Connect with us

ದಿನದ ಸುದ್ದಿ

ನಮ್ಮ‌ ಪೂರ್ವಿಕ ಶಿವನೂ ; ಅವರ ಡುಬಾಕು ಸನಾತನವೂ..

Published

on

  • ಹರ್ಷಕುಮಾರ್ ಕುಗ್ವೆ

ಲಿಂಗವು ದೇವರಲ್ಲ ಶಿವನು ದೇವರಲ್ಲ
ಶಕ್ತಿಯೂ ದೇವರಲ್ಲ. ಮನುಷ್ಯನ ಕಲ್ಪನೆಯ ಆಳವನ್ನು ಮೀರಿದ ಯಾವ ದೇವರೂ ಇಲ್ಲ. ಅಸಲಿಗೆ ಇಡೀ ಜಗತ್ತನ್ನು ನಡೆಸುವ ದೇವರೆಂಬುದೇ ಇಲ್ಲ.

ಶಿವನು ನಮ್ಮ ಪೂರ್ವಿಕ, ಗೌರಿ ಅತವಾ ಶಕ್ತಿ ನಮ್ಮ ಪೂರ್ವಿಕಳು. ಗಂಗೆ ನಮ್ಮ ಬದುಕು. ಶಿವನ ಕೊರಳಿನ ನಾಗ ನಮ್ಮ ಕುಲ. ಲಿಂಗ ಫಲವಂತಿಕೆಯ ಸಂಕೇತವೂ ಹೌದು, ಶಿವ ಶಕ್ತಿಯರ ಸಮಾಗಮದ ಸಂಕೇತವೂ ಹೌದು. ನಮ್ಮ ಜನರಿಗೆ ಸಂಕೇತಗಳು ಶಕ್ತಿಯಾಗಿದ್ದವು, ಪ್ರೇರಣೆಯಾಗಿದ್ದವು. ಡೊಳ್ಳು ಹೊಡೆದು ಕೇಕೆ ಹಾಕಿದಾಗ ಮಳೆ ಬಂದರೆ, ನಮ್ಮ ಡೊಳ್ಳಿನ ಸದ್ದಿನ ಶಕ್ತಿಯಿಂದಲೇ, ನಮ್ಮ ಕೇಕೆಯಿಂದಲೇ ಮಳೆ ಬಂತು ಎಂದು ನಂಬಿದರು. ಇದನ್ನು primitive magic ಪರಿಕಲ್ಪನೆ ಎನ್ನಲಾಗಿದೆ.‌ ನಮ್ಮ ಬಳ್ಳಾರಿಯ ಸಂಗನಕಲ್ಲಿನಲ್ಲಿ 3000 ವರ್ಷಗಳ ಹಿಂದೆ ಕಲ್ಲು ಬಂಡೆಗಳ ಮೇಲೆ ಕೆತ್ತಿದ ಹೋರಿ ಮತ್ತು ಉದ್ದ ಕೊಂಬಿನ ಕೆತ್ತನೆಗಳು ಸಹ ಇಂತಹ ಒಂದು ಆದಿಮ ಮಾಂತ್ರಿಕ ಶಕ್ತಿಯ ಆಚರಣೆಯಾಗಿದೆ.

ನಂಬಿಕೆಗಳನ್ನು ಸಂಸ್ಕೃತಿಯಾಗಿ, ಪರಂಪರೆಯಾಗಿ ಗ್ರಹಿಸಬೇಕೇ ಹೊರತು ದೇವರಾಗಿ ಅಲ್ಲ. ದೇವ ಎಂಬ ಕಲ್ಪನೆಯೇ ದ್ರಾವಿಡರಲ್ಲಿ ಇರಲಿಲ್ಲ. 50 ಸಾವಿರ ವರ್ಷಗಳಿಂದ ಬಂದ ಲಿಂಗ- ಯೋನಿ ಪೂಜೆ, ಗೌರಿ ಪೂಜೆ, 9,000 ವರ್ಷಗಳಿಂದ ಬಂದ ಬೂಮ್ತಾಯಿ ಪೂಜೆ, ಅರಳಿ ಮರದ ಪೂಜೆ, ಐದು ಸಾವಿರ ವರ್ಷಗಳಿಂದ ಬಂದ ಶಿವನ ಪೂಜೆ, ಗಣಪತಿ ಪೂಜೆ, ನಾಗನ ಪೂಜೆ, 4000 ವರ್ಷಗಳಿಂದ ಬಂದ ಗತಿಸಿದ ಹಿರೀಕರ ಪೂಜೆ, ಇದರ ಮುಂದುವರಿಕೆಯಾಗಿಯೇ 2600 ವರ್ಷಗಳ ಹಿಂದೆ ಬುದ್ದ ಗುರುವು ತೀರಿದ ಬಳಿಕ ಅವನ ಅಸ್ತಿಯನ್ನು ಇಟ್ಟ ಸ್ತೂಪಗಳನ್ನು ಪೂಜಿಸಿದೆವು, ದೂಪ ಹಾಕಿದೆವು..‌. ಇದುವೇ ಈ ನೆಲದ ಪೂಜನ ಸಂಸ್ಕತಿಯಾಗಿತ್ತು.

‘ದೇವ’ ಮತ್ತು ಅಸುರ ಇಬ್ಬರೂ ಬಂದಿದ್ದು ಮಧ್ಯ ಏಷ್ಯಾದಿಂದ ಹೊರಟಿದ್ದ ಆರ್ಯರಿಂದಲೇ. ಅವರಿಗೆ ಪೂಜೆ ಗೊತ್ತಿರಲಿಲ್ಲ. ಯಜ್ಞ ಗೊತ್ತಿತ್ತು, ಹೋಮ ಗೊತ್ತಿತ್ತು. ‘ದೇವ’ ಅತವಾ “ದ-ಏವ” ಕೂಡಾ ಮೂಲದಲ್ಲಿ ಆರ್ಯರ ಪೂರ್ವಿಕ ಕುಲ ನಾಯಕರೇ ಆಗಿದ್ದಾರು.‌.. ಹೀಗಾಗಿಯೇ ಆರ್ಯ ವೈದಿಕರ ದೇವ ಎಂದರೆ ಅವರ ದಾಯಾದಿಗಳಾಗಿದ್ದ ಪಾರ್ಸಿಯನ್ (ಜೊರಾಸ್ಟ್ರಿಯನ್) ಆರ್ಯ ಅವೆಸ್ತನ್ನರಿಗೆ ಕೆಡುಕಿನ ಸಂಕೇತ‌ವಾಗಿತ್ತು. ಹಾಗೇ ಆರ್ಯ ವೈದಿಕರು ಕೆಡುಕು ಎಂದ ಅಸುರ (ಅಹುರ) ಆರ್ಯ ಅವೆಸ್ತನ್ನರ ಪಾಲಿಗೆ “ನಾಯಕ”ನಾಗಿದ್ದ. ಅವರನ್ನು ಅಹುರ ಮಜ್ದಾ ಎಂದು ಕರೆದು ಆರಾದಿಸಿದರು.

ಭಾರತಕ್ಕೆ ಪ್ರವೇಶಿಸಿದ ಬಳಿಕ ಆರ್ಯ ವೈದಿಕರಿಗೆ ಈ ನೆಲದ ಮೊದಲ ನಿವಾಸಿಗಳ ಮೇಲೆ ಯಜಮಾನಿಕೆ ಸ್ತಾಪಿಸಬೇಕಿತ್ತು. ಅದಕ್ಕಾಗಿ ನಮ್ಮಿಂದ ಪೂಜೆಗೊಳ್ಳುತ್ತಿದ್ದ ಪೂರ್ವಿಕರನ್ನು ತಮ್ಮ “ದೇವರು” ಮಾಡಿದರು. ಆ ದೇವರ ಪೂಜೆಗೆ ಅವರೇ ನಿಂತರು. ತಮ್ಮ ಜುಟ್ಟು ಬಿಟ್ಟುಕೊಂಡು ನಮ್ಮ ಜುಟ್ಟು ಹಿಡಿದರು. ನಾವು ಪೂರ್ವಿಕರನ್ನು ಬಿಟ್ಟು ಕೊಟ್ಟು, ಅವರ ಕೈಯಲ್ಲಿ ದೇವರುಗಳ ಪೂಜೆ ನಡೆಯುವಾಗ ನಮ್ಮ ಪೂರ್ವಿಕರಿಗೆ ಗೊತ್ತೇ ಇರದಿದ್ದ ವೇದ ಮಂತ್ರಗಳನ್ನ ಕೇಳಿ ಪುನೀತರಾದೆವು. ಈ ಮಂತ್ರ ಭಾಷೆಯೇ ದೇವರಿಗೆ ಅರ್ಥವಾಗುವುದು ಎಂದು ಪುಂಗಿದ್ದಕ್ಕೆ ತಲೆಯಾಡಿಸಿ ಕೈಮುಗಿದು ಗರ್ಭಗುಡಿಯ ಹೊರಗೆ ಸಾಲಿನಲ್ಲಿ ನಿಂತೆವು.‌ ಮುಂದಿನ 2000 ವರ್ಷಗಳ ಕಾಲ ಗುಲಾಮರಾದೆವು.‌ ಪುರಾಣಗಳನ್ನು ಕೇಳಿದೆವು, ನಂಬಿದೆವು ಮತಿಗೆಟ್ಟೆವು, ಗತಿಗೆಟ್ಟೆವು.

ಇನ್ನೂ ಉಳಿದಿರುವುದೇನು?
ನಾವು ಶಿವನ ವಕ್ಕಲು, ಗೌರಿ- ಗಂಗೆಯರ ಒಕ್ಕಲು. ಅವರು ಇಂದ್ರ ಅಗ್ನಿಯರ ವಕ್ಕಲಾಗಿದ್ದವರು ತಮ್ಮ ದೇವರಿಗೆ ಕಿಮ್ಮತ್ತಿಲ್ಲ ಎಂದರಿತು ಅವರನ್ನೇ ಬಿಟ್ಟರು. ಈಗ ಹೇಳುತ್ತಾರೆ ನಾವೇ ಸನಾತನರು ಎಂದು! ಅವರ ಡುಬಾಕು ಸನಾತನದಲ್ಲಿ ನಮ್ಮತನ ಕಳೆದುಕೊಂಡ “ಶೂದ್ರ ಮುಂಡೇಮಕ್ಕಳಾಗಿ”, ಅವರಿಗಾಗಿ ಬಾಳು ಬದುಕು ಹಾಳುಮಾಡಿಕೊಂಡು, ಅವರ ಹೋಮ ಹವನ ಮಾಡಿಸಿ, ನಮ್ಮ ಉಳಿಕೆ ಕಾಸು ಕಳೆದುಕೊಂಡು, ಗೌರವ ಗನತೆ ಕಳೆದುಕೊಳ್ಳುವುದೇ ಇವತ್ತಿನ ಸನಾತನ!

– ಹರ್ಷಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!

Published

on

ಸುದ್ದಿದಿನ,ಕುಂಬಳೆ: ಪ್ರೀತಿ ಎನ್ನುವುದು ಸಾವಿನ ನಂತರವೂ ಶಾಶ್ವತ ಎಂಬುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ನಿಶ್ಚಿತಾರ್ಥವಾಗಿದ್ದ ಯುವಕ ಮೃತಪಟ್ಟ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಅಂತ್ಯಸಂಸ್ಕಾರವನ್ನು ಆಕೆಯ ಇಚ್ಛೆಯಂತೆ ಯುವಕನ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ.

ನಡೆದಿದ್ದೇನು?

ಕಿದೂರು ಕುಂಟಂಗೇರಡ್ಕದ ಪ್ರಫುಲ್ಲ (26) ಮತ್ತು ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರಿಗೆ ನಾಲ್ಕು ತಿಂಗಳ ಹಿಂದೆ ಅದ್ಧೂರಿಯಾಗಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ, ಒಂದು ತಿಂಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಣಿ ಮೃತಪಟ್ಟಿದ್ದರು.

ಡೆತ್ ನೋಟ್‌ನಲ್ಲಿತ್ತು ಕೊನೆಯ ಆಸೆ

ತನ್ನ ಭಾವಿ ಪತಿಯ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ಪ್ರಫುಲ್ಲ, ಕಳೆದ ಭಾನುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಆಕೆ ಬರೆದಿದ್ದ ಡೆತ್ ನೋಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. “ನನ್ನ ಮೃತದೇಹವನ್ನು ಮಣಿಯ ಸಮಾಧಿಯ ಸಮೀಪದಲ್ಲೇ ಅಂತ್ಯಸಂಸ್ಕಾರ ಮಾಡಬೇಕು” ಎಂದು ಆಕೆ ತನ್ನ ಕೊನೆಯ ಆಸೆಯನ್ನು ಬರೆದಿಟ್ಟಿದ್ದರು.

ತಮಿಳುನಾಡಿನಲ್ಲಿ ಅಂತ್ಯಕ್ರಿಯೆ

ಯುವತಿಯ ಆಸೆಯಂತೆ ಉಭಯ ಕುಟುಂಬದವರು ಮಾತುಕತೆ ನಡೆಸಿದರು. ಅದರಂತೆ ನಿನ್ನೆ ಕಾಸರಗೋಡಿನಿಂದ ಪ್ರಫುಲ್ಲರ ಮೃತದೇಹವನ್ನು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಪ್ರೇಮಿಗಳಿಬ್ಬರನ್ನು ಸಾವಿನಲ್ಲೂ ಒಂದಾಗಿಸಲಾಯಿತು.

ಅಂತ್ಯಸಂಸ್ಕಾರದ ವೇಳೆ ಎರಡೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಮರುಗುವ ಪ್ರೇಮಕಥೆಗೆ ಕಂಬನಿಯ ವಿದಾಯ ಹೇಳಿದರು. ಈ ವಿಡಿಯೋ ಮತ್ತು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೋಮಾ ಕೋರ್ಸ್‌; ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: 2026-27ನೇ ಶೈಕ್ಷಣಿಕ ಸಾಲಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿನ ಮೂರು ವರ್ಷಗಳ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಹಾಗೂ ಎರಡನೇ ವರ್ಷದ ನೇರ ಪ್ರವೇಶಕ್ಕೆ (Lateral Entry) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ 2026 ರ ಜುಲೈ 01ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 23 ವರ್ಷ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 25 ವರ್ಷ ಮೀರಿರಬಾರದು. ಒಟ್ಟು 39 ಅಭ್ಯರ್ಥಿಗಳನ್ನು (ಪುರುಷ ಮತ್ತು ಮಹಿಳಾ) ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತಿ ತಿಂಗಳು ರೂ. 2,500/- ಗಳ ಶಿಷ್ಯವೇತನ ನೀಡಲಾಗುವುದು., ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು.

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಡಿಪ್ಲೋಮಾ ಕೋರ್ಸ್‌ಗೆ ನೇರ ಪ್ರವೇಶಕ್ಕೆ https://khtigadag.ac.in/AdmissionForm.pdf ಎರಡನೇ ವರ್ಷದ ನೇರ ಪ್ರವೇಶಕ್ಕೆ (Lateral Entry) https://khtigadag.ac.in/Lateralentryadmissionform.pdf ಈ ಲಿಂಕ್‌ಗಳ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಮೇ 30 ರೊಳಗೆ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪುರ, ಗದಗ-ಬೆಟಗೇರಿ-582102 ಇವರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿಗಳಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಕಾಲೇಜು ರಸ್ತೆ, ನಿಟ್ಟುವಳ್ಳಿ, ದಾವಣಗೆರೆ ಅಥವಾ ದೂರವಾಣಿ ಸಂಖ್ಯೆ: 08192-262362 ಸಂಪರ್ಕಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ

Published

on

ಸುದ್ದಿದಿನ,ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂಬುದಾಗಿ ಉಪನ್ಯಾಸಕರೊಬ್ಬರಿಗೆ ಆಮಿಷ ತೋರಿಸಿದ ದುಷ್ಕರ್ಮಿಗಳು 14 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ದಾವಣಗೆರೆಯ ಭೂಮಿಕಾ ನಗರದ ನಿವಾಸಿಯಾಗಿರುವ 52 ವರ್ಷದ ಸರ್ಕಾರಿ ಕಾಲೇಜಿನ ಉಪನ್ಯಾಸಕ ಹಣ ಕಳೆದುಕೊಂಡಿದ್ದಾರೆ.

ಉಪನ್ಯಾಸಕರು ಮೊದಲಿಗೆ ಟೆಲಿಗ್ರಾಂ ಮೂಲಕ ಲಿಂಕ್ ಕ್ಲಿಕ್ ಮಾಡಿದ್ದಾರೆ. ಅಲ್ಲಿ ವಂಚಕರು ಹೇಳಿದಂತೆ ಹಲವು ಲಿಂಕ್​ಗಳನ್ನು ಕ್ಲಿಕ್ ಮಾಡುತ್ತಾ ಹೋಗಿದ್ದು, ಹಂತಹಂತವಾಗಿ ಹಣ ಕಳೆದುಕೊಂಡಿದ್ದಾರೆ.

ಲಾಭದ ನಿರೀಕ್ಷೆಯಲ್ಲಿದ್ದ ಉಪನ್ಯಾಸಕರಿಗೆ ಲಾಭ ಹೋಗಲಿ, ಅಸಲೂ ಬಾರದ ಕಾರಣ ಅನುಮಾನಗೊಂಡು ತಾನು ಹಣ ಕಳೆದುಕೊಂಡಿರುವುದು ದೃಢಪಟ್ಟಿದೆ.‌ ನಂತರ ಸೈಬರ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending