Connect with us

ರಾಜಕೀಯ

ಕನ್ಹಯ್ಯ, ಜಿಗ್ನೇಶ್ ಕಾಂಗ್ರೆಸ್ ಸೇರಿದ್ದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು..?

Published

on

  • ಹರ್ಷಕುಮಾರ್ ಕುಗ್ವೆ

ಮಾಜಿ ಕಮ್ಯುನಿಸ್ಟ್ ಯುವ ಮುಂದಾಳು ಕನ್ಹಯ್ಯ ಕುಮಾರ್ ಮೇಲೆ ನಮ್ಮ ಕೆಲವು ಕಮ್ಯುನಿಸ್ಟ್ ಗೆಳೆಯರು ನಡೆಸುತ್ತಿರುವ ಟ್ರೋಲ್ ಕುರಿತು ನಾನೂ ಒಂದೆರಡು ಪೋಸ್ಟ್ ಹಾಕಿದ್ದಕ್ಕೆ ಕೆಲವರಿಗೆ ಬೇಜಾರಾಗಿದೆ ಎಂದು ತಿಳಿಯಿತು. ನನ್ನ ಉದ್ದೇಶ ಯಾರನ್ನೂ ನೋಯಿಸುವುದಲ್ಲ.

ಆದರೆ ಫ್ಯಾಸಿಸ್ಟರನ್ನು ವಿರೋದಿಸುವಲ್ಲಿ ತಾನು ತೋರಿದ ದಿಟ್ಟತನ, ವಾಕ್ಚಾತುರ್ಯದ ಕಾರಣಕ್ಕೆ ಇಷ್ಟು ದಿನ ಎಲ್ಲರ ಕಣ್ಮಣಿಯಾಗಿದ್ದ ಹೆಮ್ಮೆಯ ಕೂಸಾಗಿದ್ದ ಹುಡುಗನೊಬ್ಬ ಮತ್ತೊಂದು ಪಕ್ಷ ಸೇರಿದ ಕೂಡಲೇ ದ್ರೋಹಿ, ವಂಚಕ ಏನೇನೆಲ್ಲಾ ಆಗಿ ಯಾವ ಮಾರ್ಜಿನ್ ಕೊಡದೇ ನಿಂದಿಸತೊಡಗಿದಾಗ ಆದ ಕಳವಳದಿಂದ ‘ವಾರೆ’ನೋಟದಿಂದ ಒಂದೆರಡು ಸಾಲು ಬರೆಯಬೇಕಾಯಿತು.

ಕನ್ಹಯ್ಯ, ಜಿಗ್ನೇಶ್ ಕಾಂಗ್ರೆಸ್ ಸೇರಿದ್ದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಸೈದ್ಧಾಂತಿಕ, ಸಂಘಟನಾತ್ಮಕ ಬದ್ಧತೆ ಇಲ್ಲದ ಅವಕಾಶವಾದಿಗಳು ಬಂಡವಾಳಶಾಹಿ ಪಕ್ಷವನ್ನು ಸೇರಿಕೊಂಡರು ಎಂದು ಸರಳವಾಗಿ ತೀರ್ಪು ಹೊರಡಿಸಬಹುದೆ? ಖಂಡಿತಾ ಇಂತಹ ನಿಲುವು ಸರಿಯಲ್ಲ ಎಂಬುದು ನನ್ನ ಖಚಿತ ಅಭಿಪ್ರಾಯ. ಯಾಕೆ ಎಂದು ಮುಂದೆ ವಿವರಿಸುವೆ.

ನಾನು ಯಾವುದೇ ಪಕ್ಷದ ಸದಸ್ಯನಾಗಲೀ ವಕ್ತಾರನಾಗಲೀ ಅಲ್ಲ. ಯಾವುದೇ ಒಂದು ಪಕ್ಷದ ಐಡಿಯಾಲಜಿಗೂ ಆತುಕೊಂಡಿಲ್ಲ. ಸಧ್ಯದ ಮಟ್ಟಿಗೆ ಫ್ಯಾಸಿಸ್ಟರನ್ನು ಹೊರತುಪಡಿಸಿದ ಎಲ್ಲಾ ಪಕ್ಷ ಮತ್ತು ಸಂಘಟನೆಗಳ ನಡುವೆ ಯಾವುದಾದರೂ ರೂಪದ ಸಮನ್ವಯ ಆಗಬಹುದೇ ಎಂಬ ಆಸೆ ಇಟ್ಟುಕೊಂಡಿದ್ದೇನೆ.

ನನ್ನ ದೃಷ್ಟಿಯಲ್ಲಿ ಇಂದು ಅವನತಿಯ ಅಂಚಿನಲ್ಲಿರುವ ಭಾರತದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಯಾವುದೋ ರೀತಿಯಲ್ಲಿ ಒಂದುಗೂಡಲೇಬೇಕು, ಇಂತಹ ಒಂದುಗೂಡುವಿಕೆಗೆ ವಿರೋಧವಿರುವವರು ಫ್ಯಾಸಿಸ್ಟ್ ಶಕ್ತಿಗಳಿಗೆ ಪೂರಕವಾಗಿಯೇ ಇರಲು ಸಾಧ್ಯ ಎಂಬ ನಿಲುವು ನನ್ನದು.

ಕೆಲ ವರ್ಷಗಳ ಹಿಂದೆ ಹೆಸರಾಂತ ಪತ್ರಕರ್ತ ರವೀಶ್ ಕುಮಾರ್ ಇಂತಹುದೇ ಒಂದು ಸಲಹೆ ಮುಂದಿಟ್ಟಿದ್ದರು. ದೇಶದ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಸ್ವಯಂ ವಿಸರ್ಜನೆಗೊಂಡು ಹೊಸ ಪಕ್ಷ ಆಗಬೇಕು ಎಂಬ ಒಂದು ಅವಾಸ್ತವಿಕ ಯೋಜನೆಯೊಂದನ್ನು ಅವರು ಮುಂದಿಟ್ಟಿದ್ದರು. ಅವರ ಸಲಹೆ ಜಾರಿಯಾಗಲು ಅಸಾಧ್ಯ ಎಂದರೂ ಅವರ ಆಶಯ ಸರಿಯಾಗಿತ್ತು ಎಂದು ನನ್ನ ಭಾವನೆ.

ವರ್ಷದ ಹಿಂದೆ ಕಾಂಗ್ರೆಸ್ ಸೇರಿದ ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಅವರನ್ನು ‘ಯಾಕೆ ಕಾಂಗ್ರೆಸ್ ಸೇರಿದ್ರಿ? ಅಂತ ಕೇಳಿದ್ದೆ. ಅದಕ್ಕವರು ನೇರ ಉತ್ತರಿಸದೇ ಒಂದು ಉದಾಹರಣೆ ಮೂಲಕ ಹೇಳಿದ್ದರು. ಈಗ ಒಂದು ಮನೆ ಹೊತ್ತಿ ಉರಿಯುತ್ತಿದೆ. ಅದರ ಸನಿಹದಲ್ಲಿ ಒಂದು ಫೈರ್ ಎಂಜಿನ್ ಇದೆ. ಆದರೆ ಅದರಲ್ಲಿ ಇರುವವರು ನಿದ್ದೆ ಮಾಡ್ತಾ ಇದ್ದಾರೆ. ಆ ಮನೆಯಿಂದ ಬಹಳ ದೂರದಲ್ಲಿ ಇರುವ ಫೈರ್ ಇಂಜಿನ್ ಗಳು ಹತ್ತಿರ ಬರೋ ಅಷ್ಟರಲ್ಲಿ ಇಡೀ ಮನೆ ಉರಿದು ಹೋಗತ್ತೆ. ಹೀಗಾಗಿ ಹತ್ತಿರ ಇರುವ ಫೈರ್ ಇಂಜಿನ್ ಹತ್ತಿ ಅದರಲ್ಲಿ ಇರೋರನ್ನ ಎಚ್ಚರಿಸಿ ನಾವೂ ಮನೆಯ ಬೆಂಕಿ ಆರಿಸಲು ಪ್ರಯತ್ನ ಮಾಡಬೇಕಾಗುತ್ತೆ’ ಎಂದು ಹೇಳಿದ್ದರು.

ಈಗ ಜಿಗ್ನೇಶ್, ಕನ್ಹಯ್ಯ ವಿಶಯಕ್ಕೆ ಬರೋಣ. ಕಳೆದ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದಿಂದಲೇ ವಡಗಾಂವ್ ಕ್ಷೇತ್ರದಿಂದ ಜಿಗ್ನೇಶ್ ಪಕ್ಷೇತರ ಅಭ್ಯರ್ಥಿಯಾಗಿ ಆರಿಸಿ ಬಂದಿದ್ದರು. ಅಂದು ತಮ್ಮ ಪಕ್ಷ ಸೇರಲು ಒಪ್ಪದ ಜಿಗ್ನೇಶ್ ಗೆ ರಾಹುಲ್ ಗಾಂಧಿ ಬೆಂಬಲಿಸಿ ಆರಿಸಿ ಬರಲು ಸಹಕರಿಸಿದ್ದರು. ಅಂದಿನ ಸಂದರ್ಭದಲ್ಲಿ ಜಿಗ್ನೇಶ್ ಚುನಾವಣೆಯಲ್ಲಿ ಗೆಲ್ಲಬೇಕೆಂದು ಇಡೀ ದೇಶದ ಶೋಷಿತರು ಬಯಸಿದ್ದರು.

ಯಾಕೆಂದರೆ ಅದು ಕೇವಲ ಜಿಗ್ನೇಶ್ ಗೆಲುವಾಗಿರಲಿಲ್ಲ. ಜಿಗ್ನೇಶ್ ಪ್ರತಿನಿಧಿಸಿದ್ದ ಚಿಂತನೆಗಳ ಗೆಲುವಾಗಿತ್ತು. ಹೀಗಾಗೇ ಜಿಗ್ನೇಶ್ ರನ್ನು ಸೋಲಿಸಲು ಮೋದಿ ಮತ್ತು ಶಾ ಮಾಡಿದ ಪ್ರಯತ್ನ ಅಷ್ಟಿಷ್ಡಿರಲಿಲ್ಲ‌. ಜಿಗ್ನೇಶ್ ಗೆಲುವಿನೊಂದಿಗೆ ನಾವೆಲ್ಲರೂ ಬೀಗಿದ್ದೆವು. ಕರ್ನಾಟದಿಂದಲೂ ಸಾವಿರಾರು ರೂಪಾಯಿಗಳನ್ನು ಸಂಗ್ರಹಿಸಿ ಕಳಿಸಿದ್ದೆವು.

ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಬೇಗುಸರಾಯ್ ನಿಂದ ಸಿಪಿಐ ಪಕ್ಷದ ಅಭ್ಯರ್ಥಿಯಾಗಿ ಕನ್ಹಯ್ಯ ಸ್ಪರ್ದಿಸಿದ್ದರು. ಆಗಲೂ ಇಡೀ ದೇಶದ ಪ್ರಗತಿಪರ ಶಕ್ತಿಗಳು ಕನ್ಹಯ್ಯ ಗೆಲುವಿಗೆ ಆಶಿಸಿದ್ದರು. ಆದರೆ ಮಹಾಘಟಬಂದನ್ ಮಾಡಿದ ಎಡವಟ್ಟಿನಿಂದಾಗಿ ಹಾಗೂ ಬೂಮಿಹಾರ್ ಜಾತಿಯವರು ಬಿಜೆಪಿ ಜೊತೆ ನಿಂತ ಕಾರಣದಿಂದ ಕನ್ಹಯ್ಯ ಬಿಜೆಪಿ ಸ್ಪರ್ಧಿ ಎದುರು ಸೋಲುಂಡರು.

ಈಗ ಮತ್ತೊಂದು ಚುನಾವಣೆ ಬರುತ್ತಲಿದೆ. ಎಂದಿನಂತೆ ಫ್ಯಾಸಿಸ್ಟ್ ರು ಜನರ ಮನಸುಗಳನ್ನು ಒಡೆಯುತ್ತಿದ್ದಾರೆ. ಬೆಂಕಿ ಹಚ್ಚುತ್ತಿದ್ದಾರೆ. ಅವರ ಆಡಳಿತರ ವೈಫಲ್ಯ ಮುಚ್ಚಿಕೊಳ್ಳಲು ಧರ್ಮ ದ್ವೇಷವನ್ನು ದೇಶವ್ಯಾಪಿ ಹರಡುವ ತಯಾರಿ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಮುಂದೆ ಕೆಲವು ಪ್ರಶ್ನೆಗಳು ಎದುರಾಗುತ್ತವೆ.‌

ಅಕಸ್ಮಾತ್ ಮುಂದಿನ ಚುನಾವಣೆಗಳಲ್ಲೂ ಈ ಬ್ರಾಹ್ಮಿನಿಕಲ್ ಫ್ಯಾಸಿಸ್ಟ್ ಶಕ್ತಿಗಳೇ ಗೆಲುವು ಸಾಧಿಸಿದರೆ ಭಾರತದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ ತತ್ವಗಳ ಸ್ಥಿತಿ ಎಲ್ಲಿಗೆ ತಲುಪಬಹುದು? ಈಗಾಗಲೇ ಡಾ.ಆನಂದ್ ತೇಲ್ತುಂಬ್ಡೆ, ಸಂಜೀವ್ ಭಟ್, ರೋಣಾ ಮುಂತಾದ ಪ್ರಜಾತಂತ್ರ ಮುಂದಾಳುಗಳನ್ನು ಜೈಲಿನಲ್ಲಿ ಕೊಳೆಸುತ್ತಿರುವ ಇವರು ಮತ್ತೊಂದು ಅಧಿಕಾರಕ್ಕೆ ಬಂದರೆ ಯಾವ ರೀತಿ ಆಡಳಿತ ನಡೆಸಬಹುದು?

ಇಂತಹ ಒಂದು ಪ್ರಜಾಪ್ರಭುತ್ವದ ಬಿಕ್ಕಟ್ಟಿನ ಸನ್ನಿವೇಶದಲ್ಲಿ ನಮ್ಮ ನಡೆ ಏನಾಗಬೇಕು?

ಕಮ್ಯುನಿಸ್ಟ್, ಬಿ ಎಸ್ ಪಿ, ಎಸ್ಡಿಪಿಐ ಗಳು ಫ್ಯಾಸಿಸ್ಟರನ್ನು ಅಧಿಕಾರದಿಂದ ತಡೆಯಲು ನಿಜಕ್ಕೂ ಸಮರ್ಥವಾಗಿವೆಯಾ? ಅವುಗಳ ತತ್ವ ಚಿಂತನೆಗಳು ಉತ್ತಮವೂ ಉದಾತ್ತವೂ ಇರಬಹುದು. ಆದರೆ ತಕ್ಷಣದ ಅಜೆಂಡಾ ಒಂದು ದೇಶದ ಮುಂದಿದೆಯಲ್ಲವೆ?

ಇಂತಹ ಸನ್ನಿವೇಶದಲ್ಲಿ ಪ್ರಾಯಶಃ ಕಾಂಗ್ರೆಸ್ ಉಳಿದ ಪಕ್ಷಗಳಿಗಿಂತ ಉತ್ತಮ ಎಂದುಕೊಂಡು ಜಿಗ್ನೇಶ್, ಕನ್ಹಯ್ಯ, ಸೆಂಥಿಲ್ ತರದವರು ಕಾಂಗ್ರೆಸ್ ಸೇರಿಕೊಂಡಿದ್ದರೆ ಅದರ ಬಗ್ಗೆ ತೀರಾ ಬೇಸರ ಪಟ್ಟುಕೊಳ್ಳುವ ಅಗತ್ಯ ನನಗಂತೂ ಕಾಣುತ್ತಿಲ್ಲ.‌

ಹಾಗಂತ ಕಾಂಗ್ರೆಸ್ ಸರಿಯಾದ ಆಯ್ಕೆಯಾ? ಅಲ್ಲಿ ಎಲ್ಲವೂ ಸರಿ ಇದೆಯಾ? ಇದಕ್ಕೆ ಸಕಾರಾತ್ಮಕ ಉತ್ತರವನ್ನು ಪ್ರಾಯಶಃ ಕಾಂಗ್ರೆಸ್ ನವರೂ ಎದೆ ತಟ್ಟಿಕೊಂಡು ಕೊಡಲಾರರು. ಅಲ್ಲಿ ತತ್ವ ಸಿದ್ದಾಂತಗಳಿಗೆ, ಪ್ರಾಮಾಣಿಕತೆಗೆ ಯಾವ ಬೆಲೆ ಇದೆ ಎಂಬುದೂ ಪ್ರಶ್ನೆಯೇ.

ದೇಶದ ಮಟ್ಟದಲ್ಲಿ ಲಕ್ಷಾಂತರ ಕಾರ್ಯಕರ್ತರ ಮುಂದಾಳುಗಳ ಪಡೆ ಇದ್ದರೂ unity of thought and action ಅಂತೂ ಅಲ್ಲಿಲ್ಲ. ಕಾಂಗ್ರೆಸ್ ನ ಮೂಲ ತತ್ವಗಳ ಕುರಿತೇ ಸೂಕ್ತ ಪರಿಣಾಮಕಾರಿ ಶಿಕ್ಷಣವೂ ಅಲ್ಲಿ ಇದ್ದಂತಿಲ್ಲ. ಈಗ ಇರುವ ವ್ಯಕ್ತಿ ಕೇಂದ್ರಿತ ಕಾಂಗ್ರೆಸನ್ನು ಸ್ವಲ್ಪ ಮಟ್ಟಿಗೆ ಕೇಡರ್ ಬೇಸ್ಡ್ ಮತ್ತು ಸಂವಿಧಾನವಾದಿ ಪಕ್ಷವಾಗಿ ಮಾರ್ಪಡಿಸಲು ಸಾಧ್ಯವಾದರೆ ಒಂದಷ್ಟು ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.

ಕಾಂಗ್ರೆಸ್ ನ ವರ್ಗ ಹಿನ್ನೆಲೆ, ಅವರ ಆರ್ಥಿಕ ನೀತಿಗಳು ಇತ್ಯಾದಿಗಳ ಬಗ್ಗೆ ತಕರಾರು ಬೇಜ್ಜಾನ್ ಇವೆ. ಆದರೆ ನರಹತ್ಯೆಗಳನ್ನು ಯಾವ ಕ್ಷಣದಲ್ಲಿ ನಡೆಸಬಲ್ಲ ಒಂದು ಶಕ್ತಿಯನ್ನು ಎದುರಿಸಲು ಮಿಕ್ಕೆಲ್ಲರೂ ತಕ್ಷಣದ ಕನಿಷ್ಟ ಸಾಮಾನ್ಯ ಕಾರ್ಯಕ್ರಮವೊಂದರ ಬಗ್ಗೆ ಚಿಂತಿಸುವ ಅಗತ್ಯವಿದೆ.

ಕೇವಲ ಚುನಾವಣೆಯಿಂದ ಫ್ಯಾಸಿಸ್ಟ್ ಶಕ್ತಿಗಳನ್ನು ಹಿಮ್ಮೆಟ್ಟಿಸುವುದು ಅಸಾಧ್ಯ. ಆದರೆ ಬೀದಿಯ ಮೇಲೆ ಎದುರಿಸಲಾದರೂ ನಮಗೊಂದಷ್ಟು ಸಮಾಯಾವಕಾಶ ತೆಗೆದುಕೊಳ್ಳಲಾದರೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲಲೇಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ.

ಈ ನಡುವೆ ಯಾರಾದರೂ ಕಮ್ಯುನಿಸ್ಟ್ ಪಕ್ಷದಿಂದ ಕಾಂಗ್ರೆಸ್ ಗೆ, ಬಿಎಸ್ ಪಿಯಿಂದ ಎಸ್ ಡಿ ಪಿ ಐ, ಎಸ್ ಡಿ ಪಿ ಐ‌ನಿಂದ ಕಾಂಗ್ರೆಸ್ ಹೀಗೆ ಸ್ಥಾನ ಪಲ್ಲಟ ಮಾಡಿಕೊಂಡರೆ ತೀರಾ ತಲೆಕೆಡಿಸಿಕೊಳ್ಳಬೇಕಿಲ್ಲ. Let’s welcome…

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್

Published

on

ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.

ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending