ದಿನದ ಸುದ್ದಿ
ದಾವಣಗೆರೆ | ಏಪ್ರಿಲ್ 16, 17 ರಂದು ಸಿಇಟಿ ಪರೀಕ್ಷೆ : ಜಿಲ್ಲೆಯ 28 ಕೇಂದ್ರಗಳಲ್ಲಿ 12875 ವಿದ್ಯಾರ್ಥಿಗಳು
ಸುದ್ದಿದಿನ,ದಾವಣಗೆರೆ:ಸಿಇಟಿ-2025 ರ ಪರೀಕ್ಷೆಯು ಏಪ್ರಿಲ್ 16 ಮತ್ತು 17 ರಂದು ರಾಜ್ಯಾದ್ಯಂತ ನಡೆಯಲಿದ್ದು ದಾವಣಗೆರೆಯಲ್ಲಿ 28 ಕೇಂದ್ರಗಳಲ್ಲಿ 12875 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು. ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಎಲ್ಲಾ ಕೇಂದ್ರಗಳ ಪ್ರಾಂಶುಪಾಲರು ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಿಇಟಿ ಪರೀಕ್ಷಾಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಏಪ್ರಿಲ್ 16 ರಂದು ಬೆಳಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಏ.17 ರಂದು ಬೆಳಗ್ಗೆ 10.30 ರಿಂದ 11.50 ರ ವರೆಗೆ ಗಣಿತಶಾಸ್ತ್ರ ಹಾಗೂ ಮಧ್ಯಾಹ್ನ 2.30 ರಿಂದ 3.50 ರವರೆಗೆ ಜೀವಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ. ಎಲ್ಲಾ ವಿಷಯಗಳು 60 ಅಂಕಗಳಿಗೆ ಸೀಮಿತವಾಗಿರುತ್ತದೆ. ದಾವಣಗೆರೆ ನಗರದಲ್ಲಿನ 28 ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಒಟ್ಟು 12875 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದಾರೆ.
ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಬೇಕು, ಜೊತೆಗೆ ಗಾಳಿ, ಬೆಳಕು ಸರಿಯಾಗಿರಬೇಕು. ಕೆಲವು ಕಾಲೇಜುಗಳಲ್ಲಿ ಶೌಚಾಲಯದ ಬಳಿ ಇರುವ ಕೊಠಡಿಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದರು.
ವಶ್ತ್ರಸಂಹಿತೆ
ಸಿಇಟಿ-2025 ಬರೆಯುವ ಪುರುಷ, ಮಹಿಳೆಯರು ವಸ್ತ್ರಸಂಹಿತೆ ಪರಿಪಾಲನೆ ಮಾಡಬೇಕು. ಪುರುಷ ಅಭ್ಯರ್ಥಿಗಳು; ಪರೀಕ್ಷಾ ದಿನದಂದು ಪೂರ್ಣತೋಳಿನ ಶರ್ಟ್‍ಗಳನ್ನು ಅನುಮತಿಸಲಾಗುವುದಿಲ್ಲ, ಅರ್ಧತೋಳಿನ ಶರ್ಟ್‍ಗಳನ್ನು ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ರಹಿತ ಸಾಧಾರಣ ಶರ್ಟ್, ಟೀ ಶರ್ಟ್ ಧರಿಸಬೇಕು. ಕುರ್ತಾ ಪೈಜಾನು, ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ. ಜೇಬುಗಳು ಇಲ್ಲದಿರುವ, ಕಮ್ಮಿಜೇಬಿಗಳಿರುವ ಪ್ಯಾಂಟ್ ಮತ್ತು ಸರಳ ಪ್ಯಾಂಟ್ ಧರಿಸಬೇಕು. ಬಟ್ಟೆಗಳು ಹಗುರವಾಗಿರಬೇಕು. ಜಿಪ್ ಪಾಕೆಟ್‍ಗಳು, ಪಾಕೆಟ್‍ಗಳು, ದೊಡ್ಡ ಬಟನ್‍ಗಳು ಮತ್ತು ವಿಸ್ತಾರವಾದ ಕಸೂತಿ ಬಟ್ಟೆಗಳಿರಬಾರದು. ಪರೀಕ್ಷಾ ಕೊಠಡಿಯಲ್ಲಿ ಶೂಗಳು ನಿಷಿದ್ದವಾಗಿದ್ದು ಸ್ಯಾಂಡಲ್ ಅಥವಾ ತೆಳುವಾದ ಅಡಿಭಾಗದ ಚಪ್ಪಲಿಗಳನ್ನು ಧರಿಸಬೇಕು. ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣ ಧರಿಸುವುದು ಅಥವಾ ಕಿವಿಯೋಲೆ, ಉಂಗುರುಗಳು, ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ.
ಮಹಿಳಾ ಅಭ್ಯರ್ಥಿಗಳು
ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‍ಗಳು ಅಥವಾ ಬಟನ್‍ಗಳು ಹೊಂದಿರುವ ಬಟ್ಟೆಗಳ ಧರಿಸುವುದು ನಿಷಿದ್ದ, ಪೂರ್ಣ ತೋಳಿನ ಬಟ್ಟೆ, ಜೀನ್ಸ್ ಪ್ಯಾಂಟ್ ಧರಿಸಬಾರದು. ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಮುಜುಗರವಾಗದಂತೆ ಮತ್ತು ವಸ್ತ್ರ ಸಂಹಿತೆಯಂತೆ ಬಟ್ಟೆ ಧರಿಸಬೇಕು. ಹೀಲ್ಡ್ ಚಪ್ಪಲಿ, ಶೂಗಳನ್ನು ಧರಿಸಬಾರದು, ತೆಳುವಾದ ಅಡಿಪಾಯವಿರುವ ಚಪ್ಪಲಿ ಧರಿಸಬೇಕು. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ಲೋಹದ ಆಭರಣ ಧರಿಸುವಂತಿಲ್ಲ.
ಎಲೆಕ್ಟ್ರಾನಿಕ್ಸ್ ವಸ್ತುಗಳ ನಿಷೇಧ
ಡ್ರೆಸ್ ಕೋಡ್ ಜೊತೆಗೆ ಎಲೆಕ್ಟ್ರಾನಿಕ್ಸ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಬ್ಲೂಟೂಥ್, ಕೈ ಗಡಿಯಾರಗಳನ್ನು ಕೊಠಡಿಗೆ ತರುವಂತಿಲ್ಲ. ತಿನ್ನಬಹುದಾದ ವಸ್ತುಗಳನ್ನು ತರುವಂತಿಲ್ಲ, ಬಣ್ಣದ ಹಾಗೂ ಲೋಹದ ಕುಡಿಯುವ ನೀರಿನ ಬಾಟಲಿಗೂ ಅನುಮತಿ ಇಲ್ಲ, ಕೇಂದ್ರದಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.
ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್, ಲಾಗ್ ಟೇಬಲ್ ಕೇಂದ್ರದೊಳಗೆ ತರುವಂತಿಲ್ಲ. ತಲೆಯ ಮೇಲೆ ಟೋಪಿ ಧರಿಸುವಂತಿಲ್ಲ ಹಾಗೂ ಮುಖಮುಚ್ಚುವಂತ ಮಾಸ್ಕ್ ಧರಿಸುವಂತಿಲ್ಲ.
ಅನುಮತಿಸಲಾದ ವಸ್ತುಗಳು
ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರಬೇಕು. ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಪರೀಕ್ಷಾ ಕೊನೆಯ ಬೆಲ್ ಆಗುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ಇರುವುದಿಲ್ಲ.
ಪರೀಕ್ಷಾ ಕೇಂದ್ರ ಪ್ರವೇಶ ಅವಧಿ
ಅಭ್ಯರ್ಥಿಗಳು ಕೇಂದ್ರದೊಳಗೆ ಕನಿಷ್ಠ ಮೊದಲ ಬೆಲ್ ಆಗುವ 2 ಗಂಟೆ ಮುಂಚಿತವಾಗಿ ಹಾಜರಿರಬೇಕು. ಕೇಂದ್ರದಲ್ಲಿ ಕೊಠಡಿ ಪ್ರವೇಶಕ್ಕೂ ಮುನ್ನ ಅಭ್ಯರ್ಥಿಗಳ ಮುಖವನ್ನಾಧರಿಸಿ ಆಫ್ ಮೂಲಕ ಗುರುತು ಪತ್ತೆ ಮಾಡುವ ಕಾರ್ಯ ನಡೆಯಲಿದೆ. ಮತ್ತು ಎಲ್ಲಾ ಅಭ್ಯರ್ಥಿಗಳ ಸಂಪೂರ್ಣ ತಪಾಸಣೆ ನಡೆಯುವುದರಿಂದ ಮೊದಲ ಬೆಲೆ ಆಗುವ ಮುನ್ನ 2 ಗಂಟೆಗಳ ಕಾಲ ಮುಂಚಿತವಾಗಿ ಕೇಂದ್ರದಲ್ಲಿರಬೇಕು. ಬೆಳಗ್ಗೆ 10.20 ಕ್ಕೆ ಮತ್ತು ಮಧ್ಯಾಹ್ನ 2.20 ಕ್ಕೆ ಮೊದಲ ಬೆಲೆ ಆಗಲಿದೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಹಾಗೂ ಎಲ್ಲಾ ಕಾಲೇಜಿನ ಪ್ರಾಂಶುಪಾಲರು, ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ರಮೇಶ್ ದೇಸಾಯಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದಿಂದ ವಿತರಣೆಯಾದ ಟೂಲ್‌ಕಿಟ್‌ಗಳನ್ನು ನಿಯಮಾನುಸಾರ ವಿತರಣೆ ಮಾಡದೆ ವಂಚಿಸಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ, ಮಾಹಿತಿ ಕೋರಲಾಗಿತ್ತು.
ಪ್ರಾಚಾರ್ಯರು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿ ಫಾರ್ ಸಹಿಯೊಂದಿಗೆ ಹಿಂಬರಹ ನೀಡಲಾಗಿರುತ್ತದೆ. ಮಾಹಿತಿ ಅಧಿಕಾರಿ, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿರುವ ಫಾರ್ ಸಹಿಯೇ ಪ್ರಾಚಾರ್ಯರ ಹೆಸರಿನ ಪತ್ರದಲ್ಲಿ ನಮೂದಾಗಿರುತ್ತದೆ. ಸದರಿ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಾಚಾರ್ಯರೇ ಆಗಿರುತ್ತಾರೆ.
ಹೀಗಿರುವಾಗ ಪಾಚಾರ್ಯರ ಮುದ್ರೆ ಇರುವಲ್ಲಿ ಫಾರ್ ಎಂಬುದಾಗಿ ನಮೂದಿಸಿ ಸಹಿ ಮಾಡಿ, ಮಾಹಿತಿ ಅಧಿಕಾರಿ ಎಂಬ ಮುದ್ರೆಗೆ ಫಾರ್ ಬಳಸದೆ ಸಹಿ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು.
ಆದರೆ ಜಂಟಿ ನಿರ್ದೇಶಕರು, ಕೌಶಲ್ಯ ಅಭಿವೃದ್ದಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳ್ಳಿ ಇವರಿಗೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್‌ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಇಲಾಖಾ ತನಿಖೆ ನಡೆಸದೆ ಕಾಲ ವಿಳಂಬ ಮಾಡುತ್ತಿರುವ ಚಿತ್ರದುರ್ಗ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ 06 ಅರ್ಜಿ ಸಲ್ಲಿಸಿ, ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಉಪವಿಭಾಗಗಳಿಗೆ ಬಿಡುಗಡೆಯಾದ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿದ್ದರು.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ಸದರಿ ಪ್ರಕರಣವನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿದ್ದರು.
ನಿಯಮಾನುಸಾರ ಇಲಾಖೆ ತನಿಖೆ ನಡೆಸದೆ ಕಾಲ ವಿಳಂಬ ಮಾಡುವ ಉದ್ದೇಶದಿಂದ 6 ತಾಲ್ಲೂಕು ಉಪ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಆದೇಶ ಹೊರಡಿದ್ದು, ಇದರಂತೆ ವಕೀಲ ಡಾ.ಕೆ.ಎ.ಓಬಳಪ್ಪ ಇವರು ಎಲ್ಲಾ ಉಪವಿಭಾಗಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡಿದಾಗ ದಾಖಲೆಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ.
ಈ ಬಗ್ಗೆ ಕಾರ್ಯಪಾಲಕ ಅಭಿಯಂತರರಿಗೆ ದೂರು ನೀಡಿದರೂ ನಿರ್ಲಕ್ಷö್ಯ ತೋರಿದ ಕಾರಣ, ಕರ್ತವ್ಯ ಲೋಪದ ಅಡಿಯಲ್ಲಿ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂಗ್ಲೀಶ್ ಪಠ್ಯಕ್ರಮ ಕಾರ್ಯಗಾರ
ಸುದ್ದಿದಿನ,ದಾವಣಗೆರೆ:ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರ ವೇದಿಕೆಯ (FODCET) ಸಂಯುಕ್ತ ಆಶ್ರಯದಲ್ಲಿ “ರಾಜ್ಯ ಶಿಕ್ಷಣ ನೀತಿ (S.E.P) ಇಂಗ್ಲೀಷ್ ಪಠ್ಯಕ್ರಮ” ಕುರಿತ ಒಂದು ದಿನದ ಕಾರ್ಯಗಾರವನ್ನು ದಿನಾಂಕ 02-03-2026 ರಂದು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಕರಿಬಸಪ್ಪ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ದಾವಣಗೆರೆ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಡಾ. ಲೋಕೇಶ್ ಎಂ.ಯು. ಭಾಗವಹಿಸಿ, ಎಸ್.ಇ.ಪಿ ಪಠ್ಯಕ್ರಮದ ಉದ್ದೇಶ, ವಿನ್ಯಾಸ ಮತ್ತು ಪರಿಣಾಮಕಾರಿತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಗ್ಲೀಷ್ ವಿಭಾಗದ ಸಂಯೋಜಕರಾದ ಡಾ. ಫಕ್ಕೀರೇಶ ಹಳ್ಳಳ್ಳಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಈ ಕಾರ್ಯಗಾರದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಪದವಿ ಕಾಲೇಜುಗಳಲ್ಲಿ ಇಂಗ್ಲೀಷ್ ಭಾಷೆ ಮತ್ತು ಸಾಹಿತ್ಯ ಬೋಧಿಸುವ ಪ್ರಾಧ್ಯಾಪಕರು ಭಾಗವಹಿಸಿ, ಪಠ್ಯಕ್ರಮದ ಅನುಷ್ಠಾನ, ಬೋಧನಾ ವಿಧಾನಗಳು ಹಾಗೂ ಮೌಲ್ಯಮಾಪನ ಕ್ರಮಗಳ ಕುರಿತು ವಿಚಾರ ವಿನಿಮಯ ನಡೆಸಿದರು.ಸ.ಪ್ರ.ದ. ಮಹಿಳಾ ಕಾಲೇಜಿನಲ್ಲಿ ಇಂಗ್ಲೀಷ್ ಪಠ್ಯಕ್ರಮ ಕುರಿತ ಮಹತ್ವದ ಕಾರ್ಯಗಾರ ಯಶಸ್ವಿ.
ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಡಾ. ಜಯಪ್ಪ, ಡಾ. ಭೀಮಪ್ಪ, ಡಾ. ಮಹೇಶ್ ನಾಯ್ಕ್, ಡಾ.ಮಧುಸೂದನ್, ಡಾ. ವಿಜಯಕುಮಾರ್, ಡಾ. ನಾಗನಗೌಡ ಹಾಗೂ ಡಾ. ಶಿವರಾಜ್, ಡಾ. ತ್ರಿವೇಣಿ, ಡಾ. ಶಶಿಕಲಾ ಉಪಸ್ಥಿತರಿದ್ದರು.
ಐ ಕ್ಯೂ ಏ ಸಿ ಸಂಯೋಜಕರು ಮತ್ತು ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ. ಭೀಮಪ್ಪ ಎಂ ಪಿ ಕಾರ್ಯಕ್ರಮದ ಕುರಿತು ಪ್ರಸ್ತಾಪಿಸಿ ಮತ್ತು ಸ್ವಾಗತಿಸಿದರು, ಇತಿಹಾಸ ವಿಭಾಗದ ಮುಖ್ಯಸ್ಥರು ವಂದಿಸಿದರು ಮತ್ತು ಪ್ರೂ. ಮಂಜುನಾಥ ಜಿ ಕಾರ್ಯಕ್ರಮವನ್ನು ನಿರೂಪಿಸಿದರು.
ಇಂಗ್ಲೀಷ್ ಮೇಜರ್ ನಲ್ಲಿ ರ‌್ಯಾಂಕ್ ಪಡೆದವಿದ್ಯಾರ್ಥಿನಿಯರನ್ನು ಇಂಗ್ಲಿಷ್ ವಿಭಾಗದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


