಜನರ ಬಾಯಿಗೆ ಸಿಕ್ಕಿಲ್ಲ. ಯಾರೂ ನಮ್ಮ ಬಗ್ಗೆ ಬೆರಳು ಮಾಡಿ ತೋರಿಸಿಲ್ಲ ಎಂಬುದೇ ಹೆಗ್ಗಳಿಕೆಯಾಗಿರುತ್ತದೆ. ಅದು ಅವರ ತಪ್ಪೂ ಅಲ್ಲ. ಆದರೆ ಅವರು ಹೇಳಿದಂತೆಯೇ ಬೆಳದ ಮಗು ಯಾರನ್ನೂ ಪ್ರಶ್ನಿಸುವುದು ಅಸಾಧ್ಯ. ಅದು ತನ್ನನ್ನು ತಾನು ಬಂಧಿಸಿಕೊಂಡುಬಿಡುತ್ತದೆ. ಮತ್ತೊಂದು ರೀತಿಯ ತಂದೆ ತಾಯಂದಿರಿದ್ದಾರೆ ಅವರು ಮಕ್ಕಳು ಹುಟ್ಟಿರುವುದೇ ಕೆಲಸ ಪಡೆದು ಹಣ ಗಳಿಸುವುದಕ್ಕೆ ಎಂದು ನಂಬಿರುತ್ತಾರೆ, ತಮ್ಮ ಮಕ್ಕಳಿಗೂ ಅದನ್ನೇ ತುಂಬುತ್ತಾರೆ. ನೀನು ಮನುಷ್ಯನಾಗಬೇಕು , ನಾಲ್ಕು ಜನರ ಬದುಕಿಗೆ ದಾರಿದೀಪವಾಗಬೇಕು ಸಂತನಾಗಬೇಕು, ತತ್ವಜ್ನಾನಿಯಾಗಬೇಕು, ನೂರುಜನರಿಗೆ ಕೆಲಸ ನೀಡುವವನಾಗಬೇಕು, ಸಮಾಜ ಸುಧಾರಕನಾಗಬೇಕು, ಸಂಗೀತಗಾರನಾಗಬೇಕು, ನೃತ್ಯಪಟು,ನಾಟಕಕಾರ, ಕಲಾವಿದನಾಗಬೇಕು ಎಂದು ಹೇಳಿರುವ ತಾಯಂದಿರು ವಿರಳಾತಿವಿರಳವೇ ಸರಿ.
ನನ್ನ ಎರಡು ವರ್ಷದ ಮಗನಿಗೆ ಮೊಬೈಲ್ ನಲ್ಲಿ ಎ ಟು ಝೆಡ್ ಗೊತ್ತು. ಆರನೇಕ್ಲಾಸಿನ ನನ್ನ ಮಗ ಈಗಲೇ ಬೈಕ್ ಕೇಳ್ತಾನೆ. ಯಾಕೆ ಕೇಳ್ತೀರಾ ಸಾರ್ ಎಲ್ಲದರಲ್ಲೂ ನೈಂಟಿ ಸ್ಕೋರ್ ಮಾಡ್ತಾನೆ ಅಂತೆಲ್ಲ ಸಂತಸ ಪಡುವ ಹೆತ್ತವರು ಮಗ ಸಮಾಜದ ಬಗ್ಗೆ ಚಿಂತೆ ಮಾಡ್ತಾನೆ. ದೊಡ್ಡವರ ಬಗ್ಗೆ ಕೇಳಿ ತಿಳಿದುಕೊಳ್ತಾನೆ, ಓದಿನ ಆಚೆಗೂ ಯಾವುದರಲ್ಲೋ ಆಸಕ್ತಿ ಹೊಂದಿದ್ದಾನೆ ಅನ್ನೋ ಯಾವ ಹೆಮ್ಮೆಯೂ ಹೆಮ್ಮೆ ಪಡಲ್ಲ. ಇಂಥವರ ಕೈಲಿ ಬೆಳದ ಮಗು ಗುಮಾಸ್ತನೋ, ಸಂಬಳಕ್ಕೆ ಕಾಯುವ ಉದ್ಯೋಗಿಯೋ ಆಗುವುದು ಬಿಟ್ಟು ಮತ್ತೇನಾಗಲು ಸಾಧ್ಯ.
ಹಾಗಾದರೆ ಗುಮಾಸ್ತನಾಗುವುದು ಅಪರಾಧವೇ,,, ಖಂಡಿತ ಅಲ್ಲ. ಅದು ಜೀವನ ನಿರ್ವಹಣೆಗಾಗಿ ಮಾಡುವ ಒಂದು ಕಾಯಕ ಅಷ್ಟೆ , ಆದರೆ ಅದರಿಂದಾಚೆಗೂ ನಮಗೊಂದು ವ್ಯಕ್ತಿತ್ವವಿರುತ್ತದೆ, ಅದರಿಂದ ನಮ್ಮನ್ನು ಗುರುತಿಸುವಂತಾಗಬೇಕು . ನಾಳೆ ನಮ್ಮ ಮಗು ಅದರ ಉದ್ಯೋಗದಿಂದ ಅಷ್ಟೇ ಅಲ್ಲದೇ ಅದರಿಂದಾಚೆಗೂ ಏನಾದರೂ ಸಾಧಿಸಬೇಕು ಎಂದು ಹೆತ್ತವರು ಕನಸುಕಾಣುವಂತಾಗಬೇಕು. ಮೌಲ್ಯಯುತ ವ್ಯಕ್ತಿಯಾಗಲು ಸಹಕಾರಿಯಾಗುವಂತೆ ಮಕ್ಕಳಿಗೆ ಪೂರಕ ವಾತಾವರಣ ನಿರ್ಮಿಸಿಕೊಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸಿಲಬಸ್ ಬಿಟ್ಟು ಮತ್ತೇನನ್ನು ಓದಿದರೂ ಅಪರಾಧ ಎನ್ನುವ ಶಿಕ್ಷಕರ ಮನೋಭಾವ ಬದಲಾಗಬೇಕಿದೆ.
ಪದೇ ಪದೇ ನನ್ನನ್ನು ಕಾಡುವ ಒಂದು ಪ್ರಶ್ನೆ ಎಂದರೆ ಜಗತ್ತಿನ ಎಲ್ಲ ಸಾಧಕರ ಬಗ್ಗೆಯೂ ನಾವು ಪಠ್ಯಪುಸ್ತಕದಲ್ಲಿ ಹೇಳಲು ಸಾಧ್ಯವಿಲ್ಲ ಅಂದ ಮಾತ್ರಕ್ಕೆ ಅವರ ಅಪಾರವಾದ ಸಾಧನೆ ನಮ್ಮ ಮಕ್ಕಳಿಗೆ ತಲುಪಲೇ ಬಾರದಾ? ಪಠ್ಯದಲ್ಲಿ ಸೇರಿಸಲಾಗದ ಅದೆಷ್ಟೋ ಮೌಲ್ಯಗಳು ಜೀವನಕ್ಕೆ ಅತ್ಯವಶ್ಯಕವಾಗಿವೆ, ಅವುಗಳನ್ನು ಮಕ್ಕಳು ತಿಳಿಯುವುದಾದರೂ ಹೇಗೆ. ಬೇಂದ್ರೆ ಬರೆದ ಒಂದೆರಡು ಪದ್ಯಗಳಷ್ಟೇ ಪಠ್ಯದಲ್ಲಿರಬಹುದು ಉಳಿದ ಸಾವಿರಾರು ಕವಿತೆಗಳು ಯಾರಿಗಾಗಿ? ಕುವೆಂಪು ಬರೆದ ಸಾವಿರ ಸಾವಿರ ಮೌಲ್ಯಗಳು ಜೀವನ ಸಂದೇಶಗಳು ಯಾರಿಗಾಗಿ? ಇದೆಲ್ಲವನ್ನೂ ನಮ್ಮ ಶಿಕ್ಷಕ ಮಿತ್ರರು ಅರ್ಥ ಮಾಡಿಕೊಳ್ಳಬೇಕು. ಎಲ್ಲೋ ಯಾರೋ ಸಾಧಿಸಿದ್ದನ್ನು ನೋಡಿ ಮಕ್ಕಳಿಗೆ ತೋರಿಸುವುದಕ್ಕಿಂತ ಅವರನ್ನೇ ಸಾಧಕರನ್ನಾಗಿ ಮಾಡುವತ್ತ ಗಮನ ಹರಿಸಬೇಕು. ಮಕ್ಕಳ ಅಂತರಾತ್ಮದ ತಲೆಗೆ ಹೊಡೆದು ಕೂರಿಸುವುದಕ್ಕಿಂತ ಅವರ ಇಷ್ಟದ ಕ್ಷೇತ್ರದಲ್ಲಿ ಅವರನ್ನು ಬೆಳೆಯಲು ಬಿಡಬೇಕು. ಉತ್ತಮರಾರನ್ನೋ ಹುಡುಕುವ ಬದಲು ನಾವೇ ಉತ್ತಮರಾಗಲು ಪ್ರಯತ್ನಿಸಬೇಕು.