ದಿನದ ಸುದ್ದಿ
ದಲಿತ ರಾಜಕೀಯ – ದಲಿತ ಚಳವಳಿಯ ಚಿಲ್ಲರೆ ಅಂಗಡಿಗಳ ಜೋರು ವ್ಯಾಪಾರದ ಈ ಕಾಲದಲ್ಲಿ

- ಬಿ.ಎಲ್.ರಾಜು, ಪ್ರಾಧ್ಯಾಪಕರು, ಸಾಗರ
ನಾವು ನಮಗೆ ಕೇಳಿಕೊಳ್ಳಲೇಬೇಕಾದ ಕೆಲವು ಪ್ರಶ್ನೆಗಳು ನನ್ನನ್ನು ಕಾಡುತ್ತಿವೆ. ಭೂಮಿ, ಬಂಡವಾಳ ಮತ್ತು ರಾಜಕೀಯಾಧಿಕಾರಗಳನ್ನು ಮೇಲ್ಜಾತಿಗಳ ಶಾಶ್ವತ ಕಬ್ಜಾದಲ್ಲಿರಿಸಿ ಸೃಷ್ಟಿಸಲಾಗಿರುವಂತದ್ದು ಜಾತಿವ್ಯವಸ್ಥೆ. ಇದೊಂದು ಶುದ್ದ ರಾಜಕೀಯ- ಆರ್ಥಿಕ ಸಂಚು. ಆದರೆ ಅದು ಕಾರ್ಯಾಚರಣೆ ಮಾಡುವುದು ಸಮಾಜದಲ್ಲಿ. ಸಾಮಾಜಿಕ ಕ್ರಿಯೆಗಳ ಮೂಲಕ ಆ ರಾಜಕೀಯ ಆರ್ಥಿಕ ವ್ಯವಸ್ಥೆಗಳು ತಮ್ಮ ಶಕ್ತಿ- ಸಂಪನ್ಮೂಲಗಳನ್ನು ಕೆಳಜಾತಿಗಳಿಗೆ ನಿರಾಕರಿಸುತ್ತವೆ. ಅದರ ಭಾಗವಾಗಿ ಮಡಿ, ಮೈಲಿಗೆ, ಮೇಲು ಕೀಳು, ಶುದ್ಧ ಅಶುದ್ದ ಪರಿಕಲ್ಪನೆಗಳನ್ನು ಗ್ರಹಿಸಬೇಕು.
ಆ ರಾಜಕೀಯ ಆರ್ಥಿಕ ಶಕ್ತಿ ಸಂಪನ್ಮೂಲಗಳ ಮೇಲೆ ದಲಿತರು ಹಿಡಿತ ಸಾಧಿಸಲು ಎಲ್ಲಿಯವರೆಗೆ ಸಾಧ್ಯವಿಲ್ಲವೊ ಅಲ್ಲಿಯವರೆಗೆ ಜಾತಿ ತಾರತಮ್ಯಗಳು ಸಾಯುವುದಿಲ್ಲ. ಜಾತಿ ವ್ಯವಸ್ಥೆ ನಿರಂತರವಾಗಿ ಮುಂದುವರೆಯುತ್ತದೆ.
ಭೂಮಿ ಬಂಡವಾಳ ರಾಜಕೀಯಾಧಿಕಾರಗಳ ನಿರಂತರ ನಿರಾಕರಣೆಗೆ ಒಳಗಾದ ಈ ದೇಶದ ಸಾವಿರಾರು ತಬ್ಬಲಿ ಕೆಳಜಾತಿ ಸಮುದಾಯಗಳಿಗೆ ಬಿಡುಗಡೆಯ ದಾರಿಯನ್ನು ತೋರಿದ್ದು ಬಾಬಾಸಾಹೇಬರು. ಅವರು ತಮ್ಮ ಚಿಂತನೆ, ಕ್ರಿಯೆ ಮತ್ತು ಹೋರಾಟಗಳ ಮೂಲಕ ರೂಢಿಸಿಕೊಟ್ಟ ಜ್ಞಾನಮಾರ್ಗವೇ ದಲಿತರ ಬಿಡುಗಡೆಯ ದಾರಿ. ಇದೇ ದಾರಿಯಲ್ಲಿ ಹೋಗಿದ್ದರೆ ತಳಸಮುದಾಯಗಳು 21 ನೇ ಶತಮಾನದ ಸವಾಲುಗಳನ್ನೆದುರಿಸಲು ಸಜ್ಜಾದ ಜ್ಞಾನಸಮುದಾಯಗಳಾಗಿ ಮೇಲೇಳುವ ಎಲ್ಲಾ ಅವಕಾಶಗಳಿದ್ದವು.
ಆದರೆ ಜ್ಞಾನ ಮಾರ್ಗವನ್ನು ಬಲವಾಗಿ ಅಪ್ಪಿಕೊಂಡು ಮುನ್ನಡೆಯಬೇಕಿದ್ದ ದಲಿತ ಸಮುದಾಯಗಳು ಆತ್ಮವಂಚನೆಯ ವಿರಾಟ್ ಕಾಲಘಟ್ಟದಲ್ಲಿವೆ. ಸವಲತ್ತುಗಳನ್ನ ಪಡೆದುಕೊಂಡ ದಲಿತರಲ್ಲಿನ ಮಧ್ಯಮ ಮತ್ತು ಮೇಲ್ವರ್ಗಗಳು, ಜಾತಿವ್ಯವಸ್ಥೆಯಲ್ಲಿರುವ ಮೇಲ್ಜಾತಿಗಳ ಎಲ್ಲಾ ವ್ಯಸನಗಳನ್ನು ತಮ್ಮದನ್ನಾಗಿಸಿಕೊಂಡಿವೆ. ಆ ವ್ಯಸನಗಳನ್ನೇ ತಮ್ಮ ಶ್ರೇಷ್ಟತೆಯ ಗುರುತುಗಳನ್ನಾಗಿ ಮಾಡಿಕೊಂಡಿವೆ. ಈ ಎರಡೂ ವರ್ಗಗಳಿಗೆ ಬಾಬಾಸಾಹೇಬರು ಕಟ್ಟಿಕೊಟ್ಟ ಮೌಲ್ಯಗಳಾಗಲಿ, ತೋರಿದ ಜ್ಞಾನಮಾರ್ಗವಾಗಲಿ, ಆಧ್ಯಾತ್ಮದ ದಾರಿಯಾಗಲಿ ಬೇಕಿಲ್ಲದ ಸ್ಥಿತಿಗೆ ಬಂದು ನಿಂತಿವೆ. ತಮ್ಮ ಶೋಷಕ ವ್ಯವಸ್ಥೆಯು ಕಟ್ಟಿಕೊಟ್ಟ ಮನುಪ್ರಣೀತ ಆಚರಣೆ, ಸಂಪ್ರದಾಯಗಳಲ್ಲೆ ಸುಖಿಸುತ್ತಿವೆ. ಇದೊಂತರ ಸ್ಟಾಕ್ ಹೋಂ ಸಿಂಡ್ರೋಪಮ್. ಶೋಷಕನನ್ನೆ ಮೆಚ್ಚಿ ಅನುಕರಿಸುವುದು.
ಇದೇ ದಲಿತ ಮಧ್ಯಮ, ಮೇಲ್ವರ್ಗಗಳು ತಮ್ಮ ಅಹಮ್ಮಿಗೆ, ಅನುಕೂಲಕ್ಕೆ, ಸವಲತ್ತುಗಳಿಗೆ ಏಟುಬಿದ್ದಾಗ ಮಾತ್ರ ಅಂಬೇಡ್ಕರರ ಸಂವಿಧಾನದ ಆಸರೆ ಪಡೆಯುತ್ತವೆ.
ಸಂಖ್ಯೆಯಲ್ಲಿ ಬಹುಸಂಖ್ಯಾತರಾದ ದಲಿತರ ಕೆಳ/ಬಡವರ್ಗ ತನ್ನ ಅಸ್ಥಿತ್ವಕ್ಕಾಗಿ ಅನ್ನ, ಸೂರು, ಬಟ್ಟೆಗಳಂತ ಪ್ರಾಥಮಿಕ ಅವಶ್ಯಕತೆಗಳಿಗಾಗಿ ಸಂವಿಧಾನ ಜಾರಿಗೆ ಬಂದು 75 ವರ್ಷಗಳ ನಂತರವೂ ಹೆಣಗಾಡುತ್ತಲೇ ಇವೆ. ಈಗಲೂ ಅವು ಅತ್ಯಂತ ಹೀನಾಯ & ಅನಾಥ ಸ್ಥಿತಿಯಲ್ಲಿವೆ.
ಭಾರತದ ಮಟ್ಟಿಗೆ ತುಂಬಾ ಅತ್ಯಂತ ವೈಚಾರಿಕ ಮಾನವೀಯತೆಯ ನೆಲೆಗಟ್ಟನ್ನ ಪ್ರತಿಪಾದಿಸಿ, ಪ್ರಜಾಪ್ರಭುತ್ವದ ಆತ್ಯಂತಿಕ ಆದರ್ಶಗಳನ್ನು ಸಂವಿಧಾನಕ್ಕೆ ಅಳವಡಿಸಿದ ಬಾಬಾಸಾಹೇಬರ ಚಿಂತನಾಧಾರೆ ಭಾರತೀಯರಿಗೆ ಧಾರಾಳವಾಗಿ ಹರಿದುಬಂದದ್ದು ಅವರ ಮಹಾಪರಿನಿಬ್ಬಾಣದ ನಂತರವೆ.. ಅದರಲ್ಲೂ ಎಪ್ಪತ್ತರ ದಶಕದಲ್ಲಿ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಪ್ರೊ. ಬಿ. ಕೃಷ್ಣಪ್ಪನವರು ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿದ ನಂತರ.
ಪ್ರೊ. ಬಿ.ಕೆ.ಯವರು ಬಾಬಾಸಾಹೇಬರ ಚಿಂತನೆಯನ್ನು ತನ್ನ ಭಾಷಣ, ಹಾಡು, ಹೋರಾಟ, ಪ್ರತಿಭಟನೆಗಳ ಭಾಗವಾಗಿಸಿಕೊಂಡು ರಾಜ್ಯದ ಪ್ರತಿ ದಲಿತರ ಕೇರಿಗೆ ಕೊಂಡೊಯ್ದರು. ಸಾವಿರಾರು ವರ್ಷ ಅಸ್ಪೃಶ್ಯತೆಯ ಕಳಂಕ ಹೊತ್ತು ಗುಲಾಮಗಿರಿಯಲ್ಲೇ ಉಸಿರಾಡಿಕೊಂಡಿದ್ದ ಜನರ ನರನಾಡಿಗಳಿಗೆ ಬಾಬಾಸಾಹೇಬರ ಚಿಂತನೆಯನ್ನು ತುಂಬಿದರು, ಆ ಮೂಲಕ ರಾಜಕೀಯ ಪ್ರಜ್ಞೆ ಮತ್ತು ಪ್ರತಿಭಟನೆಯ ಕೆಚ್ಚನ್ನು ಜಾಗೃತಗೊಳಿಸಿದರು.
ದಲಿತರ ನೋವಿಗಷ್ಟೇ ಅಲ್ಲ, ಹಿಂದುಳಿದ ವರ್ಗಗಳ ಪಾಲಿಗೂ ಭರವಸೆ ತುಂಬಿದವರು ಪ್ರೊ. ಬಿ.ಕೆ.
ಆ ಹೊತ್ತಿಗೆ ಎಚ್ಚೆತ್ತ ದಲಿತ ಅಕ್ಷರಸ್ಥ ತಲೆಮಾರು ಪ್ರೊ. ಬಿ. ಕೃಷ್ಣಪ್ಪನವರ ಹೋರಾಟದ ಸಾಗರಕ್ಕೆ ಹರಿದು ಬಂತು. ಅವರ ಅದಮ್ಯ ಹೋರಾಟದ ಕುಲುಮೆಯಲ್ಲಿ ಕವಿಗಳಾಗಿ, ಹೋರಾಟಗಾರರಾಗಿ, ಸಾಹಿತಿಗಳಾಗಿ, ಯುವ ಮುಂದಾಳುಗಳಾಗಿ ಮೇಲೆದ್ದರು. ಅಷ್ಟರಮಟ್ಟಿಗೆ ಸ್ಥಗಿತಕೊಂಡಿದ್ದ ರಾಜ್ಯದ ರಾಜಕಾರಣವನ್ನು ಬೆಚ್ಚಿಬೀಳಿಸಿದ್ದು, ಫ್ಯೂಡಲ್ ಶಕ್ತಿಗಳನ್ನು ಬಗ್ಗಿಸಿದ್ದ ಪ್ರೊ. ಬಿ. ಕೃಷ್ಣಪ್ಪ ದಲಿತ ಚಳವಳಿ ಕರ್ನಾಟಕದ ಚೆರಿತ್ರೆಯನ್ನು ಇನ್ನೊಂದು ಮಗ್ಗುಲಿಗೆ ಹೊರಳಿಸಿದರು.
ಬಿ. ಕೆ. ಯವರ ನಂತರ ಬಂದ ದಲಿತ ರಾಜಕಾರಣಿಗಳು ಮತ್ತು ಹೋರಾಟದ ದಾರಿಗೆ ನುಸುಳಿದ ಅವಕಾಶವಾದಿಗಳಿಬ್ಬರೂ ಸೇರಿ ಪ್ರೊ. ಬಿ.ಕೆ.ಕಟ್ಟಿದ ದಲಿತ ಚಳವಳಿಯನ್ನು ಒಳಜಾತಿಗಳ ಆಧಾರದ ಮೇಲೆ ಹತ್ತಾರು ಬಣಗಳಾಗಿ ಒಡೆದರು. ಅವರ ವಯಕ್ತಿಕ ದರ್ದುಗಳ ನಿವಾರಣೆಗೆ ಚಳವಳಿಯನ್ನು ಬಲಿಕೊಟ್ಟರು. ದಲಿತರ ಮೇಲಿ ದೌರ್ಜನ್ಯಗಳು ಮಿತಿಮೀರಿದ ಹೊತ್ತಲ್ಲೆ ಈ ದಲಿತ ರಾಜಕಾರಣ-ಚಳವಳಿಯ (ನ)ಕಲಿಗಳು ತಮ್ಮ ಹೊಟ್ಟೆ ತುಂಬಿಸಿಕೊಂಡರು.
ಪ್ರೊ. ಬಿ. ಕೆ. ಯವರೇ ಕೊನೆ..
ಆನಂತರ ರಾಜ್ಯದ ಯಾವ ಮೂಲೆಯಿಂದಲಾದರೂ ಸರಿ, ಅಖಂಡ ದಲಿತ ಸಮುದಾಯದ ಏಳಿಗೆಗೆ ಬದ್ಧನಾದ ಒಬ್ಬನೇ ಒಬ್ಬ ರಾಜಕೀಯ ನಾಯಕನಾಗಲಿ, ಅಖಂಡ ದಲಿತ ಚಳವಳಿಗೆ ಕಟಿಬದ್ಧನಾದ ಒಬ್ಬ ಚಳವಳಿಗಾರನಾಗಲಿ ಈ ಹೊತ್ತಿಗೂ ಹುಟ್ಟಿಬರಲಿಲ್ಲ. ದಲಿತ ರಾಜಕಾರಣ ಮತ್ತು ದಲಿತ ಚಳವಳಿಗಳು ಈಗ ಕೇವಲ ಒಳಜಾತಿಗಳ ಮೇಲಾಟಗಳು ಮಾತ್ರ. ಅಂಬೇಡ್ಕರರು ಕೇವಲ ಒಂದು ಫೋಟೊ ಆಗುವುದು ಮತ್ತು ಬಿ.ಕೆ.ಯವರನ್ನು ಒಂದು ಹೆಸರನ್ನಾಗಿಸಿ ಮರೆವಿಗೆ ಸರಿಸುವುದು ಅವರ ಹಿಡನ್ ಅಜೆಂಡಾ.
ಇದನ್ನು ಸರಳವಾಗಿ ರೂಪಕಾತ್ಮಕವಾಗಿ ಹೇಳುವುದಾದರೆ ದಲಿತರ ಬೀದಿಗಳಲ್ಲಿ ರಾಜಕೀಯ ಮತ್ತು ಚಳವಳಿಗಳ ಚಿಲ್ಲರೆ ಅಂಗಡಿಗಳು ತಲೆ ಎತ್ತಿವೆ. ಒಂದೊಂದು ಅಂಗಡಿಯಲ್ಲಿ ಒಂದೊಂದು ವ್ಯಾಪಾರ. ಲಾಭವೇ ವ್ಯಾಪಾರದ ಅಂತಿಮ ಗುರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇಶಾದ್ಯಂತ ಇಂದು ಮಹಾವೀರ ಜಯಂತಿ ಆಚರಣೆ ; ಗಣ್ಯರ ಶುಭಾಶಯ

ಸುದ್ದಿದಿನಡೆಸ್ಕ್:ದೇಶಾದ್ಯಂತ ಇಂದು ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದೆ. ಇಂದು 24ನೇ ಹಾಗೂ ಕೊನೆಯ ಜೈನ ತೀರ್ಥಂಕರ ಮಹಾವೀರ ಅವರ ಜನ್ಮದಿನ. ಜೈನ ಸಮುದಾಯಕ್ಕೆ ಇದು ಅತ್ಯಂತ ಪವಿತ್ರ ದಿನವಾಗಿದೆ.
ಭಗವಾನ್ ಮಹಾವೀರನ ಅನುಯಾಯಿಗಳು ಇಂದು ವಿಶೇಷ ಪ್ರಾರ್ಥನೆ, ಮಂತ್ರ ಪಠಣ ಮಾಡುವುದಲ್ಲದೇ ಪ್ರಸಾದವನ್ನು ವಿತರಿಸುವುದು ಹಾಗೂ ಮೆರವಣಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ. ರಾಷ್ಟ್ರಪತಿ ಅವರು, ತಮ್ಮ ಸಂದೇಶದಲ್ಲಿ ಭಗವಾನ್ ಮಹಾವೀರ್ ಅವರು, ಅಹಿಂಸೆ ಮತ್ತು ಅನುಕಂಪದ ಸಂಕೇತವಾಗಿದ್ದಾರೆ.
ಅವರು, ಅಹಿಂಸಾ ಪರಮೊ ಧರ್ಮ ಎಂಬ ಸಂದೇಶದ ಮೂಲಕ ಮನುಕುಲಕ್ಕೆ ಹೊಸ ಹಾದಿಯನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೇ ಮಹಾವೀರ ಅವರ ಸರಳತೆ, ದಯೆ, ತತ್ವಗಳನ್ನು ಪ್ರತಿಪಾದಿಸಿದ್ದರು ಎಂದು ಹೇಳಿದ್ದಾರೆ.
ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ತಮ್ಮ ಸಂದೇಶದಲ್ಲಿ ಭಗವಾನ್ ಮಹಾವೀರರ ಬೋದನೆಗಳು ಹೆಚ್ಚಿನ ಸಹಾನುಬೂತಿ ಮತ್ತು ಸಾಮರಸ್ಯದ ಜಗತ್ತಿನತ್ತ ನಮ್ಮ ಹಾದಿಯನ್ನು ಬೆಳಗಿಸುತ್ತಿವೆ. ಎಲ್ಲ ಜೀವಿಗಳಿಗೆ ಸಮಾನತೆ ಮತ್ತು ವಿಭಿನ್ನ ದೃಷ್ಟಿಕೋನದಲ್ಲಿ ನೋಡುವ ಸಂದೇಶವನ್ನು ಸಾರಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಮಹಾವೀರ ಜಯಂತಿ ಅಂಗವಾಗಿ ಜೈನ ಸಮುದಾಯಕ್ಕೆ ಶುಭಾಶಯ ಕೋರಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಭಗವಾನ್ ಮಹಾವೀರರ ಆದರ್ಶಗಳು ಜಗತ್ತಿನೆಲ್ಲೆಡೆ ಅಸಖ್ಯಾಂತ ಜನರಿಗೆ ಶಕ್ತಿಯನ್ನು ನೀಡಿದೆ. ಅವರ ಬೋಧನೆಗಳನ್ನು ಜೈನ ಸಮುದಾಯ ಸುಂದರವಾಗಿ ಸಂರಕ್ಷಿಸಿ ಅವುಗಳನ್ನು ಪ್ರಚುರಪಡಿಸುತ್ತಿದೆ. ಭಗವಾನ್ ಮಹಾವೀರರ ಕನಸುಗಳನ್ನು ಸಾಕಾರಗೊಳಿಸಲು ಸರ್ಕಾರ ಬದ್ಧವಿದೆ. ಸರ್ಕಾರ ಪ್ರಾಕೃತ್ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ಮೂಲಕ ಮಹಾವೀರರ ಬೋಧನೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸಲಾಗುತ್ತಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
15 ಸಾಧಕರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ

ಸುದ್ದಿದಿನಡೆಸ್ಕ್:ಡಾ.ಬಿ.ಆರ್. ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಪ್ರಯುಕ್ತ ನೀಡಲಾಗುವ 2023, 2024 ಮತ್ತು 2025 ನೇ ಸಾಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 15 ಸಾಧಕರಿಗೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2023ನೇ ಸಾಲಿನ ಪ್ರಶಸ್ತಿಯನ್ನು ಮೈಸೂರಿನ ಹರಿಹರಾನಂದ ಸ್ವಾಮಿ ಅವರ ಸಮಾಜ ಸೇವೆಗೆ, ಪತ್ರಿಕೋದ್ಯಮದಲ್ಲಿನ ಸೇವೆಗೆ ಬೆಂಗಳೂರಿನ ಇಂದೂಧರ ಹೊನ್ನಾಪುರ, ಸರ್ಕಾರಿ ಸೇವೆಯಲ್ಲಿ ಉತ್ತಮ ಆಡಳಿತ ನಿರ್ಹಿಸಿದ ದಾವಣಗೆರೆಯ ರುದ್ರಪ್ಪ ಹನಗವಾಡಿ ,ಸೀತವ್ವ ಜೋಡಟ್ಟಿ ಬೆಳಗಾವಿ ದೇವದಾಸಿ ವಿಮೋಚನೆ, ಕೆ. ಪುಂಡಲೀಕರಾವ್ ಶೆಟ್ಟಿ ಬಾ ಬೀದರ್ ಸಮಾಜ ಸೇವೆ/ರಾಜಕೀಯ.
2024 ನೇ ಸಾಲಿನ ಪ್ರಶಸ್ತಿಯನ್ನು ಶ್ರೀಧರ ಕಲಿವೀರ ಬೆಂಗಳೂರು ಹೋರಾಟ, ಮಲ್ಲಾಜಮ್ಮ ಮಂಡ್ಯ ಸಮಾಜ ಸೇವೆ/ರಾಜಕೀಯ, ರಾಮದೇವ ರಾಕೆ ಬೆಂಗಳೂರು ಪತ್ರಿಕೋದ್ಯಮ, ವೈ.ಬಿ. ಹಿಮ್ಮಡಿ ಬೆಳಗಾವಿ ಸಾಹಿತ್ಯ/ಸಮಾಜ ಸೇವೆ,ಲಕ್ಷ್ಮೀಪತಿ ಕೋಲಾರ ಕೋಲಾರ ಸಾಹಿತ್ಯ/ಸಂಘಟನೆ.
2025ನೇ ಸಾಲಿನ ಪ್ರಶಸ್ತಿಯನ್ನು ದತ್ತಾತ್ರೇಯ ಇಕ್ಕಳಗಿ ಕಲಬುರಗಿ ಪ್ರಕಾಶನ, ಮಾವಳ್ಳಿ ಶಂಕರ್ ಬೆಂಗಳೂರು ಹೋರಾಟ, ಎಫ್.ಹೆಚ್. ಜಕ್ಕಪ್ಪನವರ್ ಧಾರವಾಡ ಹೋರಾಟ, ಹೊನ್ನೂರು ಗೌರಮ್ಮ ಚಾಮರಾಜನಗರ ಜನಪದ ಕಲೆ, ಈರಪ್ಪ ಹಾಸನ ದಲಿತ ಹೋರಾಟಕ್ಕೆ ನೀಡಿ ಗೌರವಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರುದ್ರಪ್ಪ ಹನಗವಾಡಿ ಅವರಿಗೆ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ

ಸುದ್ದಿದಿನಡೆಸ್ಕ್:ನಗರದ ರುದ್ರಪ್ಪ ಹನಗವಾಡಿ ಅವರಿಗೆ 2023ನೇ ಸಾಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಲಭಿಸಿದೆ.
ಡಾ.ಬಿ.ಆರ್. ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಪ್ರಯುಕ್ತ ನೀಡಲಾಗುವ 2023, 2024 ಮತ್ತು 2025 ನೇ ಸಾಲಿನ
ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 15 ಸಾಧಕರಿಗೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಿರು ಪರಿಚಯ
ಕೆ.ಎ.ಎಸ್ ಅಧಿಕಾರಿ ನಿವೃತ್ತಿ ಹೊಂದಿರುವ ರುದ್ರಪ್ಪ ಹನಗವಾಡಿ ಅವರು ದಾವಣಗೆರೆ ಜಿಲ್ಲೆಯ, ಹರಿಹರ ತಾಲೂಕಿನ ಹನಗವಾಡಿ ಗ್ರಾಮ 1951ರಲ್ಲಿ ಜನಿಸಿದರು.1974 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಅರ್ಥಶಾಸ್ತ್ರ), ಸ್ನಾತಕೋತ್ತರ ಪದವಿ ಪಡೆದರು. ನಂತರ 1974 – 1983ರ ವರೆಗೆ ಬಿ.ಆರ್.ಪಿ. ಕೇಂದ್ರದ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಕರ್ನಾಟಕ ಆಡಳಿತ ಸೇವೆ 1983 – 2011, ತಹಸೀಲ್ದಾರ್, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಣೆ ಮಾಡಿದರು.ಮೈಸೂರು, ಟಿ.ನರಸೀಪುರ, ನಂಜನಗೂಡು, ಚಾಮರಾಜನಗರ, ಸೊರಬ, ರಾಮನಗರ, ತರೀಕೆರೆ, ಬೆಂಗಳೂರು ಇತ್ಯಾದಿ ಜಿಲ್ಲೆಗಳಲ್ಲಿ ಸೇವೆಸಲ್ಲಿಸಿದರು. 2011 ರಲ್ಲಿ ಕರ್ನಾಟಕ ಆಡಳಿತ ಸೇವೆಯಿಂದ ನಿವೃತ್ತಿಹೊಂದಿದರು.ನಂತರ ಹನಗವಾಡಿ ಗ್ರಾಮದಲ್ಲಿನ ಜಮೀನಿನಲ್ಲಿ ರೈತನಾಗಿ ಕಾಯಕದಲ್ಲಿ ತೊಡಗಿದ್ದಾರೆ.
ತಮ್ಮನ್ನು ಸಾಹಿತ್ಯ, ಕಲೆ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಣೆ, ಓದುವುದು, ಬರೆಯುವುದು, ಕವನ, ಲೇಖನ, ಜೀವನ ಚಿತ್ರಣ, ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ, ಹಾಡುಗಾರಿಕೆ, ಜಾನಪದ, ಭಾವಗೀತೆ, ಕವನ ವಾಚನ ಪವೃತಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸೇವಾ ಕ್ಷೇತ್ರ
ಟ್ರಸ್ಟಿ, ಐಎಸಿಐಡಿ ಟ್ರಸ್ಟ್ (ರಿ), ಬೆಂಗಳೂರು,ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್‌ನ ಟ್ರಸ್ಟಿ, ಮಾನವ ಮಂಟಪ ಟ್ರಸ್ಟ್ ಟ್ರಸ್ಟಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ರಾಜ್ಯ ಸಮಿತಿ ಸದಸ್ಯ, ಆಜೀವ ಸದಸ್ಯ, ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ, ಸದಸ್ಯ, ಹಿಮೋಪೋಲಿಯಾ ಸೊಸೈಟಿ ಆಫ್ ಇಂಡಿಯಾ, ಯು. ಭೂಪತಿ ಸ್ಮಾರಕ ಟ್ರಸ್ಟ್‌ನ ಸಲಹಾ ಸಮಿತಿ ಸದಸ್ಯ, ರಾಜ್ಯ ಸಂಚಾಲಕರು, ಕರ್ನಾಟಕ ದಲಿತ ಕಲಾಮಂಡಳಿ, ಬೆಂಗಳೂರು
ಹೋರಾಟಗಳು
ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸುವ ಹೋರಾಟ, ಸಭೆ, ಸಮಾರಂಭಗಳಲ್ಲಿ ಭಾಗಿ, ಚಂದ್ರಗುತ್ತಿ ಬೆತ್ತಲೆ ಸೇವೆ ಮತ್ತು ಮೂಢನಂಬಿಕೆಗಳ ವಿರುದ್ಧದ ಹಾಗೂ ಜನಪರ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.
ಸಾಹಿತ್ಯ – ರಚಿಸಿದ ಕೃತಿಗಳು
ಸೆಳೆತ : ಕವನ ಸಂಕಲನ – 2010,ಊರು ಬಳಗ – ಕವನಸಂಕಲನ 2013,ಎಲೆ ಮುಗುಳ ಬೆಳಕು : 2021, ಋಣದ ಗಣಿ : ಆತ್ಮ ಚರಿತ್ರೆ 2021, ಕರ್ನಾಟಕ ವಿವಿಧ ಪತ್ರಿಕೆಗಳಲ್ಲಿ 50ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ.
ಸುದ್ದಿದಿನ ಕನ್ನಡ ವೆಬ್ ಪೋರ್ಟಲ್ ನಲ್ಲಿ ಇವರ ಆತ್ಮಕತೆಯಾದ ‘ಋಣದ ಗಣಿ’ ಆಯ್ದ ಭಾಗಗಳು ಪ್ರಕಟಗೊಂಡಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ದಾವಣಗೆರೆ | ನಾಳೆ ಡಾ.ಬಾಬು ಜಗಜೀವನ ರಾಂ 118ನೇ ಜನ್ಮ ದಿನಾಚರಣೆ
-
ದಿನದ ಸುದ್ದಿ6 days ago
ಹಂಪಿ ವಿಶ್ವವಿದ್ಯಾಲಯದ 33 ನೇ ನುಡಿಹಬ್ಬ ; ನಾಡೋಜ ಗೌರವ ಪದವಿ ಪ್ರದಾನ
-
ದಿನದ ಸುದ್ದಿ5 days ago
ಮೇ11 ರಂದು ಗ್ರಾಮ ಪಂಚಾಯತಿ ಚುನಾವಣೆ
-
ದಿನದ ಸುದ್ದಿ6 days ago
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
-
ಅಂಕಣ3 days ago
ಕವಿತೆ | ಚಳಿಗಾಲದ ಎರಡು ಜೀವರಸಗಳು
-
ದಿನದ ಸುದ್ದಿ3 days ago
ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತದೊಂದಿಗೆ ‘ಉಮ್ಮೀದ್ -2024’ ಕಾಯ್ದೆಯಾಗಿ ಜಾರಿ
-
ದಿನದ ಸುದ್ದಿ3 days ago
ಕನಗೊಂಡನಹಳ್ಳಿಗೆ 24/7 ನೀರು ಪೂರೈಕೆ | ಮಿತವಾಗಿ ಬಳಸಿ, ಭವಿಷ್ಯಕ್ಕೆ ಉಳಿಸಿ : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
-
ದಿನದ ಸುದ್ದಿ3 days ago
ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ : ಅನುದಾನ ಬಿಡುಗಡೆಗೆ ಆರ್. ಅಶೋಕ್ ಒತ್ತಾಯ