Connect with us

ದಿನದ ಸುದ್ದಿ

ಅಸ್ತಮಾ ಸಮಸ್ಯೆಗೆ ಶಾಶ್ವತ ಪರಿಹಾರ

Published

on

ಇಂದು ಅಸ್ತಮಾ ರೋಗದ ಬಗ್ಗೆ ಕೆಲವು ಮುಖ್ಯ ಮತ್ತು ವಿಶೇಷ ವಿಷಯಗಳನ್ನು ತಿಳಿದುಕೊಳ್ಳೋಣ.ಅಸ್ತಮಾ ಸಮಸ್ಯೆ ಒಮ್ಮೆ ಬಂತೆಂದರೆ, ಜೀವನಪರ್ಯಂತ ಇದರಿಂದ ಬಳಲಲೇಬೇಕು ಮತ್ತು ಇನ್ಹೇಲರ್ ಗಳನ್ನು ಬಿಡಲು ಸಾಧ್ಯವೇ ಇಲ್ಲ ಎಂಬ ಕಲ್ಪನೆ ಜನರಲ್ಲಿ ಇದೆ. ಇದು ಅರ್ಧ ಸತ್ಯ; ಏಕೆಂದರೆ ನಾವು ಮನಸ್ಸು ಮಾಡಿದರೆ ಇದರಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಿದೆ. ಯಾವ ಕಾರಣದಿಂದ ಅಸ್ತಮಾ ಸಮಸ್ಯೆ ಬಂದಿದ್ದರೂ ನಮ್ಮ ಜೀವನ ಶೈಲಿ ಮತ್ತು ದಿನಚರಿಯ ಕ್ರಿಯೆಗಳು ಸರಿಯಾಗಿದ್ದರೆ ಅದನ್ನು ಖಂಡಿತ ಹತೋಟಿಯಲ್ಲಿಡಲು ಸಾಧ್ಯವಿದೆ. ಅತ್ಯುತ್ತಮ ಉದಾಹರಣೆ ಎಂದರೆ ಪ್ರಾಣಾಯಾಮ.

ಭಸ್ತ್ರಿಕಾ, ಕಪಾಲಭಾತಿ, ನಾಡಿಶೋಧನ, ಉಜ್ಜಾಯಿ, ಬಂಧಗಳಂತಹ ಪ್ರಾಣಾಯಾಮದ ಕ್ರಿಯೆಗಳನ್ನು ನಿತ್ಯವೂ ತಪ್ಪದೇ ಅಭ್ಯಾಸ ಮಾಡಿದರೆ ನಮ್ಮ ಶ್ವಾಸಾಂಗವ್ಯೂಹದ ಶಕ್ತಿ ಎಷ್ಟರಮಟ್ಟಿಗೆ ಹೆಚ್ಚಾಗುತ್ತದೆ ಎಂದರೆ ಸುಲಭಕ್ಕೆ ಅಸ್ತಮಾ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ. ಸುಲಭವಾಗಿ ಅರ್ಥವಾಗುವಂತೆ ಹೇಳಬೇಕೆಂದರೆ ಅಸ್ತಮಾ ಖಾಯಿಲೆಯಲ್ಲಿ ಸೂಕ್ಷ್ಮ ಶ್ವಾಸನಾಳಗಳಲ್ಲಿ ಹೆಚ್ಚಾದ ಲೋಳೆಯ ಸ್ರವಿಸುವಿಕೆಯ ಕಾರಣ ನಾಳಗಳು ಕಿರಿದಾಗಿ ಉಸಿರಾಟಕ್ಕೆ ಕಷ್ಟವಾಗುತ್ತದೆ.

ಇದರಿಂದ ಹೃದಯ, ಶ್ವಾಸಕೋಶ, ಮೆದುಳು ಮತ್ತು ಇಡೀ ದೇಹಕ್ಕೆ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾಗಿ ತಕ್ಷಣ ಸಮಸ್ಯೆ ಶಮನವಾಗಲು ಆಧುನಿಕ ವೈದ್ಯ ಪದ್ಧತಿಯಲ್ಲಿ ಹೇಳಿದ ಔಷಧಗಳನ್ನು ಅಥವಾ ಇನ್ಹೇಲರ್ ಗಳನ್ನು ಬಳಸುವುದು ಒಳ್ಳೆಯದೇ. ಆದರೆ ಶಾಶ್ವತ ಪರಿಹಾರಕ್ಕಾಗಿ ಭಾರತೀಯ ಚಿಕಿತ್ಸಾ ಪದ್ಧತಿಗಳು ವಿವರಿಸಿರುವ ಚಿಕಿತ್ಸೆಗಳ ಮೊರೆ ಹೋಗಲೇಬೇಕು.

ಆಸನ, ಪ್ರಾಣಾಯಾಮ, ಜಲನೇತಿ, ಸೂತ್ರನೇತಿಯಂತಹ ಕ್ರಿಯೆಗಳನ್ನು ನಿಯಮಿತವಾಗಿ ಅಭ್ಯಾಸದಲ್ಲಿ ಇಟ್ಟುಕೊಂಡರೆ ತುಂಬಾ ಸಹಾಯವಾಗುತ್ತದೆ. ಆಯುರ್ವೇದ ಹೇಳಿದ ವಮನ, ವಿರೇಚನದಂತಹ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಂಡರೆ ಬಹಳ ದೊಡ್ಡ ಪ್ರಮಾಣದಲ್ಲಿ ಅಸ್ತಮಾ ಹತೋಟಿಗೆ ಬರುತ್ತದೆ ಮತ್ತು ಆನುವಂಶಿಕವಾಗಿ ಬರುವ ಸಾಧ್ಯತೆ ಇದ್ದರೂ ಅದನ್ನು ತಡೆಗಟ್ಟುತ್ತದೆ. ಅಪರೂಪಕ್ಕೆ ಮಾತ್ರ ಜೀರ್ಣಕ್ರಿಯೆಗೆ ಕಷ್ಟಕರವಾದ ಆಹಾರಗಳನ್ನು ಅಂದರೆ ಕರಿದ ಪದಾರ್ಥಗಳು ಅಥವಾ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವಿಸಬೇಕೇ ಹೊರತು ಸಾಮಾನ್ಯವಾಗಿ ನಿತ್ಯವೂ ಲಘು ಭೋಜನವನ್ನೇ ಮಾಡಬೇಕು.

ಇದರಿಂದ ನಮ್ಮ ಶ್ವಾಸಕೋಶದ ಸೂಕ್ಷ್ಮನಾಳಗಳಲ್ಲಿ ವ್ಯತಿರಿಕ್ತ ಬದಲಾವಣೆ ಆಗುವುದನ್ನು ತಡೆಯಬಹುದು. ಹಗಲುನಿದ್ದೆ ಮಾಡುವ ರೂಢಿಯಿದ್ದರೆ ಹಗಲುನಿದ್ದೆಯ ಅವಧಿಯನ್ನು ಕಡಿಮೆ ಮಾಡುತ್ತಾ ಬಂದು ಪೂರ್ತಿಯಾಗಿ ಬಿಟ್ಟುಬಿಡಬೇಕು. ರಾತ್ರಿ ಅತ್ಯಂತ ಲಘು ಭೋಜನ ಮಾಡಬೇಕು ಮತ್ತು ಸಾಧ್ಯವಾದಷ್ಟೂ ಬೇಗ ಮಾಡಬೇಕು. ರಾತ್ರಿಯ ಊಟದಲ್ಲಿ ಹಾಲು, ಮೊಸರು, ತುಪ್ಪ, ಕರಿದ ಪದಾರ್ಥಗಳು, ಮಾಂಸಾಹಾರಗಳನ್ನು ತ್ಯಜಿಸಲೇಬೇಕು. ರಾತ್ರಿ ಊಟದ ನಂತರ ಕನಿಷ್ಟ ಒಂದೂವರೆ ಘಂಟೆ ಬಿಟ್ಟು ಮಲಗಬೇಕು.

ಇನ್ನು ಅಸ್ತಮಾ ತೀವ್ರಾವಸ್ಥೆಯಲ್ಲಿದ್ದು ವೈದ್ಯರನ್ನು ಭೇಟಿಯಾಗಲು ಸಾಧ್ಯವಾಗದೇ ಇದ್ದಾಗ ಸಾಸಿವೆ ಎಣ್ಣೆಗೆ ಉಪ್ಪು ಸೇರಿಸಿ ಬಿಸಿಮಾಡಿ, ಎದೆಗೆ, ಬೆನ್ನಿಗೆ ಮಸ್ಸಾಜ್ ಮಾಡಿ, ಆ ಜಾಗಗಳಿಗೆ ನೀರಿನ ಉಗಿ ಕೊಡಬೇಕು. ನೀರಿಗೆ ನೀಲಗಿರಿ ಎಣ್ಣೆಯನ್ನು ಬಿಟ್ಟು ಉಗಿ ಕೊಟ್ಟರೆ ಹೆಚ್ಚು ಸಹಾಯವಾಗುತ್ತದೆ. ಕಫ ಸರಿಯಾಗಿ ಹೊರಗೆ ಬರದೆ ತೊಂದರೆಯಾಗುತ್ತಿದ್ದರೆ ಆಡುಮುಟ್ಟದ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಒಂದು ವಾರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಒಂದು ವೀಳ್ಯದೆಲೆಯಲ್ಲಿ ಐದು ಎಲೆ ತುಳಸಿ, ಒಂದು ಲವಂಗ, ಒಂದು ಚೂರು ಜೇಷ್ಠಮಧು ಹಾಕಿ ಪ್ರತಿ ಬಾರಿ ಊಟವಾದ ನಂತರ ಒಂದು ವಾರದ ಕಾಲ ಸೇವಿಸಬಹುದು. ಕಾಳುಮೆಣಸು, ಶುಂಠಿ, ಹಿಪ್ಪಲಿಗಳ ಸಮಪ್ರಮಾಣದ ಮಿಶ್ರಣವನ್ನು ಅರ್ಧ ಚಮಚ ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ನಿತ್ಯ ಸೇವಿಸುವುದರಿಂದ ಜೀರ್ಣಶಕ್ತಿಯೂ ಹೆಚ್ಚುತ್ತದೆ; ಅಸ್ತಮಾ ಕೂಡಾ ಹತೋಟಿಯಲ್ಲಿರುತ್ತದೆ.

ದೀರ್ಘಾವಧಿಯಿಂದ ಇರುವ ಅಸ್ತಮಾ ರೋಗಿಗಳಿಗೆ ಕೆಲವೊಮ್ಮೆ ಒಳರೋಗಿಯಾಗಿದ್ದು ಪಂಚಕರ್ಮ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಗಳನ್ನು ಪಡೆದು ಗುಣಪಡಿಸಿಕೊಳ್ಳಬೇಕಾಗುತ್ತದೆ. ಅಸ್ತಮಾ ಸಂಪೂರ್ಣವಾಗಿ ಗುಣವಾದ ಮೇಲೆಯೂ ಕೆಲವು ನಿಯಮಗಳನ್ನು ಪಾಲಿಸದೇ ಹೋದರೆ ಕೆಲವು ಕಾಲದ ನಂತರ ಮರುಕಳಿಸುವ ಸಾಧ್ಯತೆ ಇರುತ್ತದೆ. ಅಸ್ತಮಾ ತೀವ್ರಾವಸ್ಥೆಯಲ್ಲಿದ್ದಾಗ ಸಾಧ್ಯವಾದಷ್ಟೂ ಬೇಗ ಆಸ್ಪತ್ರೆಗೆ ಭೇಟಿ ಕೊಟ್ಟು ತುರ್ತು ಚಿಕಿತ್ಸೆ ತೆಗೆದುಕೂಳ್ಳಬೇಕು. ಉಸಿರಾಟದ ತೊಂದರೆಗಳೆಲ್ಲವೂ ಅಸ್ತಮಾ ಅಲ್ಲ. ಹಾಗಾಗಿ ವೈದ್ಯರ ಭೇಟಿ ಮಾಡದೇ ಅಸ್ತಮಾ ಎಂದು ತೀರ್ಮಾನಿಸಿ ಮನೆಮದ್ದುಗಳನ್ನಾಗಲೀ ಔಷಧ ಸೇವನೆಯನ್ನಾಗಲೀ ಮಾಡಬಾರದು.(ಬರಹ-ಡಾ ವೆಂಕಟ್ರಮಣ ಹೆಗಡೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

ದಿನದ ಸುದ್ದಿ

ದಾವಣಗೆರೆ | ಸೆಪ್ಟೆಂಬರ್ 22 ರಿಂದ ನೂತನ ನವೀಕೃತ ಕೆಎಸ್‍ಆರ್‍ ಟಿ ಸಿ ಬಸ್ ನಿಲ್ದಾಣದಿಂದ ಬಸ್ ಗಳ ಕಾರ್ಯಾಚರಣೆ

Published

on

ಸುದ್ದಿದಿನ,ದಾವಣಗೆರೆ:ನೂತನ ನವೀಕೃತ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಸೆಪ್ಟೆಂಬರ್ 22 ರಿಂದ ಬಸ್ ಕಾರ್ಯಾಚರಣೆಗೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಚಾಲನೆ ನೀಡುವರು.

ಸೆ.22 ರಿಂದ ಪ್ರಸ್ತುತ ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ಕ.ರಾ.ರ.ಸಾ.ನಿಗಮದ ವತಿಯಿಂದ ನಿರ್ಮಿತವಾಗಿರುವ ಪಿ.ಬಿ.ರಸ್ತೆಯ ಮರುನಿರ್ಮಿತ ಬಸ್ ನಿಲ್ದಾಣ ಮತ್ತು ಬೇತೂರು ರಸ್ತೆಯ ನೂತನ ಮಾರ್ಗಗಳ ಬಸ್ ನಿಲ್ದಾಣದಿಂದ ಸಂಸ್ಥೆಯ ವಾಹನಗಳ ಕಾರ್ಯಾಚರಣೆ ಆರಂಭವಾಗಲಿದೆ. ಸೆ.22 ರಿಂದ ಹೈಸ್ಕೂಲ್ ಬಸ್ ನಿಲ್ದಾಣದಿಂದ ಸಂಸ್ಥೆಯ ಎಲ್ಲಾ ವಾಹನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಎನ್ ಹೆಬ್ಬಾರ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಕಲಿ ಸೇವಾ ಪ್ರಮಾಣಪತ್ರ : ಅತಿಥಿ ಉಪನ್ಯಾಸಕ ಎಸ್. ಸಿದ್ಧನಗೌಡ ವಿರುದ್ಧ ಎಫ್.ಐ.ಆರ್ ದಾಖಲು

Published

on

ಸುದ್ದಿದಿನ,ಕೂಡ್ಲಿಗಿ:ಪಟ್ಟಣದ ಎಸ್.ಎ.ವಿ.ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಕಲಿ ಸೀಲು ಹಾಗೂ ನಕಲಿ ಸೇವಾ ಪ್ರಮಾಣಪತ್ರ ಸಿದ್ಧಪಡಿಸಿಕೊಂಡು ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸಿದ್ದ ಎಸ್.ಸಿದ್ಧನಗೌಡ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ನಾಲ್ಕು ವರ್ಷಗಳ ನಕಲಿ ಸೇವಾ ಪ್ರಮಾಣಪತ್ರ ತಯಾರಿಸಿಕೊಂಡ ಕೂಡ್ಲಿಗಿ ತಾಲ್ಲೂಕಿನ ಸೂಲದಹಳ್ಳಿ ಅಗ್ರಹಾರ ಗ್ರಾಮದ ಎಸ್.ಸಿದ್ಧನಗೌಡ ಎಂಬ ಅತಿಥಿ ಉಪನ್ಯಾಸಕನ ಮೇಲೆ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ಎನ್.ಕಲ್ಲಪ್ಪ ಇವರು ಕೂಡ್ಲಿಗಿ ನಗರದ ಪೋಲಿಸ್ ಠಾಣೆಯಲ್ಲಿ ಐ.ಪಿಸಿ ಸೆಕ್ಷನ್ 1860 ಕಲಂ 420, 465, 468, 471 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಹಿಂದೆ ಎಸ್.ಸಿದ್ಧನಗೌಡ ಅವರು ನಕಲಿ ಸೇವಾ ಪ್ರಮಾಣಪತ್ರ ಸಿದ್ಧಪಡಿಸಿಕೊಂಡು 2023ನೇ ಸಾಲಿನಲ್ಲಿ ನಡೆದ ಅತಿಥಿ ಉಪನ್ಯಾಸಕರ ಕೌನ್ಸಿಲಿಂಗ್ ನಲ್ಲಿ ಕನ್ನಡ ಉಪನ್ಯಾಸಕರಾಗಿ ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಆಯ್ದುಕೊಂಡು ಸೇವೆಗೆ ವರದಿ‌ ಮಾಡಿಕೊಂಡಿದ್ದರು. ಇವರ ಸೇವೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಕೆ.ಎ.ಓಬಳೇಶ್ ಅವರು ಮಾಹಿತಿಹಕ್ಕು ಅಧಿನಿಯಮ ಅಡಿಯಲ್ಲಿ ಮಾಹಿತಿ ಪಡೆದು, ಕೂಡ್ಲಿಗಿ ಪಟ್ಟಣದ ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿನ‌ ಪ್ರಾಂಶುಪಾಲರಾದ ಎನ್.ಕಲ್ಲಪ್ಪ ಇವರ ವಿರುದ್ಧ ಲೋಕಾಯುಕ್ತಾಗೆ ದೂರು ನೀಡಿದ್ದರು.

ವಿಚಾರಣೆಯನ್ನು ಕೈಗೆತ್ತಿಕೊಂಡ ಲೋಕಾಯುಕ್ತ ನ್ಯಾಯಾಲಯವು ಪ್ರಾಂಶುಪಾಲರಿಗೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ನಕಲಿ ಸೀಲು, ನಕಲಿ‌ ಪ್ರಮಾಣಪತ್ರ ಸಿದ್ಧಪಡಿಸಿಕೊಂಡ ಎಸ್.ಸಿದ್ಧನಗೌಡ ವಿರುದ್ಧ ಪ್ರಕರಣ ದಾಖಲಿಸಿದ್ದು, ಪೋಲಿಸರು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಭಾರತವನ್ನು ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕರೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನಡೆಸ್ಕ್:ಆಧುನಿಕ ಜ್ಞಾನವನ್ನು ಮೌಲ್ಯಗಳೊಂದಿಗೆ ಸಂಯೋಜಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ನೈತಿಕ ಕರ್ತವ್ಯವಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ಆಯೋಜಿಸಿದ್ದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆಮಂಡಳಿಯ 30ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯು 1ಸಾವಿರದ 700 ವಿಶ್ವವಿದ್ಯಾಲಯಗಳು 45 ಸಾವಿರ ಕಾಲೇಜುಗಳನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಭಾರತವು ಅಭಿವೃದ್ದಿ ಹೊಂದಿದ ರಾಷ್ಟ್ರವಾಗುವತ್ತ ಸಾಗುತ್ತಿದ್ದು, ಮುಂಬರುವ ದಿನಗಳಲ್ಲಿ ದೇಶವನ್ನು ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ತರಲು ಪ್ರಯತ್ನ ಮಾಡಬೇಕಾಗಿದೆ ಎಂದು ರಾಜ್ಯಪಾಲರು ಕರೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending