ಅಂತರಂಗ
ಅರಿಮೆಯ ಅರಿವಿರಲಿ-45 : ನನ್ನತನ ಎಂದರೇನು..?
- ಯೋಗೇಶ್ ಮಾಸ್ಟರ್
ನನ್ನತನದ ಗುರುತು ಏನು? ಈ ಪ್ರಶ್ನೆ ಅರಿಮೆಯ ಅರಿವಿನಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ನಾನು ಯಾರು ಎಂಬುದೂ, ನನ್ನತನ ಎಂಬುದೂ; ಎರಡೂ ಬೇರೆ ಬೇರೆ ಗ್ರಹಿಕೆಗಳು. ಇವೆರಡರ ಸಂಬಂಧ ಮತ್ತು ವ್ಯತ್ಯಾಸದ ಅರಿವು ಮನಸ್ಸಿಗೆ ಬಲ ಕೊಡುವುದಕ್ಕೂ, ಮನಸ್ಸಿನ ಬಾಧೆಗಳನ್ನು ನಿವಾರಿಸಿಕೊಳ್ಳುವುದಕ್ಕೂ ಬಹಳ ಸಹಾಯ ಮಾಡುತ್ತದೆ.
ಬಹಳಷ್ಟು ಮಂದಿ ನಾನು ಮತ್ತು ನನ್ನತನ ಎರಡನ್ನೂ ಅಹಂಕಾರದ ಭಾಗವಾಗಿ ಗ್ರಹಿಸಿರುತ್ತಾರೆ. ಹಾಗೂ ತಾತ್ವಿಕವಾಗಿ ನಾನು ಎಂಬ ನಾನತ್ವವನ್ನು ಅಹಂಕಾರವೆಂದು ನಕಾರಾತ್ಮಕವಾಗಿಯೇ ಅರ್ಥೈಸುತ್ತಾರೆ. ಅದನ್ನು ಹೀನವೆಂದು ತುಚ್ಚೀಕರಿಸುವುದೂ ಮತ್ತು ಅನಿವಾರ್ಯವಾಗಿ ಅದಕ್ಕೇ ಗಂಟುಬೀಳುವುದೆರಡೂ ಒಟ್ಟೊಟ್ಟಿಗೇ ನಡೆಯುವುದರಿಂದ ನಾನು ಎಂಬ ನಾನತ್ವದ ಬಗ್ಗೆ ಬಹಳ ಗೊಂದಲವಾದ ಮನಸ್ಥಿತಿಯು ಸಾಮಾನ್ಯವಾಗಿರುತ್ತದೆ.
ಇಷ್ಟು ತಿಳಿದುಕೊಳ್ಳೋಣ. ‘ನಾನು’ ಎನ್ನುವುದು ವ್ಯಾಕರಣದಲ್ಲಿ ಒಂದು ಸಾಧಾರಣವಾದ ನಾಮಪದ. ತನ್ನನ್ನು ತಾನು ಪ್ರಥಮವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಇರುವ ಒಂದು ಸಾಂಕೇತಿಕ ಹೆಸರು. ಮೊದಲನೆಯದಾಗಿ ತಾತ್ವಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಅದರ ಬಗ್ಗೆ ಇರುವ ಅಪರಾಧಿ ಮನೋಭಾವದಿಂದ ಹೊರತಾಗೋಣ. ನಾನು ಎಂಬ ವ್ಯಾಕರಣದ ತಾಂತ್ರಿಕವಾದ ಬಳಕೆ ನಿಜಕ್ಕೂ ಅನಿವಾರ್ಯ.
ನಾನು ಎಂಬ ನಾಮಪದ
ನಾನು ಯಾರಿಗೋ ದೂರವಾಣಿ ಕರೆ ಮಾಡಿ ಮೂಗು ಮೂತಿ ಹೃದಯ ಇತ್ಯಾದಿಗಳಿರುವ, ಮನಸ್ಸು ಎಲ್ಲಾ ಇರುವಂತಹ ಒಬ್ಬ ವ್ಯಕ್ತಿಯು ಕರೆಮಾಡುತ್ತಿದ್ದಾನೆ. ಅವನ ಹೆಸರು ಯೋಗೇಶ್ ಎಂದು ಸಂಕೀರ್ಣಗೊಳಿಸಿಕೊಳ್ಳಲಾರೆ. ನಾನು ಯೋಗೀಶ ಮಾತಾಡ್ತಿದ್ದೀನಿ ಅಂದರೆ ಸಾಕು. ನನಗೆ ಮೂಗು ಮೂತಿ ರಕ್ತನಾಳಗಳೆಲ್ಲಾ ಇರುವಂತ ದೇಹವಿರುವುದು ಯಾರಿಗಾದರೂ ಇರುವ ಸಾಮಾನ್ಯವಾದ ಗ್ರಹಿಕೆ.
ಯಾವ ಯೋಗೀಶ ಎಂದರೆ, ಲೇಖಕ, ನಿರ್ದೇಶಕ ಎಂದೇನೋ ಹೊರಗಿನ ಜಗತ್ತಿಗೆ ಪರಿಚಿತವಾಗಿರುವ ವೃತ್ತಿಯ ಗುರುತನ್ನು ಹೇಳಿ ಅವರಿಗೆ ಪರಿಚಯ ಹೇಳಿಕೊಳ್ಳುತ್ತೇನೆ. ಅದು ನಾನು. ನನ್ನ ಹೆಂಡತಿಯ ನೆಂಟರಿಗೆ ಫೋನ್ ಮಾಡಿದರೆ, ನಾನು ಗಂಗಾ ಗಂಡ ಮಾತಾಡುತ್ತಿರುವುದು ಎಂದೋ, ಮಗಳ ಸ್ನೇಹಿತರಿಗೆ ಫೋನ್ ಮಾಡಿದರೆ ನಾನು ಕೈವಲ್ಯಾ ತಂದೆ ಎಂದೋ ನನ್ನ ಗುರುತನ್ನು ಹೇಳುತ್ತೇನೆ.
ಅಂದರೆ ನಾನು ಎಂದು ಕರೆದುಕೊಳ್ಳುವ ಗುರುತು ಪಾತ್ರಗಳ ಆಧಾರದ ಮೇಲೆ, ವೃತ್ತಿಯ ಆಧಾರದ ಮೇಲೆ, ಹುದ್ದೆ, ಅಧಿಕಾರ; ಹೀಗೆ ಹಲವು ಬಗೆಯ ಗುರುತುಗಳ ವಿವಿಧತೆಗಳ ಮೇಲೆ ಆಧರಿಸಿರುತ್ತದೆ. ಆದರೆ ಇವು ಯಾವುವೂ ನನ್ನತನವಲ್ಲ. ಶಿಕ್ಷಕನಾಗಿದ್ದರೆ, ನಾನಲ್ಲದೇ ಯಾವುದಾದರೂ ಶಿಕ್ಷಕನು ಸಾಹಸ ಪ್ರದರ್ಶಿಸಿದರೆ, ಗೌರವಕ್ಕೆ ಪಾತ್ರವಾದರೆ ಮನಸ್ಸಿನ ಮೂಲೆಯಲ್ಲಿ ನಾನೂ ಶಿಕ್ಷಕನಾಗಿದ್ದರೆ ಮನಸ್ಸು ಸೆಳೆಯುತ್ತದೆ, ಎದೆ ಉಬ್ಬುತ್ತದೆ. ಅದೇ ಒಬ್ಬ ಶಿಕ್ಷಕನು ಮನೆಹಾಳು ಕೆಲಸವನ್ನೋ ಅಥವಾ ನಕಾರಾತ್ಮಕವಾದ ಕೆಲಸ ಮಾಡಿದ್ದರೆ ಛೇ ಎಂಬ ಒಂದು ಭಾವ ಮೂಡಿಬರುತ್ತದೆ. ವೃತ್ತಿಪರತೆಯ ಬಗ್ಗೆ, ನಾಡು, ನುಡಿ, ದೇಶ, ಸಂಸ್ಕೃತಿಗಳ ಬಗ್ಗೆ ಹಚ್ಚಿಕೊಂಡಿರುವ ಛಾಪುಗಳೂ ಕೂಡ ನಮ್ಮ ಮಾನಸಿಕ ಗುರುತನ್ನು ಸ್ಪರ್ಷಿಸುತ್ತದೆ.
ಆದರೆ ಅದು ಸಾಮುದಾಯಿಕವಾಗಿರುವುದೇ ಹೊರತು ನನ್ನತನ ಎನ್ನುವುದೇನಲ್ಲ. ಅಂದರೆ ನಾನು ಎಂಬುವ ವ್ಯಕ್ತಿಯು ತನ್ನ ವ್ಯಕ್ತಿತ್ವವನ್ನು ತನ್ನತನವನ್ನಾಗಿ ಪ್ರದರ್ಶಿಸಿಕೊಳ್ಳುವಲ್ಲಿ ವೃತ್ತಿ, ದೇಶ, ಭಾಷೆ, ಸಂಸ್ಕೃತಿ ಮತ್ತು ಪಾತ್ರಗಳನ್ನು ಆಧರಿಸಿಲ್ಲ ಎಂದಾಯಿತು. ಇವನ್ನೆಲ್ಲಾ ಸಾಮುದಾಯಿಕವಾಗಿ ಬಹಳಷ್ಟು ಜನರು ಸಾಮಾನ್ಯವಾಗಿ ಗುರುತಾಗಿ ಹೊಂದಿರುತ್ತಾರೆ. ಅವನ್ನೂ ಕೂಡ ನಾವು ಸಾಂದರ್ಭಿಕವಾಗಿ ನಾನು ಕನ್ನಡಿಗ, ನಾನು ಭಾರತೀಯ, ನಾನು ಒಬ್ಬ ಜಿಜ್ಞಾಸು ಎಂದೇನೇ ಹೇಳಿಕೊಂಡರೂ ಅವು ಯಾವುವೂ ನನ್ನತನವಲ್ಲ. ಅವು ಸಾಂದರ್ಭಿಕ ಲೇಪಗಳೇ.
ಸಾಮಾನ್ಯ ಮತ್ತು ಸಾಮಾಜಿಕ ಚಹರೆಗಳು
ಇನ್ನು ವ್ಯಕ್ತಿಯ ದೇಹದ ಆಕಾರ, ಗಾತ್ರ, ಬಣ್ಣ ಇವುಗಳೂ ಕೂಡಾ ನನ್ನತನವಲ್ಲ. ಅವುಗಳ ಬಗ್ಗೆ ಇರುವಂತಹ ದೇಹಪ್ರಜ್ಞೆಯಾಗಲಿ, ಅರಿಮೆಯಾಗಲಿ ನನ್ನತನವಲ್ಲ. ಹೊರಗಿನ ಚಹರೆಗಳು ಬದಲಾಗುತ್ತಲೂ ಇರುತ್ತದೆ. ಈ ಶಾರೀರಿಕ ಚಹರೆಗಳ ಅರಿವು ನಮ್ಮ ಅರಿಮೆಗೆ ಕಾರಣಗಳಾಗಬಹುದು. ಸುಂದರವಾಗಿದ್ದೇನೆ, ದಷ್ಟಪುಷ್ಟವಾಗಿದ್ದೇನೆ, ಆಕರ್ಷಕವಾಗಿದ್ದೇನೆ ಎಂದು ಮೇಲರಿಮೆಯನ್ನೋ ಅಥವಾ ಆತ್ಮರತಿಯುಳ್ಳವನಾಗಿರಬಹುದು.
ಅಥವಾ ಸಣ್ಣಗಿದ್ದೇನೆ, ದಢೂತಿ ದೇಹ ಹೊಂದಿದ್ದೇನೆ, ಆಕರ್ಷಕವಾಗಿಲ್ಲ ಎಂದೇನೇನೋ ನಮ್ಮ ಅಥವಾ ನಮ್ಮ ಸಹಜೀವಿಗಳ ಮಾನದಂಡದ ಪ್ರಕಾರ ಕನಿಷ್ಟ ಅಂಕಗಳನ್ನು ಕೊಟ್ಟುಕೊಂಡು ಕೀಳರಿಮೆಯನ್ನು ಹೊಂದಿರಬಹುದು. ಒಟ್ಟಾರೆ ನಾನು ಗಂಡು ಅಥವಾ ಹೆಣ್ಣು ಎಂಬ ಲಿಂಗಭಾವ ಅಥವಾ ನಮ್ಮ ದೇಹ ಇರುವ ರೀತಿಯ ಬಗ್ಗೆ ಇರುವಂತಹ ಆಲೋಚನೆಗಳು ಮತ್ತು ಯಾವುದೇ ಅರಿವು ಅರಿಮೆಗೆ ಕಾರಣವಾಗಬಹುದೇ ಹೊರತು ನನ್ನತನ ಎಂಬುದೇನೂ ಅಲ್ಲ. ಸರಿ, ಸ್ವಲ್ಪ ಸ್ಥೂಲವಾಗಿ ಹೇಳುವುದಾದರೆ ಈ ನನ್ನತನ ಎನ್ನುವುದು ಸಾಮಾಜಿಕ, ಸಾಂಸ್ಥಿಕ ಮತ್ತು ಶಾರೀರಿಕ ಗುರುತುಗಳನ್ನು ಮೀರಿರುವುದು ಎಂದಾದರೆ ಮಾನಸಿಕವೇ?
ಮಾನಸೋಲ್ಲಾಸದ ಗುಪ್ತಗಾಮಿನಿ
ಒಬ್ಬ ವ್ಯಕ್ತಿಗೆ ಮಾನಸಿಕವಾದ ಗುಣಲಕ್ಷಣಗಳಿರುತ್ತವೆ. ಅವನ ಗ್ರಹಿಕೆಗಳು, ಸ್ಮರಣೆಗಳು, ಆದ್ಯತೆಗಳು, ವ್ಯಕ್ತಿತ್ವ, ನಡವಳಿಕೆಗಳು; ಹೀಗೆ ಹಲವು ಭಿನ್ನ ಆಯಾಮಗಳು ಮತ್ತು ಪ್ರದರ್ಶನಗಳು ಒಬ್ಬ ವ್ಯಕ್ತಿಯ ಮನಸ್ಸಿನ ಕಾರಣದಿಂದ ಅಸ್ತಿತ್ವದಲ್ಲಿರುತ್ತವೆ. ಇದರ ಜೊತೆಗೆ ಬಹಳ ಮುಖ್ಯವಾದ ಮತ್ತು ನೈತಿಕ ಸ್ಥೈರ್ಯ ಮತ್ತು ಸಾಮರ್ಥ್ಯವು ಕೂಡಾ ಬಹಳ ಬಲಶಾಲಿಯಾಗಿರುತ್ತದೆ. ವ್ಯಕ್ತಿಯು ಯಾವುದೇ ಧರ್ಮ, ವರ್ಗ, ನಾಡು, ನುಡಿಗಳಲ್ಲಿ ಗುರುತಿಸಿಕೊಂಡಿದ್ದರೂ ಮಾನಸಿಕವಾದ ಮತ್ತು ನೈತಿಕವಾದ ಗುಣಲಕ್ಷಣಗಳು ಸಂಕಲಿತವಾಗಿ ಮತ್ತು ಸತತವಾಗಿ ಗುಪ್ತಗಾಮಿನಿಯಾಗಿ ಜೀವಂತವಾಗಿರುತ್ತದೆ.
ವ್ಯಕ್ತಿಯ ಪ್ರವೃತ್ತಿ, ವರ್ತನೆ, ನಂಬಿಕೆ ಅಥವಾ ಶ್ರದ್ಧೆಗಳೂ ಕೂಡಾ ಆತನಲ್ಲಿ ಬೇರೂರಿರುವ ಮಾನಸಿಕವಾದ ಮತ್ತು ನೈತಿಕವಾದ ಗುಪ್ತಗಾಮಿನಿಯ ಗುರುತನ್ನು ಮಂದಗೊಳಿಸಲಾರದು. ಮರೆವಿನ ರೋಗ (Alzheimer) ಬಂದಿರುವವರೂ ಕೂಡಾ ತಮ್ಮ ಈಜುವುದೋ, ನಡೆಯುವುದೋ, ನುಡಿಯನ್ನೋ ಮರೆತಿರುವುದಿಲ್ಲ. ಹಾಗೆಯೇ ಅವರಲ್ಲಿನ ತಮ್ಮತನವೂ ಕೂಡಾ ಮರೆತಿರುವುದಿಲ್ಲ.
ನನ್ನತನಕ್ಕೆ ಆಧಾರವಾಗಿ ಅಧ್ಯಾತ್ಮವಾಗಲಿ, ಧಾರ್ಮಿಕತೆಯಾಗಲಿ ನೈತಿಕತೆಯನ್ನೇ ಒದಗಿಸಲು ಯತ್ನಿಸುವುದರಿಂದ ಹಲವು ಬಾರಿ, ನಮ್ಮೊಳಗೆ ಇರುವ ಮನೋಭಾವವು ಧರ್ಮ, ಸಂಸ್ಕೃತಿ ಮತ್ತು ಸಾಮಾಜಿಕ ವ್ಯವಸ್ಥೆಯ ಮಾನದಂಡದ ವ್ಯಾಪ್ತಿಗೆ ಸಿಗದೇ ಹೋದರೆ ಅಥವಾ ಖಂಡನೆಗೆ ಒಳಗಾಗಿದ್ದರೆ ದೌರ್ಬಲ್ಯವೆಂದು ಭಾವಿಸುವ ಸಾಧ್ಯತೆಗಳಿರುತ್ತವೆ. ಹಾಗೆಯೇ ಒಲವು ಮತ್ತು ಬಯಕೆಗಳೂ ಕೂಡಾ ಅದುಮಿಡಲಾಗುತ್ತದೆ.
ಸಲಿಂಗ ಕಾಮವೇ ಮೊದಲಾದ ಲೈಂಗಿಕ ಬಯಕೆಗಳ ಆಸಕ್ತಿಗಳು ಮತ್ತು ಅವುಗಳ ಬಗ್ಗೆ ಇರುವ ಒಲವುಗಳು ಸಾಮಾಜಿಕ ಅಪಖ್ಯಾತಿಯ ಭೀತಿಯಿಂದ ಬಹುಜನರಲ್ಲಿ ಅಡಗಿಕೊಂಡುಬಿಡುತ್ತವೆ. ಇರಲಿ, ಸಾಮಾನ್ಯವಾಗಿ ಆತುಕೊಂಡಿರುವ ನೈತಿಕತೆಗೆ ಮನೋಬಲವು ಸದಾ ಜಾಗೃತಿಯಿಂದ ಅದನ್ನು ನೋಡಿಕೊಳ್ಳುವ ಮೂಲಕ ಪುಷ್ಟಿ ನೀಡುತ್ತಿರುತ್ತದೆ. ಹಾಗೆ ಅದನ್ನು ಸದಾ ಜೀವಂತವಾಗಿಯೂ ಮತ್ತು ಬಲಯುತವಾಗಿಯೂ ನೋಡಿಕೊಳ್ಳುವುದರಲ್ಲಿ ಸಂತೋಷವನ್ನು ಕಾಣುತ್ತದೆ.
ಹೊರಗಿನ ಯಾವುದೇ ಪ್ರಭಾವವು ಅದನ್ನು ಅಲುಗಾಡಿಸಲು ಯತ್ನಿಸಿದರೂ ಅದನ್ನು ಬಲಿಗೊಡದಂತೆ ಎಚ್ಚರಿಕೆಯಿಂದ ಕಾಯ್ದುಕೊಳ್ಳುವ ಪ್ರಜ್ಞೆಯು ಸಂಘರ್ಷದಲ್ಲಿಯೂ ಮತ್ತು ಒತ್ತಡಗಳಲ್ಲಿಯೂ ಖುಷಿಯಾಗಿರುತ್ತದೆ. ಉಲ್ಲಾಸವಾಗಿರುತ್ತದೆ. ಈ ಮಾನಸೋಲ್ಲಾಸಕ್ಕೆ ಕಾರಣವಾಗಿರುವ ನನ್ನತನ ಎನ್ನುವುದನ್ನು ಉದಾಹರಣೆಗಳ ಸಮೇತ ತಿಳಿದುಕೊಂಡರೆ ಬಹುಶಃ ನಾನು ಎಂಬುದರ ಬಗ್ಗೆ ಹೊಂದಿರುವ ಹಲವು ಬಗೆಯ ಭ್ರಮೆಗಳು ಹರಿದು ಹೋಗಬಹುದು. ಜೊತೆಗೆ ನಮ್ಮದೇ ಕುಟುಂಬದಲ್ಲಿ, ಕೆಲಸ ಮಾಡುವ ಪರಿಸರದಲ್ಲಿ, ಸಂಸ್ಥೆಗಳಲ್ಲಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಭಾವಗಳಲ್ಲಿ ತನ್ನತನವನ್ನು ಉಳಿಸಿಕೊಂಡು, ಬಾಳಿಸಿಕೊಂಡು ಬದುಕಲು ಸಾಧ್ಯವಾಗುತ್ತದೆ. ಅವೇನೆಂದು ಮತ್ತು ಹೇಗೆಂದು ಮುಂದೆ ನೋಡೋಣ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243