Connect with us

ದಿನದ ಸುದ್ದಿ

2017 ರಿಂದ 2023 ಅವಧಿಯ ಅಭಿವೃದ್ಧಿ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳು ಪ್ರಕಟ ; ಇಲ್ಲಿದೆ ಸಂಪೂರ್ಣ ಮಾಹಿತಿ

Published

on

ಸುದ್ದಿದಿನ,ಬೆಂಗಳೂರು:ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ 2017 ರಿಂದ 2023ರ ಕ್ಯಾಲೆಂಡರ್ ವರ್ಷಗಳ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರಕಟಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಪ್ರಶಸ್ತಿಗಳನ್ನು ಸರ್ಕಾರವು 2001ನೇ ಸಾಲಿನಿಂದ ಸ್ಥಾಪಿಸಿದ್ದು 2016 ರವರೆಗೆ ನಾಡಿನ 32 ಜನ ಹಿರಿಯ ಪತ್ರಕರ್ತರು ಈ ಎರಡೂ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಕೋವಿಡ್ ಹಾಗೂ ಇತರೆ ಕಾರಣಗಳಿಂದ ವಿಳಂಬವಾಗಿದ್ದ 2017ರಿಂದ 2023ರ ವರೆಗಿನ ಏಳು ವರ್ಷಗಳ ಅವಧಿಯ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರನ್ನು ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಹಾಗೂ ಕೆ.ಶಿವಕುಮಾರ್ ಅವರಿದ್ದ ಸಮಿತಿಯು ಆಯ್ಕೆ ಮಾಡಿದೆ. ಪ್ರಶಸ್ತಿಯು ತಲಾ ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ, ಅಭಿನಂದನಾ ಪತ್ರ ಒಳಗೊಂಡಿರುತ್ತದೆ.

2017ರಿಂದ 2023ರವರೆಗಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರ ವಿವರ

ವಿಜಯಲಕ್ಷ್ಮಿ ಶಿಬರೂರು (2017): ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಶಿಬರೂರು ಗ್ರಾಮದವರಾದ ವಿಜಯಲಕ್ಷ್ಮಿ ಅವರು, ಕಳೆದ ಸುಮಾರು 25 ವರ್ಷಗಳಿಂದ ನಾಡಿನ ವಿವಿಧ ಮಾಧ್ಯಮಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅರಣ್ಯ ಸಂರಕ್ಷಣೆ, ಅಪಾಯಕಾರಿ ಆಹಾರ ಪದಾರ್ಥಗಳು, ಪ್ಲಾಸ್ಟಿಕ್ ಅಪಾಯಗಳು ಮತ್ತಿತರ ಜಾಗೃತಿ ಮೂಡಿಸುವ ವರದಿಗಳನ್ನು ಎಲೆಕ್ಟ್ರಾನಿಕ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಣಾಮಕಾರಿಯಾಗಿ ಬಿತ್ತರಿಸಿದ್ದಾರೆ. ಪರಿಸರ ಜಾಗೃತಿಯ ವರದಿಗಳನ್ನು ಪ್ರಕಟಿಸಿದ್ದಾರೆ.

ಬಿ.ಎಂ.ಟಿ ರಾಜೀವ್ : (2018): ಮೂಲತ: ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬೆನವಾರ ಗ್ರಾಮದವರು, ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಭಾರತೀಯ ಅರಣ್ಯ ಸೇವೆಯಿಂದ 2006ರಲ್ಲಿ ನಿವೃತ್ತಿ ಹೊಂದಿದ್ದಾರೆ. 1985 ರಿಂದ ವನ್ಯಜೀವಿಗಳು, ಅರಣ್ಯ ಮತ್ತು ಪರಿಸರ ಸಂರಕ್ಷಣೆ ಕುರಿತು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಲೇಖನ, ಪ್ರಬಂಧಗಳನ್ನು ಬರೆಯುತ್ತಿದ್ದಾರೆ. ಅರಣ್ಯ/ವನ್ಯಜೀವಿ/ಪರಿಸರದಿಂದ ಮನುಕುಲಕ್ಕಿರುವ ಅನುಕೂಲಗಳು, ಅವಶ್ಯಕತೆಗಳ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ. ಭಾರತೀಯ ವನ್ಯಪ್ರಾಣಿಗಳ ಕೈಪಿಡಿ, ಪರಿಸರ ಮಾಲಿನ್ಯ ಮತ್ತು ವಾಯುಗುಣ ಬದಲಾವಣೆ ಕುರಿತು ಒಟ್ಟು 6 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ವಿನೋದಕುಮಾರ್ ಬಿ. ನಾಯ್ಕ: (2019) : ಮೂಲತ: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಗುಬ್ಬಿಹಳ್ಳಿ ಗ್ರಾಮದವರು. ಏಷಿಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಯಲ್ಲಿ ವಿಶೇಷ ಯೋಜನೆಗಳ ವಿಭಾಗದ ಸಂಪಾದಕರಾಗಿರುವ ಇವರು ವಿವಿಧ ಮಾಧ್ಯಮಗಳಲ್ಲಿ ಸುಮಾರು 23 ವರ್ಷಗಳ ಕಾಲ ವನ್ಯಜೀವಿ ಹಾಗೂ ಪರಿಸರ ಕುರಿತು ಅನೇಕ ಪರಿಣಾಮಕಾರಿ ವರದಿಗಳನ್ನು ಮಾಡಿದ್ದಾರೆ. ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಾದೇಶಿಕ ಮಾಧ್ಯಮಗಳಲ್ಲಿ ಮೊದಲ ಬಾರಿಗೆ ವನ್ಯಜೀವಿ ಸಂರಕ್ಷಣಾ ಅಭಿಯಾನಗಳನ್ನು ಹಮ್ಮಿಕೊಂಡು ಕಾಡಂಚಿನ ಗ್ರಾಮಗಳಲ್ಲಿ ಮಾನವ –ವನ್ಯಜೀವಿ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ‘ಜಂಗಲ್ ಡೈರಿ’ ಕೃತಿ ಪ್ರಕಟಿಸಿದ್ದಾರೆ.

ಮಾಲತೇಶ ಅಂಗೂರ (2020): ಹಾವೇರಿ ಜಿಲ್ಲೆಯ ಮಾಲತೇಶ ಗದಿಗೆಪ್ಪ ಅಂಗೂರ ಅವರು ಸುಮಾರು 34 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದಾರೆ. ಕಳೆದ 18 ವರ್ಷಗಳಿಂದ ಕೌರವ ಕನ್ನಡ ದಿನಪತ್ರಿಕೆಯ ಮುಖ್ಯ ವರದಿಗಾರರಾಗಿ ಪರಿಸರಕ್ಕೆ ಸಂಬಂಧಿಸಿದಂತೆ ವನ್ಯಜೀವಿಗಳು, ಕೆರೆಕಟ್ಟೆಗಳು, ಪ್ರಾಣಿಪಕ್ಷಿಗಳು, ಕೀಟಗಳು, ಸಸ್ಯಗಳು, ನಿಸರ್ಗ, ಗುಡ್ಡ ಗಹ್ವರಗಳು, ಅತಿವೃಷ್ಠಿ ಅನಾವೃಷ್ಠಿ ಸೇರಿದಂತೆ ವಿವಿಧ ಪರಿಸರ ಜಾಗೃತಿಯ ವರದಿಗಳನ್ನು ಪ್ರಕಟಿಸಿದ್ದಾರೆ. ‘ಕಾಡು-ಮೇಡು’ ಕೃತಿ ಪ್ರಕಟವಾಗಿದೆ.

ಸುಧೀರ್ ಶೆಟ್ಟಿ (2021): ಉಡುಪಿ ಜಿಲ್ಲೆಯ ಪಾದೆಬೆಟ್ಟು ಗ್ರಾಮದವರಾದ ಇವರು ಮುಂಬೈನಲ್ಲಿ ಫೋಟೋ ಜರ್ನಲಿಸಂ ಪದವಿ ಪಡೆದಿದ್ದಾರೆ. ಅರಣ್ಯ, ವನ್ಯಜೀವಿ, ನದಿ ಮತ್ತು ನೀರಿನ ಮೂಲಗಳ ಸಂರಕ್ಷಣೆ, ಬಂಡೀಪುರ ಅರಣ್ಯದ ಪ್ರಾಣಿಗಳ ಪ್ರಾಣ ರಕ್ಷಣೆ, ಬೆಂಗಳೂರಿನ ಕೆರೆಗಳ ನೀರು ತಮಿಳುನಾಡಿಗೆ ಹರಿದುಹೋಗಿ ಅಲ್ಲಿ ಸಂಸ್ಕರಣೆಗೊಂಡು ಕೃಷಿಗೆ ಬಳಕೆಯಾಗುತ್ತಿರುವ ಬಗ್ಗೆ ಸೆರೆಹಿಡಿದ ಛಾಯಾಚಿತ್ರಗಳು ರಾಜ್ಯದಲ್ಲಿ ಚರ್ಚೆ ಉಂಟುಮಾಡಿದ್ದವು. ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಸಂರಕ್ಷಣೆ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಕಪ್ಪತ್ತಗುಡ್ಡ ಸಂರಕ್ಷಣೆಗೆ ಗದುಗಿನ ಡಾ:ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಎಸ್.ಆರ್.ಹಿರೇಮಠ ಅವರ ಹೋರಾಟದ ಸಂದರ್ಭದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸಿದ್ದರು. ಮಹದಾಯಿ ತಿರುವು ಯೋಜನೆ, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ, ಸಂಡೂರಿನ ಅಕ್ರಮ ಗಣಿಗಾರಿಕೆ ಮತ್ತಿತರ ವಿಷಯಗಳ ಕುರಿತು ಇವರ ಛಾಯಾಚಿತ್ರಗಳು ಪ್ರದರ್ಶನಗೊಂಡಿವೆ.

ಮಲ್ಲಿಕಾರ್ಜುನ ಹೊಸಪಾಳ್ಯ (2022) : ಮಲ್ಲಿಕಾರ್ಜುನ ಹೊಸಪಾಳ್ಯ ಅವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಹೊಸಪಾಳ್ಯ ಗ್ರಾಮದವರು. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರಾಂಕ್ ನೊಂದಿಗೆ ಎರಡು ಚಿನ್ನದ ಪದಕ ಮತ್ತು ಪದವಿಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕಗಳಿಕೆಗಾಗಿ ಚಿನ್ನದ ಪದಕ ಪಡೆದಿದ್ದಾರೆ. ದೇಸಿ ತಳಿ, ನಾಟಿ ಬೀಜಗಳ ಸಂರಕ್ಷಣೆ ಕುರಿತು ವಿಶೇಷ ಆಸಕ್ತಿ, ಜಲಸಂರಕ್ಷಣೆ, ಸುಸ್ಥಿರ ಕೃಷಿ, ಸಿರಿಧಾನ್ಯ ಚಟುವಟಿಕೆಗಳಿಗೆ ಬೆಂಬಲ. ಜಲಜಾಗೃತಿಗಾಗಿ ಕಾರ್ಯಕ್ರಮ ಸಂಘಟನೆ. ಪಾರಂಪರಿಕ ಜಲನಿಧಿಗಳಾದ ತಲಪರಿಗೆ ಬಗ್ಗೆ ಅಧ್ಯಯನ, ಪುನರುಜ್ಜೀವನಕ್ಕಾಗಿ ಶ್ರಮಿಸುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ವಿವಿಧ ಪತ್ರಿಕೆಗಳಲ್ಲಿ ಹವ್ಯಾಸಿ ಬರಹಗಾರರಾಗಿ ಕೃಷಿ ವಿಚಾರಗಳ ಬರವಣಿಗೆ ಮಾಡುತ್ತಿದ್ದಾರೆ. ನೆಟ್ಟಿರಾಗಿ, ತಲಪರಿಗೆ, ನಶಿಸುತ್ತಿರುವ ನೀರಿನ ಜ್ಞಾನ,ಕರ್ನಾಟಕದ ಕೃಷಿ ಆಚರಣೆಗಳು ಸೇರಿ ಒಟ್ಟು 14 ಕೃತಿಗಳು ಪ್ರಕಟವಾಗಿವೆ.

ಆರ್.ಮಂಜುನಾಥ್ (ಕೆರೆ ಮಂಜು) (2023) : ಬೆಂಗಳೂರಿನವರಾಗಿರುವ ಆರ್.ಮಂಜುನಾಥ್ ಅವರು,1995ರಿಂದ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿರುವ ಇವರು, ಪ್ರಸ್ತುತ ಪ್ರಜಾವಾಣಿಯಲ್ಲಿ ಹಿರಿಯ ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಕೆರೆಗಳ ಬಗ್ಗೆ ‘ನಮ್ಮೂರ್ ಕೆರೆ’ಎಂಬ ಲೇಖನ ಮಾಲಿಕೆ (2008). ಅರ್ಕಾವತಿ ನದಿ ಪುನಶ್ಚೇತನ, ಧಾರವಾಡ ಕೆರೆಗಳ ಅಭಿವೃದ್ಧಿ, ಬೆಂಗಳೂರಿನಲ್ಲಿರುವ ರಾಜಕಾಲುವೆಗಳ ಒತ್ತುವರಿಯಿಂದ ಮಳೆಗಾಲದಲ್ಲಿ ನೀರು ಬಡಾವಣೆಗಳಿಗೆ ಹರಿಯುತ್ತಿದೆ. ಎಲ್ಲೆಲ್ಲಿ ಎಷ್ಟೆಷ್ಟು ರಾಜಕಾಲುವೆ ಒತ್ತುವರಿಯಾಗಿದೆ ಎಂಬುದನ್ನು ನಕ್ಷೆ ಸಹಿತ ಮಾಹಿತಿಯ ಲೇಖನಗಳು ಸೇರಿ ಕೆರೆಗಳ ರಕ್ಷಣೆ ಬಗ್ಗೆ ಪರಿಣಾಮಕಾರಿ ಲೇಖನಗಳನ್ನು ಪ್ರಕಟಿಸಿದ್ದಾರೆ.

2017ರಿಂದ 2023 ರವರೆಗಿನಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರ ವಿವರ

ಚೀ.ಜ.ರಾಜೀವ್ (2017) :ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕು ಚೀರನಹಳ್ಳಿ ಗ್ರಾಮದವರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ. 1999ರಿಂದ 2001ರವರೆಗೆ ಉದಯವಾಣಿ ದಿನಪತ್ರಿಕೆಯಲ್ಲಿ, 2001 ರಿಂದ ಇಲ್ಲಿಯವರೆಗೆ ವಿಜಯ ಕರ್ನಾಟಕ ದಿನಪತ್ರಿಕೆಯ ಸುದ್ದಿ ಸಂಪಾದಕರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೃಷಿ, ಶಿಕ್ಷಣ, ಪರಂಪರೆ, ಮತ್ತಿತರ ಕ್ಷೇತ್ರಗಳ ಸವಾಲುಗಳಿಗೆ ಕನ್ನಡಿ ಹಿಡಿಯುವ ಅಭ್ಯುದಯ ಪತ್ರಿಕೋದ್ಯಮಕ್ಕೆ ಉದಾಹರಣೆಯಾಗುವಂತಹ ವರದಿ ಅಂಕಣಗಳನ್ನು ನಿರಂತರವಾಗಿ ಪ್ರಕಟಿಸುತ್ತಿದ್ದಾರೆ.

ದೇವಯ್ಯ ಗುತ್ತೇದಾರ್ (2018): ಮೂಲತ: ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕು ಭೈರಾಮಡಗಿ ಗ್ರಾಮದವರು. 2004ರಿಂದ ಉಷಾಕಿರಣ, ಪ್ರಜಾವಾಣಿಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ವಿಜಯಕರ್ನಾಟಕ ದಿನಪತ್ರಿಕೆಯ ಕಲಬುರಗಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ, ಮಾನವ ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕದ ತಾಲ್ಲೂಕುಗಳ ಪರಿಸ್ಥಿತಿ, ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಬಡತನ ನಿವಾರಣೆ, ಶಿಶುಮರಣ ತಡೆ ಸೇರಿದಂತೆ ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಕುರಿತ ಅನೇಕ ವಿಶ್ಲೇ಼ಷಣಾತ್ಮಕ ಲೇಖನಗಳು, ವರದಿಗಳನ್ನು ಪ್ರಕಟಿಸಿದ್ದಾರೆ.

ಗಿರೀಶ್ ಲಿಂಗಣ್ಣ (2019): ಬೆಂಗಳೂರಿನ ಗಿರೀಶ್ ಲಿಂಗಣ್ಣ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಬಾಹ್ಯಾಕಾಶ, ರಕ್ಷಣೆ, ಅಂತಾರಾಷ್ಟ್ರೀಯ ವ್ಯವಹಾರಗಳ ವಿಶ್ಲೇಷಕ. ಸಂಯುಕ್ತ ಕರ್ನಾಟಕ ,ಕನ್ನಡ ಪ್ರಭ, ಇಂಡಿಯನ್ ಎಕ್ಸ್ಪ್ರೆಸ್ ದಿನಪತ್ರಿಕೆಗಳ ಜಾಲತಾಣಗಳ ಅಂಕಣಕಾರರಾಗಿದ್ದಾರೆ. ವಿಜಯ ಕರ್ನಾಟಕ, ಉದಯವಾಣಿ, ವಿಶ್ವವಾಣಿ, ಪತ್ರಿಕೆಗಳಲ್ಲಿ ಒನ್ ಇಂಡಿಯ ಜಾಲತಾಣದಲ್ಲಿ ನಿರಂತರ ಲೇಖನಗಳನ್ನು ಬರೆಯುತ್ತಿದ್ದಾರೆ. ವಿವಿಧ ರಾಷ್ಟ್ರೀಯ, ಅಂತಾರಾಷ್ಟ್ರೀಯ ಇಂಗ್ಲಿಷ್ ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಲೇಖನಗಳು ಪ್ರಕಟವಾಗುತ್ತಿವೆ. ಪ್ರಚಲಿತ ವಿಚಾರಗಳ ಕುರಿತು ಸುವರ್ಣ ನ್ಯೂಸ್, ದೂರದರ್ಶನ, ಆಕಾಶವಾಣಿ, ಚಂದನ ವಾಹಿನಿಗಳಲ್ಲಿ ಪ್ಯಾನೆಲಿಸ್ಟ್ ಆಗಿ ಭಾಗಿ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ವಾಹಿನಿಗಳಲ್ಲಿ ಸಂವಾದ, ಚರ್ಚೆಗಳಲ್ಲಿ ಪ್ಯಾನೆಲಿಸ್ಟ್ ಆಗಿದ್ದಾರೆ.

ಯೋಗೇಶ್ ಎಂ.ಎನ್. (2020): ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು ಮಾರೇನಹಳ್ಳಿ ಗ್ರಾಮದವರು. ಕಳೆದ ಸುಮಾರು 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಪ್ರಜಾವಾಣಿ ದಿನಪತ್ರಿಕೆಯ ಚಿತ್ರದುರ್ಗ ಜಿಲ್ಲಾ ವರದಿಗಾರರಾಗಿದ್ದಾರೆ. ಭ್ರೂಣಹತ್ಯೆ ತಡೆ, ಉನ್ನತ ಶಿಕ್ಷಣ ಸೇರಿದಂತೆ ಅಭಿವೃದ್ಧಿ ವಿಷಯಗಳ ಕುರಿತು ಪರಿಣಾಮಕಾರಿ ವರದಿಗಳನ್ನು ಪ್ರಕಟ ಮಾಡಿದ್ದಾರೆ. ‘ಜೀವಸೆಲೆ ಕಾಮೇಗೌಡ’ ಕೃತಿಯು ಮಂಡ್ಯ ವಿಶ್ವವಿದ್ಯಾಲಯಕ್ಕೆ ಪಠ್ಯವಾಗಿದೆ. ಸಕ್ಕರೆಯ ಅಕ್ಕರೆ, ವರ್ಣ ಕೃತಿಗಳು ಪ್ರಕಟವಾಗಿವೆ. ಭಾರತೀಯ ರಂಗ ಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ. ವಿವಿಧ ಹವ್ಯಾಸಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ನೌಶಾದ್ ಬಿಜಾಪುರ (2021): ಮೂಲತ: ಧಾರವಾಡದವರು. ಪ್ರಸ್ತುತ ಬೆಳಗಾವಿಯಲ್ಲಿ ನೆಲೆಸಿದ್ದು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ದಿನಪತ್ರಿಕೆಯ ಹಿರಿಯ ಸಹಾಯಕ ಸಂಪಾದಕರಾಗಿದ್ದಾರೆ. ಕಳೆದ 25 ವರ್ಷಕ್ಕೂ ಹೆಚ್ಚು ಕಾಲದಿಂದ ಡೆಕ್ಕನ್ ಕ್ರೋನಿಕಲ್, ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಈಗ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ದಿನಪತ್ರಿಕೆಯಲ್ಲಿ ಹಲವಾರು ಅಭಿವೃದ್ಧಿ ಮತ್ತು ಸಾಮಾಜಿಕ ಚಿಂತನೆಗಳಿಂದ ಕೂಡಿದ ಲೇಖನ ಹಾಗೂ ವರದಿಗಳನ್ನು ಪ್ರಕಟಿಸಿದ್ದಾರೆ.

ಸತೀಶ್ ಜಿ.ಟಿ (2022) : ಮೂಲತ: ಚಿತ್ರದುರ್ಗದವರು. ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2004ರಿಂದ 2011ರವರೆಗೆ ವಿಜಯ ಟೈಮ್ಸ್, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2011 ರಿಂದ ಈವರೆಗೆ ದಿ ಹಿಂದೂ ದಿನಪತ್ರಿಕೆಯ ಹಾಸನ ವಿಭಾಗದ ವಿಶೇಷ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಭಿವೃದ್ಧಿಯ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲುವ ಅನೇಕ ವರದಿಗಳನ್ನು ಪ್ರಕಟಿಸಿದ್ದಾರೆ. ವಿನೋದ್ ಮೆಹ್ತಾ ಅವರ ಆತ್ಮಕಥೆ ‘ಲಖನೌ ಹುಡುಗ’ , ವಿನೋದ್ ಕಾಪ್ರಿ ಅವರ ‘ಮನೆ ಸೇರಲು 1232 ಕಿ.ಮೀ ಸಾಗಿದ ದೂರ’ , ನ್ಯಾಯಮೂರ್ತಿ ಕೆ.ಚಂದ್ರು ಅವರ ‘ನನ್ನ ದೂರು ಕೇಳಿ ಮಹಿಳೆಯರು ನ್ಯಾಯಾಲಯದ ಕದ ತಟ್ಟಿದಾಗ’ ಅಜಿತ್ ಪಿಳ್ಳೆ ಅವರ ‘ಇದು ಯಾವ ಸೀಮೆ ಚರಿತ್ರೆ’ ಮೊದಲಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಎಸ್.ಗಿರೀಶ್ ಬಾಬು (2023): ಬೆಂಗಳೂರಿನವರಾದ ಎಸ್.ಗಿರೀಶ್ ಬಾಬು ಅವರು ಉದಯಟಿವಿ, ವಿಜಯಕರ್ನಾಟಕ , ಉದಯವಾಣಿ, ಮತ್ತಿತರ ಮಾಧ್ಯಮಗಳಲ್ಲಿ 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕನ್ನಡಪ್ರಭ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿಯಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸುವ ಅವಧಿಯಲ್ಲಿ ಕೊಕಟನೂರು ಜಾತ್ರೆಯಲ್ಲಿ ಮುತ್ತುಕಟ್ಟುವ (ದೇವದಾಸಿ) ಪದ್ದತಿ ಬಗ್ಗೆ ಬರೆದ ವರದಿಯು ಈ ಸಾಮಾಜಿಕ ಅನಿಷ್ಠದ ನಿರ್ಮೂಲನೆಗೆ ನೆರವಾಯಿತು. ಶಿಕ್ಷಣ, ಆರೋಗ್ಯ, ಪರಿಸರ , ರಕ್ಷಣೆ, ವಿಜ್ಞಾನ, ತಂತ್ರಜ್ಞಾನ ಬೀಟ್ಗಳಲ್ಲಿ ನೂರಾರು ವರದಿಗಳನ್ನು ಪ್ರಕಟಿಸಿದ್ದಾರೆ. ಭಾರತೀಯ ರಕ್ಷಣಾ ಇಲಾಖೆಯು ಪತ್ರಕರ್ತರಿಗಾಗಿ ನಡೆಸುವ ಡಿಫೆನ್ಸ್ ಕರೆಸ್ಪಾಂಡೆನ್ಸ್ ಕೋರ್ಸ್ನಲ್ಲಿ ಭಾಗವಹಿಸಿ ಕಾರ್ಗಿಲ್, ಲೇಹ್ ಸೇರಿದಂತೆ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ವರದಿ ಮಾಡಿರುತ್ತಾರೆ.

ಶೀಘ್ರದಲ್ಲಿಯೇ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್‍ ಸಮುದಾಯ ಭವನ ಶಂಕುಸ್ಥಾಪನೆ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 14 ರಂದು ಮಧ್ಯಾಹ್ನ 2 ಗಂಟೆಗೆ ನಗರದ ಸಕ್ರ್ಯೂಟ್ ಹೌಸ್ ಪಕ್ಕ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಸಮುದಾಯ ಭವನ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಉದ್ಘಾಟಿಸುವರು. ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಉಪಸ್ಥಿತರಿರುವರು.

ಮುಖ್ಯ ಅತಿಥಿಗಳಾಗಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಹೊನ್ನಾಳಿ ಶಾಸಕ ಶಾಂತನಗೌಡ ಡಿ.ಜಿ, ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ, ಹರಿಹರ ಶಾಸಕ ಬಿ.ಪಿ ಹರೀಶ್, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಚಿದಾನಂದ ಎಂ.ಗೌಡ, ಡಿ.ಎಸ್ ಅರುಣ್, ಕೆ.ಎಸ್.ನವೀನ್, ಕೆ.ಅಬ್ದುಲ್ ಜಬ್ಬಾರ್, ಡಾ.ಧನಂಜಯ್ ಸರ್ಜಿ, ಡಿ.ಟಿ.ಶ್ರೀನಿವಾಸ್, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಬಂಜಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವನಾಯ್ಕ್, ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾಧಿಕಾರಿ ಹಾಗೂ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಬಿ. ಇಟ್ನಾಳ್. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಏಪ್ರಿಲ್ 16, 17 ರಂದು ಸಿಇಟಿ ಪರೀಕ್ಷೆ : ಜಿಲ್ಲೆಯ 28 ಕೇಂದ್ರಗಳಲ್ಲಿ 12875 ವಿದ್ಯಾರ್ಥಿಗಳು

Published

on

ಸುದ್ದಿದಿನ,ದಾವಣಗೆರೆ:ಸಿಇಟಿ-2025 ರ ಪರೀಕ್ಷೆಯು ಏಪ್ರಿಲ್ 16 ಮತ್ತು 17 ರಂದು ರಾಜ್ಯಾದ್ಯಂತ ನಡೆಯಲಿದ್ದು ದಾವಣಗೆರೆಯಲ್ಲಿ 28 ಕೇಂದ್ರಗಳಲ್ಲಿ 12875 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು. ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಎಲ್ಲಾ ಕೇಂದ್ರಗಳ ಪ್ರಾಂಶುಪಾಲರು ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಿಇಟಿ ಪರೀಕ್ಷಾಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಏಪ್ರಿಲ್ 16 ರಂದು ಬೆಳಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಏ.17 ರಂದು ಬೆಳಗ್ಗೆ 10.30 ರಿಂದ 11.50 ರ ವರೆಗೆ ಗಣಿತಶಾಸ್ತ್ರ ಹಾಗೂ ಮಧ್ಯಾಹ್ನ 2.30 ರಿಂದ 3.50 ರವರೆಗೆ ಜೀವಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ. ಎಲ್ಲಾ ವಿಷಯಗಳು 60 ಅಂಕಗಳಿಗೆ ಸೀಮಿತವಾಗಿರುತ್ತದೆ. ದಾವಣಗೆರೆ ನಗರದಲ್ಲಿನ 28 ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಒಟ್ಟು 12875 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದಾರೆ.

ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಬೇಕು, ಜೊತೆಗೆ ಗಾಳಿ, ಬೆಳಕು ಸರಿಯಾಗಿರಬೇಕು. ಕೆಲವು ಕಾಲೇಜುಗಳಲ್ಲಿ ಶೌಚಾಲಯದ ಬಳಿ ಇರುವ ಕೊಠಡಿಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದರು.

ವಶ್ತ್ರಸಂಹಿತೆ

ಸಿಇಟಿ-2025 ಬರೆಯುವ ಪುರುಷ, ಮಹಿಳೆಯರು ವಸ್ತ್ರಸಂಹಿತೆ ಪರಿಪಾಲನೆ ಮಾಡಬೇಕು. ಪುರುಷ ಅಭ್ಯರ್ಥಿಗಳು; ಪರೀಕ್ಷಾ ದಿನದಂದು ಪೂರ್ಣತೋಳಿನ ಶರ್ಟ್‍ಗಳನ್ನು ಅನುಮತಿಸಲಾಗುವುದಿಲ್ಲ, ಅರ್ಧತೋಳಿನ ಶರ್ಟ್‍ಗಳನ್ನು ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ರಹಿತ ಸಾಧಾರಣ ಶರ್ಟ್, ಟೀ ಶರ್ಟ್ ಧರಿಸಬೇಕು. ಕುರ್ತಾ ಪೈಜಾನು, ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ. ಜೇಬುಗಳು ಇಲ್ಲದಿರುವ, ಕಮ್ಮಿಜೇಬಿಗಳಿರುವ ಪ್ಯಾಂಟ್ ಮತ್ತು ಸರಳ ಪ್ಯಾಂಟ್ ಧರಿಸಬೇಕು. ಬಟ್ಟೆಗಳು ಹಗುರವಾಗಿರಬೇಕು. ಜಿಪ್ ಪಾಕೆಟ್‍ಗಳು, ಪಾಕೆಟ್‍ಗಳು, ದೊಡ್ಡ ಬಟನ್‍ಗಳು ಮತ್ತು ವಿಸ್ತಾರವಾದ ಕಸೂತಿ ಬಟ್ಟೆಗಳಿರಬಾರದು. ಪರೀಕ್ಷಾ ಕೊಠಡಿಯಲ್ಲಿ ಶೂಗಳು ನಿಷಿದ್ದವಾಗಿದ್ದು ಸ್ಯಾಂಡಲ್ ಅಥವಾ ತೆಳುವಾದ ಅಡಿಭಾಗದ ಚಪ್ಪಲಿಗಳನ್ನು ಧರಿಸಬೇಕು. ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣ ಧರಿಸುವುದು ಅಥವಾ ಕಿವಿಯೋಲೆ, ಉಂಗುರುಗಳು, ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ.

ಮಹಿಳಾ ಅಭ್ಯರ್ಥಿಗಳು

ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‍ಗಳು ಅಥವಾ ಬಟನ್‍ಗಳು ಹೊಂದಿರುವ ಬಟ್ಟೆಗಳ ಧರಿಸುವುದು ನಿಷಿದ್ದ, ಪೂರ್ಣ ತೋಳಿನ ಬಟ್ಟೆ, ಜೀನ್ಸ್ ಪ್ಯಾಂಟ್ ಧರಿಸಬಾರದು. ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಮುಜುಗರವಾಗದಂತೆ ಮತ್ತು ವಸ್ತ್ರ ಸಂಹಿತೆಯಂತೆ ಬಟ್ಟೆ ಧರಿಸಬೇಕು. ಹೀಲ್ಡ್ ಚಪ್ಪಲಿ, ಶೂಗಳನ್ನು ಧರಿಸಬಾರದು, ತೆಳುವಾದ ಅಡಿಪಾಯವಿರುವ ಚಪ್ಪಲಿ ಧರಿಸಬೇಕು. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ಲೋಹದ ಆಭರಣ ಧರಿಸುವಂತಿಲ್ಲ.

ಎಲೆಕ್ಟ್ರಾನಿಕ್ಸ್ ವಸ್ತುಗಳ ನಿಷೇಧ

ಡ್ರೆಸ್ ಕೋಡ್ ಜೊತೆಗೆ ಎಲೆಕ್ಟ್ರಾನಿಕ್ಸ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಬ್ಲೂಟೂಥ್, ಕೈ ಗಡಿಯಾರಗಳನ್ನು ಕೊಠಡಿಗೆ ತರುವಂತಿಲ್ಲ. ತಿನ್ನಬಹುದಾದ ವಸ್ತುಗಳನ್ನು ತರುವಂತಿಲ್ಲ, ಬಣ್ಣದ ಹಾಗೂ ಲೋಹದ ಕುಡಿಯುವ ನೀರಿನ ಬಾಟಲಿಗೂ ಅನುಮತಿ ಇಲ್ಲ, ಕೇಂದ್ರದಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.

ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್, ಲಾಗ್ ಟೇಬಲ್ ಕೇಂದ್ರದೊಳಗೆ ತರುವಂತಿಲ್ಲ. ತಲೆಯ ಮೇಲೆ ಟೋಪಿ ಧರಿಸುವಂತಿಲ್ಲ ಹಾಗೂ ಮುಖಮುಚ್ಚುವಂತ ಮಾಸ್ಕ್ ಧರಿಸುವಂತಿಲ್ಲ.

ಅನುಮತಿಸಲಾದ ವಸ್ತುಗಳು

ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರಬೇಕು. ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಪರೀಕ್ಷಾ ಕೊನೆಯ ಬೆಲ್ ಆಗುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ಇರುವುದಿಲ್ಲ.

ಪರೀಕ್ಷಾ ಕೇಂದ್ರ ಪ್ರವೇಶ ಅವಧಿ

ಅಭ್ಯರ್ಥಿಗಳು ಕೇಂದ್ರದೊಳಗೆ ಕನಿಷ್ಠ ಮೊದಲ ಬೆಲ್ ಆಗುವ 2 ಗಂಟೆ ಮುಂಚಿತವಾಗಿ ಹಾಜರಿರಬೇಕು. ಕೇಂದ್ರದಲ್ಲಿ ಕೊಠಡಿ ಪ್ರವೇಶಕ್ಕೂ ಮುನ್ನ ಅಭ್ಯರ್ಥಿಗಳ ಮುಖವನ್ನಾಧರಿಸಿ ಆಫ್ ಮೂಲಕ ಗುರುತು ಪತ್ತೆ ಮಾಡುವ ಕಾರ್ಯ ನಡೆಯಲಿದೆ. ಮತ್ತು ಎಲ್ಲಾ ಅಭ್ಯರ್ಥಿಗಳ ಸಂಪೂರ್ಣ ತಪಾಸಣೆ ನಡೆಯುವುದರಿಂದ ಮೊದಲ ಬೆಲೆ ಆಗುವ ಮುನ್ನ 2 ಗಂಟೆಗಳ ಕಾಲ ಮುಂಚಿತವಾಗಿ ಕೇಂದ್ರದಲ್ಲಿರಬೇಕು. ಬೆಳಗ್ಗೆ 10.20 ಕ್ಕೆ ಮತ್ತು ಮಧ್ಯಾಹ್ನ 2.20 ಕ್ಕೆ ಮೊದಲ ಬೆಲೆ ಆಗಲಿದೆ.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಹಾಗೂ ಎಲ್ಲಾ ಕಾಲೇಜಿನ ಪ್ರಾಂಶುಪಾಲರು, ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೊಂಕಣ ರೈಲ್ವೆ, ಹಾಸನ-ಮಂಗಳೂರು ರೈಲ್ವೆ ಅಭಿವೃದ್ಧಿ ನಿಗಮ ಮತ್ತು ಭಾರತೀಯ ರೈಲ್ವೆ ವಿಲೀನ ಪ್ರಯತ್ನ ಪ್ರಗತಿಯಲ್ಲಿ

Published

on

ಸುದ್ದಿದಿನಡೆಸ್ಕ್:ಕೊಂಕಣ ರೈಲ್ವೆ ಹಾಗೂ ಹಾಸನ-ಮಂಗಳೂರು ರೈಲ್ವೆ ಅಭಿವೃದ್ಧಿ ನಿಗಮ – HMRDCL ಅನ್ನು ಭಾರತೀಯ ರೈಲ್ವೆ ಜೊತೆ ವಿಲೀನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಲೀನ ಪ್ರಕ್ರಿಯೆ ನಡೆದರೆ ಈ ಭಾಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಸಾಗಿದೆ ಎಂದರು. ಮಂಗಳೂರು-ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ಹೆದ್ದಾರಿ ಹಾಗೂ ರೈಲು ಮಾರ್ಗ ಅಭಿವೃದ್ಧಿಗೆ ಸಂಬಂಧಿಸಿ ವಿಸೃತ ಕಾರ್ಯಸಾಧ್ಯತಾ ವರದಿ – ಡಿಪಿಆರ್ ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ.

ಶಿರಾಡಿ ಘಾಟ್ ಹೆದ್ದಾರಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ – ಎನ್‌ಎಚ್‌ಎಐ ಹಾಗೂ ಶಿರಾಡಿ ಘಾಟ್‌ನಲ್ಲಿ ಪ್ರತ್ಯೇಕ ರೈಲು ಮಾರ್ಗ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಕೂಡ ಡಿಪಿಆರ್ ಸಿದ್ಧಪಡಿಸಲು ಮುಂದಾಗಿದೆ ಎಂದು ಸಂಸದರು ತಿಳಿಸಿದರು.

ಎರಡು ಇಲಾಖೆಗಳು ಪ್ರತ್ಯೇಕವಾಗಿ ಡಿಪಿಆರ್ ಸಿದ್ಧಪಡಿಸಿದರೆ ಅನುಮೋದನೆಗೆ ಕಷ್ಟವಾಗುತ್ತದೆ. ಇದರ ಬದಲು ಎರಡು ಇಲಾಖೆಗಳು ಸೇರಿ ಒಂದೇ ಡಿಪಿಆರ್ ಸಿದ್ಧಪಡಿಸಬೇಕು. ಆಗ ಪರಿಸರ ಇಲಾಖೆಯ ನಿರಪೇಕ್ಷಣೆ ಪಡೆದುಕೊಳ್ಳಲು ಅನುಕೂಲವಾಗಲಿದೆ. ಅಲ್ಲದೆ ಇದರಿಂದ ಪರಿಸರ ಹಾನಿಯ ಪ್ರಮಾಣವನ್ನೂ ತಗ್ಗಿಸಲು ಸಾಧ್ಯವಾಗಲಿದೆ ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ. ಆದಾಗ್ಯೂ ಈ ಕುರಿತಂತೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರ ಜೊತೆ ಚರ್ಚೆ ನಡೆಸಲಾಗಿದ್ದು, ಜಂಟಿ ಡಿಪಿಆರ್‌ನಿಂದ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸಂಸದ ಚೌಟ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending