Connect with us

ದಿನದ ಸುದ್ದಿ

ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ‘ಎಳೆ’ ತಂದರೋ..!

Published

on

  • ನವೀನ್ ಸಾಗರ್, ಬೆಂಗಳೂರು

ಸಿನಿಮಾ ಹಾಡುಗಳು ಕವನಗಳು ಎಲ್ಲ ಗದ್ಯಗಳಷ್ಟು ನೇರ ಸಲೀಸು ಅಲ್ಲ. ಹೇಳಬೇಕಿರೊದನ್ನು ಗದ್ಯಗಳ ಹಾಗೆ ಸೀದಾಸಾದಾವಾಗಿ ಕವನಗಳು, ಸಿನಿಗೀತೆಗಳು ಹೇಳುವುದಿಲ್ಲ. ಹಾಗೆ ಹೇಳಿಬಿಟ್ಟರೆ ಅವು ಕವನ/ಹಾಡು/ಪದ್ಯಗಳೇ ಅಲ್ಲ!!!

ಹಾಡು ಅಂದರೆ ಅಲ್ಲಿ ಉಪಮೆಗಳು ಗೂಢಾರ್ಥಗಳು ದ್ವಂದ್ವಾರ್ಥಗಳು(ದ್ವಂದ್ವಾರ್ಥ ಅಂದ್ರೆ ಅಶ್ಲೀಲ ಮಾತ್ರವೇ ಅಲ್ಲ), ಎರಡುಮೂರು ವಿಚಾರಗಳನ್ನು ಹೇಳಬಲ್ಲ ಒಂದೇ ಒಂದು ಸಾಲು, ಇನ್ಯಾವತ್ತೋ ರೆಲೆವೆಂಟ್ ಅನಿಸಬಲ್ಲ ಕಲ್ಪನೆಗಳು ಏನೇನೋ ತುಂಬಿಹೋಗಿರುತ್ತವೆ. ಅದಕ್ಕೊಂದು ಮೂಡ್ ಇರುತ್ತೆ.

ಒಬ್ಬೊಬ್ಬ ಓದುಗನಲ್ಲಿ ಒಂದೊಂದು ಭಾವ ಹುಟ್ಟಿಸಬಲ್ಲ ಶಕ್ತಿ ಕವಿತೆಗಳಿಗಿರುತ್ತದೆ. ನನಗೆ ರೊಮ್ಯಾಂಟಿಕ್ ಅನಿಸುವ ಗೀತೆಯೊಂದು ಇನ್ನೊಬ್ಬನಿಗೆ ವಿರಹಗೀತೆ ಅನಿಸಬಹುದು. ನನಗೆ ಲಾಲಿ ಹಾಡೆನಿಸುವ ಗೀತೆಯೊಂದು ಇನ್ಯಾರಿಗೋ ಜಾಲಿ ಗೀತೆ ಅನಿಸಬಹುದು. ಇನ್ನೊಬ್ರಿಗೆ ಶೋಕಗೀತೆ ಅನಿಸೋ ಗೀತೆಯಲ್ಲಿ ನನಗೇನೋ ತುಂಟತನ ಕಾಣಿಸಬಹುದು. ಸಭ್ಯಗೀತೆ ಅನಿಸುವ ಹಾಡೊಂದು ಸಾಲುಸಾಲಲ್ಲೂ ಡಬಲ್ ಮೀನಿಂಗ್ ತುಂಬ್ಕೊಂಡಿದೆಯಲ್ಲ ಅನಿಸಬಹುದು. ಗ್ರಹಿಕೆ ಮೂಡು ವಯಸ್ಸು ಸಂದರ್ಭ ಇವೆಲ್ಲದರ ಮೇಲೆ ಹಾಡೊಂದು ನಮ್ಮನ್ನು ತಲುಪೋ ಬಗೆ ಬದಲಾಗುತ್ತಾ ಹೋಗುತ್ತದೆ‌. ಅಷ್ಟಾಗಿಯೂ ಅಸಲಿಗೆ ಅದನ್ನು ಬರೆದ ಕವಿಯ ಯೋಚನೆ ನಾವು ಗ್ರಹಿಸಿದ್ದೆಲ್ಲಕ್ಕಿಂತ ಭಿನ್ನವಾಗಿದ್ದಿನ್ನೇನೋ ಇದ್ದರೂ ಇರಬಹುದು.

ಹಲವು ಬಾರಿ ಕವಿಗೆ ತನ್ನ ಗೀತೆ ತಾನಂದುಕೊಂಡ ಭಾವದಲ್ಲೇ ರೀಚ್ ಆಗಿದೆ ಅನ್ನೋ ಖುಷಿ ತೃಪ್ತಿ ಸಿಗುತ್ತದೆ. ಕೆಲವು ಬಾರಿ .. ಅರೆ ಬರೆಯುವಾಗ ನಾನೇ ಹೀಗೊಂದು ಗೂಡಾರ್ಥದ ಬಗ್ಗೆ ಯೋಚಿಸಿರಲಿಲ್ಲ. ಕೇಳುಗ ಇದಕ್ಕೆ ಇನ್ನೊಂದು ಆಯಾಮವನ್ನೇ ಕೊಟ್ಟುಬಿಟ್ಟನಲ್ಲ ಅಂತ ಅಚ್ಚರಿಯಾಗಬಹುದು. ಕೆಲವೊಮ್ಮೆ ತನಗೇ ಗೊತ್ತಿಲ್ಲದ ಅರ್ಥ ಹುಟ್ಟಿಸಿ ತನ್ನನ್ನು ಕೇಳುಗರು ಮೇಲೇರಿಸಿ ಕೂರಿಸಿದಾಗ, ಈ ಕ್ರೆಡಿಟ್ ಬಿಟ್ಟುಕೊಡಲಿಷ್ಟ ಪಡದ ಕರಪ್ಟ್ ಮನಸು.. ಹೌದೌದು ನಾನು ಹೀಗೆ ಎರಡರ್ಥ ಹುದುಗಿಸಿ‌ಈ ಸಾಲು ಬರೆದಿದ್ದೆ ಎಂದು ಧ್ವನಿಗೂಡಿಸುತ್ತದೆ. ಅದೇ ವಿವಾದಕ್ಕೋ ಅವಹೇಳನಕ್ಕೋ ಕಾರಣವಾದರೆ .. ಇಲ್ಲ ನಾನು ಬರೆದದ್ದು ಈ ಅರ್ಥದಲ್ಲಿ ಅಂತ ಸೇಫ್ಟಿ ಮೋಡ್ ಗೂ ಹೋಗುತ್ತದೆ. ಹಾಡು/ಕವಿತೆಗಳಿಗೆ ಈ ವ್ಯಾಖ್ಯಾನದ ಮೂಲಕ ಬಚಾವಾಗುವ ಇಮೇಜ್ ರೂಪಿಸಿಕೊಳ್ಳುವ ಅವಕಾಶವಿರುತ್ತದೆ‌. ಗದ್ಯಗಳಿಗೆ ಆ ಪ್ರಿವೆಲೇಜ್ ಇರೋದಿಲ್ಲ.

ಸಂಭ್ರಮ ಚಿತ್ರದಲ್ಲಿ ಹಂಸಲೇಖ … “ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರೋ…” ಗೀತೆಯಲ್ಲಿ ” ಎಳೆ” ಪದವನ್ನು ಎರಡರ್ಥ ಬರುತ್ತದೆಂದೇ ಬಳಸಿದರೋ ಬರೆದ ಮೇಲೆ ಎರಡರ್ಥ ಕೇಳುಗರ ಗ್ರಹಿಕೆಗೆ ಬಂತೋ ಎಂಬ ಪ್ರಶ್ನೆಯಂತೆ ಇದು. ಹಂಸ ಲೇಖಾವ್ರು ಪ್ರೀತಿಯ ’ಎಳೆ’ಯ ಬಗ್ಗೆ ಬರೆದಿರಬಹುದು. ಅಥವಾ ಎಳೆದು ತಂದರೋ ಎಂದು ಕೇಳಿಯೂ ಬರೆದಿರಬಹುದು. ಅಥವಾ ಅವರಿಗಿರೋ ಪನ್ ಸೆನ್ಸ್ ಗೆ ಈ ಎರಡೂ ಅರ್ಥ ಬರಲಿ ಅಂತಲೇ ಎಳೆ ಎಂಬ ಪದ ಬಳಸಿರಬಹುದು. ಈ ಥರದ ಸಾಕಷ್ಟು ಉದಾಹರಣೆ ಸಿಗುತ್ತದೆ. ಸಾಹಿತ್ಯ ಗಮನಿಸಲು ಶುರು ಮಾಡಿದಾಗ ಇಂಥ ಖುಷಿ ಅನುಭೂತಿಗಳು ಸಿಗಲಾರಂಭಿಸುತ್ತವೆ. ರಿಸರ್ಚಿನಂಥ ಖುಷಿ

ಹಂಸಲೇಖರ … “ಈ ಹರಯದ ನರಕೊಳಲಲಿ ಇವೆ ಸರಿಗಮ ಹೊಳ್ಳೆಗಳು… ಈ ಮದನನ ಕಿರುಬೆರಳಲಿ ನವಿರೇಳದೆ ಗುಳ್ಳೆಗಳು..” ಈ ಸಾಲು ಕೇವಲ ಕಮರ್ಶಿಯಲ್ ಮ್ಯೂಸಿಕಲ್ ಸಾಂಗ್ ಆಗಿ ನಮ್ಮ ಕಿವಿ ತಲುಪಿದಾಗ ಗುನುಗುವ ಸಾಲಾಗುತ್ತದೆ ಅಷ್ಟೆ. ಅರೆ ಹರಯದ ನರಕೊಳಲು ಅಂದ್ರೆ ಏನು… ಮದನನ ಕಿರುಬೆರಳು ಅಂದ್ರೆ.. ? ಸಾಮಾನಿಗೆ ಇಷ್ಟು ಸಭ್ಯಶೃಂಗಾರರೂಪ ಕೊಟ್ಟು ಹೇಳಿರೋದಾ ಅನಿಸಿದಾಗ.. ಶೃಂಗಾರ ಅಡಗಿರೋ‌ ಸಾಲಾದರೂ ಜೋರಾಗಿ ಹೇಳೋಕೆ ಮನಸು ಹಿಂಜರಿಯುತ್ತದೆ.

ಸಾಹಿತ್ಯ ಅಷ್ಟಾಗಿ ಗಮನಿಸದ ವಯಸ್ಸಲ್ಲಿ… “ಮೈಯ್ಯಲ್ಲಿ ಏಳುತಿದೆ ಮನ್ಮಥ‌ನ ಅಂಬುಗಳು.. ಜುಮ್ ಜುಮ್ ಜುಮ್..” ಅನ್ನೋ ಸಾಲು ಸಂಕ್ರಾಂತಿ ಗೀತೆ ಎಂಬಂತೆ ಬಂದು ಹೋಗುತ್ತಿತ್ತು.

ಆದರೆ ಆನಂತರ ಸಾಹಿತ್ಯವಾಗಿ ಗಮನಿಸಿದಾಗ.‌ ಆಹಾ ರೋಮಾಂಚನವನ್ನು.. ಮೈರೋಮ ನಿಮಿರುವುದನ್ನು ಮನ್ಮಥನ ಬಾಣಕ್ಕೆ ಹೋಲಿಸಿದ್ದಾರಲ್ಲ ಅನಿಸಿ ನಿಜಕ್ಕೂ ಜುಮ್ ಅನಿಸಿತ್ತು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿದರೆ.. ಮೈಯಲ್ಲಿ ಏಳುತಿದೆ ಮನ್ಮಥನ ಅಂಬು ಅಂದ್ರೆ.. ಒನ್ಸಗೇನ್ ಸಾಮಾನಿರಬಹುದಾ ಅನಿಸದಿರದು.

ಸದಾಶಿವಂಗೆ ಅದೇ ಗ್ಯಾನ ಅಂದ್ಕೋಬೇಡಿ..

ನೆನಪಿರಲಿ ಚಿತ್ರದ ಅಜಂತಾ ಎಲ್ಲೋರಾ ಗೀತೆಯಲ್ಲಿ ಬರುವ… “ಮಂದವಾಗಿ ಬಳುಕೋವಂಥ ನಾರಿ ಇವಳ
ಅಂದ ನೋಡಿ ನಿಂತಾಗ..ಚಂದ ನೋಡಿ ನಿಂತಾಗ..
ಯಾರೊ ನೀನು ಎಂದು ಕೇಳುತಾವೆ..
ಇವಳ ಪೊಗರಿನ ಹೃದಯಪಾಲಕಿಯರು..
ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ…”

ಈ ಸಾಲುಗಳು ತನ್ನ ರಿದಮಿಕ್ ಮ್ಯೂಸಿಕ್ ಹಾಗೂ ಸುಲಲಿತವಾಗಿ ಲಘುಗುರು ಇಟ್ಟು ಬರೆದಂಥ ಪದಗಳ‌ ಆಟದಿಂದ ಮಜವಾಗಿ ಹಾಡಿಸಿಕೊಂಡು ಬಿಡ್ತವೆ. ಆದರೆ ಯಾವತ್ತೋ ಆರಾಮಾಗಿ ಸಾಹಿತ್ಯ ಕೇಳ್ತಾ ಇದ್ದರೆ.. ಆಹಾ ..ಹಂಸಲೇಖರ ರಸಿಕಕಲ್ಪನೆಗಳಿಗೆ ಮಿತಿಯೇ ಇಲ್ಲವಾ ಅನಿಸಿಬಿಡುತ್ತದೆ.

ಯಾರೋ ನೀನು ಎಂದು ಕೇಳುತಾವೆ ಇವಳ “ಪೊಗರಿನ ಹೃದಯ ಪಾಲಕಿಯರು” ಎಂದು ಅವರು ರೆಫರ್ ಮಾಡ್ತಿರೋದು ಆ ಹೆಣ್ಣಿನ ಸ್ತನಗಳ ಬಗ್ಗೆ ಅಂತ ಅರ್ಥವಾದಾಗ ಮತ್ತೊಮ್ಮೆ ಈ ಸಾಂಗ್ ಕೊಡುವ ಅನುಭೂತಿಯೇ ವಿಭಿನ್ನ. “ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ” ಎಂದು ಮುಂದುವರಿಸಿ ಆ ಸಾಲಿಗೆ ಇನ್ನಷ್ಟು ರಸಿಕತೆ ತುಂಬುತ್ತಾರೆ ಹಂಸ್.

ಗಡಿಬಿಡಿಗಂಡ ಚಿತ್ರದ…. ಮುದ್ದಾಡೆಂದಿದೆ ಮಲ್ಲಿಗೆ ಹೂ ಗೀತೆಯಲ್ಲಿ……. ನಾಯಕಿ”ಎದೆಯ ಸೆರಗ ಮೋಡದಲ್ಲಿ ನೀನೇ ಚಂದ್ರನೀಗ….” ಅಂದರೆ…. ನಾಯಕ” ಹೃದಯ ಮೇರುಗಿರಿಗಳಲ್ಲಿ… ಕರಗಬಹುದೆ ಈಗ” ಅಂತಾನೆ. “ಮುಡಿಯಲಿ ಮಲ್ಲಿಗೆಯ ಮುಡಿದವಳ ಮೊದಲುಮುಡಿಯಬೇಕು.. ಮಡದಿಗೆ ಪ್ರತಿದಿನವೂ ಮೊದಲಿರುಳಿರಬೇಕು…” ಅಂತ ನಾಯಕಿ ತನ್ನನ್ನು ಮೊದಲು ರಮಿಸು ಅಂತ ಒತ್ತಾಯಿಸುತ್ತಿದ್ದರೆ………… ನಾಯಕ ..” ಮನಸಿನ ಮಧುವಿನ ಮಹಲೊಳಗೆ … ಮದನ ಮಣಿಯಬೇಕು… ಸುರತಿಯ ಪರಮಾನ್ನ ಹಿತಮಿತವಿರಬೇಕು” ಅಂತ ಆಕೆಯ ಮೇಲಿರೋ ಮೋಹದ ಜೊತೆಜೊತೆಗೆ ಪ್ರತಿದಿನ ಬೇಡ ಫ್ರೀಡಮ್ಮು ವೀಕ್ಲಿ ಒನ್ಸು ಜುಮ್ ಜುಮ್ಮು” ಅಂತ ದೂರ ಹೋಗೋ ಪ್ರಯತ್ನ ಕೂಡ ಮಾಡುತ್ತಾನೆ.

ಇದು ಕೂಡ ಹೆಣ್ಣು ತನ್ನ ಗಂಡನ್ನು ಸೆಕ್ಸಿಗಾಗಿ ಕರೆಯುವ ಗೀತೆಯೇ ಆದರೂ… ತನ್ನ ಕ್ಲಾಸಿಕಲ್ ಟ್ಯೂನ್ ನಿಂದ ಚೆಂದದ ಪದಜೋಡಣೆಯಿಂದ… ಈ ಹಾಡು ಕೊಂಚವೂ ಅಶ್ಲೀಲ ಅನಿಸೋದೇ ಇಲ್ಲ. ಅಶ್ಲೀಲ ಅನಿಸಿದರೂ ಓಕೆ ಎಂದು ಬರೆದಾಗ.. ರಾತ್ರಿ ಆಯ್ತು ಮಲಗೋಣ ಇಂದು ನಮ್ಮ ಸೋಭಾನ… ಅಥವಾ ಕಾಯಿ ಕಾಯಿ ನುಗ್ಗೇಕಾಯಿ ಮಹಿಮೆಗೆ ರಾತ್ರಿಯೆಲ್ಲ ನಿದ್ದೆಯಿಲ್ಲ ಕಣ್ಣಿಗೆ.. ನೆಲ್ಲಿಕಾಯಿ ಆಸೆಗೆ ಬಿಟ್ಟು ಬಂದೆ ಹಾಸಿಗೆ ಅಂತ ಸ್ವಲ್ಪ ನೇರವಾಗಿಬಿಡುತ್ತಾರೆ ಹಂಸಲೇಖ.

ಇವೆಲ್ಲ ಸಾಹಿತ್ಯವನ್ನು ಗಮನಿಸುವಾಗ ಅರ್ಥವಾಗುತ್ತಾ ಹೋಗುವ ಅಪಾರಾರ್ಥಗಳು. ತೂಗುಮಂಚದ “ಹಮ್ಮನುಸಿರಬಿಟ್ಟಳು ಎಂಬುದು ಅಮ್ಮನುಸಿರ ಬಿಟ್ಟಳು ಎಂದಾಗಿದ್ದು ಅದನ್ನು ಲಾಲಿಹಾಡೆಂದು ತಪ್ಪು ತಿಳಿದುದರ ಪರಿಣಾಮ ಎಂದು ಹಿಂದೊಮ್ಮೆ ಬರೆದಿದ್ದು ನಿಮಗೆ ನೆನಪಿರಬಹುದು.

ಇನ್ನು ಡಬಲ್ ಮೀನಿಂಗೇ ಹುಡುಕಬೇಕು ಅಂದರೆ ಪ್ರತಿ ಗೀತೆಯೂ ಬೇರೆಯೇ ಅರ್ಥ ಕೊಡಬಲ್ಲ ಕೆಪಾಸಿಟಿ ಹೊಂದಿರುತ್ತದೆ. ಅದು ನಾವು ಆ ಗೀತೆಯನ್ನು ಬಿಂಬಿಸೋಕೆ ಹೊರಟಿರುವ ರೀತಿಯ ಮೇಲೆ ಡಿಪೆಂಡು. ಎಂಥ ಸಭ್ಯಸಾಲನ್ನೂ.. ಕವಿಗೇ ಶಾಕ್ ಆಗುವ ಹಾಗೆ ಡಬಲ್ ಮೀನಿಂಗ್ ಆಗಿಸಬಹುದು. ಆ ಉದಾಹರಣೆ ಈ ಬರಹದಲ್ಲಿ ಬೇಡ. ಮುಂದೆಂದಾದರೂ ಬರೆಯೋಣ.

ಇದೆಲ್ಲ ಬರೆಯೋಕೆ ಹೊರಟಿದ್ದಕ್ಕೆ ಪ್ರೇರಣೆ ಅಣ್ಣಯ್ಯ ಚಿತ್ರದ ಒಂದು ಸಾಂಗ್. ಅಣ್ಣಯ್ಯ ಬಂದು ಹೋಗಿ ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಟೈಮಾಯ್ತು. ರವಿಚಂದ್ರನ್ ಸಿನಿಮಾಗಳು ಸಾಫ್ಟ್ ಪೋರ್ನ್ ಸಿನಿಮಾಗಳಂತೆ ಭಾಸವಾಗುತ್ತಿದ್ದ ನಮ್ಮ ಏಜಿನ ದಿನಗಳವು. ರವಿಚಂದ್ರನ್ ಸಿನಿಮಾಗಳನ್ನು ನೋಡೋದು ಕಾಶೀನಾಥ್ ಸಿನಿಮಾ ನೋಡೋಷ್ಟೇ ಪಾಪ ಎಂಬಷ್ಟು ಮಡಿವಂತಿಕೆ ದಿನಗಳವು. ಆದರೆ ನಮ್ಮ ಪಾಲಿಗೆ ಆಗ ರವಿಮಾಮಾ ಲವ್ ರೊಮ್ಯಾನ್ಸ್ ಶೃಂಗಾರಗಳಿಗೆ ಗಾಡ್. ಆತ ಹೀರೋಯಿನ್ ಎದೆಯ ಮೇಲೆ ಮುಖವಿಟ್ಟು ಒರಗಿದರೆ ನಮಗೆ ರಸಸ್ಫೋಟ ಆಗುತ್ತಿತ್ತು. ಕುತ್ತಿಗೆಗೊಂದು ಮುತ್ತಿಟ್ಟು ತುದಿಬೆರಳುಗಳನ್ನು ಕತ್ತು ಮತ್ತು ಎದೆಯ ನಡುವೆ ಒಮ್ಮೆ ಆಡಿಸಿದ ಅಂದರೆ ಕೊಳಲು ಲಂಬಕೋನವಾಗುತ್ತಿತ್ತು.

ಆತ ಸೆರಗು ಸರಿಸಿ ಹೊಕ್ಕಳಿಗೊಮ್ಮೆ ಮುತ್ತಿಟ್ಟರೆ ಮುಗಿದೇಹೋಯ್ತು ಊರಸ್ನಾಯುಗಳು ಬಿಗಿಯಾಗಿ ಹೋಗುತ್ತಿದ್ದವು. ಅಂದು ಹಂಸಲೇಖ ಗೀತೆಗಳು ರವಿಚಂದ್ರನ್ ನ ಪಿಚ್ಚರೈಸೇಷನ್ನಲ್ಲಿ ಕಳೆದುಹೋಗಿಬಿಡುತ್ತಿದ್ದವು. ಅಥವಾ ಸಾಹಿತ್ಯ ಸಂಗೀತ ಎಲ್ಲದರಾಚೆಗೆ ನಮಗೆ ಆ ರೊಮ್ಯಾನ್ಸೇ ಹೆಚ್ಚು ಆಕರ್ಷಿಸಿಬಿಡುತ್ತಿತ್ತು. ಕ್ಯಾಸೆಟಲ್ಲಿ ಹಾಡುಗಳನ್ನು ಕೇಳಿ ಸಿನಿಮಾಗೆ ಹೋದಾಗ ಗೀತೆಗಳು ಆಡಿಯೋಗಿಂತ ವಿಡಿಯೋವಾಗಿ ತೃಪ್ತಿಕೊಟ್ಟು ಕಳಿಸುತ್ತಿದ್ದವು. ಆದರೆ ಆನಂತರ ಸಾಹಿತ್ಯ ಗಮನಿಸುವ ಮೆಚುರಿಟಿ, ಸಾಹಿತ್ಯದಲ್ಲಿರುವ ಇಮ್ಯಾಜಿನೇಷನ್ ಪವರ್ ಆಸ್ವಾಧಿಸುವ ಮನಸ್ಥಿತಿ ಎಲ್ಲ ಬಂದಾಗ.. ರವಿ ಚಂದ್ರನ್ ಹಂಸಲೇಖರ ಗೀತೆಗೆ ಹತ್ತು ಪರ್ಸೆಂಟಷ್ಟೂ ನ್ಯಾಯ ಸಲ್ಲಿಸಲು ಸಾಧ್ಯವಾಗಿಲ್ಲ ಅನಿಸಿಬಿಟ್ಟಿದೆ. ಹಾಗಂತ ಹಂಸಲೇಖರ ಸಾಹಿತ್ಯಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಿತ್ತಾ? ಖಂಡಿತ ಇಲ್ಲ. ಯಥಾವತ್ ನ್ಯಾಯ ಸಲ್ಲಿಸಲು ಹೋದದ್ದೇ ಆದರೆ ಆ ಸಾಂಗ್ ನ ಪಿಚ್ಚರೈಸೇಷನ್ ಕಾಮಸೂತ್ರವಾಗಿ ಹೋಗುವಷ್ಟು ಹಾಟ್ ಆಗಿಬಿಡುತ್ತಿತ್ತು.

ಆ ಗೀತೆಗಳು ಪಿಚ್ಚರೈಸ್ ಆಗದೆಯೇ ಇಮ್ಯಾಜಿನೇಷನ್ನಲ್ಲೇ ಉಳಿದುಬಿಟ್ಟಿದ್ದರೆ ಎಷ್ಟು ಚೆಂದವಿತ್ತು ಅನಿಸಿದ್ದೂ ಇದೆ. ಸತ್ಯ ಏನಂದರೆ ರವಿಚಂದ್ರನ್ ಸಲ್ಲಿಸಿದಷ್ಟು ನ್ಯಾಯವನ್ನು ಹಂಸಲೇಖರ ಗೀತೆಗೆ ಇನ್ಯಾರೂ ಸಲ್ಲಿಸಲು ಸಾಧ್ಯವಾಗಲಿಲ್ಲ. ರೊಮ್ಯಾಂಟಿಕ್ ಗೀತೆಗಳಲ್ಲಿ ಮಾತ್ರವಲ್ಲ… ಬೇರೆ ಗಂಭೀರ/ಸ್ಯಾಡ್/ಫಿಲಾಸಫಿಕಲ್/ಕ್ರಾಂತಿ ಯಾವ ಗೀತೆಗಳಿಗೂ ವಿಶ್ಯುಯಲಿ ನ್ಯಾಯ ಸಿಕ್ಕಿಲ್ಲ. ಇದು ಹಂಸಲೇಖ ಮಾತ್ರ ಅಲ್ಲ.. ಬಹುತೇಕ ಸಾಹಿತಿಗಳ ಮನಸಿನ ಮೂಲೆಯ ಅಸಮಾಧಾನ ಹಾಗೂ ನೋಡುಗರ ಅಸಂತೃಪ್ತಿ. ಮೊನ್ನೆ ನಾನು ಶೇರ್ ಮಾಡಿಕೊಂಡ ” ಸುಮ್ಮನೆ ಹೀಗೆ ನಿನ್ನನೇ …:” ಎಂಬ ಅಮರ್ ಚಿತ್ರದ ಗೀತೆಯಾದರೂ ಅಷ್ಟೆ. ಅಷ್ಟು ಗಾಢ ಸಾಲುಗಳ ಗೀತೆಗೆ ಅಂಬರೀಶ್ ಪುತ್ರನಿಂದ ಕಲ್ಲುಬಂಡೆಯಂಥ ಅಭಿನಯ. ಇಡೀ ಹಾಡನ್ನು ಲಾಂಗ್ ಶಾಟ್ ಗಳಲ್ಲಿ ತೆಗೆದು ಪ್ರಕೃತಿ ಸೌಂದರ್ಯ ತೋರಿಸಿ ಮುಗಿಸಿದ್ದಾರೆ ನಾಗಶೇಖರ್. ಸಾಹಿತ್ಯಕ್ಕೆ ಸಂಗೀತ ಸಲ್ಲಿಸುವಷ್ಟು ನ್ಯಾಯವನ್ನು ದೃಶ್ಯರೂಪ ಸಲ್ಲಿಸಲು ಸಾಧ್ಯವಿಲ್ಲ. ಬೆಟರ್ ನಾವು ಹಾಡುಗಳನ್ನು ನಮ್ಮ ಇಮ್ಯಾಜಿನೇಷನ್ ಗೆ ತಕ್ಕಂತೆ ಕಣ್ಮುಚ್ಚಿಕೊಂಡು ಮನಸ್ಸಿನೊಳಗೇ ಚಿತ್ರಿಸಿಕೊಂಡುಬಿಡುವುದು.

ಬ್ಯಾಕ್ ಟು ಅಣ್ಣಯ್ಯ ಚಿತ್ರದ ಆ ಸಾಂಗ್ : ಇಷ್ಟು ವರ್ಷದಲ್ಲಿ ಈ ಹಾಡನ್ನು ಕಮ್ಮಿ ಅಂದ್ರೂ ಒಂದು ಸಾವಿರ ಸಲ ಕೇಳಿರುತ್ತೇನೆ. ಹಿಟ್ ಆಲ್ಪಮ್ ಆಗಿರುವ ಅದರ ಕಡಿಮೆ ಪಾಪ್ಯುಲರ್ ಗೀತೆ ಅದು.

“ಅ ಹಾಗೆ ಪ್ರೇಮಿ ಓಹೋ.. ಒ ಹೋಗೆ ಪ್ರೇಮಿ ಆಹಾ…”
ಈ ಹಾಡಿನ ಚಿತ್ರಣ ನಿಮ್ಮನ್ನು ಸಾಹಿತ್ಯ ಗಮನಿಸದಷ್ಟು ಸೆಳೆದುಕೊಳ್ಳುತ್ತದೆ ಕಾರಣ. ರವಿಚಂದ್ರನ್ ಮಧುಬಾಲಾ ಕೆಮಿಸ್ಟ್ರಿ! ಆದರೆ ಅದ್ಯಾಕೋ ಗೀತೆ ತುಂಬ ಅಟ್ರಾಕ್ಟಿವ್ ಅನಿಸಿರಲಿಲ್ಲ. ಕಮಾನು ಡಾರ್ಲಿಂಗ್, ಅಣ್ಣಯ್ಯ ಅಣ್ಣಯ್ಯ ಬಾರೋ, ರಾಗಿ ಹೊಲದಾಗೆ ಖಾಲಿ ಗುಡಿಸಲು ಈ ಗೀತೆಗಳು ಕೊಟ್ಟ ಕಿಕ್ …. ಈ ಅ ಹಾಗೆ ಪ್ರೇಮಿ ಓಹೋ… ಒ ಹೋಗೆ ಪ್ರೇಮಿ ಆಹಾ ಗೀತೆ ನೀಡಿರಲಿಲ್ಲ.

ಹೌದು ನಾನು ಈ ಹಾಡನ್ನು ಕೇಳಿಸಿಕೊಳ್ತಾ ಇದ್ದದ್ದೇ ಹೀಗೆ. ಮೊನ್ನೆಯ ತನಕವೂ…ಆದರೆ ಮೊನ್ನೆ ಯಾಕೋ ಮತ್ತೊಮ್ಮೆ ಕೇಳಿಸಿಕೊಂಡಾಗ.. ಅರೆ ಇಪ್ಪತ್ತೈದು ವರ್ಷ ತಪ್ಪಾಗಿ ತಿಳಿದುಕೊಂಡು ತಪ್ಪಾಗೇ ಹಾಡಿಕೊಂಡೆನಲ್ಲ ಅಂತ ಮೈತುಂಬ ಗಿಲ್ಟು

ಆ ಸಾಂಗ್ ಇರೋದು ಹೀಗೆ…

”ಆಹಾ’ಗೆ ಪ್ರೇಮಿ “ಓಹೋ”
” ಓಹೋ”ಗೆ ಪ್ರೇಮಿ ” ಆಹಾ”

ನನ್ನ ಹಾಗೆ ಅದೆಷ್ಟು ಜನ ಯಾಮಾರಿದ್ದೀರೋ ಗೊತ್ತಿಲ್ಲ. ಅಥವಾ ನಾನೊಬ್ನೇ ಹೀಗೆ ತಪ್ಪಾಗಿ ಕೇಳಿಸಿಕೊಂಡವ್ನೋ ಗೊತ್ತಿಲ್ಲ

ಈ ಗೀತೆಯ ವಿಶೇಷ ಏನಂದ್ರೆ ಹಂಸಲೇಖ. ಆಹಾ ಮತ್ತು ಓಹೋ ಎಂಬ ಎರಡು ಪದಗಳನ್ನೇ ಪ್ರೇಮಿಗಳನ್ನಾಗಿಸಿದ್ದಾರೆ

ಆಹಾಗೆ ಓಹೋ ಪ್ರೇಮಿ… ಓಹೋಗೆ ಆಹಾ ಪ್ರೇಮಿ!
ಅದು ಇಬ್ಬರು ಪ್ರ‍ೇಮಿಗಳ ಹೆಸರು!

ಈಗ ಈ ಹಾಡೊಮ್ಮೆ ಕೇಳಿನೋಡಿ…
ಅದು ಸೌಂಡಾಗೋದೇ ಬೇರೆ ಥರ!

ಅದ್ಯಾಕೆ ಆಹಾ ಓಹೋ ಎಂಬ ಪದಗಳು ಇಲ್ಲಿ ಪಾತ್ರಗಳಾದವು ಅಂತ ಸಿನಿಮಾ ತೆರೆದು ನೋಡಿದೆ. ಈ ಹಾಡು ಆರಂಭವಾಗುವ ಮುನ್ನ ಅಣ್ಣಯ್ಯ ಯಾವುದೋ ಫೈಟಿಂಗಲ್ಲಿ ಒದೆ ತಿಂದು ಬೆನ್ನಿಗೆ ಕಾಶಿ ಕೈಲಿ ಬಿಸಿ ಮಸಾಜ್ ಮಾಡಿಸಿಕೊಳ್ತಾ ಇರ್ತಾನೆ. ಅವನ ಇಮ್ಯಾಜಿನೇಷನಲ್ಲಿ ನಾಯಕಿ ಬಂದು ಕಾಶಿಯ ಬದಲು ಮಸಾಜ್ ಮಾಡ್ತಿರೋ ಹಾಗೆ ಒಂದು ಟ್ವಿಸ್ಟು.. ಇಮ್ಯಾಜಿನೇಷನಲ್ಲೇ ಅವಳೊಂದಿಗೆ ಮಾತಾಡ್ತಾ.. ಆಕೆ ಬಿಸಿ ಶಾಖ ಕೊಟ್ಟಾಗ ಒಮ್ಮೆ ನಾಯಕ ಆಹಾ ಅಂತಾನೆ.. ಇನ್ನೊಮ್ಮೆ ಓಹೋ ಎಂದು ಬಿಗಿಯುಸಿರು ಬಿಡುತ್ತಾನೆ. ಆಗ ಹುಟ್ಟುವ ಹಾಡಿದು. ಡ್ರೀಮ್ ಸಾಂಗ್ ನಲ್ಲಿ ಟೆಕ್ಸ್ಟ್ ಕೂಡ ಬರುತ್ತದೆ ಆಹಾ ಓಹೋ ಅಂತ!

ಸ್ಕ್ರಿಪ್ಟ್ ಜೊತೆ ದೃಶ್ಯರಚನೆ ಜೊತೆ ಗೀತ ಸಾಹಿತಿ ಕನೆಕ್ಟ್ ಆದಾಗ ಇಂಥ ಅದ್ಭುತಗಳು, ಮಜಗಳು, ಕ್ರಿಯೇಟಿವ್ ಐಡಿಯಾಗಳು ಹುಟ್ಟುತ್ತವೆ. ಹಂಸಲೇಖ ಎಲ್ಲೋ ಕೂತು ಹಾಡುಬರೆದುಕೊಟ್ಟು ಸಂಗೀತ ಮಾಡಿಕೊಡ್ತಿರಲಿಲ್ಲ. ಸಿನಿಮಾದೊಂದಿಗೆ ಪ್ರೀ ಪ್ರೊಡಕ್ಷನ್ನಿಂದ ರೀರೆಕಾರ್ಡಿನ ತನಕ ಜರ್ನಿ ಮಾಡ್ತಿದ್ರು ಅನ್ನೋದಕ್ಕೆ ಇದೊಂದು ಸಾಕ್ಷಿ. ಅವರಿಬ್ಬರ ಕಾಂಬಿನೇಷನ್ ಯಾಕೆ ಆ ಪರಿ ಕ್ಲಿಕ್ ಆಗುತ್ತಿತ್ತು ಅನ್ನೋದಕ್ಕೂ ಇದೊಂದು ಪುರಾವೆ. ( ಬರಹ : ನವೀನ್ ಸಾಗರ್ ; ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಂರ ಕಡೆಗಣನೆ, ಆಸ್ತಿ ಹಕ್ಕು ಕಸಿದುಕೊಳ್ಳುವ ಅಸ್ತ್ರ: ಸೈಯದ್ ಖಾಲಿದ್ ಅಹ್ಮದ್

Published

on

ಸುದ್ದಿದಿನ,ದಾವಣಗೆರೆ: ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿರುವ ಕೇಂದ್ರದ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರವು ಈ ಮೂಲಕ ಮುಸ್ಲಿಮರನ್ನು ಕಡೆಗಣಿಸುವ, ವೈಯಕ್ತಿಕ ಕಾನೂನುಗಳು ಮತ್ತು ಆಸ್ತಿ ಕಸಿದುಕೊಳ್ಳುವ ಗುರಿಯನ್ನು ಹೊಂದಿರುವ ಅಸ್ತ್ರವಾಗಿದೆ ಎಂದು ಅಖಿಲ ಭಾರತ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ಅಲ್ಪಸಂಖ್ಯಾತ ಸಮುದಾಯದವರ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶದಿಂದಲೇ ವಕ್ಫ್ ತಿದ್ದುಪಡಿ ಕಾನೂನು ಜಾರಿಗೊಳಿಸಲಾಗಿದೆ. ಇದರ ವಿರುದ್ಧ ಸಂಘಟಿತ ಹೋರಾಟ ರೂಪಿಸಬೇಕಾಗಿದೆ. ಒಂದು ಧರ್ಮದವರನ್ನು ಗುರಿಯಾಗಿಸಿ ನಡೆಸಿರುವ ವ್ಯವಸ್ಥಿತ ದಾಳಿ ಎಂದು ಪ್ರತಿಕ್ರಿಯಿಸಿದ್ದಾರೆ.

ಆರ್‌ಎಸ್‌ಎಸ್, ಬಿಜೆಪಿ ಮತ್ತು ಮಿತ್ರಪಕ್ಷಗಳಿಂದ ಸಂವಿಧಾನದ ಮೇಲಿನ ಈ ದಾಳಿಯು ಇಂದು ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡಿದೆ. ಆದರೆ ಭವಿಷ್ಯದಲ್ಲಿ ಇತರ ಸಮುದಾಯಗಳನ್ನು ಗುರಿಯಾಗಿರಿಕೊಳ್ಳಲು ಒಂದು ಪೂರ್ವನಿದರ್ಶನ ಎಂದರೆ ತಪ್ಪಾಗಲಾರದು ಎಂದು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ವಕ್ಫ್ ತಿದ್ದುಪಡಿ ಮಸೂದೆಯನ್ನು ಬಲವಾಗಿ ವಿರೋಧಿಸುತ್ತದೆ. ಏಕೆಂದರೆ ಇದು ಭಾರತದ ಕಲ್ಪನೆಯ ಮೇಲೆಯೇ ನಡೆದ ದಾಳಿ ಆಗಿದೆ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ವಿಧಿ 25 ಅನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿದ್ದಾರೆ.

ಮುಸ್ಲಿಂ ಸಮುದಾಯದ ಹಕ್ಕುಗಳಿಗೆ ಧಕ್ಕೆ ತರುವ ಕರಾಳವಾದಂಥ ಕಾನೂನು ಇದಾಗಿದೆ. ಈ ಮಸೂದೆ ವಿರುದ್ಧ ಹೋರಾಡಲು ಎಲ್ಲರ ಸಹಕಾರ ಅಗತ್ಯ ಇದೆ. ಮುಸ್ಲಿಂ ಸಮುದಾಯದ ಆಸ್ತಿಗಳನ್ನು ಕಬಳಿಸಲು ಕೇಂದ್ರ ಸರ್ಕಾರವು ನಡೆಸಿರುವ ಹುನ್ನಾರ ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ ವಿ.ವಿ 12ನೇ ಘಟಿಕೋತ್ಸವ | ವಿಶ್ವವಿದ್ಯಾಲಯಗಳಲ್ಲಿ 2500 ಹುದ್ದೆಗಳು ಖಾಲಿ ಇವೆ : ಸಚಿವ ಡಾ.ಎಂ.ಸಿ. ಸುಧಾಕರ್

Published

on

ಸುದ್ದಿದಿನ,ದಾವಣಗೆರೆ:ವಿದ್ಯಾರ್ಥಿ ಜೀವನದ ಕನಸುಗಳನ್ನು ನನಸಾಗಿಸಲು ನಿರಂತರ ಪ್ರಯತ್ನ ಬಹಳ ಮುಖ್ಯವಾಗಿರುತ್ತದೆ. ಶಿಕ್ಷಣವು ವ್ಯಕ್ತಿಯ ಜೀವನದಲ್ಲಿ ಹೊಸ ಆಲೋಚನೆಗಳು, ಜ್ಞಾನ ಮತ್ತು ಸಾಧ್ಯತೆಗಳನ್ನು ತುಂಬುವ ನಿರಂತರ ಪ್ರಯಾಣವಾಗಿದೆ. ದಾವಣಗೆರೆ ವಿಶ್ವವಿದ್ಯಾನಿಲಯ 2009 ರಲ್ಲಿ ಸ್ಥಾಪನೆಯಾಗಿದ್ದರೂ ಪ್ರಗತಿಗೆ ಪೂರಕವಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಅವರು ಏಪ್ರಿಲ್ 2 ರಂದು ಬುಧವಾರ ತೋಳಹುಣಸೆಯಲ್ಲಿನ ದಾವಣಗೆರೆ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿಕ್ಷಣವು ನಮಗೆ ಉದ್ಯೋಗದ ಜೊತೆಗೆ ನೈತಿಕತೆ, ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಒದಗಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಜ್ಞಾನ ಪಡೆದು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು” ಎಂದರು.

ಶ್ರೇಷ್ಠ ವಿಜ್ಞಾನಿ ಮತ್ತು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕನಸು ಎಂದರೆ ಮಲಗಿರುವಾಗ ಕಾಣುವುದಲ್ಲ, ಅದು ಎಂದಿಗೂ ನನಸಾಗುವುದಿಲ್ಲ. ನಿದ್ರೆ ಮಾಡದೇ ಕಾಣುವ ಕನಸು ಗುರಿಮುಟ್ಟುವರೆಗೆ ಅದು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲ. ಅಂತಹ ಕನಸು ನಿಮ್ಮದಾಗಲಿ. ವಿದ್ಯಾವಂತ ಯುವಕರು ಮಾತ್ರ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲರು. ನೀವು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ನಿಮ್ಮ ಪ್ರಯತ್ನದಿಂದ ದೇಶವು ಪ್ರಗತಿ ಸಾಧಿಸುತ್ತದೆ ಎಂದು ಹೇಳಿದರು.

ಪ್ರಸ್ತುತ ಜಗತ್ತು ವೇಗವಾಗಿ ಬದಲಾಗುತ್ತಿದೆ, ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ, ಸುಸ್ಥಿರ ಅಭಿವೃದ್ಧಿ ಮತ್ತು ಉದ್ಯಮಶೀಲತೆಯಂತಹ ಕ್ಷೇತ್ರಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತಿವೆ. ಇತ್ತೀಚಿನ ತಂತ್ರಜ್ಞಾನಗಳು ಮತ್ತು ಆಲೋಚನೆಗಳೊಂದಿಗೆ ನೀವು ಯಾವಾಗಲೂ ನಿಮ್ಮನ್ನು ನವೀಕೃತವಾಗಿರಿಸಿಕೊಳ್ಳಬೇಕು. ಸ್ವಾತಂತ್ರ್ಯದ ನಂತರ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ. ಈಗ ದೇಶದ ಆರ್ಥಿಕತೆಯು ಪ್ರಬಲವಾಗಿದ್ದು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ.

ಇದನ್ನು ಮತ್ತಷ್ಟು ಬಲಪಡಿಸಲು ಮತ್ತು ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮುಂಚೂಣಿಗೆ ತರಲು ನಿಮ್ಮ ಕೊಡುಗೆ ಬಹಳ ಮುಖ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದರಿಂದ ಇಂತಹ ಪರಿಸರ ಅಸಮತೋಲನದ ಗಂಭೀರ ಸಮಸ್ಯೆಯ ಬಗ್ಗೆ ಯೋಚಿಸಬೇಕು. ಇದಕ್ಕಾಗಿ ನೀರು, ಅರಣ್ಯ ಮತ್ತು ವಾಯು ಸಂರಕ್ಷಣೆಯ ನಿಟ್ಟಿನಲ್ಲಿ ಕೆಲಸ ಮಾಡುವ ಅವಶ್ಯಕತೆಯಿದೆ. ಶಿಕ್ಷಣದಿಂದ ಪಡೆದ ಜ್ಞಾನದೊಂದಿಗೆ, ಮುಂಬರುವ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಿ ಏಕ್ ಭಾರತ್, ಶ್ರೇಷ್ಠ ಭಾರತ ಮತ್ತು ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾಲಯವು ಕಡಿಮೆ ಅವಧಿಯಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಹೆಸರು ಗಳಿಸಿದೆ. ನಿರಂತರ ಮತ್ತು ಸಕಾರಾತ್ಮಕ ಪೂರ್ವಭಾವಿ ಪ್ರಯತ್ನಗಳ ಮೂಲಕ ಅಭಿವೃದ್ಧಿ ಹೊಂದಿದ ಭಾರತಕ್ಕೆ ಮಾನವ ಸಂಪನ್ಮೂಲಗಳನ್ನು ರೂಪಿಸುವಲ್ಲಿ ವಿಶ್ವವಿದ್ಯಾಲಯವು ಪ್ರಮುಖ ಪಾತ್ರ ವಹಿಸುತ್ತಿದೆ. ಘಟಿಕೋತ್ಸವದಲ್ಲಿ ಕಾಗಿನೆಲೆ ಪೀಠದ ಗೌರವಾನ್ವಿತ ಶ್ರೀ ಜಗದ್ಗುರು ನಿರಂಜನಾನಂದ ಪುರಿ ಸ್ವಾಮೀಜಿ, ಸಮಾಜ, ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಹಿತಾಸಕ್ತಿಯಲ್ಲಿ ಕೆಲಸ ಮಾಡುತ್ತಿರುವ ಶ್ರೀ. ಎಸ್.ಎ.ರವೀಂದ್ರನಾಥ್, ಮತ್ತು ಪೆÇ್ರ.ಎಸ್.ಆರ್.ನಿರಂಜನ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಅವರಿಗೆ ಅಭಿನಂದಿಸುತ್ತ, ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಹಿತಾಸಕ್ತಿಯಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.

ಪದವಿಯನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಸಮಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಿರಬಹುದು, ಆದರೆ ನೀವು ಅವುಗಳನ್ನು ಜಯಿಸಿದ್ದೀರಿ. ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದಾಗಿರುವ ಈ ವಿಶೇಷ ದಿನವು ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಸಂಭ್ರಮಾಚರಣೆಯ ಜೊತೆಗೆ ನಿಮ್ಮ ಕನಸುಗಳ ಹಾರಾಟ ಆರಂಭವಾಗಿದೆ. ಈಗ ನೀವು ಶಿಕ್ಷಣದ ಹಾದಿಯಿಂದ ಅನುಭವ ಮತ್ತು ಕ್ರಿಯೆಯ ಹಾದಿಗೆ ಹೆಜ್ಜೆ ಹಾಕಲಿದ್ದೀರಿ, ನಿಮ್ಮ ಹಾದಿ ಸುಗಮವಾಗಿರಲಿ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದ ಹಾಗೂ ರ್ಯಾಂಕ್ ಪಡೆದವರನ್ನು ಕುರಿತು ರಾಜ್ಯಪಾಲರು ಹಾರೈಸಿದರು.

ಘಟಿಕೋತ್ಸವದಲ್ಲಿ ಡಾ.ಎಂ.ಸಿ. ಸುಧಾಕರ್ ಮಾತನಾಡಿ ವಿಶ್ವವಿದ್ಯಾನಿಲಯಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಸರ್ಕಾರ ತನ್ನ ಬದ್ದತೆಯನ್ನು ತೋರಿಸಿದೆ. ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ವರದಿ ನೀಡಲು ಸಂಪುಟ ಉಪ ಸಮಿತಿಗೆ ವಹಿಸಲಾಗಿದೆ. ವರದಿ ಬಂದ ನಂತರ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಮಂಜೂರಾದ 2500 ಹುದ್ದೆಗಳು ಖಾಲಿ ಇವೆ. ಮತ್ತು ಇಲ್ಲಿ ಹೊಸ ಕೋರ್ಸ್‍ಗಳನ್ನು ಆರಂಭಿಸಲಾಗಿದ್ದು ಈ ಹುದ್ದೆಗಳು ಸೇರಿದಂತೆ ಸುಮಾರು 3500 ರಷ್ಟು ಹುದ್ದೆಗಳು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಹುದ್ದೆಗಳು ಖಾಲಿ ಇವೆ. ಸಂಪುಟ ಉಪ ಸಮಿತಿ ವರದಿ ನೀಡಿದ ನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಗುಣಮಟ್ಟ ಆಧರಿಸಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಬೇಕು. ಆದರೆ ಹೆಚ್ಚಿನ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದರಿಂದ ಇದು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯವು ನನ್ನದಾಗಿದೆ ಎಂದರು.

ತಾಂತ್ರಿಕತೆ ಬಹಳ ಬದಲಾವಣೆಯಾಗಿದ್ದು ಕೃತಕ ಬುದ್ದಿಮತ್ತೆ ಹಾಗೂ ಮಷಿನ್ ಲರ್ನಿಂಗ್, ಡಾಟಾ ಸೈನ್ಸ್ ಬಳಕೆ ಮಾಡಿಕೊಂಡು ಸ್ಪರ್ಧಾತ್ಮಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಾಗಿದೆ ಎಂದರು.

ಮುಖ್ಯ ಅತಿಥಿ ಪದ್ಮಭೂಷಣ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕರಾದ ಪ್ರೊ.ಪಿ.ಬಲರಾಮ್ ಘಟಿಕೋತ್ಸವ ಭಾಷಣ ಮಾಡಿದರು.

ಘಟಿಕೋತ್ಸವದಲ್ಲಿ 57 ಅಭ್ಯರ್ಥಿಗಳಿಗೆ ಪಿಹೆಚ್‍ಡಿ ಪದವಿ ಪ್ರದಾನ ಮಾಡಲಾಯಿತು. 2023-24 ನೇ ಸಾಲಿನಲ್ಲಿ ಸ್ನಾತಕ ಪದವಿ ಪಡೆದ 12129 ವಿದ್ಯಾರ್ಥಿಗಳಿಗೆ ಮತ್ತು ಎಂ.ಎ, ಎಂ.ಎಸ್.ಡಬ್ಲ್ಮೂ, ಎಂ.ಕಾಂ, ಎಂ.ಬಿ.ಎ, ಎಂ.ಎಸ್ಸಿ, ಎಂ.ಪಿ.ಇಡಿ, ಎಂ.ಇಡಿ ಸ್ನಾತಕೋತ್ತರ 1919 ವಿದ್ಯಾರ್ಥಿಗಳಿಗೆ ಪದವಿ ಪಡೆಯಲು ಅರ್ಹರಾಗಿರುವರು. 87 ಸ್ವರ್ಣ ಪದಕಗಳಿದ್ದು ಸ್ನಾತಕ ಪದವಿಯಲ್ಲಿ 14 ವಿದ್ಯಾರ್ಥಿಗಳು 24 ಸ್ವರ್ಣ ಪದಕ ಪಡೆದರು. ಸ್ನಾತಕೋತ್ತರ ಪದವಿಯಲ್ಲಿ 32 ವಿದ್ಯಾರ್ಥಿಗಳು 63 ಸ್ವರ್ಣ ಪದಕ ಪಡೆದರು. ಎಂ.ಕಾಂ ನಲ್ಲಿ ರಿಯಾ ಐ.ಕೆ.ಇವರು ಅತೀ ಹೆಚ್ಚು ಅಂದರೆ 6 ಸ್ವರ್ಣ ಪದಕ ಪಡೆದರು.

ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ.ಕುಂಬಾರ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮುಖ್ಯಮಂತ್ರಿ ಪದಕ ; ಮುಖ್ಯ ಪೊಲೀಸ್ ಪೇದೆ ಕೊಟ್ರೇಶ್ ಅಯ್ಕೆ

Published

on

ಸುದ್ದಿದಿನ,ಕೊಟ್ಟೂರು:ತಾಲೂಕಿನ ಬೋರನಹಳ್ಳಿ ಗ್ರಾಮ ಮುಖ್ಯಪೊಲೀಸ್ ಪೇದೆ ಕೊಟ್ರೇಶ್ ಚಿಮ್ಮನಹಳ್ಳಿ ಅವರಿಗೆ 2024 ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರದಾನ ಮಾಡಲು 02.04.2025 ರಂದು ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಕೊಟ್ರೇಶ್ ಅವರು 2005 ರಿಂದ ಪೊಲೀಸ್ ಇಲಾಖೆಯಲ್ಲಿ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಅಪರಾಧ ವಿಭಾಗದಲ್ಲಿ ಅಪಾರ ಸೇವೆ ಸಲ್ಲಿಸಿ, ಮಾಡಿದ ಸಾಧನೆಗೆ ಸುಮಾರು 37 ನಗದು ಬಹುಮಾನ, 54 ಪ್ರಶಸ್ತಿ, 3 ಪ್ರಶಂಸೆ ಪತ್ರ, ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಈಗಾಗಲೇ ಗೌರವಿಸಲಾಗಿದೆ.

ಪ್ರಸ್ತುತ ಇವರು ಕೂಡ್ಲಿಗಿಯ ಡಿವೈಎಸ್ಪಿ ಕಛೇರಿಯ ಅಪರಾಧ ವಿಭಾಗದಲ್ಲಿ ಮುಖ್ಯ ಪೊಲೀಸ್ ಪೇದೆ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಒಟ್ಟು 197 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ಪ್ರದಾನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮುಖ್ಯಮಂತ್ರಿ ಪದಕಕ್ಕೆ ಕೊಟ್ರೇಶ್‌ ಅವರು ಆಯ್ಕೆಯಾಗಿರುವುದು ಊರಿಗೆ ಮತ್ತು ಹೆಮ್ಮೆಯ ವಿಷಯವಾಗಿದೆ. ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾದ ಇವರಿಗೆ ಗ್ರಾಮಸ್ಥರು, ಸ್ನೇಹಿತರು ಶುಭ ಹಾರೈಸಿ ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending