ದಿನದ ಸುದ್ದಿ
ಆತ್ಮಕತೆ | ಕೋರಿನ ತೋಟ ಮತ್ತು ನಮ್ಮೂರ ದೇವರ ಗುಡಿಯಲ್ಲಿ ಪಂಚಾಯ್ತಿ
- ರುದ್ರಪ್ಪ ಹನಗವಾಡಿ
ಅಪ್ಪ ಮೊದಲಿನಿಂದಲೂ ಎಲೆ ತೋಟ ಮಾಡಿಕೊಂಡು ಬರುತ್ತಿದ್ದ ಬಗ್ಗೆ ಆಗಲೇ ಬರೆದಿದ್ದೇನೆ. ಅದರಿಂದಲೇ ನಮ್ಮೆಲ್ಲರ ಜೀವನ ಕೊರತೆ ಕಾಣದಂತೆ ನಡೆಯುತ್ತಿತ್ತು. ನಮಗೆ ಸ್ವಂತ ತೋಟದ ಜಮೀನು ಇಲ್ಲದ್ದರಿಂದ ಕಪ್ಪಲಿ ಮಾಡಿ ಬೇರೆಯವರ ಜಮೀನನ್ನು ಕೋರಿಗೆ ಮಾಡುತ್ತಿದ್ದರು.
ಕರ್ನಾಟಕದಲ್ಲಿ ಈ ಪದ್ಧತಿ ಬೇರೆ ಬೇರೆ ಪ್ರದೇಶಗಳಲ್ಲಿ ವಿವಿಧ ರೀತಿಯಲ್ಲಿ ಜಾರಿಯಲ್ಲಿರುವುದನ್ನು ನೋಡುತ್ತೇವೆ. ಭೂಮಾಲೀಕನು ಮತ್ತು ಅದರಲ್ಲಿ ದುಡಿಯುವವ, ಬರುವ ಒಟ್ಟು ಆದಾಯದಲ್ಲಿ ಸಮನಾಗಿ ಹಂಚಿಕೊಳ್ಳುವ ವ್ಯವಸ್ಥೆ ಇರುತ್ತಿತ್ತು. ಹೀಗೆ ಕೋರಿಗೆ ಮಾಡಿಕೊಳ್ಳುತ್ತಿದ್ದ ಮಾಲೀಕ ಮತ್ತು ಶ್ರಮಿಕರಿಬ್ಬರಲ್ಲಿ ನನ್ನ ಬಾಲ್ಯದ ದಿನಗಳಲ್ಲಿ ಅನ್ಯೋನ್ಯ ಸಂಬಂಧಗಳಿರುತ್ತಿದ್ದವು. ಹಬ್ಬ ಹರಿದಿನ, ಮದುವೆ ಮುಂಜಿಗಳಲ್ಲಿ, ಸಾವು ನೋವುಗಳಲ್ಲಿ ಬಂಧುಗಳಂತೆ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು.
ಹೀಗೆ ಹೆಚ್ಚಿನ ಜಮೀನುಗಳು ಇದ್ದ ಮನೆತನದವರು ಕೋರಿಗೆ ನೀಡಿದ ಜನರೊಡನೆ ಅನೇಕ ತಲೆಮಾರುಗಳಿಂದ ಕೋರಿನ ವ್ಯವಸ್ಥೆಯಲ್ಲಿ ತೋಟ, ಹೊಲಗಳನ್ನು ಮಾಡಿಕೊಂಡು ಬರುತ್ತಿದ್ದರು. ಕೆಲವು ಭೂಮಾಲೀಕರು, ತೋಟದಲ್ಲಿ ದುಡಿಯುತ್ತಿದ್ದ ಕೋರಿನವರಿಗೆ ಬರುವ ಆದಾಯದಲ್ಲಿ ಸರಿಯಾಗಿ ಹಂಚಿಕೊಡದೆ ಮೋಸ ಕೂಡ ಮಾಡುತ್ತಿರುವ ವಿಚಾರಗಳನ್ನು ಕೂಡ ಊರಲ್ಲಿ ಜನರು ಅಲ್ಲಲ್ಲಿ ಮಾತಾಡಿಕೊಳ್ಳುತ್ತಿದ್ದರು. ಏಕೆಂದರೆ ಬೆಳೆದ ಎಲೆ ಪೆಂಡಿಗಳನ್ನು ಹುಬ್ಬಳ್ಳಿ, ಧಾರವಾಡ, ಹೊಸಪೇಟೆ, ಕಂಪ್ಲಿಗಳಿಗೆ ಭೂಮಾಲೀಕರುಗಳೇ ಮಾರಾಟ ಮಾಡಲು ಹೋಗುತ್ತಿದ್ದರು.
ಅಲ್ಲಿನ ದಲಾಲರು ಹರಾಜು ಹಾಕಿ ನೀಡಿದ ಪಟ್ಟಿಯನ್ನು ಕೋರಿನವರಿಗೆ ಸರಿಯಾಗಿ ತೋರಿಸದೆ ಮತ್ತು ಓದಲು ಬಾರದೆ ಇರುವ ಕೋರಿನವರಿಗೆ ಮೋಸ ಮಾಡುತ್ತಿದ್ದರು. ಆದರೆ ಅಪ್ಪ ಮಾಡಿಕೊಂಡು ಬರುತ್ತಿದ್ದ ಕೋರಿನ ತೋಟದ ಯಜಮಾನರುಗಳು ನಾನು ಚಿಕ್ಕಂದಿನಿಂದಲೂ ನೋಡಿದ ದೊಡ್ಡಮನಿ ಬಸಣ್ಣ, ಸಣ್ಣಮನಿ ರುದ್ರಜ್ಜ, ಬಣಕಾರ್ ನಾಗಪ್ಪ ಎಂಬ ಭೂಮಾಲೀಕರುಗಳು ಎಂದೂ ಆ ರೀತಿ ಮಾಡಿದವರಲ್ಲ.
ದೊಡ್ಡಮನಿ ಬಸಣ್ಣನದು ವರ್ಣರಂಜಿತ ವ್ಯಕ್ತಿತ್ವ. ಇವರ ಹಿಂದಿನ ವಂಶಕ್ಕೆ ಹೋದರೆ ಶಿವಪ್ಪಜ್ಜ ಎಂಬ ಹಿರಿಯ, ಅಪ್ಪನನ್ನು `ಹನುಮಂತು’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ನಾನು 13-14ನೇ ವಯಸ್ಸಿನಲ್ಲಿ ಇದ್ದಾಗ ಅಪ್ಪನನ್ನು ಹಾಗೆ ಕರೆಯುತ್ತಿದ್ದವರನ್ನು ನಾನು ಎಲ್ಲೂ ಕೇಳಿರಲಿಲ್ಲ. ಶಿವಪ್ಪಜ್ಜನ ತಂಗಿಯಾಗಿದ್ದ ಸಿದ್ದಜ್ಜಿ ತನ್ನ ಗಂಡನ ಕಾಲಾನಂತರ ತವರು ಮನೆಗೆ ಬಂದು ಅಣ್ಣ ಶಿವಪ್ಪಜ್ಜನ ಮನೆಯಲ್ಲೇ ಇದ್ದು ತೋಟ ಮನೆಗಳಲ್ಲಿ ಎರಡಾಳಿನ ಕೆಲಸ ಮಾಡುತ್ತಿದ್ದರು. ಶಿವಪ್ಪಜ್ಜನ ಅಣ್ಣ ತಮ್ಮಂದಿರು ದೊಡ್ಡ ಮನೆತನ ಮತ್ತು ದೊಡ್ಡ ನಡವಳಿಕೆ ಕೂಡ.
ಊರಲ್ಲಿನ ದೇವರ ಕೆಲಸವಾಗಲೀ, ಮದುವೆ ಮುಂಜಿಗಳಲ್ಲಿ ಅವರಿಲ್ಲದೆ ನಡೆಯುತ್ತಿರಲಿಲ್ಲ. ಅದೇನೋ ಮಕ್ಕಳಾಗಲಿಲ್ಲ ಎಂದು ಒಂದೆರಡು ಮದುವೆಯಾಗಿ ಕೊನೆಯಲ್ಲಿ ಚಿಕ್ಕ ಹೆಂಡತಿಗೆ ಗಂಡು ಮಕ್ಕಳಾಗದೇ ಒಂದು ಹೆಣ್ಣು ಮಗಳಿದ್ದು, ಅವರು ನಮ್ಮ ದೊಡ್ಡಕ್ಕ ಕೊಟ್ರಕ್ಕನ ಸಹಪಾಠಿಯಾಗಿ ಶಾಲೆಗೆ ಹೋಗುತ್ತಿದ್ದುದನ್ನು ಅಕ್ಕ ಈಗಲೂ ನೆನಸಿಕೊಳ್ಳುತ್ತಾಳೆ. ಅಪ್ಪ ಇವರ ತೋಟ ಮಾಡುತ್ತಿದ್ದ ಸಮಯದಲ್ಲಿ ನಾನು ತೋಟಕ್ಕೆ ಬುತ್ತಿ ತೆಗೆದುಕೊಂಡು ಹೋಗುತ್ತಿದ್ದೆ. ಎಲ್ಲಾ ಒಟ್ಟಿಗೆ ಕೂತು ಉಣ್ಣುವಾಗ, ಶಿವಪ್ಪಜ್ಜ, ಸಿದ್ದಜ್ಜಿ ಅಪ್ಪನೊಡನೆ ಆತ್ಮೀಯರಾಗಿ ಮಾತಾಡುತ್ತಿದ್ದು ಅವರ ಮನೆತನದಲ್ಲಿನ ಬಂಗಾರದ ಹಂಚಿಕೆಯಲ್ಲಿ ಆಗಿರುವ ತಾರತಮ್ಯಗಳನ್ನು ಮಾತಾಡುತ್ತಿದ್ದರೆ ನಾನೂ ಕೇಳಿಸಿಕೊಳ್ಳುತ್ತಿದ್ದೆ. ಅಪ್ಪನ ಜೊತೆ ಶಿವಪ್ಪಜ್ಜ, ಸಿದ್ದಜ್ಜಿ ಅವರ ಸಂಬಂಧಗಳು ತುಂಬಾ ಆತ್ಮೀಯವಾಗಿರುತ್ತಿದ್ದವು. ಇಂತಹ ಮನೆತನದ ಕುಡಿಯಾಗಿದ್ದ ಬಸಣ್ಣ ಚಿಕ್ಕ ವಯಸ್ಸಿನವರಾಗಿದ್ದು ಅವರ ಪಾಲಿನ ತೋಟದಲ್ಲಿ ಅಪ್ಪ ಕೋರಿಗೆ ಮಾಡುತ್ತಿದ್ದ.
ಅಪ್ಪನನ್ನು ಆತ ಅಣ್ಣಾ ಎಂದು ಯಾವಾಗಲೂ ಕೂಗಿ ಕರೆಯುತ್ತಿದ್ದ. ಎಂದೂ ಏಕವಚನದಲ್ಲಿ ಮಾತಾಡಿದ್ದು ನಾನು ಕೇಳಿರಲಿಲ್ಲ. ಮತ್ತು ಬೆಳೆದ ಬೆಲೆಯಲ್ಲಿ ಸಮಾನ ಹಂಚಿಕೆಯಲ್ಲೂ ಏನೂ ಮೋಸ ಇರುತ್ತಿರಲಿಲ್ಲ. ಆದರೆ ಆತ ಹೊಸ ತಲೆಮಾರಿನ ಶೋಕಿಗೆ ಮಾರುಹೋಗಿದ್ದ. ಊರಿನಲ್ಲಿ ಮೊದಲು ರ‍್ಯಾಲಿ ಬೈಸಿಕಲ್ ನಂತರ ಸೈಕಲ್ ಮೋಟಾರ್ ತಂದು ಓಡಾಡಿಸಿದ! ಲಿಂಗಾಯತರಲ್ಲಿ ನಿಷಿದ್ಧವಾದ ಕುಡಿತ ಮತ್ತು ಮಾಂಸಾಹಾರವನ್ನು ಯಥೇಚ್ಛವಾಗಿ ಸೇವಿಸುತ್ತಿದ್ದ. ಅದಕ್ಕಾಗಿ ಯಾರಿಗೂ ಕೇರ್ ಮಾಡುತ್ತಿರಲಿಲ್ಲ. ಆದರೂ ಅವರಿವರು ಅವನ ಹಿಂದು ಮುಂದೆ ಮಾತಾಡಿಕೊಳ್ಳುವುದನ್ನು ಬಾಲಕನಾಗಿದ್ದ ನಾನು ಕೇಳಿಸಿಕೊಳ್ಳುತ್ತಿದ್ದೆ. ಯಾವಾಗಲಾದರೂ ನಮ್ಮ ಮನೆ ಕಡೆಗೆ ಬಂದಾಗ ಹೊರಕಟ್ಟೆಯಲ್ಲಿ ಕೂತು ಅವನ ಮೂಗಿಗೆ ಮಾಂಸದ ಸಾರಿನದೋ, ಕೋಳಿ ಸಾರಿನದೋ ಘಂ ವಾಸನೆ ಬಡಿದರೆ, ಎದ್ದು ಹೋಗದೆ ತಡರಾತ್ರಿವರೆಗೆ ಕೂತು ಅಪ್ಪನೊಟ್ಟಿಗೆ ಪಾರ್ಟಿ ಮಾಡಿಕೊಂಡು ಹೋಗುತ್ತಿದ್ದ.
ಹೀಗಿದ್ದ ಬಸಣ್ಣನಿಗೆ ಊರಲ್ಲಿದ್ದ ಸುಂದರಿಯೊಬ್ಬಳ ಸಹವಾಸವಾಗಿ ಆಕೆ ನಾವು ಮಾಡುತ್ತಿದ್ದ ಕೋರಿನ ತೋಟಕ್ಕೆ ಬರುತ್ತಿದ್ದಳು. ಅದ್ಯಾವ ವಿಷಯದಲ್ಲಿ ವಿವಾದವಾಯಿತೋ ಅಪ್ಪ ಬೆಳೆದು ನಿಂತಿದ್ದ ತೋಟವನ್ನು ನಿಂತ ಕಾಲಲ್ಲಿ ಬಿಟ್ಟು ಹೊರ ಬಂದು, ಬಣಕಾರ ನಾಗಪ್ಪ ಎನ್ನುವವರ ಬೇರೊಂದು ಕೋರಿನ ತೋಟವನ್ನು ಹಿಡಿದಿದ್ದ. ಇಲ್ಲಿ ಕಪ್ಪಲಿಯನ್ನು ಹೂಡಿ ನೀರು ಹಾಯಿಸುವುದು, ಅದರಿಂದ ಶ್ರಮ ಜಾಸ್ತಿಯಾಗಿರುತ್ತಿತ್ತೇ ಹೊರತು ಆದಾಯದಲ್ಲಿ ಅಂತಹದೇನೂ ಹೆಚ್ಚುವರಿ ಕಾಣುತ್ತಿರಲಿಲ್ಲ. ಆಗ ನಾನು ನೀರು ಹಾಯಿಸುವ, ಎಲೆ ಕೊಯ್ಯುವ, ಬಳ್ಳಿಯನ್ನು ಬೆಳೆದ ಮುಂಡಗಳಿಗೆ ಕಟ್ಟುವ ಕೆಲಸವನ್ನು ಅಪ್ಪ, ಅಣ್ಣನ ಜೊತೆ ಸೇರಿ ಮಾಡುತ್ತಿದ್ದೆ. ಆಗ ಏಳನೆ ತರಗತಿ ಪಾಸುಮಾಡಿ ಸಾಗರದಲ್ಲಿ ಹೈಸ್ಕೂಲಿಗೆ ಸೇರಿದ್ದೆ. ಕೋರಿನ ತೋಟದ ಮಾಲೀಕರಾಗಿದ್ದ ಬಣಕಾರ್ ನಾಗಪ್ಪ ಅವರ ಮಗ ಜಯಣ್ಣ ನನ್ನ ಕಿರಿಯ ಸಹಪಾಠಿಯಾಗಿ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ.
ನಾಗಪ್ಪಜ್ಜನೂ ದೊಡ್ಡ ಮನುಷ್ಯ. ಆಸೆಯವನಾಗಿರಲಿಲ್ಲ. ಬಂದ ಹಣವನ್ನು ಸರಿಯಾಗಿ ಹಂಚಿ ಕೊಡುತ್ತಿದ್ದ. ಅವರ ಮನೆಯವರೆಲ್ಲ ಇಂದಿಗೂ ಅದೇ ಆತ್ಮೀಯತೆಯನ್ನು ತೋರುವ ಬಂಧುಗಳಾಗಿದ್ದಾರೆ. ನಾಗಜ್ಜನ ಹೆಂಡತಿ ಗಿರಿಜಕ್ಕ, ತಾಯಿ ಹೃದಯದವರು. ನಾನು ಯಾವುದೇ ಕೆಲಸಕ್ಕೆ ಅವರ ಮನೆಗೆ ಹೋದಾಗ ರೊಟ್ಟಿ ಉಣ್ಣೆಂದು ಜುಲುಮೆ ಮಾಡಿ ಉಣಿಸುತ್ತಿದ್ದರು. ಅದೇಕೋ ಕಪ್ಪಲಿಯಿಂದ ದುಡಿಮೆ ಉಚಾಯಿಸದ ಕಾರಣ ಅಪ್ಪ ಬೇರೊಬ್ಬ ಭೂಮಾಲೀಕರಾದ ಸಣ್ಣಮನಿ ರುದ್ರಜ್ಜ, ಹಾಲಸಿದ್ದಪ್ಪ ಎಂಬುವರು ಹರಾಜಿನಲ್ಲಿ ಎಂಟು ವರ್ಷಗಳಿಗೆ ಹಣ ಗುತ್ತಿಗೆ ಪಡೆದ ಊರ ದೇವರ ಜಮೀನನ್ನು, ಕೋರಿಗೆ ಮಾಡಲು ಅಪ್ಪ ತೀರ್ಮಾನಿಸಿದ್ದರು.
ಅದೇನು ಅದೃಷ್ಟವೋ ಎಂಬಂತೆ ತೋಟವೊಂದು ನಂದನವನದಂತೆ ಬೆಳೆದು ಸಾಕಷ್ಟು ಆದಾಯ ಬರುತ್ತಿತ್ತು. ಈ ಸಂದರ್ಭದಲ್ಲಿಯೇ ಅಪ್ಪ ಇಡೀ ಉತ್ಪನ್ನವನ್ನು ನಾಲ್ಕು ಸಾವಿರ ರೂಪಾಯಿಗಳಿಗೆ ಗುತ್ತಿಗೆಗೆ ಒಪ್ಪಿಕೊಂಡು 100 ರೂಗಳಿಗೆ ಏಳೂವರೆ ಪೆಂಡಿಯಂತೆ ಎಲೆ ಪೆಂಡಿ ನೀಡಬೇಕಾಗಿದ್ದ ಕರಾರಿಗೆ ಒಪ್ಪಿ ಕೊಟ್ಟಿದ್ದರು.
ಈ ರೀತಿ ಎಲೆ ಕೊಯ್ದುಕೊಂಡು ಹೋಗುತ್ತಿದ್ದ ಕೇಣಿದಾರರು ಉಳಿಯುತ್ತಿದ್ದ ಅರ್ಧ ಅಥವಾ ಕಾಲು ಪೆಂಡಿಯ ಎಲೆಯನ್ನು ತೆಗೆದುಕೊಳ್ಳದೆ ತೋಟದವರಿಗೆ ಬಿಟ್ಟುಬಿಡುತ್ತಿದ್ದರು. ಅದನ್ನು ಸಾಮಾನ್ಯವಾಗಿ ಕೋರಿಗೆ ಮಾಡಿದವರೇ ಕೊಯ್ದುಕೊಂಡು ಮಾರಿ ಕೊಳ್ಳುತ್ತಿದ್ದರು. ಅದು ತೋಟದ ಮಾಲೀಕನಿಗೆ ಗೊತ್ತಿದ್ದರೂ ಸಾಮಾನ್ಯವಾಗಿ ಕೇಳುತ್ತಿರಲಿಲ್ಲ.ಇಂತಹದೊಂದು ಎಲೆ ಕೊಯ್ಯುವ ಸಮಯದಲ್ಲಿ ಕರಾರುದಾರನಿಗೆ ಕೊಟ್ಟು ಉಳಿದ ಸುಮಾರು ಕಾಲು ಪೆಂಡಿಯಷ್ಟು ಎಲೆ ಉಳಿದಿತ್ತು. ನಾನೇ ಕೊಯ್ದೆನೋ ನಮ್ಮ ಅಣ್ಣ ಹೇಳಿದನೋ ಅಪ್ಪನಿಗೆ ಗೊತ್ತಿಲ್ಲದಂತೆ ನಾನು ಬಂದು ಬೆಳಿಗ್ಗೇನೆ ಎಲೆ ಕೊಯ್ಯುತ್ತಿದ್ದೆ. ಆಗ ಒಳ್ಳೆಯ ರೇಟು ಬೇರೆ ಇದ್ದುದರಿಂದ ಮಾರಿದ ನಂತರ ಖರ್ಚಿಗೆ ದುಡ್ಡು ಸಿಗುವುದೆಂಬ ಯೋಚನೆಯಲ್ಲಿದ್ದೆ. ಆಗ ಬಹುಶಃ ನಾನು ಆಗಷ್ಟೇ ಹೈಸ್ಕೂಲಿಗೆ ಸೇರಿ ರಜೆಯಲ್ಲಿ ಊರಿಗೆ ಬಂದಿದ್ದೆ.
ನನ್ನ ಪಾಡಿಗೆ ನಾನು ಎಲೆ ಕೊಯ್ಯುವ ಸಮಯಕ್ಕೆ ಮಾಲೀಕ ರುದ್ರಪ್ಪಜ್ಜನ ತಮ್ಮ ಹಾಲಸಿದ್ದಪ್ಪ ಬಂದವನೇ ನಾನು ಎಲೆ ಕೊಯ್ಯುತ್ತಿರುವುದನ್ನ ನೋಡಿ, ಇದೇನು ಕಳ್ಳತನದಿಂದ ಎಲೆ ಕೊಯ್ಯುತ್ತಿಯಲ್ಲ ಎಂದು ಪ್ರಾರಂಭಿಸಿದವ ನಾನೊಂದು ಮಹಾಪರಾಧ ಮಾಡಿರುವುದಾಗಿ ಬೈಯುತ್ತಾ ನನ್ನ ಮೇಲೆ ಕಳ್ಳತನದ ಆರೋಪ ಹೊರಿಸಿ ಎಲೆ ಕೊಯ್ಯು ವುದನ್ನ ನಿಲ್ಲಿಸಿದ. ಆಗ ಅದೇನೇನೊ ಮಾತಾಡಿದವನೋ ನನಗಂತೂ ಸಹಿಸಿಕೊಳ್ಳಲಾಗದೆ ಅವಮಾನದಲ್ಲಿ ಕುಸಿದು ಹೋಗಿದ್ದೆ. ಬಡತನದ ಕ್ರೌರ್ಯವೆಂದರೆ ಏನೆಂಬುದನ್ನ ಅವನ ಬೈಗುಳಗಳಲ್ಲಿ ದಾಖಲಿಸುತ್ತಾ, ಕೊಯ್ದಿದ್ದ ಎಲೆ ಬುಟ್ಟಿಯನ್ನು ನನ್ನ ಮೇಲೆ ಹೊರಿಸಿಕೊಂಡು ಊರಲ್ಲಿ ಪಂಚಾಯ್ತಿ ಮಾಡಬೇಕೆಂದು ಉದ್ದಕ್ಕೂ ಬೈಯುತ್ತಾ ಊರ ವೀರಭದ್ರ ದೇವರ ಗುಡಿಗೆ ತಂದಿರಿಸಿದ್ದ.
ನಾನು ಅವಮಾನದಲ್ಲಿ ಕುಸಿದು ಹೋಗಿದ್ದೆ. ಅದ್ಯರ‍್ಯಾರು ಪಂಚಾಯ್ತಿ ಸೇರಿದ್ದಾರೋ ವಿವರ ಮರೆತು ಹೋಗಿದೆ. ನನ್ನ ಹೆಸರಿನವರೇ ಆಗಿದ್ದ ಬಣಕಾರ್ ರುದ್ರಜ್ಜ `ಇದೇನು ದೊಡ್ಡ ವಿಷ್ಯಾ ಅಂತ ಇಲ್ಲಿಗೆ ತಂದಿದಿಯಾ’ ಕೋರಿನ ತೋಟ ಮಾಡೋ ಹುಡುಗ, ಉಳಿದ ಎಲೆ ಕೊಯ್ಯತಾನ, ಅದೇನು ಅಪರಾಧನಾ ಎಂದು ಅವನಿಗೆ ಗದರಿಸಿದರು. ಕಡೆಗೆ `ಉಳಿದ ಎಲೆಯಲ್ಲೂ ಪಾಲು ಬೇಕಂತೆ ಕೊಡಪ್ಪ’ ಅವನಿಗೆ ಎಂದು ತೀರ್ಮಾನ ಹೇಳಿ ಮುಗಿಸಿದ್ದರು. ಅಲ್ಲಿ ಅಪ್ಪ ಮತ್ತು ಅಣ್ಣ ಇದ್ದರೋ ಇಲ್ಲವೋ ಗೊತ್ತಿಲ್ಲ. ಕೋರಿನ ತೋಟದಲ್ಲಿ ಬೆಳೆದ ಎಲ್ಲದರಲ್ಲೂ ನಮ್ಮ ದುಡಿಮೆಯ ಅರ್ಧ ಭಾಗ ಇರುತ್ತದೆ. ಇನ್ನರ್ಧಕ್ಕೆ ಯಾಕೆ ನಾವು ಬೇಡುವ ಕೆಲಸ ಮಾಡಬೇಕು.
ಇನ್ನು ಮೇಲೆ ಏನೇ ಉಳಿದರೂ ನಮ್ಮದೆಂದು ಆಸೆ ಪಡಬಾರದೆಂದು ಅಪ್ಪ ಹೇಳಿದ ಮಾತು ಇಂದಿಗೂ ಮರೆತಿಲ್ಲ. ತೋಟದಿಂದ ಗುಡಿವರೆಗೆ ಎಲೆಪುಟ್ಟಿಯ ಹೊತ್ತು ತಂದು ಪಂಚಾಯ್ತಿ ನಡೆಸಿದ ದಿನವನ್ನು ನನಗೆ ಈಗಲೂ ಮರೆಯಲಾಗುತ್ತಿಲ್ಲ. ಸದ್ಯ ಪಂಚಾಯಿತಿಯವರ ದೃಷ್ಟಿಯಲ್ಲಾದರೂ ಅದೊಂದು ದೊಡ್ಡ ಅಪರಾಧವಲ್ಲವೆಂಬಂತೆ ಮಾತಾಡಿದ್ದು ನನಗೆ ಸಮಾಧಾನ ತಂದಿತ್ತು. ನಂತರ ರಜೆ ಮುಗಿದ ಮೇಲೆ ಸಾಗರಕ್ಕೆ ಹೋಗಿ, ನನ್ನ ಅಭ್ಯಾಸ ಮುಂದುವರಿಸಿದೆ.
ಅಕ್ಕ ಭಾವ ನನ್ನ ಓದು ಬರಹಕ್ಕೆ ಸಹಕಾರಿಯಾಗಿದ್ದರು. ಸರಿಯಾದ ಕುಟುಂಬ ಯೋಜನೆಯ ಅರಿವು ಇರದೆ, ನಾನು ಸಾಗರಕ್ಕೆ ಬಂದಾಗ ಇದ್ದ ಒಬ್ಬಳೇ ಮಗಳ ಜೊತೆ ಮತ್ತೆ ಮೂರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಜನಿಸಿ ಅವರ ಕುಟುಂಬ ಹಿಗ್ಗುತ್ತಾ ಹೋಯಿತು. ನಾನು ಮನೆಯವನಾಗಿ ಸಾಮಾನ್ಯ ಕೆಲಸಗಳಾದ ನೀರು ತರುವುದು, ಕಸ ಗುಡಿಸುವುದು, ನೆಲ ಒರೆಸುವುದು, ಬಟ್ಟೆ ಒಗೆಯುವುದು, ಅಂಗಡಿಯಿAದ ಮನೆಗೆ ಬೇಕಾದ ದಿನಸಿ ತರುವುದು ಎಲ್ಲ ಕೆಲಸ ಮಾಡುತ್ತಿದ್ದೆ. ಅದಕ್ಕಾಗಿ ಒಮ್ಮೊಮ್ಮೆ ಅಕ್ಕ ನನಗೆ ಬಕ್ಷೀಸು ಸಹ ನೀಡುತ್ತಿದ್ದಳು.
ಹೈಸ್ಕೂಲು ಅಭ್ಯಾಸ ಮಾಡುತ್ತಾ ಎಸ್.ಎಸ್.ಎಲ್.ಸಿ.ಗೆ ಬಂದಾಗ ಮನೆಯಲ್ಲಿ ಮಕ್ಕಳ ಗಲಾಟೆಯಿಂದ ಓದಲು ಕಷ್ಟ ಎನ್ನೋ ಕಾರಣದಿಂದ ಸಾಗರದಲ್ಲಿನ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸುತ್ತಿದ್ದ ಹಾಸ್ಟೆಲ್‌ಗೆ ಸೇರಿಕೊಂಡೆ. ಆಗಿನ ಮುನಿಸಿಪಲ್ ಹೈಸ್ಕೂಲಿನಲ್ಲಿ ಹಾಸ್ಟೆಲ್‌ನಿಂದ ರ‍್ಮ ಶೇಖರ್ ಮತ್ತು ಅವರ ಅಣ್ಣ ಹನುಮಂತಪ್ಪ ಹಾಗೂ ಯಶವಂತಪ್ಪ ಒಟ್ಟು ನಾಲ್ಕು ಜನ ಎಸ್‌ಎಸ್‌ಎಲ್‌ಸಿ ತರಗತಿಗೆ ಹೋಗುತ್ತಿದ್ದೆವು. ಪರೀಕ್ಷೆ ಮುಗಿದು ರಿಸಲ್ಟ್ ಬಂದಾಗ ಸಾರ್ವಜನಿಕ ಹಾಸ್ಟೆಲ್‌ನಿಂದ ಪರೀಕ್ಷೆ ಬರೆದವರಲ್ಲಿ ನಾನೊಬ್ಬ ಮಾತ್ರ ಪಾಸಾಗಿದ್ದೆ. ಉಳಿದವರು ಒಂದೊಂದು ವಿಷಯದಲ್ಲಿ ಫೇಲಾಗಿದ್ದರು. ಮುನಿಸಿಪಲ್ ಹೈಸ್ಕೂಲಿನಲ್ಲಿ ಹಾಸ್ಟೆಲ್‌ನಿಂದ ಬರುತ್ತಿದ್ದ ಹುಡುಗರಲ್ಲಿ ನಾನೊಬ್ಬ ಪಾಸಾಗಿರುವ ಬಗ್ಗೆ ತಿಳಿದು ಸಂಸ್ಕೃತ ಅಧ್ಯಾಪಕರು ನನಗೆ ಕರೆದು ಪ್ರೋತ್ಸಾಹದ ಮಾತಾಡಿದ್ದನ್ನು ನಾನಿನ್ನೂ ಕೂಡ ಮರೆತಿಲ್ಲ.
ನಾನು ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಬಂದಾಗ ಊರಿನಲ್ಲಿದ್ದೆ. ನನ್ನ ರಿಜಿಸ್ಟ್ರೇಷನ್ ನಂ. 64960. ಆಗ ಫಲಿತಾಂಶಗಳು ದಿನಪತ್ರಿಕೆಗಳಲ್ಲಿ ಬರುತ್ತಿದ್ದವು. ಅಣ್ಣ ತಿಪ್ಪಣ್ಣ ಬೆಳಗಿನ ಜಾವ ಹೊಸಪೇಟೆಗೆ ವೀಳ್ಯದೆಲೆ ಮಾರಾಟ ಮಾಡಲು ಹೋಗುತ್ತಿದ್ದವನು ಹರಿಹರದಲ್ಲಿ ಪ್ರಜಾವಾಣಿ ಪೇಪರ್‌ನಲ್ಲಿ ನನ್ನ ಫಲಿತಾಂಶವನ್ನು ನೋಡಿ, ನನ್ನ ನಂಬರನ್ನು ಗುರ್ತು ಮಾಡಿ ನನ್ನೂರಿಗೆ ದಿನವೂ ಬರುತ್ತಿದ್ದ ಕ್ಷೌರಿಕ ನರಸಿಂಹಣ್ಣನ ಮುಖಾಂತರ ಪೇಪರ್ ಕಳಿಸಿದ್ದ. ನಾನು ಪೇಪರ್ ನೋಡಲು ಹರಿಹರಕ್ಕೆ ಹೋಗೋ ದಾರಿಯಲ್ಲಿ ನರಸಿಂಹಣ್ಣ ಸಿಕ್ಕು ನಾನು ಪಾಸಾಗಿರುವ ಬಗ್ಗೆ ನನ್ನ ಅಣ್ಣ ತಿಪ್ಪಣ್ಣ ನಂಬರ್ ಗುರ್ತು ಮಾಡಿ ಕೊಟ್ಟದ್ದನ್ನು ನನಗೆ ತೋರಿಸಿ ಸಂತೋಷಪಟ್ಟಿದ್ದ.
ಹನಗವಾಡಿಯಲ್ಲೇ ಹಲವು ವರ್ಷಗಳಿಂದ ಎಸ್.ಎಸ್.ಎಲ್.ಸಿಯಲ್ಲಿ ಸಂಶೋಧನೆ ಮಾಡುತ್ತಾ ಉಳಿದಿದ್ದ ಸ್ನೇಹಿತರೊಡನೆ ನಾನು ಎಸ್.ಎಸ್.ಎಲ್.ಸಿ. ಪರೀಕ್ಷೆ ಪಾಸಾದ ವಿಷಯ ಹೇಳಿದೆ. ಅರ‍್ಯಾರಿಗೂ ನಾನು ಪಾಸಾದ ಬಗ್ಗೆ ನಂಬಿಕೆ ಬರಲಿಲ್ಲ. ಅದರಲ್ಲಿ ಈಗಾಗಲೇ ನಾಲ್ಕು ವರ್ಷಗಳಿಂದ ಎಸ್.ಎಸ್.ಎಲ್.ಸಿ.ಯಲ್ಲೇ ಉಳಿದಿದ್ದ ಹಿರಿಯ ಮಿತ್ರರಲ್ಲೊಬ್ಬ `ಇಲ್ಲಪ್ಪಾ, ಪೇರ‍್ನಲ್ಲಿ ಬಂದಿರೋದು ನಂಬಕ್ಕಾಗಲ್ಲ, ಫಲಿತಾಂಶ ಸ್ಕೂಲಿಗೆ ಬರೋ ತನಕ ಏನು ಹೇಳುವುದಕ್ಕಾಗಲ್ಲ’ ಎಂದು ಬಾಣ ಬಿಟ್ಟು – ಪಾಸಾಗಿದ್ದೇನೆ ಎಂಬ ಅಸಾಧ್ಯ ಸಂತೋಷದ ಮೂಡಿನಲ್ಲಿದ್ದ ನನಗೆ ಅನುಮಾನದ ಕಿಚ್ಚು ಹಚ್ಚಿದ್ದ. ಆದರೂ ಇದ್ದ ಐದು ಮನೆಯ ಚಲುವಾದಿಗರ ಜೊತೆ ಊರ ಅನೇಕ ಜನರಿಗೆ ನಾನು ಎಸ್.ಎಸ್.ಎಲ್.ಸಿ. ಪಾಸಾದ ಸುದ್ದಿ ಸಂತೋಷ ನೀಡಿತ್ತು.
ನಮ್ಮೂರ ಹಿರಿಯ ರಾಜಕಾರಣಿ ಹೆಚ್. ಸಿದ್ದವೀರಪ್ಪ ನವರ ನಂತರ ಎಸ್.ಎಸ್.ಎಲ್.ಸಿ.ಯಲ್ಲಿ ಮೊದಲನೇ ಅಟೆಂಪ್ಟ್ನಲ್ಲಿ ಪಾಸಾದವನು ನಾನೇ ಎಂದು ಮಾತಾಡಿ ಕೊಳ್ಳುತ್ತಿದ್ದರು. ನಮ್ಮ ಚಿಕ್ಕಪ್ಪ ಮಹದೇವಪ್ಪನಂತೂ ತಮ್ಮ ಎರಡೂ ಕೈಮುಗಿದುಕೊಂಡು ‘ವಾಲಗದ ಸಮೇತ ವೀರಭದ್ರ ದೇವರಿಗೆ ಹಣ್ಣುಕಾಯಿ ಮಾಡಿಸೋಣ’ ಎಂದು ಸಂತೋಷದಲ್ಲಿ ಹೇಳಿದನಾದರೂ ಹಾಗೇನು ನಾನು ಮಾಡಲಿಲ್ಲ. ನನ್ನ ಎಸ್.ಎಸ್.ಎಲ್.ಸಿ. ವರೆಗಿನ ಓದಿನ ಜೊತೆ ಊರಲ್ಲಿ ರಜಾ ದಿನಗಳಲ್ಲಿ ಹಲವು ಕೆಲಸ ಮಾಡುತ್ತಿದ್ದೆ. ಚಲುವಾದಿಗಳಿಗೆ ವಿಶೇಷವಾದ ಬ್ಯಾಂಡ್‌ಸೆಟ್‌ವೊಂದನ್ನು ರೂಪಿಸಿಕೊಂಡಿದ್ದರು. ಊರ ದೇವರ ಚಾಕರಿಗೆಂದು ಅಪ್ಪ ಚಿಕ್ಕಪ್ಪಂದಿರು ಹಳೆಯ ಮೇಳ ಹೊಂದಿದ್ದರು. ಮೇಳದಲ್ಲಿ ಸುತಿ, (ಶ್ರುತಿ) ಸೊನಾಯಿ, (ಶಹನಾಯಿ) ಸಮಾಳ ಹಾಗೂ ಚೌಗಡ (ಚರ್ಮದ ವಾದ್ಯ) ಊರ ದೇವರ ಚಾಕರಿ ಜೊತೆಗೆ ಊರಲ್ಲಿನ ಮದುವೆ ಮತ್ತು ಸಾವುಗಳ ಸಮಯದಲ್ಲಿ ವಾದ್ಯಮಾಡಿ ಹಣ ಸಂಪಾದಿಸುತ್ತಿದ್ದರು. ಈ ಮ್ಯಾಳದಲ್ಲಿ ಹೋಗುವ ಸಂದರ್ಭದಲ್ಲಿ ಸಾಮೂಹಿಕವಾಗಿ ಎಲ್ಲರೂ ಶುಭ್ರವಾದ ಅಂಗಿ ಪಂಚೆ ಮತ್ತೊಂದು ಟವಲ್ ಜೊತೆಗೆ ತಮ್ಮ ಮ್ಯಾಳದ ಸಾಮಾನು ಮುಚ್ಚಲು ಬೇಕಾದ ಚೀಲಗಳನ್ನು ಅಚ್ಚುಕಟ್ಟಾಗಿ ಶುಚಿಗೊಳಿಸಿಕೊಂಡು ಹೋಗುತ್ತಿದ್ದರು. ಮದುವೆ ಸಮಯಗಳಲ್ಲಿ ಸಂಪಾದನೆ ಜೊತೆಗೆ ಖುಷಿಗಾಗಿ ಕೆಲವರು ನೀಡುವ ಹಣದ ರೂಪದ ಶಭಾಷ್‌ಗಿರಿಯಿಂದಾಗಿ ಸಾಮಾನ್ಯವಾಗಿ ಬಿರುಸಿನ ಹೊಲಮನಿ ಕೆಲಸಗಳು ರುಚಿಸುತ್ತಿರಲಿಲ್ಲ. ಆದರೆ ನಮ್ಮ ಊರಿನವರು ಇದಕ್ಕೆ ಅಪವಾದವೆಂಬಂತೆ ಹೊಲ ಮತ್ತು ತೋಟಗಳಲ್ಲಿ ಮುತುವರ್ಜಿಯಿಂದ ದುಡಿಯುತ್ತಿದ್ದರು. ಆದರೂ ನಮ್ಮ ಅಪ್ಪ ಅಗಾಗ `ಅರಿಶಿಣ ಕೂಳಿಗೋಗಿ ವರ್ಷದ ಕೂಳು ಕಳೆದು ಕೊಳ್ಳಬೇಡಿರೆಂದು’ ಎಚ್ಚರಿಸುತ್ತಿದ್ದರು.
ಊರಿನಲ್ಲಿ ಅಪ್ಪ ಚಿಕ್ಕಪ್ಪಂದಿರ ಮ್ಯಾಳ ಹಳೆಯದಾಯಿತೆಂದು ನಮ್ಮಣ್ಣನೂ ಸೇರಿದಂತೆ ಹೊಸಬರನ್ನು ಸೇರಿಸಿಕೊಂಡು ಹೊಸ ಬ್ಯಾಂಡ್ ಸೆಟ್ ತರಿಸಿ, ಅದಕ್ಕೊಬ್ಬ ಬ್ಯಾಂಡ್ ಮಾಸ್ತರರನ್ನು ನೇಮಿಸಿಕೊಂಡಿದ್ದರು. ಬರಿ ಐದಾರು ಜನರಿದ್ದ ಮ್ಯಾಳವು ಹೊಸ ಹುಡುಗರನ್ನೆಲ್ಲಾ ಸೇರಿಸಿ ಹತ್ತು ಜನರ ಗುಂಪೇ ಆಯಿತು. ನಾನು ಕೂಡ ತರಬೇತಿ ನೀಡುವ ಸಮಯದಲ್ಲಿ ಡೋಲು ಬಾರಿಸಲು ಪ್ರಯತ್ನಪಟ್ಟೆ. ಆದರೆ ಅದು ಯಾಕೋ ನನಗೆ ಕರಗತವಾಗಲಿಲ್ಲ. ಅದೇ ಸಮಯದಲ್ಲಿ ಅಪ್ಪ `ಏನು ಕಲಿತು ಏನು ಬಾರಿಸಿದರೂ ಕೆರ ಬಿಡುವಲ್ಲಿ ಕೂಳು ತಿನ್ನೋ ವಿದ್ಯೆ ಇದು. ನಿನಗೆ ಯಾಕೆ ಬೇಕು ಮಗನೇ’ ಎಂದು ನನ್ನ ಉತ್ಸಾಹಕ್ಕೆ ನೀರೆರಚಿದ್ದರು.
ಮುಂದುವರಿಯುವುದು
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ
ಸುದ್ದಿದಿನ,ದಾವಣಗೆರೆ:ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದ್ದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ,
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ನಂತರ 23ಕ್ಕೆ ಹೆಚ್ಚು ವಿದ್ಯಾರ್ಥಿನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ಆಡಳಿತ ವ್ಯವಸ್ಥೆ ಕೊನೆಯಾಗಬೇಕು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ *ಮಹಬೂಬ್ ಭಾಷಾ* ಆಗ್ರಹಿಸಿದ್ದಾರೆ ಸಂವಿಧಾನ ವಿರೋಧಿ ಆಡಳಿತಕ್ಕೆ ಕಡಿವಾಣ ಹಾಕಲು ದೇಶದ ಯುವಜನರು ಹಾಗೂ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು, ಸಂವಿಧಾನ ವಿರೋಧಿ ನಡೆ ಹಾಗೂ ಹೋರಾಟವನ್ನು ಹತ್ತಿಕ್ಕು ಹೊನ್ನಾರವಾಗಿದೆ.
ನೀಟ್ ಹಗರಣ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಕಾರ್ಪೊರೇಟರ್ ಶಿಕ್ಷಣ ನೀತಿಗಳ ಕಾರಣ, ಪರೀಕ್ಷೆಯ ಅಕ್ರಮ ವಿರುದ್ಧ ಹೋರಾಟ ಎರಡನೇ ಸ್ವತಂತ್ರ ಸಂಗ್ರಾಯದ ರೀತಿಯಲ್ಲಿ ದೇಶದಿಂದ ವ್ಯಾಪಿಸುತ್ತಿದ್ದು, ಆಳುವ ಸರ್ಕಾರ ರಾಷ್ಟ್ರದ ಭವಿಷ್ಯ ವಾಗಿರುವ ಯುವ ಸಮೂಹದ ಕನಸುಗಳನ್ನು ಹೊಸಕಿ ಹಾಕಬಾರದೆಂದು ಹೇಳಿದ್ದಾರೆ.
ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸುದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ
ಸುದ್ದಿದಿನ,ದಾವಣಗೆರೆ :ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಂತರ20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ
ರಾಜಿನಾಮೆ ನೀಡಬೇಕು. ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ಆಡಳಿತ ವ್ಯವಸ್ಥೆ ಕೊನೆಯಾಗಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೀತಿ ,ಸಂಶೋಧನೆ ಮತ್ತು ತರಬೇತಿ ವಿಭಾಗದ ರಾಜ್ಯ ಸಂಚಾಲಕರಾದ ವಿನಾಯಕ ಬಿ.ಎನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹ ಮಾಡಿದ್ದಾರೆ.
ಸಂವಿಧಾನ ವಿರೋಧಿ ಆಡಳಿತಕ್ಕೆ ಕಡಿವಾಣ ಹಾಕಲು ದೇಶದ
ಯುವಜನರು, ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು. ಸೊನಮ್ ವಾಂಗ್ಟಕ್ ಅವರನ್ನು ಏಕಾಏಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಸಂವಿಧಾನವಿರೋಧಿ ನಡೆ, ಹೋರಾಟ ಹತ್ತಿಕ್ಕುವ ಹುನ್ನಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀಟ್ ಹಗರಣ, ವಿದ್ಯಾರ್ಥಿಗಳ ಆತ್ಮ ಹತ್ಯೆಗೆ ಕಾರ್ಪೊರೇಟ್ ಶಿಕ್ಷಣ ನೀತಿಗಳು ಕಾರಣ. ನೀಟ್ ಪರೀಕ್ಷೆ ಅಕ್ರಮದ ವಿರುದ್ಧದ ಹೋರಾಟ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ರೀತಿಯಲ್ಲಿ ದೇಶದಾದ್ಯಂತ ವ್ಯಾಪಿಸುತ್ತಿದೆ. ಆಳುವ ಸರ್ಕಾರ ರಾಷ್ಟ್ರದ ಭವಿಷ್ಯವಾಗಿರುವ ಯುವ ಸಮೂಹದ ಕನಸುಗಳನ್ನು ಹೊಸಕಿ ಹಾಕಬಾರದು’.ಎಂದು ತಿಳಿಸಿದ್ದಾರೆ.
ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಂದನೆಗಳೊಂದಿಗೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
ಸುದ್ದಿದಿನ,ದಾವಣಗೆರೆ : ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಮಾಯಾಕೊಂಡ ಕ್ಷೇತ್ರವು ನಿಗದಿತ ಅವಧಿಗಿಂತ ಮೊದಲೇ ಗಣತಿ ನಮೂನೆಗಳ ಹಂಚಿಕೆಯನ್ನು ಪೂರ್ಣಗೊಳಿಸಿರುವುದರಿಂದ ಮತ್ತು ಶೇ. 92.31 ರಷ್ಟು ಡಿಜಿಟಲೀಕರಣ ಸಾಧನೆ ಮಾಡಲಾಗಿರುವುದರಿಂದ, ಪ್ರಗತಿಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು 108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅವರು ತಿಳಿಸಿದರು.
ಅವರು ಮಂಗಳವಾರ ದಾವಣಗೆರೆ ತಾಲ್ಲೂಕು ಕಚೇರಿಯಲ್ಲಿ ದಾವಣಗೆರೆ ಜಿಲ್ಲೆಯ 108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕುರಿತು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಒಟ್ಟು 1,97,048 ಮತದಾರರನ್ನು ಹೊಂದಿದ್ದು ಎಲ್ಲಾ 1,97,048 ಗಣತಿ ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ ಇದುವರೆಗೆ ಒಟ್ಟು 1,81,890 ಗಣತಿ ನಮೂನೆಗಳನ್ನು ಡಿಜಿಟಲೀಕರಿಸಲಾಗಿದ್ದು, ಶೇಕಡಾ 92.31 ರಷ್ಟು ಗುರಿಯನ್ನು ತಲುಪಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (SIR) ಪ್ರಕ್ರಿಯೆಯಲ್ಲಿ ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಗಣತಿ ನಮೂನೆಗಳ ಹಂಚಿಕೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯು ಬಿರುಸಿನಿಂದ ಸಾಗಿದ್ದು, ಇನ್ನು ಕೇವಲ 4,165 ಫಾರ್ಮ್‌ಗಳು (ಶೇಕಡಾ 2.11) ಮಾತ್ರ ಡಿಜಿಟಲೀಕರಣಕ್ಕೆ ಬಾಕಿ ಇವೆ ಕ್ಷೇತ್ರದಲ್ಲಿ ಯಾವುದೇ ಹಂಚಿಕೆಯಾಗದ ಫಾರ್ಮ್‌ಗಳು ಬಾಕಿ ಉಳಿದಿಲ್ಲ, ಬಾಕಿ ಉಳಿದಿರುವ ಗಣತಿ ನಮೂನೆಗಳ ಗಣಕೀಕರಣ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಮನೆ ಮನೆ ಭೇಟಿ ಸಂದರ್ಭದಲ್ಲಿ ಇಂದಿನವರೆಗೆ ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10,993 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪತಿ (ಡೂಪ್ಲಿಕೇಟ್) ಸೇರಿದಂತೆ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 193 ನಮೂನೆಗಳು ಸಂಗ್ರಹವಾಗದೆ ಉಳಿದಿದ್ದು, 5059 ಶಾಶ್ವತ ವಲಸೆ, 3951 ಮರಣ ಪ್ರಕರಣ, 1760 ದ್ವಿಪ್ರತಿ ನಮೂನೆಗಳು ಹಾಗೂ 30 ಇತರೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ರಾಜೇಶ್ ಕುಮಾರ್ ಸಿ ಅವರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
-
ದಿನದ ಸುದ್ದಿ3 days agoನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ
-
ದಿನದ ಸುದ್ದಿ2 days agoಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ

