ದಿನದ ಸುದ್ದಿ
ಗ್ರಾಮ ಪಂಚಾಯತಿಗಳಲ್ಲಿ ಪಕ್ಷ ರಾಜಕೀಯ ಬೇಡ : ಸಚಿವ ಕೆ.ಎಸ್. ಈಶ್ವರಪ್ಪ

ಸುದ್ದಿದಿನ,ದಾವಣಗೆರೆ :ಕೋವಿಡ್ ಸಂಕಷ್ಟ ಕಾಲದಲ್ಲಿ ನಗರಗಳಿಂದ ಗ್ರಾಮಗಳಿಗೆ ಮರಳಿದ ಅನೇಕ ಯುವಕರಿಗೆ ಗ್ರಾಮೀಣ ಉದ್ಯೋಗಖಾತ್ರಿ ನರೇಗಾ ಯೋಜನೆ ಸ್ಥಳೀಯವಾಗಿ ಕೆಲಸ ನೀಡುವ ಮೂಲಕ ಆರ್ಥಿಕ ನೆರವು ನೀಡುವುದರ ಜೊತೆಗೆ ಸ್ವಾಭಿಮಾನದ ಬದುಕನ್ನೂ ಸಹ ಕಲಿಸಿಕೊಟ್ಟಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.
75ನೇ ವರ್ಷದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಹಾಗೂ ಜಿಲ್ಲಾ ಪಂಚಾಯತಿ ಇವರುಗಳ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅಭಿವೃದ್ಧಿ ವಿಷಯಗಳ ಕುರಿತು ನಗರದ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ ಒಂದು ದಿನದ ಕಾರ್ಯಗಾರದ ಸಮಾರೋಪ ಭಾಷಣ ಮಾಡಿದರು.
ಕೋವಿಡ್ ಲಾಕ್‍ಡೌನ್ ಪರಿಣಾಮವಾಗಿ ನಗರಗಳಲ್ಲಿ ಉದ್ಯೋಗ ಕಂಡುಕೊಂಡಿದ್ದ ಅನೇಕ ಇಂಜಿನಿಯರ್‍ಗಳು, ಪದವೀಧರರು ಗ್ರಾಮಗಳಿಗೆ ಮರಳಿದ್ದು, ಇಂತಹ ಅನೇಕರು ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿರುವ ನಿದರ್ಶನ ನಮ್ಮ ಮುಂದೆ ಇದೆ. ಕಳೆದ ವರ್ಷ ನರೇಗಾದಡಿ ರಾಜ್ಯಕ್ಕೆ 13 ಕೋಟಿ ಮಾನವದಿನಗಳ ಸೃಜನೆಯ ಗುರಿ ನೀಡಲಾಗಿತ್ತು. ಆದರೆ ಕಳೆದ ಡಿಸೆಂಬರ್ ನಲ್ಲಿಯೇ ಗುರಿ ಮೀರಿ ಸಾಧನೆ ಮಾಡಲಾಯಿತು.
ಹೀಗಾಗಿ ಕೇಂದ್ರ ಸರ್ಕಾರ ಕೂಡ ರಾಜ್ಯಕ್ಕೆ ಶಹಬ್ಬಾಸ್‍ಗಿರಿ ನೀಡಿ, ಇನ್ನೂ 2 ಕೋಟಿ ಹೆಚ್ಚುವರಿ ಮಾನವದಿನಗಳ ಸೃಜನೆಗೆ ಅವಕಾಶ ನೀಡಿ, 800 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿತ್ತು. ಹೀಗಾಗಿ ನರೇಗಾ ಯೋಜನೆ ಗ್ರಾಮೀಣರಿಗೆ ಆರ್ಥಿಕ ಸಬಲತೆ ನೀಡುವುದರ ಜೊತೆಗೆ ಸ್ವಾಭಿಮಾನದ ಬದುಕನ್ನೂ ನೀಡಿದೆ. ಈ ಯೋಜನೆಯಡಿ ಶಾಲಾ ಕಾಂಪೌಂಡ್, ತೋಟಗಾರಿಕೆ ವಿಸ್ತರಣೆ, ಕೃಷಿ ಜಮೀನುಗಳಲ್ಲಿ ಕೆಲಸ, ಕೆರೆ, ಕಲ್ಯಾಣಿ, ಮುಂತಾದ ಜಲರಕ್ಷಣೆ ಪ್ರದೇಶಗಳ ಹೂಳೆತ್ತಿ ಅಭಿವೃದ್ಧಿಪಡಿಸುವುದೂ ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಅವಕಾಶಕೊಟ್ಟಿದೆ.
ಗ್ರಾಮ ಪಂಚಾಯತಿಗಳ ನೇತೃತ್ವ ವಹಿಸಿರುವ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಸರ್ಕಾರದ ಯೋಜನೆಗಳ ಬಗ್ಗೆ ಸರಿಯಾಗಿ ಮಾಹಿತಿ ಪಡೆದುಕೊಳ್ಳಬೇಕು. ಗ್ರಾಮಗಳಲ್ಲಿ ಯಾವುದೇ ಕುಟುಂಬ ಶೌಚಾಲಯ ರಹಿತವಾಗಿರಬಾರದು. ಯಾರೂ ಕೂಡ ರಸ್ತೆಗಳ ಬದಿಯಲ್ಲಿ ಶೌಚಕ್ಕೆ ಹೋಗುವ ಪರಿಸ್ಥಿತಿ ಇರಬಾರದು. ಪ್ರತಿಯೊಂದು ಗ್ರಾ.ಪಂ. ಗಳಲ್ಲಿ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಘಟಕ ಆಗಬೇಕು.
ಸ್ವಸಹಾಯ ಸಂಘದ ಒಕ್ಕೂಟದವರಿಗೆ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ನೀಡಲು ಈಗಾಗಲೆ ಸೂಚನೆ ನೀಡಲಾಗಿದೆ. ಜಿಲ್ಲೆಯ 195 ಗ್ರಾ.ಪಂ. ಗಳ ಪೈಕಿ ಕೇವಲ 13 ಗ್ರಾ.ಪಂ. ಗಳಲ್ಲಿ ಮಾತ್ರ ಘನತ್ಯಾಜ್ಯ ವಿಲೇವಾರಿ ಘಟಕಗಳು ಆಗಿದ್ದು, ಒಂದು ವರ್ಷದ ಒಳಗಾಗಿ ಜಿಲ್ಲೆಯ ಎಲ್ಲ ಗ್ರಾ.ಪಂ. ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭವಾಗಬೇಕು ಎಂದು ಸಚಿವರು ಹೇಳಿದರು.
ಮುಂದಿನ 05 ವರ್ಷಗಳ ಅವಧಿಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ಕೈಗೊಳ್ಳಬೇಕಿರುವ ಕಾರ್ಯಗಳ ಬಗ್ಗೆ ಗುರಿ ನಿಗದಿಪಡಿಸಿಕೊಂಡು, ಪ್ರತಿ ವರ್ಷ ಅದನ್ನು ಸಾಧಿಸುವ ಮೂಲಕ ಮಾದರಿ ಗ್ರಾಮಗಳನ್ನು ನಿರ್ಮಿಸಬೇಕು. ಜನರ ಏಳಿಗೆಗೆ ಶ್ರಮಪಟ್ಟ ಬಗ್ಗೆ ಆತ್ಮತೃಪ್ತಿಯಾಗುವಂತೆ ಕೆಲಸ ಮಾಡಬೇಕು ಎಂದು ಸಚಿವರು ಮನವಿ ಮಾಡಿದರು. ಜಲ ಜೀವನ್ ಮಿಷನ್ ಯೋಜನೆ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಗ್ರಾಮಗಳ ಮನೆ ಮನೆಗೆ ನಳ ಸಂಪರ್ಕದ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒಗಳಿಗೆ ತರಬೇತಿ ಕಾರ್ಯಗಾರವನ್ನು ಜಿಲ್ಲಾ ಮಟ್ಟದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆಯೋಜಿಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಸದ್ಯಸರಿಗೆ ತರಬೇತಿಯನ್ನು ತಾಲ್ಲೂಕು ಮಟ್ಟದಲ್ಲಿ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾ.ಪಂ. ಗಳಿಗೆ ಕೆರೆಗಳ ಉಸ್ತುವಾರಿ
ಈ ಮೊದಲು ಗ್ರಾಮಗಳ ವ್ಯಾಪ್ತಿಯಲ್ಲಿನ ಕೆರೆಗಳು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಡುತ್ತಿದ್ದವು. ಇದೀಗ ಕೆರೆಗಳ ಸಂಪೂರ್ಣ ನಿರ್ವಹಣೆಯ ಹೊಣೆಯನ್ನು ಆಯಾ ಗ್ರಾಮ ಪಂಚಾಯತ್‍ಗಳಿಗೆ ನೀಡಿ ಆದೇಶ ಹೊರಡಿಸಲಾಗಿದೆ. ಹೀಗಾಗಿ ಗ್ರಾಮೀಣ ಕೆರೆಗಳ ಅಭಿವೃದ್ಧಿಯನ್ನು ಆಯಾ ಗ್ರಾ.ಪಂ. ಗಳೇ ನಿರ್ವಹಿಸಬೇಕು. ಕೆರೆಗಳ ಒತ್ತುವಾರಿ ಇದ್ದಲ್ಲಿ, ಡಿಸಿ ಮತ್ತು ಸಿಇಒ ಗಳ ಗಮನಕ್ಕೆ ತಂದು, ನಿಯಮಾನುಸಾರವಾಗಿ ಒತ್ತುವರಿ ತೆರವುಗೊಳಿಸುವುದು ಸೇರಿದಂತೆ ಕೆರೆಗಳ ಸಮಗ್ರ ನಿರ್ವಹಣೆ ಹಾಗೂ ಅಭಿವೃದ್ಧಿಗೆ ಗ್ರಾಮ ಪಂಚಾಯತ್‍ಗಳು ಸಹಕಾರ ನೀಡಬೇಕು ಎಂದು ಸಚಿವರು ಹೇಳಿದರು.
ಗ್ರಾಪಂ ಗಳಲ್ಲಿ ಪಕ್ಷ ರಾಜಕೀಯ ಬೇಡ
ಗ್ರಾಮ ಪಂಚಾಯತ್ ಚುನಾವಣೆಯನ್ನು ಪಕ್ಷ ರಹಿತವಾಗಿ ನಡೆಸುತ್ತೇವೆ. ಹೀಗಾಗಿ ಕೈಮುಗಿದು ಬೇಡಿಕೊಳ್ಳುತ್ತೇನೆ ಗ್ರಾಮ ಪಂಚಾಯತ್ ಮಟ್ಟದ ಚುನಾಯಿತ ಸದಸ್ಯರುಗಳು ಯಾವುದೇ ಕಾರಣಕ್ಕೂ ಪಕ್ಷ ರಾಜಕೀಯ ಮಾಡಬೇಡಿ, ಗ್ರಾಮಗಳ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡಬೇಕು. ರಾಜಕೀಯ ಏನಿದ್ದರೂ ಲೋಕಸಭೆ, ವಿಧಾನಸಭೆ ಚುನಾವಣೆಗೆ ಮಾತ್ರ ಇರಲಿ. ಎಲ್ಲ ಗ್ರಾಮ ಪಂಚಾಯತ್ ಕಚೇರಿಗಳಿಗೂ ಸೋಲಾರ್ ಲೈಟಿಂಗ್ ವ್ಯವಸ್ಥೆ ಕಲ್ಪಿಸಲು ಆದೇಶ ಹೊರಡಿಸಲಾಗಿದ್ದು, ಜಿಲ್ಲೆಯಲ್ಲಿ ಕೇವಲ 25 ಗ್ರಾ.ಪಂ. ಗಳಿಗೆ ಮಾತ್ರ ಅಳವಡಿಸಲಾಗಿದೆ. ಮುಂದಿನ 6 ತಿಂಗಳ ಒಳಗಾಗಿ ಎಲ್ಲ ಗ್ರಾಮ ಪಂಚಾಯತಿ ಕಚೇರಿಗಳಿಗೂ ಸೋಲಾರ್ ಲೈಟಿಂಗ್ ಅಳವಡಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮಗಳ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗುರಿಗಳನ್ನು ಹೊಂದಿರಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಆದ್ಯತೆ, ಜಾಬ್‍ಕಾರ್ಡ್ ವಿತರಣೆ, ಪಿಂಚಣಿ ಸೌಲಭ್ಯ, ಎಬಿಎಆರ್‍ಕೆ ಆರೋಗ್ಯ ಕಾರ್ಡ್, ಲೈಬ್ರರಿ ಮತ್ತು ಓದುವ ಬೆಳಕು ಕಾರ್ಯಕ್ರಮ, ಡಿಜಿಟಲ್ ಲೈಬ್ರರಿ, ಘನತ್ಯಾಜ್ಯ ವಿಲೇವಾರಿ ಸಂಸ್ಕರಣೆ, ಸೋಲಾರ್ ಪ್ರಾಜೆಕ್ಟ್ ಈ ಗುರಿಗಳನ್ನು ಅಭಿವೃದ್ಧಿ ಪಡಿಸಲು ಆದ್ಯತೆ ನೀಡುವಂತೆ ಸಲಹೆ ನೀಡಿದರು. ಅಲ್ಲದೆ ಎಲ್ಲ ಗ್ರಾಮಗಳಲ್ಲೂ ಕೋವಿಡ್‍ನ ಮೂರನೆ ಅಲೆ ನಿಯಂತ್ರಣಕ್ಕೆ ಆದ್ಯತೆ ನೀಡುವಂತೆ ಸೂಚನೆ ನೀಡಿದರು.
ಸಮಾರಂಭದಲ್ಲಿ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್.ಎ. ರವೀಂದ್ರನಾಥ್, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನಾ ಸಮಿತಿಯ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ಅಬ್ದುಲ್ ನಜೀರ್‍ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಂಸ್ಥೆಯ ಗಾಯತ್ರಿ, ಪರಿಸರವಾದಿ ಶಿವಾನಂದ ಕಳವೆ, ಜಯರಾಂ, ಜಿ.ಪಂ ಸಿಇಒ ಡಾ. ವಿಜಯಮಹಾಂತೇಶ್ ದಾನಮ್ಮನವರ್ ಉಪಸ್ಥಿತರಿದ್ದರು.
ನರೇಗಾ ಯೋಜನೆ ಅನುಷ್ಠಾನದಲ್ಲಿ 2019-20 ಹಾಗೂ 2020-21 ನೇ ವರ್ಷದಲ್ಲಿ ಉತ್ತಮ ಸಾಧನೆ ತೋರಿದ ವಿವಿಧ ಅಧಿಕಾರಿಗಳು ಹಾಗೂ ಪಿಡಿಒ ಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಮನೆ ಬೋರ್ ವೆಲ್ ನೀರು ವಾಣಿಜ್ಯ ಉದ್ದೇಶಕ್ಕೆ ಬಳಕೆ ; ಕ್ರಮ ಕೈಗೊಳ್ಳಲು ಸರಸ್ವತಿ ಬಡಾವಣೆ ನಿವಾಸಿಗಳ ಆಗ್ರಹ

ಸುದ್ದಿದಿನ,ದಾವಣಗೆರೆ: ಅಂತರ್ಜಲ ಪ್ರಾಧಿಕಾರದ ನಿರಾಪೇಕ್ಷಣಾ ಪತ್ರವನ್ನು ಪಡೆಯದೆ ಮನೆಯ ಬೋರ್ ವೆಲ್ಲಿನಿಂದ ವಾಣಿಜ್ಯ ಉದ್ದೇಶಕ್ಕಾಗಿ ಸರತಿ ಸಾಲಿನಲ್ಲಿ ಸತತ ನಾಲ್ಕೈದು ವರ್ಷಗಳಿಂದ ಟ್ಯಾಂಕರ್ ಗಳ ಮೂಲಕ ದಿನಕ್ಕೆ 25 ರಿಂದ 50ಕ್ಕೂ ಹೆಚ್ಚು ಟ್ಯಾಂಕರ್ ನೀರನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿದ್ದು, ಈ ಬಗ್ಗೆ ಜಿಲ್ಲಾ ಅಂರ್ತಜಲ ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರಸ್ವತಿ ನಗರ ‘ಸಿ’ ಬ್ಲಾಕ್ನ ಎಲ್ಲಾ ನಿವಾಸಿಗಳು ಒತ್ತಾಯಿಸಿದ್ದಾರೆ.
ಸರಸ್ವತಿ ನಗರ ಬ್ಲಾಕ್ನ ನಿವಾಸಿ ತಮ್ಮ ಮನೆಯ ಬೋರ್ ವೆಲ್ ನಿಂದ ಒಂದೇ ಸಮನೆ ಸತತವಾಗಿ 4-5 ವರ್ಷಗಳಿಂದ ಸರತಿ ಸಾಲಿನಲ್ಲಿ ಟ್ಯಾಂಕರ್ಗಳ ಮೂಲಕ ದಿನಕ್ಕೆ 25 ರಿಂದ 50ಕ್ಕೂ ಹೆಚ್ಚು ಬಾರಿ ವಾಣಿಜ್ಯ ಉದ್ದೇಶಕ್ಕಾಗಿ ತಮ್ಮ ಪ್ರಾಧಿಕಾರದ ಅನುಮತಿ ಪಡೆಯದೆ ನೀರಿನ ಮಾರಾಟ ಮಾಡುತ್ತಿರುತ್ತಾರೆ. ಈ ವಿಷಯವಾಗಿ ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಬೋರ್ ವೆಲ್ ಗಳಲ್ಲಿ ಕಛೇರಿಯ ಹಿರಿಯ ಭೂ ವಿಜ್ಞಾನಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ, ಅದನ್ನು ಲೆಕ್ಕಿಸದೆ ದಿನೇದಿನೇ ಹೆಚ್ಚುಹೆಚ್ಚು, ಟ್ಯಾಂಕರ್ ನೀರನ್ನು ಮಾರಾಟ ಮಾಡುತ್ತಿದ್ದಾರೆ.
ಈ ಕುರಿತು ಕಾಲೋನಿಯ ನಿವಾಸಿಗಳು ಪಾಲಿಕೆ ಸದಸ್ಯ ಕೆ.ಎಂ.ವೀರೇಶ್ ಜತೆಗೂಡಿ ಚಂದ್ರಶೇಖರಪ್ಪ ಅವರಲ್ಲಿ ಹಲವು ಬಾರಿ ವಿನಂತಿಸಿದರೂ, ಲೆಕ್ಕಿಸದೆ ತಮ್ಮ ನೀರಿನ ಮಾರಾಟದ ಅರ್ಭಟವನ್ನು ಮುಂದುವರಿಸಿದ್ದಾರೆ. ಇದರಿಂದಾಗಿ ಕಾಲೋನಿಯ ವಸತಿ ಪ್ರದೇಶದಿಂದ ಕೈಗಾರಿಕಾ ಪ್ರದೇಶವಾಗಿ ಮಾರ್ಪಟ್ಟಿದ್ದು, ಇಲ್ಲಿನ ಮಕ್ಕಳು ವೃದ್ಧರು ರಸ್ತೆಗಳಲ್ಲಿ ಓಡಾಡುವುದು ತುಂಬಾ ಕಷ್ಟವಾಗಿರುತ್ತದೆ, ಇದಲ್ಲದೇ ನಮ್ಮ ಕಾಲೋನಿಯ ಬೋರ್ ವೆಲ್ ಗಳಲ್ಲಿ ನೀರಿನ ಮಟ್ಟ ದಿನೇ-ದಿನೇ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಲಿದೆ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ದಾವಣಗೆರೆಯ ಬಹಳ ಕಾಲೋನಿಗಳಲ್ಲಿ ಮನೆ ಬೋರ್ ವೆಲ್ ಗಳಿಂದ ನೀರಿನ ಮಾರಾಟ ಹಲವು ವರ್ಷಗಳಿಂದ ನಡೆಯುತ್ತಿದೆ. ಆಯಾ ಕಾಲೋನಿಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಾಧಿಕಾರದ ಅನುಮತಿ ಪಡೆಯದೆ ವಾಣಿಜ್ಯ ಉದ್ದೇಶಕ್ಕಾಗಿ ನೀರು ಮಾರಾಟ ಮಾಡುತ್ತಿರುವ ಚಂದ್ರಶೇಖರಪ್ಪರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಬೇಕೆಂದು ಸರಸ್ವತಿ ನಗರ ‘ಸಿ’ ಬ್ಲಾಕಿನ ಎಲ್ಲಾ ನಿವಾಸಿಗಳು ಮನವಿ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಖಾತ್ರಿ ಯೋಜನೆಯ ಅನುಷ್ಟಾನ ಸಮಿತಿಗಳಿಂದ, ಶಾಸಕರ ಘನತೆಗೆ ಕುಂದಿಲ್ಲ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಬೆಂಗಳೂರು:ಗ್ಯಾರಂಟಿ ಅನುಷ್ಟಾನ ಸಮಿತಿಗಳಿಂದ, ಶಾಸಕರ ಘನತೆಗೆ ಕುಂದಿಲ್ಲ; ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಪಕ್ಷ ನಾಯಕರ ಆರೋಪಕ್ಕೆ, ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಅಧಿವೇಶನ ಅನಿರ್ಧಿಷ್ಟಾವಧಿ ಮುಂದೂಡಿಕೆಯಾಗುತ್ತಿದ್ದಂತೆ, ಸಭೆ ಕರೆದು ತಕರಾರು ಪರಿಹರಿಸುವುದಾಗಿ, ತಿಳಿಸಿದರು.
ರಾಜ್ಯ ಸರ್ಕಾರ, ಪಂಚ ಖಾತ್ರಿ ಯೋಜನೆಗಳ ಅನುಷ್ಠಾನಕ್ಕಾಗಿ, ಸಮಿತಿ ರಚಿಸಿ, ರಾಜ್ಯದ ತೆರಿಗೆದಾರರ ಹಣವನ್ನು, ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ, ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಶಾಸಕರು, ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ, ಪ್ರತಿಭಟನೆ ನಡೆಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಮೇಲ್ವಿಚಾರಣಾ ಸಮಿತಿ ರದ್ದು ಪಡಿಸುವಂತೆ, ರಾಜಭವನಕ್ಕೆ ತೆರಳಿ, ರಾಜ್ಯಪಾಲರಿಗೆ ದೂರು ನೀಡಿದರು.
ಖಾತ್ರಿ ಯೋಜನೆಗಳ ಅನುಷ್ಟಾನಕ್ಕೆ ರಚಿಸಲಾಗಿರುವ, ಕಾಂಗ್ರೆಸ್ ಕಾರ್ಯಕರ್ತರ ಸಮಿತಿಗಳನ್ನು ರದ್ದು ಪಡಿಸಿ, ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವಂತೆ, ಪ್ರತಿಪಕ್ಷ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಸದಸ್ಯರು ವಿಧಾನಸಭೆಯಲ್ಲಿ ಧರಣಿ ಮುಂದುವರೆಸಿದ್ದರಿAದ, ಸದನ ಕಲಾಪವನ್ನು ಮಧ್ಯಾಹ್ನದ ವರೆಗೆ ಮುಂದೂಡಲಾಗಿತ್ತು.
ಇಂಧನ ಬೆಲೆ ಏರಿಕೆ, ಸಿಬ್ಬಂದಿ ವೇತನ ಹಾಗೂ ವಾಹನ ಬಿಡಿ ಭಾಗಗಳ ಬೆಲೆ ಹೆಚ್ಚಳದಿಂದ ಉಂಟಾದ, ಆರ್ಥಿಕ ಹೊರೆ ತಗ್ಗಿಸಲು, ಕಳೆದ ಜನವರಿಯಲ್ಲಿ ಬಸ್ ಪ್ರಯಾಣ ದರವನ್ನು, ಶೇಕಡ 15ರಷ್ಟು ಹೆಚ್ಚಿಸಲಾಗಿದೆ ಎಂದು, ಸಾರಿಗೆ ಖಾತೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ, ಬಿಜೆಪಿ ಶಾಸಕ ಕೇಶವಪ್ರಸಾದ್ ಅವರ ಪ್ರಶ್ನೆಗೆ ಸಚಿವರು, ಉತ್ತರಿಸಿದರು.
ರಾಜ್ಯ ಸಾರಿಗೆ ಸಂಸ್ಥೆ ಅಧೀನದ, ನಾಲ್ಕು ಸಾರಿಗೆ ನಿಗಮಗಳು, 5ಸಾವಿರದ 200 ಕೋಟಿ ರೂಪಾಯಿ ನಷ್ಟದಲ್ಲಿವೆ. ನಿಗಮಗಳ ಪುನಃಶ್ವೇತನಕ್ಕೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಎಂದು, ಸಮರ್ಥಿಸಿಕೊಂಡರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನಡೆಸ್ಕ್:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರಡ್‍ಸೆಟ್ ಸಂಸ್ಥೆ ವತಿಯಿಂದ ಮೊಬೈಲ್ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿ ಆಯೋಜಿಸಲಾಗಿದೆ, ಅರ್ಜಿ ಸಲ್ಲಿಸಲು ಮಾರ್ಚ್ 28 ಕೊನೆಯ ದಿನವಾಗಿದೆ.
ತರಬೇತಿ ಏಪ್ರಿಲ್ 17 ರಿಂದ ಪ್ರಾರಂಭವಾಗಲಿದ್ದು, ಆಸಕ್ತ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ತರಬೇತಿ ವಸತಿಯುತವಾಗಿದ್ದು, ಉಚಿತ ಊಟ, ವಸತಿ ನೀಡಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9740982585 ಗೆ ಸಂಪರ್ಕಿಸಬಹುದು ಎಂದು ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ರವಿಕುಮಾರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ; ಇಲ್ಲಿವೆ ಪ್ರಮುಖಾಂಶಗಳು
-
ದಿನದ ಸುದ್ದಿ5 days ago
ಮುಂದಿನ ನಾಯಕರಾಗಿ ತಯಾರಾಗಿ : ಪ್ರೊ ಇಗ್ನಿಸಿಯಸ್
-
ದಿನದ ಸುದ್ದಿ3 days ago
ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಯೇ ಪೂರಕ : ಡಾ.ಬಾಬು
-
ದಿನದ ಸುದ್ದಿ3 days ago
ಸರ್ಕಾರಿ ವೈದ್ಯರು ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಕಾರ್ಯ ನಿರ್ವಹಿಸುವುದು ಕಡ್ಡಾಯ:ಸಚಿವ ಶರಣಪ್ರಕಾಶ್ ಪಾಟೀಲ್
-
ದಿನದ ಸುದ್ದಿ2 days ago
ಸೌಜನ್ಯ ಸಾವು ; ನಾಡಿನಾದ್ಯಂತ ಜನಾಂದೋಲನ : ಹಿರಿಯ ಪತ್ರಕರ್ತ ಪುರಂದರ್ ಲೋಕಿಕೆರೆ
-
ದಿನದ ಸುದ್ದಿ17 hours ago
ಮಾರ್ಚ್ 15 ರಂದು ಬೃಹತ್ ಉದ್ಯೋಗ ಮೇಳ ; ಸಂಜೆ ಬಿಐಇಟಿ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಗೀತ ಪ್ರಭ
-
ದಿನದ ಸುದ್ದಿ16 hours ago
ದಾವಣಗೆರೆಯಲ್ಲಿ ಉದ್ಯೋಗ ಮೇಳ | ಬನ್ನಿ ಭಾಗವಹಿಸಿ, ಉದ್ಯೋಗ ಪಡೆಯಿರಿ
-
ದಿನದ ಸುದ್ದಿ16 hours ago
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’