Connect with us

ದಿನದ ಸುದ್ದಿ

ಹತ್ತರ ಮಕ್ಕಳು ಏರಬೇಕು ಇನ್ನೂ ಎತ್ತರ; ಇಲ್ಲವಾದರೆ ಪರೀಕ್ಷೆಯಲ್ಲಿ ತತ್ತರ..!

Published

on

  • ಕುಮಾರಸ್ವಾಮಿ ವಿ ಕೆ,ಪ್ರೌಢಶಾಲಾ ಮುಖ್ಯ ಶಿಕ್ಷಕರು,ಸಿದ್ಧಾರ್ಥ ಆಂಗ್ಲ ಶಾಲೆ, ಬೆಂಗಳೂರು

2022 – 23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಅಂತೆಯೇ ಈ ಬಾರಿಯ ಶೈಕ್ಷಣಿಕ ಚಟುವಟಿಕೆಗಳೂ ಸಹ ನಿರ್ವಿಘ್ನವಾಗಿ ಸಾಗಿವೆ. ಆದರೆ ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳು ಮಕ್ಕಳನ್ನು ಇನ್ನೂ ಕಾಡುತಿವೆ. ಮಂಕಾಗಿದ್ದ ಮಕ್ಕಳಿಗೆ ಶಾಲೆ ಪುನರಾರಂಭ ಸಂತಸ ತಂದಿದ್ದರೂ ಹಲವು ಮಕ್ಕಳು ಈಗಲೂ ಶಿಕ್ಷಣದ ಮುಖ್ಯ ವಾಹಿನಿಗೆ ಬಂದಿಲ್ಲ. ಹೀಗಾಗಿ ಪರೀಕ್ಷೆ ತಯಾರಿ ಕುರಿತು ಇಲ್ಲೊಂದು ಲೇಖನ.

ಪಾಠಗಳ ಪರಿಚಯ ಅಗತ್ಯ

ಪರೀಕ್ಷೆಗಾಗಿ ದಿನಗಳನ್ನು ಎಣಿಸುತ್ತಿರುವ ಈ ಹೊತ್ತಿನಲ್ಲಿ ಅನೇಕ ಮಕ್ಕಳಿಗೆ ಈಗಲೂ ತಾವು ಅಭ್ಯಸಿಸುತ್ತಿರುವ ವಿಷಯಗಳ ಅಧ್ಯಾಯಗಳ ಹೆಸರೇ ನೆನಪಿಲ್ಲ. ಇದು ಮೂಲಭೂತ ಅವಶ್ಯಕತೆಯಾಗಿದ್ದು, ಮಕ್ಕಳಿಗೆ ಮೊದಲು ತಾವು ಓದುತ್ತಿರುವ ಎಲ್ಲಾ ವಿಷಯದ ಅಧ್ಯಾಯಗಳ ಪರಿಚಯ ಅತ್ಯಗತ್ಯ. ಇದು ಮಕ್ಕಳ ಮೊದಲ ಕರ್ತವ್ಯವಾಗಿದ್ದು, ಪಾಠಗಳ ಹೆಸರು ನೆನಪಿದ್ದರೆ ಮಾತ್ರ ಅವುಗಳ ಬಗ್ಗೆ ಕನಿಷ್ಠ ಮಾಹಿತಿಗಳು ನೆನಪಿಗೆ ಬರಲು ಸಾಧ್ಯ. ಹೀಗೆ ಅಧ್ಯಾಯಗಳನ್ನು ನೆನಪಿಟ್ಟುಕೊಂಡಾಗ ಅದರಲ್ಲಿ ಅಡಕವಾಗಿರುವ ಪಠ್ಯಾಂಶಗಳನ್ನು ಸುಲಭವಾಗಿ ಪುನರ್ಮನನ ಮಾಡಿಕೊಳ್ಳಲು ಸಾಧ್ಯ.

ಗುರಿ ಮುಟ್ಟಲು ಜೊತೆಗಿರಲಿ ಎರಡನೇ ಗುರು

ಶಾಲೆಗಳಲ್ಲಿ ಎಲ್ಲಾ ವಿಷಯ ಶಿಕ್ಷಕರು ಈಗಾಗಲೇ ತಮ್ಮ ತಮ್ಮ ಬೋಧನಾ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಬಂದಿರುತ್ತಾರೆ ಹಾಗೂ ಪರೀಕ್ಷೆ ಕುರಿತು ಕಾಲಕಾಲಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಮಕ್ಕಳಿಗೂ ಸಹ ನೀಡುತ್ತಿರುತ್ತಾರೆ. ಶಿಕ್ಷಕರ ನಂತರ ಮಕ್ಕಳಿಗೆ ಎರಡನೇ ಗುರುವೆಂದರೆ ಅದು ಪಠ್ಯ ಪುಸ್ತಕ. ಅತ್ಯುತ್ತಮ ಅಂಕ ಗಳಿಕೆಯ ಗುರಿಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಅಭ್ಯಾಸ ಅತ್ಯಂತ ಸಹಕಾರಿಯಾಗಿದೆ.

ಆದ್ದರಿಂದ ಮಕ್ಕಳು ತಪ್ಪದೆ ಪಠ್ಯ ಪುಸ್ತಕಗಳನ್ನು ಅಭ್ಯಸಿಸಬೇಕು ಹಾಗೂ ಅದರಲ್ಲಿನ ಮುಖ್ಯಾಂಶಗಳನ್ನು ಒಂದೆಡೆ ಬರೆದಿಟ್ಟುಕೊಂಡರೆ ಒಳಿತು. ಇಂತಹ ಹವ್ಯಾಸ ಬೆಳೆಸಿಕೊಂಡ ವಿದ್ಯಾರ್ಥಿಗಳ ಫಲಿತಾಂಶ ಬಹುತೇಕ ಅಧಿಕವಾಗಿರುತ್ತದೆ ಮತ್ತು ಗುಟ್ಟಮಟ್ಟದಿಂದ ಕೂಡಿರುತ್ತದೆ. ವಿದ್ಯಾರ್ಥಿಗಳ ಬಳಿ ಎಂತಹುದೇ ಅಧ್ಯಯನ ಸಾಮಗ್ರಿಗಳು ಇದ್ದರೂ, ಪಠ್ಯ ಪುಸ್ತಕವನ್ನು ಓದಿ ಅರ್ಥೈಸಿಕೊಂಡರೆ ಅದರ ಪ್ರತಿಫಲವೂ ಅತ್ಯುತ್ತಮವಾಗಿಯೇ ಇರುತ್ತದೆ. ಹೀಗೆ ಆಳವಾಗಿ ಅಧ್ಯಯನ ಮಾಡುವ ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕೂ ಸಹ ನೆರವಾಗುತ್ತದೆ.

ಓದಿಗಿರಲಿ ಪ್ರತ್ಯೇಕ ವೇಳಾಪಟ್ಟಿ

ಬಹುತೇಕ ವಿದ್ಯಾರ್ಥಿಗಳಲ್ಲಿ ಕಂಡುಬರುವ ಕೊರತೆ ಎಂದರೆ ಕೇವಲ ಬರವಣಿಗೆಗೆ ಹೆಚ್ಚು ಆದ್ಯತೆ ಕೊಡುವುದು. ಅದರಲ್ಲೂ ಹೆಚ್ಚಾಗಿ ಚಟುವಟಿಕೆಗಳ ರಚನೆಗೆ ಹೆಚ್ಚು ಸಮಯ ಮೀಸಲಿಡುವುದರಿಂದ ಓದಿಗೆ ಸಮಯ ಸಿಗದೆ ಮಾಸಿಕ ಪರೀಕ್ಷೆ, ಘಟಕ ಪರೀಕ್ಷೆಯ ಸಮಯದಲ್ಲಿ ಮಕ್ಕಳು ಕಡಿಮೆ ಅಂಕಗಳಿಸಲು ಕಾರಣವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಪ್ರತಿದಿನ ಓದಿಗಾಗಿಯೇ ಪ್ರತ್ಯೇಕ ಸಮಯವನ್ನು ಮೀಸಲಿಡಬೇಕು. ಆ ಸಮಯದಲ್ಲಿ ಯಾವುದೇ ವಿಧದ ಬರವಣಿಗೆಗೆ ಆದ್ಯತೆ ನೀಡಬಾರದು. ಓದಿದ ಪ್ರಶ್ನೋತ್ತರಗಳನ್ನು ಒಮ್ಮೆ ಬರೆದರೆ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ. ಓದುವ ವೇಳೆ ಸಂಪೂರ್ಣ ಏಕಾಗ್ರತೆ ಇರಲಿ. ಗಾಳಿ ಬೆಳಕಿನ ವ್ಯವಸ್ಥೆ ಚೆನ್ನಾಗಿರಲಿ. ಯಾವುದೇ ಬಗೆಯ ಅಡೆತಡೆಗಳು ಇರದಿರಲಿ. ಓದಿನ ನಡುವೆ ಆಗಾಗ ಸ್ವಲ್ಪ ವಿರಾಮವೂ ಸಹ ಅಗತ್ಯ.

ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಸಂಗ್ರಹ

ವಾರ್ಷಿಕ ಪರೀಕ್ಷೆಯನ್ನು ಎದುರಿಸುವ ಮುನ್ನ ವಿದ್ಯಾರ್ಥಿಗಳು ಹಿಂದಿನ ಐದಾರು ವರ್ಷದ ಪ್ರಶ್ನೆ ಪತ್ರಿಕೆಗಳನ್ನಯ ಗಮನಿಸುವುದರಿಂದ ಪರೀಕ್ಷೆಯ ಭಯ ಇಲ್ಲದಂತಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಉತ್ತರ ಬರೆಯುವ ಕೌಶಲ್ಯ ಸಹ ಲಭಿಸುತ್ತದೆ. ತಾವು ಉತ್ತರಿಸಿದ ಪ್ರಶ್ನೆಗಳನ್ನು ವಿದ್ಯಾರ್ಥಿಗಳೇ ಸ್ವ ಮೌಲ್ಯಮಾಪನ ಮಾಡಿಕೊಂಡಾಗ ತಮ್ಮ ತಪ್ಪಿನ ಅರಿವಾಗುತ್ತದೆ ಹಾಗೆಯೇ ಮುಂದೆ ಇಂತಹ ತಪ್ಪುಗಳು ಆಗದಂತೆ ಎಚ್ಚರ ವಹಿಸಲು ಸಹಕಾರ ಸಿಗುತ್ತದೆ. ಇಷ್ಟೇ ಅಲ್ಲದೆ ವಿದ್ಯಾರ್ಥಿಗಳು ಸ್ವತಃ ತಾವೇ ಅಧ್ಯಾಯವಾರು ಪ್ರಶ್ನೆಗಳನ್ನು ರಚಿಸಿಕೊಂಡು ಅದಕ್ಕೆ ಉತ್ತರಿಸಿದರೆ ಅವರ ಆತ್ಮ ವಿಶ್ವಾಸ ಇಮ್ಮಡಿಯಾಗುತ್ತದೆ. ಪ್ರಶ್ನೆ ಪತ್ರಿಕೆಯ ವಿನ್ಯಾಸ ತಿಳಿಯಲು ಸಹ ಈ ವಿಧಾನ ನೆರವಾಗುತ್ತದೆ.

ಎಲ್ಲವೂ ಮಿತಿಯಲ್ಲಿರಲಿ

ಓದಿನಂತೆಯೇ ಮಕ್ಕಳಿಗೆ ಆಟ, ವಿಹಾರ, ಆಹಾರವೂ ಮುಖ್ಯ. ಈ ರೀತಿಯ ವಿಧಾನಗಳನ್ನ ಅನುಸರಿಸುವುದರಿಂದ ಮಕ್ಕಳಲ್ಲಿ ಓದಿದ್ದು ಹೆಚ್ಚು ಕಾಲ ಉಳಿಯುತ್ತದೆ. ಉತ್ತಮ ನಿದ್ದೆ, ಆಟಗಳಿಂದ ದೇಹ ಮತ್ತು ಮನಸ್ಸು ಹಗುರವಾಗುತ್ತದೆ. ಅಂತೆಯೇ ಆಹಾರವೂ ಸಹ ಬಹು ಮುಖ್ಯ. ಸರಿಯಾದ ಸಮಯಕ್ಕೆ ಈ ಚಟುವಟಿಕೆಗಳು ನಡೆಯದಿದ್ದರೆ ಮಕ್ಕಳಲ್ಲಿ ಒತ್ತಡ ಹೆಚ್ಚುವ ಸಾಧ್ಯತೆ ಹೆಚ್ಚಿರುತ್ತದೆ. ಪ್ರತಿನಿತ್ಯ ಮಕ್ಕಳೊಂದಿಗೆ ಪೋಷಕರು ಹತ್ತಿಪ್ಪತ್ತು ನಿಮಿಷ ಚರ್ಚಿಸಿ ವಿದ್ಯಾಭ್ಯಾಸದಲ್ಲಿ ಮಗುವಿಗೆ ಏನಾದರೂ ಒತ್ತಡಗಳಿವೆಯೇ ಎಂದು ತಿಳಿದು ಅದಕ್ಕೆ ಸೂಕ್ತ ಪರಿಹಾರಗಳನ್ನು ಒದಗಿಸಬೇಕು, ಒತ್ತಡದಿಂದ ಹಲವು ಮಕ್ಕಳು ಆಹಾರ ಸೇವನೆಯಿಂದ ದೂರ ಉಳಿಯುತ್ತಿರುವುದು ಇಂದಿನ ದಿನಗಳಲ್ಲಿ ಹೆಚ್ಚುತ್ತಿದೆ ಹೀಗಾಗಿ ಪೋಷಕರು ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಬೇಕು.

ಸಹಪಾಠಿಗಳೊಂದಿಗೆ ಚರ್ಚೆ

ತನ್ನ ಪ್ರತಿಭಾವಂತ ಸಹಪಾಠಿಗಳೊಂದಿಗೆ ಪ್ರತಿದಿನ ಚರ್ಚೆಯಲ್ಲಿ ತೊಡಗುವ ಮೂಲಕವೂ ಮಗು ಯಾವುದೇ ಪಠ್ಯ ವಿಷಯದಲ್ಲಿ ತನಗಿರುವ ತೊಂದರೆಯನ್ನು ಪರಿಹರಿಸಿಕೊಳ್ಳಬಹುದು. ಇದು ಸಹ ಪರಿಣಾಮಕಾರಿ ಹಾದಿಯಾಗಿದ್ದು ಅತಿ ವೇಗದ ಕಲಿಕೆಗೆ ಪ್ರೋತ್ಸಾಹ ದೊರೆಯುತ್ತದೆ. ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗಂತೂ ಇದರಿಂದ ಹೆಚ್ಚು ಅನುಕೂಲಗಳು ಲಭಿಸುತ್ತವೆ. ಓದಿದ ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಾಗ ಅದು ದೀರ್ಘಾವಧಿಯವರೆಗೆ ಮನಸ್ಸಿನಲ್ಲಿ ಉಳಿಯುತ್ತದೆ.

ಶಿಕ್ಷಕರೊಂದಿಗೆ ನಿರಂತರ ಸಂಪರ್ಕ

ಮಕ್ಕಳು ತಮಗೆ ಬರುವ ಸಂದೇಹಗಳನ್ನು ತತಕ್ಷಣವೇ ಸಂಬಂಧಿಸಿದ ಶಿಕ್ಷಕರ ನೆರವಿನೊಂದಿಗೆ ಪರಿಹರಿಸಿಕೊಳ್ಳಬೇಕು. ಸದಾಕಾಲ ಶಿಕ್ಷಕರ ಸಂಪರ್ಕದಲ್ಲಿದ್ದುಕೊಂಡು ಓದಿಗೆ ಪೂರಕ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕು. ಶಾಲೆಗೆ ಹೆಚ್ಚು ಗೈರು ಹಾಜರಾಗದೆ ಅಂದಿನ ಕೆಲಸಗಳನ್ನು ಬಾಕಿ ಇಲ್ಲದಂತೆ ಮಾಡಿ ಮುಗಿಸಿಕೊಳ್ಳಬೇಕು. ಇದರಿಂದ ಮಗುವಿನಲ್ಲಿ ನಿರಾಳತೆ ನಿರ್ಮಾಣವಾಗಿ ಶಾಂತ ರೀತಿಯ ಕಲಿಕೆಗೆ ಅವಕಾಶ ಸಿಗುತ್ತದೆ.

ಮೊಬೈಲ್ ಹುಚ್ಚು; ಹಚ್ಚುವುದು ಕಿಚ್ಚು

ಇಂದು ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಅತಿ ಹೆಚ್ಚು ಕೇಳಿ ಬರುತ್ತಿರುವ ದೂರೆಂದರೆ ಅತಿಯಾದ ಮೊಬೈಲ್ ಬಳಕೆ. ಲಾಕ್‌ ಡೌನ್ ಅವಧಿಯಲ್ಲಿ ಮಕ್ಕಳ ಕೈಗೆ ಸಿಕ್ಕ ಮೊಬೈಲ್ ಸಹವಾಸ ಇಂದಿಗೂ ಸಹ ನಿರಂತರವಾಗಿ ಮುಂದುವರಿಯುತ್ತಿದ್ದು, ಇದು ಮಕ್ಕಳ ಓದಿನ ಮೇಲೆ ಸಂಪೂರ್ಣ ಋಣಾತ್ಮಕ ಪರಿಣಾಮವನ್ನು ಬೀರುತ್ತಿದೆ. ಅನೇಕ ಮಕ್ಕಳು ಈಗಲೂ ಮೊಬೈಲ್ ದಾಸರಾಗಿದ್ದು ಮಿತಿಮೀರಿದ ಬಳಕೆಯಿಂದ ಅವರ ಸ್ಮರಣ ಶಕ್ತಿ ಮತ್ತು ಧಾರಣ ಶಕ್ತಿ ಕ್ಷೀಣಿಸುತ್ತಿದೆ. ಈ ಬಗ್ಗೆ ಗಮನ ವಹಿಸುವುದು ಪ್ರತಿ ಪೋಷಕರ ಆದ್ಯ ಕರ್ತವ್ಯವಾಗಿದೆ. ಏಕೆಂದರೆ ಬಹುತೇಕ ಮಕ್ಕಳು ಮೊಬೈಲ್ ಫೋನನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸದೆ, ಗೇಮ್ ಆಡಲು, ಅಶ್ಲೀಲ ಚಿತ್ರ ವೀಕ್ಷಣೆ, ಪ್ರೀತಿ ಪ್ರೇಮದ ಬಲೆಗೆ ಮಕ್ಕಳು ಬೀಳುತ್ತಿದ್ದಾರೆ. ಕೆಲವೊಮ್ಮೆ ಪೋಷಕರ ಅತಿಯಾದ ಪ್ರೀತಿ ಸಹ ಮಕ್ಕಳನ್ನು ಕ್ಲಿಷ್ಟಕರ ಪರಿಸ್ಥಿತಿಗೆ ತಳ್ಳುತ್ತಿದೆ. ಇದು ಮಗುವಿನ ಜೀವನಕ್ಕಲ್ಲದೆ ಜೀವಕ್ಕೂ ಅಪಾಯ ತರುವ ಸಾಧ್ಯತೆಗಳು ಹೆಚ್ಚಿರುತ್ತದೆ. ಆದ್ದರಿಂದ ಈಗಲಾದರೂ ಇದಕ್ಕೆ ಕಡಿವಾಣ ಹಾಕಬೇಕಿದೆ.

ಬದಲಾಗಿದೆ ಮಕ್ಕಳ ವರ್ತನೆ

ಕೋವಿಡ್ ಸಮಯದಲ್ಲಿ ಮನೆಯಲ್ಲೇ ಉಳಿದಿದ್ದ ಮಕ್ಕಳ ವರ್ತನೆಯಲ್ಲಿ ಇಂದು ಹೆಚ್ಚು ಋಣಾತ್ಮಕ ಬದಲಾವಣೆಗಳು ಕಂಡುಬರುತ್ತಿವೆ. ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸುವುದಕ್ಕಿಂತ ಹೆಚ್ಚಾಗಿ ಅವರ ನಡಾವಳಿಯನ್ನು ಸರಿಮಾಡುವುದರಲ್ಲೇ ಹೆಚ್ಚು ಸಮಯ ವ್ಯರ್ಥವಾಗುತ್ತದೆ. ಶಿಕ್ಷಣ ವ್ಯವಸ್ಥೆಯ ಒಂದು ಭಾಗವಾಗಿರುವ ಪೋಷಕರು ಕೈಗೂಡಿಸಿದಾಗ ಮಾತ್ರ ಇದಕ್ಕೆ ಸೂಕ್ತ ಪರಿಹಾರ ಒದಗಿಸಲು ಸಾಧ್ಯ.

ಏಕೆಂದರೆ ಶಾಲೆಗಳಲ್ಲಿ ನಿರಂತರವಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗುವ ನಮ್ಮ ಶಿಕ್ಷಕ ಬಂಧುಗಳು, ಪ್ರತೀ ಮಗುವಿನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುತ್ತಾರೆ. ಆದರೆ ಈ ನಡುವೆ ಅಸಹಜ ನಡವಳಿಕೆ ತೋರುವ ಮಕ್ಕಳಿಂದ ಇಡಿಯ ತರಗತಿ ಅಸ್ತವ್ಯಸ್ತತವಾಗಿ ಪ್ರತಿಭಾವಂತ ಮಕ್ಕಳಿಗೂ ತೊಂದರೆಗಳು ಆಗುತ್ತಿವೆ. ಆದ್ದರಿಂದ ಇಂತಹ ಮಕ್ಕಳ ಮೇಲೆ ಪೋಷಕರು ಸಹ ತೀವ್ರ ನಿಗಾ ವಹಿಸಿ ತಮ್ಮ ಮಗುವನ್ನ ನೈತಿಕ ಹಾದಿಗೆ ತರಬೇಕಿದೆ.

ಅತಿಯಾದ ಕೋಪ, ಸುಳ್ಳು ಹೇಳುವುದು, ಪುಂಡ ಗೆಳೆಯರ ಸಹವಾಸ, ಬೀಡಿ, ಸಿಗರೇಟ್ ಚಟ, ಮದ್ಯಪಾನದಂತಹ ಸಮಸ್ಯೆಗಳು ಕಂಗೆಡಿಸಿವೆ. ಎಳೆಯ ವಯಸ್ಸಿನಲ್ಲಿಯೇ ಇವುಗಳಿಗೆ ಮಕ್ಕಳು ದಾಸರಾದರೆ ಮುಂದೆ ಈ ಸಮಾಜದ ಅಡಿಪಾಯ ಅಲುಗಾಡುವುದರಲ್ಲಿ ಸಂಶಯವೇ ಇಲ್ಲ. ಹಿರಿಯರ ಮಾತಿನಂತೆ “ಎಷ್ಟು ಓದಿದ್ದೇವೆ ಎನ್ನುವುದು ಮುಖ್ಯವಲ್ಲ; ಆ ಓದಿನಿಂದ ಏನು ಕಲಿತಿದ್ದೇವೆ ಎಂಬುದೇ ಮುಖ್ಯ” ಹೀಗಾಗಿ ಇದು ಇಂದು ತುರ್ತಾಗಿ ಬಗೆಹರಿಸಬೇಕಾದ ಸಮಸ್ಯೆಯಾಗಿದೆ.

ಕಲಿಕೆಗಾಗಿ ದಶ ಸೂತ್ರಗಳು

  1. ಅನೇಕ ಮಕ್ಕಳು ಕೇವಲ ಉತ್ತರಗಳನ್ನು ಕಲಿಯುತ್ತಾರೆ, ಆದರೆ ಪ್ರಶ್ನೆಯೂ ಅತಿ ಮುಖ್ಯ
  2. ಓದಿನಲ್ಲಿ ಶ್ರದ್ಧೆ, ಆಸಕ್ತಿ ಇರಲಿ, ಒತ್ತಡ ಬೇಡ
  3. ಕಲಿಕೆಯಲ್ಲಿ ಖುಷಿ ಇರಲಿ
  4. ಕಿರು ಪರೀಕ್ಷೆ, ಘಟಕ ಪರೀಕ್ಷೆಗಳನ್ನೂ ಸಹ ಮುಖ್ಯ ಪರೀಕ್ಷೆ ಎಂದೇ ಭಾವಿಸಿ
  5. ಓದಿನ ನಡುವೆ ವಿಶ್ರಾಂತಿ ಅತ್ಯಗತ್ಯ
  6. ಪರೀಕ್ಷೆ ಯುದ್ಧವಲ್ಲ; ಅದೊಂದು ಹಬ್ಬವೆಂದು ಅಭ್ಯಸಿಸಿ
  7. ಪದ್ಯಗಳು, ಗಣಿತದ ಸೂತ್ರಗಳು, ಭೂಪಟ, ವಿಜ್ಞಾನದ ಚಿತ್ರಗಳು, ವ್ಯಾಕರಣ ಎಲ್ಲವನ್ನೂ ಪ್ರತಿನಿತ್ಯ ಅಭ್ಯಸಿಸಿ
  8. ಓದುವ ಕೋಣೆ ದೇವರ ಕೋಣೆಯಷ್ಟೇ ಸ್ವಚ್ಛ ಮತ್ತು ಶಾಂತವಾಗಿರಲಿ
  9. ಗೊತ್ತಿರುವ ಪ್ರಶ್ನೋತ್ತರಗಳನ್ನು ಮರೆಯದಂತೆ ನಿತ್ಯವೂ ಒಮ್ಮೆ ಅಭ್ಯಸಿಸಿ
  10. ಓದು, ಓದಿದ್ದನ್ನು ಬರೆ, ಬರೆದದ್ದನ್ನು ಪರಿಶೀಲಿಸು

(ಕುಮಾರಸ್ವಾಮಿ ವಿ ಕೆ
ಪ್ರೌಢಶಾಲಾ ಮುಖ್ಯ ಶಿಕ್ಷಕರು
ಸಿದ್ಧಾರ್ಥ ಆಂಗ್ಲ ಶಾಲೆ
ಬೆಂಗಳೂರು ಉತ್ತರ
9113906120)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನಡೆಸ್ಕ್:ರಾಜ್ಯದ ಎಲ್ಲ ಪರಿಶ್ಟಿಷ್ಟ ವರ್ಗದ ವಸತಿ ಶಾಲೆಗಳಿಗೆ ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ವಿಧಾನಸೌಧ ಮುಂಭಾಗದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರು ಮಹನೀಯರಿಗೆ ವಾಲ್ಮೀಕಿ ಪ್ರಶಸ್ತಿ ವಿತರಿಸಿ, ಅವರು ಮಾತನಾಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಅವರ ಕಲ್ಯಾಣಕ್ಕೆ ತಮ್ಮ ಸರ್ಕಾರ ಬಜೆಟ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಹಣ ನಿಗದಿಮಾಡಿತ್ತು ಎಂದರು.

ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ನಿವಾರಣೆಯಾಗದ ಹೊರತು, ಸಮಾನತೆ ಬರುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ರಾಜಾನಹಳ್ಳಿ ವಾಲ್ಮೀಕಿ ಸಮುದಾಯ ಮಠದ ಜಗದ್ಗುರು ಪ್ರಸನ್ನಾನಂದಪುರಿ, ಸಚಿವರಾದ ಸತೀಶ್ ಜಾರಕಿಹೊಳ್ಳಿ, ಕೆ.ಎನ್. ರಾಜಣ್ಣ, ಸತೀಶ್ ಜಾರಕಿಹೊಳಿ, ಎಚ್.ಕೆ. ಪಾಟೀಲ್ ಮೊದಲಾದವರು ಹಾಜರಿದ್ದರು.

ವಾಲ್ಮೀಕಿ ಪ್ರಶಸ್ತಿ

ಜಾನುವಾರು ರಕ್ಷಣೆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಗ್ರಾಮೀಣ ಸೊಗಡನ್ನು ಉಳಿಸಿ, ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸಿದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಿಲಾರಿ ಜೋಗಯ್ಯ ಬಿನ್ ಕಿಲಾರಿ ಬೋರಯ್ಯ, ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಅವಿರತ ಹೋರಾಟ ಮಾಡಿದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಡಾ. ಎಸ್. ರತ್ನಮ್ಮ, ಬೆಳಗಾವಿಯ ರಾಜಶೇಖರ ತಳವಾರ, ಬೆಂಗಳೂರು ಮೂಲದ ಕೆ.ಎಸ್. ಮೃತ್ಯುಂಜಯ,ವಿಜಯನಗರ ಜಿಲ್ಲೆಯ ರತ್ಮಮ್ಮ ಬಿ. ಸೋಗಿ ಅವರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಪ್ರಶಸ್ತಿ, 20 ಗ್ರಾಂ ಬಂಗಾರದ ಪದಕ ಹಾಗೂ 5 ಲಕ್ಷ ರೂಪಾಯಿ ನಗದು ಒಳಗೊಂಡಿದೆ.

ರಾಜ್ಯದಲ್ಲಿ ವಾಲ್ಮೀಕಿ ಜಯಂತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧೆಡೆಗಳಲ್ಲಿ ಇಂದು ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್. ಅನುರಾಧ ಮಾತನಾಡಿ, ಬದುಕಿನ ಮೌಲ್ಯಗಳನ್ನು ಬಿಂಬಿಸುವ ರಾಮಾಯಣ ಕಾವ್ಯ ರಚಿಸಿದ ವಾಲ್ಮೀಕಿ ಮಹರ್ಷಿ ಸದಾ ಸ್ಮರಣೀಯರಾಗಿದ್ದಾರೆ ಎಂದರು.

ದೊಡ್ಡಬಳ್ಳಾಪುರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು ಮಾತನಾಡಿ, ಮಹರ್ಷಿಗಳ ಸಾಧನೆ ಮತ್ತು ಸಮಾಜಕ್ಕೆ ನೀಡಿದ ಸಂದೇಶವನ್ನು ಅರಿಯಬೇಕಿದೆ ಎಂದರು.

ಹಾಸನದಲ್ಲಿಂದು ಆಯೋಜಿಸಲಾಗಿದ್ದ ಆಕರ್ಷಕ ಮೆರವಣಿಗೆಗೆ ಶಾಸಕ ಸ್ವರೂಪ ಪ್ರಕಾಶ್ ಚಾಲನೆ ನೀಡಿದರು. ಬಳಿಕ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಿತು.
ಕೋಲಾರದಲ್ಲಿ ಶಾಸಕ ಕೊತ್ತೂರು ಜಿ. ಮಂಜುನಾಥ್ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿ, ನಂತರ ಡೊಳ್ಳು ಹೊಡೆಯುವ ಮೂಲಕ ಬೃಹತ್ ಪಲ್ಲಕ್ಕಿಗಳ ಮೆರವಣಿಗೆಗೆ ಚಾಲನೆ ನೀಡಿದರು.

ಚಿತ್ರದುರ್ಗದಲ್ಲಿ ವಾಲ್ಮೀಕಿ ಭಾವಚಿತ್ರ ಹಾಗೂ ಪುತ್ಥಳಿ ಮೆರವಣಿಗೆ ವಿವಿಧ ಜಾನಪದ ಕಲಾತಂಡಗಳ ಸಮ್ಮುಖದಲ್ಲಿ ನಡೆಯಿತು. ಹಾವೇರಿಯಲ್ಲಿಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ ಶ್ರೀಧರ್ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಪ್ಪು ನಮನ ಸಲ್ಲಿಸಿದರು.

ಗದಗ ಜಿಲ್ಲೆಯ ನಾಗಾವಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವ ಪ್ರೋಫೆಸರ್ ಸುರೇಶ್ ನಾಡಗೌಡ ಮಾತನಾಡಿ, ವಾಲ್ಮೀಕಿ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರವಾರದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಮಾತನಾಡಿ, ರಾಮಾಯಣದಲ್ಲಿ ಪರಿಸರಕ್ಕೆ ಮಹತ್ವ ನೀಡಿದ್ದು, ಅದರಂತೆಯೇ ಉತ್ತರಕನ್ನಡ ಜಿಲ್ಲೆಯಲ್ಲಿನ ವನ್ಯ ಸಂಪತನ್ನು ಕಾಪಾಡಲು ಜನತೆ ಕಾಳಜಿ ತೋರಬೇಕು ಎಂದು ಹೇಳಿದರು.
ಬೆಳಗಾವಿಯಲ್ಲೂ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಜಯಂತಿ ಆಚರಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳ ಐವರು ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ

Published

on

ಸುದ್ದಿದಿನಡೆಸ್ಕ್:ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಜಯಂತಿ ಇಂದು. ಈ ಹಿನ್ನೆಲೆಯಲ್ಲಿ ವಿವಿಧೆಡೆ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತಿದೆ.

ಮಹರ್ಷಿ ವಾಲ್ಮೀಕಿಯನ್ನು ’ಆದಿ ಕವಿ’ ಅಥವಾ ಸಂಸ್ಕೃತ ಭಾಷೆಯ ಮೊದಲ ಕವಿ ಎಂದು ಹೇಳಲಾಗುತ್ತದೆ. ಹಲವೆಡೆ ಜಯಂತಿಯ ಅಂಗವಾಗಿ ಶೋಭಾ ಯಾತ್ರೆ ಮೆರವಣಿಗೆಗಳನ್ನು ಹಮ್ಮಿಕೊಳ್ಳಲಾಗಿದೆ.

ಮಹರ್ಷಿ ವಾಲ್ಮೀಕಿ ಅವರ ಸ್ಮರಣಾರ್ಥ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕರ್ನಾಟಕ ಸರ್ಕಾರ 2024 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಘೋಷಿಸಿದೆ.

ಜಾನುವಾರುಗಳ ಸಂತತಿಯ ಸಂರಕ್ಷಣೆಯಲ್ಲಿ ತೊಡಗಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಿಲಾರಿ ಜೋಗಯ್ಯ, ಬುಡಕಟ್ಟು ಮಕ್ಕಳ ಶಿಕ್ಷಣದ ಹೋರಾಟಗಾರ್ತಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಡಾ.ರತ್ನಮ್ಮ.ಎಸ್, ಗುಡ್ಡಗಾಡು ಪ್ರದೇಶದಲ್ಲಿರುವ ಬುಡಕಟ್ಟು ಸಮುದಾಯದ ಜನರಿಗೆ ಶಿಕ್ಷಣ, ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುತ್ತಿರುವ ಬೆಳಗಾವಿಯ ಗಾಂಧಿನಗರದ ರಾಜಶೇಖರ ತಳವಾರ, ಪರಿಶಿಷ್ಟ ಪಂಗಡ ಸಮುದಾಯದ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಕುರಿತು ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬೆಂಗಳೂರು ನಿವಾಸಿಯಾದ ಕೆ.ಎಸ್.ಮೃತ್ಯುಂಜಯ, ರಂಗಭೂಮಿ ಕಲಾವಿದೆಯಾದ ವಿಜಯನಗರ ಜಿಲ್ಲೆ ಹರಪ್ಪನಹಳ್ಳಿಯವರಾದ ರತ್ನಮ್ಮ ಬಿ ಸೋಗಿ ಅವರಿಗೆ ಈ ಸಾಲಿನ ಪ್ರಶಸ್ತಿಗಳನ್ನು ಇಂದು ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜಾತಿ ಪ್ರಮಾಣಪತ್ರ ಗೊಂದಲ ನಿವಾರಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Published

on

ಸುದ್ದಿದಿನಡೆಸ್ಕ್:ಜಾತಿ ಪ್ರಮಾಣ ಪತ್ರದ ಬಗೆಗಿನ ಗೊಂದಲ ನಿವಾರಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು ಗೊಂದಲವನ್ನು ನಿವಾರಿಸಿ, ಸೂಕ್ತ ಸುತ್ತೋಲೆ ಹೊರಡಿಸುವಂತೆ ಸಮಾಜ ಕಲ್ಯಾಣ ಕಾರ್ಯದರ್ಶಿಗಳು ಹಾಗೂ ಕಾನೂನು ಇಲಾಖಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಇಂದು ಪರಿಶಿಷ್ಟ ಪಂಗಡದ ಸಮುದಾಯಗಳ ಸಭೆ ನಡೆಸಲಾಗಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಅವ್ಯವಹಾರದ ಹಿನ್ನಲೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಅನುದಾನದ ಕೊರತೆಯಾಗಬಾರದೆಂದು ಸೂಚಿಸಿದ್ದಾರೆ.

ಈ ವರ್ಷದಲ್ಲಿ ನಿಗದಿಪಡಿಸಲಾಗಿರುವ ಅನುದಾನವನ್ನು ಸಂಪೂರ್ಣವಾಗಿ ಒದಗಿಸಲಾಗುವುದು. ನಿಗಮದಲ್ಲಿ ಸುಮಾರು 89 ಕೋಟಿ 63 ಲಕ್ಷ ರೂಪಾಯಿಗಳ ಮೊತ್ತ ಅವ್ಯವಹಾರವಾಗಿದ್ದು, ಇದರಲ್ಲಿ 5 ಕೋಟಿ ರೂಪಾಯಿಗಳನ್ನು ವಾಪಸ್ಸು ಪಡೆಯಲಾಗಿದೆ. ಉಳಿದ 84 ಕೋಟಿ 63 ಲಕ್ಷ ರೂಪಾಯಿಗಳಲ್ಲಿ 71 ಕೋಟಿ 54 ಲಕ್ಷ ರೂಪಾಯಿಗಳನ್ನು ವಸೂಲು ಮಾಡಲಾಗಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending