Connect with us

ಲೈಫ್ ಸ್ಟೈಲ್

ಕರ್ನಾಟಕದ ಗಿಡಗಳ‌ ನಂಟನ್ನು ರಾಜಸ್ಥಾನದಲ್ಲೂ ಬೆಳಸುವ ಅಪರೂಪದ ಪರಿಸರ ಪ್ರೇಮಿ ‘ಬೈರವ್ ಸಿಂಗ್’..!

Published

on

  • ಸಂಜಯ್ ಹೊಯ್ಸಳ

ರ್ನಾಟಕದಿಂದ ರಾಜಸ್ಥಾನಕ್ಕೆ ಪ್ರತಿವರ್ಷ ಕೆಲವೊಂದಿಷ್ಟು ಗಿಡ ತೆಗೆದುಕೊಂಡು ಹೋಗಿ, ಕರ್ನಾಟಕದ ಗಿಡಗಳ‌ ನಂಟನ್ನು ರಾಜಸ್ಥಾನದಲ್ಲೂ ಬೆಳಸುವ ಪ್ರಯತ್ನ ಮಾಡುತ್ತಿರುವ ಅಪರೂಪದ ಪರಿಸರ ಪ್ರೇಮಿ.

ಮೊನ್ನೆ ನಮ್ಮ ನರ್ಸರಿಗೆ ಬೈರವ್ ಸಿಂಗ್ ಬಂದಿದ್ದರು. ಇವರು ಹುಟ್ಟಿ ಬೆಳದಿದ್ದೆಲ್ಲಾ ಮೈಸೂರಿನಲ್ಲಿಯಾದರೂ, ಪೂರ್ವಜರ ತವರಾದ ರಾಜಸ್ಥಾನದ ಜೊತೆಗೆ ಇವರು ನಂಟು ಕಡಿದುಕೊಂಡಿಲ್ಲ. ಆಗಾಗ್ಗೆ ತಮ್ಮೂರಿನ ಕಡೆಗೆ ಹೋಗಿ ಬರುತ್ತಿರುತ್ತಾರೆ. ಇವರು ರಾಜಸ್ಥಾನ ಐತಿಹಾಸಿಕ ನಗರವಾದ ಜೋದ್ ಪುರ ಮೂಲದವರು. ಸದ್ಯ ಮೈಸೂರಿನಲ್ಲಿ ವ್ಯಾಪಾರ ಮಾಡಿಕೊಂಡು‌ ಜೀವನ ಮಾಡುತ್ತಿರುವ ಇವರು, ಮಳೆಗಾಲದ ಸಮಯದಲ್ಲಿ ಊರಿನ ಕಡೆ ಹೋಗುವಾಗ ತಪ್ಪದೆ‌ ಮೈಸೂರಿನಿಂದ ಇಲ್ಲಿನ ಕೆಲವೊಂದಿಷ್ಟು‌, ಅವರಿಗೆ ವಿಶೇಷ ಎನಿಸುವ ಗಿಡಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ನೆಟ್ಟು‌ ಬೆಳಸುವ ಪ್ರಯತ್ನ ಮಾಡುತ್ತಿದ್ದಾರೆ. ಮೊನ್ನೆ ಇದೇ ರೀತಿ ನಮ್ಮ ನರ್ಸರಿಗೂ ಬಂದು ಕಾಡುಬಾದಾಮಿ, ಶ್ರೀಗಂದ, ಬಿಲ್ವಪತ್ರೆ ಸೇರಿ ಐದಾರು ಗಿಡಗಳನ್ನು ತೆಗೆದುಕೊಂಡರು. ನಮ್ಮ ಅರಣ್ಯ ಇಲಾಖೆ ನರ್ಸರಿಗೆ ಬರುವ ಮುನ್ನ ತೋಟಗಾರಿಕೆ ಇಲಾಖೆಯ ನರ್ಸರಿಯಲ್ಲಿ‌ ಕೆಲವು ಹಣ್ಣಿನ ಗಿಡಗಳನ್ನು ತಂದಿದ್ದರು.

ಈ ಸಂಧರ್ಭದಲ್ಲಿ ಇವರ ಪರಿಚಯವಾಗಿ ಲೋಕರೂಡಿಯಾಗಿ ಮಾತನ್ನಾಡುವಾಗ ರಾಜಸ್ಥಾನದ ಅರಣ್ಯ ಹಾಗೂ‌ ವನ್ಯಜೀವಿ ಪ್ರೇಮಿ ಜನಾಂಗವೆಂದು ಹೆಸರಾಗಿರುವ ಬೀಷ್ಣೋಯಿಗಳ ಬಗ್ಗೆ ನಿಮಗೆ ಗೊತ್ತಾ? ಎಂದು ಕೇಳಿದೆ. “ಹೌದು ಗೊತ್ತು. ಅದೇ ಸಲ್ಮಾನ್ ಖಾನ್ ಗೆ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ‌ ಶಿಕ್ಷೆ ಆಗೋದಕ್ಕೆ ಕಡೆಯವರಿಗೆ ಹೋರಾಡಿದ್ರಲ್ಲ… ಮತ್ತೆ ಅನಾಥ ವನ್ಯಜೀವಿಗಳಿಗೆ ತಮ್ಮ ಎದೆಹಾಲು ಕುಡಿಸುವ ಪೋಟೋ ಎಲ್ಲಾ ನೋಡಿದಿವಲ್ಲ… ಅವ್ರಲ್ವಾ!?” ಅಂದ್ರು. ಅನಂತರ ನಾನು ಮಾತು ಮುಂದುವರೆಸಿ “ಹೌದು ಅವರೆ.

ಬೀಷ್ಣೋಯಿ ಜನಾಂಗದವರ ಪರಿಸರ ಹಾಗೂ ವನ್ಯಜೀವಿ ಪ್ರೇಮಕ್ಕೆ ದೊಡ್ಡ ಐತಿಹಾಸಿಕ ಹಿನ್ನೆಲೆ ಇದೆ.‌ 1730 ರಲ್ಲಿ ಜೋದಪುರದ ರಾಜ ಅಭಯ್ ಸಿಂಗ್’ನ ಸೈನಿಕರು, ತಮ್ಮ ರಾಜ್ಯದ ಹೊಸ ಅರಮನೆ ನಿರ್ಮಾಣಕ್ಕಾಗಿ ಬೀಷ್ಣೋಯಿಗಳ ಬಾಹುಳ್ಯದ ಕೇಜರ್ಲಿ ಗ್ರಾಮಕ್ಕೆ ಬಂದು ಆ ಭಾಗದ ಅಪರೂಪದ ಮರವಾಗ ಕೇಜ್ರಿ ಮರ (Prosopis cineraria) ಗಳನ್ನು ಕಡಿಯಲು ಮುಂದಾಗುತ್ತಾರೆ. ಆಗ ಅವುಗಳನ್ನು ಕಡಿಯದಂತೆ ಬೀಷ್ಣೋಯಿಗಳು, ಸೈನಿಕರಿಗೆ ಪ್ರತಿರೋಧ ತೋರುತ್ತಾರೆ‌. ಇದರಿಂದ ಕೆರಳಿದ ರಾಜನ ಸೈನಿಕರು ಮಹಿಳೆ ಮಕ್ಕಳು ಸೇರಿದಂತೆ ಒಟ್ಟು 363 ಜನರನ್ನು ಹತ್ಯೆ ಮಾಡುತ್ತಾರೆ.

ಈ ಘಟನೆ ನಡೆದ ದಿನವಾದ ಸೆಪ್ಟೆಂಬರ್ 10ನ್ನು ಭಾರತದಾದ್ಯಂತ ‘ಅರಣ್ಯ ಹುತಾತ್ಮರ ದಿನ’ ಎಂದು ಆಚರಿಸಲಾಗುತ್ತಿದ್ದು, ಬೀಷ್ಣೋಯಿಗಳನ್ನು ಸೇರಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ಹೋರಾಡಿ ಹುತಾತ್ಮರಾದ ಎಲ್ಲರನ್ನು ಆ ದಿನ ಸ್ಮರಿಸಲಾಗುತ್ತದೆ.” ಎಂದು ಬೀಷ್ಣೋಯಿಗಳ ಕುರಿತಾದ ವಿವರಗಳನ್ನು ಅವರಿಗೆ ತಿಳಿಸಿದೆ.

ಅವರಿಗೆ ಕೇಜ್ರಿ ಮರಗಳ ಬಗ್ಗೆ ಹೇಳಿದಾಗ ಅವುಗಳ ಪೋಟೋವನ್ನು ತೋರಿಸಿದಾಗ ಆಗಲೇ ರಾಜಸ್ಥಾನದಲ್ಲಿದ್ದ ಅವರ ತಂದೆಗೆ ಕರೆ ಮಾಡಿ ಕೇಜ್ರಿ ಮರಗಳ ಕುರಿತು ಕೇಳಿದರು. ನನ್ನ ಬಳಿಯೂ ಅವರ ಜೊತೆ ಮಾತನ್ನಾಡಿಸಿದರು. ಕೇಜ್ರಿ ಮರದ ಬಗ್ಗೆ ಸ್ವಲ್ಪ ವಿವರಣೆ ಹೇಳಿದಾಕ್ಷಣ ಅವರ ತಂದೆ ಮರವನ್ನು ಗುರ್ತಿಸಿದರು. ಸಾಧ್ಯವಾದರೆ ಆ ಮರದ ಒಂದೆರಡು‌ ಸಸಿ ಅಥವಾ ಒಂದಷ್ಟು ಬೀಜಗಳನ್ನು ಸಂಗ್ರಹಿಸಿ ಕೊಡಿ ಎಂದು ಹೇಳಿದೆ. ಖಂಡಿತಾ ಸಂಗ್ರಹಿಸಿ ಕೊಡುತ್ತೇನೆ ಎಂದು ಅವರು ಹೇಳಿದರು.

ಹೀಗೆ ಬೈರವ್ ಸಿಂಗ್’ರವರ ಪರಿಚಯ ಕೇಜ್ರಿ ಮರವನ್ನು ನಮ್ಮಲ್ಲಿ ಬೆಳಸಿ ಪರಿಚಯಿಸುವ ಪ್ರಯತ್ನಕ್ಕೆ ಕಾರಣವಾಯಿತು.

(ಲೇಖನ ಕೃಪೆ : ಪರಿಸರ ಪರಿವಾರ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ‘ಎಳೆ’ ತಂದರೋ..!

Published

on

  • ನವೀನ್ ಸಾಗರ್, ಬೆಂಗಳೂರು

ಸಿನಿಮಾ ಹಾಡುಗಳು ಕವನಗಳು ಎಲ್ಲ ಗದ್ಯಗಳಷ್ಟು ನೇರ ಸಲೀಸು ಅಲ್ಲ. ಹೇಳಬೇಕಿರೊದನ್ನು ಗದ್ಯಗಳ ಹಾಗೆ ಸೀದಾಸಾದಾವಾಗಿ ಕವನಗಳು, ಸಿನಿಗೀತೆಗಳು ಹೇಳುವುದಿಲ್ಲ. ಹಾಗೆ ಹೇಳಿಬಿಟ್ಟರೆ ಅವು ಕವನ/ಹಾಡು/ಪದ್ಯಗಳೇ ಅಲ್ಲ!!!

ಹಾಡು ಅಂದರೆ ಅಲ್ಲಿ ಉಪಮೆಗಳು ಗೂಢಾರ್ಥಗಳು ದ್ವಂದ್ವಾರ್ಥಗಳು(ದ್ವಂದ್ವಾರ್ಥ ಅಂದ್ರೆ ಅಶ್ಲೀಲ ಮಾತ್ರವೇ ಅಲ್ಲ), ಎರಡುಮೂರು ವಿಚಾರಗಳನ್ನು ಹೇಳಬಲ್ಲ ಒಂದೇ ಒಂದು ಸಾಲು, ಇನ್ಯಾವತ್ತೋ ರೆಲೆವೆಂಟ್ ಅನಿಸಬಲ್ಲ ಕಲ್ಪನೆಗಳು ಏನೇನೋ ತುಂಬಿಹೋಗಿರುತ್ತವೆ. ಅದಕ್ಕೊಂದು ಮೂಡ್ ಇರುತ್ತೆ.

ಒಬ್ಬೊಬ್ಬ ಓದುಗನಲ್ಲಿ ಒಂದೊಂದು ಭಾವ ಹುಟ್ಟಿಸಬಲ್ಲ ಶಕ್ತಿ ಕವಿತೆಗಳಿಗಿರುತ್ತದೆ. ನನಗೆ ರೊಮ್ಯಾಂಟಿಕ್ ಅನಿಸುವ ಗೀತೆಯೊಂದು ಇನ್ನೊಬ್ಬನಿಗೆ ವಿರಹಗೀತೆ ಅನಿಸಬಹುದು. ನನಗೆ ಲಾಲಿ ಹಾಡೆನಿಸುವ ಗೀತೆಯೊಂದು ಇನ್ಯಾರಿಗೋ ಜಾಲಿ ಗೀತೆ ಅನಿಸಬಹುದು. ಇನ್ನೊಬ್ರಿಗೆ ಶೋಕಗೀತೆ ಅನಿಸೋ ಗೀತೆಯಲ್ಲಿ ನನಗೇನೋ ತುಂಟತನ ಕಾಣಿಸಬಹುದು. ಸಭ್ಯಗೀತೆ ಅನಿಸುವ ಹಾಡೊಂದು ಸಾಲುಸಾಲಲ್ಲೂ ಡಬಲ್ ಮೀನಿಂಗ್ ತುಂಬ್ಕೊಂಡಿದೆಯಲ್ಲ ಅನಿಸಬಹುದು. ಗ್ರಹಿಕೆ ಮೂಡು ವಯಸ್ಸು ಸಂದರ್ಭ ಇವೆಲ್ಲದರ ಮೇಲೆ ಹಾಡೊಂದು ನಮ್ಮನ್ನು ತಲುಪೋ ಬಗೆ ಬದಲಾಗುತ್ತಾ ಹೋಗುತ್ತದೆ‌. ಅಷ್ಟಾಗಿಯೂ ಅಸಲಿಗೆ ಅದನ್ನು ಬರೆದ ಕವಿಯ ಯೋಚನೆ ನಾವು ಗ್ರಹಿಸಿದ್ದೆಲ್ಲಕ್ಕಿಂತ ಭಿನ್ನವಾಗಿದ್ದಿನ್ನೇನೋ ಇದ್ದರೂ ಇರಬಹುದು.

ಹಲವು ಬಾರಿ ಕವಿಗೆ ತನ್ನ ಗೀತೆ ತಾನಂದುಕೊಂಡ ಭಾವದಲ್ಲೇ ರೀಚ್ ಆಗಿದೆ ಅನ್ನೋ ಖುಷಿ ತೃಪ್ತಿ ಸಿಗುತ್ತದೆ. ಕೆಲವು ಬಾರಿ .. ಅರೆ ಬರೆಯುವಾಗ ನಾನೇ ಹೀಗೊಂದು ಗೂಡಾರ್ಥದ ಬಗ್ಗೆ ಯೋಚಿಸಿರಲಿಲ್ಲ. ಕೇಳುಗ ಇದಕ್ಕೆ ಇನ್ನೊಂದು ಆಯಾಮವನ್ನೇ ಕೊಟ್ಟುಬಿಟ್ಟನಲ್ಲ ಅಂತ ಅಚ್ಚರಿಯಾಗಬಹುದು. ಕೆಲವೊಮ್ಮೆ ತನಗೇ ಗೊತ್ತಿಲ್ಲದ ಅರ್ಥ ಹುಟ್ಟಿಸಿ ತನ್ನನ್ನು ಕೇಳುಗರು ಮೇಲೇರಿಸಿ ಕೂರಿಸಿದಾಗ, ಈ ಕ್ರೆಡಿಟ್ ಬಿಟ್ಟುಕೊಡಲಿಷ್ಟ ಪಡದ ಕರಪ್ಟ್ ಮನಸು.. ಹೌದೌದು ನಾನು ಹೀಗೆ ಎರಡರ್ಥ ಹುದುಗಿಸಿ‌ಈ ಸಾಲು ಬರೆದಿದ್ದೆ ಎಂದು ಧ್ವನಿಗೂಡಿಸುತ್ತದೆ. ಅದೇ ವಿವಾದಕ್ಕೋ ಅವಹೇಳನಕ್ಕೋ ಕಾರಣವಾದರೆ .. ಇಲ್ಲ ನಾನು ಬರೆದದ್ದು ಈ ಅರ್ಥದಲ್ಲಿ ಅಂತ ಸೇಫ್ಟಿ ಮೋಡ್ ಗೂ ಹೋಗುತ್ತದೆ. ಹಾಡು/ಕವಿತೆಗಳಿಗೆ ಈ ವ್ಯಾಖ್ಯಾನದ ಮೂಲಕ ಬಚಾವಾಗುವ ಇಮೇಜ್ ರೂಪಿಸಿಕೊಳ್ಳುವ ಅವಕಾಶವಿರುತ್ತದೆ‌. ಗದ್ಯಗಳಿಗೆ ಆ ಪ್ರಿವೆಲೇಜ್ ಇರೋದಿಲ್ಲ.

ಸಂಭ್ರಮ ಚಿತ್ರದಲ್ಲಿ ಹಂಸಲೇಖ … “ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರೋ…” ಗೀತೆಯಲ್ಲಿ ” ಎಳೆ” ಪದವನ್ನು ಎರಡರ್ಥ ಬರುತ್ತದೆಂದೇ ಬಳಸಿದರೋ ಬರೆದ ಮೇಲೆ ಎರಡರ್ಥ ಕೇಳುಗರ ಗ್ರಹಿಕೆಗೆ ಬಂತೋ ಎಂಬ ಪ್ರಶ್ನೆಯಂತೆ ಇದು. ಹಂಸ ಲೇಖಾವ್ರು ಪ್ರೀತಿಯ ’ಎಳೆ’ಯ ಬಗ್ಗೆ ಬರೆದಿರಬಹುದು. ಅಥವಾ ಎಳೆದು ತಂದರೋ ಎಂದು ಕೇಳಿಯೂ ಬರೆದಿರಬಹುದು. ಅಥವಾ ಅವರಿಗಿರೋ ಪನ್ ಸೆನ್ಸ್ ಗೆ ಈ ಎರಡೂ ಅರ್ಥ ಬರಲಿ ಅಂತಲೇ ಎಳೆ ಎಂಬ ಪದ ಬಳಸಿರಬಹುದು. ಈ ಥರದ ಸಾಕಷ್ಟು ಉದಾಹರಣೆ ಸಿಗುತ್ತದೆ. ಸಾಹಿತ್ಯ ಗಮನಿಸಲು ಶುರು ಮಾಡಿದಾಗ ಇಂಥ ಖುಷಿ ಅನುಭೂತಿಗಳು ಸಿಗಲಾರಂಭಿಸುತ್ತವೆ. ರಿಸರ್ಚಿನಂಥ ಖುಷಿ

ಹಂಸಲೇಖರ … “ಈ ಹರಯದ ನರಕೊಳಲಲಿ ಇವೆ ಸರಿಗಮ ಹೊಳ್ಳೆಗಳು… ಈ ಮದನನ ಕಿರುಬೆರಳಲಿ ನವಿರೇಳದೆ ಗುಳ್ಳೆಗಳು..” ಈ ಸಾಲು ಕೇವಲ ಕಮರ್ಶಿಯಲ್ ಮ್ಯೂಸಿಕಲ್ ಸಾಂಗ್ ಆಗಿ ನಮ್ಮ ಕಿವಿ ತಲುಪಿದಾಗ ಗುನುಗುವ ಸಾಲಾಗುತ್ತದೆ ಅಷ್ಟೆ. ಅರೆ ಹರಯದ ನರಕೊಳಲು ಅಂದ್ರೆ ಏನು… ಮದನನ ಕಿರುಬೆರಳು ಅಂದ್ರೆ.. ? ಸಾಮಾನಿಗೆ ಇಷ್ಟು ಸಭ್ಯಶೃಂಗಾರರೂಪ ಕೊಟ್ಟು ಹೇಳಿರೋದಾ ಅನಿಸಿದಾಗ.. ಶೃಂಗಾರ ಅಡಗಿರೋ‌ ಸಾಲಾದರೂ ಜೋರಾಗಿ ಹೇಳೋಕೆ ಮನಸು ಹಿಂಜರಿಯುತ್ತದೆ.

ಸಾಹಿತ್ಯ ಅಷ್ಟಾಗಿ ಗಮನಿಸದ ವಯಸ್ಸಲ್ಲಿ… “ಮೈಯ್ಯಲ್ಲಿ ಏಳುತಿದೆ ಮನ್ಮಥ‌ನ ಅಂಬುಗಳು.. ಜುಮ್ ಜುಮ್ ಜುಮ್..” ಅನ್ನೋ ಸಾಲು ಸಂಕ್ರಾಂತಿ ಗೀತೆ ಎಂಬಂತೆ ಬಂದು ಹೋಗುತ್ತಿತ್ತು.

ಆದರೆ ಆನಂತರ ಸಾಹಿತ್ಯವಾಗಿ ಗಮನಿಸಿದಾಗ.‌ ಆಹಾ ರೋಮಾಂಚನವನ್ನು.. ಮೈರೋಮ ನಿಮಿರುವುದನ್ನು ಮನ್ಮಥನ ಬಾಣಕ್ಕೆ ಹೋಲಿಸಿದ್ದಾರಲ್ಲ ಅನಿಸಿ ನಿಜಕ್ಕೂ ಜುಮ್ ಅನಿಸಿತ್ತು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿದರೆ.. ಮೈಯಲ್ಲಿ ಏಳುತಿದೆ ಮನ್ಮಥನ ಅಂಬು ಅಂದ್ರೆ.. ಒನ್ಸಗೇನ್ ಸಾಮಾನಿರಬಹುದಾ ಅನಿಸದಿರದು.

ಸದಾಶಿವಂಗೆ ಅದೇ ಗ್ಯಾನ ಅಂದ್ಕೋಬೇಡಿ..

ನೆನಪಿರಲಿ ಚಿತ್ರದ ಅಜಂತಾ ಎಲ್ಲೋರಾ ಗೀತೆಯಲ್ಲಿ ಬರುವ… “ಮಂದವಾಗಿ ಬಳುಕೋವಂಥ ನಾರಿ ಇವಳ
ಅಂದ ನೋಡಿ ನಿಂತಾಗ..ಚಂದ ನೋಡಿ ನಿಂತಾಗ..
ಯಾರೊ ನೀನು ಎಂದು ಕೇಳುತಾವೆ..
ಇವಳ ಪೊಗರಿನ ಹೃದಯಪಾಲಕಿಯರು..
ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ…”

ಈ ಸಾಲುಗಳು ತನ್ನ ರಿದಮಿಕ್ ಮ್ಯೂಸಿಕ್ ಹಾಗೂ ಸುಲಲಿತವಾಗಿ ಲಘುಗುರು ಇಟ್ಟು ಬರೆದಂಥ ಪದಗಳ‌ ಆಟದಿಂದ ಮಜವಾಗಿ ಹಾಡಿಸಿಕೊಂಡು ಬಿಡ್ತವೆ. ಆದರೆ ಯಾವತ್ತೋ ಆರಾಮಾಗಿ ಸಾಹಿತ್ಯ ಕೇಳ್ತಾ ಇದ್ದರೆ.. ಆಹಾ ..ಹಂಸಲೇಖರ ರಸಿಕಕಲ್ಪನೆಗಳಿಗೆ ಮಿತಿಯೇ ಇಲ್ಲವಾ ಅನಿಸಿಬಿಡುತ್ತದೆ.

ಯಾರೋ ನೀನು ಎಂದು ಕೇಳುತಾವೆ ಇವಳ “ಪೊಗರಿನ ಹೃದಯ ಪಾಲಕಿಯರು” ಎಂದು ಅವರು ರೆಫರ್ ಮಾಡ್ತಿರೋದು ಆ ಹೆಣ್ಣಿನ ಸ್ತನಗಳ ಬಗ್ಗೆ ಅಂತ ಅರ್ಥವಾದಾಗ ಮತ್ತೊಮ್ಮೆ ಈ ಸಾಂಗ್ ಕೊಡುವ ಅನುಭೂತಿಯೇ ವಿಭಿನ್ನ. “ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ” ಎಂದು ಮುಂದುವರಿಸಿ ಆ ಸಾಲಿಗೆ ಇನ್ನಷ್ಟು ರಸಿಕತೆ ತುಂಬುತ್ತಾರೆ ಹಂಸ್.

ಗಡಿಬಿಡಿಗಂಡ ಚಿತ್ರದ…. ಮುದ್ದಾಡೆಂದಿದೆ ಮಲ್ಲಿಗೆ ಹೂ ಗೀತೆಯಲ್ಲಿ……. ನಾಯಕಿ”ಎದೆಯ ಸೆರಗ ಮೋಡದಲ್ಲಿ ನೀನೇ ಚಂದ್ರನೀಗ….” ಅಂದರೆ…. ನಾಯಕ” ಹೃದಯ ಮೇರುಗಿರಿಗಳಲ್ಲಿ… ಕರಗಬಹುದೆ ಈಗ” ಅಂತಾನೆ. “ಮುಡಿಯಲಿ ಮಲ್ಲಿಗೆಯ ಮುಡಿದವಳ ಮೊದಲುಮುಡಿಯಬೇಕು.. ಮಡದಿಗೆ ಪ್ರತಿದಿನವೂ ಮೊದಲಿರುಳಿರಬೇಕು…” ಅಂತ ನಾಯಕಿ ತನ್ನನ್ನು ಮೊದಲು ರಮಿಸು ಅಂತ ಒತ್ತಾಯಿಸುತ್ತಿದ್ದರೆ………… ನಾಯಕ ..” ಮನಸಿನ ಮಧುವಿನ ಮಹಲೊಳಗೆ … ಮದನ ಮಣಿಯಬೇಕು… ಸುರತಿಯ ಪರಮಾನ್ನ ಹಿತಮಿತವಿರಬೇಕು” ಅಂತ ಆಕೆಯ ಮೇಲಿರೋ ಮೋಹದ ಜೊತೆಜೊತೆಗೆ ಪ್ರತಿದಿನ ಬೇಡ ಫ್ರೀಡಮ್ಮು ವೀಕ್ಲಿ ಒನ್ಸು ಜುಮ್ ಜುಮ್ಮು” ಅಂತ ದೂರ ಹೋಗೋ ಪ್ರಯತ್ನ ಕೂಡ ಮಾಡುತ್ತಾನೆ.

ಇದು ಕೂಡ ಹೆಣ್ಣು ತನ್ನ ಗಂಡನ್ನು ಸೆಕ್ಸಿಗಾಗಿ ಕರೆಯುವ ಗೀತೆಯೇ ಆದರೂ… ತನ್ನ ಕ್ಲಾಸಿಕಲ್ ಟ್ಯೂನ್ ನಿಂದ ಚೆಂದದ ಪದಜೋಡಣೆಯಿಂದ… ಈ ಹಾಡು ಕೊಂಚವೂ ಅಶ್ಲೀಲ ಅನಿಸೋದೇ ಇಲ್ಲ. ಅಶ್ಲೀಲ ಅನಿಸಿದರೂ ಓಕೆ ಎಂದು ಬರೆದಾಗ.. ರಾತ್ರಿ ಆಯ್ತು ಮಲಗೋಣ ಇಂದು ನಮ್ಮ ಸೋಭಾನ… ಅಥವಾ ಕಾಯಿ ಕಾಯಿ ನುಗ್ಗೇಕಾಯಿ ಮಹಿಮೆಗೆ ರಾತ್ರಿಯೆಲ್ಲ ನಿದ್ದೆಯಿಲ್ಲ ಕಣ್ಣಿಗೆ.. ನೆಲ್ಲಿಕಾಯಿ ಆಸೆಗೆ ಬಿಟ್ಟು ಬಂದೆ ಹಾಸಿಗೆ ಅಂತ ಸ್ವಲ್ಪ ನೇರವಾಗಿಬಿಡುತ್ತಾರೆ ಹಂಸಲೇಖ.

ಇವೆಲ್ಲ ಸಾಹಿತ್ಯವನ್ನು ಗಮನಿಸುವಾಗ ಅರ್ಥವಾಗುತ್ತಾ ಹೋಗುವ ಅಪಾರಾರ್ಥಗಳು. ತೂಗುಮಂಚದ “ಹಮ್ಮನುಸಿರಬಿಟ್ಟಳು ಎಂಬುದು ಅಮ್ಮನುಸಿರ ಬಿಟ್ಟಳು ಎಂದಾಗಿದ್ದು ಅದನ್ನು ಲಾಲಿಹಾಡೆಂದು ತಪ್ಪು ತಿಳಿದುದರ ಪರಿಣಾಮ ಎಂದು ಹಿಂದೊಮ್ಮೆ ಬರೆದಿದ್ದು ನಿಮಗೆ ನೆನಪಿರಬಹುದು.

ಇನ್ನು ಡಬಲ್ ಮೀನಿಂಗೇ ಹುಡುಕಬೇಕು ಅಂದರೆ ಪ್ರತಿ ಗೀತೆಯೂ ಬೇರೆಯೇ ಅರ್ಥ ಕೊಡಬಲ್ಲ ಕೆಪಾಸಿಟಿ ಹೊಂದಿರುತ್ತದೆ. ಅದು ನಾವು ಆ ಗೀತೆಯನ್ನು ಬಿಂಬಿಸೋಕೆ ಹೊರಟಿರುವ ರೀತಿಯ ಮೇಲೆ ಡಿಪೆಂಡು. ಎಂಥ ಸಭ್ಯಸಾಲನ್ನೂ.. ಕವಿಗೇ ಶಾಕ್ ಆಗುವ ಹಾಗೆ ಡಬಲ್ ಮೀನಿಂಗ್ ಆಗಿಸಬಹುದು. ಆ ಉದಾಹರಣೆ ಈ ಬರಹದಲ್ಲಿ ಬೇಡ. ಮುಂದೆಂದಾದರೂ ಬರೆಯೋಣ.

ಇದೆಲ್ಲ ಬರೆಯೋಕೆ ಹೊರಟಿದ್ದಕ್ಕೆ ಪ್ರೇರಣೆ ಅಣ್ಣಯ್ಯ ಚಿತ್ರದ ಒಂದು ಸಾಂಗ್. ಅಣ್ಣಯ್ಯ ಬಂದು ಹೋಗಿ ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಟೈಮಾಯ್ತು. ರವಿಚಂದ್ರನ್ ಸಿನಿಮಾಗಳು ಸಾಫ್ಟ್ ಪೋರ್ನ್ ಸಿನಿಮಾಗಳಂತೆ ಭಾಸವಾಗುತ್ತಿದ್ದ ನಮ್ಮ ಏಜಿನ ದಿನಗಳವು. ರವಿಚಂದ್ರನ್ ಸಿನಿಮಾಗಳನ್ನು ನೋಡೋದು ಕಾಶೀನಾಥ್ ಸಿನಿಮಾ ನೋಡೋಷ್ಟೇ ಪಾಪ ಎಂಬಷ್ಟು ಮಡಿವಂತಿಕೆ ದಿನಗಳವು. ಆದರೆ ನಮ್ಮ ಪಾಲಿಗೆ ಆಗ ರವಿಮಾಮಾ ಲವ್ ರೊಮ್ಯಾನ್ಸ್ ಶೃಂಗಾರಗಳಿಗೆ ಗಾಡ್. ಆತ ಹೀರೋಯಿನ್ ಎದೆಯ ಮೇಲೆ ಮುಖವಿಟ್ಟು ಒರಗಿದರೆ ನಮಗೆ ರಸಸ್ಫೋಟ ಆಗುತ್ತಿತ್ತು. ಕುತ್ತಿಗೆಗೊಂದು ಮುತ್ತಿಟ್ಟು ತುದಿಬೆರಳುಗಳನ್ನು ಕತ್ತು ಮತ್ತು ಎದೆಯ ನಡುವೆ ಒಮ್ಮೆ ಆಡಿಸಿದ ಅಂದರೆ ಕೊಳಲು ಲಂಬಕೋನವಾಗುತ್ತಿತ್ತು.

ಆತ ಸೆರಗು ಸರಿಸಿ ಹೊಕ್ಕಳಿಗೊಮ್ಮೆ ಮುತ್ತಿಟ್ಟರೆ ಮುಗಿದೇಹೋಯ್ತು ಊರಸ್ನಾಯುಗಳು ಬಿಗಿಯಾಗಿ ಹೋಗುತ್ತಿದ್ದವು. ಅಂದು ಹಂಸಲೇಖ ಗೀತೆಗಳು ರವಿಚಂದ್ರನ್ ನ ಪಿಚ್ಚರೈಸೇಷನ್ನಲ್ಲಿ ಕಳೆದುಹೋಗಿಬಿಡುತ್ತಿದ್ದವು. ಅಥವಾ ಸಾಹಿತ್ಯ ಸಂಗೀತ ಎಲ್ಲದರಾಚೆಗೆ ನಮಗೆ ಆ ರೊಮ್ಯಾನ್ಸೇ ಹೆಚ್ಚು ಆಕರ್ಷಿಸಿಬಿಡುತ್ತಿತ್ತು. ಕ್ಯಾಸೆಟಲ್ಲಿ ಹಾಡುಗಳನ್ನು ಕೇಳಿ ಸಿನಿಮಾಗೆ ಹೋದಾಗ ಗೀತೆಗಳು ಆಡಿಯೋಗಿಂತ ವಿಡಿಯೋವಾಗಿ ತೃಪ್ತಿಕೊಟ್ಟು ಕಳಿಸುತ್ತಿದ್ದವು. ಆದರೆ ಆನಂತರ ಸಾಹಿತ್ಯ ಗಮನಿಸುವ ಮೆಚುರಿಟಿ, ಸಾಹಿತ್ಯದಲ್ಲಿರುವ ಇಮ್ಯಾಜಿನೇಷನ್ ಪವರ್ ಆಸ್ವಾಧಿಸುವ ಮನಸ್ಥಿತಿ ಎಲ್ಲ ಬಂದಾಗ.. ರವಿ ಚಂದ್ರನ್ ಹಂಸಲೇಖರ ಗೀತೆಗೆ ಹತ್ತು ಪರ್ಸೆಂಟಷ್ಟೂ ನ್ಯಾಯ ಸಲ್ಲಿಸಲು ಸಾಧ್ಯವಾಗಿಲ್ಲ ಅನಿಸಿಬಿಟ್ಟಿದೆ. ಹಾಗಂತ ಹಂಸಲೇಖರ ಸಾಹಿತ್ಯಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಿತ್ತಾ? ಖಂಡಿತ ಇಲ್ಲ. ಯಥಾವತ್ ನ್ಯಾಯ ಸಲ್ಲಿಸಲು ಹೋದದ್ದೇ ಆದರೆ ಆ ಸಾಂಗ್ ನ ಪಿಚ್ಚರೈಸೇಷನ್ ಕಾಮಸೂತ್ರವಾಗಿ ಹೋಗುವಷ್ಟು ಹಾಟ್ ಆಗಿಬಿಡುತ್ತಿತ್ತು.

ಆ ಗೀತೆಗಳು ಪಿಚ್ಚರೈಸ್ ಆಗದೆಯೇ ಇಮ್ಯಾಜಿನೇಷನ್ನಲ್ಲೇ ಉಳಿದುಬಿಟ್ಟಿದ್ದರೆ ಎಷ್ಟು ಚೆಂದವಿತ್ತು ಅನಿಸಿದ್ದೂ ಇದೆ. ಸತ್ಯ ಏನಂದರೆ ರವಿಚಂದ್ರನ್ ಸಲ್ಲಿಸಿದಷ್ಟು ನ್ಯಾಯವನ್ನು ಹಂಸಲೇಖರ ಗೀತೆಗೆ ಇನ್ಯಾರೂ ಸಲ್ಲಿಸಲು ಸಾಧ್ಯವಾಗಲಿಲ್ಲ. ರೊಮ್ಯಾಂಟಿಕ್ ಗೀತೆಗಳಲ್ಲಿ ಮಾತ್ರವಲ್ಲ… ಬೇರೆ ಗಂಭೀರ/ಸ್ಯಾಡ್/ಫಿಲಾಸಫಿಕಲ್/ಕ್ರಾಂತಿ ಯಾವ ಗೀತೆಗಳಿಗೂ ವಿಶ್ಯುಯಲಿ ನ್ಯಾಯ ಸಿಕ್ಕಿಲ್ಲ. ಇದು ಹಂಸಲೇಖ ಮಾತ್ರ ಅಲ್ಲ.. ಬಹುತೇಕ ಸಾಹಿತಿಗಳ ಮನಸಿನ ಮೂಲೆಯ ಅಸಮಾಧಾನ ಹಾಗೂ ನೋಡುಗರ ಅಸಂತೃಪ್ತಿ. ಮೊನ್ನೆ ನಾನು ಶೇರ್ ಮಾಡಿಕೊಂಡ ” ಸುಮ್ಮನೆ ಹೀಗೆ ನಿನ್ನನೇ …:” ಎಂಬ ಅಮರ್ ಚಿತ್ರದ ಗೀತೆಯಾದರೂ ಅಷ್ಟೆ. ಅಷ್ಟು ಗಾಢ ಸಾಲುಗಳ ಗೀತೆಗೆ ಅಂಬರೀಶ್ ಪುತ್ರನಿಂದ ಕಲ್ಲುಬಂಡೆಯಂಥ ಅಭಿನಯ. ಇಡೀ ಹಾಡನ್ನು ಲಾಂಗ್ ಶಾಟ್ ಗಳಲ್ಲಿ ತೆಗೆದು ಪ್ರಕೃತಿ ಸೌಂದರ್ಯ ತೋರಿಸಿ ಮುಗಿಸಿದ್ದಾರೆ ನಾಗಶೇಖರ್. ಸಾಹಿತ್ಯಕ್ಕೆ ಸಂಗೀತ ಸಲ್ಲಿಸುವಷ್ಟು ನ್ಯಾಯವನ್ನು ದೃಶ್ಯರೂಪ ಸಲ್ಲಿಸಲು ಸಾಧ್ಯವಿಲ್ಲ. ಬೆಟರ್ ನಾವು ಹಾಡುಗಳನ್ನು ನಮ್ಮ ಇಮ್ಯಾಜಿನೇಷನ್ ಗೆ ತಕ್ಕಂತೆ ಕಣ್ಮುಚ್ಚಿಕೊಂಡು ಮನಸ್ಸಿನೊಳಗೇ ಚಿತ್ರಿಸಿಕೊಂಡುಬಿಡುವುದು.

ಬ್ಯಾಕ್ ಟು ಅಣ್ಣಯ್ಯ ಚಿತ್ರದ ಆ ಸಾಂಗ್ : ಇಷ್ಟು ವರ್ಷದಲ್ಲಿ ಈ ಹಾಡನ್ನು ಕಮ್ಮಿ ಅಂದ್ರೂ ಒಂದು ಸಾವಿರ ಸಲ ಕೇಳಿರುತ್ತೇನೆ. ಹಿಟ್ ಆಲ್ಪಮ್ ಆಗಿರುವ ಅದರ ಕಡಿಮೆ ಪಾಪ್ಯುಲರ್ ಗೀತೆ ಅದು.

“ಅ ಹಾಗೆ ಪ್ರೇಮಿ ಓಹೋ.. ಒ ಹೋಗೆ ಪ್ರೇಮಿ ಆಹಾ…”
ಈ ಹಾಡಿನ ಚಿತ್ರಣ ನಿಮ್ಮನ್ನು ಸಾಹಿತ್ಯ ಗಮನಿಸದಷ್ಟು ಸೆಳೆದುಕೊಳ್ಳುತ್ತದೆ ಕಾರಣ. ರವಿಚಂದ್ರನ್ ಮಧುಬಾಲಾ ಕೆಮಿಸ್ಟ್ರಿ! ಆದರೆ ಅದ್ಯಾಕೋ ಗೀತೆ ತುಂಬ ಅಟ್ರಾಕ್ಟಿವ್ ಅನಿಸಿರಲಿಲ್ಲ. ಕಮಾನು ಡಾರ್ಲಿಂಗ್, ಅಣ್ಣಯ್ಯ ಅಣ್ಣಯ್ಯ ಬಾರೋ, ರಾಗಿ ಹೊಲದಾಗೆ ಖಾಲಿ ಗುಡಿಸಲು ಈ ಗೀತೆಗಳು ಕೊಟ್ಟ ಕಿಕ್ …. ಈ ಅ ಹಾಗೆ ಪ್ರೇಮಿ ಓಹೋ… ಒ ಹೋಗೆ ಪ್ರೇಮಿ ಆಹಾ ಗೀತೆ ನೀಡಿರಲಿಲ್ಲ.

ಹೌದು ನಾನು ಈ ಹಾಡನ್ನು ಕೇಳಿಸಿಕೊಳ್ತಾ ಇದ್ದದ್ದೇ ಹೀಗೆ. ಮೊನ್ನೆಯ ತನಕವೂ…ಆದರೆ ಮೊನ್ನೆ ಯಾಕೋ ಮತ್ತೊಮ್ಮೆ ಕೇಳಿಸಿಕೊಂಡಾಗ.. ಅರೆ ಇಪ್ಪತ್ತೈದು ವರ್ಷ ತಪ್ಪಾಗಿ ತಿಳಿದುಕೊಂಡು ತಪ್ಪಾಗೇ ಹಾಡಿಕೊಂಡೆನಲ್ಲ ಅಂತ ಮೈತುಂಬ ಗಿಲ್ಟು

ಆ ಸಾಂಗ್ ಇರೋದು ಹೀಗೆ…

”ಆಹಾ’ಗೆ ಪ್ರೇಮಿ “ಓಹೋ”
” ಓಹೋ”ಗೆ ಪ್ರೇಮಿ ” ಆಹಾ”

ನನ್ನ ಹಾಗೆ ಅದೆಷ್ಟು ಜನ ಯಾಮಾರಿದ್ದೀರೋ ಗೊತ್ತಿಲ್ಲ. ಅಥವಾ ನಾನೊಬ್ನೇ ಹೀಗೆ ತಪ್ಪಾಗಿ ಕೇಳಿಸಿಕೊಂಡವ್ನೋ ಗೊತ್ತಿಲ್ಲ

ಈ ಗೀತೆಯ ವಿಶೇಷ ಏನಂದ್ರೆ ಹಂಸಲೇಖ. ಆಹಾ ಮತ್ತು ಓಹೋ ಎಂಬ ಎರಡು ಪದಗಳನ್ನೇ ಪ್ರೇಮಿಗಳನ್ನಾಗಿಸಿದ್ದಾರೆ

ಆಹಾಗೆ ಓಹೋ ಪ್ರೇಮಿ… ಓಹೋಗೆ ಆಹಾ ಪ್ರೇಮಿ!
ಅದು ಇಬ್ಬರು ಪ್ರ‍ೇಮಿಗಳ ಹೆಸರು!

ಈಗ ಈ ಹಾಡೊಮ್ಮೆ ಕೇಳಿನೋಡಿ…
ಅದು ಸೌಂಡಾಗೋದೇ ಬೇರೆ ಥರ!

ಅದ್ಯಾಕೆ ಆಹಾ ಓಹೋ ಎಂಬ ಪದಗಳು ಇಲ್ಲಿ ಪಾತ್ರಗಳಾದವು ಅಂತ ಸಿನಿಮಾ ತೆರೆದು ನೋಡಿದೆ. ಈ ಹಾಡು ಆರಂಭವಾಗುವ ಮುನ್ನ ಅಣ್ಣಯ್ಯ ಯಾವುದೋ ಫೈಟಿಂಗಲ್ಲಿ ಒದೆ ತಿಂದು ಬೆನ್ನಿಗೆ ಕಾಶಿ ಕೈಲಿ ಬಿಸಿ ಮಸಾಜ್ ಮಾಡಿಸಿಕೊಳ್ತಾ ಇರ್ತಾನೆ. ಅವನ ಇಮ್ಯಾಜಿನೇಷನಲ್ಲಿ ನಾಯಕಿ ಬಂದು ಕಾಶಿಯ ಬದಲು ಮಸಾಜ್ ಮಾಡ್ತಿರೋ ಹಾಗೆ ಒಂದು ಟ್ವಿಸ್ಟು.. ಇಮ್ಯಾಜಿನೇಷನಲ್ಲೇ ಅವಳೊಂದಿಗೆ ಮಾತಾಡ್ತಾ.. ಆಕೆ ಬಿಸಿ ಶಾಖ ಕೊಟ್ಟಾಗ ಒಮ್ಮೆ ನಾಯಕ ಆಹಾ ಅಂತಾನೆ.. ಇನ್ನೊಮ್ಮೆ ಓಹೋ ಎಂದು ಬಿಗಿಯುಸಿರು ಬಿಡುತ್ತಾನೆ. ಆಗ ಹುಟ್ಟುವ ಹಾಡಿದು. ಡ್ರೀಮ್ ಸಾಂಗ್ ನಲ್ಲಿ ಟೆಕ್ಸ್ಟ್ ಕೂಡ ಬರುತ್ತದೆ ಆಹಾ ಓಹೋ ಅಂತ!

ಸ್ಕ್ರಿಪ್ಟ್ ಜೊತೆ ದೃಶ್ಯರಚನೆ ಜೊತೆ ಗೀತ ಸಾಹಿತಿ ಕನೆಕ್ಟ್ ಆದಾಗ ಇಂಥ ಅದ್ಭುತಗಳು, ಮಜಗಳು, ಕ್ರಿಯೇಟಿವ್ ಐಡಿಯಾಗಳು ಹುಟ್ಟುತ್ತವೆ. ಹಂಸಲೇಖ ಎಲ್ಲೋ ಕೂತು ಹಾಡುಬರೆದುಕೊಟ್ಟು ಸಂಗೀತ ಮಾಡಿಕೊಡ್ತಿರಲಿಲ್ಲ. ಸಿನಿಮಾದೊಂದಿಗೆ ಪ್ರೀ ಪ್ರೊಡಕ್ಷನ್ನಿಂದ ರೀರೆಕಾರ್ಡಿನ ತನಕ ಜರ್ನಿ ಮಾಡ್ತಿದ್ರು ಅನ್ನೋದಕ್ಕೆ ಇದೊಂದು ಸಾಕ್ಷಿ. ಅವರಿಬ್ಬರ ಕಾಂಬಿನೇಷನ್ ಯಾಕೆ ಆ ಪರಿ ಕ್ಲಿಕ್ ಆಗುತ್ತಿತ್ತು ಅನ್ನೋದಕ್ಕೂ ಇದೊಂದು ಪುರಾವೆ. ( ಬರಹ : ನವೀನ್ ಸಾಗರ್ ; ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಶ್ರಮ ಸಂಸ್ಕೃತಿ ಗೌರವಿಸುವ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ

Published

on

  • ಶಂಕರ ದೇವರು ಹಿರೇಮಠ, ಸಾಹಿತಿಗಳು

ಮಸ್ಕಿ ಭಾರತ ದೇಶ ಕೃಷಿ ಪ್ರಧಾನವಾದ ದೇಶ.ಇಲ್ಲಿ ಹಲವಾರು ಭಾಷೆ, ಹಲವಾರು ಸಂಸ್ಕೃತಿ ಹಾಗೂ ಹಲವಾರು ರಾಜ್ಯಗಳನ್ನು ಒಳಗೊಂಡ ಭಾರತ. ತನ್ನೊಳಗೆ ವಿಭಿನ್ನ ಸಂಸ್ಕೃತಿಯನ್ನು ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡಿದೆ. ಇಲ್ಲಿ ಆಚರಿಸುವ ಬಹುತೇಕ ಹಬ್ಬಗಳು ಹಳ್ಳಿಯ ಸೊಗಡಿನೊಂದಿಗೆ ಸಮ್ಮಿಲಿತಗೊಂಡಿವೆ. ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಬಹುತೇಕ ಹಬ್ಬಗಳ ಹಿನ್ನೆಲೆಯನ್ನು ಒಳಗೊಂಡಿವೆ .

ಮಳೆಗಾಲದಲ್ಲಿ ಬರುವ ವಿಶೇಷ ಹಬ್ಬವೇ ಮಣ್ಣೆತ್ತಿನ ಅಮಾವಾಸ್ಯೆ. ಮಳೆಗಾಲದ ಪ್ರಾರಂಭದ ದಿನಗಳಲ್ಲಿ ಬರುವ ಈ ಹಬ್ಬ ಉತ್ತರ ಕರ್ನಾಟಕದಲ್ಲಿ ಸಂಭ್ರಮ ಮನೆ ಮಾಡುತ್ತದೆ .ಮುಂಗಾರು ಪ್ರಾರಂಭವಾಗಿ ರೈತರು ಕೃಷಿ ಚಟುವಟಿಕೆಯನ್ನು ಪ್ರಾರಂಭಿಸಿ ಹೊಲಗಳನ್ನು ಹಸನು ಮಾಡಿ ಬಿತ್ತನೆ ಹಾಗೂ ನಾಟಿಯನ್ನು ಮಾಡಿರುತ್ತಾರೆ. ಹೊಲಗಳು ಹಸಿರಿನಿಂದ ಕಂಗೊಳಿಸುತ್ತಿರುತ್ತವೆ ಇಂತಹ ದಿನಗಳಲ್ಲಿ ರೈತರು ವಿಶ್ರಾಂತಿಯನ್ನು ಪಡೆಯುವ ಜೊತೆಗೆ ತಮ್ಮ ಒಡನಾಡಿಯಾದ ಜಾನುವಾರುಗಳನ್ನು, ಎತ್ತುಗಳನ್ನು ಪ್ರೀತಿಯಿಂದ ಪೋಷಿಸುತ್ತಾರೆ .ಕಾರ ಹುಣ್ಣಿಮೆಯ ನಂತರ ಬರುವ ಮಣ್ಣೆತ್ತಿನ ಅಮವಾಸೆ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಬಹು ಸಂಭ್ರಮದ ಹಬ್ಬ .

ರೈತರ ಒಡನಾಡಿ ಹಾಗೂ ರೈತರ ಉಸಿರೆಂದರೆ ಎತ್ತುಗಳು ಎತ್ತುಗಳೊಂದಿಗೆ ರೈತರು ಅವಿನಾಭಾವ ಸಂಬಂಧವನ್ನು ಹೊಂದಿರುತ್ತಾರೆ .ಎತ್ತುಗಳನ್ನು ಕೇವಲ ಪ್ರಾಣಿಗಳೆಂದು ಪರಿಗಣಿಸದೆ ತಮ್ಮ ಮನೆಯ ಸದಸ್ಯರಂದೇ ಪರಿಗಣಿಸಿ ಅವುಗಳನ್ನು ಪ್ರೀತಿಯಿಂದ ಅಕ್ಕರೆಯಿಂದ ಸಾಕುತ್ತಿರುತ್ತಾರೆ. ರಾಮ, ಲಕ್ಷ್ಮಣ ಭೀಮ, ಕರಿಯ, ಚೆನ್ನ,ಬಸವ, ಕೆಂಪ ಹಾಗೂ ತಮ್ಮ ನೆಚ್ಚಿನ ನಾಯಕ ನಟರ ಹೆಸರನ್ನು ತಮ್ಮ ಪ್ರೀತಿಯ ಎತ್ತುಗಳಿಗೆ ಇಟ್ಟು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ರೈತರ ಕಷ್ಟ ,ಸುಖಗಳಲ್ಲಿ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಎತ್ತುಗಳಿಗೆ ರೈತರು ಅಪಾರ ಗೌರವವನ್ನು ನೀಡುತ್ತಾರೆ.

ಶಂಕರ ದೇವರು ಹಿರೇಮಠ, ಸಾಹಿತಿಗಳು

ಮಣ್ಣೆತ್ತಿನ ಅಮಾವಾಸ್ಯೆ ದಿನದ ಮೊದಲೇ ಹಳ್ಳ, ಹೊಳೆ, ಗದ್ದೆಗಳಿಂದ ಮಣ್ಣನ್ನು ತಂದು ಜೋಡಿ ಎತ್ತುಗಳನ್ನು ಮಾಡಿ ಎತ್ತುಗಳಿಗೆ ಮೇವು ಹಾಕುವ ಒಂದು ಗೋದಲಿಯನ್ನು ಮಾಡುತ್ತಾರೆ. ಎತ್ತುಗಳನ್ನು ಮಣ್ಣಿನಿಂದಲೇ ಮಾಡಿ ಅವುಗಳನ್ನು ದೇವರ ಮನೆಯ ಜಗಲಿ ಮೇಲಿಟ್ಟು ಪೂಜೆ ಮಾಡುತ್ತಾರೆ. ಇನ್ನೂ ಕೆಲವರು ಹೊಲಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ಮಾಡುತ್ತಾರೆ .

ರೈತ ಹಾಗೂ ಎತ್ತುಗಳಿಗೆ ಅವಿನಾಭಾವ ಸಂಬಂಧ ಶತಶತಮಾನಗಳಿಂದ ಇದೆ. ಭಾರತದ ಪ್ರತಿಯೊಂದು ಕೃಷಿ ಕುಟುಂಬವು ಕೃಷಿಯೊಂದಿಗೆ ಹಾಗೂ ಮಣ್ಣಿನೊಂದಿಗೆ ಅವಿನಾಭಾವ ಸಂಬಂಧದ ನಂಟಿದೆ .ಮಳೆಗಾಲದಲ್ಲಿ ಬಿತ್ತನೆಯಾಗಿ ಬೆಳೆ ಬೆಳೆದು ಹಸಿರಿನಿಂದ ಭೂಮಿ ಕಂಗೊಳಿಸುತ್ತಿರುವ ಈ ದಿನಗಳಲ್ಲಿ ಕೃಷಿಯಲ್ಲಿ ಭಾಗಿಯಾಗುವ ಎತ್ತುಗಳಿಗೆ ಗೌರವಿಸುವ ಮೂಲಕ ಈ ದಿನಗಳಲ್ಲಿ ಶ್ರಮ ಶ್ರಮ ಸಂಸ್ಕೃತಿಯನ್ನು ಗೌರವಿಸುವ ಕಾರ್ಯ ಶತಮಾನಗಳಿಂದ ನಡೆದುಕೊಂಡು ಬಂದಿದೆ .

ಹಳ್ಳಿಗಳಲ್ಲಿ ಕುಂಬಾರರು ತಯಾರಿಸಿದ ಸುಂದರವಾದ ಎತ್ತುಗಳನ್ನು ಕೊಂಡು ತಂದು ಅವುಗಳಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿ ಸಂತೋಷಪಡುವರು. ರೈತರು ಹಿಂದೆ ಎತ್ತುಗಳನ್ನು ಕೊಟ್ಟು ಅದರ ಬದಲಾಗಿ ದವಸ ಧಾನ್ಯಗಳನ್ನು ಪಡೆಯುತ್ತಿದ್ದರು. ಇಂದು ನಗರೀಕರಣದ ಪರಿಣಾಮ ಎತ್ತುಗಳು ಮಾರಾಟದ ಸರಕಾಗಿ ಪರಿಣಮಿಸಿವೆ. ಆದರೂ ಇನ್ನೂ ಹಳ್ಳಿಗಳಲ್ಲಿ ಎತ್ತುಗಳನ್ನು ಪೂಜ್ಯನೀಯ ಸ್ಥಾನದಲ್ಲಿ ಇಟ್ಟು ಗೌರವಿಸುತ್ತಾರೆ. ಮಣ್ಣೆತ್ತಿನ ಅಮಾವಾಸ್ಯೆ ವಿಶೇಷವಾಗಿ ಮಕ್ಕಳಿಗೆ ಸಂಭ್ರಮದ ಹಬ್ಬ. ಹಬ್ಬದ ಮರುದಿನ ಮಕ್ಕಳು ಮನೆ ಮನೆಗೆ ತೆರಳಿ ಕುಂಟೆತ್ತು ಬಂದಿದೆ ಅಂತ ಹೇಳಿ ಅಕ್ಕಿ, ಜೋಳ, ಕಾಳು, ಬೆಲ್ಲ ತಂದು ಅವುಗಳಿಂದ ಸಿಹಿ ಅಡಿಗೆ ಮಾಡಿಕೊಂಡು ಎಲ್ಲ ಮಕ್ಕಳು ಊಟ ಮಾಡಿ ಎತ್ತುಗಳಿಗೆ ಮತ್ತೊಮ್ಮೆ ಪೂಜೆ ಸಲ್ಲಿಸಿ ಅವುಗಳನ್ನು ವಿಸರ್ಜಿಸುವ ಪದ್ಧತಿ ರೂಢಿ ಇದೆ. ಮಕ್ಕಳೆಲ್ಲ ಸಂಭ್ರಮದಿಂದ ಈ ಕಾರ್ಯದಲ್ಲಿ ಭಾಗವಹಿಸಿ ಮಣ್ಣೆತ್ತಿನ ಅಮಾವಾಸ್ಯೆ ಯನ್ನು ಜೀವಂತವಾಗಿಸುವ ಕಾರ್ಯವನ್ನು ಈಗಲೂ ಮಾಡುತ್ತಿದ್ದಾರೆ .

ಈಗೀಗ ಕೃಷಿ ಚಟುವಟಿಕೆಗಳಿಗೆ ಹೆಚ್ಚಾಗಿ ಯಂತ್ರಗಳನ್ನು ಹಾಗೂ ಟ್ರ್ಯಾಕ್ಟರ್ ಗಳನ್ನು ಬಳಸುತ್ತಿರುವ ಕಾರಣದಿಂದ ಎತ್ತುಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ರೈತರ ಒಡನಾಡಿಯಾದ ಎತ್ತುಗಳು ಇಂದು ಪ್ರತಿಷ್ಠೆಯ ಪ್ರತೀಕವಾಗಿ ಇನ್ನೂ ಕುಟುಂಬದ ಕೆಲವರು ಲಕ್ಷ ಲಕ್ಷ ಹಣ ಕೊಟ್ಟು ಖರೀದಿಸಿ ಮನೆಗೆ ತಂದು ಎತ್ತುಗಳನ್ನು ಸಾಕುತ್ತಿದ್ದಾರೆ. ಎತ್ತುಗಳು ನಮ್ಮ ಅನ್ನದಾತರ ಗೌರವ ಪ್ರತೀಕ .ನಾವೆಲ್ಲರೂ ಕುಳಿತು ಊಟ ಮಾಡುವ ಪ್ರತಿಯೊಂದು ಅನ್ನದ ಅಗಳಿನ ಹಿಂದೆ ಕೋಟಿಗಟ್ಟಲೆ ರೈತರ ಶ್ರಮ ಇದೆ .ಆ ಶ್ರಮದ ಹಿಂದೆ ಎತ್ತುಗಳ ಒಡೆಯನಾದ ರೈತನ ಮೇಲಿನ ಪ್ರೀತಿ ಇದೆ .(ಬರಹ-ಶಂಕರ ದೇವರು ಹಿರೇಮಠ, ಸಾಹಿತಿಗಳು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಈರುಳ್ಳಿ ಕೇವಲ ತರಕಾರಿಯಲ್ಲ ; ಅದ್ಭುತ ಔಷಧ

Published

on

ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ ರುಚಿಯೇ ಬೇರೆಯಾಗುತ್ತದೆ. ನಾವು ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.

ಆಯುರ್ವೇದದಲ್ಲಿ ಈರುಳ್ಳಿಯ ಬಗ್ಗೆ ವಿಸ್ತೃತ ವಿವರಣೆ ಇದೆ. ಆಯುರ್ವೇದ ಗ್ರಂಥಗಳ ಪ್ರಕಾರ ಈರುಳ್ಳಿಗೆ ಬೆಳ್ಳುಳ್ಳಿಯ ಗುಣಗಳಿವೆ. ಆದರೆ ಬೆಳ್ಳುಳ್ಳಿಯಂತೆ ಇದು ಉಷ್ಣವಲ್ಲ. ಹಾಗಾಗಿ ಬೆಳ್ಳುಳ್ಳಿಯ ಅದ್ಭುತ ಗುಣಗಳನ್ನು ಪಡೆಯಬೇಕು ಎಂದಾದರೆ ಮತ್ತು ಬೆಳ್ಳುಳ್ಳಿಯನ್ನು ಸೇವಿಸಿದರೆ ಉಷ್ಣವಾಗುತ್ತದೆ ಎಂಬ ಯೋಚನೆ ಇದ್ದರೆ ಬದಲಿಗೆ ಈರುಳ್ಳಿಯನ್ನು ಬಳಸಬಹುದು.

ಭಾವ ಪ್ರಕಾಶ ನಿಘಂಟು ಎಂಬ ಗ್ರಂಥದಲ್ಲಿ “ಬಲವೀರ್ಯ ಕೈರೋ ಗುರುಃ” ಎಂದಿದ್ದಾರೆ. ಅಂದರೆ ಈರುಳ್ಳಿಯು ದೇಹದ ಬಲವನ್ನು, ವೀರ್ಯದ ಗುಣಮಟ್ಟವನ್ನು, ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ಬಹುತೇಕ ಎಲ್ಲಾ ಆಯುರ್ವೇದ ಗ್ರಂಥಗಳಲ್ಲಿಯೂ ಈರುಳ್ಳಿಯಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಇದು ಚರ್ಮಕ್ಕೆ ಕೂಡ ಅತ್ಯಂತ ಅನುಕೂಲಕರವಾದದ್ದು. ಚರ್ಮವನ್ನು ಸ್ನಿಗ್ಧಗೊಳಿಸಿ ಒರಟುತನವನ್ನು ಹೋಗಲಾಡಿಸುತ್ತದೆ; ಚರ್ಮಕ್ಕೆ ಕಾಂತಿಯನ್ನು ಕೊಡುತ್ತದೆ; ಜೊತೆಗೆ ಚರ್ಮದ ಶುದ್ಧಿಯನ್ನೂ ಮಾಡುತ್ತದೆ ಎಂದು ವಿವರಿಸಲಾಗಿದೆ. ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಬಾಹ್ಯ ಮತ್ತು ಆಂತರಿಕ ಕಾಂತಿ ಹೆಚ್ಚುತ್ತದೆ.

ಅಂದರೆ ಕೇವಲ ಸೌಂದರ್ಯವೃದ್ಧಿಯಷ್ಟೇ ಅಲ್ಲ ದೇಹದೊಳಗಿನ ರೋಗನಿರೋಧಕ ಶಕ್ತಿ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಈರುಳ್ಳಿಯು ಧ್ವನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಿ ಒಳ್ಳೆಯ ಧ್ವನಿಯನ್ನು ನೀಡುತ್ತದೆ ಎಂದು ವಿವರಿಸಲಾಗಿದೆ. ಹೀಗಾಗಿ ಹಾಡುಗಾರರು, ಅಧ್ಯಾಪಕರಂಥವರಿಗೆ ನಿಯಮಿತ ಈರುಳ್ಳಿ ಸೇವನೆ ಅನುಕೂಲಕರ. ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರಿಂದ ಹತ್ತರಿಂದ ಹದಿನೈದು ಮಿಲೀ ಈರುಳ್ಳಿ ರಸವನ್ನು ಸುಮಾರು ಒಂದು ತಿಂಗಳು ದಿನಕ್ಕೊಮ್ಮೆ ಸೇವಿಸುವುದರಿಂದ ಚಿಕ್ಕಪುಟ್ಟ ಕಣ್ಣಿನ ತೊಂದರೆಗಳು ನಿವಾರಣೆಯಾಗುತ್ತವೆ. ಸ್ವಲ್ಪ ಸಿಹಿ ಇರುವ ಅಂದರೆ ಖಾರ ಕಡಿಮೆ ಇರುವ ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು ನಿಯಮಿತವಾಗಿ ಸೇವಿಸಿದರೆ ಲೈಂಗಿಕ ಶಕ್ತಿಯ ವೃದ್ಧಿಯಾಗುತ್ತದೆ.

ಕೂದಲು ಉದುರುವುದನ್ನು ಕಡಿಮೆ ಮಾಡಲು ಈರುಳ್ಳಿಯು ಸಹಕಾರಿ. ಈರುಳ್ಳಿಯ ರಸ ತೆಗೆದು ತಲೆ ಸ್ನಾನ ಮಾಡುವ ಹತ್ತು ನಿಮಿಷ ಮೊದಲು ಕೂದಲಿನ ಬುಡಕ್ಕೆ ಹಚ್ಚಬೇಕು. ಇದರಿಂದ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗಲು ಮತ್ತು ಕೂದಲು ಉದುರುವುದು ನಿಲ್ಲಲು ಸಹಾಯವಾಗುತ್ತದೆ. ಬೊಜ್ಜನ್ನು ಕಡಿಮೆ ಮಾಡಲು ಕೂಡ ಈರುಳ್ಳಿಯು ಸಹಕಾರಿ. ಬೆಳ್ಳುಳ್ಳಿಯ ಇನ್ನೊಂದು ಅದ್ಭುತ ಗುಣವೆಂದರೆ ಅದು ನರದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಯಾಟಿಕಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಈರುಳ್ಳಿ ತುಂಬಾ ಲಾಭದಾಯಕ.

ಕಫದ ಸಮಸ್ಯೆಯಿಂದ ಬಳಲುತ್ತಿದ್ದು ಕಫ ಹೊರಗೆ ಬರುತ್ತಿಲ್ಲದಿದ್ದರೆ ಎರಡು ಚಮಚದಷ್ಟು ಈರುಳ್ಳಿ ರಸ, ಅರ್ಧ ಚಮಚದಷ್ಟು ಶುಂಠಿ ರಸ, ಅರ್ಧ ಚಮಚದಷ್ಟು ತುಳಸಿ ಎಲೆಗಳ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿದರೆ ಕಫ ಹೊರಗೆ ಬಂದು ಸಮಸ್ಯೆ ನಿವಾರಣೆಯಾಗುತ್ತದೆ.

ಈರುಳ್ಳಿ ಒಳ್ಳೆಯ ಜೀರ್ಣಕಾರಿಯೂ ಹೌದು ಹಾಗಾಗಿ ಅಜೀರ್ಣ ಇರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಹಾಕಿ ಹೆಸರುಬೇಳೆಯ ತಿಳಿಸಾರು ಮಾಡಿ ಊಟಕ್ಕೆ ನೀಡಿದರೆ ಅಜೀರ್ಣದ ಸಮಸ್ಯೆ ತುಂಬಾ ಚೆನ್ನಾಗಿ ಹತೋಟಿಗೆ ಬರುತ್ತದೆ. ಜೊತೆಗೆ ಶಕ್ತಿ ವೃದ್ಧಿಯೂ ಆಗುತ್ತದೆ. ಒಟ್ಟಿನಲ್ಲಿ ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲ ಅದ್ಭುತ ಔಷಧ.(ಬರಹ-ಡಾ|| ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕನ್ನಡ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending