Connect with us

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ

Published

on

ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.

ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್.‌ ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್‌. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.

ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.

ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ

Published

on

ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್‌ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್‌ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್‌ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್‌ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್‌, ಚೇತನ್‌ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.

ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್‌ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್‌ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್‌ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.

ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending