Connect with us

ಸಿನಿ ಸುದ್ದಿ

ಮೀಡಿಯಾ ಸತ್ಯವನ್ನ ನಿರ್ಧಾರ ಮಾಡುತ್ತಾ..? ಇದು ಹೇಳಿದ್ದೆಲ್ಲಾ ಸತ್ಯವಾ..? : ‘ಜನಗಣಮನ’ ಸಿನೆಮಾಂತರಂಗ..!

Published

on

  • ಜಿ.ಟಿ.ತುಮರಿ

ಪ್ರಶ್ನೆ ಕೇಳುತ್ತಾ ಹೋದಂತೆ ಒಬ್ಬ ಪತ್ರಕರ್ತನಾಗಿ ತಣ್ಣಗೆ ಬೆವರಿಬಿಟ್ಟೆ. ನನ್ನ ಕಣ್ಣಮುಂದೆ ಹಲವು ಸುದ್ದಿ ಚಾನೆಲ್ ಮತ್ತು ವಿಷ ಕಾರುವ ಅದರ ನಿರೂಪಕರು, ಅವರ ನಿಲುವುಗಳ ಹಿಂದಿರುವ ಅಪವಿತ್ರ ಮೈತ್ರಿಗಳು, ಅದರಲ್ಲೂ ಈಚೆಯ ವರ್ಷದಲ್ಲಿ ಪೇಸ್ಭುಕ್, ಟ್ವಿಟರ್, ವ್ಯಾಟ್ಸಪ್ , ಇನ್ಸ್ಟಾಗ್ರಾಮ್ ಇತ್ಯಾದಿ ಮೂಲಕ ಸುಳ್ಳು ಸುರಿಯುವ ರಾಜಕೀಯ ಸಾಮಾಜಿಕ ಹುನ್ನಾರಗಳು ಥಟ್ಟನೆ ಮನಸಿಗೆ ಬಂದವು.

ಮಲಯಾಳಂ ನಟ ಪೃಥ್ವಿರಾಜ್ ಈಚೆಗೆ ಬಿಡುಗಡೆಯಾದ ಜನಗಣಮನ ಸಿನಿಮಾದಲ್ಲಿ ಡೈಲಾಗ್ ಮಾತ್ರ ಹೇಳುತ್ತಾ ಇರಲಿಲ್ಲ ಆ ಕಂಚಿನ ಕಂಠದಲ್ಲಿ ಸಿನಿಮಾ ನೋಡುತ್ತಾ ಇರುವ ಪ್ರತಿ ಭಾರತೀಯನ ಆತ್ಮಸಾಕ್ಷಿ ತಿವಿಯುತ್ತಾ ಹೋಗುತ್ತಾನೆ. ಆ ಮೂಲಕ ನಮ್ಮ ಸುತ್ತಲ ವರ್ತಮಾನದ ಸತ್ಯಗಳಿಗೆ ಕುರುಡಾದ ಕೆಪ್ಪಾದ ಕಣ್ಣು ಕಿವಿಯ ಜತೆ ಸತ್ತ ಹಾಗೆ ಇರುವ ನಮ್ಮೊಳಗಿನ ನಮ್ಮನ್ನು ಬಡಿದೆಬ್ಬಿಸುತ್ತಾ ಹೋಗುತ್ತದೆ ಜನಗಣಮನ ಸಿನಿಮಾ.

” ಒಂದು ನಾಯಿ ಸತ್ತರೂ ಕೇಳೋ ಈ ದೇಶದಲ್ಲಿ ಆ ನಾಲ್ಕು ಜನ ಬೀದಿನಾಯಿಗಳ ಹಾಗೆ ಸತ್ತರು. ಯಾವ ಆಧಾರನೂ ಬೇಡ, ಯಾವ ನ್ಯಾಯ ಕೋರ್ಟ್ ಬೇಡ ಅವರನ್ನ ಕೊಲ್ಲಬೇಕು. ಇದಕ್ಕೆ ಕಾರಣ ಅವರ ಗುರುತು, 2 ನೇ ಕ್ಲಾಸ್ ಮಗುವಿಗೆ ಬಣ್ಣದ ಮೇಲೆ ಚಂದ ಕುರೂಪ ಅಂತ ಚಿತ್ರ ಬರೆದು ತಾರತಮ್ಯವನ್ನ ತುಂಬುವ ಮತದ ರಾಜಕೀಯ, ಅವರನ್ನು ನೋಡಿದ್ರೆ ಗೊತ್ತಾಗಲ್ಲವಾ ಅನ್ನೋ ಜಾತಿ ರಾಜಕೀಯ ಇಲ್ಲಿ ನಡೀತಾ ಇದೆ”

ಯೂನಿವರ್ಸಿಟಿಯೊಂದರಲ್ಲಿ ಜಾತಿಯ ಕಾರಣದಿಂದ ಹತ್ಯೆಗೆ ಒಳಗಾಗುವ ವಿದ್ಯಾರ್ಥಿನಿಗೆ ನ್ಯಾಯ ನೀಡಲು ಮುಂದಾಗುವ ಮಹಿಳಾ ಪ್ರೊಫೆಸರ್ ಒಬ್ಬರನ್ನು ಅಲ್ಲಿನ ವ್ಯವಸ್ಥೆ ಕೊಂದುಹಾಕಿದ ಪ್ರಕರಣವೊಂದನ್ನು ಸತ್ಯದ ಮರೆಮಾಚಿ ನಕಲಿ ಎನ್ ಕೌಂಟರ್ ಹೇಗೆ ಸೃಷ್ಟಿಯಾಗಲು ಇರುವ ಸಾಮಾಜಿಕ ರಾಜಕೀಯ ಕಾರಣಗಳನ್ನ ಜನಗಣಮನ ಸಿನಿಮಾ ಬಿಚ್ಚಿಡುತ್ತಾ ಹೋಗುತ್ತದೆ. ಘಟನೆಯೊಂದರ ರಾಜಕೀಯ ಲಾಭವನ್ನ ಹೇಗೆ ಮಾಧ್ಯಮಗಳು, ಸಮೂಹ ಮಾಧ್ಯಮಗಳ ಮೂಲಕ ಜನರಲ್ಲಿ ಸುಳ್ಳು ಬಿತ್ತಿ ಪರಿಸ್ಥಿತಿ ಲಾಭ ಪಡೆಯಬಹುದು ಎನ್ನುವುದನ್ನು ಇಡೀ ಸಿನಿಮಾ ಎಳೆ ಎಳೆಯಾಗಿ ವಿವರಿಸುತ್ತದೆ.

ಈ ನಿರ್ದೇಶಕರಿಗೆ ಸೆಲ್ಯೂಟ್.. ಒಂದು ಸಿನಿಮಾ ಕೇವಲ ರಂಜನೆ ನೀಡಿದರೆ ಸಾಕು ಎನ್ನುವ ಸೀಮಿತ ಲೆಕ್ಕಾಚಾರದ ನಡುವೆ ಸಿನಿಮಾವೊಂದು ನಮ್ಮ ಸುತ್ತಲಿನ ಸುಡು ವರ್ತಮಾನಕ್ಕೆ ವಿಮರ್ಶೆ ಬರೆದಿದೆ. ಹೇಗೆ ದೇಶದ ಜನರು ವಿಸ್ಮೃತಿಗೆ ಒಳಗಾಗಿ ಹೌದಪ್ಪ ಆಗಿದ್ದೇವೆ ಎನ್ನುವುದನ್ನ ಪ್ರತಿ ದ್ರಶ್ಯ ಕಟ್ಟಿ ಕೊಡುತ್ತದೆ. ಸಿನಿಮಾದ ಮೊದಲು ಅರ್ಧ ಭಾವನಾತ್ಮಕ ಕಥಾಹಂದರ ಕಟ್ಟಿ ಕೊಟ್ಟರೆ. ದ್ವಿತೀಯಾರ್ಧದಲ್ಲಿ ನಾವು ಈ ಮೊದಲು ಸಿನಿಮಾ ಆರಂಭದಲ್ಲಿ ಕಟ್ಟಿಕೊಂಡ ಭಾವುಕತೆ ಎಷ್ಟು ಕೃತಕ ಮತ್ತು ಸುಳ್ಳು ಎನ್ನುವುದನ್ನ ವಕೀಲನಾದ ಸಿನಿಮಾ ನಾಯಕ ಮೂಲಕ ಪ್ರಖರವಾಗಿ ಹೇಳಿಸುವ ಮೂಲಕ ಮಿಥ್ ಗಳನ್ನು ಸೃಷ್ಟಿ ಮಾಡುವ ಹುನ್ನಾರಗಳನ್ನ ಸಿನಿಮಾ ಏಕ ಕಾಲದಲ್ಲಿ ತೆರೆಯಮೇಲೆ ಮತ್ತು ನಮ್ಮೊಳಗೆ ಅನುಭವಕ್ಕೆ ತರಿಸುತ್ತದೆ.

