ಅಂತರಂಗ

ಅರಿಮೆಯ ಅರಿವಿರಲಿ-47 : ತನ್ನತನದ ತನ್ನ ಭಾಷೆ

Published

on

  • ಯೋಗೇಶ್ ಮಾಸ್ಟರ್

ಮಾನಸಿಕವಾಗಿಯಾಗಲಿ,ಆಧ್ಯಾತ್ಮಿಕವಾಗಿಯಾಗಲಿ ಅಥವಾ ಸಾಮಾಜಿಕವಾಗಿ ಸಹಜ ಮನುಷ್ಯನಂತೆಯಾಗಲಿ ತನ್ನತನವನ್ನು ಕಂಡುಕೊಂಡವರ ಕೆಲವು ಮುಖ್ಯ ಲಕ್ಷಣಗಳು ಹೀಗಿರುತ್ತವೆ.

ತನಗೆ ತಾನೇ ಸಾಕ್ಷಿ

ತನ್ನನ್ನು ತಾನು ಉನ್ಮತ್ತನಂತೆ ಪ್ರದರ್ಶಿಸಿಕೊಳ್ಳುವುದಿಲ್ಲ. ತನ್ನ ಎಲ್ಲಾ ಪ್ರತಿಕ್ರಿಯೆ ಮತ್ತು ಪ್ರತಿವರ್ತನೆಗಳನ್ನು ತಾನು ರೂಪಿಸಿಕೊಂಡಿರುವ ವ್ಯಕ್ತಿತ್ವದ ಅರಿವಿನಲ್ಲಿ ಪ್ರದರ್ಶನಕ್ಕಿಡುತ್ತಾನೆ. ಮುಖ್ಯವಾಗಿ ತನ್ನ ಪ್ರದರ್ಶನವನ್ನು ತಾನು ನೋಡಲು ಸಮರ್ಥನಿರುತ್ತಾನೆ. ಉದಾಹರಣೆಗೆ ಯಾರೋ ಒಬ್ಬ ವ್ಯಕ್ತಿಯು ತನ್ನ ಜೊತೆಗೆ ವ್ಯತ್ಯಾಸವಾಗಿ ನಡೆದುಕೊಂಡನೆಂದರೆ ಅವನಿಗೆ ಪ್ರತಿಕ್ರಿಯಿಸುವ ತನ್ನ ನಡೆ, ನುಡಿ, ನಡವಳಿಕೆ ಅವನಿಗೆ ಮತ್ತು ತಮ್ಮಿಬ್ಬರನ್ನು ನೋಡುವವರಿಗೆ ಹೇಗೆ ಕಾಣುತ್ತಿರುತ್ತದೆ ಎಂಬುದನ್ನು ತಾನು ನೋಡುತ್ತಿರುತ್ತಾನೆ. ತನ್ನನ್ನು ಪ್ರಕಟಗೊಳಿಸಿಕೊಳ್ಳುವಾಗ ಇದು ಬಹಳ ಮುಖ್ಯವಾದ ಮತ್ತು ಉಪಯುಕ್ತವಾದ ಸಾಧನ.

ತನ್ನ ತಾನು ನೋಡಿಕೊಳ್ಳುವ ತಂತ್ರಗಾರಿಕೆ ಸಿದ್ಧಿಯಾಯಿತೆಂದರೆ ಅವನು ಆಧ್ಯಾತ್ಮಿಕವಾಗಿ ಮತ್ತು ಧಾರ್ಮಿಕವಾಗಿಯೂ ಪ್ರಾಮಾಣಿಕನಾಗಿರುವವನಲ್ಲದೇ, ಮಾನಸಿಕವಾಗಿ ಯಾವುದೇ ಸಮಸ್ಯೆಗಳಿದ್ದರೂ ಅದರಿಂದ ಮುಕ್ತನಾಗಲು ಸಾಧ್ಯ. ಇನ್ನೂ ಚೆಂದದ ವಿಷಯವೆಂದರೆ, ಈ ತನ್ನ ತಾನು ನೋಡಿಕೊಳ್ಳುವ ತಂತ್ರಗಾರಿಕೆಯನ್ನು ಅಭ್ಯಾಸ ಮಾಡುವುದರಿಂದ ಸಾರ್ವಜನಿಕವಾಗಿ ಮಾತಾಡುವವರು, ಭಾಷಣ ಮಾಡುವವರು, ತರಗತಿಗಳನ್ನು ತೆಗೆದುಕೊಳ್ಳುವವರು ತಮ್ಮ ಪ್ರದರ್ಶನಗಳನ್ನು ಉತ್ತಮ ಪಡಿಸಿಕೊಳ್ಳಬಲ್ಲರು.

ಇನ್ನು ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಕಲಾವಿದರಿಗೂ ತಮ್ಮ ಪ್ರದರ್ಶನವನ್ನು ಸಂವೇದನಾಶೀಲವನ್ನಾಗಿಸಿಕೊಳ್ಳಲು ಸಾಧ್ಯ.
ತನಗೆ ತಾನೇ ಸಾಕ್ಷಿಯಾಗುವುದು; ಈ ಪರಿಕಲ್ಪನೆಯನ್ನು ಸರಳವಾಗಿ ರಂಗಭೂಮಿ ಭಾಷೆಯಲ್ಲಿ ಹೇಳುವುದಾದರೆ, ನಾನೇ ರಂಗದ ಮೇಲೆ ಅಭಿನಯಿಸುತ್ತಿರುವುದು. ಅದನ್ನು ನಾನೇ ಪ್ರೇಕ್ಷಕರಲ್ಲಿ ಕುಳಿತು ನೋಡುವುದು.

ಅಧೀನನಾಗುವುದಿಲ್ಲ

ತನ್ನತನವನ್ನು ರೂಪಿಸಿಕೊಂಡವನು ಮತ್ತು ಆ ತನ್ನತನದಲ್ಲಿ ಹರಳು ನೆಟ್ಟಿರುವ ಮೌಲ್ಯಗಳ ಜ್ಞಾನೋದಯವಾಗಿರುವವನು ಯಾರನ್ನೂ ತನ್ನ ಅಂತಿಮ ಮಾದರಿ ಎಂದಾಗಲಿ, ಆರಾಧ್ಯ ವ್ಯಕ್ತಿಯೆಂದಾಗಲಿ ಎಂದಿಟ್ಟುಕೊಳ್ಳುವುದಿಲ್ಲ. ಒಟ್ಟಾರೆ ಹಾರ್ಡ್ ಕೋರ್ ಫ್ಯಾನ್ ಅಥವಾ ಕಟ್ಟಾ ಅಭಿಮಾನಿ ಆಗುವುದಿಲ್ಲ. ಅದೇ ರೀತಿಯಲ್ಲಿ ತನ್ನ ಮನೆಯಲ್ಲಾಗಲಿ, ಕೆಲಸ ಮಾಡುವ ಕಡೆಯಲ್ಲಾಗಲಿ ಯಾವುದೇ ಮುಲಾಜಿತೆ ಯಾರೊಬ್ಬರ ಅಧೀನವಾಗಿರುವುದಿಲ್ಲ. ಗೌರವಿಸುವುದು, ವಿನಯವಾಗಿರುವುದು, ಅನುಸರಿಸಿಕೊಳ್ಳುವುದು; ಈ ಎಲ್ಲವೂ ಇರುತ್ತದೆ. ಆದರೆ ಅದು ಕಾರ್ಯಕಾರಣವಾದ ಸರಿಸಿಕೊಳ್ಳುವಿಕೆಯೇ ಹೊರತು ಯಾರಿಗೂ ಅಧೀನವಾಗಿರುವುದಿಲ್ಲ. ತಮ್ಮತನವನ್ನು ಪಣಕ್ಕಿಡುವುದಿಲ್ಲ.

ತನ್ನನ್ನು ತಾನು ಯಾರೋ ಒಬ್ಬ ನಟನ, ರಾಜಕೀಯ ವ್ಯಕ್ತಿಯ, ಧಾರ್ಮಿಕ ಪುರುಷನ, ಸಮಾಜ ಸುಧಾರಕನ ಭಕ್ತನಾಗಿಸಿಕೊಳ್ಳುವುದಿಲ್ಲ. ಯಾರು ತಮ್ಮನ್ನು ಕಟ್ಟಾ ಅಭಿಮಾನಿಗಳು ಎಂದು ಘೋಷಿಸಿಕೊಳ್ಳುತ್ತಾರೋ, ಪ್ರಾಮಾಣಿಕವಾಗಿ ಅವರಲ್ಲಿ ಅಂತಹ ಭಾವ ಇರುತ್ತದೆಯೋ ಅವರಿಗೆ ತಮ್ಮತನದ ಸಾಕ್ಷಾತ್ಕಾರವಾಗಿಲ್ಲವೆಂದೇ ಅರ್ಥ.

ತಮ್ಮತನದ ಅರಿವುಳ್ಳವರು ತಮ್ಮತನವನ್ನು ರೂಪುಗೊಳಿಸಿರುವ ಮೌಲ್ಯ ಮತ್ತು ಗುಣಗಳ ಅನುಸಾರವಾಗಿ ತಾವು ಗಮನಿಸುವ ಮಹಾನ್ ವ್ಯಕ್ತಿಗಳ, ತಮ್ಮ ಸಹಜೀವಿಗಳ, ಗುರುಗಳ ಇತ್ಯಾದಿ ಬೋಧನೆ ಮಾಡುವ ಸ್ಥಾನದಲ್ಲಿರುವವರ ಗುಣಗಳನ್ನು, ಸಲಹೆಗಳನ್ನು, ಉದಾಹರಣೆಗಳನ್ನು ಅನುಮೋದಿಸುತ್ತಾರೆ. ಹಾಗೆ ಅನುಮೋದಿಸುವ ಮೂಲಕ ತಮ್ಮ ತನ್ನತನದಲ್ಲಿ ಇರುವ ಅದೇ ಮಾದರಿಯ ಗುಣ ಸ್ವಭಾವಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ.

ತಮ್ಮತನದ ಗುಣ ಸ್ವಭಾವಗಳಿಗೆ ಪೂರಕವಾಗಿರುವ ವಿಷಯಗಳನ್ನು ಅವರು ಎಲ್ಲಿಂದಾದರೂ, ಯಾರಿಂದಲಾದರೂ ಅವರು ಹೆಕ್ಕಿಕೊಳ್ಳುವರು. ಆದರೆ ಯಾವುದೇ ನಿರ್ಧಿಷ್ಟ ವ್ಯಕ್ತಿಗೆ ಅವರು ಸೀಮಿತವಾದರೆ ಅಥವಾ ವ್ಯಕ್ತಿಪೂಜೆ ಮಾಡುತ್ತಿದ್ದಾರೆಂದರೆ ಅವರು ತಮ್ಮತನದ ಸಾಕ್ಷಾತ್ಕಾರವನ್ನು ಪಡೆದಿಲ್ಲವೆಂದೋ ಅಥವಾ ತಮ್ಮತನವನ್ನು ರೂಪಿಸಿಕೊಳ್ಳುವುದರಲ್ಲಿ ಗೊಂದಲದಿಂದ ಕೂಡಿದ್ದಾರೆಂದೋ ತಿಳಿಯಬಹುದು.

ತಮ್ಮತನವೆನ್ನುವುದೇ ನೈತಿಕ ಮೌಲ್ಯ, ನಿರ್ಧಿಷ್ಟ ಗುಣಗಳಿಂದ ರೂಪುಗೊಂಡಿರುವುದು. ಯಾರೋ ಒಬ್ಬ ನಟರಾಗಲಿ, ರಾಜಕಾರಣಿಯಾಗಲಿ, ಸಾಹಿತಿಯಾಗಲಿ, ಕಲಾವಿದನಾಗಲಿ, ಅವರವರತನದ ಅಭಿವ್ಯಕ್ತಿಯಾಗಿ ತಮ್ಮ ಕ್ಷೇತ್ರದಲ್ಲಿ ತಮ್ಮ ಕೆಲಸದ ಮೂಲಕ ವ್ಯಕ್ತಪಡಿಸಿರುತ್ತಾರೆ.ಅವರು ಯಾವುದೇ ರೀತಿಯ ಕೊಡುಗೆಗಳನ್ನು ನಾಡು ನುಡಿ ಮತ್ತು ಸಮಾಜಕ್ಕೆ ಕೊಟ್ಟರೂ ಅವರ ಕೊಡುಗೆಗಳನ್ನು ಸ್ವೀಕರಿಸುವ ರೀತಿಯಲ್ಲಿ ಮತ್ತು ಕೊಟ್ಟಿರುವ ಅವರನ್ನು ಗೌರವಿಸುವ ರೀತಿಯಲ್ಲಿ ಉನ್ಮತ್ತನಾಗಿ ಮಾರು ಹೋಗುವ ಸಾಮೂಹಿಕ ಸನ್ನಿಯನ್ನು ಹೊಂದಿರುವುದಿಲ್ಲ. ಇಷ್ಟು ತಿಳಿದುಕೊಳ್ಳೋಣ.

ತನ್ನತನದ ಸಾಕ್ಷಾತ್ಕಾರವಾಗಿರುವವನು ಸಾಮೂಹಿಕ ಸನ್ನಿಯಿಂದ, ಜನಪ್ರಿಯ ಅನುಸರಣೆಗಳಿಂದ ಮುಕ್ತನಾಗಿರುತ್ತಾರೆ. ಉತ್ಪ್ರೇಕ್ಷೆಗಳ ಅಮಲಿನಲ್ಲಿ ಮೈ ಮರೆಯುವುದಿಲ್ಲ. ಮಾಸ್ತಿ ಕನ್ನಡದ ಆಸ್ತಿ ಎಂಬುದೊಂದು ಮಾತು. ಅದನ್ನು ಕೇಳಿದಾಗ ಈ ತನ್ನತನದ ವ್ಯಕ್ತಿಯೊಬ್ಬ ಲೇಖಕನಾಗಿದ್ದರೆ ಅವನ ಆಂತರಿಕ ಪ್ರತಿಕ್ರಿಯೆಗಳು ಹೀಗಿದ್ದಿರಬಹುದು. “ಕನ್ನಡ ನುಡಿಯ ಅಸ್ತಿತ್ವಕ್ಕೆ ಅವರು ನೀಡಿರುವ ಕೊಡುಗೆಗಳು ನಿಜಕ್ಕೂ ಗೌರವಪೂರ್ಣವೇ. ಆದರೆ ಅವನ್ನು ಪ್ರಶಂಸಿಸುವ ಉತ್ಪ್ರೇಕ್ಷೆಯ ಧ್ವನಿ ಇದು. ಆಸ್ತಿ ಎಂದು ಕರೆಯಿಸಿಕೊಳ್ಳದಿದ್ದರೂ ಇತರ ಅನೇಕಾನೇಕರ ಕೊಡುಗೆಗಳು ಕನ್ನಡಕ್ಕೆ ಇವೆ. ಇದರಲ್ಲಿ ನಾನೂ ಹೊರತಲ್ಲ.”

ಏಕೈಕ, ನ ಭೂತೋ ನ ಭವಿಷ್ಯತಿ, ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟುವುದಿಲ್ಲ, ಸಮಸ್ತರ ಹೃದಯ ನಿವಾಸಿ, ನಮ್ಮೆಲ್ಲರ ಆಶಾಕಿರಣ; ಇತ್ಯಾದಿಗಳು ಅವರ ಪದ ಭಂಡಾರದಲ್ಲಿರುವುದಿಲ್ಲ. ಬಸವಣ್ಣಾ ರಾಜಾ ಬಿಜ್ಜಳನ ಗೌರವಿಸಿದರೂ, ಪ್ರೀತಿಸಿದರೂ ಅವನ ಅಧಿಕಾರದ ಹಂಗನ್ನು ತಿರಸ್ಕರಿಸಿದ್ದನ್ನು ನೆನಪಿಸಿಕೊಳ್ಳೋಣ. ಎನಗಿಂತ ಕಿರಿಯರಿಲ್ಲ ಎನ್ನುವ ಬಸವಣ್ಣ ತನ್ನ ಅನ್ನ, ಅಧಿಕಾರ ಮತ್ತು ಅಂತಸ್ತಿಗೆ ಆಶ್ರಯನಾಗಿರುವ ಬಿಜ್ಜಳನ ಓಲೈಸುವ ಹೊಗಳುಭಟ್ಟಂಗಿಯಂತಹ ಕವಿಯಾಗಿ ವಚನಗಳನ್ನು ರಚಿಸಲಿಲ್ಲ. ತಮ್ಮತನವನ್ನು ವ್ಯವಸ್ಥೆಯ ಅಧೀನಕ್ಕೆ ಬಿಟ್ಟುಕೊಡಲು ಸಿದ್ಧರಲ್ಲದ ಬಸವಣ್ಣ ಸಾಯಲೂ ಸಿದ್ಧವಾಗಿ ಮರಣವೇ ಮಹಾನವಮಿ ಎಂದರು.

ಜೋಳವಾಳಿಯವ ನಾನಲ್ಲ, ವೇಳವಾಳಿಯವ ನಾನಯ್ಯ” ಎನ್ನುವುದು ಅವರತನದ ಧೋರಣೆ.
‘ತನ್ನ ಜೀವಿತಕ್ಕೆ ಆಧಾರವಾಗಿರುವ ಆಹಾರಾದಿಗಳನ್ನು ಕೊಡುವ ಧಣಿಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಪದ್ಧತಿಯನ್ನು ಜೋಳವಾಳಿ ಎಂದೂ, ಯುಕ್ತ ಸಮಯಕ್ಕೆ ಸರಿಯಾಗಿ ನೆರವಿಗೆ ಬರುವ ಪದ್ಧತಿಯನ್ನು ವೇಳವಾಳಿ ಎಂದೂ ಕರೆಯಲಾಗುತ್ತಿತ್ತು.’ ಒಟ್ಟಿನಲ್ಲಿ ಇಷ್ಟು ತಿಳಿಯೋಣ ತನ್ನತನದ ಮನುಷ್ಯರು ವೇಳವಾಳಿಯವರೇ ಹೊರತು ಜೋಳವಾಳಿಯವರಲ್ಲ.

ಗುಂಪಿನ ಧ್ವನಿಯಲ್ಲ

ಎಲ್ಲರ ಮಾತನ್ನು ತನ್ನದು ಎಂಬಂತೆಯೂ, ತನ್ನ ಮಾತೇ ಎಲ್ಲರದು ಎಂಬಂತೆಯೂ ತನ್ನತನದ ಅರಿವುಳ್ಳವರು ಹೇಳುವುದಿಲ್ಲ. ಒಂದು ವೇಳೆ ಸಮೂಹಗಳು, ಸಂಘಟನೆಗಳು ಧ್ವನಿ ಎತ್ತಿದರೆ ಅವು ಸಾಂಘಿಕವಾಗಿವೆ ಎಂದೋ, ಅವರ ಬೆಂಬಲ ತನಗೆ ಬೇಕಾಗುತ್ತದೆ ಎಂದೋ ಧ್ವನಿಗೂಡಿಸುವುದಿಲ್ಲ. ತಾವು ಅದನ್ನು ಒಪ್ಪಿದ್ದರೆ ಮಾತ್ರವೇ ದನಿಗೂಡಿಸುತ್ತಾರೆ ಮತ್ತು ತಮ್ಮದೇ ಆದ ರೀತಿಯಲ್ಲಿ ಅನುಮೋದಿಸುತ್ತಾರೆ. ಸಂಘಟನೆಗಳನ್ನು ಮಾಡಿದರೂ ಅದರಲ್ಲಿ ಪ್ರಜಾತಂತ್ರಾತ್ಮಕ ರೀತಿಯನ್ನು ಅನುಸರಿಸುತ್ತಾರೆ.

ನಾಯಕನೆಂದು ಅವರಿವರೆಂದರೂ ತಾನು ತನ್ನ ವೈಯಕ್ತಿಕ ಬದ್ಧತೆಯಿಂದ ಹೊತ್ತಿರುವ ಸಂಕಲಿತ ಜವಾಬ್ದಾರಿಯ ಮುಂದಾಳು, ಮೊದಲು ಕೆಲಸ ಮಾಡಬೇಕಾಗಿರುವ ಆಳೆಂಬ ಅರಿವಿರುತ್ತದೆಯೇ ಹೊರತು, ಹಲವರನ್ನು ಅಧೀನದಲ್ಲಿಟ್ಟುಕೊಂಡಿರುವ ನಾಯಕ ತಾನು ಎಂಬ ಮೇಲರಿಮೆಯ ಭಾವ ಇರುವುದಿಲ್ಲ. ಅಷ್ಟೇ ಅಲ್ಲ, ತಮ್ಮ ಒಲವು ಮತ್ತು ನಿಲುವುಗಳನ್ನು, ಅಭಿಪ್ರಾಯಗಳನ್ನು ಸಾಮಾನ್ಯೀಕರಿಸುವುದಿಲ್ಲ. ಮತ್ತು ಯಾವುದೇ ಸಾರ್ವಜನಿಕವಾದ ವಿಷಯಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಾರೆಯೇ ಹೊರತು ನಿರ್ಣಯಗಳನ್ನು ತೆಗೆದುಕೊಳ್ಳುವುದಿಲ್ಲ.

ತಮ್ಮತನದ ಅರಿವಿರುವವರು ಸದಾ ಇತರರಿಗೂ ಅವರತನವೊಂದಿರುತ್ತದೆ ಎಂಬ ಅರಿವಿನಲ್ಲಿ ಜಾಗೃತವಾಗಿರುತ್ತಾರೆ. ತಮ್ಮತನಕ್ಕೆ ಬದ್ಧವಾಗಿರುವವರು ಇತರರ ತಮ್ಮತನವನ್ನೂ ಗೌರವಿಸುತ್ತಾರೆ. ತಮ್ಮದನ್ನೇ ಹೇರುವ ಮತ್ತು ಒಪ್ಪಿಸುವ ಧಾವಂತ ಎಂದಿಗೂ ಅವರಲ್ಲಿ ಇರುವುದಿಲ್ಲ. ಒಂದು ವೇಳೆ ತಮ್ಮ ಮಾತು ಬಿದ್ದು ಹೋಗುವ ಅಥವಾ ನಗಣ್ಯವಾಗುವುದನ್ನು ಕಂಡರೂ ಭಾವೋದ್ರೇಕಗೊಳ್ಳುವುದಿಲ್ಲ.

ನಾನೆಷ್ಟು ಕಾಳಜಿ ಮತ್ತು ಪ್ರೀತಿಯಿಂದ ವಿಷಯವನ್ನು ಪ್ರಸ್ತುತ ಪಡಿಸಿದ್ದೇನೆ. ಆದರೆ ನೀವು ಅದನ್ನು ಪರಿಗಣಿಸಿಯೇ ಇಲ್ಲ. ನನಗೆ ತುಂಬಾ ನೋವಾಯಿತು. ದಯಮಾಡಿ ಇದನ್ನು ಪರಿಶೀಲಿಸಿ, ಒಪ್ಪಿಕೊಳ್ಳಬೇಕೆಂದು ವಿನಯಪೂರ್ವಕವಾಗಿ ಆಗ್ರಹಿಸುತ್ತೇನೆ.” ಇಂತವೆಲ್ಲಾ ಅವರ ವಾಕ್ಯಗಳಲ್ಲ. ಮನವರಿಕೆ ಮಾಡಿಕೊಡುವ, ಮನದಟ್ಟು ಮಾಡಿಸುವ, ಮನವೊಲಿಸುವ ಸಂದರ್ಭಗಳು ಬಂದಾಗ ಅದಕ್ಕೆ ತಮ್ಮ ಪ್ರಯತ್ನವನ್ನು ಮಾಡುವರು. ಆದರೆ ತಮ್ಮತನವನ್ನು ಒತ್ತೆಯಿಟ್ಟಲ್ಲ. ಸರಳವಾಗಿ ಹೇಳುವುದಾದರೆ ಬಕೆಟ್ ಹಿಡಿಯುವುದಿಲ್ಲ.

ಎಲ್ಲವನ್ನೂ, ಎಲ್ಲರನ್ನೂ ಭಳಿರೇ ಭಳಿರೇ ಎಂದಂತೂ ಮೆಚ್ಚುವ ನಟನೆ ಮಾಡುತ್ತಾ ಅವರ ಮೆಚ್ಚುಗೆಗೆ ಪಾತ್ರರಾಗಲು ಯತ್ನಿಸುವುದಿಲ್ಲ.  “ಸೂಳೆಗೆ ಹುಟ್ಟಿದ ಕೂಸಿನಂತೆ ಆರನಾದಡೆಯೂ ‘ಅಯ್ಯಾ ಅಯ್ಯಾ’ ಎನಲಾರೆ” ಎನ್ನುವ ಸ್ವಾಭಿಮಾನ. ಜೊತೆಗೆ, “ಚೆನ್ನಯ್ಯನೆಮ್ಮಯ್ಯನು, ಚೆನ್ನಯ್ಯನ ಮಗ ನಾನು. ಕೂಡಲಸಂಗನ ಮಹಾಮನೆಯಲಿ ಧರ್ಮಸಂತಾನಿ ಭಂಡಾರಿ ಬಸವಣ್ಣನು” ಎಂದು ಹೇಳಿಕೊಳ್ಳುವ ತನ್ನತನದ ಬದ್ಧತೆ.

ನನ್ನ ಭಾಷೆ ನನ್ನದು

ಫೇಸ್ಬುಕ್ ಮತ್ತು ವಾಟ್ಸಾಪ್‍ಗಳ ಅಂತರ್ಜಾಲ ವೇದಿಕೆಗಳಿಂದಾಗಿ ಸಾಮಾನ್ಯ, ಅಸಮಾನ್ಯ ಎನ್ನದೇ, ಪಂಡಿತ ಪಾಮರ ಎನ್ನದೇ ಯಾರಾದರೂ ತಮ್ಮ ಅಭಿಪ್ರಾಯಗಳನ್ನು ಮತ್ತು ಆಲೋಚನೆಗಳನ್ನು ಪ್ರಕಟಿಸಲು ಮತ್ತು ತಮ್ಮತನವನ್ನು ಪ್ರದರ್ಶಿಸಲು ಅವಕಾಶವಿದೆ. ಸಾಮಾನ್ಯವಾಗಿ ಇತರೇ ವಸ್ತುಗಳಿಗೆ ಮತ್ತು ವ್ಯವಸ್ಥೆಗಳಲ್ಲಿ ಇರುವಂತೆ ಇದರಲ್ಲಿಯೂ ಅನುಕೂಲಗಳು ಅನಾನುಕೂಲಗಳೂ ಇವೆ. ಬಳಸುವ ಬಗೆಯು ಅವರವರ ವಿವೇಚನೆಗೆ ಬಿಟ್ಟಿರುವುದೇ ಆಗಿರುತ್ತದೆ.

ವಿವೇಚನೆ ಎಂದರೇನು? ನಿಶ್ಚಿತವಾದ ತಿಳುವಳಿಕೆ ಮತ್ತು ಸ್ಪಷ್ಟವಾದ ಅರಿವು ಇದ್ದು ಅದನ್ನು ಸಾರಾಸಾರವನ್ನು ತಿಳಿದು, ಉಚಿತ ಅನುಚಿತವಾದುದು ಯಾವುದೆಂದು ಬಗೆದು ಆಲೋಚಿಸುವ, ಗ್ರಹಿಸುವ, ಪ್ರಕಟಗೊಳಿಸುವ, ಪ್ರದರ್ಶಿಸುವ ಒಬ್ಬನ ವಿವೇಕ. ತನ್ನತನದ ಸಾಕ್ಷಾತ್ಕಾರವುಳ್ಳವರಿಗೆ ಈ ವಿವೇಚನೆ ಅಥವಾ ವಿವೇಕ ಎನ್ನುವುದು ಸಹಜವಾದ ಗುಣವಾಗಿರುತ್ತದೆ ಅಥವಾ ಆಗಿರಬೇಕು.

ಫೇಸ್ಬುಕ್ಕಿನಲ್ಲಿ ಕೆಲವು ವಿಷಯಗಳು ಚರ್ಚೆಯಾಗುತ್ತಿರುತ್ತವೆ. ವಿಷಯದ ಪರವಾಗಿರುವವರೂ ಮತ್ತು ವಿರೋಧವಾಗಿರುವವರೂ ತಮ್ಮ ತಮ್ಮ ವಾದಗಳನ್ನು, ವಿಷಯಗಳನ್ನು ಮತ್ತು ಗ್ರಹಿಕೆಗಳನ್ನು ಪ್ರದರ್ಶಿಸುತ್ತಿರುತ್ತಾರೆ. ಆದರೆ ಅವರ ಮಾತುಗಳಲ್ಲಿ ಬಳಕೆಯಾಗುವ ಭಾಷೆಯನ್ನು ನೋಡಿದರೆ ಅವರ ಆಲೋಚನೆ, ಗ್ರಹಿಕೆ ಮತ್ತು ಅಧ್ಯಯನಗಳಿಗಿಂತ, ಅಥವಾ ಒಲವು ಮತ್ತು ನಿಲುವುಗಳಿಗಿಂತ ಅವರವರ ಪೂರ್ವಾಗ್ರಹಗಳು ಮತ್ತು ಮಾನಸಿಕ ಸಮಸ್ಯೆಗಳು ಪ್ರದರ್ಶನವಾಗುತ್ತಿರುತ್ತವೆ. ಆ ಪ್ರದರ್ಶನವಾಗುವುದು ಅವರು ಬಳಸುವ ಭಾಷೆಯಿಂದ.

ಬಹಳಷ್ಟು ಸಂದರ್ಭಗಳಲ್ಲಿ ವಿಷಯದ ವಿರೋಧಿಗಳೂ ಮತ್ತು ಪರವಾಗಿರುವವರಿಬ್ಬರೂ ಒಂದೇ ಭಾಷೆಯಲ್ಲಿ ಮಾತಾಡುತ್ತಿರುತ್ತಾರೆ. ಪರಸ್ಪರ ನಿಂದನೆಗಳಲ್ಲಿ, ಅವಹೇಳನಗಳಲ್ಲಿ ತೊಡಗಿರುವುದಲ್ಲದೇ ಅಭಿಪ್ರಾಯಗಳನ್ನು ಹೇಳುವ ಬದಲು ನಿರ್ಣಯಗಳನ್ನು ನೀಡುತ್ತಿರುತ್ತಾರೆ. ಅವುಗಳಲ್ಲಿ ಅವರು ವಿಷಯದ ಬಗ್ಗೆ ತಳೆದಿರುವ ಒಲವು ನಿಲುವುಗಳಿಗಿಂತ ವ್ಯಕ್ತಿಯಲ್ಲಿರುವ ಮೇಲರಿಮೆ, ಆತ್ಮರತಿ, ಕೀಳರಮೆ, ಬೈಪೋಲಾರ್ ಸಮಸ್ಯೆ, ಬಾರ್ಡರ್ ಲೈನ್ ಡಿಸಾರ್ಡರ್, ತನ್ನತನದ ಅರಿವಿಲ್ಲದೇ ಸಮೂಹ ಸನ್ನಿಗೆ ಒಳಗಾಗಿರುವ ಲಕ್ಷಣಗಳೇ ಪ್ರದರ್ಶಿತವಾಗುತ್ತಿರುತ್ತವೆ.

ಇಲ್ಲಿ ಗಮನಿಸಿ ನೋಡಿ. ಪರ ಅಥವಾ ವಿರೋಧವೇನೂ ಇಲ್ಲದ ಮೂರನೆಯ ವ್ಯಕ್ತಿಯೊಬ್ಬ ಈ ಚರ್ಚೆಯನ್ನು ಗಮನಿಸುತ್ತಿದ್ದಾಗ ಅವನಿಗೆ ಇಬ್ಬರ ಬಗ್ಗೆಯೂ ಒಲವುಂಟಾಗುವುದಿಲ್ಲ. ಬದಲಿಗೆ ಇಬ್ಬರ ಬಗ್ಗೆಯೂ ಜಿಗುಪ್ಸೆ ಹುಟ್ಟುತ್ತದೆ. ಹೀಗಾಗಿ ಅವನು ವಿಷಯದ ಪರವಾಗಿಯೂ ಮನವೊಲಿಯುವುದಿಲ್ಲ, ವಿರುದ್ಧವಾಗಿಯೂ ಮನವರಿಕೆಯಾಗುವುದಿಲ್ಲ. ಒಟ್ಟಾರೆ ಎರಡೂ ವರ್ಗಗಳ ನಡುವಿನ ಒಂದು ಸಂಘರ್ಷವಾಗಿ ಕಾಣುತ್ತದೆ.

ತನ್ನತನದ ಅರಿವಿರುವವರು ಎಂದಿಗೂ ತಮ್ಮ ಭಾಷೆಯನ್ನು ಸಡಿಲಬಿಡುವುದಾಗಲಿ, ತಾವೇ ಏಕಮೇವಾದ್ವಿತೀಯವೆಂಬಂತೆ ನಿರ್ಣಯ ತೆಗೆದುಕೊಂಡಂತೆ ಮಾತಾನಾಡುವುದಾಗಲಿ ಮಾಡುವುದಿಲ್ಲ. ನಿಂದನೆಯಂತೂ ದೂರದ ಮಾತು. ಉದಹರಿಸುವುದಾದರೆ, ಎಡಪಂಥ ಮತ್ತು ಬಲಪಂಥದವರು ಯಾವುದೋ ವಿಚಾರದ ಮೇಲೆ ಚರ್ಚೆ ಮಾಡುತ್ತಿದ್ದಾರೆಂದಿಟ್ಟುಕೊಳ್ಳಿ. ಯಾವ ಪಂಥದವರೂ ಅಲ್ಲದ ಬಹುದೊಡ್ಡ ಸಮೂಹವೊಂದು ಅದನ್ನು ನೋಡುತ್ತಿದೆ ಎಂದಿಟ್ಟುಕೊಳ್ಳಿ. ಇಬ್ಬರೂ ಬಳಸುವ ಭಾಷೆಗಳಲ್ಲಿ ಯಾರದು ಮುತ್ತಿನ ಹಾರದಂತೆ ತಾರ್ಕಿಕವಾಗಿ ಪೋಣಿಸಿಕೊಂಡು ಆಕರ್ಷಕವಾಗಿರುತ್ತದೋ, ಮಾಣಿಕ್ಯದ ದೀಪ್ತಿಯಂತೆ ಪ್ರಜ್ಞೆಯ ಬೆಳಕನ್ನು ಕೊಡುವುದೋ, ಸ್ಫಟಿಕದ ಸಲಾಕೆಯಂತೆ ವಿಷಯ ಸ್ಪಷ್ಟವಾಗಿ ಮತ್ತು ನೇರವಾಗಿರುತ್ತದೋ ಆಗ ಅಹುದಹುದು ಎಂದು ಒಪ್ಪಲಾಗುತ್ತದೆ.

ಅಲ್ಲಿ ಯಾರು ಘನತೆಯನ್ನು ಪ್ರದರ್ಶಿಸುತ್ತಾರೋ ಅವರ ಮಾತು ಘನವಾಗಿರುತ್ತದೆ. ತನ್ನತನದ ಘನತೆಯನ್ನು ಅರಿತವರು ಲಘುವಾದ ಭಾಷೆಗಳಿಂದ ಎದುರಾಳಿಯ ನಿಂದನೆಗಳನ್ನು ಮಾಡುತ್ತಾ ತನ್ನತನದ ಮೌಲ್ಯವನ್ನು, ತನ್ನತನವೆಂಬುದು ಬೆಂಬಲಿಸುವ ಮತ್ತು ಪೋಷಿಸುವ ವಿಷಯದ ಗೌರವವನ್ನು ಕಡೆಗಣಿಸುವುದಿಲ್ಲ.

ಬಹಳ ಎಚ್ಚರಿಕೆಯಿಂದ, ವಿವೇಕ ಮತ್ತು ವಿವೇಚನೆಗಳಿಂದ ಭಾಷೆಯನ್ನು ಬಳಸಲಾಗುತ್ತದೆ. ಏಕೆಂದರೆ ಅವರಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ ತಾವು ಗೌರವಿಸುವ ಮೌಲ್ಯವು, ಅವುಗಳಿಂದ ರೂಪುಗೊಂಡಿರುವ ತಮ್ಮತನವು ಅಮೂರ್ತವಾದದ್ದು. ಹಾಗೂ ಅದನ್ನು ಪ್ರಕಟಿಸುವ ಮೂರ್ತಸ್ವರೂಪವೆಂದರೆ ಭಾಷೆ. ವ್ಯಕ್ತಿಯು ಉಪಯೋಗಿಸುವ ಭಾಷೆ ಮತ್ತು ಪರಿಭಾಷೆಗಳ ಆಧಾರದಲ್ಲಿ ಆತನು ತನ್ನತನವನ್ನು ಅದೆಷ್ಟರಮಟ್ಟಿಗೆ ಪ್ರದರ್ಶಿಸುತ್ತಾನೆ, ಗೌರವಿಸಿಕೊಳ್ಳುತ್ತಾನೆ ಎಂಬುದು ನಿರ್ಣಯವಾಗುತ್ತದೆ.

ಬಹಳಷ್ಟು ಸಲ ಹೊಟ್ಟನ್ನು ತೂರುವುದೇ ಆಗಿರುತ್ತದೆ. ಕಾಳನ್ನು ಎರಚುವುದಾಗಿರುವುದೇ ಇಲ್ಲ. ವಿವೇಕಿಯು ಬೀಜಗಳನ್ನು ಅಥವಾ ಕಾಳುಗಳನ್ನು ಎರಚಬೇಕು. ಏಕೆಂದರೆ ಅವು ಮೊಳೆತಾವು, ಬೆಳೆದಾವು, ಮುಂದೊಂದು ದಿನ ಬೆಳೆ ಕೊಟ್ಟಾವು. ತನ್ನತನದ ಸತ್ಯವೆಂಬುದು ಕೂರಲಗಾಗಿದ್ದರೂ ಅದರಿಂದ ತೊಂದರೆ, ನಷ್ಟವಾಗಬಹುದೆಂಬ ಭಯವಿಲ್ಲದೇ ಅದನ್ನು ಹಿಡಿದಿರುವುದೇ ತನ್ನ ಗೆಲುವು ಎಂದು ತನ್ನತನದ ಪ್ರಜ್ಞೆಯುಳ್ಳವರು ಅರಿತಿರುತ್ತಾರೆ. ಅವರಿಗೆ ಸೋಲಿನ ಭಯವೋ ಆತಂಕವೋ ಇರುವುದಿಲ್ಲ. ತನ್ನ ದೌರ್ಬಲ್ಯಗಳ ಪ್ರದರ್ಶನವಾಗುವುದು ಅವರಿಗೆ ಬೇಕಿಲ್ಲ.

ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ ಕೇಳಿರಯ್ಯಾ,
ಎರಡಾಳಿನ ಭಾಷೆಯ ಕೊಲುವೆನೆಂಬ ಭಾಷೆ ದೇವನದು
ಗೆಲುವೆನೆಂಬ ಭಾಷೆ ಭಕ್ತನದು
ಸತ್ಯವೆಂಬ ಕೂರಲಗನೆ ಹಿಡಿದುಕೊಂಡು ಸದ್ಭಕ್ತರು ಗೆದ್ದರು ಕಾಣಾ ಕೂಡಲಸಂಗಮದೇವಾ.

ಒಟ್ಟಾರೆ ತನ್ನತನವ ಅರಿತವನ ಭಾಷೆ ಕೊಲುವೆನೆಂಬುದಾಗಿರುವುದಿಲ್ಲ. ಬದಲಿಗೆ ಗೆಲುವೆನೆಂದಾಗಿರುತ್ತದೆ. ಈ ಗೆಲುವೆಂಬುದು ಸವಾಲಿಗೆ ಸವಾಲೊಡ್ಡುವುದಲ್ಲ. ತನ್ನತನವನ್ನು ಕಳೆದುಕೊಳ್ಳುವ ಸೋಲನ್ನುಣ್ಣದಿರುವುದು. ಏಕೆಂದರೆ, “ನುಡಿಯೊಳಗಾಗಿ ನಡೆಯದಿದ್ದರೆ” ತಮ್ಮ ಆತ್ಮಸಾಕ್ಷಿಯು ಒಲಿಯುವುದಿಲ್ಲ ಎಂಬ ಅರಿವು ಅವರಿಗಿರುತ್ತದೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version