ಇಂತ ಸಿನಿಮಾ ಮಾಡಲು ಪ್ರತಿಭೆ ಮಾತ್ರ ಇದ್ದರೆ ಸಾಕಾಗದು ಅದಕ್ಕೆ ಒಂದು ಬದ್ಧತೆ ಮತ್ತು ದೈರ್ಯ ಬೇಕು. ಸಾಮಾಜಿಕ ಮತ್ತು ರಾಜಕೀಯ ಸತ್ಯವನ್ನ ಹೇಳುವ ಸಮಾಜಮುಖಿ ಸಿನಿಮಾಗಳು ಹಾಗೆ ನೋಡಿದರೆ ಕನ್ನಡ ಚಿತ್ರರಂಗದಲ್ಲಿ 2000 ಕ್ಕಿಂತ ಮೊದಲು ಸಿನಿಮಾಗಳ ಸರಣಿಗಳೇ ಇವೆ. ಬಹಳ ಮುಖ್ಯವಾಗಿ ರಾಜ್ ಕುಮಾರ್ ಸಿನಿಮಾಗಳನ್ನ ಉಲ್ಲೇಖ ಮಾಡಬಹುದು. ಆದರೆ ಕಳೆದ ಒಂದು ದಶಕವನ್ನ ಗಮನಿಸಿದರೆ ಮಲಯಾಳಂ ಮತ್ತು ತಮಿಳು ಚಿತ್ರರಂಗ ಈ ನಡೆಯಲ್ಲಿ ಮುಂದೆ ಇವೆ. ಹುಡುಗ ಹುಡುಗಿ ಮರ ಸುತ್ತಿಸಿ ಮಚ್ಚು ಲಾಂಗು ಹಿಡಿಸಿ ಎರಡು ಮಾಸ್ ಸಾಂಗ್ ಹಾಕಿ ನಾಯಕನನ್ನು ಮೆರೆಸಲು ಮತ್ತೆರೆಡು ಹಾಡು ಬರೆಸುವುದರಲ್ಲಿ ಕನ್ನಡ ಮತ್ತು ತೆಲುಗು ಚಿತ್ರರಂಗ ಪೈಪೋಟಿ ಇದ್ದಂತೆ ಇವೆ. ಆದರೆ ಮಲಯಾಳಿ ಮತ್ತು ತಮಿಳು ಚಿತ್ರರಂಗ ಇದಕ್ಕೆ ಭಿನ್ನ ಇವೆ. ಅಲ್ಲಿನ ಸಿನಿಮಾದಲ್ಲಿ ಭಿನ್ನ ನೆಲೆಯ ನಿರೂಪಣೆಯ ಕಥೆ, ಕಡಿಮೆ ವೈಭವೀಕರಣ, ಕೌಶಲ್ಯದ ನಟನೆಯಂತ ಹಲವು ಕಾರಣ ಇವೆ. ಕರ್ಣನ್, ಅಸುರ, ಜೈ ಭೀಮ್, ಗ್ರೇಟ್ ಇಂಡಿಯನ್ ಕಿಚನ್ ರೂಮ್, ಕೋಲ್ಡ್ ಕೇಸ್, ಬೀಸ್ಟ್, ಬಿಗಿಲ್, ಇಂದ್ರನ್ ನಟನೆ ಸಿನಿಮಾಗಳು, ಡ್ರೈವಿಂಗ್ ಲೈಸೆನ್ಸ್, ಅಯ್ಯಪ್ಪನ್, ಫಾಸಿಲ್ ಸರಣಿ ಸಿನಿಮಾಗಳು ಹೀಗೆ.

ಜನಗಣಮನ….ಈಚೆಯ ವರ್ಷಗಳಲ್ಲಿ ನಾನು ಕಂಡ ಸಿನಿಮಾಗಳಲ್ಲೇ ಶ್ರೇಷ್ಠ ಸಿನಿಮಾ. ರಾಜಕೀಯ ಪೊಲೀಸ್ ವ್ಯವಸ್ಥೆಯನ್ನ ಹೇಗೆ ದುರ್ಬಳಕೆ ಮಾಡಿಕೊಂಡು ತನ್ನ ಬೇಳೆ ಕಾಳು ಬೇಯಿಸಿ ಬಳಸಿ ಬಿಸಾಡುತ್ತದೆ ಎನ್ನುವುದನ್ನು ಕಥಾವಸ್ತು ಒಳಗೊಳ್ಳುವ ಜತೆ ರಾಜಕೀಯ ಪೊಲೀಸ್ ಮತ್ತು ಮಾಧ್ಯಮ ಮೂರು ಭ್ರಷ್ಟ ಮೈತ್ರಿಯಾದರೆ ಸತ್ಯ ಹೇಗೆ ಸುಳ್ಳಾಗಿ ಸಂವಿಧಾನದ ಆಶಯ ವಿರುದ್ಧ ಅಪವಿತ್ರ ಮೈತ್ರಿಯಾಗಿ ಜನಗಣಮನಕ್ಕೆ ವಿಷ ಉಣಿಸಿ ಸ್ವಾರ್ಥ ಸಾಧಿಸುತ್ತದೆ ಎನ್ನುವುದು ಅತ್ಯುತ್ತಮವಾಗಿ ನಿರೂಪಿಸಿ ದೃಶ್ಯವಾಗಿಸಿದೆ ಸಿನಿಮಾ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಾಗರ | ಇಂದು ‘ಆರು ಲಘು ನಾಟಕಗಳು’ ಮತ್ತು ‘ಗುಚ್ಛ’ ಪುಸ್ತಕಗಳ ಬಿಡುಗಡೆ

Published

on

ಸುದ್ದಿದಿನ,ಸಾಗರ : ಅ.ರಾ.ಶ್ರೀನಿವಾಸರು ಬರೆದ ‘ಆರು ಲಘು ನಾಟಕಗಳು’ ಮತ್ತು ‘ಗುಚ್ಛ’ ಈ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಇಂದು ಸಂಜೆ ಪಟ್ಟಣದ ಸಿಜಿಕೆ ಸಭಾಭವನದಲ್ಲಿ ಅಂತರಂಗ ಪ್ರಕಾಶನ ಹಮ್ಮಿಕೊಂಡಿದೆ.

ಪುಸ್ತಕಗಳ ಬಿಡುಗಡೆಯನ್ನು ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಎಂ.ವಿ ಮಾಡಲಿದ್ದು, ಅಧ್ಯಕ್ಷತೆಯನ್ನುನಿವೃತ್ತ ಪ್ರಾಂಶುಪಾಲರಾದ ಅ.ರಾ.ಲಂಬೋದರ ಅವರು ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ‘ಆರು ಲಘು ನಾಟಕಗಳು’ ಕುರಿತು ನಿವೃತ್ತ ಪ್ರಾಂಶುಪಾಲರು ಡಾ. ಜಯಪ್ರಕಾಶ್ ಮಾವಿನಕುಳಿ ಹಾಗೂ ‘ಗುಚ್ಛ’ ಕುರಿತು ಸಹಕಾರ ಸಂಘಗಳ ನಿವೃತ್ತ ಉಪ ನಿಬಂಧಕರು ಜಯಪ್ರಕಾಶ್ ತಲವಾಟ ಅವರು ಮಾತನಾಡಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಇನ್ನಿಲ್ಲ

Published

on

ಸುದ್ದಿದಿನಡೆಸ್ಕ್: ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್(93) ಅವರು ಅನಾರೋಗ್ಯದಿಂದ ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ತಿಂಗಳಲ್ಲಿ ಕುಸಿದು ಬಿದ್ದಿರುವುದರಿಂದ ಅವರ ತೊಡೆ ಮೂಳೆ ಮುರಿದಿತ್ತು. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಬೆಳಿಗ್ಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಶ್ರೇಷ್ಠ ಭಾರತೀಯ ಶಾಸ್ತ್ರೀಯ ಸಂಗೀತಗಾರ ಆಗಿರುವ ಅವರು ಸರೋದ್ ವಾದಕರೂ ಆಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೊಲೆ ಕೇಸ್ ; ನಾಳೆ ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಪ್ರತಿಭಟನೆ

Published

on

ಸುದ್ದಿದಿನಡೆಸ್ಕ್: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡದ ಚಲನಚಿತ್ರ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ.

ಈ ಸಂಬಂಧ ನಾಳೆ ಚಿತ್ರದುರ್ಗದಲ್ಲಿನ ವಿವಿಧ ಸಂಘಟನೆಗಳು ದರ್ಶನ್ ವಿರುದ್ಧ ಪ್ರತಿಭಟಿಸಿ ತನಿಖೆ ಪಾರದರ್ಶಕವಾಗಿರ ಬೇಕು ಹಾಗೂ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಡಿಸಿಗೆ ಮನವಿಯನ್ನು ಸಲ್ಲಿಸಲಿದ್ದಾರೆ.

ಮೈಸೂರಿನ ದರ್ಶನ್ ಒಡೆತನದ ಫಾರ್ಮ್ ಹೌಸ್‌ನಲ್ಲಿ ೧೦ ಮಂದಿಯನ್ನು ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ ತಿಳಿಸಿವೆ. ಹೆಚ್ಚಿನ ವಿಚಾರಣೆಗಾಗಿ ದರ್ಶನ್ ಅವರನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಬೆಂಗಳೂರಿನ ಸುಮನಹಳ್ಳಿ ಬಳಿಯ ವೃಷಭಾವತಿ ನಾಲೆಯಲ್ಲಿ ಅಪಾರ್ಟ್‌ಮೆಂಟ್ ಕಟ್ಟಡದ ಮುಂಭಾಗದಲ್ಲಿ ರೇಣುಕಾಸ್ವಾಮಿಯ ಶವ ಪತ್ತೆಯಾಗಿತ್ತು. ದರ್ಶನ್ ಚಿತ್ರದುರ್ಗ ಅಭಿಮಾನಿಗಳ ಸಂಘದ ಅಧ್ಯಕ್ಷರಿಗೆ ಕರೆ ಮಾಡಿ ರೇಣುಕಾಸ್ವಾಮಿ ಎಲ್ಲಿದ್ದಾರೆ ಎಂಬುದನ್ನು ಪತ್ತೆಮಾಡಿ ಬೆಂಗಳೂರಿಗೆ ಕರೆತರುವಂತೆ ಹೇಳಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending